ನನ್ನವಳು ಮತ್ತು ಅವಳ ನೆನಪು

ನನ್ನವಳು ಮತ್ತು ಅವಳ ನೆನಪು

ನನ್ನವಳು ಮತ್ತು ಅವಳ ನೆನಪು
       
        ಕೊಪ್ಪಳದಲ್ಲಿ ಸಂಸಾರ ಹೂಡಿ ಸರಿ ಸುಮಾರು ಈಗ 7/8 ವರ್ಷಗಳೇ ಆಯಿತು.ಕಾವ್ಯಾಳೊಂದಿಗೆ ಮದುವೆಯಾದ ತಕ್ಷಣ  ಕೊಪ್ಪಳದ ನಮ್ಮಣ್ಣನ ಮೇಲಿನ ಮನೆಯಲ್ಲಿ ಸಂಸಾರ ಶುರುಮಾಡಿದ್ದೆವು.
      
 ಮದುವೆಗೂ ಮೊದಲು ಸುಮಾರು ನಾಲ್ಕು ವರ್ಷ ನಮ್ಮಣ್ಣನ ಮನೆಯಲ್ಲಿ ನಾನು ಇದ್ದದ್ದು. ನನ್ನ ಮನೆಯಲ್ಲಿ ಇರೋದಕ್ಕೂ ನಮ್ಮಣ್ಣನ ಮನೆಯಲ್ಲಿರೋದಕ್ಕೂ ಯಾವುದೇ ವ್ಯತ್ಯಾಸವಿರಲಿಲ್ಲ. ಅಷ್ಟೊಂದು ಸ್ವಾತಂತ್ರ ನನಗೆ ಅವರ ಮನೆಯಲ್ಲಿತ್ತು. ನನ್ನ ಮದುವೆ ಫಿಕ್ಸ್ ಆಗೋದಕ್ಕೂ ನಮ್ಮಣ್ಣಗೆ ರಾಯಚೂರಿಗೆ ವರ್ಗ ಆಗೋದಕ್ಕೂ ಕಾಕತಾಳೀಯವಾಗಿತ್ತು. ಅದಕ್ಕೆ ನಮ್ಮಣ್ಣ ಅವನ ಸ್ವಂತ ಮನೆಯ ಮೇಲಿನ ಹೊಸ ಮನೆಯನ್ನು ನನಗೆ ಬಿಟ್ಟಿದ್ದಾನೆ 7/8 ವರ್ಷದಿಂದಲೂ ಇದೇ ಮನೆಯಲ್ಲಿ ಈಗ ನನ್ನ ಮತ್ತು  ನನ್ನವಳ ವಾಸ.
     
 " ಕಾವ್ಯ " ಇದು ನಾವು ಮದುವೆಯಾದ ಮೇಲೆ ಅತ್ತೆ ಮನೆಯಲ್ಲಿ ಇಟ್ಟ ಹೆಸರು. ನನ್ನ ಬಾಳ ಸಂಗಾತಿಯಾಗಿ ಕೇವಲ ಕಥೆಯೊಂದಿಗೆ ಕೂಡಿದ್ದ ನನ್ನ ಬಾಳಿಗೆ ಕಾವ್ಯವಾಗಿ ಬಂದವಳು. ಮದುವೆಯ ಹೊಸದರಲ್ಲಿ ಅವಳಿನ್ನು ಚಿಕ್ಕವಳು ಅವಳ ವಯಸ್ಸಿಗೆ ತಕ್ಕಷ್ಟೇ ಬುದ್ದಿ ಆದರೂ ಅಡುಗೆ ಮಾಡಿ ಸಮಯಕ್ಕೆ ಸರಿಯಾಗಿ ನನಗೆಲ್ಲ ಒದಗಿಸುವ ಜಾಣೆ. ಎಲ್ಲಾ ಸರಿಯಾಗಿ ಮಾಡಿದಳು ಎನ್ನುವುದರಲ್ಲಿ ಚಿಕ್ಕ ಪುಟ್ಟವು ಏನಾದರೂ ಎಡವಟ್ಟು ಮಾಡಿರೋಳು. ಕೆಲವೊಮ್ಮೆ ನಾನೂ ಹೆಚ್ಚಾಗಿ ಸಿಟ್ಟಾಗಿದ್ದರೂ ನಂತರ ಇಬ್ಬರೂ  ಒಪ್ಪಂದಕ್ಕೆ ಬಂದುಬಿಡುತ್ತಿದ್ದೆವು. ಇದಂತೂ ಎಲ್ಲರ ಮನೆಯ ಸಂಸಾರದಲ್ಲೂ ಸರ್ವೇಸಾಮಾನ್ಯ.
      
