ನಮ್ಮ ಸುತ್ತಮುತ್ತ ಅದೆಷ್ಟು ಸಂಪತ್ತಿದೆ ಗೊತ್ತೆ? (ರೈತರೇ ಬದುಕಲು ಕಲಿಯಿರಿ-೨)

ನಮ್ಮ ಸುತ್ತಮುತ್ತ ಅದೆಷ್ಟು ಸಂಪತ್ತಿದೆ ಗೊತ್ತೆ? (ರೈತರೇ ಬದುಕಲು ಕಲಿಯಿರಿ-೨)

ಬರಹ

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಭಾರತದಲ್ಲಿರುವಂತಹ ನೈಸರ್ಗಿಕ ವೈವಿಧ್ಯತೆ ಹಾಗೂ ಅನುಕೂಲಗಳು ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ.

ಇಲ್ಲಿ ಅತ್ಯುತ್ತಮವಾದ ಮಣ್ಣಿದೆ. ವಿವಿಧ ಪ್ರಮಾಣದ ಮಳೆ ಬೀಳುತ್ತದೆ. ಶಕ್ತಿದಾಯಕ ಬಿಸಿಲು ನಮ್ಮಲ್ಲಿ ಹೇರಳವಾಗಿದೆ. ಜಗತ್ತಿನ ಇತರ ದೇಶಗಳು ಅನಾಗರಿಕ ಸ್ಥಿತಿಯಲ್ಲಿದ್ದಾಗ ಭಾರತ ಸರ್ವಸಂಪನ್ನವಾಗಿತ್ತು. ಅದ್ಭುತವಾದ ಕೃಷಿ ಪದ್ಧತಿ ನಮ್ಮಲ್ಲಿತ್ತು. ಹೆಚ್ಚು ಬೆಳೆಯುತ್ತಿದ್ದುದರಿಂದ ನಾಗರಿಕತೆಯನ್ನು ಪೋಷಿಸುವುದು ಸುಲಭವಾಗಿ, ಕಲೆ ಮತ್ತು ಸಂಸ್ಕೃತಿ ಬೆಳೆದವು. ಇತರ ದೇಶಗಳು ಸರಿಯಾಗಿ ಬಟ್ಟೆ ಕೂಡ ಹಾಕಿಕೊಳ್ಳದ ಸ್ಥಿತಿಯಲ್ಲಿದ್ದಾಗ ಭಾರತದಲ್ಲಿ ಬಂಗಾರದ ಹೊಗೆ ಹಾಯುತ್ತಿತ್ತು.

ಇದು ಖಂಡಿತವಾಗಿ ಉತ್ಪ್ರೇಕ್ಷೆಯಲ್ಲ. ನಮ್ಮ ಸಮೃದ್ಧ ಸ್ಥಿತಿ ದಾಳಿಕೋರರನ್ನು ಆಕರ್ಷಿಸಿತು. ಆದರೆ ದಂಡೆತ್ತಿ ಬಂದ ಗ್ರೀಕರು, ಮುಸ್ಲಿಂರು ಹಾಗೂ ಇತರ ಹಲವಾರು ಬುಡಕಟ್ಟು ಜನಾಂಗದವರು ಮೊದಮೊದಲು ಸಂಪತ್ತನ್ನು ಕೊಳ್ಳೆ ಹೊಡೆದರೂ ನಮ್ಮ ಸಂಸ್ಕೃತಿಯಿಂದ ಪ್ರಭಾವಿತರಾಗಿ ಇಲ್ಲಿಯೇ ನೆಲೆ ನಿಂತರು. ಇಷ್ಟೊಂದು ಸಮೃದ್ಧ ದೇಶ ಬಿಟ್ಟು, ಇದ್ದ ಕೊಳ್ಳೆಯೊಂದಿಗೆ ದೂರದಲ್ಲಿರುವ ತಮ್ಮ ದೇಶಕ್ಕೆ ಹೋಗಿ ನೆಲೆಸುವುದು ಸಾರಿಗೆ ವ್ಯವಸ್ಥೆ ಕಠಿಣವಾಗಿದ್ದ ಆಗಿನ ದಿನಗಳಲ್ಲಿ ಅಷ್ಟು ಸುಲಭವೂ ಆಗಿರಲಿಲ್ಲ.

