ನಮ್ಮ ಶಾಲೆಗಳಲ್ಲಿ ನೀಡುತ್ತಿರುವ ಶಿಕ್ಷಣದ ಬಗ್ಗೆ ಏನಂತೀರಿ?

ನಮ್ಮ ಶಾಲೆಗಳಲ್ಲಿ ನೀಡುತ್ತಿರುವ ಶಿಕ್ಷಣದ ಬಗ್ಗೆ ಏನಂತೀರಿ?

ಬರಹ

ಕೆಲವು ವರ್ಷಗಳ ಹಿಂದೆ ಹಾಸನದ ವೈದ್ಯ ದಂಪತಿಗಳ ಮಗ ಪಿಯುಸಿ ಓದುತ್ತಿದ್ದವನು ಆತ್ಮಹತ್ಯೆ ಮಾಡಿಕೊಂಡ.ಮತ್ತೊಬ್ಬ ವಿದ್ಯಾರ್ಥಿನಿ ನೇಣಿಗೆ ಶರಣಾದಳು. ಹೀಗೆ ಪ್ರತೀ ವರ್ಷ ಅಲ್ಲೊಂದು ಇಲ್ಲೊಂದು ವಿದ್ಯಾರ್ಥಿ ಅತ್ಮಹತ್ಯೆ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ. ಪೇಪರ್ ನಲ್ಲಿ ಇಂತಾ ಸುದ್ಧಿ ಓದಿ ಓದಿ ಅಭ್ಯಾಸ ವಾಗಿಬಿಟ್ಟು ಹೆಡ್ ಲೈನ್ ಓದಿ ಸುಮ್ಮನಾಗುವ ಹಂತಕ್ಕೆ  ಜನರು ತಲುಪಿದ್ದಾರೆ.ಆದರೆ ಒಂದು ಸಂಗತಿ ನಮಗೆ ಅನ್ನಿಸುವುದೇ ಇಲ್ಲ, ಇಂತಾ ಘಟನೆ ನಾಳೆ ನಮ್ಮ ಮನೆಯಲ್ಲೂ ಆಗಬಹುದು! ಯಾಕೆ ಹೀಗಾಗುತ್ತಿದೆ? ತಪ್ಪು ಯಾರದು? ಮಕ್ಕಳದ್ದೋ? ಪಾಟ ಮಾಡುವ ಟೀಚರ್ಗಳದ್ದೋ? ಅಪ್ಪ-ಅಮ್ಮ ನದ್ದೋ?

ನಮ್ಮ ಮಕ್ಕಳಿಗೆ ಆತ್ಮ ಸ್ಥೈರ್ಯದ ಕೊರತೆ ಯಿಂದಲ್ಲವೇ ಇಂತೆಲ್ಲಾ ಘಟನೆಗಳು ಮರುಕಳಿಸುತ್ತಿರುವುದು?

ಸರಿ, ಹಾಗಾದರೆ ಇದಕ್ಕೆ ನಾವೊಂದು  ಪರಿಹರ ಕಂಡುಕೊಳ್ಳಬೇಡವೇ?

