ನಿದ್ರೆ

ನಿದ್ರೆ

                             

   ನಾನಂತೂ ಸೂರ್ಯವಂಶಿ. ನಮ್ಮ ಕುಲದೇವರಾದ ಸೂರ್ಯ ದೇವರು ನೆತ್ತಿಯ ಮೇಲೆ ಬರುವವರೆಗೂ ಯಾರನ್ನೂ ಕಣ್ಣೆತ್ತಿಯೂ, ಕಣ್ಣು ಬಿಟ್ಟು ನೋಡದೇ, ಸೂರ್ಯ ದೇವರನ್ನು ನೋಡಿದ ನಂತರವಷ್ಟೇ ನನ್ನ ದಿನಚರ್ಯೆ ಶುರು. ಅಲ್ಲಿಯವರೆಗೂ ನಿದ್ರಾದೇವಿಯ ಆಲಂಗನದಲ್ಲಿ ಸುಖವಾಗಿರುವ ಬಯಕೆ ನನ್ನದು. ಆದರೆ ನನ್ನ ‘ವ್ರತ’ ಒಂದು ದಿನವೂ ಕೈಗೂಡದಂತೆ ನೋಡಿಕೊಂಡಿದ್ದಾರೆ, ಇಲ್ಲಿಯ ಇಹ ಲೌಕಿಕರು. ಬಾಲ್ಯದಲ್ಲಿ ತಂದೆ-ತಾಯಿ, ಶಾಲೆಯಲ್ಲಿ ಗುರುಗಳು, ನಂತರ ಸ್ನೇಹಿತರು, ತದನಂತರ ಆಜೀವ ಪರ್ಯಂತ ನನ್ನ ಅರ್ಧಾಂಗಿ ಹಾಗೂ ಪೂರ್ವಜನ್ಮ ಕೃತ ಪಾಪ ಮತ್ತು ಈ ಜನ್ಮದಲ್ಲಿ ಮಾಡಿದ ಏಕೈಕ ತಪ್ಪಿನ ಫಲವಾದ ಮಕ್ಕಳು-ಎಲ್ಲರೂ ನನ್ನ ನಿದ್ರಾಭಂಗಕ್ಕಾಗಿ ಹಗಲಿರುಳೂ ಶ್ರಮಿಸಿ ಸಫಲರಾದವರೇ. ಅಷ್ಟಕ್ಕೂ ನಾನು ಎಸಗುವ ತಪ್ಪಾದರೂ ಏನು? ದಿನದ ಹದಿನೆಂಟು ತಾಸು ನಿದ್ರೆಯಲ್ಲಿರುವುದು ತಪ್ಪೇ? ನನಗಂತೂ ಇದರಲ್ಲಿ ಒಂದಿನಿತೂ ತಪ್ಪು ಗೋಚರಿಸುತ್ತಿಲ್ಲ. ಆದರೂ, ಮಹಾಭಾರತದಲ್ಲಿ ಅಭಿಮನ್ಯುವೊಬ್ಬನ ಮೇಲೆರಗಿದ ಇಡೀ ಕೌರವ ಮುಖಂಡರಂತೆ, ಪ್ರತಿಯೊಬ್ಬರೂ ಏಕಕಾಲಕ್ಕೆ ಆಕ್ರಮಣ ಮಾಡಿದಾಗ, ಸುಖನಿದ್ರೆ ಸಾಧ್ಯವೇ? ಇಂತಿಪ್ಪ, ನನಗೆ ಪರಮ ಪ್ರಿಯವಾದ ನಿದ್ರೆಯ ಬಗ್ಗೆ, ನಾನಲ್ಲದೇ ಬೇರಾರು PHD ಮಾಡಿಯಾರು? ನನ್ನಂತೆಯೇ ಎಲ್ಲರಿಗೂ ನಿದ್ರೆ ಬಹು ಆಪ್ಯಾಯಮಾನವಾಗಿರುತ್ತದೆಯಾದರೂ, ಅದನ್ನೊಂದು ದೌರ್ಬಲ್ಯವೆಂದು ಪರಿಗಣಿಸುವ ಮಂದಿ, ನನ್ನಂತೆ ನೇರವಾಗಿ ಹೇಳಲಾರರು ಅಷ್ಟೇ.

