ಪ್ಲಾಸ್ಮಾ ದಾನದಿಂದ ಪ್ರಯೋಜನವಿದೆಯೇ?

ಪ್ಲಾಸ್ಮಾ ದಾನದಿಂದ ಪ್ರಯೋಜನವಿದೆಯೇ?

ಕೊರೋನಾ ಸಮಯದಲ್ಲಿ ಬಹುವಾಗಿ ಕೇಳಿಬರುತ್ತಿರುವ ಸಂಗತಿ ಎಂದರೆ ಪ್ಲಾಸ್ಮಾ ದಾನ. ಕೊರೋನಾ ಕಪಿ ಮುಷ್ಟಿಗೆ ಸಿಲುಕಿ, ನಲುಗಿ ಗೆದ್ದು ಬಂದವರು ಪ್ಲಾಸ್ಮಾ ದಾನ ಮಾಡಬಹುದು. ದೆಹಲಿಯ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಇವರೆಲ್ಲಾ ಕೊರೋನಾ ಗೆದ್ದು ಪ್ಲಾಸ್ಮಾ ದಾನ ಮಾಡಿದವರು. ಈ ಕಾರಣದಿಂದ ಅವರು ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸಿ ಎಂಬ ಘೋಷಣೆ ಮಾಡಿದ್ದಾರೆ. 

ಏನಿದು ಪ್ಲಾಸ್ಮಾ? ಪ್ಲಾಸ್ಮಾ ಎಂದರೆ ಮನುಷ್ಯನ ದೇಹದಿಂದ ತೆಗೆದ ರಕ್ತದಿಂದ ಬೇರ್ಪಡಿಸಲಾದ ಅದರಲ್ಲಿರುವ ಹಳದಿ ಭಾಗ. ಕಾನ್ವಲ್ಸೆಂಟ್ ಪ್ಲಾಸ್ಮಾ ಥೆರಪಿ ಎನ್ನುವುದು ಕೊರೋನಾ ಸೋಂಕಿನಿಂದ ಗುಣ ಮುಖರಾದ ವ್ಯಕ್ತಿಯ ದೇಹದಿಂದ ರಕ್ತವನ್ನು ಹೊರತೆಗೆಯುವ ಪ್ರಕ್ರಿಯೆಯಾಗಿದೆ. ಹೀಗೆ ಹೊರ ತೆಗೆದ ರಕ್ತದಿಂದ ಪ್ಲಾಸ್ಮಾವನ್ನು ಬೇರ್ಪಡಿಸಿ ಅದನ್ನು ಬೇರೆ ಕೊರೋನಾ ಸೋಂಕಿತ ವ್ಯಕ್ತಿಗೆ ನೀಡಿದಾಗ ಆ ವ್ಯಕ್ತಿ ಸೋಂಕಿನಿಂದ ಬಹುಬೇಗನೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಗುಣಮುಖವಾದ ವ್ಯಕ್ತಿಯ ದೇಹದಲ್ಲಿ ಪ್ರತಿಕಾಯಗಳು (Antibodies) ಸೃಷ್ಟಿಯಾಗುತ್ತವೆ. ಈ ಪ್ರತಿಕಾಯಗಳು ಪ್ಲಾಸ್ಮಾ ಮುಖಾಂತರ ಸೋಂಕಿತ ವ್ಯಕ್ತಿ ದೇಹವನ್ನು ಸೇರಿ ಅಲ್ಲಿ ಸೋಂಕನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ದಾನಿಯ ಪ್ಲಾಸ್ಮಾವು ಸೋಂಕಿತ ವ್ಯಕ್ತಿಯ ರಕ್ತದೊಡನೆ ಸೇರಿಕೊಂಡು ಅವನ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಿಂದಾಗಿ ಸೋಂಕಿತ ವ್ಯಕ್ತಿ ತೀವ್ರವಾದ ಅನಾರೋಗ್ಯಕ್ಕೆ ಈಡಾಗುವುದನ್ನು ತಪ್ಪಿಸಬಹುದು. ಸೋಂಕಿನ ತೀವ್ರತೆ ಕಮ್ಮಿ ಆಗಿ ರೋಗಿ ಪ್ರಾಣಾಪಾಯದಿಂದ ಪಾರಾಗಬಲ್ಲ.

