ನಿಷ್ಪಾಪಿ ಸಸ್ಯಗಳು (ಭಾಗ ೫೧) - ರಥ ಪುಷ್ಪ
ಸದ್ಯಕ್ಕೀಗ ಮಳೆ ಹನಿ ಭೂಮಿ ಸೋಕಿದೆ. ವಸುಧೆಯ ಒಡಲಿಗೆ ಬಿದ್ದ ತರಹೇವಾರಿ ಬೀಜಗಳು ಮೊಳಕೆಯೊಡೆಯಲಾರಂಭಿಸಿವೆ. ಬಿಸಿಲ ಝಳ ಸಹಿಸಲಾರದೆ ಜೀವ ಕೈಯಲ್ಲಿ ಹಿಡಿದು ಸತ್ತಂತೆ ನಿಂತಿದ್ದ ತರತರದ ಗಿಡಗಳು ಪುಳಕಗೊಂಡು ಚಿಗುರಿವೆ... ಈ ಸಾಲಿನಲ್ಲಿ ನೀವೀಗ ಮಾರ್ಗದ ಬದಿಗಳಲ್ಲಿ , ತೋಟ ಗದ್ದೆಗಳ ಅಂಚುಗಳಲ್ಲಿ , ಎಲ್ಲಿ ಪಾಳು ಬಿದ್ದ ಭೂಮಿಯಿದೆಯೋ ಅಲ್ಲೆಲ್ಲ ಕಳೆ ಸಸ್ಯವೆಂದು ಜನರಿಂದ ಜರಿಯಲ್ಪಡುವ ರಥ ಪುಷ್ಪದ ಗಿಡಗಳು ಚಿಗುರಿ ನಿಂತುದನ್ನು ಕಾಣಬಹುದು.
ಜಾತ್ರೆಗಳಲ್ಲಿ ಸರ್ವಾಲಂಕೃತ ರಥವನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾದರೆ ಈ ರಥ ಹೂವಿನ ಗಿಡಗಳ ಪುಷ್ಪರಥಗಳನ್ನು ಕಾಣುವುದೂ ಮನಸ್ಸಿಗೆ ಅಹ್ಲಾದಕರ ವಿಚಾರವಾಗಿದೆ. ಕಿರೀಟ ಪುಷ್ಪ, ಛತ್ರಿ ಹೂ , ರಥ ಪುಷ್ಪ , ಆರತಿ ಚೆಂಡು ಹೂ ಎಂದೆಲ್ಲಾ ಕರೆಸಿಕೊಳ್ಳುವ ಈ ಸಸ್ಯವನ್ನು ತುಳು ಭಾಷೆಯಲ್ಲಿ ತೇರ್ ಪೂ ಎಂದೂ ಆಂಗ್ಲ ಭಾಷೆಯಲ್ಲಿ ಪಗೋಡಾ ಫ್ಲವರೆಂದೂ ಕರೆಯುವರು. ಸಸ್ಯ ಶಾಸ್ತ್ರೀಯ ಹೆಸರು ಕ್ಲೆರೋಡೆಂಡ್ರಮ್ ಪೆನಿಕ್ಯುಲೇಟಮ್ ( Clerodendrum Paniculatum) ಆಗಿದ್ದು ವರ್ಬಿನೇಸಿಯೆ (Verbenaceae) ಕುಟುಂಬಕ್ಕೆ ಸೇರಿದೆ. ಭಾರತ, ಚೀನಾ, ಬಾಂಗ್ಲಾದೇಶ ಗಳಲ್ಲಿ ಹರಡಿರುವ ರಥಪುಷ್ಪವು ಏಷ್ಯಾ ಮೂಲದ ಸಸ್ಯವಾಗಿದೆ.
