ನಿನ್ನೊಳಗಿನ ಮಾಯಾದರ್ಪಣದೊಳಗಿನ ನೀನುಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೪
ನಿನ್ನೊಳಗಿನ ಮಾಯಾದರ್ಪಣದೊಳಗಿನ ನೀನುಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೪
(೧೦೪)
"ಎಲ್ಲಿದ್ದೆ? ಏನು ಮಾಡುತ್ತಿದ್ದೆ? ಅಂತ ಕೇಳಿದರೆ ತತ್ವಶಾಸ್ತ್ರ ಕಥೆ ಹೇಳುತ್ತೀಯ. ಹೇಗಿದ್ದೀಯ ಪ್ರಕ್ಷು" ಎಂದೆ.
"ಪ್ರಶ್ನೆ ಕೇಳುವುದಕ್ಕೂ ಸಂಕೋಚವೇ ಮಾರಾಯ. ಅದಕ್ಕೇ ದೃಶ್ಯಕಲಾಸಮುದಾಯ ಅಷ್ಟೋಂದು ಮಾತಿಲ್ಲದ ಮೌನ ಬೆಳೆಸಿಕೊಂಡಿರುವುದು. ನಾನು ಇಲ್ಲಿಯೇ ಇದ್ದೇನೆ, ಇದೇ ಕ್ಯಾಂಪಸ್ಸಿನಲ್ಲಿ, ನೀನು ೧೯೯೨ರಲ್ಲಿ ಇಲ್ಲಿಂದ ಹೋದಾಗಿನಿಂದ."
"ಮತ್ತೆ, ಯಾರನ್ನು ಕೇಳಿದರೂ ’ನನಗೆ ಗೊತ್ತಿಲ್ಲ’ ಎಂದೇ ಹೇಳುತ್ತಿದ್ದರಲ್ಲ!"
"ಅದೇ ನನ್ನ ವಿಶೇಷ ಗುರುವೆ. ಇವತ್ತು ಬೆಳಿಗ್ಗೆ ಒಬ್ಬ ಗುರುಗಳು ನಿನಗೆ ಏನು ಹೇಳಿದರೆಂಬುದು ನೆನಪಿದೆಯೆ?" ಎಂದ.
"ಟೀ ಕುಡೀತೀಯ ಅಂತ ಕೇಳಿದರು",
"ತರ್ಲೆ. ನೀನು ಚಾಲಾಕಿ. ಓಕೆ. ’ಬಿನೋದ್ ದಾರವರ (ಬಿನೋದ್ ಬಿಹಾರಿ ಮುಖರ್ಜಿ) ’ಕಟ್ಟಾಮೊಶಾಯ್’ ಮತ್ತು ಸೋಮನಾಥ್ ಹೋರರ ’ತೆಬಾಗಾ’ ಡಯರಿಗಳನ್ನು ಆಗೆಲ್ಲ ನೀವುಗಳ ಬಹಳ ರೆಫರ್ ಮಾಡುತ್ತಿದ್ದಿರಲ್ಲವೆ;’ ಅಂತ ಒಬ್ಬ ಗುರು ನಿನ್ನನ್ನು ಕೇಳಲಿಲ್ಲವೆ?"
"ಓಹ್. ನೀನು ಅಲ್ಲೇ ಇದ್ದೆಯ ಆಗ?"
"ಇಲ್ಲ. ಹೌದು. ಈ ಮುಂಚಿನೆರೆಡು ಪದಗಳ ನಡುವಿನ ವೈರುಧ್ಯದ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ಆದರೆ ಅವರು ಕೇಳಿದ ಮಾತಿನರ್ಥ ನಿನ್ನ ಗ್ರಹಿಕೆಗೆ ಬಂದಿತೆ?" ಎಂದ.
"ನೀನು ಅಲ್ಲಿ ಇದ್ದೆಯೋ ಬಿಟ್ಟೆಯೋ ಗೊತ್ತಿಲ್ಲ. ಆದರೆ ಅವರು ಮಾತನಾಡಿದ ವಾಕ್ಯರಚನೆಯನ್ನೂ ಯಥಾವತ್ ನೆನಪಿಟ್ಟಿಕೊಂಡಿರುವೆಯಲ್ಲ!" ಎಂದೆ.
