ನುಡಿ ದ್ವಿಭಾಷಾ ತಂತ್ರಾಂಶದ ಕುರಿತ ಸರ್ಕಾರೀ ಸುತ್ತೋಲೆ
ಕನ್ನಡದಲ್ಲಿ ಅದೆಂಥದೋ ದ್ವಿಭಾಷೆಯನ್ನೇ ಮಾನಕವಾಗಿ ಬಳಸಬೇಕೆಂಬ ಆದೇಶ ಹೊರಬಿದ್ದಿದೆಯಂತೆ, ಆಕ್ಷೇಪವೇನಾದರೂ ಇದ್ದಲ್ಲಿ ಇದೇ ೨೧ರೊಳಗೆ ತಿಳಿಸಬಹುದಂತೆ ಎಂಬ ಒಕ್ಕಣೆಯ ಸರ್ಕಾರೀ ಓಲೆಯ ಬಗ್ಗೆ ಪ್ರಕಟನೆಯಿತ್ತಲ್ಲ, ಅದು ಹೆಚ್ಚಿನ ಚರ್ಚೆಗೊಳಗಾಗದೆ ಹಾಗೇ ಮರೆಯಾಯಿತಲ್ಲ. ಅದರ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದೇನೆ.
ನಾನ್ ತಿಳ್ಕಂಡಂಗೆ ಸರ್ವರಿಗೂ ಮಾನ್ಯವಾದ ’ನುಡಿ’ ಏಕಭಾಷಾ ತಂತ್ರಾಂಶವನ್ನು ರೂಪಿಸಿದ್ದಲ್ಲದೆ ಅದನ್ನೇ ಎಲ್ಲರೂ ಬಳಸಬೇಕೆಂಬ ಆದೇಶ ಹೊರಡಿಸಿದ್ದೂ ಸರ್ಕಾರವೇ, ಕನ್ನಡ ಮತ್ತು ಇಂಗ್ಲಿಶ್ ಭಾಷೆಗಳ ಏಕಕಾಲದ ಬಳಕೆಗೆ ದ್ವಿಭಾಷಾ ತಂತ್ರಾಂಶವನ್ನೂ ರೂಪಿಸಿ ಸಚಿವಾಲಯದಲ್ಲಿ ತನ್ನ ಬಳಕೆಗೆ ಅಂದರೆ ಸಚಿವಾಲಯದ ಬಳಕೆಗೆ ಪ್ರೋತ್ಸಾಹಿಸಿದ್ದೂ ಸರ್ಕಾರವೇ. ಸರ್ಕಾರ ಒಲವಿಗೆ ಅನುಗುಣವಾಗಿ ಇತ್ತ ರಾಜ್ಯದ ಇತರೆಡೆಗಳ ಕಚೇರಿಗಳು ಹಾಗೂ ಸಾರ್ವಜನಿಕ ವ್ಯಕ್ತಿ ಹಾಗೂ ಸಂಸ್ಥೆಗಳು ನುಡಿ ಏಕಭಾಷೆ ಬಳಸಲಾರಂಭಿಸಿದವು. ಆದರೆ ಸಚಿವಾಲಯದಲ್ಲಿ ದ್ವಿಭಾಷೆ ಅಂದರೆ ನುಡಿ-ಬಿ ಬಳಕೆಯಲ್ಲಿದೆ, ಉಳಿದಂತೆ ಸರ್ಕಾರದ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಹಾಗು ಇಲಾಖೆಗಳಲ್ಲಿ ಏಕಭಾಷೆ ಬಳಕೆಯಲ್ಲಿದೆ. ಈ ಕಾರಣದಿಂದ ಮುಡಾದಂಥ ಒಂದು ಸಂಸ್ಥೆ ಕಳಿಸಿದ ಮಿನ್ಮಾಹಿತಿಯನ್ನು ಸಚಿವಾಲಯದ ಕಂಪ್ಯೂಟರುಗಳಲ್ಲಿ ಸಂಸ್ಕರಿಸಲಾಗುತ್ತಿಲ್ಲ, ಅದೇ ವೇಳೆಗೆ ಸಚಿವಾಲಯವು ಕಳಿಸಿದ ಮಿನ್ಮಾಹಿತಿಯನ್ನು ರಾಜ್ಯದ ಉಳಿದ ಯಾವುದೇ ಕಂಪ್ಯೂಟರುಗಳಲ್ಲಿ ಓದಲಾಗುತ್ತಿಲ್ಲ.
