ಬದುಕು ಬದಲಿಸಬೇಕು ಎಂದು ಕೊಂಡಿದ್ದರೆ...
ಆತ 5ನೆಯ ತರಗತಿಯ ಹುಡುಗ ನಿನ್ನೆಯಿಂದ ಅಮ್ಮನ ಬಳಿ ಗಲಾಟೆ ಮಾಡಿ 80 ರೂ ತೆಗೆದುಕೊಂಡು ಉಡುಪಿಯ ಆ ಮೆಡಿಕಲ್ ಗೆ ಬಂದಿದ್ದ ಡೈರಿ ಮಿಲ್ಕ್ ನ ಕ್ರಿಸ್ಪೆಲ್ಲೋ ಎನ್ನುವ ಚಾಕಲೇಟ್ ತಿನ್ನುವ ಆಸೆಯಾಗಿತ್ತು ಅವನಿಗೆ. ದೂರದಲ್ಲಿ ಕಾಣುತಿತ್ತು ಚಾಕಲೇಟ್, ಆಸೆ ಇಂದ ಬಾಯಲ್ಲಿ ನೀರು ಬರುತಿತ್ತು ಅಕ್ಕನಿಗೆ ಒಂದು ಪೀಸ್ ಕೊಡುತ್ತೇನೆ ಉಳಿದದ್ದು ಇಲ್ಲೇ ತಿಂದು ಬಿಡುತ್ತೇನೆ ಎಂದು ಯೋಚಿಸುತ್ತಿತ್ತು ಆತನ ಮನಸ್ಸು... ಆದರೆ ಮೆಡಿಕಲ್ ನ ಹುಡುಗ ಬಹಳ ಹೊತ್ತಿನಿಂದ ಆ ಅಜ್ಜನಲ್ಲಿ ಜೋರು ಜೋರಾಗಿ ಮಾತಾಡುತಿದ್ದ..*
"ನೋಡಿ ಅಜ್ಜ, ಈ ಇನ್ಹೇಲರ್ (ಅಸ್ತಮಾ ದಲ್ಲಿ ಬಾಯಿಯಿಂದ ಔಷದಿ ಮೇಲೆ ಎಳೆದುಕೊಳ್ಳುವ ಚಿಕ್ಕ ಯಂತ್ರ ) ಗೆ 280 ರೂ..ನೀವು ಕೊಟ್ಟಿರುವುದು 200 ಮಾತ್ರ,80 ರೂ ಕಡಿಮೆ ಇದೆ... ಮತ್ತೆ ಹೇಳಿದ ಸಿಟ್ಟಿನಿಂದ..
ಅಜ್ಜ ಮತ್ತೆ ತನ್ನ ಕೊಳೆಯಾದ ಪೈಜಾಮದ ಎಲ್ಲಾ ಕಿಸೆಯನ್ನು ಮತ್ತೆ ತಡಕಾಡಿದರು.. ಅಷ್ಟೇ ಇರುವುದು ಸರ್ ಎಂದರು ಬೇಸರದಿಂದ, ಅಂಗಡಿಯ ಹುಡುಗ ಅಜ್ಜನ ಕೈಯಿಂದ ಇನ್ಹೇಲರ್ ನ್ನು ಕಸಿದು ಕೊಂಡ, ನಿನ್ನ 80 ರೂಪಾಯಿನ ನನ್ನ ಸಂಬಳದಿಂದ ಕಟ್ ಮಾಡುತ್ತಾರೆ, ಹೋಗು ಹೋಗು ಇಲ್ಲಿಂದ ಬೆಳಿಗ್ಗೆ ಬೆಳಿಗ್ಗೆ ಎಂತೆoತಹ ಗಿರಾಕಿ ಬರುತ್ತಾರೆ.. ಮತ್ತೆ ಕೂಗಿದ. ಈ ಬಾರಿ ಅವನ ಸ್ವರ ಜೋರಾಗಿತ್ತು. ಸುತ್ತ ಇದ್ದ ಗ್ರಾಹಕರು ಅಜ್ಜನನ್ನೊಮ್ಮೆ ಗುರಾಯಿಸಿದರು.