  ನಿದ್ರೆಯಲ್ಲಿ ಬಹಳ ಬಗೆಗಳಿದ್ದರೂ, ಕೆಲವನ್ನಷ್ಟೇ ಇಲ್ಲಿ ಪ್ರಸ್ತಾಪಿಸುತ್ತೇನೆ. ಸುಖನಿದ್ರೆ, ಯೋಗನಿದ್ರೆ, ಜಾಣನಿದ್ರೆ, ಬೇಡಾದ ನಿದ್ರೆ ಇವುಗಳಲ್ಲಿ ಪ್ರಮುಖವಾದವು. ಸುಖನಿದ್ರೆ, ಸುಖಾ ಸುಮ್ಮನೆ ಎಲ್ಲರಿಗೂ ಬರುವಂಥದ್ದಲ್ಲ. ಅದಕ್ಕೂ ಅದೃಷ್ಟವಿರಬೇಕು. ಸುಖನಿದ್ರೆಯವನನ್ನು ಕಂಡು ಕರುಬುವರೆಷ್ಟು ಜನ. ‘ಇವನನ್ನು ನೋಡು, ಸಂತೆಯಲ್ಲೂ ನಿದ್ದೆ ಮಾಡುತ್ತಾನೆ’ ಅಂತ ಹೇಳ್ತಾರೆ. ಹೊರ ಜಗತ್ತಿಗೆ ತಾವು ಅವನನ್ನು “ಆಡ್ಕೋತಾ” ಇದ್ದೀವಿ ಅನ್ನೋ ಪೋಸ್ ಕೊಟ್ಟರೂ, ನಿಜವಾಗಿ, ತಮಗೆ ಅವನಂತೆ ಸುಖನಿದ್ರೆ ಪಡೆಯಲಾಗುವುದಿಲ್ಲವಲ್ಲ ಅನ್ನುವ ಸಂಕಟ, ಹೊಟ್ಟೆ ಉರಿ ಆ ಮಾತಿನ ರೂಪದಲ್ಲಿ ಹೊರಹೊಮ್ಮಿರುತ್ತದೆ ಅಷ್ಟೇ. ಕೆಲವರಿಗೆ ನಿದ್ರಾ ರಾಹಿತ್ಯ, ಮನೋವಿಜ್ಞಾನದ ಪ್ರಕಾರ, ಇವರಿಗೆ ಟೆನ್ಶನ್ ಇತ್ಯಾದಿಗಳಿಂದಾದ ‘ವ್ಯಾಧಿ’. ಇದು- ನಮ್ಮಂಥ ಪಾಮರರಿಗೆ, ಇವರು ನಿದ್ದೆಯೂ ಬಾರದ ಅವಿವೇಕಿಗಳು! ಇನ್ನು ಕೆಲವರಿಗೆ ಕೋಳಿ ನಿದ್ದೆ. ಇವರಿಗೆ ಒಂದು Sit-up ನಲ್ಲಿ (Sleep-up ನಲ್ಲಿ ಅನ್ನಬೇಕು) ನಿಜವಾಗಿ ನಿದ್ರೆ ಮಾಡಲಿಕ್ಕಾಗದು. ಅವರ ಜೀವನ ಶೈಲಿಯಿಂದಲೋ,  ಅವರ ಹತಭಾಗ್ಯದಿಂದಲೋ, ಅವರಿಗೆ ಚೂರು-ಚೂರಾಗಿಯೇ ನಿದ್ರೆ ಬರುವುದು. ಐದೈದು ನಿಮಿಷಗಳಂತೆ ಇವರೂ ನಮ್ಮಷ್ಟೇ ನಿದ್ರೆ ಮಾಡಿದರೂ, ಇವರು ಹಿರಿಯರಿಂದ ನಮ್ಮಷ್ಟು ಬೈಸಿಕೊಳ್ಳುವುದಿಲ್ಲ- ಏಕೆಂದರೆ, ಈ ವಿಚಾರದಲ್ಲಿ ನಾವು ಎದ್ದು ಕಾಣುತ್ತೇವೆ (Sorry  ‘ಮಲಗಿ’ ಕಾಣುತ್ತೇವೆ). ಇವರು ಮಲಗಿದ್ದು ಯಾರ ಗಮನಕ್ಕೂ ಬರುವುದೇ ಇಲ್ಲ. ಆದರೆ, ಈ ಸುಖನಿದ್ರೆ ನೀಡುವ ಸುಖವಿದೆಯಲ್ಲಾ, ಅದು ನಿದ್ರಾಭಂಗ ಮಾಡುವವರ ಮಾತಿನ ಕೂರಂಬುಗಳ ನೋವಿಗಿಂತ ಅಧಿಕ. ಹಾಗಾಗಿ ಸುಖನಿದ್ರೆಗೇ ಒಲವು ಹೆಚ್ಚು.

  ಸುಖನಿದ್ರೆಯಲ್ಲಿ ಯಾವುದೇ ಚಿಂತೆ, ಜಂಜಾಟಗಳಿಲ್ಲದೇ ಸ್ವರ್ಗಸುಖದ ಅನುಭಾವವಿರುವುದರಿಂದಲೇ ಇದಕ್ಕೆ ಬೇಡಿಕೆ ಹೆಚ್ಚು-ತೂಕ ಹೆಚ್ಚು. ಅಯಾಚಿತವಾಗಿ ಸಿಗುವ ಈ ಸೌಲಭ್ಯವನ್ನು ಕೆಲ ಹುಲು ಮಾನವರು ‘ಮದ್ಯಸೇವನೆ’ ಮೂಲಕ ಹುಡುಕ ಹೊರಡುತ್ತಾರೆ. ಇದು ನಾವು ಮನೆಯಲ್ಲಿರುವ ಕುಡಿಯುವ ನೀರು ಬಿಟ್ಟು, ದುಡ್ಡು ಕೊಟ್ಟು ‘ಬಿಸ್ಲೇರಿ’ ಪಡೆದಂತೆ. ಎರಡನೆಯದ್ದರಲ್ಲಿ ಕಾಸೂ ಹಾಳು, ಮಾನವೂ ಫಡ್ಚ. ಕುಡಿದು ಎಲ್ಲೆಲ್ಲೋ ಬೀಳುವುದರಿಂದ ಅಂಗಾಂಗ ಊನವೂ ಸಾಮಾನ್ಯ. ಇನ್ನು ಕೆಲವರು, ಸುಖನಿದ್ರೆಗಾಗಿ ಮಾತ್ರೆಗಳ ಶರಣು ಹೋಗುತ್ತಾರೆ. ಇದು ಸ್ವಲ್ಪ ಅಪಾಯಕಾರಿ ಮಾರ್ಗ. ಅಳತೆ ಮೀರಿದರೆ, ‘ಸುಖನಿದ್ರೆ’ ಚಿರನಿದ್ರೆಯಾಗಿಬಿಡುವ ಸಂಭವವಿರುತ್ತೆ! ಈ ಜೀವನದಲ್ಲಿ ಈಸಲೂ ಆಗದೇ ಜೈಸಲೂ ಆಗದೇ ಚಿರನಿದ್ರೆಗೆ ಶರಣು ಹೋಗುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಆದರೆ, ಚಿರನಿದ್ರೆಗೆ ಜಾರದೇ, ಆ ಸ್ವರ್ಗಸುಖವನ್ನು ಅನುಭವಿಸುವುದು ಸುಖ ನಿದ್ರೆಯಿಂದಷ್ಟೇ ಸಾಧ್ಯ. ಬೇರೆ ಸುಖವನ್ನು ಅನುಭವಿಸಲಾಗದ ಸನ್ಯಾಸಿಗಳು, ಇದೇ ನಿದ್ರಾಸುಖವನ್ನು ಅನುಭವಿಸಿ, ಅದಕ್ಕೆ ಯೋಗನಿದ್ರೆ ಎಂಬ ಹೆಸರಿಟ್ಟಿದ್ದಾರೆ.