ಪ್ಲಾಸ್ಮಾ ದಾನಿಯಿಂದ ಪ್ಲಾಸ್ಮಾ ಪಡೆದುಕೊಂಡ ರೋಗಿಗೆ ಗಂಭೀರವಾದ ಅಡ್ಡ ಪರಿಣಾಮಗಳು ಈ ತನಕ ಕಾಣಿಸಿಕೊಂಡಿಲ್ಲ. ಆದರೆ ಕೆಲವೊಮ್ಮೆ ಸಲ್ಪ ಪ್ರಮಾಣದ ಅಲರ್ಜಿಯ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು. ಅದಕ್ಕಾಗಿ ಪ್ಲಾಸ್ಮಾ ದಾನ ನೀಡುವ ದಾನಿಯ ದೇಹಾರೋಗ್ಯದ ಬಗ್ಗೆ ಸರಿಯಾದ ಮೌಲ್ಯಮಾಪನ ಮಾಡುವುದು ಅವಶ್ಯಕ. ತುರ್ತು ಚಿಕಿತ್ಸೆ ಎಂದು ಗಡಿಬಿಡಿಯಲ್ಲಿ ವ್ಯವಸ್ಥೆಗಳನ್ನು ಮಾಡಿಕೊಂಡರೆ ಪ್ಲಾಸ್ಮಾ ತೆಗೆದುಕೊಂಡ ರೋಗಿ ಬೇರೆ ಬೇರೆ ಅಡ್ಡ ಪರಿಣಾಮಗಳನ್ನು ಅನುಭವಿಸಬೇಕಾಗಿ ಬರಬಹುದು.

ಓರ್ವ ವ್ಯಕ್ತಿ ಪ್ಲಾಸ್ಮಾ ದಾನ ನೀಡಬೇಕಾದಲ್ಲಿ ಅವನು ಕೊರೋನಾ ಸೋಂಕಿನಿಂದ ಚೇತರಿಸಿಕೊಂಡು ಒಂದು ತಿಂಗಳು ಆಗಿರಬೇಕು. ಆ ನಂತರವಷ್ಟೇ ಆತ ಪ್ಲಾಸ್ಮಾ ದಾನ ಮಾಡಬಹುದು. ಅವರ ವಯಸ್ಸು ೨೦-೬೦ ವರ್ಷ ಒಳಗೆ ಇರಬೇಕು. ದೇಹದ ತೂಕ ೫೦ ಕೆಜಿ ಅಥವಾ ಅದಕ್ಕಿಂತ ಹೆಚ್ಚಿರಬೇಕು. ಸೋಂಕಿನ ಸಮಯದಲ್ಲಿ ಕೊರೋನಾ ಕೆಲವರಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಇಂಥವರ ಪ್ಲಾಸ್ಮಾ ಬಳಕೆ ಅಷ್ಟೊಂದು ಉಚಿತವಲ್ಲ. ಕೊರೋನಾ ಸಮಯದಲ್ಲಿ ರೋಗ ಲಕ್ಷಣ ತೋರ್ಪಡಿಸಿ ನಂತರ ಗುಣವಾದ ರೋಗಿಯಿಂದ ಪ್ಲಾಸ್ಮಾ ದಾನವಾಗಿ ತೆಗೆದುಕೊಳ್ಳುವುದು ಉತ್ತಮ. ಇವರಲ್ಲಿ ಪ್ರತಿಕಾಯಗಳು ಬೇಕಾದಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗಿರುತ್ತವೆ. ಈ ಕಾರಣದಿಂದ ದಾನವಾಗಿ ಪಡೆದುಕೊಂಡ ರೋಗಿ ಬೇಗ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. 