ಇಂಥದೊಂದು ಪರಿಸ್ಥಿತಿ ೧೬ನೇ ಶತಮಾನದವರೆಗೆ ಅಬಾಧಿತವಾಗಿ ಮುಂದುವರೆದಿತ್ತು. ದಾಳಿ ಮಾಡಲು ಬಂದವರೇ ದೊರೆಗಳಾಗಿದ್ದರೂ ಭಾರತದ ಆರ್ಥಿಕ ಸ್ಥಿತಿಗೆ ಅಂತಹ ಧಕ್ಕೆ ಒದಗಿರಲಿಲ್ಲ. ದೇಶ ಆಗಲೂ ಸಮೃದ್ಧವಾಗಿಯೇ ಇತ್ತು. ಈ ನೆಮ್ಮದಿಯಲ್ಲಿ ಭಾರತೀಯರು ಮಾತ್ರವಲ್ಲ, ದಾಳಿಕೋರ ಅರಸರೂ ಮೈಮರೆತರು. ಹೀಗಾಗಿ ಯುರೋಪ್ ದೇಶಗಳಲ್ಲಿ ನಡೆದಿದ್ದ ವೈಜ್ಞಾನಿಕ ಕ್ರಾಂತಿಯತ್ತ ನಮ್ಮ ಜನ ಗಮನ ಹರಿಸಲಿಲ್ಲ.

ಅಷ್ಟೊತ್ತಿಗೆ ಸಮುದ್ರಯಾನವನ್ನು ಭಾರತೀಯರು ಸಂಪೂರ್ಣವಾಗಿ ಕೈಬಿಟ್ಟಿದ್ದರು. ಧರ್ಮದ ಹೆಸರಿನಲ್ಲಿ ವೈದಿಕರು ಸಮುದ್ರಯಾನವನ್ನು ಬಹಿಷ್ಕರಿಸಿದ್ದರು. ಇದರಿಂದಾಗಿ ವಿದೇಶಿಯಾತ್ರೆಗಳು ಬಹುತೇಕ ನಿಂತು ಹೋಗಿ ಜಗತ್ತಿನ ವಿವಿಧ ಪ್ರದೇಶಗಳಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯೇ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿತ್ತು. ಭಾರತದ ಸಂಪತ್ತಿನ ಸುದ್ದಿಯಿಂದ ಆಕರ್ಷಿತರಾಗಿದ್ದ ಚಿನ್ನದಾಸೆಯ ಯುರೋಪಿಯನ್ನರು ವ್ಯಾಪಾರ ಮಾಡುವ ಉದ್ದೇಶದಿಂದ ಒಬ್ಬೊಬ್ಬರಾಗಿ ಭಾರತಕ್ಕೆ ಆಗಮಿಸಿದರು. ಇದು ನಿಜಕ್ಕೂ ಪರ್ವ ಕಾಲ.

ಕ್ರಮೇಣ ಭಾರತದ ಶಕ್ತಿ ಮತ್ತು ದೌರ್ಬಲ್ಯಗಳೆರಡನ್ನೂ ಯುರೋಪಿಯನ್ನರು ಚೆನ್ನಾಗಿ ಅರ್ಥ ಮಾಡಿಕೊಂಡರು. ಭೋಗದಲ್ಲಿ ಮುಳುಗಿ ದುರ್ಬಲರಾಗಿದ್ದ ದೇಶೀ ಅರಸರನ್ನು ವ್ಯವಸ್ಥಿತವಾಗಿ ಸೋಲಿಸಿ ತಮ್ಮ ಆಧೀನರನ್ನಾಗಿ ಮಾಡಿಕೊಂಡ ಯುರೋಪಿಯನ್ನರು ಭಾರತದ ಜತೆಗೆ ಇಡೀ ಏಷ್ಯ ಖಂಡದಲ್ಲಿ ತಮ್ಮ ಅಧಿಕಾರ ಸ್ಥಾಪಿಸಿದರು.

