ನಿಷ್ಪಾಪಿ ಸಸ್ಯಗಳು (ಭಾಗ ೭೪) - ಆನೆ ಗೋರಂಟಿ ಗಿಡ
ನರಕ ಚತುರ್ದಶಿಯ ಸಮಯದಲ್ಲಿ ಮನೆಯ ಎಲ್ಲ ಸದಸ್ಯರೂ ಬೆಳಗ್ಗೆ ಬೇಗನೆದ್ದು ತಲೆಗೆ ಮೈಗೆ ಎಣ್ಣೆ ಹಚ್ಚಿ ಬಿಸಿಬಿಸಿ ನೀರು ಸ್ನಾನ ಮಾಡುವ ಮೂಲಕ ದೀಪಾವಳಿ ಆರಂಭಗೊಳ್ಳುತ್ತದೆ. ಹಿಂದಿನ ದಿನವೇ ಬಚ್ಚಲು ಶುಚಿಗೊಳಿಸಿ ಹಂಡೆ ತಂಬಿಗೆಗಳನ್ನು ಫಳಫಳ ಕಾಣುವಂತೆ ತೊಳೆದು, ಹಂಡೆಯ ಕುತ್ತಿಗೆಗೆ ಹೂಮಾಲೆ ಹಾಕಿ ಹಂಡೆಯೊಳಗೆ ನಾಣ್ಯ ಹಾಕಿ ನೀರು ತುಂಬಿಸುತ್ತಿದ್ದ ಗೌಜಿ ಗಮ್ಮತ್ತು ಈ ಕಾಲಘಟ್ಟದಲ್ಲಿ ಬರಿಯ ಪ್ಲಾಸ್ಟಿಕ್ ಹೂವಿನಂತೆ ಕಾಣಿಸುತ್ತಿದೆ.
ನಮ್ಮ ಬಾಲ್ಯದಲ್ಲಿ ದೀಪಾವಳಿಯೆಂದರೆ ನರಕಚತುರ್ದಶಿಯ ಸ್ನಾನದ ಹಂಡೆಗೊಂದು ಹೂ ಮಾಲೆ, ಗೋಪೂಜೆಯಂದು ದನಕರುಗಳ ಕುತ್ತಿಗೆಗೆ ಹೂಮಾಲೆ, ಕೃಷಿ ಉಪಕರಣಗಳನ್ನು ಒಂದೆಡೆಯಿಟ್ಟು ಅಲಂಕರಿಸಲು ಹೂಮಾಲೆ, ಬಲೀಂದ್ರನನ್ನು ಅಲಂಕರಿಸಲು ಹೂಗಳ ಮಾಲೆಗಳನ್ನು ತಯಾರಿಸುವುದೇ ಒಂದು ಹಬ್ಬವಾಗಿತ್ತು!.
ಪೇಟೆಯಲ್ಲಿ ಮಾರಾಟಕ್ಕೆ ಹೂ ಸಿಗುವುದೆಂಬ ಕಲ್ಪನೆಯೇ ಇರದ ನಮಗೆ ಗುಡ್ಡದ ಕೇಪಳ, ಆನೆ ಗೋರಂಟೆ, ಅಗ್ನಿಶಿಖೆ, ಬುಗುಡಿ, ಗೊಂಡೆಹೂ, ಕಲ್ಲು ಹೂಗಳೇ ಆಧಾರವಾಗಿದ್ದವು. ಈ ಆನೆಗೋರಂಟೆ ಹೂವನ್ನು ಯಾವ ಮನೆಯ ಮಕ್ಕಳು ಮೊದಲು ಕೊಯ್ಯುವರೋ ಎಂಬ ಕಾತರ!. ಅದಕ್ಕಾಗಿ ಹೊಂಚುಹಾಕಿ ಬೇಗ ಕೊಯ್ದು ರಾಶಿ ಹಾಕಿ ಮಾಲೆ ಮಾಡುವ ಬಯಕೆಯಲ್ಲಿ ಕೆಲವೊಮ್ಮೆ ನಿದ್ದೆಯೂ ಬಾರದ ಕ್ಷಣಗಳಿದ್ದವು. ಅದೇ "ಹಬ್ಬ" ಎಂದು ಈಗಲೂ ಅನಿಸುತ್ತದೆ.
