ಪುರುಷ-ಪ್ರಕೃತಿ
ಬರಹ
(1994 ಜನವರಿಯಲ್ಲಿ ರಚಿಸಿದ ಕವನ)
ಪುರುಷ-ಪ್ರಕೃತಿ
ಚಿರ ನೂತನಳೇ; ಚಿರ ಚೇತನಳೇ;
ಪ್ರಕೃತಿಯ ಸೊಬಗಿನ ಪ್ರತಿನಿಧಿಯೇ...!
ನಿನ್ನ ಹಸಿ ಹಸಿರು; ನನ್ನ ಬಿಸಿಯುಸಿರು
ತರ್ಕಕೆ ನಿಲುಕದೆ ನಿಟ್ಟುಸಿರು..!?
ನಾ ಮರವಂತೆ; ನೀ ಲತೆಯಂತೆ...!
ಈ ಜಗದೊಳು ನಮ್ಮಯ ಸಮರುಂಟೆ!?
ಬಾ ಏರುತ ಬೆಳೆಯುವ ಬಾನಲ್ಲಿ;
ಬೇರಿಳಿಸುವ ಭೂಮಿಯ ಒಡಲಲ್ಲಿ
ಜೀವಕೆ ರಾಗವು ನೀನಾಗಿ;
ಎಂದೆಂದಿಗು ತಾಳವೆ ನಾನಾಗಿ;
ಹೃದಯದ ವೀಣೆಯ ಸುಸ್ವರ ಮೀಟಿ;
ಹಾಡುವ ಒಟ್ಟಿಗೆ ಹೊಸ ಧಾಟಿ!
ನೀ ಕಡಲಾಗಿ; ನಾ ಅಲೆಯಾಗಿ
ಎಂದಿಗು ಬಾಳುವ ಜೊತೆಯಾಗಿ
ಜೀವ ಜಾಲಕೆ ಮೂಲವೆ ಆಗಿ;
`ಸಂಧ್ಯಾ' ಸಮಯದಿ ನಿಗೂಢವಾಗಿ...!?