 ಆದರೆ ನನ್ನವಳ ಬಳಿ ಇದ್ದ ವಿಷೇಶ ಗುಣ ಎಂದರೆ ಅವಳ ನೆನಪು. ಕೆಲವೊಮ್ಮೆ ಎಲ್ಲ ತುಂಬಾ ಚೆನ್ನಾಗಿ ಮಾಡ್ತಿದ್ಲು,ಕೆಲವೊಮ್ಮೆ ತುಂಬಾ ಮುಖ್ಯವಾದದ್ದು ಮರೆತು ಬಿಡುತ್ತಿದ್ದಳು. ಅವಳ ಈ ಸ್ವಭಾವ ನಿಜ ಹೇಳಬೇಕು ಅಂದರೆ,ತುಂಬಾ ಚುಡಾಯಿಸುವ ಸ್ವಭಾವ ಇರುವ ನನಗೆ ತುಂಬಾನೆ ಇಷ್ಟ. ಯಾಕಂದರೆ ಅವಳನ್ನು ಕಾಡಲು ನನಗೆ ಅವಳು ತಾನಾಗಿಯೇ ಅವಕಾಶಗಳನ್ನು ಕೊಡುವಳು. ಹೀಗಿರುವಾಗ,ನಾನು ಅವಳಿಗೆ ಒಂದು ದಿನ ಕರೆದು ಹೀಗೆಂದೆ.
ನಾನು :  ಕಾವ್ಯ ನಾನು ಒಂದು ಸಣ್ಣ ಕಥೆ ಬರೆಯಬೇಕು ಅಂತ ಮಾಡಿದ್ದೀನಿ,ನಿನ್ನ ಮೇಲೆ,ನೀನು ಊರಿಗೆ ಹೋದಾಗ ನನಗೆ ಟೈಂ ಪಾಸ್ ಆಗ್ಬೇಕಲ್ಲಾ?


ಕಾವ್ಯ ; ಹೌದಾ, ನನ್ನ ಮೇಲೆನಾ? ಏನಂತ ?


ನಾನು : ಹೀಗೆ ಏನಾದರೂ . ಆದ್ರೆ ಅದಕ್ಕೆ ಟ್ಯೆಟಲ್ ಕೊಟ್ಟಿದ್ದೀನಿ ಆಗಲೆ.


ಕಾವ್ಯ : ಏನದು?


ನಾನು : "ನನ್ನವಳು ಮತ್ತು ಅವಳ ನೆನಪು".
      
 ಆ ಟ್ಯೆಟಲ್ ಕೇಳಿದಾಕ್ಷಣ,ಊರಿಗೆ ಹೋದಾಗ ಟ್ಯೆಂ ಪಾಸ್ ಗೆ ಅಂತಬೇರೆ ಹೇಳಿದ್ನಲ್ಲ,ಅವಳ ಖುಷಿಗೆ ಪಾರವೇ ಇಲ್ಲ. ಆದರೂ ಹುಸಿಮುನಿಸಿನಿಂದ, ದೊಡ್ಡ ಸುಂದರ ಕಣ್ಣುಳ್ಳ ಅವಳು ಅರಳಿಸುತ್ತ ಹೂಂ ಬರೀರಿ ಅಂತ ಅಷ್ಟೇ ಹೇಳಿದಳು. ಆದರೆ ಅವಳ  ಮನದಲ್ಲಿಯ ಸಂತಸ ಅವಳು ಏನರ್ಥ ಮಾಡಿಕೊಂಡಿರುವಳು ಎಂದು ನಾನೇನೋ ಊಹಿಸಿದೆನು.  "ನಾನಿಲ್ಲದಾಗ ಅವರನ್ನು ಕಾಡುವ ನನ್ನ ನೆನಪು,ಒಂದು ಕಲ್ಪನೆ, ಅಂತ ನನಗೆ ಗೊತ್ತಿದ್ದರೂ ಯಾಕೋ ಅಷ್ಟೊಂದು ಖುಷಿ ನನಗೆ" ಅಂತ ಅವಳ ಮನಸ್ಸು ಸಾರಿ ಸಾರಿ ಹೇಳುತ್ತಿದ್ದದ್ದು ಅವಳ ಕಣ್ಣಿನಿಂದಲೇ ಅರ್ಥವಾಯಿತು.
     