"ಕಲೆಯನ್ನು ಮತ್ತು ಅದನ್ನು ಕುರಿತು ಬರೆಯುವ ನಿನ್ನಂತಹವರ ಸಮಸ್ಯೆಯೇ ಅದು. ಯಾರೋ ಪರಿಣಾಮಕಾರಿಯಾಗಿ ಮಾತನಾಡಿದರೆ ಅದನ್ನು ಕುರಿತು ಆಶ್ಚರ್ಯ ಪಡುವ ಬದಲಿಗೆ, ಅವರ ಮಾತಿನ ಆಂತರ್ಯದ ಬಗ್ಗೆ ಏಕಾಗ್ರತೆಯ ಗಮನ ಹರಿಸುವುದು ಕಲಿಕೆಯ ಮೊದಲ ಪಾಠ ಎಂದು ಈ ವಯಸ್ಸಿನಲ್ಲೂ ನಿನಗೆ ಹೇಳಿಕೊಡಬೇಕೆ?" ಎಂದ ಪ್ರಕ್ಷು.
ಆತ ಆಗಲೂ ಹೀಗೇ ಇದ್ದ, ಈಗಲೂ ಸಹ. ಒಂದು ಆತ್ಯಂತಿಕ ಉತ್ತರ, ಒಂದು ತೀರ್ಮಾನ ಎಂಬುದಕ್ಕೆ ಆತನಲ್ಲಿ ಅವಕಾಶವೇ ಇರಲಿಲ್ಲ. ಇಬ್ಬರೂ ಮಾತನಾಡುತ್ತಿದ್ದೆವೇ ಹೊರತು ಯಾವುದೇ ನಿರ್ದಿಷ್ಟ ಸಂದರ್ಶನ ಅದಾಗಿರಲಿಲ್ಲ. ಆತ ನನ್ನ ಬಗ್ಗೆ ಏನನ್ನೂ ತಿಳಿಯುವ ಕುತೂಹಲದಲ್ಲಿರಲಿಲ್ಲ, ನನಗೆ ಆತನನ್ನು ಕುರಿತಾದ ಯಾವ ಕುತೂಹಲಕ್ಕೂ ಆತ ಉತ್ತರ ನೀಡುತ್ತಿರಲಿಲ್ಲ. ನಿಯಾನ್ ದೀಪದ ಪ್ರಖರತೆಯಲ್ಲಿ ಅಲ್ಲಿನ ಗಿಡಮರಗಳ ನಡುವಿನ ಬೆಳಕಿನಲ್ಲಿ ಹುಡುಗಿಯರ ಟಾಯ್ಲೆಟ್ ಹಾಸ್ಟಲ್ಲಿನ ಪಕ್ಕದಲ್ಲಿರುವ ರಾಮ್‍ಕಿಂಕರ್ ಬೈಜ್ ನಿರ್ಮಿತ ಬುದ್ಧನ ಆಳೆತ್ತರಾತೀತ (ಓವರ್ ಲೈಫ್-ಸೈಜ್) ಶಿಲ್ಪದ ಮೇಲೆ ಬಿದ್ದು, ರಾಕ್ಷಸಾಕಾರದಲ್ಲಿ ಹರಡುತ್ತಿರುವಂತಿತ್ತು.
"ಬುದ್ಧನಿಗೂ ರಾಕ್ಷಸಾಕಾರಕ್ಕೂ ಸಂಬಂಧ ಕಲ್ಪಿಸುವ ನಿನ್ನ ಮನಃಸ್ಥಿತಿ ಔಚಿತ್ಯಪೂರ್ಣ ಅನ್ನಿಸುತ್ತದೆಯೇ" ಎಂದು ನನ್ನ ಮನಸ್ಸನ್ನು ಯಥಾವತ್ ಅರಿತು ಪ್ರಕ್ಷು ನಗತೊಡಗಿದ. ಆತನ ಇಂತಹ ಸಣ್ಣಪುಟ್ಟ ಬಗ್ಗೆ ಗೊತ್ತಿದ್ದ ನಾನು ಗಾಭರಿಗೊಳ್ಳಲಿಲ್ಲ, ಆದರೆ ಇಷ್ಟು ವರ್ಷಗಳ ನಂತರವೂ ಮನುಷ್ಯರ ಮನಸ್ಸು ರೂಪಿಸುವ ಪದಗಳ ಗುಚ್ಛವನ್ನು ಹಾಗೆಯೇ ಹೇಳಿಬಿಡುವ ಆತನ ತಂತ್ರದ ಬಗ್ಗೆ ಮೆಚ್ಚುಗೆಯಿಂದಿದ್ದೆ.
