ಬಾಡದಿರು ಸ್ನೇಹದ ಹೂವೇ...

ಬಾಡದಿರು ಸ್ನೇಹದ ಹೂವೇ...

ಬರಹ

ಸ್ನೇಹದ ಅಂಗಳದಲ್ಲಿ ಕಿರು ನಗೆ ಬೀರುತ್ತಾ ಮತ್ತೊಮ್ಮೆ ಫ್ರೆಂಡ್‌ಶಿಪ್ ಡೇ ಸನ್ನಿಹಿತವಾಗಿದೆ. ಸ್ನೇಹಬಂಧದಲ್ಲಿನ ಗೆಳತನದ ಸವಿಯನ್ನು ನೆನಪಿಸಲು ಮೊಬೈಲ್, ಇಮೇಲ್ ಇನ್‌ಬಾಕ್ಸ್‌ಗಳಿಗೆ ಬಂದು ಸೇರುವ ಸಂದೇಶಗಳೆಷ್ಟು? ಸ್ನೇಹಿತರನ್ನು ಪರಸ್ಪರ ಹೆಣೆಯುವ ಅಂತರ್ಜಾಲ ಸಾಮಾಜಿಕ ಸಮೂಹಗಳಾದ ಆರ್ಕುಟ್, ಫೇಸ್ ಬುಕ್ ಮೊದಲಾದವುಗಳ ಮೂಲಕ ತಲುಪುವ ರಂಗುರಂಗಿನ ಸ್ಕ್ರಾಪ್‌ಗಳು. ಗೆಳೆತನದ ಸ್ನೇಹವನ್ನು ಬಿಂಬಿಸಲು ಎಷ್ಟೆಷ್ಟು ವಿಧಾನಗಳು?. ಒಂದಂತೂ ನಿಜ, ಕಾಲ ಬದಲಾಗುತ್ತಿದ್ದಂತೆ ಗೆಳೆತನದ ರೂಪವೂ ಬದಲಾಗುತ್ತಾ ಬರುತ್ತಿದೆ. ಪುರಾಣಗಳಲ್ಲಿ ಕೃಷ್ಣ -ಸುಧಾಮನ ಗೆಳೆತನದ ಕತೆಯನ್ನು ಓದಿ ಬೆಳೆದವರು ನಾವು. ಇಂತಹ ಗೆಳೆತನವು ಇಂದು ನಮ್ಮೆಲ್ಲೆಡೆಯಲ್ಲಿದೆಯೇ? ಇದ್ದರೂ ಅಪರೂಪವಾಗಿದ್ದು, ಅಂತಹ ಗೆಳೆತನವನ್ನು ಸವಿದವರು ನಿಜವಾಗಿಯೂ ಭಾಗ್ಯಶಾಲಿಗಳೆಂದೇ ಹೇಳಬೇಕು. ಯಾಕೆಂದರೆ ಇದು ಕಲಿಯುಗ! ಇಂದು ತಮ್ಮ ಕಾರ್ಯಸಾಧನೆಗಾಗಿ ಗೆಳೆತನವನ್ನು ಬಳಸಿಕೊಳ್ಳುತ್ತಿರುವವರೇ ಹೆಚ್ಚು. ಏನೇ ಇರಲಿ, ಫ್ರೆಂಡ್‌ಶಿಪ್ ಡೇ ಬಂತೆಂದರೆ ಫ್ರೆಂಡ್‌ಶಿಪ್ ಬ್ಯಾಂಡ್ ಕೈಗೆ ಬಿಗಿದ ಮಾತ್ರಕ್ಕೆ ಗೆಳೆತನದ ಭರವಸೆಯನ್ನು ನಿಭಾಯಿಸಿದಂತೆ ಆಗುತ್ತದೆಯೇ? ಯೇ ದೋಸ್ತಿ ಹಮ್‌ ನಹೀ ಚೋಡೆಂಗೆ..ಎಂದು ನಮ್ಮ ಆಟೋಗ್ರಾಫ್‌ನಲ್ಲಿ ಬರೆದ ಗೆಳೆಯ ಗೆಳತಿಯರು ಎಲ್ಲಿದ್ದಾರೋ ಎಂಬುದು ನಮಗಿಂದು ತಿಳಿದಿಲ್ಲವಾದರೂ ಅಂದಿನ ಗೆಳೆತನದ ಸಿಹಿ-ಕಹಿ ನೆನಪುಗಳು ಮನಸ್ಸಿನಲ್ಲಿ ಎಂದೂ ಹಚ್ಚ ಹಸುರಾಗಿಯೇ ಇವೆ.