ಅಷ್ಟೊತ್ತಿಗೆ ಯುರೋಪಿನಲ್ಲಿ ಕೈಗಾರಿಕಾ ಕ್ರಾಂತಿ ತೀವ್ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿತ್ತು. ತಮ್ಮ ಕೈಗಾರಿಕೆಗಳಿಗೆ ಕಚ್ಚಾ ವಸ್ತು, ಹಾಗೂ ಸಿದ್ಧಪಡಿಸಿದ ವಸ್ತುಗಳಿಗೆ ದೊಡ್ಡ ಮಾರುಕಟ್ಟೆಗಳು ಯುರೋಪ್ ದೇಶಗಳಿಗೆ ಬೇಕಾಗಿದ್ದವು. ಭಾರತವೂ ಸೇರಿದಂತೆ ಏಷ್ಯ ಹಾಗೂ ಮಧ್ಯ ಪ್ರಾಚ್ಯ ದೇಶಗಳು ಈ ಉದ್ದೇಶಕ್ಕೆ ಬಳಸಲ್ಪಟ್ಟವು. ತಮ್ಮ ಕೈಗಾರಿಕೆಗಳಿಗೆ ಅವಕಾಶ ಮಾಡಿಕೊಡುವ ಭರದಲ್ಲಿ ಬ್ರಿಟಿಷರಾದಿಯಾಗಿ ಎಲ್ಲ ಯುರೋಪ್ ದೇಶಗಳು ದೇಶೀ ಕೈಗಾರಿಕೆ ಹಾಗೂ ಕೃಷಿ ಪದ್ಧತಿಯನ್ನು ನಾಶ ಮಾಡಿದವು. ತಮಗೆ ಬೇಕಾದ ಕಚ್ಚಾ ವಸ್ತುಗಳನ್ನು ಬೆಳೆದುಕೊಡುವ ಪ್ರದೇಶವಾಗಿ ಭಾರತದ ಕೃಷಿ ಭೂಮಿ ಬಳಕೆಯಾಯಿತು.

ಇದರಿಂದ ಪೆಟ್ಟು ಬಿದ್ದಿದ್ದು ಭಾರತದ ಹಳ್ಳಿಗಳಿಗೆ. ಅದುವರೆಗೆ ನಮ್ಮ ಹಳ್ಳಿಗಳು ಸ್ವಾವಲಂಬಿಗಳಾಗಿದ್ದವು. ಹಳ್ಳಿಯ ಪ್ರತಿಯೊಬ್ಬ ರೈತನೂ ಆ ವರ್ಷಕ್ಕೆ ತನಗೆ ಬೇಕಾಗಿರುವ ಅಷ್ಟೂ ದವಸ-ಧಾನ್ಯ, ತರಕಾರಿಗಳನ್ನು ತಾನೇ ಬೆಳೆದುಕೊಳ್ಳುತ್ತಿದ್ದ. ಪ್ರತಿಯೊಂದು ಮನೆಯಲ್ಲಿಯೂ ಹಸುಗಳಿದ್ದವು. ಕೃಷಿಗೆ ಬೇಕಾದ ಎಲ್ಲ ವಸ್ತುಗಳನ್ನೂ ಹಳ್ಳಿಯಲ್ಲಿಯೇ ತಯಾರಿಸಲಾಗುತ್ತಿತ್ತು. ಹೀಗಾಗಿ ನಗರಗಳ ಮೇಲೆ ಅವಲಂಬನೆ ಇರಲಿಲ್ಲ.