"ಈಗ ಒಂದು ಆಟ ಆಡುವ ಅನಿಲ್. ಬಿನೋದ್ ಬಿಹಾರಿಯ ಈ ಭಿತ್ತಿಚಿತ್ರ ಕಾಣುತ್ತಿದೆಯೇ?" ಎಂದು ಕ್ಯಾಂಟೀನಿನ ಮೇಲಿದ್ದ ಅವರ ಚಿತ್ರಗಳತ್ತ ಬೊಟ್ಟು ಮಾಡಿ, "ಈಗ ಅವರು ಅದನ್ನು ನೋಡುತ್ತಿದ್ದಾರೆ ಅಂತ ಕಿಂಚಿತ್ತಾದರೂ, ನಿನ್ನ ಕಲ್ಪನೆಯಲ್ಲಾದರೂ ಅನ್ನಿಸಲು ಸಾಧ್ಯವೆ?" ಕೇಳಿದ ಪ್ರಕ್ಷು.
ಬಿನೋದ್ ಬಿಹಾರಿ ಮೋರ್ನಾಲ್ಕು ದಶಕಗಳ ಹಿಂದೆ, ಸಂಪೂರ್ಣ ಕುರುಡು ಅವರನ್ನಾವರಿಸಿಯಾದ ಮೇಲೆ ಸೃಷ್ಟಿಸಿದ ಕ್ಯಾಂಟೀನ್ ಭಿತ್ತಿಚಿತ್ರವದಾಗಿತ್ತು. ಈಗ ಅವರು ಸತ್ತು ಸ್ವರ್ಗ ಸೇರಿಯೇ ದಶಕಗಳು ಕಳೆದಿದ್ದವು. ಈಗ ಅವರು ಅಲ್ಲಿ ಅವರದ್ದೇ ಭಿತ್ತಿಗೆ ಕಾವಲು ಕುಳಿತಂತೆ ಅವರನ್ನು ಕಲ್ಪಿಸಿಕೊಳ್ಳುವುದೂ ಅಭಾಸಕರವಾಗಿತ್ತು.
ಪ್ರಕ್ಷು ಮುಂದುವರೆಸಿದ, "ನನಗವರು ಈಗ ಇಲ್ಲಿ ಕಾಣುತ್ತಿದ್ದಾರೆ. ನನ್ನಿಂದ ಆರಡಿ ದೂರದಲ್ಲಿ, ಅದೋ ಅಲ್ಲಿ, ಆ ಬಾಗಿಲಿನ ಬಳಿ ಬಲಕ್ಕೆ ತಿರುಗಿ ಕುಳಿತಿದ್ದಾರೆ. ರಾಮ್ ಕಿಂಕರ್ ಆ ಬ್ಲಾಕ್ ಹೌಸಿನ ಸಮೀಪ ಅರೆನಗ್ನರಾಗಿರುವುದಲ್ಲದೆ ಹಾಡನ್ನೂ ಹಾಡುತ್ತಿರುವುದು ಕೇಳುತ್ತಿದೆಯೇ?" ಎಂದ. ತೀರ ಅಭಾಸಕರ ಸತ್ಯ ಅಥವ ಪೂರ್ ಜೋಕ್ ಅನ್ನಿಸಿಬಿಟ್ಟಿತು ನನಗೆ.