ಬಳ್ಳಿಯಂತೆ ಕೆಲವೊಮ್ಮೆ ಪೊದೆಯಂತೆ ಹಚ್ಚ ಹಸಿರಿನ ಎಲೆಗಳು ತುಂಬಿದ ಗಿಡದ ತುಂಬಾ ಕಾಣಿಸಿಕೊಳ್ಳುವ ಆನೆಗೋರಂಟೆಯ ಬಣ್ಣ ಬಂಗಾರದ ಹಳದಿ! ಎಂತಹ ಕಲರ್ ಮ್ಯಾಚಿಂಗ್! ಹಸಿರಿನೊಡಲ ಸೀರೆಗೆ ಅದ್ದೂರಿಯಾದ ಬಂಗಾರವರ್ಣದ ಬಾರ್ಡರ್!. ಚಿಟ್ಟೆಯಂತಹ ಐದು ದಳಗಳು. ಮೋಹಕವಾದ ಆ ಹಳದಿ ಬಣ್ಣ ಅಪ್ಯಾಯಮಾನವಾದುದು!
ಗಿಡದ ಶಾಖೆಗಳು ಬುಡದಿಂದಲೇ ಎದುರೆದುರಾದ ನಾಲ್ಕು ಹೊಳಪು ಎಲೆಗಳನ್ನು ಜೊತೆಜೊತೆಯಾಗಿ ಜೋಡಿಸುತ್ತಾ ಹಬ್ಬತೊಡಗಿದರೆ ಮಳೆ ಕಡಿಮೆಯಾಗುತ್ತಿದ್ದಂತೆ ಎಲೆಗಳ ಕಂಕುಳಲ್ಲಿ ಹಾಗೂ ಶಾಖೆಗಳ ತುದಿಗಳಲ್ಲಿ ಎಂಟು ಹತ್ತು ಮೊಗ್ಗುಗಳು ಸಮೂಹಗಳಾಗಿ ಬೆಳೆಯತೊಡಗಿ ಅಹ್ಲಾದಕರವಾಗಿ ಅರಳತೊಡಗುತ್ತವೆ. ಚಿಟ್ಟೆ, ಕೀಟಗಳು, ಪುಟ್ಟ ಪಕ್ಷಿಗಳೂ ಭೇಟಿನೀಡುವ ಕಾಲವದು! ಶಾಖೆಗಳ ತುದಿಗಳಲ್ಲಿ ಹೂವುಗಳರಳಿದರೂ ಹೂವನ್ನು ಬದಿಗಿಟ್ಟು ಗಿಡವು ಮುಂದಕ್ಕೆ ಚಿಗುರೊಡೆದು ಸಾಗುತ್ತದೆ! ಅದೇ ಜೀವನವಲ್ಲವೇ?