  ನಿದ್ರಾರಾಹಿತ್ಯಕ್ಕೆ Insomnia ಎಂಬ ನಾಮಧೇಯವನ್ನಿತ್ತಿದ್ದಾರೆ ಮನಃಶಾಸ್ತ್ರಜ್ಞರು. ಜೀವನಕ್ಕೆ ಅತ್ಯಾವಶ್ಯವಾದ ನಿದ್ರೆ ಬಾರದಿರುವುದು ವ್ಯಾಧಿಯೇ ಸೈ. ವಿನಾಕಾರಣ ಚಿಂತೆ ಮಾಡುವವರಿಗೆ ಈ ವ್ಯಾಧಿ ಕಟ್ಟಿಟ್ಟ ಬುತ್ತಿ. ಜಗತ್ತೇ ಹಲವಾರು ದೊಡ್ಡ ಸಮಸ್ಯೆಗಳಲ್ಲಿ ಮುಳುಗಿದ್ದರೂ, ಇವರಿಗೆ ಚಿಂತೆ ಎನ್ನುವ ನಾಮಾಭಿದಾನಕ್ಕೂ ಯೋಗ್ಯವಲ್ಲದ, ಚಿಕ್ಕ ಚಿಕ್ಕ ವಿಚಾರಗಳು ದೊಡ್ಡ ಚಿಂತೆಯಾಗಿ ಕಾಡುತ್ತವೆ. ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ, ಶಾಶ್ವತವಾಗಿ ಮನೆಯಲ್ಲಿಟ್ಟಿರುವ ಬೈಕ್ ತೊಳೆಯಲು ಇವತ್ತು ನೀರು ಕಡಿಮೆಯಾಯ್ತು ಅಂತ ಚಿಂತಿಸುವವರಿಗೆ ಏನೆನ್ನಬೇಕು? ಅಷ್ಟಕ್ಕೂ ಇಡೀ ಜಗತ್ತಿನ ಜನರೆಲ್ಲರಿಗೂ ಹಂಚಿಯೂ ಉಳಿಯುವಷ್ಟು ದೊಡ್ಡ ಚಿಂತೆಗಳು ನಮ್ಮಲ್ಲಿವೆ. ಆದರೆ, ಏನೇ ಸುಖವಿದ್ದರೂ, ಚಿಂತೆಯಲ್ಲೇ ಸುಖ ಕಾಣುವವರಿಗೆ, ನಿದ್ರಾರಾಹಿತ್ಯವೆನ್ನುವುದು ಹುಟ್ಟಿನಿಂದಲೇ ಬರುವ ಗಿಫ್ಟ್.Insomnia ಹೆಸರಲ್ಲಿ ನಾಟಕ ಮಾಡುವವರಿಗೇನೂ ಕಡಿಮೆಯಿಲ್ಲ. Stephen Hicock ನ ಕಥೆಯೊಂದರಲ್ಲಿ ಸಹೋದರರಿಬ್ಬರು ಮಲಗುವ ಮುನ್ನ ಹೇಗೆ ತಾವಿಬ್ಬರೂ Insomnia ದಿಂದ ನರಳುತ್ತಿದ್ದೇವೆ ಎಂದು ಚರ್ಚಿಸಿ ಮಲಗುತ್ತಾರೆ. ಬೆಳಿಗ್ಗೆ ಎದ್ದು ಅವರು ಗಮನಿಸುವುದೇನೆಂದರೆ, ಅವರ ಮೇಲೇ ಮನೆಯ ಛಾವಣಿ ಕುಸಿದು ಬಿದ್ದಿರುತ್ತದೆ. But they had "Insomnia” !

   ನಿದ್ರೆಯು ಇನ್ನೊಂದು ರೂಪ, ಯಾ ವಿರೂಪ, Somnambulism.  ಇದನ್ನೇ ನಾವು “ನಿದ್ದೆಯಲ್ಲಿ ನಡೆಯೋ ರೋಗ” ಅಂತ Simpe ಆಗಿ ಹೇಳುತ್ತೇವೆ. ನಮ್ಮ ಸುಪ್ತ ಮನಸ್ಸು ನಮ್ಮ ದೇಹದ ಮೇಲೆ ಸವಾರಿ ಮಾಡುವ ಸ್ಥಿತಿ ಇದು. ಉದಾಹರಣೆಗೆ, ಸೋನಿಯಾ ಮೇಡಂ ಅನ್ನೋ ಸುಪ್ತ ಮನಸ್ಸು ಮನಮೋಹನ್ ಜೀ ಮೇಲೆ ಸವಾರಿ ಮಾಡುತ್ತಿತ್ತಲ್ಲಾ ಹಾಗೆ.  ನಮ್ಮ ದೈನಂದಿನ ಜೀವನದಲ್ಲಿ ಸಾಧಿಸಲಾಗದಿದ್ದದ್ದನ್ನು ಮನಸ್ಸು, ಸುಪ್ತ ಮನಸ್ಸಿನ ಮೂಲಕ ಸಾಧಿಸಲು ಯತ್ನಿಸುತ್ತದೆ, ಎನ್ನುತ್ತದೆ ಮನಃಶಾಸ್ತ್ರ. ಈ ಮನಸ್ಥಿತಿಯಲ್ಲಿ ಮನುಷ್ಯನ ದೈಹಿಕ ಶಕ್ತಿಗಳಲ್ಲೂ ಬಹಳ ಏರಿಕೆಯುಂಟಾಗುತ್ತದೆಯಂತೆ. ಅಥವಾ ಅವನ ಅನಾವೃತ ಶಕ್ತಿಯ ಅನಾವರಣವುಂಟಾಗುತ್ತದೆ, ಈ Somnambulism ನಲ್ಲಿ.

