ನಿಮಗೆ ಗೊತ್ತಿರದ ರಾಮಾನುಜನ್ !

ನಿಮಗೆ ಗೊತ್ತಿರದ ರಾಮಾನುಜನ್ !

ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ಅವರ ಜನ್ಮ ದಿನವಾದ ಡಿಸೆಂಬರ್ ೨೨ ನ್ನು ಭಾರತವು ‘ರಾಷ್ಟ್ರೀಯ ಗಣಿತ ದಿನ' ಎಂದು ಆಚರಿಸುತ್ತದೆ. ಈ ಸಂದರ್ಭದಲ್ಲಿ ರಾಮಾನುಜನ್ ಬಗ್ಗೆ ಹಲವರಿಗೆ ತಿಳಿದಿರದ ಅಪರೂಪದ ವಿಷಯಗಳನ್ನು ಇಲ್ಲಿ ನೀಡಲಾಗಿದೆ. ರಾಮಾನುಜನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಯಸುವವರಿಗೆ ಈ ಸಂಗತಿಗಳು ಸಹಕಾರಿ.

* ರಾಮಾನುಜನ್ ಹುಟ್ಟಿದ ಬಳಿಕ ಎರಡು ಗಂಡು ಮಕ್ಕಳು (ಶಟಗೋಪ ಮತ್ತು ಶೇಷ) ಹಾಗೂ ಒಂದು ಹೆಣ್ಣು ಮಗು ಹುಟ್ಟಿತ್ತಂತೆ. ಆದರೆ ಅವುಗಳು ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ತೀರಿಹೋದುವು. ನಂತರ ಬಹಳ ವರ್ಷಗಳ ಬಳಿಕ ಇಬ್ಬರು ತಮ್ಮಂದಿರು ಜನಿಸಿ ದೀರ್ಘಾಯುಷಿಗಳಾಗಿ ಬಾಳಿದರು. ಅವರ ಹೆಸರು ಲಕ್ಷ್ಮೀನರಸಿಂಹ ಮತ್ತು ತಿರುನಾರಾಯಣ. ಈ ಕಾರಣದಿಂದ ರಾಮಾನುಜನ್ ತಮ್ಮ ಬಾಲ್ಯವನ್ನು ಒಂಟಿತನದಲ್ಲೇ ಕಳೆಯಬೇಕಾಯಿತು.

* ರಾಮಾನುಜನ್ ತನ್ನ ತಾಯಿಯನ್ನೇ ಹೋಲುತ್ತಿದ್ದ ಕಾರಣದಿಂದ ಆಕೆಗೆ ಈತನೆಂದರೆ ಬಹಳ ಮುದ್ದು. ಆಕೆ ರಾಮಾನುಜನ್ ಅನ್ನು ಪ್ರೀತಿಯಿಂದ ‘ಚಿನ್ನಸ್ವಾಮಿ' ಎಂದು ಕರೆಯುತ್ತಿದ್ದಳು. ರಾಮಾನುಜನ್ ಅವರಿಗೂ ತಾಯಿಯೆಂದರೆ ಪಂಚಪ್ರಾಣ.

* ಬಾಲಕ ರಾಮಾನುಜನ್ ಅವರಿಗೆ ಮೂರು ವರ್ಷ ತುಂಬಿದರೂ ಮಾತನಾಡಲು ಬರುತ್ತಿರಲಿಲ್ಲವಂತೆ. ಹಲವಾರು ಪ್ರಯತ್ನಗಳನ್ನು ಮಾಡಿದರೂ ಫಲ ಕಾಣದೇ ಇದ್ದಾಗ ತಾಯಿ ಅವನನ್ನು ತನ್ನ ತಂದೆಯ ಊರಾದ ಈರೋಡ್ ಗೆ ಕರೆದುಕೊಂಡು ಹೋದರು. ಅಲ್ಲಿ ಅಜ್ಜನ ಆರೈಕೆಯಲ್ಲಿ ಬೆಳೆದ ರಾಮಾನುಜನ್ ಬಹುಬೇಗನೇ ಮಾತನಾಡಲು ಕಲಿತರು. ಅವರ ಅಕ್ಷರಾಭ್ಯಾಸವೂ ಅಲ್ಲೇ ನಡೆಯಿತು.

