'ನಾ ಕಂಡಂತೆ ಚೇತನ - ಬಾಗ – ೨’, ಕೇನ - ಮೊದಲನೆಯ ಖಂಡ
'ನಾ ಕಂಡಂತೆ ಚೇತನ - ಬಾಗ – ೨’, ಕೇನ - ಮೊದಲನೆಯ ಖಂಡ , ಕೃತಿ ರಚನೆ - ಸಾಯಿನಾಥ ಬಾಲಕೃಷ್ಣ, ಬೆಂಗಳೂರು, 31.05.2013
‘ Kenopanishat – Part – I’ presented in Kannada verse.
By Sainath Balakrishna, Bangalore, 31.05.2013
ಪೀಠಿಕೆ
ಹಿಂದಿನ ವರ್ಷ ಜನ್ಮ ದಿನದಂದು ಕೈಗೊಂಡ ನಿರ್ಧಾರದಂತೆ, ಈ ವರ್ಷ ಕೆನೋಪನಿಶತ್ತಿನ ಅಧ್ಯಯನಕ್ಕೆ ನನಗೆ ತಿಳಿದ ಮಟ್ಟಿಗೆ ಸಿದ್ದತೆ ಮಾಡಿಕೊಂಡು, ಶುಭ ದಿನದಂದು ಸಂಕಲ್ಪ ಮಾಡಿ, ಗುರು ಹಿರಿಯರು, ದೇವರನ್ನು ನೆನೆದು ಪೂಜಿಸಿ ಪುಸ್ತಕದ ಹಾಳೆಯನ್ನು ತಿರುವು ಹಾಕಿದೆ. ಮೊದಲನೆಯ ದಿನದಂದೇ ಮೊದಲ ಖಂಡದ ಪ್ರಾರ್ಥನೆಯನ್ನು ಓದಿದ ನಂತರ ನನ್ನ ಮನಸ್ಸಿನಲ್ಲಿ ಬಂದ ಪ್ರಶ್ನೆ ಏನೆಂದರೆ, ನಾನು ಕೆನೋಪನಿಶತ್ತಿನಲ್ಲಿ ಬರುವ ಶಿಷ್ಯನ ಮಟ್ಟಕ್ಕೆ ಬರಲು ಸಾದ್ಯವೇ ? ಈ ಶಿಷ್ಯ ಇದಾಗಲೇ ಸದಾತ್ಮ ಸಂಪನ್ನನಾಗಿರುವನು. ಹೀಗಾಗಿ ಆತ್ಮ ಸಾಕ್ಷಾತ್ಕಾರಕ್ಕೆ ತನ್ನನ್ನು ಸಿದ್ದ ಮಾಡಿಕೊಳ್ಳುತಿದ್ದಾನೆ. ಈತನಿಗಿರುವ ಸಂಸ್ಕಾರ ನಾನು ಹೊಂದಿದರಷ್ಟೇ ಮುಂದಿನ ಹೆಜ್ಜೆ ಇಡುವುದು ಸೂಕ್ತ ಎನಿಸಿತು.
ಹಲವಾರು ದಿನಗಳು ಕಳೆದವು. ಸಂಸ್ಕಾರ ಮನಸ್ಸಿಗೋ ಅಥವಾ ಈ ದೇಹಕ್ಕೋ ?, ಅದು ವಿಧಿ ಪೂರ್ವಕವಾಗಿ ಪದೆಯುವಂತದ್ದೋ ಅಥವ ಕರ್ಮಾನುಸಾರ ಪದೆಯುವಂತದ್ದೋ ಎನ್ನುವ ಪ್ರಶ್ನೆಗಳು ಕಾಡತೊಡಗಿದವು. ಸಂಶಯದ ಸುಳಿಯಲ್ಲಿ ಸಿಕ್ಕಿದವನಿಗೆ ದಡ ಎಟಕುವುದೇ ? ಸತ್ಕರ್ಮದಿಂದಲೇ ಅಲ್ಲವೇ ಸಂಸ್ಕಾರ. ಇದೇ ಅಲ್ಲವೇ ನೂರು ವರ್ಷ ಜೀವಿಸುವ ಉದ್ದೇಶ? ಇಸ್ಹೊಪನಿಷತ್ತಿನಲ್ಲಿ ಹೇಳಿರುವುದನ್ನು ಮರೆತೆಯಾ ನೀನು ?. ಹೀಗೆಂದು ಉತ್ತರ ಹುಡುಕಿಕೊಂಡು ಸಮಜಾಯಿಷಿಸಿಕೊಂಡು ಮನಸ್ಸು ಸಿದ್ದವಾದರೂ ಮುಂದೆ ಹೇಗೆ ಪ್ರಾರಂಭಿಸಬೇಕೆನ್ನುವುದೇ ತೋಚಲಿಲ್ಲ, ನೀನು ಒಂದು ಹೆಜ್ಜೆ ಮುಂದಿಟ್ಟರೆ ಭಗವಂತನು ನೂರು ಹೆಜ್ಜೆ ಮುಂದಡಿಯಿಡುವನು ಎಂದು ಕೇಳಿದ ಮಾತು ನೆನಪಾಯಿತು. ಜಗದ್ಗುರುಗಳ ಪಾದಗಳನ್ನು ನೆನೆದು ಉಪನಿಷತ್ತಿನ ಪ್ರಾರ್ಥನೆಯನ್ನು ನೆನೆದು ಮತ್ತೆ ಮತ್ತೆ ಅದನ್ನು