ಗೆಳೆತನದ ಸವಿಯನ್ನು ಕೇವಲ ಮಾತುಗಳಲ್ಲಿ ವರ್ಣಿಸುವುದು ಕಷ್ಟ. ಅಂತೆಯೇ ಗೆಳೆತನದಲ್ಲಿಯೂ ಹಲವಾರು ವಿಧಗಳಿವೆ. ಮನಸಾರೆ ಪ್ರೀತಿಸಿ ಜೀವಕ್ಕೆ ಜೀವ ಕೊಡುವ ಸ್ನೇಹಿತರು ಒಂದೆಡೆಯಾದರೆ, ತಮ್ಮ ಕಾರ್ಯಸಾಧನೆಗಾಗಿ ಮಾತ್ರ ಸ್ನೇಹವನ್ನು ಪ್ರಕಟಿಸುವ, 'ಗೋಸುಂಬೆ'ಯಂತೆ ಬಣ್ಣ ಬದಲಿಸುವ ಸ್ನೇಹಿತರೂ ಕೂಡಾ ನಮ್ಮಲ್ಲಿದ್ದಾರೆ. ಏನೇ ಆದರೂ ಸ್ನೇಹಿತರ ಗುಂಪಲ್ಲಿ ನಿಸ್ವಾರ್ಥಿ ಸ್ನೇಹಿತರ ಸಂಖ್ಯೆಯು ಬಹುತೇಕ ಕಡಿಮೆಯಾಗುತ್ತಾ ಹೋಗುತ್ತದೆ ಎಂದೇ ಹೇಳಬಹುದು. ಜೀವನದ ಜಂಜಾಟದಲ್ಲಿ ಆಪತ್ತಿಗೆ ಸಿಲುಕಿದಾಗ ನಮಗೆ ಸಹಾಯ ಮಾಡುವವನೇ ನಿಜವಾದ ಮಿತ್ರ. ಗೆಳೆಯರ ಸಂಖ್ಯೆ ಎಷ್ಟೇ ಇರಬಹುದು ಆದರೆ ನಾವು ಕಷ್ಟದಲ್ಲಿದ್ದಾಗ ನಮ್ಮ ನೆರವಿಗೆ ಬರುವವರು ಎಷ್ಟು ಮಂದಿ ಇದ್ದಾರೆ? ತಾನಾಯಿತು ತನ್ನ ಪಾಡಾಯಿತು ಎಂದು ಹೇಳುವ ಇಂದಿನ ಜನಾಂಗ ಪರಸ್ಪರ ವ್ಯಾವಹಾರಿಕವಾದ ಸ್ನೇಹವನ್ನೇ ಬಯಸುತ್ತಿರುವುದು ಖೇದಕರ. ಇಂತಿರುವಾಗಲೂ ತಮ್ಮ ಗೆಳೆತನವನ್ನು ಕಾಯ್ದುಕೊಂಡು ಬಂದಿರುವವರು ಅನೇಕ ಮಂದಿ ನಮ್ಮ ನಿಮ್ಮೆಡೆಯಲ್ಲಿ ಇದ್ದಾರೆ ಅನ್ನುವುದು ಸ್ವಲ್ಪ ಸಮಾಧಾನ ತಂದೊಡ್ಡಿದೆ.