ನಾಲ್ಕಾರು ಅಡಿ ಎತ್ತರ ಬೆಳೆಯುವ ಈ ನಿಷ್ಪಾಪಿ ಸಸ್ಯವನ್ನು ರೈತರು ಕಳೆಗಿಡವೆಂದೇ ಪರಿಗಣಿಸಿ ನಾಶ ಪಡಿಸಲು ಪ್ರಯತ್ನಿಸುತ್ತಾರೆ. ಬೀಜಗಳಿಂದ ಹೊಸ ಸಸ್ಯ ಹುಟ್ಟುವುದು ವಿರಳವಾದರೂ ರೈತರ ತಾಳ್ಮೆ ಪರೀಕ್ಷಿಸಲೋ ಎಂಬಂತೆ ಮಣ್ಣಿನಡಿಯಲ್ಲಿ ಹರಡಿದ ಬೇರಿನ ಗಿಣ್ಣುಗಳಲ್ಲಿ ಸಸಿಯೊಡೆದು ಆವರಿಸಿಕೊಳ್ಳುತ್ತದೆ. ಹೃದಯದಾಕಾರದ ಹತ್ತಿಂಚಿನಷ್ಟು ಅಗಲಗಲದ ಎಲೆಗಳ ನಡುವೆ ಗಿಡದ ತುದಿಯಲ್ಲಿ ಬರುವ ಹೂ ಗುಚ್ಛ ವೃತ್ತಾಕಾಕಾರದ ಮೆಟ್ಟಿಲುಗಳಂತೆ ಹಂತಹಂತವಾಗಿ ಮಧ್ಯದ ಕಾಂಡಕ್ಕೆ ಸುತ್ತುವರಿದಿರುತ್ತದೆ. ತನ್ನ ಸುತ್ತಲೂ ಹರಡಿರುವ ಕವಲುಗಳಲ್ಲೂ ಪುಷ್ಪರಥಗಳು ಸೊಗಸಾಗಿ ಮೈದುಂಬಿಕೊಳ್ಳುತ್ತವೆ. ಹಂತ ಹಂತವಾಗಿ ಪಿರಮಿಡ್ ನಂತೆ, ಕೊಡೆಯಂತೆ ಮೇಲೇರುವ ಹೂಗೊಂಚಲಲ್ಲಿರುವ ಮೊಗ್ಗುಗಳು ಒಮ್ಮೆಲೇ ಅರಳುವುದಿಲ್ಲ. ಕೆಂಪು, ನಸು ಕಿತ್ತಳೆ ಬಣ್ಣದ ಐದೆಸಳಿನ ಹೂವು ಅರ್ಧ ಇಂಚು ಉದ್ದವಿದ್ದು ಮಧ್ಯೆ ರತ್ನಗಂಧಿ ಹೂವಿನಂತೆ ಉದ್ದನೆಯ ಕೇಸರಯುಕ್ತ ಶಲಾಕೆಗಳನ್ನು ಹೊಂದಿ ಆಕರ್ಷಕವಾಗಿರುತ್ತದೆ. ಹಲವು ದಿನಗಳ ಕಾಲ ಅರಳಿದ ಹೂಗಳು ಉದುರುತ್ತ ಹೊಸ ಹೂಗಳು ಅರಳುತ್ತ ಪಾತರಗಿತ್ತಿಗಳಿಗೆ ಹಬ್ಬದೂಟ ನೀಡುತ್ತವೆ. ಚಿಟ್ಟೆ ಉದ್ಯಾನಗಳಲ್ಲಿ ವಿದೇಶಗಳಲ್ಲೂ ಈ ಸಸ್ಯ ಪ್ರಧಾನವಾಗಿದೆ. ರಾಜನೊಬ್ಬನ ವಜ್ರ ವೈಢೂರ್ಯಗಳಿಂದ ಶೃಂಗರಿಸಲ್ಪ ಕಿರೀಟದಂತೆ ಹಸಿರ ಮುಡಿಗೆ ಚೆಲುವು ತುಂಬುತ್ತದೆ. ಇದರಲ್ಲಿ ತಿಳಿ ಹಳದಿ ಹೂ ಬಿಡುವ ಜಾತಿಯೂ ಇದೆ.