 ಇದಾದ 2 ದಿನದ ನಂತರ,ಒಂದು ದಿನ ಬೆಳಿಗ್ಗೆ ಪ್ರತಿದಿನದಂತೆ ಅವಳು ಬೇಗ ಸ್ನಾನ ಮುಗಿಸಿ ಶ್ರೀ ರಾಘವೇಂದ್ರ ವಿಜಯ ಕಥೆಯನ್ನು ಓದ್ತಾ ಇದ್ದ ಅವಳು ಅದೇ ತಾನೆ ಎದ್ದು ಬಂದ ನನ್ನ ನೋಡಿ ರೀ ಗ್ಯಾಸ್ ಮೇಲೆ ಹಾಲು ಇಟ್ಟಿದ್ದೀನಿ ಬೇಗ ಉಕ್ಕಿಬಿಡ್ತದೆ ಸ್ವಲ್ಪ ಉರಿ ಕಡಿಮೆ ಮಾಡ್ರಿ ಎಂದಳು. ಕಣ್ಣೊರೆಸಿಕೊಳ್ಳುತ್ತಾ ಅಡಿಗೆ ಮನೆ ಕಡೆಗೆ ಹೆಜ್ಜೆ ಹಾಕಿದ ನಾನು ದಂಗಾದೆ,ಇನ್ನೊಮ್ಮೆ ಕಣ್ಣು ಚೆನ್ನಾಗಿ ಒರೆಸಿಕೊಂಡೆ ನಂತರ ಕೂಗಿದೆ.


ನಾನು : ಕಾವ್ಯ ಹಾಲಿಟ್ಟಿಯಾ ? ಸ್ಟೌ ಸಣ್ಣ ಮಾಡಬೇಕಾ ? ಈ ಜನ್ಮ ಕಳೆದರೂ ಹಾಲು ಉಕ್ಕಲ್ಲ ಬಿಡು...


ಕಾವ್ಯ : ಯಾಕ್ರೀ ಏನಾಯ್ತು !?


ನಾನು : ಒಂದ್ಸಲ ಒಳಗೆ ಬಂದು ನೋಡು...
   
 ಒಳಗೆ ಓಡಿ ಬಂದ ಕಾವ್ಯ ಅಯ್ಯಯ್ಯೋ ಸ್ಟೌ ಹತ್ತಿಸಿಯೇ ಇಲ್ಲನಾ.......... ಅಂತ ರಾಗ ತೆಗೆದಳು,ನಂತರ ಸ್ಟೌ ಹಚ್ಚಿ ಸಣ್ಣಗೆ ಮಾಡಿ ಅವಳ ಹತ್ತಿರಕ್ಕೆ ಬಂದು ,


ನಾನು : ಕಾವ್ಯ ಈಗ ಅರ್ಥ ಆಯ್ತ ?
       "ನನ್ನವಳು ಮತ್ತು ಅವಳ ನೆನಪು"
 
 ಎಂದಾಗ ಮತ್ತೆ ಹುಸಿಕೋಪದಿಂದ ನನ್ನವಳು ನನ್ನಬಳಿ ಸುಳಿದಾಗ ಅವಳನ್ನು ಚುಡಾಯಿಸಿ ಅವಳಿಗೆ ಸೋತು ಹೋಗಿದ್ದೆ,  
ನನ್ನಿಂದ ಕೀಟಲೆ ಸಹಿಸಿ ಸೋತಿದ್ದ ನನ್ನವಳು ನನ್ನ ಮನಸ್ಸನ್ನೇ ಗೆದ್ದು ಬಿಟ್ಟಿದ್ದಳು.
                         ----------  ----------  ----------   
                          
 