ಕೊರೋನಾ ಲಸಿಕೆ ಪಡೆದ ವ್ಯಕ್ತಿ ೨೮ ದಿನಗಳ ನಂತರ ಮಾತ್ರವೇ ಪ್ಲಾಸ್ಮಾ ದಾನ ಮಾಡಬಹುದು. ಸರಕಾರವೂ ಈ ಬಗ್ಗೆ ಕೆಲವೊಂದು ಶರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. ಈ ವಿಧಾನವು ಒಂದು ಪರ್ಯಾಯ ಮಾರ್ಗೋಪಾಯ ಮಾತ್ರ. ಆದುದರಿಂದ ಕೊರೋನಾ ಸೋಂಕು ಬಂದವರಿಗೆ ಇದು ರಾಮ ಬಾಣವೆಂದು ಹೇಳಲಾಗದು. ಆದರೆ ಇದರ ತುರ್ತು ಬಳಕೆಯಿಂದ ರೋಗಿಗಳ ಸ್ಥಿತಿ ಸುಧಾರಣೆಯ ಲಕ್ಷಣವಂತೂ ಕಂಡು ಬರುತ್ತದೆ. 

ಈ ಪ್ಲಾಸ್ಮಾ ಚಿಕಿತ್ಸೆ ನೂರಕ್ಕೆ ನೂರು ಫಲಕಾರಿ ಎಂದು ಹೇಳಲಾಗದು. ಆದರೆ ರೋಗ ಅಥವಾ ಸೋಂಕಿನ ತೀವ್ರತೆಯನ್ನು ಬಹಳಷ್ಟು ಕಮ್ಮಿ ಮಾಡುತ್ತದೆ. ಸದ್ಯಕ್ಕೆ ಬೇರೆ ಪರಿಣಾಮಕಾರೀ ಔಷಧಿಗಳು (ಲಸಿಕೆಯನ್ನು ಹೊರತುಪಡಿಸಿ) ಇಲ್ಲದೇ ಇರುವುದರಿಂದ ಈ ಪ್ಲಾಸ್ಮಾ ಚಿಕಿತ್ಸೆಯನ್ನು ತುರ್ತು ಚಿಕಿತ್ಸೆ ಎಂಬ ಮಾದರಿಯಲ್ಲಿ ಬಳಸುತ್ತಾರೆ. ಈ ಪ್ಲಾಸ್ಮಾ ಚಿಕಿತ್ಸೆ ಹಲವಾರು ರೋಗಿಗಳಲ್ಲಿ ಉತ್ತಮ ಪರಿಣಾಮವನ್ನು ತೋರಿಸಿದೆ. ಹಲವಾರು ಮಂದಿ ಮಾರಣಾಂತಿಕ ಸ್ಥಿತಿಯಿಂದ ಬದುಕಿ ಬಂದಿದ್ದಾರೆ. ಈ ಕಾರಣದಿಂದ ಪ್ಲಾಸ್ಮಾ ಚಿಕಿತ್ಸೆಗೆ ಬೇಡಿಕೆ ಬಂದಿದೆ. ಆದರೂ ಕೊರೋನಾದಿಂದ ಸಂಭವಿಸುವ ಸಾವುಗಳನ್ನು ಪ್ಲಾಸ್ಮಾ ಚಿಕಿತ್ಸೆ ಬಹಳಷ್ಟು ಕಮ್ಮಿ ಮಾಡಿಲ್ಲ ಎಂದು ಈ ಹಿಂದೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿತ್ತು. ಈ ಚಿಕಿತ್ಸೆಯ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯುತ್ತಾ ಇದ್ದು, ಪೂರಕ ಮಾಹಿತಿಗಳು ಬೇಗನೇ ಹೊರಬರುವ ಸಾಧ್ಯತೆ ಇದೆ.

ಚಿತ್ರ ಕೃಪೆ: ಅಂತರ್ಜಾಲ ಜಾಲತಾಣ