(೧೦೫)
ಇಬ್ಬರೂ ಸುಮ್ಮನೆ ಕುಳಿತೆವು. ಕ್ಯಾಂಟೀನಿನ ಕೆಲಸದ ಹುಡುಗರು ರಾತ್ರಿಯ ಬಿಸಿಲ ದಗೆ ತಾಳಲಾರದೆ, ತೆಳು ಹೊದಿಕೆಯನ್ನು ಬಕೆಟ್ಟಿನ ನೀರಿನಲ್ಲಿ ಅದ್ದಿ, ತೆಗೆದು, ಹಿಂಡಿ, ಮತ್ತೆ ಹೊದ್ದು ಮಲಗುತ್ತಿದ್ದುದು ತಮಾಷೆಯಾಗಿ ಕಾಣುತ್ತಿತ್ತು.
"ಮುಗ್ಧ ಜನ. ಮನಸ್ಸಿನಲ್ಲೇ ಚಳಿಯಲ್ಲಿ ನಡುಗುವಂತೆ ಆಳವಾಗಿ ಭಾವಿಸಿದಲ್ಲಿ ನಿದ್ರೆ ಸರಾಗವಾಗಿ ಬರುತ್ತದಲ್ಲ. ಅಷ್ಟೂ ತಿಳಿಯದೆ ಈ ಐಕ್ಳಿಗೆ" ಎಂದ.
ನಾನು ಬೆಚ್ಚಿ ಬಿದ್ದೆ. ಬೆಂಗಾಲಿ ಮಾತೃಭಾಷೆಯ ಪ್ರಕ್ಷು ಶುದ್ಧ ಕನ್ನಡದಲ್ಲಿ ’ಐಕ್ಳು’ ಎಂಬ ಪದವುಳ್ಳ ವಾಕ್ಯವನ್ನು ಉದ್ಘರಿಸಿದ್ದ!
"ನೀನೀಗ ಎಷ್ಟು ವೈಚಿತ್ರ್ಯಗಳನ್ನು ನೋಡಲು ಸಿದ್ದನಿದ್ದೀಯ ಅನಿಲ್? ನಾಡಿದ್ದು ಬೆಳಿಗ್ಗೆ ನೀನು ವಾಪಸ್ ಬೆಂಗಳೂರಿಗೆ ಹೋಗಲಿದ್ದೀಯ. ಮತ್ತೆ ಇಲ್ಲಿಗೆ ಯಾವಾಗ ಬರುತ್ತೀಯೋ, ಇಲ್ಲವೇ ಇಲ್ಲವೋ ತಿಳಿಯದು. ಹೇಳು, ಈ ಶಾಂತಿನಿಕೇತನದ ಗುಟ್ಟನ್ನು ಪೂರ್ಣವಾಗಿ ಅರಿವ ತವಕ ನಿನಗಿದೆಯೇ?" ಎಂದು ಕೇಳಿದ.
ಆತನ ನಡೆನುಡಿ ಗೊತ್ತಿದ್ದ ನಾನು ಸುಮ್ಮನೆ ತಲೆಯಾಡಿಸಿದೆ. "ಬಾ ನನ್ನ ಜೊತೆ" ಎಂದು ಕೈ ಹಿಡಿದು ಬ್ಲಾಕ್ ಹೌಸಿನ ಸಮೀಪ ಕರೆದೊಯ್ದ. ೧೯೩೦ರ ದಶಕದ ಸುಮಾರಿಗೆ ವಿದ್ಯಾರ್ಥಿ ಸಮೋಹದೊಂದಿಗೆ ಬ್ಲಾಕ್ ಹೌಸಿನ ಸುತ್ತಲಿನ, ಮೇಲಿನ ಕೃಷ್ಣವರ್ಣದ ಭಿತ್ತಿಕೃತಿಗಳನ್ನು ಸೃಷ್ಟಿಸಿದ್ದರು ರಾಮ್‍ಕಿಂಕರ್ ಬೈಜ್. ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಚೀಟಿ ಮೋಲಕ ಆಯ್ದು, ಒಬ್ಬೊಬ್ಬರಿಗೆ ಒಂದೊಂದು ಕೋಣೆಯನ್ನು ವಾಸಿಸಲು ಕೊಡುವುದು ಅಲ್ಲಿನ ರೂಢಿಯಾಗಿದೆ. ೧೯೯೨ರಲ್ಲಿ ಎರಡನೇ ನಂಬರಿನ ಕೋಣೆಯಲ್ಲಿ ನಾನಿದ್ದೆ.