Comments

Submitted by mvprahlad Fri, 10/12/2012 - 22:58

ಆತ್ಮೀಯ ಸಂಪದಿಗರಿಗೆ ಆದರಣೀಯ ನಮಸ್ಕಾರಗಳು. ನಾನು, ಪ್ರಹ್ಲಾದ ಎಮ್ ನನ್ನ ಜೀವನದಲ್ಲಿ ನನ್ನ ಅನುಭವಕ್ಕೆ ಬಂದ ಕೆಲವು ಹಾಸ್ಯ ಘಟನೆಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಅಪೇಕ್ಷೆಯೊಂದಿಗೆ ಸಂಪದವನ್ನು ಪ್ರವೇಶಿಸುತ್ತಿದ್ದೇನೆ. ಲೇಖನವನ್ನು ಓದಿ ಅಭಿಪ್ರಾಯ ತಿಳಿಸಿ, ತಪ್ಪಿದ್ದರೆ ತಿದ್ದಿ, ಸಲಹೆ ಸೂಚನೆಗಳನ್ನು ಮುಕ್ತವಾಗಿ ನೀಡಿ.
Submitted by ಗಣೇಶ Fri, 10/12/2012 - 23:38

In reply to by mvprahlad

ಹ್ಹ ಹ್ಹ..ಪ್ರಹ್ಲಾದರೆ, ಚೆನ್ನಾಗಿದೆ. ಮುಂದುವರೆಸಿ.. ನಮ್ಮ ಸಂಪದ ಮಿತ್ರ ಗೋಪಾಲ್‌ಜಿ (gopaljsr)ಯವರೂ ಸಹ ಇಂತಹ ಹಾಸ್ಯ ಪ್ರಸಂಗಗಳನ್ನು ನಮಗೆ ಆಗಾಗ ನೀಡುವರು. http://www.sampada… -ಗಣೇಶ
Submitted by mvprahlad Sun, 10/14/2012 - 09:57

In reply to by ಗಣೇಶ

ಧನ್ಯವಾದಗಳು ಗಣೇಶ ಸಾರ್, ನನ್ನ ಮೊದಲ ಲೇಖನಕ್ಕೆ ಬಂದ ಮೊಟ್ಟಮೊದಲ ಪ್ರತಿಕ್ರಿಯೆ ನಿಮ್ಮದು . ತುಂಬಾ ಖುಷಿ ಆಯಿತು . ನಿಮ್ಮಿಂದ ನನಗೆ ಇನ್ನೂ ಹೆಚ್ಚು ಬರೆಯುವ ಉತ್ಸಾಹ ಮತ್ತು ಪ್ರೋತ್ಸಾಹ ಸಿಕ್ಕಿದೆ . ಅದಕ್ಕೆ ತಮ್ಮ ಸಲಹೆ ಸೂಚನೆಗಳ ಅವಶ್ಯಕತೆ ಇದೆ . ಹಾಗೂ ಗೋಪಾಲಜಿ ಅವರ ಲೇಖನ ಕೂಡಾ ಓದಿದೆ, ಅದರಿಂದ ನನಗೆ ಇನ್ನೂ ಹೆಚ್ಚು ಬರೆಯಲು ದಾರಿ ದೀಪವಾಯಿತು . ಅದಕ್ಕೂ ಕೂಡಾ ತಮಗೆ ತುಂಬಾ ಧನ್ಯವಾದಗಳು .
Submitted by mvprahlad Sun, 10/14/2012 - 09:58

In reply to by partha1059

ಪಾರ್ಥ ಸಾರ್ , ಮೊದಲಿಗೆ ನಿಮ್ಮ ಸರಸೀ ಕೀಟಲೆ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು . ಆದರೆ ಸಾರ್ ಅಲ್ಲಿ ಉಕ್ಕಿದ್ದು ಹಾಲಲ್ಲ ಪ್ರೀತಿ ........ ಏನಂತೀರಿ ಸಾರ್.....?
Submitted by lpitnal@gmail.com Sat, 10/13/2012 - 12:53

ಎಂವಿಪ್ರಲ್ಹಾದರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಉತ್ತಮ ಲೇಖನ. ತಮ್ಮ ಸಮರಸವನ್ನು ಸಂಪದಿಗರೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
Submitted by kishanrao Sat, 10/13/2012 - 14:56