ಮನಸ್ಸಿನಲ್ಲಿ ಆವರಿಸಿಕೊಂಡು ಮುಂದಡಿಯಿಡುವ ಸಾಹಸ ಮಾಡಿದೆ. ಹೇ ಗುರುವೇ... ನಾನು ಎಲ್ಲರಂತೆ ಒಬ್ಬ ಸಾಮಾನ್ಯ ಶಿಷ್ಯ, ಆ ಚೇತನದ ಹೆಜ್ಜೆಯ ಗುರುತುಗಳನ್ನು ಹುಡುಕುತಿದ್ದೇನೆ, ನನಗೆ ಏನೂ ತಿಳಿಯದು, ನನ್ನ ಪರಿಸ್ತಿತಿ ಕತ್ತಲ್ಲಲ್ಲಿ ನೆರಳು ಹುಡುಕುವಂತದ್ದಾಗಿದೆ, ನನಗೆ ಬೆಳಕು ತೋರಿ ಮಾರ್ಗದರ್ಶನ ನೀಡಿ ಎಂದು ಪರಿ ಪರಿಯಾಗಿ ಶ್ರೀ ಗುರುಗಳ ಚರಣಗಳನ್ನು ನೆನೆದು, ಬೇಡಿಕೊಂಡು ಮೊದಲನೆಯ ಶ್ಲೋಕ ಓದಿಕೊಂಡೆ. ಧುತ್ತೆಂದು ಎದುರಾಗಿದ್ದವು ಹಲವಾರು ಪ್ರಷ್ನೆಗಳ ಸರಮಾಲೆ! ಆ ಹಲವು ಪ್ರಶ್ನೆಗಳಲ್ಲಿ ಮನಸ್ಸು ಎಂದರೇನು? ಎನ್ನುವುದು ಅರ್ಥವಾಗಲಿಲ್ಲ. ‘ನಾನು’ ಮತ್ತು ‘ಮನಸ್ಸು’ ಬೇರ ಬೇರೆಯೇ? ಇದು ಹೇಗೆ ಕೆಲಸ ಮಾಡುತ್ತದೆ? ‘ನಾನು’ ಎನ್ನುವುದು ಬರೆ ದೇಹಕ್ಕೆ ಸೀಮಿತವಾದದ್ದೇ? ಹಾಗಿದ್ದರೆ ನನ್ನ ತಲೆ, ಕೈ, ಕಾಲು ಎಂದೆಲ್ಲ ಹೇಳುವುದು ಏಕೆ? ನನ್ನ ಮನಸ್ಸು ಎಂದು ಹೇಳುವುದಾದರೆ ಇದರಲ್ಲಿ ‘ನಾನು’ ಯಾರು? ಇತ್ಯಾದಿ ಇತ್ಯಾದಿ ಅಲ್ಪ ಬುದ್ದಿಯ ಸಂದೇಹಗಳು ಉದ್ಭವಿಸಿದವು. ಏಕೋ ಏನೋ ಬುದ್ದಿ ಮಂಕಾಗಿತ್ತು. ಈ ಪ್ರಶ್ನೆಗಳಿಗೆ ಉತ್ತರ ಬುದ್ದಿಯಿಂದ ಪಡೆಯಲು ಸಾದ್ಯವಿಲ್ಲ ಎಂಬುದು ನನ್ನ ಅರಿವಿಗೆ ಬಂತು. ಉತ್ತರ ಕಾಣದೆ ನಾನು ತುಂಬಾ ಖಿನ್ನನಾಗಿದ್ದೆ. ಜಗದ್ಗುರುಗಳ ದರ್ಶನ ಮಾಡದಿದ್ದುದೇ ತಪ್ಪಾಯಿತೇನೋ. ಜಗದ್ಗುರುಗಳು ಅದಾಗಲೇ ವಿಜಯಯಾತ್ರೆಗೆ ತೆರಳಿದ್ದರು. ಮತ್ತೆ ಯಾವಾಗ ಶ್ರಂಗೇರಿಗೆ ಮರಳಿ ಬರುವರೋ? ನನಗೆ ದರ್ಶನ ಸಿಕ್ಕಿದರೆ ಸಾಕು ಅನುಗ್ರಹ ದೊರೆತಂತೆ ಎಂಬ ನಂಬಿಕೆ. ಈಗಾಗಲೇ ನನಗೆ ಅರಿವಾಗಿತ್ತು, ಮೊದಲನೆಯ ಖಂಡ ಬಹಳ ಮಹತ್ವ ವಿಚಾರಗಳನ್ನು ಒಳಗೊಂಡಿದೆ ಎಂದು. ತತ್ವಲೋಕ, ಶ್ರೀ ಶಂಕರ ಮಾಸಿಕಗಳು ಹಾಗು ಅಂತರ್ಜಾಲದಲ್ಲಿ ದೊರಕುವ ಅನುಗ್ರಹಭಾಷ್ಯ ಇವುಗಳನ್ನು ಓದಿ ನೋಡಿ ನನ್ನಷ್ಟಕ್ಕೆ ಸಮಾಧಾನಪಟ್ಟುಕೊಳ್ಳುತಿದ್ದೆ. ಗುರುಕೃಪೆ ಮತ್ತು ದರ್ಶನ ಬಹಳ ಮುಖ್ಯ. ಮನಸ್ಸಿನ ಅಂಧಕಾರವನ್ನು ಕ್ಷಣ ಮಾತ್ರದಲ್ಲಿ ನಿವಾರಿಸಿ ಬೆಳಕು ಮೂಡಿಸುವವನು ಗುರುವೇ ಆಗಿರುವನು. ಕೆನೋಪನಿಶತ್ತಿನಲ್ಲಿ ಶಿಷ್ಯನು ಗುರುವಿನಿಂದ ಪಡೆಯುತ್ತಿರುವುದು ಅದನ್ನೇ.