  ನಿದ್ರೆಯೆಂದ ಕೂಡಲೇ ಅವಿನಾಭಾವಸಂಬಂಧವಾಚಿಯಾದ ಕನಸು ನಮಗೆ ಕಣ್ಣಿಗೆ ರಾಚುತ್ತದೆ. ನಮ್ಮ ಆಸೆಗಳೇ ಕನಸುಗಳಾಗಿ ಬೀಳುತ್ತವೆ. ಆದರೆ, ಇಷ್ಟು ಸಿಂಪಲ್ಲಾಗಿ ಹೇಳಿದರೆ, ಮನಃಶಾಸ್ತ್ರಿಗಳಿಗೆ ನೆಮ್ಮದಿಯುಂಟೇ? ಅವರ ಪ್ರಕಾರ ನಮ್ಮ ಸುಪ್ತ ಮನಸ್ಸಿನೊಳಗೆ ಹುದುಗಿರುವ ಭಯ, ಯಾ, ಬಯಕೆಗಳು ನಿದ್ರೆಯೆಂಬ ಸಾಗರದ ಹೊಯ್ದಾಟಗಳಲ್ಲಿ ಮೇಲ್ಮಟ್ಟಕ್ಕೆ ಬರುವುದೇ ಕನಸುಗಳು. (ಮೇಲೆ ನಾವು ಸಿಂಪಲ್ಲಾಗಿ ಹೇಳಿದ್ದನ್ನೇ, ಇವರು ಸಂಕೀರ್ಣವಾಗಿಸಿ ಹೇಳಿದರು ಅಷ್ಟೇ!) ಚಿತ್ರರಂಗದವರಿಗೆ ಕನಸುಗಳು ಬಹಳ ಆಪ್ಯಾಯಮಾನ. ಸಿನಿಮಾಗಳಲ್ಲಿ ನಾಯಕ, ಯಾ ನಾಯಕಿ ಕನಸು ಕಾಣಲೇ ಬೇಕು- ಇಲ್ಲವಾದಲ್ಲಿ ಹಾಡುಗಳನ್ನು ತೂರಿಸುವುದು ಹೇಗೆ?

   ಎಲ್ಲರಿಗೂ ತಿಳಿದಿರುವಂತೆ ಕನಸುಗಳು ಸುಖನಿದ್ರೆಯಲ್ಲಿ ಬರುವುದಿಲ್ಲ. ಮನಃಶಾಸ್ತ್ರಿಗಳು ಹೇಳುವಂತೆ, ನಿದ್ರೆಗೂ ಅರೆನಿದ್ರೆಗೂ ನಡುವೆ 73.5425% ದೂರದ ಸ್ಥಿತಿಯಲ್ಲಿ ಕನಸುಗಳು ಪ್ರಾದುರ್ಭಾವವಾಗುವವಂತೆ. Probability  Theory ಪ್ರಕಾರ ಕೆಟ್ಟ ಕನಸುಗಳಷ್ಟೇ chance ಒಳ್ಳೆಯ ಕನಸುಗಳಿಗೆ ಇದ್ದರೂ, ಕನಸುಗಳಿಗೆ ಈ ಥಿಯರಿ ಅರ್ಥವಾಗಿಲ್ಲವೇನೋ?! - ನನಗೆ ಮಾತ್ರ 90% ಕೆಟ್ಟ ಕನಸುಗಳೇ ಬೀಳುತ್ತವೆ!

  ಈ ಕನಸುಗಳಿಗೆ ಬಣ್ಣವಿಲ್ಲವಂತೆ! – ಅವು 1920 ರ Black &  White ಸಿನಿಮಾಗಳ ಥರವಂತೆ! ನನಗಂತೂ ನನ್ನ ಕನಸುಗಳು ಯಾವತ್ತೂ ವರ್ಣಹೀನ ಎಂದೆನಿಸಿಲ್ಲ. ಮನಃಶಾಸ್ತ್ರಜ್ಞರು ಕನಸುಗಳನ್ನೂ ಅರ್ಥೈಸುವವರು. ಅದರಲ್ಲಿ ಪ್ರತಿಮೆಗಳು ಬೇರೆ! ಕುದುರೆ, ಹಾವು ಇತ್ಯಾದಿ ಕಾಮದ ಪ್ರತೀಕವಂತೆ. ತೊಂಭತ್ತು ಪ್ರತಿಶತ ಕನಸುಗಳು ಬಿದ್ದಿದ್ದು ನಮ್ಮ ನೆನಪಿನ ಪಟಲದಿಂದ ಈಚೆಗೇ ಬರುವುದಿಲ್ಲ- ಮರೆತೇ ಹೋಗುತ್ತದೆ. ಮಿಕ್ಕುಳಿದಿದ್ದರಲ್ಲಿ ತೊಂಭತ್ತೈದು ಪ್ರತಿಶತ ಅರ್ಥಹೀನ. ಅದಕ್ಕಾಗಿಯೇ ನನಗೆ, ಕನಸುಗಳಲ್ಲಿ ಅರ್ಥ “ಹುಡುಕುವ” ಮನಃಶಾಸ್ತ್ರಜ್ಞರು ಹುಚ್ಚರಂತೆ ಕಾಣುತ್ತಾರೆ!