ನಮ್ಮ ಬಂಧುಗಳ ಮನೆಯಲ್ಲಿ  ಒಬ್ಬ ವಿದ್ಯಾರ್ಥಿ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದ. ೯೫% ಮೇಲೆ ಅಂಕ ತೆಗೆಯುವ ಆತ್ಮವಿಶ್ವಾಸ ಅವನಿಗಿದೆ. ವರ್ಷವೆಲ್ಲಾ ಮಕ್ಕಳು ಶಾಲೆಗೆ ಹೋಗುತ್ತಾ  ಯಾಂತ್ರಿಕವಾಗಿ ದಿನಕಳೆದಿರುತ್ತಾರೆ, ಅವರಿಗೆ ಏನಾದರೂ ಸ್ವಲ್ಪ ಬೇಸರ ಕಳೆಯಲು ಒಂದು ಪ್ರವಾಸ ಯೋಜಿಸೋಣವೆಂದು  ನಮ್ಮ ಮನೆಯಲ್ಲಿ ಚಿಂತನೆ ನಡೆಸಿದೆವು. ನಾವು ಅಪ್ಪ-ಅಮ್ಮ ಪ್ರವಾಸ ಏರ್ಪಡಿಸಲು ತಯಾರಿದ್ದರೂ ಮಕ್ಕಳು ಬರಲು ತಯರಿಲ್ಲ. ಕಾರಣ ಅವರಿಗಾಗಲೇ ಮುಂದಿನ ತರಗತಿಯ ಟ್ಯೂಶನ್ ಪ್ರಾರಂಭವಾಗಿಬಿಟ್ಟಿದೆ. ಆ ಟ್ಯೂಶನ್ ಮಾಡುವವರಿಗೆ ಡಿಮ್ಯಾಂಡ್ ಹೇಗೆಂದರೆ ಈ ವರ್ಷ ಪರೀಕ್ಷೆ ಬರೆಯುವ ಮುಂಚಿತವಾಗಿಯೇ ಮುಂದಿನ ತರಗತಿಯ ಟ್ಯೂಶನ್ ಗೆ ಮುಂಗಡ ಪಾವತಿಸಿ ಬುಕ್ ಮಾಡಬೇಕು. ಈ ವರ್ಷದ ಪರೀಕ್ಷೆ ಬರೆದ ನಂತರ ಮುಂದಿನ ವರ್ಷದ ಬಗ್ಗೆ ಚಿಂತಿಸೋಣ ಎನ್ನುವಂತಿಲ್ಲ. ಈ ವರ್ಷದ ಪರೀಕ್ಷೆ ಮುಗಿಯುವ ಸಮಯಕ್ಕೆ ಕೆಲವರು ಟ್ಯೂಶನ್ ಮಾಡುವವರ ಹತ್ತಿರ ಅಡ್ಮಿಶನ್ ಸಿಗುವುದೇ ಇಲ್ಲ. ಖಾಲಿ ಇಲ್ಲ, ನಮ್ಮ ಕೆಪ್ಯಾಸಿಟಿ ಮೀರಿ ಹತ್ತು ಜನರಿಗೆ ದಾಕ್ಷಿಣ್ಯಕ್ಕೆ ಸೇರಿಸಿಕೊಂಡಿದ್ದೇವೆಂಬ ಉತ್ತರ ಸಿಗುತ್ತೆ. ಪಾಪ! ಇವರಿಗೆ ದಾಕ್ಷಿಣ್ಯಕ್ಕೆ ಹತ್ತು ಜನರಿಂದ ಐವತ್ತು ಸಾವಿರ ವಸೂಲಿ ಯಾಗಿರುತ್ತೆ. ಸಂಖ್ಯೆ ಹೆಚ್ಚಾಗಿ ಕುರಿಯಂತೆ ಕುಳಿತುಕೊಳ್ಳುವವರು ಇದೇ ಐದು ಸಾವಿರ ಶುಲ್ಕ ತೆತ್ತಿರುವ ವಿದ್ಯಾರ್ಥಿಗಳು!!

ಯಾಕೆ ಹೀಗೆ?.......

