ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧೧

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧೧

ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳು ಮಾಲಿಕೆಯಲ್ಲಿ ಈ ವಾರ ನಾವು ಕೊನೆಯ ಕವನ ‘ಡೊಂಬರ ಚೆನ್ನೆ' ಪ್ರಕಟ ಮಾಡಲಿದ್ದೇವೆ. ಈ ಕವನವು ಸುದೀರ್ಘವಾಗಿದ್ದು ೨-೩ ಭಾಗಗಳಲ್ಲಿ ಪ್ರಕಟವಾಗಲಿದೆ. ಕವನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

ಡೊಂಬರ ಚೆನ್ನೆ (ಭಾಗ ೧)

ಬೆರಗು ಕಣ್ಣಿನ ಬೆರಳ ಮೀಸೆಯ ಬೆರಸಿದಾ ನಗು ಮೋರೆಯಾ,

ಅರಸನಿದ್ದನು ಡೊಂಬರಾಟಕೆ ಸೆರೆಯ ಸಿಕ್ಕಿದ ಮನದಲಿ,

ದಾಟಿ ಪಡುಹೊಳೆ ಜನರ ಸಂದಣಿ ಆಟ ನೋಡಲು ಕೂಡಿತು ;

ಕೋಟೆ, ಕೊತ್ತಳ, ಮಾಡು, ಮನೆ, ಮರ, ಕೊಂಬೆಗಳ ಮೇಲಿದ್ದರು.

 

ಗುಲ್ಲು ಮಾಡರು, ಸೊಲ್ಲನಾಡರು ;

ಎಳ್ಳು ಬಿದ್ದರೆ ಬೊಬ್ಬೆಯು,

ಅಲ್ಲಿ ಜನಗಳ ನುಗ್ಗು ನುಗ್ಗಿಗೆ

ಇಲ್ಲ ಸಾಸಿವೆ ಹಾಕಲು,

 

ಅತ್ತಲಿದ್ದರು ಸೆಟ್ಟಿಮುದ್ಯರು,

ಗುತ್ತಿನಡ್ಕಂತಾಯರು.

ಇತ್ತಪೊಕ್ಕುಳ ಅರಸು ಮಕ್ಕಳ

ಒತ್ತಿನಲಿ ಕಳದೆಡದಲಿ.

 

ಗುರು, ಸುಮಂಗಳ, ಬುಧ ಗ್ರಹಂಗಳ

ನಡುವೆ ತಿಂಗಳ ಚೆಲುವಿನಾ

ಅರಸು ಅಂಗಳದಲಿ ಜನಂಗಳ

ನಡುವೆ ಸಂಗಳಿಸಿದ್ದನು.

 

ಆಗ ಬಡಿಯಿತು ಡೋಲು ಬಡ ಬಡ,

ಬಾಗಿ ಅರಸಿಗೆ ತಲೆಯನು,

ಬೇಗ ತಿರ್ರನೆ ತಿರುಗಿ ಸರ್ರನೆ

ಲಾಗ ಹಾಕಿದ ಡೊಂಬನು.

 

ನೀರಿನೊಂದಿಗೆ ಆರು ಬಿಂದಿಗೆ

ಹೇರಿ ನೆತ್ತಿಯ ಮೇಲಕೆ,

ಹಾರಿ ಧಿಕ್ಕಿಟ ಕುಣಿದನಕ್ಕಟ

ನೀರು ಹೊರಗಡೆ ಚೆಲ್ಲದೆ !

 

ತೆಗೆದು ಡೊಂಬನು ಹುರಿಯ ಸುಂಬನು

ಬಿಗಿದು ಬಟ್ಟಲನೇರಿಸಿ,

ಬೊಗರಿಯಂತೆಯೆ, ತಿಗರಿಯಂತೆಯೆ

ನೆಗೆದು ಕುಣಿದನು ಧಿಮಿ ಧಿಮಿ.

 

“ಮಾವಿನಾಟದ, ಹಾವಿನಾಟದ

ಸೋವು ಸೋಜಿಗ ತಿಳಿಯದು !

ಯಾವ ತಂತ್ರವೊ? ಮೋಡಿ ಮಂತ್ರವೋ?

ನಾವು ಅರಿಯೆನು" ಎಂದರು.

 

ಬಿದಿರು ಒಂದನು ಹೊತ್ತು ತಂದನು

ಮುದುಕ ಡೊಂಬನು ಹೆಗಲಲಿ,

ಅದನು ಬಲದಲಿ ಹೂಡಿ ನೆಲದಲಿ,

ಮದುವೆ ಮಗಳನು ಕರೆದನು.

 

ಹೆಣ್ಣು ಬಂದಳು ಹಣ್ಣು ಬಿಡದಾ,

ಸಣ್ಣ ಬಳ್ಳಿಯ ಬೆಡಗಿನಾ,

ಮಣ್ಣೊಳಾಡುವ ಬೆಣ್ಣೆಯಂತಿಹ

ಕಣ್ಣು ಕತ್ತಿನ ಸೊಬಗಿನಾ.

 

ಮಣಿದು ಹಗ್ಗಕೆ ಹಾರಿ ಸಿಡಿದಳು

ಕುಣಿವ ಮರಿಸಿಡಿಲಂತೆಯೇ

ಹೆಣೆದು ಮೈಯನು, ಹಾವಿನಂತೆಯೆ

ಗಣೆಗೆ ಸರಿದಳು ಸರ್ರನೆ !

(ಮುಂದುವರೆಯುವುದು)

-’ಕವಿಶಿಷ್ಯ' ಸಂಕಲನದಿಂದ ಆಯ್ದ ಕವನ