ಈ ಸಮಸ್ಯೆಗೆ ಪರಿಹಾರವೇನು?
೧. ನುಡಿ-ಬಿ ಯಲ್ಲಿ ಟೈಪಿಸಿದ ಪತ್ರವನ್ನು ನುಡಿ-ಅಕ್ಷರದಲ್ಲಿ ಓದುವಂತೆ ಮಾಡುವ ಹಾಗೆಯೇ ನುಡಿ-ಅಕ್ಷರದಲ್ಲಿ ಟೈಪಿಸಿದ್ದನ್ನು ನುಡಿ-ಬಿ ಯಲ್ಲೂ ಓದಲಾಗುವಂತಹ ಪರಿವರ್ತಕವನ್ನು ರೂಪಿಸಬೇಕು ಅಥವಾ
೨. ಎಲ್ಲ ದೇಶಗಳಲ್ಲೂ ಜನಪ್ರಿಯವಾಗುತ್ತಿರುವ ಯುನಿಕೋಡ್ ತಂತ್ರಾಂಶಕ್ಕೆ ಬದಲಾಯಿಸಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಬೇಕು.
ಇದರ ಹೊರತು ನುಡಿ-ಬಿ ಯನ್ನೇ ಎಲ್ಲರೂ ಅಳವಡಿಸಿಕೊಳ್ಳಿ ಎನ್ನುವುದು ತುಘಲಕ್ ಆಳ್ವಿಕೆಯಾಗುತ್ತದೆ ಎಂದು ನನ್ನ ಅಭಿಪ್ರಾಯ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು? ಬರೀ ಪತ್ರ ಬರೆದರಾಗದು. ಬಲ್ಲವರು ಒಂದು ನಿಯೋಗ ಹೋಗಿ ಮಾಹಿತಿ ತಂತ್ರಜ್ಞಾನ ಇಲಾಖೆಯ ವರಿಷ್ಠರಿಗೆ ಇದರ ಸಾಧಕ ಬಾಧಕಗಳ ಕುರಿತು ಮನವರಿಕೆ ಮಾಡಬೇಕು.
ಆ ಸರ್ಕಾರಿ ಓಲೆಯನ್ನು ನೋಡಿದೆ. ಅದರಲ್ಲಿ ಅದೆಂಥದೋ ಗಿಲಿಪು ಅಂತ ಕೊಟ್ಟವರೆ. ಅವೆಲ್ಲ ನಮ್ಗೆ ಅರ್ತ ಆಗಾಕಿಲ್ಲ. ಅದೇ ಗಿಲಿಪುನ ತಗಂಡು ತಿರ್ವಾಮುರ್ವಾ ಮಾಡಿದ್ರೆ ಆಗಾಕಿಲ್ವಾ ಅಂತ ನಮ್ಗೇ ಪ್ರಶ್ನೆ ಆಕಿದ್ರೆ ನಾವೇನೇಳಾನೆ. ವಿಸಯ ಬಿಟ್ಟು ಬ್ಯಾರೇ ಏನೇನೋ ಹಿಡ್ಕಂಡ್ ಜಗ್ಗಾಡೋ ಮೇಧಾವಿ ಜನಗೋಳ್ ಮಧ್ಯೆ ನಾವೊಂತರಾ ಉಲು ಮಾನವರು.
ಆದ್ದರಿಂದ ಸಂಪದದ ಬುದ್ದಿವಂತ ಜನಗಳು ಈ ಕುರಿತು (ಸರ್ಕಾರಿ ಸುತ್ತೋಲೆ ಕುರಿತು) ಸೀರಿಯಸ್ ಆಗಿ ಏನಾದರೂ ಮಾಡಬೇಕಂತ ಪ್ರಾರ್ತನೆ.
ಪ್ರೀತಿಯಿಂದ
ಸಿ ಮರಿಜೋಸೆಫ್
Comments
ಉ: ನುಡಿ ದ್ವಿಭಾಷಾ ತಂತ್ರಾಂಶದ ಕುರಿತ ಸರ್ಕಾರೀ ಸುತ್ತೋಲೆ
ಉ: ನುಡಿ ದ್ವಿಭಾಷಾ ತಂತ್ರಾಂಶದ ಕುರಿತ ಸರ್ಕಾರೀ ಸುತ್ತೋಲೆ