ಪವಾಡ (ಭಾಗ ೨)

ಪವಾಡ (ಭಾಗ ೨)

ಬರಹ

ಕಳಿಂಗದ ಮೇಲಿನ ವಿಜಯದ ಸುದ್ದಿಯನ್ನು ಅಶೋಕನಿಗೆ ತಿಳಿಸಲು ಓಲೆಗಾರರು ಕುದುರೆಗಳಲ್ಲಿ ಹೊರಟರು. ಈ ಸುದ್ದಿಯನ್ನು ಮೊದಲು ತಿಳಿಸಿ ಬಹುಮಾನ ಪಡೆಯಬೇಕೆಂಬ ಹವಣಿಕೆಯಲ್ಲಿ ಸ್ಪರ್ಧೆಯೇ ಏರ್ಪಟ್ಟು ಅಶೋಕನಿಗೆ ಬೇಗ ವಿಜಯದ ಸುದ್ದಿ ತಲುಪಿತು. ಅದನ್ನು ಕೇಳಿದೊಡನೆ ಆಕಾಶದೆಡೆಗೆ ತಲೆಯೆತ್ತಿ ದೇವರನ್ನು ನೆನೆಯಲಿಲ್ಲ, ಬದಲಿಗೆ ಅದೇ ಶಾಂತ ಭಾವವು ಮುಂದುವರೆದು ಮುಖದಲ್ಲಿ ಸಣ್ಣ ನಗೆ ಹೊಮ್ಮಿತು. ಅಷ್ಟು ದೊಡ್ಡ ವಿಜಯ ಸಾಧಿಸಿದ ಸಂತೋಷವು, ಒಂದು ಸಣ್ಣ ನಗೆಯಲ್ಲಿ ವ್ಯಕ್ತವಾಗಿ, ಕ್ಷಣದಲ್ಲಿ ಮಾಯವಾದುದನ್ನು ಕಂಡ ಅಲ್ಲಿದ್ದವರು ಆಶ್ಚರ್ಯ ಪಡುತ್ತಿದ್ದರು. ಸಂಜೆ ಸೈನಿಕರನ್ನು ಸ್ವತಃ ಭೇಟಿ ಮಾಡುವುದಾಗಿ ತಿಳಿಸಿ, ಓಲೆಗಾರರಿಗೆ ಬಹುಮಾನ ಕೊಡುವಂತೆ ಆದೇಶಿಸಿ ಶಿಬಿರದೊಳಕ್ಕೆ ನಡೆದನು.

ಅಂದು ಸಂಜೆ ತನ್ನ ಸೈನ್ಯವನ್ನುದ್ದೇಶಿಸಿ ಮಾತನಾಡಿ, ಅವರ ಶೌರ್ಯವನ್ನೂ, ನಿಷ್ಠೆಯನ್ನು ಕೊಂಡಾಡಿದನು. ತಮ್ಮ ಮನೆಗಳಿಗೆ ಮರಳಬೇಕೆಂಬ ಆಸೆಯನ್ನು ಅವರ ಕಣ್ಣುಗಳಲ್ಲಿ ಕಂಡರು, ಅದಕ್ಕೆ ಬೆಲೆಕೊಡಲಿಲ್ಲ. ಆಗಲೇ ಮಿಕ್ಕ ಸಣ್ಣ ಪುಟ್ಟ ರಾಜ್ಯಗಳ ಮೇಲಿನ ದಂಡಯಾತ್ರೆಯ ಕಾರ್ಯಕ್ರಮ ನಿರೂಪಿಸಿದ್ದನು. ಯಾವ ಸೈನಿಕನಿಗೂ, ದಂಡನಾಯಕರಿಗೂ ಮನದಾಸೆಯನ್ನು ತಿಳಿಸುವ ಧೈರ್ಯವಿರಲ್ಲಿಲ್ಲ.
ಅಶೋಕನು ಮಾತು ಮುಗಿಸಿದಾಗ ಜಯಕಾರಗಳ ಕೂಗು ಮಾತ್ರ ಕೇಳಿಬಂತು. ಜಯಕಾರಗಳ ನಡುವೆ ಅಂಗರಕ್ಷಕರೊಡನೆ ಅಶೋಕನು ಯುದ್ಧಭೂಮಿಯನ್ನು ಒಮ್ಮೆ ಸುತ್ತಿಬರಲು ಹೊರಟನು.