ಕಳೆದ ವಾರದ ಹಿಂದೆಯಷ್ಟೇ 'ದಿ ಹಿಂದು' ಪತ್ರಿಕೆಯ ಯಂಗ್ ವರ್ಲ್ಡ್‌ನಲ್ಲಿ ಪ್ರಕಟವಾದ ಸುದ್ದಿಯೊಂದು ನನ್ನ ಗಮನ ಸೆಳೆಯಿತು. ನೈರೋಬಿ ಬಳಿಯ ಕೊಳಚೆಗಲ್ಲಿಯಲ್ಲಿ ವಾಸವಾಗಿರುವ ಮುಟವಾ ಎಂಬ 11ರ ಹರೆಯದ ಪೋರ ತನ್ನ ಅಂಗವಿಕಲ ಸ್ನೇಹಿತನಾದ ಬ್ರೈಸೆ ಅನ್ನು ತನ್ನ ಹೆಗಲ ಮೇಲೆ ಕುಳ್ಳಿರಿಸಿ ಸುಮಾರು 2 ಕಿ.ಮೀ ದೂರದಲ್ಲಿರುವ ಶಾಲೆಗೆ ಕರೆದುಕೊಂಡು ಹೋಗುತ್ತಾನೆ. ತನ್ನ ಸ್ನೇಹಿತನೂ ಸಹಪಾಠಿಯೂ ಆದ ಬ್ರೈಸೆಯನ್ನು ದುಸ್ಥರವಾದ ಹಾದಿಯಲ್ಲಿ ಬೆನ್ನ ಮೇಲೆ ಹೇರಿಕೊಂಡು ಹೋಗಿ, ಅವನಿಗೂ ವಿದ್ಯಾರ್ಜನೆ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟು, ಅವನ ಸುಖ ದುಃಖಗಳಲ್ಲಿ ಸಹಭಾಗಿಯಾದ ಮುಟವಾನ ಕಥೆಯನ್ನು ಓದಿದಾಗ ನಿಜವಾಗಿಯೂ 'ಮುಟವಾ..ಯು ಆರ್ ಗ್ರೇಟ್' ಅಂತ ಮನಸ್ಸಲ್ಲಿಯೇ ಹೇಳಿಕೊಂಡಿದ್ದೆ. ಸಂಕಷ್ಟದಲ್ಲಿ ಸಿಲುಕಿದಾಗ ತನ್ನ ಜೀವನವೇ ಹೊರೆಯೆಂದು ಗೋಳಿಡುವ ನಾವು ಮುಟವಾ ಎಂಬ ಬಾಲಕನ ಗೆಳೆತನದ ಸ್ನೇಹದ ಮುಂದೆ ಏನೂ ಅಲ್ಲ ಎಂದೆನಿಸುತ್ತದೆ.

ಕಾಲ ಬದಲಾಗಿದೆ, ಅದರಂತೆಯೇ ಗೆಳತನದ ಸ್ನೇಹವನ್ನು ಪ್ರಕಟಿಸುವ ಪರಿಯೂ ಬದಲಾಗಿ ಹೋಗಿದೆ. ಹಳೆಕಾಲದಲ್ಲಿ ಸ್ನೇಹಿತರು ಮನೆಯ ಹಿಂದಿನ ಗುಡ್ಡಕ್ಕೆ ಹೋಗಿಯೋ, ಇನ್ನಾವುದೋ ಶಾಂತ ಸ್ಥಳಗಳಲ್ಲಿ ಹೋಗಿ ತಮ್ಮ ಸ್ನೇಹಿತರೊಡನೆ ಹರಟುತ್ತಿದ್ದರು. ಒಂದು ರುಪಾಯಿಯ ನೆಲಕಡಲೆ ಮೆಲ್ಲುತ್ತ ತಮ್ಮ ಮನಸ್ಸಿನ ನೋವು ಸಂತೋಷಗಳನ್ನು ಹಂಚುತ್ತಿದ್ದರು.