ಬಾಲ್ಯದಲ್ಲಿ ಅನಕ್ಷರಸ್ಥೆಯಾದ ನನ್ನಕ್ಕ ರಾಮಾಯಣದ ಕಥೆ ಹೇಳುವಾಗ ಈ ಆನೆಗೋರಂಟೆಯ ಹೂಗಳನ್ನು ತೋರಿಸಿ "ಯುದ್ಧಕಾಲದಲ್ಲಿ ವಾಲಿ ಸುಗ್ರೀವರನ್ನು ಪ್ರತ್ಯೇಕವಾಗಿ ಗುರುತಿಸಲು ಶ್ರೀ ರಾಮ ಸುಗ್ರೀವನಿಗೆ ಗಜಪುಷ್ಪದ ಮಾಲೆ ಹಾಕುತ್ತಾನಂತೆ. ಅದು ಇದೇ ಹೂ.." ಎನ್ನುತ್ತಿದ್ದರು. "ಓ...." ಎಂದು ನಾನು ಹೂ ರಾಶಿ ಕಂಡು ಮೈಮರೆಯುತ್ತಿದ್ದ ಕ್ಷಣಗಳು ಇನ್ನೂ ಹಸಿರಾಗಿವೆ. ಇದು ಪೊದರು ಪೊದರಾಗಿ ಬೆಳೆಯುವ ಸಸ್ಯವಾದುದರಿಂದ ಹೂದಾನಿಯಲ್ಲಿ ಜೋಡಿಸಿದ ಪುಷ್ಪಗಳಂತೆ ಕಾಣಿಸುತ್ತವೆ. ಗದ್ದೆ, ತೋಡು, ರಸ್ತೆಗಳ ಬದಿಗಳಲ್ಲಿ ತಾನೇತಾನಾಗಿ ಬೆಳೆಯುವ ಈ ಸಸ್ಯ ಸ್ವಲ್ಪಮಟ್ಟಿಗೆ ಆಕ್ರಮಣಕಾರಿ. ಕಡಿದರೂ ಮತ್ತೆ ಮತ್ತೆ ಚಿಗುರಬಲ್ಲದು. ಹೂವಿನ ಅಂದಕ್ಕೆ ಮನಸೋತವರು ಎಷ್ಟು ಕಡಿದರೂ ಸ್ವಲ್ಪ ಭಾಗ ಬಿಟ್ಟು ಬಿಡುವರು !
ಕನ್ನಡದಲ್ಲಿ ಗಂಟೆ ಹೂ, ಚಿನ್ನದ ಕಹಳೆ ಹೂ, ತುತ್ತೂರಿ ಬಳ್ಳಿ, ಗಜಪುಷ್ಪವೆಂದು ಹೆಸರುಳ್ಳ ಆನೆಗೋರಂಟೆ Allamanda Cathartica flower ಎಂದು ಶಾಸ್ತ್ರೀಯ ವಾಗಿ ಕರೆಸಿಕೊಳ್ಳುತ್ತದೆ. ಡಾ| ಫ್ರೆಡ್ರಿಕ್ ಅಲ್ಲಮಂಡ್ ನಂತರ ಈ ಹೆಸರು ಬಂದಿದೆ. ಕ್ಯಾಥರ್ಟಿಕಾ ಅಂದರೆ ಇದು ಉಂಟುಮಾಡುವ ಶುದ್ಧೀಕರಣದಿಂದಾಗಿ ಸೇರಿದ ಪದ. ಉಷ್ಣವಲಯದಲ್ಲಿ ಇದನ್ನು ಶುದ್ಧೀಕರಣ ಕ್ಕಾಗಿ ಬಳಸುತ್ತಾರೆ. ಅಪೋಸಿನೇಸಿ ಕುಟುಂಬಕ್ಕೆ ಸೇರಿದ ಈ ಸಸ್ಯ ವೇಗವಾಗಿ ಬೆಳೆಯುವ ಬಳ್ಳಿಯ ರೂಪದ ಪೊದೆ ಸಸ್ಯ. ಒಂದು ಅಥವಾ ಎರಡು ಬೆಳವಣಿಗೆಯ ಋತುಗಳಲ್ಲಿ ದಟ್ಟವಾಗಿ, ಕ್ಷಿಪ್ರವಾಗಿ ಬೆಳೆಯುತ್ತದೆ. ಇದನ್ನು ಪೊದೆ ರೂಪದಲ್ಲಿ ಬೆಳೆಸಬಹುದು. ಮರಗಿಡಗಳ ಬುಡದಲ್ಲಿದ್ದರೆ ನುಸುಳಿಕೊಂಡು