ತಿಂಗಳುಗಳು ಉರುಳಿದವು. ಒಂದು ದಿನ ತುಮಕೂರಿನ ಶ್ರೀ ಸಿದ್ದಂಗಂಗಾ ಮಠಕ್ಕೆ ಹೋಗುವ ಸುಸಂದರ್ಭ ಒದಗಿ ಬಂತು. ಹಿಂದೆ ಎಷ್ಟು ಪ್ರಯತ್ನ ಮಾಡಿದರೂ ಹೋಗಲಾಗಿರಲಿಲ್ಲ. ಎಲ್ಲದಕ್ಕೂ ಕಾಲ ಕೂಡಿ ಬರಬೇಕಷ್ಟೇ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ದರ್ಶನ ಮಾಡೋಣ ಎಂದು ನನ್ನ ಹೆಂಡತಿ ಆಗಾಗ್ಗೆ ಹೇಳುತ್ತಲೇ ಇದ್ದಳು. ಆ ಮಹಾ ಮಹಿಮರ ದರ್ಶನ ಮಾಡುವುದಕ್ಕೂ ಪುಣ್ಯ ಬೇಕು. ನಾವು ಮಠ ಸೇರಿದಾಗಲೇ ಒಂದು ಘಂಟೆಯಾಗಿತ್ತು. ಏನೂ ಜನ ಜಂಗುಳಿ ಕಾಣದೆ ಗುರುಗಳು ಇಲ್ಲವೇನೋ ಎಂದುಕೊಂಡು ಆಡಳಿತ ಕಚೇರಿಯ ಎದುರಿನಲ್ಲಿ ಇದ್ದ ಒಬ್ಬರನ್ನು ವಿಚಾರಿಸಿದರೆ, ಅರೇ ಎದುರಿನಲ್ಲಿಯೇ ಕುಳಿತಿದ್ದಾರಲ್ಲಾ ಹೋಗಿ ಎಂದರು. ಗುರುಗಳನ್ನು ನೋಡಿದ್ದೇ ತಡ ಚಪ್ಪಳಿಗಳನ್ನು ಒಂದೆಡೆ ಬಿಸಾಡಿ ಅವರಲ್ಲಿಗೆ ಓಡೋಡಿದ್ದೆ. ನನ್ನ ಹಿಂದೆ ನನ್ನ ಹೆಂಡತಿ. ಹಲವಾರು ಬಾರಿ ಅವರ ಪಾದಗಳಿಗೆ ತಲೆಯೊಡ್ಡಿ ಅವರ ದರ್ಶನ ಪಡೆದು ಅವರ ಹತ್ತಿರ ನಿಂತು ನನ್ನ ಮಕ್ಕಳ ಹಣೆಯನ್ನು ಅವರ ಪಾದಗಳಿಗೋತ್ತಿಸಿ, ಇಷ್ಟು ಸುಲಭವಾಗಿ ದರ್ಶನಭಾಗ್ಯ ದೊರೆಯಿತಲ್ಲ್ಯ ಎಂದು ಪುಳಕಿತನಾಗಿ ಆಶ್ಚರ್ಯದಿಂದ ಹಿಂದೆ ನೋಡಿದರೆ ಎಷ್ಟೊಂದು ಭಕ್ತರು ಸಾಲು ಸಾಲಾಗಿ ಅವರ ದರ್ಶನಕಾಗಿ ನಿಂತಿದ್ದರು. ನಾನು ನಾಚಿಕೆಯಿಂದ ಮನಸ್ಸಿನಲ್ಲಿಯೇ ಎಲ್ಲರ ಕ್ಷಮೆ ಯಾಚಿಸುತ್ತ ಮತ್ತೆ ಸಾಲಿನಲ್ಲ್ಲಿ ನಿಂತು ಅವರ ಪಾದಗಳನ್ನು ಕಣ್ಗೋತ್ತಿಕೊಂಡು ಪುನೀತನಾದೆ ಎಂದುಕೊಂಡೆ. 105 ವರ್ಷ ವಯಸ್ಸಿನ ಈ ಮಹಾಮಹಿಮ ನಡೆದಾಡುವ ದೇವರ ದರ್ಶನ ಮಾಡಿದ ನಮ್ಮ ಜನ್ಮ ಸಾರ್ಥಕವಾಯಿತೆಂದು ಹಿರಿ ಹಿರಿ ಹಿಗ್ಗಿದೆವು.
ಬಳಿಕ ದಾಸೋಹದ ಪ್ರಸಾದ ಭೋಜನ ಮಾಡಿ ಮರದಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡೆವು. ಅಲ್ಲಿಯೇ ಇದ್ದ ಒಬ್ಬ ಶಾಲೆಯ ಬಾಲಕನಲ್ಲಿ ಬೆಟ್ಟದ ಮೇಲೆ ದೇವಸ್ಥಾನಕ್ಕೆ ಹೋಗುವ ದಾರಿಯನ್ನು ವಿಚಾರಿಸಿ ತಿಳಿದುಕೊಂಡೆವು. ಆತ ಒಂಬತ್ತನೇ ತರಗತಿಯ ವಿಧ್ಯಾರ್ಥಿ. ಅಲ್ಲಿಯೇ ಇದ್ದ ಕಟ್ಟಡದ ಮೇಲೆ ಸಂಸ್ಕೃತ ಪಾಠಶಾಲೆ ಎಂದು ದೊಡ್ಡದಾಗಿ ಬರೆದಿದ್ದರು. ಕುತೂಹಲ ಮೂಡಿ ಆ ಬಾಲಕನಲ್ಲಿ ನಿನಗೆ ಇಲ್ಲಿ ಸಂಸ್ಕೃತ ಕಲಿಸಿಕೊಡುತ್ತಾರೆಯೋ ಎಂದು ವಿಚಾರಿಸಿದೆ. ಹೌದು ಎಂದನಾತ. ಮತ್ತೆ ತಡೆಯಲಾರದೆ ಕೇಳಿದೆ – ನಿನಗಿಲ್ಲಿ ವೇದಗಳನ್ನು ಕಲಿಸುತ್ತಾರೆಯೇ? ಎಂದು. ಮತ್ತೆ ಹೌದು ಎಂದ. ಮತ್ತೆ ಅವನನ್ನು ಪ್ರಶ್ನೆ ಮಾಡುವ ಸಾಹಸ ಮಾಡಲಿಲ್ಲ. ನಾನಿನ್ನು ಬಾಲವಾಡಿಯಲ್ಲಿ ಕಲಿಯುತ್ತಿರುವವ. ಈತನಾದರೋ ಒಂಬತ್ತನೆಯ ತರಗತಿ ....ಅದೂ ಇಂತಹ ಮಹಾ ಮಹಿಮಾ ಗುರುಗಳ ಸನ್ನಿದಿಯಲ್ಲಿ ಕಲಿಯುತ್ತಿರುವವ. . ಈತ ಏನಾದರು ನನ್ನನ್ನು ಕೇಳಿಬಿಟ್ಟರೆ ನನ್ನ ಗತಿಯೇನು ಎಂದುಕೊಂಡು ಆಚೆ ಈಚೆ ನೋಡಿ ಆಮೇಲೆ ಹೆಂಡತಿಯ ಮುಖ ನೋಡಿ ತೆಪ್ಪಗಾದೆ. ನನ್ನ ಹೆಂಡತಿಗೆ ಅನಿಸಿರಬೇಕು ಇವರಿಗೆ ತಕ್ಕ ಶಾಸ್ತಿಯಾಯಿತೆಂದು. ಇಷ್ಟೆಲ್ಲಾ ಕಥೆ ಏಕೆ ಒದರುತಿದ್ದೇನೆ? ಏಕೆಂದರೆ ಇಲ್ಲಿಯೇ ನನಗೆ ಅರಿವಾದದ್ದು ಗುರುವು ಸರ್ವಾಂತರ್ಯಾಮಿಯೆಂದು!.