  ಈ ಕನಸುಗಳಿಗೆ ನಿದ್ರೆಯ ಸಹಾಯ ಬೇಕೇ ಬೇಕು. ಆದರೆ, ಹಗಲುಗನಸುಗಳಿವೆಯಲ್ಲಾ ಅವಕ್ಕೆ ಈ ಸುಖನಿದ್ರೆಯ ಸಾಥ್ ಬೇಕಾಗಿಲ್ಲ. ಅದಕ್ಕೆ ಜಾಣ ನಿದ್ರೆಯ ಅವಶ್ಯಕತೆ ಇರುತ್ತದೆ. ನಾವು ನಿದ್ರೆಗೆ ಜಾರಿದ್ದೇವೆಂದು ನಾವು ಅಂದುಕೊಂಡರೆ ಸಾಕು, ಈ ಹಗಲುಗನಸುಗಳನ್ನು ಕಾಣುವುದಕ್ಕೆ. ಇದರ ಬಹುಮುಖ್ಯ ಪ್ರಯೋಜನವೆಂದರೆ, ಹಗಲುಗನಸಿನಲ್ಲಿ ಕೆಟ್ಟ ಹಗಲು ಕನಸು ಎನ್ನುವುದೇ ಇಲ್ಲ. ಎಲ್ಲ ನಮ್ಮಿಷ್ಟದಂತೆಯೇ! ನಾನು ಅಲ್ಪ ತೃಪ್ತ. ಸಣ್ಣ ಪುಟ್ಟ ಹಗಲುಗನಸುಗಳೇ ಸಾಕು. ಶ್ರೀ ಕಲಾಂ ಅವರಂತೆ ದೊಡ್ಡ ದೊಡ್ಡ  ಗುರಿ ಇಟ್ಟುಕೊಳ್ಳುವ ಕನಸು ಕಾಣಲಾರೆ. (ಶೇಷಾಯುಷ್ಯವೇ ಅಷ್ಟೋ ಇಷ್ಟೋ ಇದ್ದಾಗ ಪಂಚವಾರ್ಷಿಕ ಯೋಜನೆ ಹಾಕುವುದಾದರೂ ಹೇಗೆ?) ಹಗಲುಗನಸು ಎಂದಾಗ ನನ್ನ ನೆನಪಿಗೆ ಬರುವುದು, ಹಿಂದೆ ಬರುತ್ತಿದ್ದ ‘ಮುಂಗೇರಿ ಲಾಲ್ ಕೀ ಹಸೀನ್ ಸಪನೇಂ’ ಅನ್ನೋ ಧಾರಾವಾಹಿ. ನಮ್ಮ ನಿಮ್ಮೆಲ್ಲರ ನಿಜ ಪ್ರತಿನಿಧಿಯಾಗಿ ಈ ಧಾರಾವಾಹಿ ಮೂಡಿ ಬಂದಿತ್ತು. ಬಾಸ್‍ನಿಂದ ಬೈಗುಳ ತಿಂದ ದಿನ, ಎಷ್ಟು ಸಲ ನಾವು ‘ಆ ಬಾಸ್ ಮೇಲೇರಿ ಹೋಗುವ’ ಹಗಲುಗನಸು ಕಂಡಿಲ್ಲ? ಹೆಂಡತಿಯನ್ನ ಚರ್ಚೆಯಲ್ಲಿ ಸೋಲಿಸಿ, ಅವಳ ಬಾಯ್ಮುಚ್ಚುವ ಹಗಲುಗನಸನ್ನು ಎಷ್ಟು ಗಂಡಂದಿರು ಕಾಣುವುದಿಲ್ಲ?! ಒಟ್ಟಿನಲ್ಲಿ ಹಗಲುಗನಸು ನಮ್ಮ ಹಕ್ಕು.

  ಹಗಲುಗನಸಿನ ಹೊರತಾಗಿಯೂ ನಾವು ಜಾಣ ನಿದ್ರೆಗೆ ಜಾರುವುದುಂಟು. ಜಾಣನಿದ್ರೆ ಜಾಣಗಿವುಡಿನ ತರಹ-ಸಾಂದರ್ಭಿಕವಾಗಿ ಉಪಯೋಗಿಸಲ್ಪಡುವಂಥದು. ನಿದ್ರೆಗೆ ಬಿದ್ದಂತೆ ಆಡುವ ನಾಟಕವದು. ಸರಸದ ಸಮಯದಲ್ಲಿ ಗಂಡ ಯಾ ಹೆಂಡತಿ ‘ತಮ್ಮ ಕಡೆ’ಯವರ ಸುದೀರ್ಘ ಗುಣಗಾನ ಮಾಡುತ್ತಿದ್ದಾಗ, “ನನಗೆ ಈ ವಿಚಾರದಲ್ಲಿ ಎಳ್ಳಷ್ಟೂ ಆಸಕ್ತಿಯಿಲ್ಲ” ಎಂದು ನಿಷ್ಠುರ ನುಡಿ ನುಡಿದರೆ, ಆಗಬಹುದಾದ ಅನಾಹುತಗಳಿಗೆ ಹೆದರಿ ಉಪಯೋಗಿಸುವ ಬ್ರಹ್ಮಾಸ್ತ್ರವೇ ಜಾಣನಿದ್ರೆ.

    ಈ ಅರೆನಿದ್ರಾವಸ್ಥೆಯಲ್ಲಿ ನಾವು ಮಂಕುದಿಣ್ಣೆಗಳಂತೆ ವರ್ತಿಸುವುದು ಸಹಜ. ನಮ್ಮ ಸಹಜ ಬುದ್ಧಿಯನ್ನು ಕೆಳಗಿಟ್ಟು, ಗಾಂಢೀವ ಕೆಳಗಿಟ್ಟ ಅರ್ಜುನನಂತೆ, ದಿಙ್ಮೂಢರಾಗಿರುತ್ತೇವೆ. ಇಂಥ ಪರಿಸ್ಥಿತಿಯ ದುರ್ಲಾಭವನ್ನು ಬಹಳ ಜನ ಪಡೆದುಕೊಳ್ಳುತ್ತಾರೆ. ನನ್ನಾಕೆ ತನ್ನ ಬೇಡಿಕೆಗಳ ಪಟ್ಟಿ ಇಡುವುದೇ, ನಾನು ನಿದ್ರೆಗೆ ಜಾರುವ ಹೊತ್ತಿನಲ್ಲಿ. ನಮಗೋ, ‘ಉಹ್ಞೂ’ ಅನ್ನುವ ಎರಡಕ್ಷರ ನುಡಿಯುವಲ್ಲಿ ನಿದ್ರೆ ಎಲ್ಲಿ ಹಾಳಾದೀತೋ ಅನ್ನುವ ಧಾವಂತದಲ್ಲಿ ಕಡಿಮೆ ಗಾತ್ರದ ‘ಹ್ಞೂ’ ಅನ್ನುವುದೇ ಶ್ರೇಯಸ್ಕರ. ಅಷ್ಟೇ ಅಲ್ಲ- ನಿರಾಕರಣೆಯಲ್ಲಿ ಉದ್ಭವಿಸುವ ಚರ್ಚೆಯಿಂದ ನಿದ್ರಾಭಂಗವಷ್ಟೇ ಲಾಭ ಎನ್ನುವುದು ನಮ್ಮ ಅನುಭವವೇದ್ಯ. ಎಷ್ಟಂದರೂ ಅರ್ಧಾಂಗಿ, ಯಾ ಮಕ್ಕಳ ಬೇಡಿಕೆ ಪಟ್ಟಿಯ ಪೂರೈಕೆ ಎಂದಾದರೂ ಮಾಡಲೇ ಬೇಕು- ಇವತ್ತಲ್ಲ, ನಾಳೆ. ಇಲ್ಲವಾದಲ್ಲಿ ಮನೆಯಲ್ಲಿ ಮನಃಶಾಂತಿಯಿಲ್ಲದೇ ಮನೆ-ಶಾಂತಿ ಮಾಡಿಸಬೇಕಾದೀತು!

