ನಿರಂತರ ಕುಣಿತ!

ನಿರಂತರ ಕುಣಿತ!

ಬದುಕೆಂಬ ಸಂತೆ 
ಉಟ್ಟುಡಲು ಚಿಂತೆ
ಮರೆಸಲು ಬೇಕಂತೆ
ಕಟ್ಟೇನೇನೆಲ್ಲ ಕಂತೆ!

ದೊಂಬರಾಟ ಡೋಲೆ
ನಿತ್ಯ ಜೀವನದ ಶೂಲೆ
ಕೋಲ ತೂಗಿದವರೆಷ್ಟೊ
ಕಾಲ್ಜಾರಿ ಸಾಗಿದವರೆಷ್ಟೊ!

ಇಡಿ ಜಗನ್ನಾಟಕ ರಂಗ
ನೋಡೆಷ್ಟೊಂದು ಪ್ರಸಂಗ
ಜಡಿಮಳೆಗು ಕುಸಿವ ಜಗ
ನೆಲೆ ಕಾಣುವುದ್ಯಾವಾಗ!

ಹರಕೆ ಆಲದಮ್ಮಾ ಮಾರಿ 
ಭಯಕೆ ಕೈ ಕತ್ತೆಲ್ಲ ಪರಾರಿ
ಒಪ್ಪತ್ತಿದ್ದೂ ಕಟ್ಟಿರೆ ಮುಡಿಪು
ಹೊಟ್ಟೆಗಿಂತ ಹೊರಗುಡುಪು! 

ಯಾರ ಹೆದರಿಕೆಗೊ ಕಾಣೆ
ಬದುಕೆ ಅವರಿವರ ಹೊಣೆ
ಅನುಭವಿಸಿದರೂ ಬವಣೆ
ಸರಿತಪ್ಪು ಅವನದೆ ತಾನೆ!

ನಮ್ಮ ನಮ್ಮಯಾ ಬದುಕು
ಬದುಕಲೂ ಎಷ್ಟಿವೆ ನೂಕು
ಬದುಕಬಿಡಬಾರದೆ ಬಾಳು
ಕಾಡುವಬುದ್ಧಿ ಮನೆಹಾಳು!

ಸಾಗಿದೆ ನಿರಂತರ ಕುಣಿತ
ಅವರಿವರೆಲ್ಲರ ಓಲೈಸುತ
ಅವ ಬರೆದಿಟ್ಟವನೆಲ್ಲ ಗಣಿತ
ನೋಡೆ ತುಟಿಯಂಚೆ ನಗುತ!

- ನಾಗೇಶ ಮೈಸೂರು, ಸಿಂಗಪುರದಿಂದ

Comments

Submitted by nageshamysore Wed, 06/12/2013 - 07:12

In reply to by Premashri

ಪ್ರೇಮಾಶ್ರಿಯವರೆ, ಗಣಿತ ಅವನದಾದರೂ ನಮ್ಮ ಲೆಕ್ಕಾಚಾರವೆ ನಡೆದೀತೆಂಬ ಕುಣಿತವಂತೂ ನಿಲ್ಲದು :-) - ಪ್ರತಿಕ್ರಿಯೆಗೆ ಧನ್ಯವಾದಗಳು, ನಾಗೇಶ ಮೈಸೂರು, ಸಿಂಗಪುರದಿಂದ
Submitted by kavinagaraj Tue, 06/11/2013 - 15:53

ನಮ್ಮ ಶಿಲ್ಪಿಗಳು ನಾವೇ! ನಮ್ಮ ವಿಗ್ರಹವನ್ನು ರೂಪಿಸಲು ಹೊರಗಿನ ಶಿಲ್ಪಿಗಳೂ ಇದ್ದೇ ಇರುತ್ತಾರೆ! ಆ ಉಳಿಯ ಪೆಟ್ಟುಗಳನ್ನು ಸಹಿಸಬೇಕಷ್ಟೇ!!
Submitted by nageshamysore Wed, 06/12/2013 - 07:19