ಮನಸ್ಸು ನಿರಾಳವಾಗಿತ್ತು. ಆದರೆ ಪ್ರಶ್ನೆ ಹಾಗೆಯೇ ಮನದಲ್ಲಿ ಉಳಿದಿತ್ತು. ಅಧ್ಯಯನ ಮಾಡಲು ಶ್ರೀ ಅರವಿಂದ ಘೋಷ್ ರವರ ಕನ್ನಡದಲ್ಲಿ ಅನುವಾದಿತ ಕೆನೋಪನಿಷತ್ ಮೇಲೆ ಬರೆದ ಕೆಲವು ಗ್ರಂಥಗಳು ನನಗೆ ಅಗತ್ಯವಿದ್ದವು. ಈ ಮದ್ಯೆ ಪಾಂಡಿಚೇರಿಗೆ ಹೋಗಿದ್ದ ನನ್ನ ಸಂಬಂದಿಕಾರಾದ ಶ್ರೀಮತಿ. ರೇವತಿ ಚಂದಾವರಕರ್ ಹಾಗೂ ಶ್ರೀಮತಿ ಸುದೆಶ್ನಾ ಸಂತೋಷಕುಮಾರ್ ಗುಲ್ವಾಡಿ ಯವರು ನನಗೋಸ್ಕರ ಕನ್ನಡದ ಪುಸ್ತಕಗಳನ್ನು ಹುಡುಕಾಡಿ ಅದಿಲ್ಲದೆ ಕೊನೆಗೆ ಇಂಗ್ಲಿಷ್ ಅವತರಣಿಕೆಯಲ್ಲಿದ್ದ ಕೆನೋಪನಿಷತ್ ಹಾಗು ಇತರೆ ಪುಸ್ತಕಗಳನ್ನು ನನಗೆ ಉಡುಗೊರೆಯಾಗಿ ನೀಡಿದರು. ಅವರಿಗೆ ನನ್ನ ಧನ್ಯವಾದಗಳು. ಮನಸ್ಸು ಹಾಗು ಮನಸ್ಸಿನ ಮನಸ್ಸು ಇದರ ಮೇಲಿನ ಶ್ರೀ ಅರವಿಂದರ ವ್ಯಾಖ್ಯಾನ ನನಗೆ ತಾರ್ಕಿಕ ಹಾದಿ ತೋರಿಸಿತು. ಆದರೆ ಅನುಭವವಿಲ್ಲದ ಭಾವಾರ್ಥ ರದ್ದಿಗೆ ಸಮಾನ.
ತಿಂಗಳುಗಳು ಜಾರಿದ್ದವು. ಈ ಬಾರಿ ಎನನ್ನು ಬರೆಯಲಾರೆ ಎಂದುಕೊಂಡೆ. ಇಷ್ಟರಲ್ಲಿ ಮತ್ತೊಮ್ಮೆ ಕಲ್ಕತ್ತೆಗೆ ಕೆಲಸ ನಿಮ್ಮಿತ್ತ ಹೋಗುವ ಸಂದರ್ಭ ಬಂತು. ಈ ಬಾರಿ ಎರಡು ದಿನವಿದ್ದುದರಿಂದ ಕೆಲಸ ಮುಗಿದ ನಂತರ ನೇರವಾಗಿ ರಾಮಕೃಷ್ಣ ಮಠ, ಬೇಲೂರು ಅಲ್ಲಿಗೆ ಹೋಗಿ ಸಮಯ ಕಳೆಯುವ ನಿರ್ಧಾರ ಮಾಡಿದೆ. ಕಲ್ಕತ್ತೆಗೆ ಹೋದಾಗಲೆಲ್ಲಾ ಬೇಲೂರು ಮಠ ಮತ್ತು ದಕ್ಷಿನೆಶ್ವರ ಕಾಳಿ ಮಂದಿರಕ್ಕೆ ಹೋಗುವುದು ವಾಡಿಕೆಯಾಗಿಬಿಟ್ಟಿತ್ತು. ಟ್ಯಾಕ್ಸಿ ಚಾಲಕ ಜಾವೇದನಿಗೆ ಬೇಗ ಹೋಗಲು ಹೇಳಿದ್ದರಿಂದ ಆತ ಸಣ್ಣ ಸಣ್ಣ ರಸ್ತೆಯಲ್ಲಿ ಗಾಡಿ ನುಗ್ಗಿಸಿದ. ಹೂಗ್ಲಿ ಸೇತುವೆ ಕಾಣದ್ದರಿಂದ ನಾನು ಗಾಬರಿಯಾದೆ. ಆತ ಗಾಬರಿ ಪಡಬೇಡಿ ....ಸೇತುವೆ ಬಳಿ ಟ್ರಾಫಿಕ್ ಜಾಮ್ ಇದೆ. ಅದರಿಂದ ಬೇರೆ ದಾರಿ ಹಿಡಿದಿದ್ದೇನೆ ಎಂದ. ದಾರಿಯಲ್ಲಿ ಸಣ್ಣ ಸಣ್ಣ ಸೇತುವೆ ಸಿಗಲು ಇದು ಯಾವ ನದಿ ಎಂದು ಕೇಳಿದೆ. ಎಲ್ಲವೂ ಗಂಗಾ ನದಿ ಎಂದ ಆತ. ನಿಮ್ಮ ಪ್ಲೇನ್ ಮಿಸ್ ಆಗುವುದಿಲ್ಲ ಹೆದರಬೇಡಿ. ನಾಲ್ಕು ಘಂಟೆಯ ನಂತರ ಹೊರಡೋಣ ಎಂದ.