ಹತ್ತಿಪ್ಪತ್ತು ಅಡಿಗಳೆತ್ತರ ಏರಿ ನಗಬಲ್ಲದು. ಸಾವಯವ ಮಣ್ಣು, ಸೂರ್ಯನ ನೇರವಲ್ಲದ ಬಿಸಿಲು, ತೇವಾಂಶವಿರುವ ಜಾಗ ಸಿಕ್ಕರೆ ಹಾಯಾಗಿರುತ್ತದೆ. ಇದನ್ನು ಸಾಮಾನ್ಯವಾಗಿ ಗೋಲ್ಡನ್ ಟ್ರಂಪೆಟ್ ಎಂದು ಕರೆಯಲ್ಪಡುವ ಈ ಸಸ್ಯ ಚಿಟ್ಟೆ ತೋಟ, ಮಳೆತೋಟ, ಬರಸಹಿಷ್ಣು ತೋಟಗಳಿಗೆ ಸೂಕ್ತವಾಗಿದೆ. ಇದೊಂದು ಭೂ ದೃಶ್ಯವನ್ನು ವೈಭವೀಕರಿಸುವ ಅಲಂಕಾರಿಕ ಸಸ್ಯ. ಪರದೆಯಂತೆ, ಬೇಲಿಯಂತೆ, ಹಂದರವಾಗಿ ನೆರಳಿಗೆಂಬಂತೆಯೂ ತರಬೇತಿ ನೀಡಿ ಬೆಳೆಸಬಹುದು. ನಿತ್ಯಹರಿದ್ವರ್ಣದ ಸಸ್ಯವಾದ ಇದು ಮಧ್ಯ ಹಾಗೂ ದಕ್ಷಿಣ ಅಮೆರಿಕಕ್ಕೆ ಸ್ಥಳೀಯ ಸಸ್ಯ. ಭಾರತದಾದ್ಯಂತ ಹಾಗೂ ಬ್ರಜಿಲ್, ಏಷ್ಯಾದಲ್ಲೂ ವಿತರಣೆ ಇದೆ. ಆಸ್ಟ್ರೇಲಿಯಾ ದ ತೋಟಗಳಲ್ಲಿ ವ್ಯಾಪಕವಾಗಿ ತುಂಬಿದ್ದು ಹಲವು ತಳಿಗಳ ಅಭಿವೃದ್ಧಿ ಯನ್ನೂ ಮಾಡಲಾಗಿದೆ. ಉತ್ತರ ಕ್ವೀನ್ಸ್ಲ್ಯಾಂಡ್ ನಲ್ಲಿ ವಿಶೇಷ ಜನಪ್ರಿಯ ಹೂವು ಇದಾಗಿದೆ. ಸಾವಿರಾರು ವರ್ಷಗಳ ಮೊದಲೇ ಈ ನಿಷ್ಪಾಪಿ ಸಸ್ಯವಾದ ಆನೆಗೋರಂಟೆ ಎಂಬ ಹೂವನ್ನು ಭಾರತೀಯರು ಗುರುತಿಸಿದ್ದರೂ 1945 ರಲ್ಲಿ ಮೊದಲ ಬಾರಿಗೆ ಸ್ವಾಭಾವಿಕವಾಗಿ ಕ್ವೀನ್ಸ್ ಲ್ಯಾಂಡ್ ನಲ್ಲಿ ದಾಖಲಿಸಲಾಯಿತು. 1992 ರ ಹೊತ್ತಿಗೆ ಇದು ಉತ್ತರ ಕ್ವೀನ್ಸ್ ಲ್ಯಾಂಡ್ ನ ಆರ್ದ್ರಪ್ರದೇಶಗಳಲ್ಲಿ 'ರಸ್ತೆ ಬದಿಯ ಕಳೆ' ಎಂದು ಗುರುತಿಸಲ್ಪಟ್ಟಿತು, ಈಗ ರಾಷ್ಟ್ರೀಯ ಉದ್ಯಾನಗಳಲ್ಲಿ ' ಆಕ್ರಮಣಕಾರಿ" ಎಂದೂ ವಿಶ್ವ ಪರಂಪರೆಯ ಪ್ರದೇಶಗಳಲ್ಲಿ 'ಅನಪೇಕ್ಷಿತ ಸಸ್ಯ' ವೆಂದೂ ದಾಖಲೆಗಳು ಬರೆಯಲ್ಪಟ್ಟಿವೆ. ಬಹುಶ: ಭಾರತೀಯರು ಸಸ್ಯಗಳನ್ನು ಪೂಜಿಸಿದ್ದೇ ಹೆಚ್ಚು.. ದಾಖಲೆಗಳ ಹಿಂದೆ ಬೀಳಲೇ ಇಲ್ಲ!