ಅಜ್ಜ "ಮತ್ತೆ ಹಣ ಕೊಡುತ್ತೇನೆ ಕೊಡಿ."ಎಂದು ದಂಬಾಲು ಬಿದ್ದ ಅಜ್ಜನ ಧ್ವನಿ ಮತ್ತೆ ಮೆತ್ತಗಾಗಿತ್ತು ಉಸಿರಿನ ವೇಗ ಕ್ಷಣ ಕ್ಷಣಕ್ಕೂ ಹೆಚ್ಚಾಗುತಿತ್ತು... ಅಲ್ಲೇ ಕುಸಿದ ಅಜ್ಜ...*
ಹಿಂದೆ ಮುಂದೆ ನೋಡದ ಹುಡುಗ ತನ್ನ ಚಾಕೊಲೇಟಿಗೆಂದು ತಂದ 80 ರೂ ಅಲ್ಲಿಟ್ಟು ಆ ಇನ್ಹೇಲರ್ ಕೊಂಡು ಅಜನಿಗೆ ಕೊಟ್ಟ, ಅಜ್ಜ ಅದಾಗಲೇ ನೆಲದ ಮೇಲಿದ್ದ ರಪ ರಪನೆ ನಡುಗುವ ಕೈಗಳಿಂದ ಇನ್ಹೇ ಲರ್ ಓಪನ್ ಮಾಡಿದವನೇ ಕೈಯಲ್ಲಿದ್ದ ಕ್ಯಾಪ್ಸುಲ್ ಅದರಲ್ಲಿ ಹಾಕಿ 3 ಬಾರಿ ಮೇಲೆ ಎಳೆದ. ನಿದಾನಕ್ಕೆ ಅಜ್ಜನ ಶ್ವಾಸ ಸರಿಯಾಗಿತ್ತು. ಎಲ್ಲಾ ಜನ ಅಜ್ಜನನ್ನು ಸುತ್ತುವರಿದಿದ್ದರು. ಆ ಹುಡುಗ ಹಾಗೂ ಅಂಗಡಿಯ ಹುಡುಗ ಅಜ್ಜನ ಬಳಿ ಕೂತಿದ್ದರು. ಅಜ್ಜ ಕೇಳಿದ ಹುಡುಗನಲ್ಲಿ "ನಿನ್ನ 80 ರೂಪಾಯಿ ನನಗೆ ಕೊಟ್ಟೆ ಈಗ ನಿನಗೆ ಮರಳಿಸಲು ನನ್ನಲ್ಲಿ ಏನೂ ಇಲ್ಲ. ಏನು ಮಾಡುವುದು?" ಎಂದು .. ಅಜ್ಜನ ಮುಖದಲ್ಲಿ ಬೇಸರವಿತ್ತು.
ಒಂದು ಕ್ಷಣ ಮೌನಿಯದ ಹುಡುಗ ನಗುತ್ತಾಹೇಳಿದ.. " ಇರ್ಲಿ ಬಿಡಿ ಅಜ್ಜ ಅಮ್ಮ ಚಾಕೊಲೇಟು ತಗೋ ಎಂದು ಕೊಟ್ಟಿದ್ದರು, ಚಾಕೊಲೇಟ್ ತಿಂದು ಬಿಟ್ಟೆ ಎಂದು ಸುಳ್ಳು ಹೇಳುತ್ತೇನೆ, ಇದು ಗೊತ್ತಾದರೆ ಅಮ್ಮ ಸ್ವಲ್ಪ ಬಯ್ಯಬಹುದು, ಅಕ್ಕಾ ಒಂದೆರಡು ಏಟು ಕೊಡಬಹುದು ಅಷ್ಟೇ ತಾನೇ... ಆದರೆ ಇಂದು ಆ 80 ರೂ. ನಿಮ್ಮ ಜೀವನ ಉಳಿಸಿದೆ... ಆ ಸಿಹಿಯ ಎದುರು ಈ ಚಾಕಲೇಟ್ ಏನೇನು ಇಲ್ಲ ಅಜ್ಜ ಎಂದವನೇ ನಗುತ್ತಾ ಮನೆಯತ್ತ ಓಡಿದ..