ರಥ ಹೂವಿನ ಶಾಸ್ತ್ರೀಯ ನಾಮ ಕ್ಲೆರೋಡೆಂಡ್ರಮ್. ಎಂದರೆ ಗ್ರೀಕ್ ಭಾಷೆಯಲ್ಲಿ ಲಾಟರಿ ಮರ ಎಂದರ್ಥವಂತೆ..! 1767 ರಲ್ಲಿ ಸ್ವೀಡಿಶ್ ಸಸ್ಯ ವಿಜ್ಞಾನಿ ಕಾರ್ಲ್ ಲೀನಿಯಸ್ ಈ ಗಿಡವನ್ನು ಮೊದಲು ಕಂಡು ಹಿಡಿದು ಈ ಹೆಸರನಿರಿಸಿದನಂತೆ. ಈ ಪುಷ್ಪವನ್ನು ದೀಪಾವಳಿಯಲ್ಲಿ ಬಲೀಂದ್ರನ ಅಲಂಕಾರಕ್ಕೆ, ದೈವ ದೇವರಿಗೆ ಮಾತ್ರವಲ್ಲದೆ ವಿವಿಧ ಹಬ್ಬಗಳಲ್ಲೂ ಬಳಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಈ ಹೂವು ವಿಜೃಂಭಿಸುವಾಗ ಹೊಸ್ತಿಲ ಪೂಜೆ , ಚೂಡಿ ಪೂಜೆಗೆ ಬಹು ಮುಖ್ಯವಾಗುತ್ತದೆ. ಆಟಿ ಅಮಾವಾಸ್ಯೆಯಂದು ಹರಿವ ನೀರಲ್ಲಿ ದಾನ ಬಿಡುವ ಕಾರ್ಯ ನಡೆಯುವಾಗ ರಥಪುಷ್ಪ ಪ್ರಮುಖ ಪಾತ್ರವಹಿಸುತ್ತದೆ. ಶ್ರೀಲಂಕಾ, ಮಲೇಷ್ಯಾ ಗಳಲ್ಲಿ ಅಲಂಕಾರಿಕ ಸಸ್ಯವಾದ ರಥಪುಷ್ಪ ಮಹಿಳೆಯರ ಮುಡಿಯೇರಲೂ ಪ್ರಯತ್ನಿಸುವುದಿದೆ. ಆದರೆ ತುಂಬಾ ತಾಳ್ಮೆ ಬೇಡುವ ಹೂಮಾಲೆಗೆ ಸಮಯವೂ ಸಾಕಷ್ಟು ಬೇಕು.
ಎಲ್ಲೇ ಇದ್ದರೂ ತನ್ನತ್ತ ಸೆಳೆವ ಚೆಲುವು ಪಡೆದ ರಥಪುಷ್ಪದ ಎಲೆ, ಹೂ, ಬೇರುಗಳು ಔಷಧಿಗಾಗಿ ಉಪಯುಕ್ತ ವಾಗಿವೆ. ಎಲೆ ರಸ ಹೊಟ್ಟೆಗೆ ಸೇವಿಸಲಾಗದು, ಆದರೆ ಕೀವು ತುಂಬಿದ, ರಕ್ತ ಹರಿವ ಹುಣ್ಣನ್ನು ಗುಣಪಡಿಸಬಲ್ಲದು. ಹೂವು ರಕ್ತಹೀನತೆ, ನಿದ್ರಾಹೀನತೆ ಹೋಗಲಾಡಿಸಬಲ್ಲದು. ಬೇರು ಹಾವಿನ ವಿಷಕ್ಕೆ ಪ್ರತ್ಯೌಷಧವಾಗಿದೆಯಲ್ಲದೆ ಚರ್ಮದ ಕಾಯಿಲೆ, ಬೆನ್ನುನೋವು, ಊತ, ಗಂಟುನೋವು, ರಕ್ತ ಕಫ, ವಾಂತಿಭೇದಿಗೂ ಶಾಂತಿ ನೀಡುತ್ತದೆ. ಹೀಗಿರುವಾಗ ನಮ್ಮ ಹಿತ್ತಲಲ್ಲೋ, ಮಾರ್ಗದ ಬದಿಯಲ್ಲೋ ಇದ್ದ ಗಿಡಗಳನ್ನೊಂದಿಷ್ಟು ಉಳಿಸೋಣವೆಂದೆಣಿಸುತ್ತಿಲ್ಲವೇ? ಹೌದು.. ಖಂಡಿತವಾಗಿಯೂ ನಾವು ರಥಪುಷ್ಪದ ಜೊತೆಗೊಂದಿಷ್ಟು ಮಾತನಾಡೋಣ. ಸೌಂದರ್ಯ ಕಣ್ತುಂಬಿ ಕೊಳ್ಳೋಣ.
ಚಿತ್ರ-ಬರಹ: ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