ಇದು ಮಾತ್ರವಲ್ಲದೆ ಹಲವು ವರುಷಗಳ ಹಿಂದೆ ಪತ್ರಿಕೆಯ ಕ್ಲಾಸಿಫೈಡ್ಸ್ ವಿಭಾಗದಲ್ಲಿ ರಾರಾಜಿಸುತ್ತಿದ್ದ 'ಪೆನ್ ಫ್ರೆಂಡ್' ಎಂಬ ಪತ್ರ ಗೆಳೆತನವೂ ಇಂದು ಮಾಯವಾಗಿ ಬಿಟ್ಟಿದೆ. ಅಂದ ಹಾಗೆ, ತಮ್ಮ ಕಾರ್ಯದಲ್ಲಿಯೇ ತಲ್ಲೀನರಾಗಿ ಲೋಕವನ್ನೇ ಮರೆತು ಬಿಡುವ ಇಂದಿನ ಸಮೂಹಕ್ಕೆ ಪತ್ರ ಬರೆಯಲು ಸಮಯವೆಲ್ಲಿ? ಜೀವನದಲ್ಲಿ ಆಧುನಿಕತೆಯನ್ನು ಮಾತ್ರ ಮೈಗೂಡಿಸಿಕೊಂಡಿರುವ ಉದ್ಯೋಗಿ ಯುವ ಜನಾಂಗವು ಸಮಯಕ್ಕೆ ಸವಾಲಾಗಿ ಜೀವನದ ಗಾಡಿಯನ್ನು ಹೈ ಸ್ಪೀಡ್‌ನಲ್ಲಿ ಚಲಾಯಿಸುತ್ತಿರುವಾಗ ಇಮೇಲ್ , ಮೊಬೈಲ್ ಸಂದೇಶ, ಚಾಟ್ ಪೆಟ್ಟಿಗೆಯ ಮೂಲಕ ಗೀಚುವ ಒಂದೆರಡು ಸಾಲುಗಳು, ಬಿಡುವಿನಲ್ಲಿ ಒಂದೈದು ನಿಮಿಷದ ಫೋನ್ ಕರೆ ಮೂಲಕವೇ ತಮ್ಮ ಗೆಳೆಯರೊಂದಿಗೆ ಹರಟುತ್ತಾರೆ. ಇನ್ನು, ಕಾಲೇಜು ವಿದ್ಯಾರ್ಥಿಗಳ ಕತೆಯೇ ಬೇರೆ. ಕ್ಯಾಂಪಸ್‌ನಲ್ಲಿ ಎಲ್ಲಿ ನೋಡಿದರೂ ಗೆಳೆಯರ ದಂಡೇ ಇರುತ್ತದೆ. ಗೆಳೆಯರು, ಮೊಬೈಲ್ ಇದ್ದರೆ ತಾನೇ ಕ್ಯಾಂಪಸ್‌ನಲ್ಲಿ ಮಜಾ! ಇಂತಹ ಗೆಳೆತನಕ್ಕೆ ಪುಷ್ಠಿ ನೀಡುವಂತೆ, ಮೊಬೈಲ್ ಮೂಲಕ ಗೆಳೆಯರೊಂದಿಗೆ ಸಾಕಷ್ಟು ಸಮಯ ಹರಟಲು ವಿಧ ವಿಧದ ಆಫರ್‌ಗಳನ್ನು ಮೊಬೈಲ್ ಕಂಪೆನಿಗಳು ಪದೇ ಪದೇ ಪರಿಚಯಿಸುತ್ತಾ ಇರುತ್ತವೆ. ಚಲನಚಿತ್ರ ಮಾಧ್ಯಮಗಳಂತೂ ಈ ಗೆಳೆತನದ ಕತೆಗಳನ್ನೇ ಬಂಡವಾಳವಾಗಿರಿಸಿ ಕೊಂಡು ಬಾಕ್ಸ್ ಆಫೀಸ್ ಹಿಟ್ ಆಗಲು ಪ್ರಯತ್ನಿಸುತ್ತವೆ. ಶೋಲೆಯಂತಹ ಹಳೆಯ ಚಿತ್ರಗಳಿಂದ ಹಿಡಿದು ಜಾನೆ ತು..ಯ ಜಾನೇ ನಾ ಎಂಬ ಹೊಸ ಕಾಲದ ಚಿತ್ರಗಳೂ ಗೆಳೆತನಕ್ಕೆ ಮೀಸಲು. ಗೆಳೆತನದ ಕತೆಯಾಧಾರಿತ ಯಾವುದೇ ಭಾಷೆಯ ಚಿತ್ರಗಳೇ ಇರಲಿ, ಜನ ಮೆಚ್ಚುವುದಂತೂ ಖಂಡಿತ.