ಈ ನೋಟ ಅವನಿಗೆ ಹೊಸ ವಿಷಯವೇನಾಗಿರಲಿಲ್ಲ. ಹೆಣಗಳ ರಾಶಿ ಯುದ್ಧಭೂಮಿಯಲ್ಲಿ ಹರಡಿತ್ತು, ಮಡಿದ ಕಳಿಂಗ ಸೈನಿಕರ ಬಂಧುಗಳು ಅಲ್ಲಲ್ಲಿ ಗುಂಪು ಸೇರಿ ಚಿತೆಗಳನ್ನೂ, ಹೂಳಲು ಗುಂಡಿಗಳನ್ನು ಸಿದ್ಧಪಡಿಸುತ್ತಿದ್ದರು. ಅಶೋಕನನ್ನು ಕಂಡು ಕೋಪ ಉಕ್ಕಿಬಂದರು ನಿಸ್ಸಹಾಯಕ ನೋಟದೊಂದಿಗೆ ಮನಸ್ಸು ಶಾಂತವಾಗುತ್ತಿತ್ತು. ಕೆಲವರು ಸಾವಿನ ಆಘಾತದೊಡನೆ, ಭವಿಷ್ಯದ ಬಗೆಗಿನ ಚಿಂತೆಯಲ್ಲಿ ಅಳುವುದನ್ನು ಮರೆತು ಮೌನವಾಗಿದ್ದರು. ಆ ಅಘಾತದಿಂದ ಹೊರಬಂದೊಡನೆ ಕಣ್ಣೀರು ಧಾರಕಾರವಾಗಿ ಹರಿಯತೊಡಗಿತು. ಯುದ್ಧಭೂಮಿಯಲ್ಲಿ ಅಂದು ರಕ್ತದ ಕೋಡಿ ಹರಿದಾಗಿತ್ತು, ಈಗ ಕಣ್ಣೀರಿನ ಸರದಿಯಾಗಿತ್ತು.ಯುದ್ಧದ ಗಾಯಾಳುಗಳು, ಹತಾಶೆಯಿಂದ ಅಲ್ಲಲ್ಲಿ ಬಿದ್ದಿದ್ದರು. ಜೀವನವೆಲ್ಲ ಭಿಕ್ಷಾಟನೆ ಮಾಡಿಕೊಂಡು ಬದುಕುವುದಕ್ಕಿಂತ ಯುದ್ಧದಲ್ಲಿ ಸಾವು ಬರಬಾರದೇ ಎಂದು ಹಲುಬುತ್ತಿದ್ದರು.

ಮಡಿದ ಮೌರ್ಯ ಸೈನಿಕರ ಶವಗಳು ಅಂತ್ಯ ಸಂಸ್ಕಾರ ಸಾಗುತ್ತಿತ್ತು. ಒಂದು ದೊಡ್ಡ ಚಿತೆಯನ್ನು ಸಿದ್ಧ ಮಾಡಿ ಸತ್ತವರನ್ನೆಲ್ಲಾ ಅದರಲ್ಲಿ ಎಸೆಯಲಾಗುತ್ತಿತ್ತು. ಶವಸಂಸ್ಕಾರದ ವಿಧಿಗಳಾಗಳಿಗೆ ಅಲ್ಲಿ ಅವಕಾಶವಿರಲಿಲ್ಲ. ಕೆಲವರು ಪ್ರಮುಖ ದಂಡನಾಯಕರ ಶವಗಳಿಗೆ ಮಾತ್ರ ಗೌರವ ಅರ್ಪಿಸಲಾಯಿತು. ಒಂದು ದೊಡ್ಡ ಸಾಮ್ರಾಜ್ಯದ ಪ್ರಜೆಯಾದರೂ, ಗೌರವಪೂರ್ಣ ದಹನವು ದೊರೆಯದೇ, ಶರೀರವು ಮಣ್ಣಿನಲ್ಲಿ ಬೆರೆತುಹೋಗುತ್ತಿತ್ತು.