ಬೇಲೂರು ಮಠದ ಶಾಂತ ವಾತಾವರಣ ಎಂತವರಿಗೂ ಇಷ್ಟವಾಗುವಂತದ್ದೆ. ಎಲ್ಲ ಕಡೆ ದರ್ಶನ ಮಾಡಿ ಕೊನೆಗೆ ನದಿ ದಡದ ಮೆಟ್ಟಲುಗಳ ಬಳಿ ಕುಳಿತೆ. ಆ ಬದಿ ದೂರದಲ್ಲಿ ದಕ್ಷಿನೆಶ್ವರ ಕಾಣುತ್ತಿದೆ. ಆ ಕಡೆಯ ದಡ ಒಂದು ಕಿಲೋಮೀಟರ್ ಗಿಂತ ಹೆಚ್ಚಿನ ದೂರದಲ್ಲಿದೆಯೇನೋ. ಎಷ್ಟು ದೊಡ್ಡಡು ಈ ಹೂಗ್ಲಿ ನದಿ ..ಅಲ್ಲ ಗಂಗೆ!. ಆದರೆ ಈ ನದಿ ಹರಿಯುತ್ತಿರುವಂತೆ ಕಾಣುತ್ತಿರಲಿಲ್ಲ. ನದಿಯ ನೀರು ನಿಂತಲ್ಲೇ ನಿಂತಂತಿತ್ತು. ಹೀಗೆ ಅನ್ನಿಸಲಿಕ್ಕೆ ಕಾರಣ ಬಹುಶಃ ಇದು ಬಹಳ ಆಳ ಇದ್ದಿರಬೇಕು ಎನ್ನಿಸಿತು. ಈ ನದಿಯ ಆಳವನ್ನು ಅಳಿಯಲು ಸಾಧ್ಯವೇ? ಅದನ್ನು ಹಾಗೆಯೇ ನೋಡುತ್ತಲೇ ಅನ್ನಿಸಿತು ....ಇದು ಮನಸ್ಸಿಗೆ ಹೋಲುತ್ತದೆಯೇ? ಮನಸ್ಸಿನ ಆಳವನ್ನು ಮುಟ್ಟಲು ಸಾಧ್ಯವಿದೆಯೇ? ಈ ನದಿಯನ್ನು ನಿಲ್ಲಿಸಲಾಗದು. ಅಣೆಕಟ್ಟು ಕಟ್ಟಿ ನಿಯಂತ್ರಿಸಬಹುದಷ್ಟೇ. ಮತ್ತೆ ಸಾಗರವನ್ನು ಸೇರುತ್ತದೆ. ನದಿಯನ್ನು ನಿಯಂತ್ರಿಸಿದ ಹಾಗೆ ಕಣ್ಣು ಮುಚ್ಚಿ ಮನಸ್ಸನ್ನು ನಿಯಂತ್ರಿಸಬಹುದೇ ಎಂದು ಚಿಂತಿಸಿ ಒಂದೆಡೆ ಕುಳಿತು ಧ್ಯಾನಿಸಿದೆ. ಈ ಧ್ಯಾನದಲ್ಲಿ ನಾನೆಲ್ಲೆಲ್ಲೋ ತಿರುಗಿ ಬಂದಿದ್ದೆ!. ಧ್ಯಾನದಲ್ಲಿ ಸುತ್ತು ಮುತ್ತು ನೋಡಿದಾಗ ಮೇಲಿನಿಂದ ಮಠದ ಪರಿಸರ ಹಾಗು ನಾನು ಕುಳಿತು ಧ್ಯಾನ ಮಾಡುತ್ತಿರುವುದು ಕಾಣಿಸಿತು. ಮೇಲಿನಿಂದ ಧ್ಯಾನದಲ್ಲಿ ಕುಳಿತ ನನ್ನನ್ನು ನೋಡುತ್ತಿರುವುದು ಯಾರು? ನೀನು ಯಾರು ಎಂದು ಪ್ರಶ್ನಿಸಿದೆ. ಉತ್ತರ ಬರಲಿಲ್ಲ. ಬದಲಾಗಿ ನನ್ನ ಮುಖವೇ ಕಂಡಿತು. ಅದು ಗಂಗೆಯ ಮಧ್ಯೆ ನೀರಿನ ಮೇಲೆ ನಿಂತು ನನ್ನನ್ನು ನೋಡುತ್ತಿತು. ನಾನು ಅದನ್ನು ಹಿಡಿಯಲು ಕೈ ಚಾಚಿದೆ. ಆದರೆ ಅದು ಕೈಗೆ ಸಿಕ್ಕಿದಂತೆ ಕಂಡರೂ ಹಿಡಿತಕ್ಕೆ ಏನೂ ಸಿಗಲ್ಲಿಲ್ಲ !. ಇದು ನನ್ನ ಮನಸ್ಸೇ? ಅಥವಾ ಮನಸ್ಸು ಕಲ್ಪಿಸಿದ ಮಾಯೆಯೇ? ಈ ಮನಸ್ಸನ್ನೇ ಮೊದಲು ಹಿಡಿಯಬೇಕೆಂದೆನಿಸಿ ತೀವ್ರವಾಗಿ ಕೇಂದ್ರೀಕರಿಸಲು, ಮನಸ್ಸು ನನ್ನ ಬಳಿಯೇ ಇದ್ದುದು ಗೋಚರವಾಯಿತು. ಇದರ ಮೂಲವನ್ನು ಹಿಡಿಯಬೇಕೆಂದು ಮತ್ತಷ್ಟು ಕೇಂದ್ರೀಕರಿಸಲು ಕಣ್ಣಿನ ಪರದೆಯ ಮುಂದೆ ಕುಪ್ಪು ಬಿಳುಪು ಬೆಳಕಿನ ಚೆಲ್ಲಾಟ ನಡೆದಿತ್ತು. ಸ್ವಲ್ಪ ಸಮಯದ ನಂತರ ಎರಡು ಕಿವಿಗೆ ಗುಯ್ ಗೊಡುವ ಶಬ್ದ ಕೆಳಲಾರಂಬಿಸಿತು. ಮೈ ಮರೆತು ಧ್ಯಾನ ದೃಷ್ಟಿಯು ಒಂದೆಡೆ ನಿಲ್ಲಲು, ಯಾರೋ ನನ್ನನ್ನು ಎದುರಿನಿಂದ ನೋಡುತ್ತಿರುವಂತೆ ಭಾಸವಾಯಿತು. ಅದು ನನ್ನದೆ ಪ್ರತಿಬಿಂಬ. ಅದು ಎದುರಿನಲ್ಲಿ ಇರಲಿಲ್ಲ ...