"ನೀನು ಈ ಕೋಣೆಯಲ್ಲಿಯೇ ವಾಸಿಸಿದ್ದೆಯಲ್ಲವ" ಎಂಬ ಪ್ರಶ್ನೆರೂಪದ್ದಲ್ಲದ ಮಾತನ್ನಾಡುತ್ತ ಪ್ರಕ್ಷು ನನ್ನನ್ನು ಎರಡನೇ ಕೋಣೆಯ ಬಳಿ ಕರೆದೊಯ್ದ. ನಿಯಾನ್ ಲೈಟು ಬೀಳದ ಅಲ್ಲಿ ಹೋಗಿ ಬಾಗಿಲನ್ನು ಮುಂದೂಡಿದ. ಒಳಗೆ ಒಬ್ಬ ವಿದ್ಯಾರ್ಥಿ ವಾಸಿಸುತ್ತಿರುವುದು ನನಗೆ ಗೊತ್ತಿತ್ತು! ಆದರೆ ಪ್ರಕ್ಷು ದೂಡಿದ ಕೂಡಲೆ ಬಾಗಿಲು ತೆರೆದುಕೊಂಡಿತು. ಒಳಗೆ ವಿದ್ಯಾರ್ಥಿಯೋ ಇಲ್ಲ, ಆತನ ವಸ್ತುಗಳೂ ಇಲ್ಲದ ಖಾಲಿ ಕೋಣೆಯಾಗಿತ್ತದು. ಒಳಗೆ ಹೋಗಿ ಕಿಟಕಿಯ ಬಳಿ ಮೊಣಕಾಲಿನಲ್ಲಿ ಕೂತು ಆತ ನನ್ನನ್ನೂ ಹಾಗೆಯೇ ಕುಳಿತುಕೊಳ್ಳುವಂತೆ ಸಂಜ್ಞೆ ಮಾಡಿದ.
ಹೊರಗೆ ನೋಡು ಎಂದು ನನಗೆ ಸೂಚಿಸಿದ. ಅದರಾಚೆಗೆ, ಪೂರ್ವ ದಿಕ್ಕಿಗೆ, ಹುಡುಗಿಯರ ಹಾಸ್ಟೆಲ್ಲಿನ ಕಡೆಗೆ ನೂರು ವರ್ಷದಷ್ಟು ವಯಸ್ಸಾದ ನೀಲಿಗಿರಿ ಮರಗಳಿದ್ದವು. ನಡುವೆ ಕಂಡೂಕಾಣದಂತಹ, ಮರದಂತೆ ತೆಳ್ಳಗೆ, ಉದ್ದಕ್ಕಿದ್ದ ’ಸುಜಾತ’ ಶಿಲ್ಪ ನಿಂತಿತ್ತು. ಅದರ ಎಡಕ್ಕೆ ಸುಮಾರು ಮುವತ್ತು ಅಡಿ ದೂರದಲ್ಲಿದ್ದದ್ದು ಬುದ್ಧನ ಶಿಲ್ಪ.
"ನೋಡು, ಆ ಆಕಾರ ಕಾಣುತ್ತಿದೆಯ?" ಕೇಳಿದ ಪ್ರಕ್ಷು.
’ಸುಜಾತ’ಳ ಮುಂದೆ, ಮರದ ನೆರಳಲ್ಲಿ ಸುಮಾರು ಎಪ್ಪತ್ತು ವಯಸ್ಸಿನ ಗಟ್ಟಿಮುಟ್ಟಾದ, ತಲೆಗೂದಲು ಕೆದರಿದ್ದ ಅರೆನಗ್ನಾವಸ್ಥೆಯ ಮುದುಕ ಕ್ಷೀಣವಾಗಿ ರೋಧಿಸುತ್ತಿದ್ದದ್ದು ಕಾಣಿಸಿ, ಕೇಳಿಸುತ್ತಿತ್ತು.