  ಜಾಣ ನಿದ್ರೆಯನ್ನು ನಾವು ಬಸ್ಸಿನಲ್ಲಿ ನಟಿಸುವುದು ಎರಡು ಸೀಟಿನ ಜಾಗದಲ್ಲಿ ಒಬ್ಬನೇ ಕುಳಿತಾಗ ಜಾಸ್ತಿ. ಜೋರು ನಿದ್ರೆಯಲ್ಲಿರುವಂತೆ ನಟಿಸಿ, ಭಾರೀ ದೇಹದವನು ಮುಂದೆ ಸಾಗಿ, ತರುಣಿಯೋರ್ವಳು ಬಳಿ ಸಾರಿದಾಗ, ನಿದ್ರೆಯಿಂದ “ಎಚ್ಚೆತ್ತು” ಜಾಗ ಕೊಟ್ಟರೆ, ಜನ ತಪ್ಪು ತಿಳಿಯುವುದಿಲ್ಲ! ಏಕೆಂದರೆ, ಎಲ್ಲರೂ ಅದೇ ಯೋಚನೆಯವರೇ ಅಲ್ಲವೇ?! ಬಸ್ಸಿನಲ್ಲಿ ಕೆಲವರು ಟಿಕೆಟ್ ಪಡೆಯುವುದಕ್ಕಿಂತ ಮುನ್ನವೇ ನಿದ್ರಾಪರವಶವಾಗುವುದುಂಟು. ಟಿಕೆಟ್ ಹಣ ಉಳಿಸುವ ಪರಿಯೇ ಇದು? ಆದರಿದು, ಅವರ ತಪ್ಪಲ್ಲ. ನಿದ್ರಾಧಿಕ್ಯದ ಪರಿಣಾಮ ಎಂಬುದನ್ನು ಖಚಿತವಾಗಿ ನನ್ನ ಅನುಭವದಲ್ಲಿ ಹೇಳಬಲ್ಲೆ, ನನ್ನ ನಿದ್ರಾಧಿಕ್ಯದಿಂದ ಹಲವಾರು ಬಾರಿ ನಾನು ನನ್ನ ಗಮ್ಯ ಸ್ಥಾನದಲ್ಲಿಳಿಯದೇ ಬಸ್ಸಿನ ಕೊನೆ ಸ್ಟಾಪಿನಲ್ಲಿ, ಕಂಡಕ್ಟರ್‍ನಿಂದ ಬೈಯಿಸಿಕೊಂಡು, ಇಳಿದಿದ್ದೇನೆ. ಹಾಗಾಗಿ ಈಚೆಗೆ ನಾನು ಗಮ್ಯ ಸ್ಥಾನದಲ್ಲಿ ನನ್ನನ್ನೆಬ್ಬಿಸುವ ಭಾರವನ್ನು ಕಂಡಕ್ಟರ್‍ನ ಮೇಲೆ ಹಾಕಿ, ಸುಖನಿದ್ರೆಗೆ ಜಾರುತ್ತೇನೆ.

   ನಿದ್ರಾಧಿಕ್ಯದಿಂದ ಕೆಲವು ಅನಾನುಕೂಲತೆಗಳು ಉಂಟು. ಯಾವುದೇ ವಿಚಾರವನ್ನು ನಾನು ಈಗ ‘ನೀವಿದನ್ನು ಮುಂಚೆ ನನಗೆ ಹೇಳಿರಲಿಲ್ಲ’ ಅಂತ ಖಚಿತವಾಗಿ ಹೇಳುವ ಹಾಗೇ ಇಲ್ಲ. ನನ್ನ ವಿಚಾರ ಗೊತ್ತಿರುವ ಸ್ನೇಹಿತರು, ‘ಪರಿಸ್ಥಿತಿ’ಯ ದುರ್ಲಾಭ ಪಡೆದು, ‘ನಾನು ಇದನ್ನು ಹೇಳಿದಾಗ, ನೀನು ನಿದ್ದೇಲಿದ್ದೆ ಅನ್ಸತ್ತೆ’ ಅಂತಂದು ನನ್ನ ಬಾಯಿ ಮುಚ್ಚಿಸಿಬಿಡುತ್ತಾರೆ. ಇನ್ನು ಬೇಡದ ನಿದ್ರೆಯಾಗಿ ನಮ್ ಮಾನಹಾನಿ ಮಾಡುವುದೂ ಉಂಟು ಇದು. ತುಂಬಾ ಮುಖ್ಯವಾದ ಮೀಟಂಗ್‍ನಲ್ಲಿ ನಿದ್ರಾವಸ್ಥೆಗೆ ಬೇಡ ಬೇಡವೆಂದರೂ ಜಾರಿದರೆ, ಆಗುವ ಪರಿಣಾಮ ಅನೂಹ್ಯ. ಸಭೆಯಲ್ಲಿ ಸಭೀಕನಾದಾಗ ನಿದ್ರಿಸಿದರೆ ಸೈ. ಆದರೆ, ಅತಿಥಿಯಾದಾಗಲೂ ನಿದ್ರಿಸಿದರೆ?! ಊರಿನಲ್ಲೊಮ್ಮೆ ಬೇರಾರೂ ಸಿಗದಿದ್ದಕ್ಕೆ ನನ್ನನ್ನು ಸಭೆಯಲ್ಲಿ ಅತಿಥಿಯನ್ನಾಗಿಸಿದ್ದರು. ರಾಜಕಾರಣಿಯೋರ್ವನ 3-4 ತಾಸುಗಳ ಓತಪ್ರೋತ ಭಾಷಣದಲ್ಲಿ ಮಿಂದು ನಿದ್ರಾದೇವಿಯತ್ತ ಹೊರಳಿದ ‘ಅತಿಥಿ’ಯನ್ನು ಮತ್ತೆ ಯಾರು ತಾನೇ ಕರೆದಾರು? ಇದೇ ಬೇಡದ ನಿದ್ರೆ. ಆ ಸಂದರ್ಭದಲ್ಲಿ ನಮಗೆ ನಿದ್ರೆ ಬೇಡವಾಗಿರುತ್ತದೆ-ಜನ ತಪ್ಪು ತಿಳಿಯಬಾರದೆಂದು. ಆದರೆ, ಹಾಳು ಅಭ್ಯಾಸ ಬಲ ಕೈ ಕೊಟ್ಟು ಬಿಡುತ್ತೆ. ಜೋರು ನಿದ್ರೆ ಬಂದು ಬಿಡುತ್ತದೆ. ಗೊರಕೆ ಹೊಡೆಯದಿದ್ದರೆ, ಅದೇ ಜಾಸ್ತಿ! ಅಂಥ ಸಂದರ್ಭಗಳಲ್ಲಿನ ಸುಖನಿದ್ರೆ, ದು:ಖ ನಿದ್ರೆಯಾಗಿ ಪರಿವರ್ತಿತವಾಗುವುದೂ ಉಂಟು.