In reply to by kavinagaraj

ಕವಿ ನಾಗರಾಜರೆ, ನಿಮ್ಮ ಮಾತು ನಿಜ. ಉಳಿಪೆಟ್ಟನ್ನು ಸಹಿಸಿ ಶಿಲ್ಪಿಗಳಾಗಿ ಹೊರಹೊಮ್ಮುವ ಸಹನೆ ಎಲ್ಲರಿಗೂ ಇರುವುದಿಲ್ಲ ಈ ಅವಸರದ ಜಗದಲ್ಲಿ. ಆದರೆ ಜೀವನ ಕಲಿಸುವ ಪಾಠ ಹೇಗೊ ಒಂದು ರೀತಿ ಎಲ್ಲರನ್ನು ಕುಣಿಸುವ ಪರಿಯೆ ಸೋಜಿಗ  - ಪ್ರತಿಕ್ರಿಯೆಗೆ ಧನ್ಯವಾದಗಳು, ನಾಗೇಶ ಮೈಸೂರು, ಸಿಂಗಪುರದಿಂದ
Submitted by venkatb83 Wed, 06/12/2013 - 15:04

"ಅವ ಬರೆದಿಟ್ಟವನೆಲ್ಲ ಗಣಿತ ನೋಡೆ ತುಟಿಯಂಚೆ ನಗುತ!" ಈ ಸಾಲುಗಳು ಯಾಕೋ ನನಗೆ ಇತ್ತೀಚಿನ ಭಟ್ಟರ ಚಿತ್ರ- ಡ್ರಾಮ -ಹಾಡು ಗೊಂಬೆ ಅಡ್ಸೋನು ನೆನಪಿಸ್ತು .. ಕವನ ಸೂಪರ್ ಆಗಿದ್ದು ಅರ್ಥವತ್ತಾಗಿದೆ .. ನೀವ್ ಬರಹಗಳ ಎಲ್ಲ ವಿಭಾಗಗಳಲ್ಲಿ ಒಳ್ಳೆ ಪರಿಣಿತಿ ಗಳಿಸಿರುವಿರಿ .. ಶುಭವಾಗಲಿ \।/
Submitted by nageshamysore Thu, 06/13/2013 - 03:09

In reply to by venkatb83

ಸಪ್ತಗಿರಿಯವರೆ, ನಿಮ್ಮಂತಹವರ ಕೈಲಿ 'ಸೈ' ಎನಿಸಿಕೊಳ್ಳುವುದಕ್ಕಿಂತ ಭಾಗ್ಯ ಮತ್ತೇನಿದೆ ಹೇಳಿ? ನಿಮ್ಮ ಪ್ರೋತ್ಸಾಹ, ಬೆಂಬ ಲಗಳೆ ಈ ಬರಹದ ವ್ಯವಸಾಯಕ್ಕೆ ನಿರಂತರ ಸ್ಪೂರ್ತಿ. ಹೀಗೆ ಮೆಚ್ಚಿ ಪ್ರೋತ್ಸಾಹಿಸಿ ಮತ್ತು ತಪ್ಪುಗಳಿದ್ದರೆ ತಿದ್ದಿ ಬೆಳೆಸಿ. ನಿಮ್ಮ ಪ್ರತಿಕ್ರಿಯೆಗೆ ವಿನಮ್ರ ಧನ್ಯವಾದಗಳು :-) ನಾಗೇಶ ಮೈಸೂರು, ಸಿಂಗಪುರದಿಂದ
Submitted by partha1059 Thu, 06/13/2013 - 11:10

ನಾಗೇಶಮೈಸೂರು ರವರಿಗೆ ನಮಸ್ಕಾರಗಳು ನೀವು ಕವನ ವಿಭಾಗದಲ್ಲು ಪರಿಣಿತಿ ಇರುವವರು. ಚೆನ್ನಾಗಿ ಬರೆಯುತ್ತೀರಿ. ಆದರು ಒಂದು ಪ್ರಶ್ನೆ ಪ್ರಾಸವಿಲ್ಲದೆ ಪದ್ಯ ಬರೆಯಲು ಸಾದ್ಯವಿಲ್ಲವೆ. ಏಕೆ ಈ ರೀತಿ ಬರೆದೆನೆಂದರೆ ಕೆಲವೊಮ್ಮೆ ಪ್ರಾಸ ಹೊಂದಿಸುವದಕ್ಕಾಗಿ ಪದಗಳೆ ಬದಲಾಗುತ್ತವೆ, ಅರ್ಥ ಬದಲಾಗುತ್ತದೆ ನಮ್ಮ ಮನದ ನಿಜವಾದ ಭಾವನೆಗಳು ಪದ್ಯದಲ್ಲಿ ಮೂಡಿಸುವಾಗ ನಮಗೆ ಸಮಾದಾನ ಸಿಗುವದಿಲ್ಲ, ಭಾವದ ಹತ್ತಿರವು ವಿರುದ್ದ ದಿಕ್ಕಿನಲ್ಲೊ ಇರುತ್ತೇವೆ, ಅಂದರೆ ಪ್ರಸಕ್ಕಾಗಿ ನಮ್ಮ ಕವನದಲ್ಲಿ ಹೊಂದಾಣಿಕೆ ತುಂಬಾ ಇರುತ್ತದೆ ಅಲ್ಲವೆ. ಆ ಸಮಸ್ಯೆಯಿಂದ ಹೇಗೆ ಹೊರಬರುವಿರಿ?
Submitted by venkatb83 Thu, 06/13/2013 - 14:32