"ಶ್ರೀಮಾನ್ ಕಲಾಇತಿಹಾಸಕಾರರೆ, ಈ ಸುಪ್ರಸಿದ್ಧ ಕಲಾವಿದರ್ಯಾರೆಂದು ಗುರ್ತಿಸುತ್ತೀರ?" ಎಂದು ಕೇಳಿದ.
"ಇದೊಂದು ಮೆಸ್ಮರಿಸಂ ಪ್ರಕ್ಷು. ಅದು ರಾಮ್‍ಕಿಂಕರ್ ಬೈಜ್‍ರ ಪ್ರೇತಾತ್ಮದಂತಿದೆ."
"ಅರ್ಧ ಸರಿ. ಆದರದು ಪ್ರೇತಾತ್ಮವಲ್ಲ. ಅದು ನಿಜವಾದ ಆತ್ಮವೇ."
"ಆದರಿದು ಒಂದು ಭ್ರಮೆಯಷ್ಟೇ" ಎಂದೆ.
"ಒಂದೆರೆಡು ಗಂಟೆಯ ಹಿಂದಿನ ಕಾಲಾರ್ ದುಖಾನಿನ ಬಳಿಯಿದ್ದ ನಿನ್ನ ವಿದ್ಯಾರ್ಥಿಗೆಳೆಯರು ಈಗ ಬದುಕಿದ್ದಾರೆ ಎಂದು ಹೇಗೆ ನಂಬುವೆ? ಅವರೊಂದಿಗೆ ಒಡನಾಡಿದ ಕ್ಷಣಗಳನ್ನು ಮತ್ತೆ ಎಷ್ಟೇ ಪ್ರಯತ್ನಿಸಿದರೂ ಮರಳಿ ಪಡೆಯಲಾದೀತೆ. ಈಗಿನ ಮಟ್ಟಿಗೆ ಕಳೆದ ಕ್ಷಣವೂ ಒಂದು ಭ್ರಮೆಯೇ ಅಲ್ಲವೆ?"
"ಕಿಂಕರ್ ದಾ ಏನನ್ನು ಕುರಿತು ರೋಧಿಸುತ್ತಾರೆ ಗೊತ್ತೆ?" ಎಂದು ಕೇಳಿದ ಪ್ರಕ್ಷು.
"ಬಹುಷಃ ತಮ್ಮ ಜೀವದ ಗೆಳತಿ ರಾಜಕುಮಾರಿ ಬಿನೋದಿನಿಯ ಅಗಲಿಕೆಯನ್ನು ಕುರಿತು ದುಃಖಿಸುತ್ತಿರಬಹುದು" ಎಂದೆ, ನನ್ನ ಮಾತನ್ನು ನಾನೇ ನಂಬದಂತೆ. ಎದುರಿಗೆ ಕಾಣುತ್ತಿದ್ದುದೇ ನಿಜವಲ್ಲವೆಂದರೆ, ಅದರೊಳಗೆ ನಡೆಯುತ್ತಿರುವುದೇನೆಂದು ಹೇಳುವುದು ಮೊರ್ಖತನವೆನ್ನಿಸತೊಡಗಿತು.
"ಭ್ರಮೆಯ ಗರ್ಭದೊಳಗಿಂದ ಉದಿಸುವ ಅತೀತ ಭ್ರಮೆಯನ್ನು ನೈಜತೆ ಎನ್ನುತ್ತೇವೆ. ನಿನ್ನ ಮನಸ್ಸಿನಲ್ಲಿ ಈ ದೃಶ್ಯವು ಭ್ರಮೆ ಎನ್ನಿಸುವುದೇ ಒಂದು ಭ್ರಮೆ ಎಂಬುದನ್ನು ಅರಿತುಕೊ ಗೆಳೆಯ" ಎಂದ ಪ್ರಕ್ಷು, ನನ್ನನ್ನು ಬ್ಲಾಕ್ ಹೌಸಿನ ಕೋಣೆಯೊಳಗಿ ವಿರುದ್ಧ ದಿಕ್ಕಿನಿಂದ ಹೊರಕ್ಕೆ ಕರೆದುಕೊಂಡು ಬಂದ.//