ಪ್ರೀತಿಯೇ ಇಲ್ಲದ ಮೇಲೆ..

ಪ್ರೀತಿಯೇ ಇಲ್ಲದ ಮೇಲೆ..

ಬರಹ

ಹೊಟ್ಟೆಯೊಳಗೆ ಏನೋ ತಳಮಳ. ಬ್ಲಿಂಕ್ ಆಗ್ತಾ ಇರುವ ಕೆಂಪು ದೀಪ ಫೋನ್ನಲ್ಲಿ ಯಾವುದೋ ಸಂದೇಶ ಇದೆ ಅಂತ ಹೇಳುತ್ತಿತ್ತು. ಮೆಸೇಜ್ ಗುಂಡಿ ಒತ್ತುವಾಗ ಇವಳ ಕೈ ನಡುಗಿತು. ಅವಳೇನಾದರೂ ಕರೆ ಮಾಡಿದ್ದರೇ..ಮತ್ತೊಮ್ಮೆ ಹೊಟ್ಟೇಲಿ ತಿರುವಿ ಹಾಕಿದಂತಾಯಿತು. ತಾನು ಬಸುರಿ ಅನ್ನೋದನ್ನೂ ಕೇರ್ ಮಾಡ್ದೇ ಯಾವ್ದೋ ಕ್ಷುಲ್ಲಕ ಕಾರಣಕ್ಕೆ ಹಿಂದೆ ಅವಳು ಕಟುವಾಗಿ ಬರೆದ ಪತ್ರ ಓದಿ ಪಟ್ಟ ಪಾಡು ನೆನಪಾಯಿತು. ಕೆಲಸಕ್ಕೆ ಬಾರದ ಜಾಹಿರಾತಿನ ಸಂದೇಶ ಕೇಳಿ ಇವಳಿಗೆ ಒಟ್ಟಿಗೆ ದುಃಖ ಹಾಗೂ ನಿರಾಳವಾಯಿತು.

ಆಡುತ್ತಿದ್ದ ಮಕ್ಕಳಲ್ಲಿ ಏನೋ ಜಗಳವಾಗಿ ವಾಸ್ತವಕ್ಕೆ ಬಂದಳು. ಮಕ್ಕಳ ಜಗಳ ಬಿಡಿಸಿ ಬುದ್ಧಿ ಹೇಳಿ ಇವತ್ತು ರಾತ್ರಿ ಸೋದರ ಪ್ರೇಮ ತುಂಬಿರುವ ಕಥೆ ಹೇಳಲು ನಿರ್ಧರಿಸಿದಳು.

ಸಂಜೆಹೊತ್ತಿಗೆ ತಾನು ದುಡುಕಿ ಫೋನ್ ಮಾಡಿದ್ದು ಶುದ್ಧ ಮೂರ್ಖತನದ ಕೆಲಸ ಅಂತ ಇವಳಿಗೆ ತೀವ್ರತರವಾಗಿ ಅನ್ನಿಸತೊಡಗಿತು. ಅವಳನ್ನ ನೋಡಿ ಯುಗ ಯುಗಗಳಾಗಿದೆ! ಈಗ ಯಾಕೆ ಬೇಕಾಗಿತ್ತು ಈ ರಗಳೆಯೆಲ್ಲ? ಎಲ್ಲಾರಿಗೂ ಎಲ್ಲಾದಕ್ಕೂ ಬೆನ್ನು ತಿರುಗಿಸಿ ಹೋದವಳಿಗೆ ಬರುವ ರಜೆಯಲ್ಲಿ ನಮ್ಮೂರಿಗೆ ಮಗಳೊಟ್ಟಿಗೆ ಬರಲಿಷ್ಟ ಪಡುತ್ತೀಯ ಅಂದಷ್ಟೆ ಸಂದೇಶ ಬಿಟ್ಟು ಸಂಪರ್ಕ ಕಡಿದಿದ್ದಳು. ಇನ್ನೇನು ತಾನೆ ಹೇಳಬಹುದಿತ್ತು? ಕರುಳ ಕಿತ್ತು ಕೊಟ್ಟರೆ ಹುರಿ ಹಗ್ಗವೆಂದವಳಿಗೆ ಬೇರೇನು ಹೇಳಬೇಕಾಗಿತ್ತು?