In reply to by partha1059

ನಾಗೇಶ್ ಅವರ ಪ್ರಾಸಬದ್ಧ ಕವಿತೆ ಚೆನ್ನಾಗಿದೆ - ಅವರ ಪ್ರಾಸಬದ್ಧ ಕವಿತೆಗಳಿಗೆ ಗುರುಗಳು ನೀಡಿದ ಪ್ರತಿಕ್ರಿಯೆ ಓದಿದೆ, ನಿಜ ಪ್ರಾಸ ಪದಗಳನ್ನು ಹುಡುಕುವ ಯತ್ನದಲ್ಲಿ ಆ ತರಹ್ ಅನನಗೆ ಹಲವು ಬಾರಿ ಆಗಿದೆ -ಏನೋ ಬರೆಯಲು ಹೋಗಿ ಏನೋ ಬರೆದದ್ದು ಆಗಿದೆ ....!! ಆದರೂ ಪ್ರಾಸಕ್ಕೆ ತರಾಸ ಪಡಲೇಬೇಕು . ಅದರಲ್ಲೇ ಮಜಾ ಇರೋದು ... !! ಶುಭವಾಗಲಿ ...
Submitted by nageshamysore Thu, 06/13/2013 - 18:50

In reply to by venkatb83

ಸಪ್ತಗಿರಿಗಳೆ ಪ್ರಾಸದ ವ್ಯಾಮೋಹವನ್ನು ಹೀಗೆ ಹೇಳಿಬಿಡೋಣವೆ? :-) ಪ್ರಾಸ ಕೊಡೊ ತ್ರಾಸ ಆಗುತಿದ್ದರೂ ಆಭಾಸ ಬಿಡದಲ್ಲ ವ್ಯಾಮೋಹ ಹಠದ ಹೆಂಡತಿ ತರಹ! - ನಾಗೇಶ ಮೈಸೂರು, ಸಿಂಗಪುರದಿಂದ
Submitted by nageshamysore Thu, 06/13/2013 - 18:33