ಅಲ್ಲೇ ಇದ್ದ ಆ ಅಂಗಡಿಯ ಹುಡುಗನಿಗೆ ಆ ಮಗುವಿನ ಮಾತು ಕಾಪಾಳಕ್ಕೆ ಬಾರಿಸಿದಂತೆ ಆಗಿತ್ತು, 80 ರೂ ಕಮ್ಮಿ ಇದ್ದರೂ ಅದನ್ನೂ ಕೊಡಬಹುದಿತ್ತು. ಆ ಮಗು ಹೇಳಿದಾಗೆ 80 ರೂ ತನ್ನ ಸಂಬಳದಿಂದ ಹೋದರೂ ಚಿಂತೆ ಇರುತ್ತಿರಲಿಲ್ಲ... ಎಂದು ಯೋಚಿಸಿದವನೇ ಆ 80 ರೂ ಯ ಕ್ರಿಸ್ಪೆಲ್ಲೋ ಚಾಕೊಲೇಟಿನೊಂದಿಗೆ ಹುಡುಗ ಹೋಗುತ್ತಿದ್ದ ಕಡೆ ಜೋರಾಗಿ ಓಡಿದ.. ಹುಡುಗನಿಗೆ ಚಾಕೊಲೇಟು ಕೊಟ್ಟ.. ಇಷ್ಟಗಲ ಅರಳಿತ್ತು ಹುಡುಗನ ಮುಖ.ಮುಗ್ಧ ಹುಡುಗ ಕೇಳಿದ... "ಅಂಕಲ್ ನನ್ನ ಬಳಿ ಹಣ ಇಲ್ಲ" ಎಂದು... ನಕ್ಕ ಅಂಗಡಿಯವ ಹೀಗೆ ಹೇಳಿದ... "ತೊಂದರೆ ಏನಿಲ್ಲ ನನ್ನ ಯಜಮಾನ ಒಂದೆರಡು ಬಯ್ಯ ಬಹುದು, ನನ್ನ ಸಂಬಳದಿಂದ 80 ರೂ ತೆಗೆಯಬಹುದು ಅಷ್ಟೇ ತಾನೇ.. ನೀನು ನನಗೆ ಕಲಿಸಿದ ಅದ್ಭುತ ಜೀವನದ ಪಾಠ ಕ್ಕೆ ಅದು ಕಡಿಮೆಯೇ" ಎಂದುಬಿಟ್ಟ...ಇದೆಲ್ಲವನ್ನು ಗಮನಿಸುತಿದ್ದ ದೂರದಲ್ಲಿ ನಿಂತಿದ್ದ ಮೆಡಿಕಲ್ ನ ಮಾಲಕ ಜೋರಾಗಿ ಕೂಗಿ ಹೇಳಿದ... "ನಿನ್ನ ಸಂಬಳಕ್ಕೆ 80 ಅಲ್ಲಾ 800ರೂ ಕೂಡಿಸಿ ಕೊಡುತ್ತೇನೆ... ನಿನಗೊಂದು ಸಲಾಮು ಎಂದು.
ಅದೆಷ್ಟು ಸುಂದರ ಸಂದೇಶ ನೋಡಿ, ಮಗುವೊಂದು ಹೇಳಿ ಕೊಟ್ಟ ಪಾಠ ಅಂಗಡಿ ಹುಡುಗ, ಅಂಗಡಿ ಮಾಲಕನ ಜೀವನ ಬದಲಾಯಿಸಿದರೆ, ಆ ವೃದ್ಧರ ಜೀವವನ್ನೇ ಉಳಿಸಿ ಬಿಟ್ಟಿತು. ಇಂತಹ ಅದೆಷ್ಟೋ ಪಾಠ ಪ್ರತಿ ನಿತ್ಯ ಸಮಾಜದಿಂದ ನಾವು ಕಲಿಯಬಹುದು.. ಬದುಕು ಬದಲಿಸಬೇಕು ಎಂದು ಕೊಂಡಿದ್ದರೆ, ಅದಕ್ಕೇ ಹಣ ಬೇಡ ಯೋಚನೆಗಳು ಬದಲಾದರೆ ಸಾಕು, ಅಲ್ಲವೇ?
-ಡಾ. ಶಶಿಕಿರಣ್ ಶೆಟ್ಟಿ, ಉಡುಪಿ*
ಚಿತ್ರ ಕೃಪೆ: ಇಂಟರ್ನೆಟ್ ತಾಣ