ಬ್ರಿಟಿಷರು ಮೊದಲು ಮುರಿದಿದ್ದು ಈ ವ್ಯವಸ್ಥೆಯನ್ನು.

ತಮ್ಮ ಕೈಗಾರಿಕೆಗಳು ಉತ್ಪಾದಿಸುವ ಸಿದ್ಧವಸ್ತುಗಳಿಗೆ ಭಾರತದ ನಗರ ಪ್ರದೇಶಗಳನ್ನು ಮಾರುಕಟ್ಟೆ ಮಾಡಿಕೊಂಡ ಬ್ರಿಟಿಷರು ಕಚ್ಚಾ ವಸ್ತುಗಳನ್ನು ಹುಡುಕಿಕೊಂಡು ಹಳ್ಳಿಗಳಿಗೆ ಕಾಲಿಟ್ಟರು. ಊರಿಗೆ ಊರೇ ಹತ್ತಿ ಬೆಳೆಯುವ, ಮೆಣಸಿನಕಾಯಿ, ಟೊಮ್ಯಾಟೋ, ಕಬ್ಬು, ಭತ್ತ, ಗೋಧಿ ಇತ್ಯಾದಿ ಬೆಳೆಗಳನ್ನು ಬೆಳೆಯುವ ಪದ್ಧತಿ ಪ್ರಾರಂಭವಾಗಿದ್ದು ಹೀಗೆ. ’ನೀನು ಬೆಳೆದ ವಸ್ತುಗಳನ್ನು ಪೇಟೆಯಲ್ಲಿ ಮಾರಿ, ಅಲ್ಲಿ ನಿನಗೆ ಬೇಕಾದ ಇತರ ವಸ್ತುಗಳನ್ನು ಖರೀದಿಸು’ ಎಂಬ ವಾದ ಬ್ರಿಟಿಷರದಾಗಿತ್ತು.

ಇದರಿಂದಾಗಿ ಹಳ್ಳಿಗಳ ಸ್ವಾವಲಂಬನೆ ನಾಶವಾಗಿ ಜನ ನಗರದ ಉತ್ಪಾದನೆ ಮೇಲೆ ಅವಲಂಬಿತರಾದರು. ಬಹುಬೆಳೆ ಪದ್ಧತಿ ಮಾಯವಾಗಿ ಏಕಬೆಳೆ ಪದ್ಧತಿ ಹಬ್ಬತೊಡಗಿತು. ಮೊದಲ ಬಾರಿ ಆಹಾರ ಧಾನ್ಯಗಳನ್ನು ಮಾರುವ ಮತ್ತು ಕೊಳ್ಳುವ ಅನಿವಾರ್ಯತೆ ಹುಟ್ಟಿಕೊಂಡು ಭಾರತದ ಕೃಷಿ ಅವನತಿಯತ್ತ ಸಾಗತೊಡಗಿತು. ಇದು ಒಂದು ಪ್ರಮುಖ ಹಂತ.

ಹೀಗಿದ್ದರೂ ರಸಾಯನಿಕಗಳು ಕೃಷಿ ಕ್ಷೇತ್ರ ಪ್ರವೇಶಿಸಿರಲಿಲ್ಲ. ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು. ಭಾರತದ ಕೃಷಿ ಕ್ಷೇತ್ರ ಹಾಗೂ ಗ್ರಾಮೀಣರ ಸ್ವಾವಲಂಬನೆ ಮೇಲೆ ಬ್ರಿಟಿಷರಿಗಿಂತ ದೊಡ್ಡ ಏಟು ಕೊಟ್ಟಿದ್ದು ನೆಹರೂ ಎಂಬುದು ಐತಿಹಾಸಿಕ ದುರಂತ.

(ಮುಂದುವರಿಯುವುದು)

- ಚಾಮರಾಜ ಸವಡಿ