ಮಕ್ಕಳು ಅದೆಷ್ಟು ಸ್ಟ್ರೆಸ್ ಸಹಿಸಬೇಕು! ಈ ವರ್ಷದ ಪರೀಕ್ಷೆ ಮುಗಿದ ಮಾರನೆಯ ದಿನವೇ ಮುಂದಿನ ವರ್ಷದ ತರಗತಿಯ ಟ್ಯೂಶನ್ ಶುರುವಾಗಿರುತ್ತೆ. ಒಬ್ಬ ವಿದ್ಯಾರ್ಥಿ ಹೇಳುತ್ತಾನೆ. ನಮಗೆ ಕಲೇಜಲ್ಲಿ ತರಗತಿ ಪ್ರಾರಂಭವಗುವ ಹೊತ್ತಿಗೆ ಟ್ಯೂಶನ್ ನಲ್ಲಿ  ಮುಕ್ಕಾಲು ಭಾಗ ಪಾಠ ಮುಗಿದೇ ಹೋಗಿರುತ್ತೆ. ಅವನಿಗೇನೋ ಆಗ ಇದು ಚಂದವಾಗಿ ಕಾಣುತ್ತೆ. ಮೇಸ್ಟ್ರು ಕೇಳಿದ ಪ್ರಶ್ಣೆಗಳಿಗೆಲ್ಲಾ ತಟ್ಟನೆ ಉತ್ತರ ಕೊಟ್ಟುಬಿಡುತ್ತಾನೆ. ಆದರೆ ಮುಂದೆ ಪರೀಕ್ಷೆಯಲ್ಲಿ  ೯೫% ತೆಗೆಯುವ ಬದಲಿಗೆ ಒಂದುವೇಳೆ ೯೨% ಅಂಕ ಗಳಿಸಿದರೆ ಆತ್ಮಹತ್ಯೆಗೆ ತಾನು ಶರಣಾಗೆತ್ತೇನೆಂದು  ಅವನಿಗೆ ಆಗ ಗೊತ್ತಾಗಿರುವುದೇ ಇಲ್ಲ.ಆದರೆ ತರಗತಿಯಲ್ಲಿ ಹಿಂದಿದ್ದ ವಿದ್ಯಾರ್ಥಿ ನಿಧಾನವಾಗಿಚೇತರಿಸಿಕೊಳ್ಳುತ್ತಾ ಆ ವರ್ಷದ ಪರೀಕ್ಷೆಯಲ್ಲಿ ೪೦% ಅಂಕ ಗಳಿಸಿ ತೇರ್ಗಡೆಯಾದರೂ ಮುಂದೆ ಅವನ ಶ್ರಮ ಹಾಗೂ ಧೈರ್ಯದಿಂದ ಜೀವನದಲ್ಲಿ ಯಶಸ್ಸು ಸಾಧಿಸಿರುವ ಉಧಾಹರಣೆಗಳು ಸಾಕಷ್ಟಿವೆ.

ಈ  ವಿಚಾರವನ್ನು ಉಲ್ಲೇಖಮಾಡಲು ಕಾರಣವಿದೆ. ನಮ್ಮ ಮಕ್ಕಳನ್ನು ಈ ಟ್ಯೂಶನ್ ದಾಂಧಲೆಯಿಂದ ಮಾನಸಿಕವಾಗಿ ಕೊಲ್ಲುತ್ತಿಲ್ಲವೇ?

ಇನ್ನೊಂದು ವಿಚಾರವನ್ನು ನಾವು ಪೋಷಕರಾದವರು ಗಮನಿಸುತ್ತೇವೆಯೇ? ನಮ್ಮ ಮಕ್ಕಳು ಸರ್ಕಾರೀಶಾಲೆಯಲ್ಲಿ ಓದಲೀ, ಖಾಸಗೀ ಶಾಲೆಯಲ್ಲಿ ಓದಲೀ, ಟ್ಯೂಶನ್ ಗಾಗಿ ಬೇರೆಯ ಮೇಶ್ಟ್ರನ್ನೇ ಹುಡುಕುತ್ತೇವೆ? ಅಂದರೆ ನಮ್ಮ ಶಾಲೆಯಲ್ಲಿರುವ ಟೀಚರುಗಳಿಗಿಂತ ಟ್ಯೂಶನ್ ಮಾಡುವ ಟೀಚರ್ ಚೆನ್ನಾಗಿ ಅರ್ಥವಾಗುವಂತೆ ವಿದ್ಯಾರ್ಥಿ ತಲೆಗೆ ತುಂಬುತ್ತಾರೆ. ಅದೇ ಕೆಲಸವನ್ನು ನಮ್ಮಶಾಲೆಯ ಟೀಚರುಗಳೇಕೆ ಮಾಡಲಾರರು?

