ಪ್ರೇಮ ಬ್ರಹ್ಮ

ಪ್ರೇಮ ಬ್ರಹ್ಮ

ಬರಹ

ಒಲವೆಂಬ ದೀವಟಿಗೆಯ
ಹೊತ್ತು ಹೊರಟಿದ್ದೇನೆ
ಜಗದಂಧಕಾರವನು
ಕಳೆವೆನೆಂಬ ಭ್ರಮೆಯಿಂದ
ಸತ್ಯವರಿಯೆ
ಸತ್ವವರಿಯೆ
ಪ್ರಾಣವರಿಯೆ
ಪೂರ್ಣವರಿಯೆ
ಆತ್ಮನರಿಯೆ
ಬ್ರಹ್ಮನರಿಯೆ
ಪ್ರೀತಿಯೊಂದೆ ಸಾಕೆನಗೆ
ಜಗವ ಬೆಳಕಾಗಿಸಲು
ಹು೦ಬನಾರ್ಭಟಕೆ
ಜಗ ನಕ್ಕಿತು
'ನಿನ್ನ ಬೆಳಕು
ನಿನ್ನ ಸುತ್ತ
ನಿನ್ನ ಜನಕೆ ಮಾತ್ರ'
ಬೆಪ್ಪೆ ನಾನು, ಹೊತ್ತೆ
ಅದೇ ಹಳೆಯ ಒಲವ ದೀಪ
ಬ್ರಹ್ಮ ಬಂದ
ಪೂರ್ಣ ತಂದ
ಸತ್ಯ ಬಂದ
ಸತ್ವ ತಂದ
ಆತ್ಮ ಬಂದ
ದೀಪ ತಂದ, ನೋಡು ಎಂದ
'ಹೊರು ಇದನು', ಎಂದ
ಒಲವ ದೀಪದೊಳಗೆ
ಜ್ಞಾನವೆಂಬ ತೈಲದಿಂದ
ಸತ್ಯವೆಂಬ ಬೆಳಕನಿಟ್ಟು
ಬ್ರಹ್ಮ ಜಗವ ನೋಡು ಎನುತ
ನಿಜವ ತೋರಿದ