ಪ್ರಲ್ಹಾದ ವ್ಹಾ: ನಿಮ್ಮ ಬರವಣಿಗೆ ಅದ್ಭುತ, ಓದಿದ ಮೇಲೆ ನಾವು ನಮ್ಮ ನೆನಪಿನಾಳಕ್ಕೆ ಜಾರುವಂತೆ ಮಾಡಿದ್ದೀರಿ. ನಿಮ್ಮವರನ್ನು ನೀವು ಅರಿತ ಪರಿ ಇಷ್ಟವಾಯಿತು. ಅವರಲ್ಲಿದ್ದ ವಿಶೇಷ ಗುಣ "ಮರೆವು", ಇದರಿಂದಾಗಿಯೇ ಚುಡಾಯಿಸುವ ಬುದ್ಧಿ ಇರುವ ನಿಮಗೆ ಸಂತಸದ ಗ್ರಾಸ, ಅವರ ಮರೆವನ್ನೇ ಎರವಲು ಪಡೆದು ಖುಷಿಪಡುವ ನಿಮಗೆ ಮರೆವು ಒಂದು ಭಕ್ಷೀಸು - ಏನಂತೀರಾ-ನೆನಪುಗಳನ್ನು ಬರೆದಿಡಿ, ಒಂದು ಕಾಲಕ್ಷೇಪಕ್ಕೆ ವಸ್ತುವಾದೀತು.
Submitted by mvprahlad Sun, 10/14/2012 - 10:00

In reply to by kishanrao

ನಮಸ್ಕಾರ ಕಿಷನ್ ರಾವ್ ಸಾರ್ , ತಮ್ಮ ಸಲಹೆಗೆ ಅನಂತ ಅನಂತ ಧನ್ಯವಾದಗಳು , ಅದರಲ್ಲೂ ನಿಮ್ಮನ್ನು ನೆನಪಿನಾಳಕ್ಕೆ ಎಳೆದಿದೆ ಎಂದರೆ ತುಂಬಾನೆ ಖುಷಿಯಾಯಿತು . ನೀವು ಹೇಳಿದ ಹಾಗೆ ಆ ಭಕ್ಷೀಸು ಇರುವುದರಿಂದಲೇ ನಮ್ಮ ಕೆಲವು ಸಿಟ್ಟುಗಳಿಗೆ ತುಂಬಾ ಸುಲಭವಾಗಿ ಪರಿಹಾರಗಳು ಆಗಿವೆ . ನೀವು ಹೇಳಿದ್ದು ಸರಿ .
Submitted by suma kulkarni Sat, 10/13/2012 - 15:13

ಬಾಳ ಸಂಗಾತಿಯನ್ನು, ಗೆಳೆಯ/ಗೆಳತಿಯರನ್ನು ಅವರ ತಪ್ಪು-ಒಪ್ಪುಗಳೊಂದಿಗೆ ಒಪ್ಪಿಕೊಳ್ಳಬೇಕಂತೆ, ನೀವು ನಿಮ್ಮವರ ಹುಟ್ಟು ಸ್ವಭಾವವನ್ನೇ ನಿಮ್ಮ ಮನರಂಜನೆಯಾಗಿ ಮಾಡಿಕೊಂಡಿರುವುದು ಶ್ಲಾಘನೀಯ. ಹಾಸ್ಯ ಲೇಖನ ಚೆನ್ನಾಗಿ ಮೂಡಿ ಬಂದಿದೆ, ಮುಂದುವರಿಸಿ ಯಶಸ್ಸು ಸಿಗಲಿ.
Submitted by mvprahlad Sun, 10/14/2012 - 10:02

In reply to by suma kulkarni

ಸುಮಾ ಅವರೇ ನಮಸ್ಕಾರಗಳು , ನಮ್ಮನ್ನು ನಂಬಿ ಬಾಳಸಂಗಾತಿಯಾಗಿ ಬಂದವರ ತಪ್ಪು - ಒಪ್ಪುಗಳೊಂದಿಗೆ ಒಪ್ಪಿಕೊಳ್ಳಬೇಕೆಂಬ ನಿಮ್ಮ ಅಭಿಪ್ರಾಯ ನನಗೆ ಇಷ್ಟವಾಯಿತು . ಗೊತ್ತಿದ್ದೊ ಗೊತ್ತಿಲ್ಲದೆಯೋ ನಾನು ಹಾಗೆಯೇ ನಡೆದುಕೊಳ್ಳುತ್ತಿದ್ದೆ ಅದಕ್ಕೆ ತಮ್ಮ ವಾಕ್ಯ ಪುಷ್ಟಿಯಾಯಿತು . ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು . ಹೀಗೆಯೇ ವಿಶ್ವಾಸ ಇರಲಿ .