ಮದುವೆಯಾಗಿ ಹೋದ ಮೇಲೆ ಅವಳು ಕಳಿಸಿದ ನಾಯಿಮರಿ ಚಿತ್ರವಿರುವ ಗ್ರೀಟಿಂಗ್ ಕಾರ್ಡ್ ಇವಳ ಮದುವೆಯಾಗುವವರೆಗೂ ಶೋಕೇಸಿನಲ್ಲಿಟ್ಟ ನೆನಪಾಯಿತು.ಜೊತೆಯಲ್ಲೇ ಪಲ್ಲವಿ ಜೋಷಿ ನಟಿಸಿದ್ದ ಇವಳಿಗೆ ತುಂಬ ಮೆಚ್ಚುಗೆಯಾಗಿದ್ದ ಚಿತ್ರ. ಚಿಕ್ಕಂದಿನಲ್ಲಿ ತಾನು ಅಪ್ಪ ಎಂದೇ ನಂಬಿಗೊಂಡಿದ್ದ ಅಮ್ಮನ ಮಿಂಡನೊಬ್ಬನನ್ನು ಬಾಲ್ಯದ ಯಾವುದೋ ನೆನಪುಗಳಿಗೆ ಜೋತು ಬಿದ್ದು ಕಾಣಲು ಹೋಗಿ ಅವನ ಕೈಯಲ್ಲೇ ಕೊಲೆಯಾಗುವ ಯುವತಿಯ ಕಥೆ. ತಾನೂ ಹಾಗೆ...ಇಲ್ಲ ನಾನು ಹಾಗಲ್ಲ...ಅವಳು ಅನುಭವಿಸಿರೋ ಕಷ್ಟದ ಒಂದು ಪರ್ಸೆಂಟ್ ಅನುಭವ ನನಗಿಲ್ಲ ಸ್ವಯಂ ಮರುಕದಿಂದ ತುಂಬಿರುವ ಯೋಚನಾ ಸರಣಿಗೆ ಅಸಹ್ಯ ಪಡುತ್ತ ಹೇಳಿಕೊಂಡಳು.

ಸುಡುಗಾಡು ಯೋಚನೆಗಳು ಅಂತ ತಲೆ ಕೊಡವಿ ಎದ್ದು ಆಟದ ಭರದಲ್ಲಿ ಮಕ್ಕಳು ಕಪಾಟಿನಿಂದ ಬೀಳಿಸಿದ್ದ ಫೋಟೋ ಆಲ್ಬಮ್ ನೋಡಿ ಲೊಚಗುಟ್ಟುತ್ತಾ ಎತ್ತಿಡುವಾಗ ಕಂಡ ಅವನ ಚಿತ್ರ ನೋಡಿ ನಕ್ಕಳು.ಎಲ್ಲಿ ತೆಗೆದಿದ್ದು ಇದು ಮಡಕೇರಿಯಲ್ಲಿ ಅಲ್ವಾ.. ಮದುವೆಯಾಗಿ ಮಗು ಇದ್ರು ನನ್ನ ಬಗ್ಗೆ ತಲೆ ಕೆಡಿಸ್ಕೊಂಡಿದ್ದನಲ್ಲಾ...ಹಿರಿಯಕ್ಕನಂತೆ ಅವನಿಗೆ ಉಪದೇಶಮಾಡಿ ತಲೆ ಸವರಿದ್ದರೂ...ಹಾಗನಿಸಿದ್ದನ್ನ ಗಂಡನ ಬಳಿ ಹೇಳಿಯೂ ಇದ್ದಳು.