ಅಶೋಕನು ನಡೆಯುತ್ತಾ ಮುಂದುವರೆದ, ಎಷ್ಟು ದೂರ ನಡೆದರೂ ಹೆಣಗಳ ರಾಶಿ ಕೊಣೆಗೊಳ್ಳುತ್ತಿರಲಿಲ್ಲ. ಇದ್ದಕ್ಕಿದ್ದಂತೆ ತಕ್ಷಶಿಲೆಯ ದಂಗೆಯನ್ನು ಹತ್ತಿಕ್ಕಿದ ನೆನಪು ಮರುಕಳಿಸಿ ಬಂತು. ಅಲ್ಲಿಯೂ ಇಂತಹ ದೃಶ್ಯವನ್ನು ಕಂಡಿದ್ದರೂ, ಮನಸ್ಸು ವಿಚಲಿತವಾಗಿರಲಿಲ್ಲ. ಆದರೆ ಇಂದು ಕನಸು ನೆರವೇರಿದ ಸಮಾಧಾನ ಭಾವವು ಮಾಯವಾಗಿ, ಚಿಂತೆ ಮನಸ್ಸನ್ನು ಆಕ್ರಮಿಸಿತು. ಕಳಿಂಗವನ್ನು ಗೆದ್ದ ಸಾಮಾಧಾನವನ್ನು ಚಿಂತೆ ಗೆದ್ದಿತು. ಹಲವು ವರ್ಷಗಳ ಹಿಂದೆ ವಿಶ್ವವನ್ನೇ ತನ್ನದಾಗಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯಿಂದ ಅಲಕ್ಷೇಂದ್ರ (Alexander) ಯವನ ಚಕ್ರವರ್ತಿಯು ಭಾರತದ ವರೆಗೆ ದಂಡೆತ್ತಿ ಬಂದಿದ್ದನ್ನು ಕೇಳಿದ್ದನು. ಈಗ ಅವನ ಸಾಮ್ರಾಜ್ಯ ಹೇಳಹೆಸರಿಲ್ಲದ್ದಂತಾಗಿತ್ತು. ಅವನ ಸಾಮ್ರಾಜ್ಯದ
ವಾಯವ್ಯ ಪ್ರದೇಶಗಳನ್ನು ತನ್ನ ಅಜ್ಜನೇ ಕಸಿದುಕೊಂಡದ್ದು ಅಶೋಕನಿಗೆ ತಿಳಿದಿತ್ತು. ಜೊತೆಗೆ ಯಾರೋ ಒಬ್ಬ ವ್ಯಕ್ತಿ ಎಲ್ಲವನ್ನೂ ತ್ಯಜಿಸಿ, ಅರಳಿಮರದಡಿ ಧ್ಯಾನಿಸಿ ಜೀವನದ ರಹಸ್ಯವನ್ನು ತಿಳಿದ ಬಗ್ಗೆ ಕೇಳಿದ್ದು, ನೆನಪಿಗೆ ಬಂತು. ಯೋಚನಾಮಗ್ನನಾಗಿ ಅಶೋಕನು ಶಿಬಿರಕ್ಕೆ ಮರಳಿದನು.

ಯುದ್ಧಭೂಮಿಯ ದೃಶ್ಯವು ಲೋಕವನ್ನು ಅವನು ಕಾಣುತ್ತಿದ್ದ ಧೋರಣೆಯನ್ನು ಬಲವಾಗಿ ಪ್ರಶ್ನಿಸುತ್ತಿತ್ತು. ಆಕಾಶದಲ್ಲಿ ಅರ್ಧಚಂದ್ರನು ತನ್ನನ್ನು ನೋಡಿ ನಗುತ್ತಿರುವಂತೆ ಭಾಸವಗುತ್ತಿತ್ತು. ಮನದಲ್ಲಿ ಹಿಂದೆಂದೂ ಕಂಡಿರದ ವಿಚಿತ್ರ ಭಾವನೆ ಮೂಡಿತ್ತು, ಕರುಣೆಯೋ? ಪಶ್ಚಾತ್ತವವೋ? ತಿಳಿಯಲಿಲ್ಲ. ಆದರೆ ಅಲಕ್ಷೇಂದ್ರ ವಿಜಯಮಾಲೆಗಳು ಹಗುರವಾಗಿ ಕಾಣತೊಡಗಿದವು, ಅರಳಿಮರದಡಿ ಕುಳಿತ ವ್ಯಕ್ತಿಯ ಬಗ್ಗೆ ಕುತೂಹಲ ತುಂಬಿತ್ತು. ಶಿಬಿರದೊಳಕ್ಕೆ ಹೊಕ್ಕು ನಿದ್ರಿಸಲು ಪ್ರಯತ್ನಿಸಿದ, ನಿದ್ರೆ ಬರಲಿಲ್ಲ.

ಸೂರ್ಯೋದಯವಾಯಿತು, ಅದರೆ ಈ ಉದಯ ಒಂದು ವಿಶಿಷ್ಟ ದಿನದ ಉದಯವಾಗಿತ್ತು. ಅಶೋಕನ ಜೀವವನದ ಜೊತೆಗೆ ಚರಿತ್ರೆಯನ್ನು ಬದಲಿಸುವ ದಿನ. ಅಶೋಕನು ತನ್ನ ಸೈನ್ಯದ ದಂಡನಾಯಕರಿಗೆ ಪಾಟಲೀಪುತ್ರಕ್ಕೆ ಮರಳಲು ಆದೇಶಿಸಿದನು. ಭರತಖಂಡವು ಹಿಂದೆಂದೂ ಕಂಡಿರದ ಪವಾಡವೊಂದು ನಡೆದಿತ್ತು. ಅಂದು ಅಶೋಕನು “ದೇವಾನಾಂಪ್ರಿಯ” ನಾದನು.