In reply to by partha1059

ಪಾರ್ಥ ಸಾರ್ ನಮಸ್ಕಾರ. ನೀವ್ಹೇಳಿದ ಪ್ರಾಸದ ಅಭಾಸ ಸಹಜವಾಗಿ ಕಾಡುವ ಭೂತ ; ನನ್ನ ವಿಷಯದಲ್ಲಂತೂ ತುಸು ಪ್ರಾಸದ ಪ್ರೇಮ ಹೆಚ್ಚು ಎನ್ನುವುದೂ ನಿಜ. ನಾನು ಬರೆಯುವ ಕವನ ಸಾಧಾರಣ ಹತ್ತರಿಂದ ಹದಿನೈದು ನಿಮಿಷದಲ್ಲಿ ಒಂದೆ ಓಘದಲ್ಲಿ ಮುಗಿಯುವುದರಿಂದ ಪ್ರಾಸಕ್ಕೆ ತಿಣುಕಾಡಲು ಹೆಚ್ಚು ಸಮಯವಿರುವುದಿಲ್ಲ. ಹೀಗಾಗಿ ಆ ಹೊತ್ತಿನಲ್ಲಿ ತೋಚಿದ್ದು ಸೂಕ್ತವಾಗೆ ಕಂಡರೆ ಸರಿ - ಹಾಕಿ ಮುಂದುವರೆಸುತ್ತೇನೆ. ಅದಕ್ಕೂ ಹೆಚ್ಚು ತಿಣುಕಾಡಿಸಿದರೆ ಆ ಸಾಲನ್ನೆ ಕಿತ್ತು ಹೊಸ ಸಾಲಿಗೆ ಮೊರೆ ಹೋಗುತ್ತೇನೆ. ಇಷ್ಟೆಲ್ಲಾ ಆದರೂ, ಆಭಾಸಗಳಾಗದೆಂದು ಹೇಳುವಂತಿಲ್ಲ - ಬಹುಶಃ ಅಭಾಸ ಕಡಿಮೆಯಾಗಬಹುದೇನೊ ಅಷ್ಟೆ. ನನ್ನ ಅನಿಸಿಕೆಯಲ್ಲಿ ಪ್ರಾಸಕ್ಕೆ 'ಮಾಸ್ ಅಫೀಲ್' ಜಾಸ್ತಿ - ಒಂದು ರೀತಿ ಗುಣುಗುಣಿಸಿಕೊಂಡು ಹೋಗುತ್ತದೆ. ಹೆಚ್ಚು ಸುಲಭದಲಿ ಎಲ್ಲ ಸ್ತರಗಳನ್ನು  ತಲುಪಲು ಸಹಕಾರಿಯೆನಿಸುತ್ತದೆ. ಹೀಗೆ ಪ್ರಾಸದ ಪ್ರಸವವೆ ಅತಿಯಾಯ್ತೆಂದೆನಿಸಿದಾಗ, ಅದರಿಂದ ತಾತ್ಕಾಲಿಕವಾಗಿಯಾದರೂ ಹೊರಬರುವ ಕಿರು ಯತ್ನವಾಗಿ ಪ್ರಾಸರಹಿತ ಕವನಕ್ಕೂ ಪ್ರಯತ್ನಿಸಿದ್ದುಂಟು - ನನ್ನ ವೈಯಕ್ತಿಕ ಮಟ್ಟದಲ್ಲಿ ನನಗೂ ಪ್ರಾಸ ಪ್ರಿಯವಾದರೂ. ನನ್ನ ಕೆಲವು ಕವಿತೆಗಳು - ಉದಾಹರಣೆಗೆ 'ಸೃಷ್ಟಿ ರಹಸ್ಯ' ಪ್ರಾಸಕ್ಕೆ ತುಸು ಕಡಿಮೆ ಪ್ರಾಸಕ್ಕೆ ಒತ್ತು ಕೊಟ್ಟ ಕವನ - ಪ್ರತಿಸಾಲಿನ ಬದಲು ಪ್ರಾಸ ಎರಡು ಸಾಲಿಗೊಮ್ಮೆ ಕಾಣಿಸಿಕೊಳ್ಳುತ್ತದೆ (ಈ ಲಿಂಕು ನೋಡಿ: http://sampada.net/… ).  ಈಚೆಗೂ ಪ್ರಾಸರಹಿತ ನಿಟ್ಟಿನಲ್ಲಿ ಪ್ರಯತ್ನಿಸಿದ್ದು ಉಂಟು - ಚೆನ್ನಿದೆಯೊ ಇಲ್ಲವೊ ಗೊತ್ತಿಲ್ಲ, ಸದ್ಯದಲ್ಲೆ ಒಂದೆರಡು ಸಂಪದದಲ್ಲಿ ಹಾಕುವೆ. ನೋಡುವ ಸುಮಾರಾಗಿಯಾದರೂ ಇರುವುದೇ ಎಂದು :-) ಒಟ್ಟಾರೆ ಸಾರಂಶದಲ್ಲಿ ಹೇಳುವುದಾದರೆ - ಪ್ರಾಸ ಅರ್ಥದ ಪರಿಧಿಯಲ್ಲಿ ಸುಲಲಿತವಾಗಿ ಬರುತ್ತಿದ್ದರೆ ಸರಿ, ಬಲವಂತದಿಂದ ತುರುಕಿದಂತಾಗಬಾರದು. ಆದರೆ 'ಹೆತ್ತವರಿಗೆ ಹೆಗ್ಗಣ ಮುದ್ದು' ಅನ್ನುವಂತಾಗಿ ದೋಷ ಬರೆದವನ ಕಣ್ಣಿಗಿಂತ ಓದುಗನಿಗೆ ಕಾಣುವುದೆ ಹೆಚ್ಚು! ನಿಮ್ಮ ಪ್ರಾಸದ ಕುರಿತಾದ ಪ್ರಶ್ನೆಗೆ ತುಂಬಾ ಧನ್ಯವಾದಗಳು - ಅದರಿಂದ ಪ್ರಾಸರಹಿತ ನಿಟ್ಟಿನಲ್ಲೂ ತುಸು ಚಿಂತನೆ ಮಾಡಲು ಪ್ರೇರೇಪಣೆ ಸಿಕ್ಕಿದಂತಾಗಿದೆ! - ನಾಗೇಶ ಮೈಸೂರು, ಸಿಂಗಾಪುರದಿಂದ
Submitted by ಗಣೇಶ Thu, 06/13/2013 - 23:59