* ಗಣಿತ ಒಂದು ವಿಷಯ ಬಿಟ್ಟರೆ ಉಳಿದೆಲ್ಲಾ ವಿಷಯಗಳಲ್ಲಿ ರಾಮಾನುಜನ್ ಜ್ಞಾನ ಶೂನ್ಯ. ಈ ಕಾರಣದಿಂದಲೇ ತನ್ನ ೧೭ನೇ ವಯಸ್ಸಿನಲ್ಲಿ ಎಫ್ ಎ ಪರೀಕ್ಷೆಯನ್ನು ಪಾಸು ಮಾಡಲಾಗದೇ, ಮನೆ ಬಿಟ್ಟು ಹೊರಟೇ ಹೋಗಿದ್ದರು ರಾಮಾನುಜನ್. ಇವರು ಕಾಣಿಸದೇ ಇದ್ದ ಗಾಬರಿಯಲ್ಲಿ ಇವರ ತಂದೆ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರಂತೆ. ಮದರಾಸು, ತಿರುಚನಾಪಳ್ಳಿ ಎಲ್ಲಾ ಹುಡುಕಾಡಿ ಬಂದರೂ ರಾಮಾನುಜನ್ ಸಿಗಲಿಲ್ಲ. ಕೊನೆಗೆ ವಿಶಾಖಪಟ್ಟಣದಲ್ಲಿ ಇದ್ದ ಬಗ್ಗೆ ಸುಳಿವು ಸಿಕ್ಕಿ ಅಲ್ಲಿಗೆ ಹೋಗಿ ಕರೆದುಕೊಂಡು ಬಂದರಂತೆ.

* ಸದಾ ಕಾಲ ಗಣಿತದ ಬಗ್ಗೆಯೇ ಚಿಂತಿಸುತ್ತಿದ್ದ ರಾಮಾನುಜನ್ ನಿದ್ರೆ ಮಾಡುತ್ತಿದ್ದಾಗಲೂ ನಡುರಾತ್ರಿ ಎದ್ದು ಬರೆಯಲು ಕೂಡುತ್ತಿದ್ದರಂತೆ. ಈ ರಾತ್ರಿಯಲ್ಲಿ ಏನನ್ನು ಬರೆಯುತ್ತೀಯಾ ಎಂದು ಕೇಳಿದರೆ ‘ಈಗ ಹೊಳೆದ ವಿಷಯ ಬೆಳಿಗ್ಗೆ ಎದ್ದಾಗ ಮರೆತುಹೋದರೆ ಕಷ್ಟ ಎಂದು ಈಗಲೇ ಬರೆಯುತ್ತಿದ್ದೇನೆ' ಎನ್ನುತ್ತಿದ್ದನಂತೆ. 