ನನ್ನೊಳಗೆ ಇತ್ತು. ಅದು ನಾನೇ ಆಗಿದ್ದೆ. ಕನ್ನಡಿಯಲ್ಲಿ ನೋಡಿದಷ್ಟೇ ಸ್ಪಷ್ಟವಾಗಿ ನೋಡಿದೆ, ಅದು ನಾನೇ ಆಗಿದ್ದೆ. ಆದರೆ ಅದನ್ನು ಹಿಡಿಯಲಾಗಲಿಲ್ಲ!. ಇದೊಂದು ಅವಸ್ತೆ ತುಂಬಾ ಆನಂದದಾಯಕವಾಗಿತ್ತು. ಇದೊಂದು ಮನಸ್ಸಿನ ಕಲ್ಪನೆಯ ಪರಮಾವದಿ ಇರಬೇಕು .....ಇದನ್ನು ಅರ್ಥೈಸುವ ಸಾಮರ್ಥ್ಯ ನನ್ನಲ್ಲಿಲ್ಲ. ಬೇರೆಯವರಿಗೆ ಇದೊಂದು ಅತಿಶಯೋಕ್ತಿ ಎಂದು ಕಂಡು ಬಂದರು ತಪ್ಪೇನಿಲ್ಲ. ನಾನೇನು ಬ್ರಹಸ್ಪತಿಯೇ? ಮತ್ತೊಮ್ಮೆ ಈ ಕಲ್ಪನೆಯ ಅನುಭವ ಆಗಲಿಲ್ಲ. ನಾನು ಪ್ರಯತ್ನ ಮಾಡುತ್ತಲೇ ಇದ್ದೇನೆ. ಆದರೂ ನನ್ನಲ್ಲಿ ಎನೋ ಕಂಡುಕೊಂಡೆ ಎಂಬ ಮತ್ತೊಂದು ಕಲ್ಪನೆ. ದಾರಿ ತೋರುವ ಗುರು ಹತ್ತಿರದಲ್ಲಿ ಇದ್ದಿದ್ದರೆ, ಕಲಿಸಿದ್ದರೆ ... ಏನಾದರು ಕಲಿಯುತ್ತಿದ್ದೆ ಎನ್ನುವ ಆಸೆ ಬೇರೆ.
ಈಗ ನನಗೆ ಸ್ಪಷ್ಟವಾಗಿ ತಿಳಿದುಹೋಯಿತು. ಕೆನೋಪನಿಶತ್ತಿನ ಮೊದಲನೆಯ ಖಂಡವೇ ಶಿಷ್ಯನ ಅನುಭಾವ ಅವಸ್ಥೆಗೆ ಮೊದಲನೆಯ ಸೋಪಾನ ಎಂದು. ಈ ಮೊದಲನೆಯ ಖಂಡವನ್ನು ಆದಷ್ಟು ಸರಳವಾಗಿ ಬರೆಯುವ ಸಾಹಸದಲ್ಲಿ ನಾನು ಎಷ್ಟರ ಮಟ್ಟಿಗೆ ಯಶಸ್ಸು ಗಳಿಸುವೇನೋ ತಿಳಿಯೆ. ಇನ್ನು ಉಳಿದ ಖಂಡಗಳನ್ನು ಶೀಘ್ರವಾಗಿ ಕನ್ನಡದಲ್ಲಿ ಬರೆಯುವ ಸಾಹಸ ಮಾಡುವೆ. ಹಿಂದೆ ಹೇಳಿದಂತೆ ನಾನು ಬರೆದದ್ದೆಲ್ಲ ಸರಿ ಇರಬೇಕೆಂದೇನಿಲ್ಲ. ನನ್ನ ಅನುಭವಕ್ಕೆ ಬಂದ ಮತ್ತು ಬುದ್ದಿಗೆ ಗೋಚರಿಸಿದ ಪದಗಳನ್ನು ಉಪಯೋಗಿಸಿದ್ದೇನೆ. ನಾನಿನ್ನೂ ಕೆನೋಪನಿಶತ್ತಿನ ಶಿಷ್ಯನ ಮಟ್ಟಕ್ಕೆ ಬರಲು ಪ್ರಯತ್ನಿಸುತಿದ್ದೇನೆ. ಹಾಗಾಗಿ ಇದರ ಮೇಲೆ ವಾದ ಮಾಡುವಷ್ಟು ಪರಿಪಕ್ವತೆ ಹಾಗು ಪರಿಪೂರ್ಣತೆ ನಾನು ಸಾದಿಸಿಲ್ಲ. ಆದ್ದರಿಂದ ನನ್ನ ಈ ಪ್ರಯತ್ನದಲ್ಲಿ ತಪ್ಪುಗಳಿದ್ದರೆ ಮನ್ನಿಸಿ ಮುಂದೆ ಸಾಗಲು ಅವಕಾಶ ಮಾಡಿ ಕೊಡಿ. ವಯಸ್ಸು, ಬುದ್ಧಿ, ಅನುಭವ ಬೆಳೆದಂತೆ ಮುಂದೆ ಆತ್ಮಾವಲೋಕನ ಮಾಡಿಕೊಂಡಾಗ, ತನ್ನಿಂತಾನೆ ಈ ಕೃತಿಯಲ್ಲಿ ಮಾರ್ಪಾಡು ಮಾಡಲು ಸಾದ್ಯ ಎಂದು ನನ್ನ ಅನಿಸಿಕೆ. ಅಲ್ಲಲ್ಲಿ ಪದಗಳಲ್ಲಿ ದೋಷ ಕಂಡು ಬಂದಲ್ಲಿ, ಗೂಗಲ್ ಕನ್ನಡ ಬೆರಳಚ್ಚು ಉಪಯೋಗಿಸುವಲ್ಲಿನ ನನ್ನ ಅನನುಭವವೇ ಕಾರಣ. ಆದರೂ ಈ ಮೊದಲನೆಯ ಖಂಡವನ್ನು ನನ್ನ ಕೈ ಹಿಡಿದು ಬರೆಯಿಸಿದ ಅಗೋಚರ ಗುರುವಿಗೆ ನಮನಗೈದು, ಅರಿವಿಲ್ಲದೆಯೇ ಹೊರಬಂದಂತಹ ಈ ಕೃತಿಯನ್ನು, ನನ್ನ ಹೃದಯಪುಷ್ಪವೆಂದೆಣಿಸಿ, ನನ್ನಂತಹ ಅಲ್ಪರಿಗೆ ದಾರಿದೀಪವಾಗಿ, ಎಲ್ಲರಿಗೂ ಪೂಜ್ಯರಾದಂತಹ ಜಗದ್ಗುರುಗಳ ಪಾದಗಳಲ್ಲಿ ಸಮರ್ಪಿಸಿ, ಅರ್ಚಿಸಿ ಶರಣಾಗಿದ್ದೇನೆ. ಸರಸ್ವತಿಯ ಪ್ರತಿರೂಪವೇ ಆಗಿರುವಂತಹ ಜಗನ್ನಿಯಾಮಿಕೆ ಮೂಕಾಂಬಿಕೆಗೆ ವಂದಿಸುತ್ತಾ, ಈ ರಚನೆಯನ್ನು ತಮ್ಮೆಲ್ಲರ ಮುಂದೆ ತರುವ ಸಾಹಸ ಮಾಡಿದ್ದೇನೆ. ನನ್ನ ಈ ಪ್ರಯತ್ನದಲ್ಲಿ, ಒಂದೇ ಒಂದು ಸಾಲು, ತಮಗೆ ಹಿತವೆನಿಸಿದಲ್ಲಿ ನಾನು ಧನ್ಯನು.