In reply to by partha1059

ಪಾರ್ಥರೆ,-"ಕವನ" ಹೆಣ್ಣು. ತಲೆಯಿಂದ ಕಾಲ್ಬೆರಳವರೆಗೆ ಆಭರಣಗಳನ್ನು,ಹೂ ಕೈಬಳೆ, ಕಾಲ್ಗೆಜ್ಜೆ ಹಾಕ್ಕೊಂಡು, "ಪ್ರಾಸ"ಬದ್ಧವಾಗಿ ನಡಕೊಂಡು ಬಂದರೇ ಚಂದ. ನಿರಾಭರಣಳಾಗಿ, ಕೂದಲು ಕೆದರಿಕೊಂಡು, ಭಾವನೆಗಳಿಂದ ತುಂಬಿ ಅಳುಮುಂಜಿ... ಈ ಸಮಸ್ಯೆಯಿಂದ ಹೇಗೆ ಹೊರಬರುವಿರಿ? :) ನಮ್ಮ "ನಾವಡ"ರು ನಿನ್ನೆ ಅಧ್ವಾನಿ ಬಗ್ಗೆ ಲೇಖನದಲ್ಲಿ ಹೇಳಿದ್ದರಲ್ಲಾ- "ಅಧ್ವಾನಿ ವಾಜಪೇಯಿ ಆಗಲು ಹೋದದ್ದೇ ಇಷ್ಟೆಲ್ಲಾ ಅಧ್ವಾನಕ್ಕೆ ಕಾರಣ" ಎಂದು. ಆಸುಹೆಗ್ಡೆಯವರ ಹಾಗೇ ನಾಗೇಶರದ್ದೂ ಪ್ರಾಸಬದ್ಧ ಕವನ ಸ್ಟೈಲ್. ಪ್ರಾಸಗಳು ಒತ್ತಾಯದಿಂದಲ್ಲ, ತನ್ನಷ್ಟಕ್ಕೇ ಅವರ ಪೆನ್ನಿನ ತುದಿಗೆ ಹರಿದು ಬರುವುದು. ಬೇರೆ ತರಹ ಕವನ ಬರೆಯಲು ಪ್ರಯತ್ನಿಸುವುದು ಬೇಡ ಅನ್ನುತ್ತಿಲ್ಲ. ನಿಮ್ಮ ಸಮಸ್ಯೆಯೂ ಸರಿಯೇ. ಪ್ರಾಸಕ್ಕಾಗಿ ಹೊಂದಿಸಿದ ಪದಗಳು ಭಾವನೆಗೆ ಸರಿಯಾಗಿರುವುದಿಲ್ಲ ಅಂತ. ಸರಿಯಾಗುವವರೆಗೆ ಬಿಡಬೇಡಿ. ಕನ್ನಡ ಇಂಗ್ಲೀಷ್ ಹಿಂದಿ ಉರ್ದು... ಎಲ್ಲಿಂದಾದರೂ ಒಂದು ಶಬ್ದ ಸಿಗದಾ?ಎಳಕೊಂಡು ಬಂದು ಸೇರಿಸಿ. :)
Submitted by nageshamysore Fri, 06/14/2013 - 11:16

In reply to by ಗಣೇಶ

ಗಣೇಶ್ ಜಿ, ಕವನ ಹೆಣ್ಣು ಅನ್ನೊ ಭಾವನೆಯಲ್ಲೆ ಒಂದು ಕವನದಲಿ 'ಕವನೆ' ಅಂತಲೂ ಕರೆದುಬಿಟ್ಟಿದ್ದೇನೆ :-) ನೀವಂದ ಹಾಗೆ ಪದ ಪ್ರಾಸಗಳು ಸರಾಗವಾಗಿ ಹರಿದು ಬರುತ್ತಿರುವುದಂತೂ ಹೌದು. ಪಾರ್ಥರ ಮಾತುಗಳು ಸಹ ನಿಜ - ಪ್ರಾಸದ ಹದ ತಪ್ಪದಂತೆ ಎಚ್ಚರದಿಂದಿರಿಸುತ್ತದೆ, ಅವರ ಸಲಹೆ :- - ನಾಗೇಶ ಮೈಸೂರು, ಸಿಂಗಪೂರದಿಂದ