* ಇಂಗ್ಲೆಂಡಿಗೆ ಹೋದಾಗ ರಾಮಾನುಜನ್ ಅವರಿಗೆ ಅಲ್ಲಿಯ ವಾತಾವರಣ ಹೊಂದಿಕೆಯಾಗದ ಕಾರಣ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರಂತೆ. ಅನಾರೋಗ್ಯವಾದಾಗ ಆಸ್ಪತ್ರೆ ಸೇರುವುದು, ಗುಣವಾದಾಗ ಹೊರಬರುವುದು ಇದು ನಿಯಮಿತವಾಗಿ ನಡೆಯುತ್ತಿದ್ದ ಕಾರಣದಿಂದ ಬೇಸತ್ತು ೧೯೧೮ರಲ್ಲಿ ಒಂದು ದಿನ ರಾಮಾನುಜನ್ ರೈಲು ಹಳಿಗಳ ನಡುವೆ ಹೋಗಿ ಮಲಗಿದರು. ಆದರೆ ರೈಲಿನ ಗಾರ್ಡ್ ನ ಸಮಯ ಪ್ರಜ್ಞೆಯಿಂದ ರೈಲು ರಾಮಾನುಜನ್ ಮೇಲೆ ಹರಿದು ಹೋಗುವುದು ತಪ್ಪಿತು. ವೇಗವಾಗಿ ಬರುತ್ತಿದ್ದ ರೈಲನ್ನು ಆತ ತಡೆಯಲು ಪ್ರಯತ್ನಿಸಿದಾಗ ಅದು ಬಹಳ ಕಷ್ಟದಿಂದ ರಾಮಾನುಜನ್ ಅವರಿಂದ ಕೇವಲ ೨-೩ ಅಡಿಗಳಷ್ಟು ದೂರದಲ್ಲಿ ನಿಂತಿತು. ಇದನ್ನು ಆತ್ಮಹತ್ಯಾ ಪ್ರಯತ್ನ ಎಂದು ಪೋಲೀಸರು ದಾಖಲು ಮಾಡಿದರು. ಈ ಸಂದರ್ಭದಲ್ಲಿ ರಾಮಾನುಜನ್ ಅವರನ್ನು ಇಂಗ್ಲೆಂಡಿಗೆ ಕರೆಯಿಸಿದ್ದ ಖ್ಯಾತ ಗಣಿತಜ್ಞ ಹಾರ್ಡಿಯವರು ತಮ್ಮ ಶಿಫಾರಸ್ಸಿನಿಂದ ಬಿಡಿಸಿಕೊಂಡು ಬಂದರು. 

* ೧೭೨೯ ಎಂಬ ಸಂಖ್ಯೆಯನ್ನು ರಾಮಾನುಜನ್ ಸಂಖ್ಯೆ ಎಂದು ಕರೆಯುತ್ತಾರೆ. ಎರಡು ಘನಗಳ ಮೊತ್ತವನ್ನು ಬೇರೆ ಬೇರೆ ರೀತಿಯಲ್ಲಿ ನಿರೂಪಿಸಬಹುದಾದ ಸಂಖ್ಯೆಗಳನ್ನು ಟ್ಯಾಕ್ಸಿಕ್ಯಾಬ್ ಸಂಖ್ಯೆಗಳೆಂದು ಕರೆಯುತ್ತಾರೆ.

* ರಾಮಾನುಜನ್ ಅವರ ತಾಯಿ ಮತ್ತು ಹೆಂಡತಿ ನಡುವಿನ ಸಂಬಂಧಗಳು ಅಷ್ಟೊಂದು ಮಧುರವಾಗಿರಲಿಲ್ಲ. ರಾಮಾನುಜನ್ ಇಂಗ್ಲೆಂಡಿಗೆ ತೆರಳಿದಾಗ ಅವರ ಪತ್ನಿ ಭಾರತದಲ್ಲೇ ಉಳಿಯುತ್ತಾರೆ. ಅವರು ಇಂಗ್ಲೆಂಡಿಗೆ ಹೋಗಿದ್ದರೆ ರಾಮಾನುಜನ್ ಅವರನ್ನು ಆರೈಕೆ ಮಾಡಲು ಸುಲಭವಾಗುತ್ತಿತ್ತು. ರಾಮಾನುಜನ್ ಶುದ್ಧ ಸಸ್ಯಾಹಾರಿಯಾಗಿದ್ದುದರಿಂದ ಅವರಿಗೆ ಇಂಗ್ಲೆಂಡಿನಲ್ಲಿ ಆಹಾರದ ಸಮಸ್ಯೆಯೂ ಆಯಿತು. ರೋಗಗ್ರಸ್ಥರಾಗಿ ಭಾರತಕ್ಕೆ ರಾಮಾನುಜನ್ ಹಿಂದಿರುಗಿದಾಗ ಮಾತ್ರ ಅವರ ತಾಯಿ, ಸೊಸೆಯೂ ಇಂಗ್ಲೆಂಡಿಗೆ ಹೋಗಿದ್ದರೆ ಚೆನ್ನಾಗಿತ್ತು ಎಂದು ಅಂದುಕೊಂಡರಂತೆ.