ಇಂತಿ ಸಪ್ರೇಮ ಪ್ರಣಾಮಗಳನ್ನು ಅರ್ಪಿಸುವ,
ಸಾಯಿನಾಥ ಬಾಲಕೃಷ್ಣ, ಬೆಂಗಳೂರು.
ದಿನಾಂಕ 31.05.2013
ಶ್ರೀ ಗುರುಭ್ಯೋ ನಮಃ
अखण्ड-मण्डलाकारं व्याप्तं येन चराचरम्
तत्पदं दर्शितं येन तस्मै श्री गुरवे नमः
अज्ञान-तिमिरान्धस्य ज्ञानाञ्जन-शलाकया
चक्षुरुन्मीलितं येन तस्मै श्री गुरवे नमः
भारती करुणापात्रं भारती पदभूषणम् ।
भारती पदमारूढं भारती तीर्थमाश्रये ॥
ಮೊದಲನೆಯ ಖಂಡ
ಪ್ರಾರ್ಥನೆ
ಎಲ್ಲವೂ ಉಪನಿಷತ್ ಉಕ್ತ ಚೈತನ್ಯವೇ,
ಎನ್ನಾತ್ಮವು ನಿಜ ಚೈತನ್ಯವ ಎಂದೆಂದಿಗೂ ಅಲ್ಲಗಳೆಯದಿರಲಿ,
ಆ ಅದಮ್ಯ ಚೈತನ್ಯವು ಎನ್ನಾತ್ಮವ ಎಂದೆಂದಿಗೂ ಒಲ್ಲೆಯೆನ್ನದಿರಲಿ,
ಆದಿಲ್ಲ……ಇಲ್ಲ ಎನ್ನುವ ಇಲ್ಲವೇ ಇಲ್ಲದಿರಲಿ,
ನಾನೆಂದಿಗೂ ಚೈತನ್ಯವ ನಿರಾಕರಿಸದಂತರಿಲಿ,
ನಿಜ ಚೇತನದ ಅನುಭಾವ ಹೊಂದುವ ಸಾಧನೆಯ ಹಾದಿಯಲಿ,
ಉಪನಿಷತ್ ಉಕ್ತ ಚೈತನ್ಯ ಗುಣವೆಲ್ಲ ಎನ್ನೊಳು ಸಮಾಗತಿಸಿ ಸದಾ ನೆಲಸಲಿ.
ಓಂ ಶಾಂತಿಃ ಶಾಂತಿಃ ಶಾಂತಿಃ
(ಶಿಷ್ಯ) –
ಆವ ಚೇತನವದು ಮನಕೆ ಪ್ರೇರಣವಿತ್ತಿಹುದು ?
ಅದಾವ ಮೊದಲ ಚೇತನದಿಂದೆಸೆ ಜೀವದ ನಾಡಿ ತುಡಿದು ಮಿಡಿದಿಹುದು ? ।
ಆವ ಚೈತನ್ಯ ಪ್ರಚೋದಿಸಿಹುದು ಇಂತೆಲ್ಲ ನುಡಿಗೆ ?