ಈ ಅಲ್ಲಮಂಡಾ ಕ್ಯಾಥರ್ಟಿಕಾದಲ್ಲಿ ಹಲವು ತಳಿಗಳು ನಮ್ಮ ಊರಿನಲ್ಲೇ ಇವೆ. ಹೊಳೆಯುವ ಹಳದಿ ವರ್ಣದ ಸಾಮಾನ್ಯ ಗಾತ್ರದ ಹೂಗಳು ಎಲ್ಲೆಡೆಯೂ ಕಾಣಿಸಿದರೆ ಅದಕ್ಕಿಂತ ಎರಡು ಮೂರಿಂಚು ಹೆಚ್ಚು ಸುತ್ತಳತೆಯ ಅದೇ ಮುದ್ದಾದ ಹಳದಿ ಹೂಗಳಿವೆ. ಕರವೀರ ಹೂವಿನ ಗಾತ್ರದಷ್ಟೇ ಇರುವ ಹಳದಿ ಹೂಗಳಿವೆ. ಈ ಹೂವಿನ ವಿಶೇಷತೆಯೆಂದರೆ ಪುಟ್ಟ ಗದೆಯಂತೆ ಕಾಯಿಗಳಾಗುತ್ತವೆ.ಗೋಳಾಕಾರದ ಕಾಯಿಯು ಮುಳ್ಳುಗಳಿಂದಾವರಿಸಲ್ಪಟ್ಟಿದೆ. ಒಣಗಿ ಸಿಡಿದಾಗ ಬೀಜಗಳು ದೂರಕ್ಕೆಸೆಯಲ್ಪಡುತ್ತವೆ. ಎರಡು ಮೂರು ಸುತ್ತು ಎಸಳುಗಳು ತುಂಬಿರುವ ಹಳದಿ ಗುಲಾಬಿಯೆಂಬಂತೆ ಭಾಸವಾಗುವ ಹೂಗಳಿವೆ. ಮಾತ್ರವಲ್ಲದೆ ಅಲಂಕಾರಿಕವಾಗಿ ಇತ್ತೀಚೆಗೆ ತಿಳಿ ಗುಲಾಬಿ ವರ್ಣ ಹಾಗೂ ತಿಳಿ ನೇರಳೆ ವರ್ಣದ ಹೂ ಗಿಡಗಳೂ ಕಾಣಸಿಗುತ್ತವೆ.
ಈ ಸಸ್ಯವು ಹಾಲಿನಂತಹ ದ್ರವವನ್ನು ಹೊಂದಿದ್ದು ಜಾನುವಾರು ಹಾಗೂ ಮನುಷ್ಯರಿಗೆ ಎಲೆ ಬಳ್ಳಿ ಹೂವು, ಕಾಯಿ, ತೊಗಟೆ, ಬೇರು ಎಲ್ಲವೂ ಸ್ವಲ್ಪ ವಿಷಕಾರಿಯಾಗಿವೆ. ಚರ್ಮ ಹಾಗೂ ಕಣ್ಣುಗಳನ್ನು ಕೆರಳಿಸಬಲ್ಲದು. ಎಲೆ, ಬೇರುಗಳನ್ನು ಸಾಂಪ್ರದಾಯಿಕ ಔಷಧಗಳಲ್ಲಿ ವಿರೇಚಕ ಹಾಗೂ ಎಮೆಟಿಕ್ ಆಗಿ ಬಳಸುವರು.
ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