  ಒಟ್ಟಿನಲ್ಲಿ ನಿದ್ರೆ ಜೀವನಕ್ಕೆ ಅತ್ಯವಶ್ಯ. ದಣಿದ ದೇಹಕ್ಕೆ ವಿಶ್ರಾಂತಿ, ಆರಾಮ ಸಿಗುವುದೇ ನಿದ್ರೆಯಿಂದ. ಅದಕ್ಕೆ ಸಂಪೂರ್ಣ ನಿದ್ರೆ ಮುಗಿಸಿ ಎದ್ದಾಗ ಮೈ-ಮನಗಳು ಪಾದರಸದಂತೆ ಚುರುಕಾಗುತ್ತದೆ. ಮನಸ್ಸು ಪ್ರಫುಲ್ಲವಾಗಿರುತ್ತದೆ. ಯಾವುದೇ ಕೆಲಸಕ್ಕೆ ಆತ್ಮವಿಶ್ವಾಸವಿರುತ್ತದೆ. ಒಟ್ಟಿನಲ್ಲಿ ವ್ಯಕ್ತಿತ್ವ ವಿಕಸನ ಕೇಂದ್ರದವರು ‘ಪರಿಪೂರ್ಣ ವ್ಯಕ್ತಿತ್ವ’ದಲ್ಲೇನೇನನ್ನು ಅಪೇಕ್ಷಿಸುತ್ತಾರೋ ಅವೆಲ್ಲವನ್ನೂ ನಾವು ಸುಖನಿದ್ರೆಯಿಂದ ಹೊಂದಬಹುದು. ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಬೆಳಗಿನ ಜಾವ ಓದಲು ಪ್ರಶಸ್ತ ಸಮಯ ಎಂದು ಭಾವಿಸಿ, ತಂದೆ-ತಾಯಿಯರು 4 ಗಂಟೆಗೆ ಮಕ್ಕಳನ್ನೆಬ್ಬಿಸಿ ಓದಲು ಕೂರಿಸುತ್ತಾರೆ. ಆ ಸುಖನಿದ್ರಾ ಸಮಯದಲ್ಲಿ ಓದಿದರೆ ಏನು ತಾನೇ ಮನದಟ್ಟಾಗುತ್ತದೆ? ಓದೂ ತಲೆಗೆ ಹತ್ತದು, ನಿದ್ರೆಯೂ ಹಾಳು! ಎಲ್ಲ ಪಾಲಕರಂತೆ ನನ್ನ ತಂದೆ-ತಾಯಿಯರೂ SSLC  ಯಲ್ಲಿ ನನ್ನನ್ನು 4 ಗಂಟೆಗೆ ಎಬ್ಬಿಸುತ್ತಿದ್ದರು. ಆಗ ನಮಗೆ ‘ಗ್ರಿಸೆಲ್ಡಾ’ ಅನ್ನುವ ಅಸಂಖ್ಯಾತ ಪುಟಗಳ ಒಂದು ಪಾಠವಿತ್ತು. ಪ್ರತಿದಿನ ನಾನೂ ಶಪಥ ಗೈಯುತ್ತಿದ್ದೆ. ನಾಳೆಯಾದರೂ ‘ಗ್ರಿಸೆಲ್ಡಾ’ ಪಾಠ ಪೂರಾ ಓದಬೇಕು ಅಂತ. ಆದರೆ ಯಾವುದೇ ದಿನವೂ ಮೊದಲ ಪುಟದಿಂದ ಆಚೆಗೆ ನಾನು ಹೋಗಲಿಕ್ಕಾಗಲಿಲ್ಲ. ಅಂಥ ನಿದ್ರಾ ದೇವಿಯ ಮುಂದೆ ಸರಸ್ವತೀ ದೇವಿ ಮಂಡಿಯೂರಿ ಸೋತದ್ದು ಸುಳ್ಳಲ್ಲ.

