ಪ್ರಜ್ಞಾಶೀಲರಾಗಿ ಅರಿತು ಬಾಳಬೇಕು

ಪ್ರಜ್ಞಾಶೀಲರಾಗಿ ಅರಿತು ಬಾಳಬೇಕು

ಡಾ.ದ.ರಾ. ಬೇಂದ್ರೆಯವರು ಬರೆದ ಸಾಲುಗಳು ನಿತ್ಯಸತ್ಯ.

*ಒಂದೇ ಒಂದೇ ಒಂದೇ ಕರ್ನಾಟಕ ಒಂದೇ*

*ಇಂದೇ ಮುಂದೇ ಎಂದೇ ಕರ್ನಾಟಕ ಒಂದೇ*

*ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೇ*

ನಾವು ಹೇಗೆ ಬೇಕಾದರೂ ಬದುಕಬಹುದು. ಆದರೆ ಸುಸಂಸ್ಕೃತರೂ, ಪ್ರಜ್ಞಾವಂತರೂ ಆಗಿ ಬದುಕುವುದು ಮುಖ್ಯ. ಎಲ್ಲ ಜೀವಜಂತುಗಳೂ ಹುಟ್ಟುತ್ತವೆ, ಬದುಕುತ್ತವೆ, ಸಾಯುತ್ತವೆ. ಹೀಗೆ ನಾವಾದರೆ ಏನು ಸಾರ್ಥಕ್ಯ ಪಡೆದ ಹಾಗಾಯಿತು? ಬದುಕುವುದು, ಇತರರನ್ನು ಬದುಕಗೊಡುವುದರ ಜೊತೆಗೆ ಸಮಾಜದಲ್ಲಿ ಬಾಳಲು ಬಿಡುವ ಧಾರಾಳ ಮನಸ್ಸಿರಬೇಕು.

ಇಲ್ಲಿ ಪ್ರಚಾರ ಬೇಡ, ಆಚಾರ ಬೇಕು, ವಿಚಾರವಂತರಾಗಬೇಕು. ಅದಿಲ್ಲದೊಡೆ ಎಲ್ಲವೂ ಶೂನ್ಯ. ಒಮ್ಮೊಮ್ಮೆ ತಡೆಯಲಾರದ ಕಷ್ಟ, ವೇದನೆ ಬರುವುದಿದೆ, ಎದೆಗುಂದದೆ ಮುಂದೆ ಸಾಗಲು ಕಲಿಯಬೇಕು. ಸಮತೂಕ ಜೀವನ, ಸ್ಥಿತಪ್ರಜ್ಞತೆ ಇದ್ದವನಿಗೆ ಬಾಳು ಬಂಗಾರ. ತನ್ನ ಯತ್ನ ಎನ್ನುವುದೊಂದಿದೆ. ಅದನ್ನು ಮಾಡಬೇಕು. ಅಂದು ನಮ್ಮ ಹಿರಿಯರ ಹೋರಾಟದ ಫಲವೇ ಸ್ವಾತಂತ್ರ್ಯ. ಕರ್ನಾಟಕ ನಾಮಕರಣ. ಕೈ ಕಟ್ಟಿ ಕುಳಿತರೆ ನಾವಿದ್ದಲ್ಲಿಗೆ ಯಾರೂ ತಂದುಕೊಡರು. ಕನ್ನಡ ನಾಡಿನಲ್ಲಿ ಜನಿಸಿದ ನಾವೇ ಭಾಗ್ಯವಂತರು. ಬುದ್ಧಿ ವಿಕಸನಕ್ಕೆ ಮಾತೃಭಾಷೆ ಸಹಕಾರಿ, ಉಳಿದದ್ದೆಲ್ಲ ಅನಂತರ ಬಂದು ಸೇರಿಕೊಳ್ಳುವ ಕವಲುದಾರಿಗಳು.

ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೆ-ಹೇ ದೇವ. ಅಲ್ಲವೇ? ಕರ್ನಾಟಕ ಎಂಬ ಮಣ್ಣಿನ ಗುಣವೇ ಹೊನ್ನು. ಇಲ್ಲಿಯ ಗಾಳಿ, ನೀರು, ಪರಿಸರ ಎಲ್ಲವೂ ಪರೋಪಕಾರ ದೃಷ್ಟಿಯುಳ್ಳದ್ದು. ನಾವು ಸಹ ಹಾಗೆಯೇ ಇರಬೇಕಲ್ಲವೇ?

ಮೈಬೆವರ ಸುರಿಸಿ ದುಡಿಯುವುದು, ಭೇದಭಾವಗಳ ಅಳಿಸಿ ಮುಂದೆ ಹೋಗುವುದು ಧ್ಯೇಯವಾಗಲಿ. ಚಿರಕಾಲ ಬೆಳಗುವಂತಾಗಲಿ ಬದುಕು-ಬದುಕಿನ ರೀತಿ-ನೀತಿ. ನಾನು ಕನ್ನಡಿಗ, ನಾವು ಕನ್ನಡಿಗರು ಎಂದು ಎದೆಯಂತರಾಳದಿಂದ ಭಾವನೆಗಳು ಹೊರಹೊಮ್ಮಿದಾಗ ಮಾತ್ರ ನಮ್ಮ ನೆಲದ ಬಗ್ಗೆ ಋಣ ತೀರಿಸುವ ಮಾತನಾಡಬಹುದು. ಕರ್ನಾಟಕತ್ವ ಎಂದರೆ ಬರಿಯ ಮಣ್ಣುಭಾಷಾಭಿಮಾನ, ದೇಶಾಭಿಮಾನ, ಇತಿಹಾಸಾಭಿಮಾನವಲ್ಲ. ಅದೊಂದು ಸಮಗ್ರ ಪರಿಶುದ್ಧ ಮನಸ್ಸು ಮತ್ತು ಕ್ರಿಯೆ, ವ್ಯವಹರಿಸುವಿಕೆ.

ಹೆಸರಾಯಿತು ಕನ್ನಡ, ಉಸಿರಾಗಲಿ ಕನ್ನಡ. ನಾಡಿಯಲಿ ಮಿಡಿಯಲಿ ಕನ್ನಡ. ಹೃದಯದ ಬಡಿತ ಕನ್ನಡವಾಗಲಿ. ಶಾಶ್ವತ ಮೌಲ್ಯಗಳಿಂದ ಜೀವನ ಬೆಳಗಲಿ. ಏನಾಗಬೇಕೆಂದು ಹೊರಟರೆ ಆಗಿಯೇ ಆಗುತ್ತದೆ. ಮುಖ್ಯ ಮನಸ್ಸು ಬೇಕು. ಮೆಟ್ಟಿಲುಗಳನ್ನು ಏರುತ್ತಾ ಹೋದಂತೆ ಬದುಕು ವಿಕಸನ, ಗುರಿಯ ತಲುಪುವಿಕೆ. ನಮ್ಮಭಾಷೆಯ ಮರೆಯದೆ, ಅನ್ಯರನ್ನೂ ಅವಗಣನೆ ಮಾಡದೆ ಮುಂದೆ ಸಾಗೋಣ.

-ರತ್ನಾ ಕೆ.ಭಟ್ ತಲಂಜೇರಿ

(ಆಕರ: ಹಿರಿಯ ಕನ್ನಡ ಸಾಹಿತಿಗಳು).

ಚಿತ್ರ ಕೃಪೆ: ಇಂಟರ್ನೆಟ್ ತಾಣ