ಸಂಜೆ ಓಪ್ರ ವಿನ್ಫ್ರಿಯ ಶೊ ಹಾಕಿದರೆ ಸಿಸ್ಟರ್ಸ್ ಸ್ಪೆಶಲ್ಲು. ಟಕ್ ಅಂತ ಟಿವಿ ಆರಿಸಿ ಉಕ್ಕಿ ಬರುತ್ತಿದ್ದ ಕಣ್ಣೀರಿನಿಂದ ದಿಂಬು ತೋಯಿಸಿದಳು. ಮನದಣಿಯೆ ಅತ್ತು ಸಾಕಾಗಿ ಎನಫ್ ಈಸ್ ಎನಫ್ ಬೇರಾರಿಗೋ ಹೇಳುವಂತೆ ತನಗೆ ತಾನೆ ಹೇಳಿದಳು.ಮನಸ್ಸು ತುಂಬ ಕದಡಿದಾಗ ಇವಳು ಬಳಸುತ್ತಿದ್ದ ಟೆಕ್ನಿಕ್ ಇದು. ಬತ್ತೋಗಿರೋ ಪ್ರೀತಿಯ ಸೆಲೆಯ ಮುಂದೆ ಬಾಯಾರಿಕೆ ಅಂತ ಅತ್ತರೆ ಏನುಪಯೋಗ? ಇಲ್ಲ ಅಂತ ಆಕ್ಸೆಪ್ಟ್ ಮಾಡ್ಕೊಳದನ್ನ ಕಲೀಬೇಕು... .ಐ ಹೆವ್ ಟು ಲರ್ನ್ ಟು ಲೆಟ್ ಗೋ ಹೌದು ಲೆಟ್ ಗೋ..ಬೋಧಿಸಿಕೊಂಡ ನೀತಿ ಪಾಟದಿಂದ ಇವಳ ಮನಸ್ಸು ತುಸು ಹಗುರವಾಯ್ತು. ತನ್ನೆಲ್ಲಾ ಸಂತಾಪದ ಸಲ್ಲಾಪಗಳನ್ನು ತಾಳ್ಮೆಯಿಂದ ಕೇಳಿ ಸಮಾಧಾನಿಸಿದ ಕರುಣೆಯ ಮೂಲ ನೆನೆದು ಭಾವ ತುಂಬಿ ಬಂದು ಅಹಂಕಾರದಿಂದಲ್ಲ ಸಿಟ್ಟಿನಿಂದಲ್ಲ ಪ್ರೀತಿಯಿಂದ ಐ ವಿಲ್ ಲೆಟ್ ಹರ್ ಗೊ...ಅವಳಿಗೆ ಎಲ್ಲ ಒಳ್ಳೇದಾಗ್ಲಿ ಭಗವಂತ ಯಾವಗ್ಲೂ ಅವಳ್ನ ಕಾಪಾಡಪ್ಪ ಅಂತ ಪ್ರಾರ್ಥಿಸಿ ಅವಳ ಫೋನ್ ನಂಬರ್ ಬರೆದಿದ್ದ ಕಾಗದಾನ ನಿಧಾನವಾಗಿ ಹರಿದು ಬಿಸಾಡಿದಳು.

ದೊಡ್ಡ ಬೆಟ್ಟವೊಂದನ್ನು ಕೆಳಗಿಳಿಸಿದಂತೆ ಅನ್ನಿಸಿ ಈಗಂತೂ ಇವಳು ತನ್ನ ಮಾಮೂಲಿನ ಸ್ಥಿತಿಗೆ ಬಂದಳು. ತನ್ನೆಲ್ಲಾ ಕೆಲಸಗಳನ್ನೂ ಎಂದಿನ ಹುರುಪಿನಿಂದಲೇ ಮಾಡಿ ಎರಡು ದಿನಗಳಿಂದ ಇದೇ ವಿಷಯವಾಗಿ ಕಂಗೆಟ್ಟು ಸರಿಯಾಗಿ ಮಾಡದ ನಿದ್ದೆಯನ್ನೆಲ್ಲಾ ಮಾಡಿಬಿಡುವ ನಿರಾಳವಾದ ಮನಸಿನಿಂದ ಮಲಗಿದಳು.ಸುಮಾರು ಹೊತ್ತು ಹೊರಳಾಡಿದ ಮೇಲೆ ಎದ್ದು ಕಸದ ಬುಟ್ಟಿಯಿಂದ ಹರಿದು ಬಿಸಾಡಿದ ಕಾಗದದ ತುಂಡುಗಳನ್ನ ಹೆಣಕಿ ಜೋಪಾನವಾಗಿ ಎತ್ತಿಟ್ಟಳು.