ಅದಾವ ಚೈತನ್ಯ ಪ್ರೇರಿಸಿಹುದು ಕಣ್ ಕಿವಿಗಳನು ಇಹ ವೃತ್ತಿಗೆ ? || ೧ ||
(ಆಚಾರ್ಯ) –
ಕಿವಿಗೆ ಕೇಳ್ವ ಅರಿವಿತ್ತಿಹ ಚೈತನ್ಯವದು, ಮನಕೆ ಬುದ್ಧಿಯನಿತ್ತಿಹ ಚೈತನ್ಯವದು,
ನುಡಿಗೆ ದ್ವನಿಯಿತ್ತ ಅಂತರುಕ್ತಿಯದು, ಉಸಿರ ಉಸಿರದು! ।
ನೋಟಕೆ ದೃಷ್ಟಿಯನಿತ್ತಿಹ ಅಂತರ್ಚಕ್ಷುವದು, ಇದನರಿತು ತ್ಯಜಿಸೆ ಇಹಮಿಥ್ಯತೆಯ ಭಾವ,
ದೇಹತೊರೆಯೆ ಪಡೆವೆ ಅಮ್ರುತತ್ವವದ ಅನುಭಾವ ! || ೨ ||
(ಆಚಾರ್ಯ) –
ಕಂಗಳಿಗೆ ಕಾಣಿಸದದು, ಮಾತಿಗೆ ಮಿಟುಕದದು,
ಮನದ ಎಲ್ಲೆಯನೇ ಮೀರಿಹುದದು ।
ನಾನರಿಯೆ ಅದೇ ಇಂತಿಹುದೆಂದು ,
ಅಂತೆಯೇ ಹೇಳಲರಿಯೇ ಇದೇ ಅದೆಂದು ।। ೩ ।।
(ಆಚಾರ್ಯ) -
ಅರಿತ ತಿಳಿವಿಗಿಂತ ಭಿನ್ನವದು,
ಅರಿತಿರದ ತಿಳಿವಿಗಿಂತ ವಿಭಿನ್ನವದು ।
ಇಂತೆಂದು ಕೇಳಿ ತಿಳಿದಿಹೆನು ಪಂಡಿತರ ದೆಸೆ,
ಅಂತೆಯೇ ಅರಿತಿಹೆನು ಚೈತನ್ಯದರಿವಿಗೆ ಗುರುಪಾದವೇ ಗತಿಯೆಂದು ।। ೪ ।।
(ಆಚಾರ್ಯ) –
ಮಾತಿನಲಿ ವ್ಯಕ್ತವಾಗದಿಹ ಚೈತನ್ಯವದು,
ಮಾತಿಗೇ ಚೇತನವಿತ್ತಿಹ ಅವ್ಯಕ್ತವದು ।
ತಿಳಿ ನೀ ಮಾತಿನಲರಿತು ಭಜಿಸುವ ಇದು ನಿಜ ಚೈತನ್ಯವಲ್ಲವೆಂದು,
ತಿಳಿ ನೀ ಇದಲ್ಲದ ಅದುವೇ ಅವ್ಯಕ್ತ ನಿರಾಕಾರ ಶುದ್ದ ಚೈತನ್ಯವೆಂದು ।। ೫ ।।
(ಆಚಾರ್ಯ) -
ಮನದಿ ಮನನಗೈದು ಮಂಥಿಸಲಸಾದ್ಯ ಚೈತನ್ಯವದು,
ಮನಕೇ ಮನನಗೈವ ಚೇತನವಿತ್ತಿಹ ಅಂತರ್ಶಕ್ತಿಯದು ಎಂದೆನುವರು ।
ತಿಳಿ ನೀ ಮನದಲರಿತು ಭಜಿಸುವ ಇದು ನಿಜ ಚೈತನ್ಯವಲ್ಲವೆಂದು ,
ತಿಳಿ ನೀ ಇದಲ್ಲದ ಅದುವೇ ಅವ್ಯಕ್ತ ನಿರಾಕಾರ ಶುದ್ದ ಚೈತನ್ಯವೆಂದು ।। ೬ ।।
(ಆಚಾರ್ಯ) –
ಕಣ್ಗಳಿಗೆ ನೊಡಲಸಾದ್ಯ ಚೈತನ್ಯವದು,
ಕಣ್ಗಳಿಗೇ ದೃಷ್ಟಿಯನ್ನಿತ್ತಿಹ ಅಂತರ್ಚಕ್ಷುವದು ।
ತಿಳಿ ನೀ ಕಣ್ಗಳಲರಿತು ಭಜಿಸುವ ಇದು ನಿಜ ಚೈತನ್ಯವಲ್ಲವೆಂದು,
ತಿಳಿ ನೀ ಇದಲ್ಲದ ಅದುವೇ ಅವ್ಯಕ್ತ ನಿರಾಕಾರ ಶುದ್ದ ಚೈತನ್ಯವೆಂದು ॥ ೭ ॥
(ಆಚಾರ್ಯ) –
ಕಿವಿಗಳಿಗೆ ಕೇಳಲಸಾದ್ಯ ಚೈತನ್ಯವದು,
ಕಿವಿಗಳು ಕೇಳ್ವ ಶಬ್ದದ ಮೂಲ ವ್ಯೋಮಕೇ ಚೇತನವಾಗಿಹ ಪ್ರಣವವದು ।
ತಿಳಿ ನೀ ಇದು ಶ್ರವಣಮಾತ್ರದಿ ಅರಿತು ಭಜಿಸುವ ನಿಜ ಚೈತನ್ಯವಲ್ಲವೆಂದು,
ತಿಳಿ ನೀ ಇದಲ್ಲದ ಅದುವೇ ಅವ್ಯಕ್ತ ನಿರಾಕಾರ ಶುದ್ದ ಚೈತನ್ಯವೆಂದು ॥ ೮ ॥
(ಆಚಾರ್ಯ) –
ನಾಸಿಕಗಳು ಉಸಿರ ದೆಸೆ ಘ್ರಾಣಿಸಿ ಕಲ್ಪಿಸಲಾಗದ ಚೈತನ್ಯವದು,
ನಾಸಿಕಗಳು ಘ್ರಾಣಿಸಲು ಸೆಳೆವ ಉಸಿರ ಪ್ರಾಣಕೆ ಚೇತನವಾಗಿಹ ಮೊದಲುಸಿರದು ।
ತಿಳಿ ನೀ ಇದು ಘ್ರಾಣಿಸಿ ತಿಳಿದು ಭಜಿಸುವ ನಿಜ ಚೈತನ್ಯವಲ್ಲವೆಂದು,
ತಿಳಿ ನೀ ಇದಲ್ಲದ ಅದುವೇ ಅವ್ಯಕ್ತ ನಿರಾಕಾರ ಶುದ್ದ ಚೈತನ್ಯವೆಂದು ॥೯॥
'ನಾ ಕಂಡಂತೆ ಚೇತನ - ಬಾಗ – ೨’, ಕೇನ - ಮೊದಲನೆಯ ಖಂಡ © ಸಾಯಿನಾಥ ಬಾಲಕೃಷ್ಣ.
ಈ ಕೃತಿಯು ಹಲವಾರು ಗ್ರಂಥಗಳ ಆಧಾರದ ಮೇಲೆ ರಚಿಸಲಾಗಿದೆ. ಅವೆಲ್ಲವನ್ನು ಕೆನೋಪನಿಷತ್ ನ ಎಲ್ಲಾ ಖಂಡಗಳನ್ನು ಪೂರ್ಣ ಗೊಳಿಸಿದ ನಂತರ ಅದರ ಜೊತೆಗೆ ಪ್ರಕಟಿಸುತ್ತೇನೆ. ಎಲ್ಲಾ ಖಂಡಗಳನ್ನು ಪೂರ್ಣ ಗೊಳಿಸಿಲು ಇನ್ನೂ ಒಂದೆರಡು ವರ್ಷ ನನಗೆ ಬೇಕಾಗಬಹುದು.