  ಮನಃಶಾಸ್ತ್ರಜ್ಞರು ದಿನಕ್ಕೆ ಆರೋಗ್ಯವಂತ ಮನುಷ್ಯನಿಗೆ 8 ಗಂಟೆಗಳ ನಿದ್ರೆ ಅವಶ್ಯಕ ಎನ್ನುತ್ತಾರೆ. ನಾನು ಹೆಚ್ಚೆಚ್ಚು ಆರೋಗ್ಯವಂತನಾಗಿರುವ ನಿಟ್ಟಿನಲ್ಲಿ ಒಂದಿಷ್ಟು ಜಾಸ್ತಿ ನಿದ್ರೆ ಮಾಡಿದರೆ ತಪ್ಪೇ?! ಒಳ್ಳೆ ನಿದ್ರೆ ಮಾಡಿ, ಒಳ್ಳೊಳ್ಳೆ ಕನಸುಗಳ ಬೀಳುವುದು ಆರೋಗ್ಯಕ್ಕೆ ಒಳ್ಳೆಯದಂತೆ. ನಮ್ಮ ಕನಸುಗಳು ನಮ್ಮ ತಾಮಸ-ಸಾತ್ವಿಕ ಗುಣಗಳ ಪ್ರತೀಕವಂತೆ. ಆದರೆ, ಈ ಗುಣಗಳಿಂದಲೇ ತಾನೇ ಅಂಥ ಕನಸುಗಳು ಬೀಳೋದು. ಒಟ್ಟಿನಲ್ಲಿ, ಇದು, ಕೋಳಿ ಮೊದಲೋ ಮೊಟ್ಟೆ ಮೊದಲೋ ಚರ್ಚೆಯ ತರಹ ಆಯ್ತು. ನಿದ್ರೆಯಿಲ್ಲದೇ ನಮ್ಮ ಆರೋಗ್ಯಭರಿತ‌ ಜೀವನವನ್ನು ಊಹೆ ಮಾಡುವುದೂ ಸಾಧ್ಯವಿಲ್ಲ.

                                               

Comments

Submitted by nageshamysore Sun, 07/19/2015 - 07:00

ನಿದ್ರಾಪುರಾಣ ಚೆನ್ನಾಗಿದೆ. ಮಲಗಿದ ಕೂಡಲೆ ನಿದ್ರೆ ಬರುವ ಪುಣ್ಯ ಕೆಲವರಿಗಿದ್ದರೆ ಹೊರಳಿ, ಒದ್ದಾಡಿ, ಗುದ್ದಾಡಿದರು ನಿದ್ದೆ ಬಾರದೆ ಸೋತು ಸೊರಗಿದ ಮೊಗ ಹೊತ್ತು ಬಳಲುವ ಪಾಡು ಮತ್ತೆ ಕೆಲವರದು. ಅದೇನೆ ಇದ್ದರು ದಿನಂಪ್ರತಿ ನಿಯಮಿತ ನಿದ್ದೆ ಮಾಡಲು ಸಾಧ್ಯವಿದ್ದವರ ಚಟುವಟಿಕೆಗಳು ಲವಲವಿಕೆಯಿಂದ ಕೂಡಿ, ಉತ್ಸಾಹಭರಿತವಾಗಿರುತ್ತವೆ ಎನ್ನುವುದು ನಿಜ.

Submitted by santhosha shastry Mon, 07/20/2015 - 12:26

In reply to by nageshamysore

ನಾಗೇಶ್ ರವರೇ, ಧನ್ಯವಾದಗಳು. ಪುಣ್ಯಕ್ಕೆ ನನ್ನೀ ಬರಹ‌ ಓದಿ, ನಿದ್ರೆ ಬಂತು ಅಂತ‌ ಯಾರಾದ್ರೂ ಹೇಳಿದ್ರೆ, ಬೇಜಾರಾಗೋದು ಬೇಡಾ ಅಂತಿದ್ದೀನಿ!!

Submitted by ಗಣೇಶ Sun, 07/19/2015 - 21:51

>>..ನಿದ್ರಾ ದೇವಿಯ ಮುಂದೆ ಸರಸ್ವತೀ ದೇವಿ ಮಂಡಿಯೂರಿ ಸೋತದ್ದು ಸುಳ್ಳಲ್ಲ.
>>..ನಾನು ಹೆಚ್ಚೆಚ್ಚು ಆರೋಗ್ಯವಂತನಾಗಿರುವ ನಿಟ್ಟಿನಲ್ಲಿ ಒಂದಿಷ್ಟು ಜಾಸ್ತಿ ನಿದ್ರೆ ಮಾಡಿದರೆ ತಪ್ಪೇ?!
ಶಾಸ್ತ್ರಿಯವರೆ, ನಿಮಗೆ ನನ್ನ ಪೂರ್ತಿ ಬೆಂಬಲವಿದೆ. ಆದರೆ ನಾನು ಚಂದ್ರವಂಶಿ!
http://sampada.net/blog/%E0%B2%97%E0%B2%A3%E0%B3%87%E0%B2%B6/15/06/2008/...

Submitted by santhosha shastry Mon, 07/20/2015 - 12:35

In reply to by ಗಣೇಶ

ಗಣೇಶ್ ರವರೇ, ಧನ್ಯವಾದಗಳು. ಸೂರ್ಯವಂಶಿ ಯಾ ಚಂದ್ರವಂಶಿಗಳ‌ "ಅದೃಷ್ಟ‌" ಎಲ್ಲರಿಗೂ ಇರಲ್ಲ‌ ಬಿಡಿ!

Submitted by kavinagaraj Wed, 07/22/2015 - 12:23

ನಿದ್ದೆಗೆಟ್ಟು ನಿದ್ರೆಯ ಮಹಿಮೆ ವರ್ಣಿಸಿರುವಿರಿ, ಚೆನ್ನಾಗಿದೆ. :)

Submitted by santhosha shastry Wed, 07/22/2015 - 15:02

In reply to by kavinagaraj

ಧನ್ಯವಾದಗಳು ಕವಿಗಳೇ. "ಆರಂಕುಶವಿಟ್ಟೊಡೆಂ, ನಿದ್ರೆಯಂ ಬಿಡಲಾಪೆ ನಾ.." ಅಂತ ಅಲವತ್ತಿಕೋಬೇಕಷ್ಟೇ.