* ರಾಮಾನುಜನ್ ಅವರ ಮಡದಿಗೆ ಸರಿಯಾಗಿ ಅವರ ಸಾಂಗತ್ಯ ದೊರೆತದ್ದು ಬದುಕಿನ ಕೊನೆಯ ವರ್ಷದಲ್ಲಿ ಮಾತ್ರ. ರೋಗಗ್ರಸ್ಥರಾಗಿ ಹಾಸಿಗೆ ಹಿಡಿದಿದ್ದರೂ ರಾಮಾನುಜನ್ ಅವರಿಗೆ ಗಣಿತದ ಸಮಸ್ಯೆಗಳದ್ದೇ ಚಿಂತೆಯಾಗಿತ್ತು. ಊಟ-ನಿದ್ರೆ ಬಿಟ್ಟು ಗಣಿತದ ಬಗ್ಗೆಯೇ ಯೋಚನೆ ಮಾಡುತ್ತಿದ್ದರು ಎನ್ನುತ್ತಾರೆ ಅವರ ಪತ್ನಿ ಜಾನಕಿ ಅಮ್ಮಾಳ್.

* ಬಹುತೇಕರು ತಿಳಿದಂತೆ ರಾಮಾನುಜನ್ ಅವರು ಕ್ಷಯರೋಗಕ್ಕೆ ತುತ್ತಾಗಿ ನಿಧನ ಹೊಂದಿದರು ಎಂದು. ಆದರೆ ೧೯೯೪ರಲ್ಲಿ ರಾಯಲ್ ಸೊಸೈಟಿಯ ವಾರ್ತಾಪತ್ರಿಕೆಯಲ್ಲಿ ಪ್ರಕಟವಾದಂತೆ ರಾಮಾನುಜನ್ ಸತ್ತದ್ದು ಕ್ಷಯದಿಂದಲ್ಲ ಬದಲಾಗಿ ಒಂದು ಬಗೆಯ ಪಿತ್ತಕೋಶದ ರೋಗದಿಂದಾಗಿ. ಆಗಿನ ಕಾಲದಲ್ಲೇ ಅಂದರೆ ೧೯೧೭ರಲ್ಲಿ ಈ ಕಾಯಿಲೆಗೆ ‘ಎಮಟೇನ್' ಎಂಬ ಔಷಧವನ್ನು ಬಳಸಿದ್ದರೆ ರಾಮಾನುಜನ್ ಚೇತರಿಸಿಕೊಳ್ಳುವ ಸಾಧ್ಯತೆ ಇತ್ತಂತೆ. ಆದರೆ ವಿಧಿಯ ಚಿತ್ತ ಬೇರೆಯೇ ಇತ್ತು. ಅತ್ಯಂತ ಪ್ರತಿಭಾವಂತ ಗಣಿತಜ್ಞನೊಬ್ಬ ಕೇವಲ ೩೨ನೇ ವಯಸ್ಸಿಗೇ ಇಹಲೋಕ ತ್ಯಜಿಸಿದ. ಅವರಿಂದ ಬರಬಹುದಾದ ಅನೇಕ ಕ್ಲಿಷ್ಟಕರ ಸಮಸ್ಯೆಗಳ ಪರಿಹಾರಗಳು ಅವರ ಜೊತೆಯೇ ಮಣ್ಣಾಗಿ ಹೋದವು. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