ಖಾಸಗೀ ಕಂಪನಿಗಳಲ್ಲಿರುವಂತೆ ಶಾಲೆಯ ಟೀಚರುಗಳ " ಕಾರ್ಯ ದಕ್ಷತೆ" ಪರೀಕ್ಷೆ ಯಾಗಬೇಡವೇ? ಅದಕ್ಷ ಟೀಚರುಗಳನ್ನು ಖಾಸಗೀಶಾಲಾ ಆದಳಿತವಾಗಲೀ, ಸರ್ಕಾರವಾಗಲೀ ಕಿತ್ತೊಗೆದು ಟ್ಯೂಶನ್ ಮಾಡುತ್ತಿರುವ ಟೀಚರುಗಳನ್ನೇ ಏಕೆ ನೇಮಿಸಿಕೊಳ್ಳ ಬಾರದು?

ಸರ್ಕಾರವೂ ಈ ಬಗ್ಗೆ ಒಂದು ಆಂಧೋಳನ ಪ್ರಾರಂಭಿಸಬೇಕು, ಪೋಷಕರೂ ಈ ಬಗ್ಗೆ ಜಾಗೃತ ರಾಗಬೇಕು.ಇಲ್ಲವಾದಲ್ಲಿ ನಮ್ಮ  ಮಕ್ಕಳುಆಟವಾಡುವಕಾಲದಲ್ಲಿ  ಟ್ಯೂಶನ್ ದಾಂಧಲೆಗೆ ಬಲಿಯಾಗಿ ಮತ್ತೆ ಬಾರದ ಬಾಲ್ಯವನ್ನೇ ಕಳೆದುಕೊಂಡುಅಸಂತುಷ್ಟ ರಾಗಿ ಯಂತ್ರಗಳಂತೆ ಬದುಕು ಸಾಗಿಸುವುದರಲ್ಲಿ ಸಂಶಯವಿಲ್ಲ.

ಇದು ನನ್ನ ಅನಿಸಿಕೆ, ಅನುಭವ. ಮನಸ್ಸಿನಲ್ಲಿರುವುದನ್ನು ಕಕ್ಕಲು ಕಾರಣವಿದೆ.ನನ್ನಿಬ್ಬರು ಮಕ್ಕಳು ಬಿ.ಇ. ಓದಿ ಒಬ್ಬ ನೌಕರಿ ಮಾಡುತ್ತಾ ಮತ್ತೊಬ್ಬ ಹೆಚ್ಚಿನ ವಿದ್ಯೆ ಮುಂದುವರೆಸಿದ್ದಾನಾದರೂ ನನಗೂ ಸಹ ಮಕ್ಕಳು ಮಕ್ಕಳಾಗಿದ್ದುದು ಮರೆತೇ ಹೋಗಿದೆ.ನಮ್ಮಗಳ ಸಹನೆ ,ಪ್ರೀತಿ ಪ್ರೋತ್ಸಾಹದಿಂದ ನಮ್ಮ ಮಕ್ಕಳೊಡನೆ ಒಂದಿಷ್ಟು ಸಂತೋಷವಾಗಿರಲು ಸಾಧ್ಯವಾಗಿದೆಯೇ ಹೊರತು ಮಕ್ಕಳ ಮೇಲೆರಗಿರುವ ಕ್ರೂರಶಿಕ್ಷಣ ವ್ಯವಸ್ಥೆಯನ್ನು ವಿರೋಧಿಸಿ ಮಕ್ಕಳನ್ನು ಬೆಳೆಸಲಾಗಲಿಲ್ಲವಲ್ಲಾ! ಎಂಬ ವ್ಯಥೆ ಇದೆ.

ಸಂಪದಿಗರೇ, ನೀವೇನೆನ್ನುತ್ತೀರಿ? ನಿಮ್ಮ ಮಕ್ಕಳು  ಆಟ-ಪಾಠ, ತುಂಟಾಟ, ಚೇಷ್ಟೆಗಳಿಂದ  ತಮ್ಮ ಸಹಜ ಬಾಲ್ಯವನ್ನು ಅನುಭವಿಸುತ್ತಿದ್ದಾರೋ? ಅಥವಾ ಆಗಲೇ ತಮ್ಮ ಹನ್ನೆರಡನೇ ವಯಸ್ಸಿಗೇ ದೊಡ್ದವರಾಗಿಬಿಟ್ಟಿದ್ದಾರೋ?