ಪ್ರಸ್ತುತ ತಂತ್ರಜ್ಞಾನದ ಬಳಕೆ ಮುಂದುವರಿಯುತ್ತಿರುವಂತೆ ಹೆಚ್ಚುತ್ತಿರುವ ಸೋಷ್ಯಲ್ ನೆಟ್‌ವರ್ಕ್ ಸೈಟ್‌ಗಳೂ ಕೂಡಾ ಪ್ರಾಯ, ವರ್ಗ, ಭೇದವಿಲ್ಲದೆ ಸ್ನೇಹ ವಲಯವನ್ನು ಸೃಷ್ಠಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ವರುಷಗಳ ಹಿಂದೆ ತಮ್ಮಿಂದ ದೂರವಾಗಿರುವ ಗೆಳೆಯರನ್ನು ಹುಡುಕಿ ಮತ್ತೊಮ್ಮೆ ಗೆಳೆತನದ ಸವಿಯನ್ನು ಆಸ್ವಾದಿಸಲು, ಗೆಳೆಯರಿಂದ ಗೆಳೆಯರಿಗೆ ಯಾವುದೇ ಎಲ್ಲೆಯಿಲ್ಲದೆ ಪರಸ್ಪರ ಗೆಳೆತನದ ಕೊಂಡಿಯನ್ನು ಬೆಸೆದುಕೊಳ್ಳಲು ಸಹಾಯವಾಗುವ ಸಾಮಾಜಿಕ ಸೈಟುಗಳು ಗೆಳೆತನದ ಸಂಬಂಧಕ್ಕೆ ಹೊಸ ಆಯಾಮವನ್ನು ನೀಡಿದೆ ಎಂದರೆ ತಪ್ಪಾಗಲಾರದು. ತಮ್ಮಿಂದ ದೂರವಾದ ಗೆಳೆಯ ಗೆಳತಿಯರನ್ನು ಮತ್ತೊಮ್ಮೆ ಸಂಧಿಸುವ ಅದರಂತೆಯೇ ಯಾವುದೇ ಸೀಮಾ ರೇಖೆಯಿಲ್ಲದೆಯೇ ಇಷ್ಟರವರೆಗೆ ಕಾಣದ ಅಪರಿಚಿತ ವ್ಯಕ್ತಿಯೊಂದಿಗೆ ಗೆಳೆತನವನ್ನು ಬೆಳೆಸಲೂ ಇವುಗಳು ಸಹಾಯಕವಾಗುತ್ತದೆ. ಬಹುತೇಕ ಯುವ ಜನರ ಅಭಿಪ್ರಾಯದಂತೆ ಇಂದು ಸೋಷ್ಯಲ್ ನೆಟ್‌ವರ್ಕಿಂಗ್ ಸೈಟುಗಳನ್ನು ಹೊರತು ಪಡಿಸಿದರೆ ಬಹುಬೇಗನೆ ಸ್ನೇಹ ವಲಯವನ್ನು ಸೃಷ್ಟಿಸಲು ಮೊಬೈಲ್ ಸಹಕಾರಿ. ಕೇವಲ ಒಂದು ಮಿಸ್ಡ್ ಕಾಲ್ ಅಥವಾ ಒಂದು ಮೆಸೇಜ್ ಸಾಕು. ದಿನ ಕಳೆದಂತೆ ಮೊಬೈಲ್ ಫ್ರೆಂಡ್ ತಮ್ಮ ಸ್ನೇಹಿತರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾನೆ. ಮೊಬೈಲ್ ಅಥವಾ ಚಾಟ್ ರೂಮ್‌ಗಳಲ್ಲಿ ದೊರೆತ ಸ್ನೇಹಿತರು ಕೆಲವೊಮ್ಮೆ ಬಾಳಸಂಗಾತಿಯಾಗಿ ಜೀವನದಲ್ಲಿ ಸ್ಥಾನಗಿಟ್ಟಿಸಿಕೊಂಡ ಪ್ರಕರಣಗಳು ಎಷ್ಟೋ ಇವೆ. ಆದರೂ ಗುಲಾಬಿ ಗಿಡದಲ್ಲಿ ಮುಳ್ಳುಗಳಿರುವಂತೆಯೇ ಇಂತಹ ಮೊಬೈಲ್, ಇಮೇಲ್, ಚಾಟ್ ಸ್ನೇಹಿತರಿಂದಾಗಿ ಅಪಾಯಕ್ಕೆ ಸಿಲುಕಿದ ಮಂದಿಗಳೂ ಇದ್ದಾರೆ. ಸದ್ಯ, ಇಂದಿನ ಪರಿಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಸಲುಗೆ ಬೆಳೆಸುವುದು ತುಂಬಾ ಅಪಾಯಕಾರಿ.

ಏನೇ ಆದರೂ ಮನುಷ್ಯ ಸಾಮೂಹಿಕ ಜೀವಿಯಲ್ಲವೇ? ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಅಥವಾ ಪ್ರಕಟಿಸಲು ಅವನಿಗೆ ಸಂಗಾತಿ ಬೇಕೆ ಬೇಕು. ಇಂತಿರುವಾಗ ಸ್ನೇಹಿತರೊಂದಿಗೆ ತಮ್ಮ ಭಾವನೆಗಳನ್ನು ಮನದಾಳದ ಮಾತುಗಳನ್ನು ಹಂಚಿಕೊಂಡು 'ನೆಮ್ಮದಿ'ಯನ್ನು ಪಡೆಯಲು ಮನಸ್ಸು ಹಂಬಲಿಸದೇ ಇರುವುದಿಲ್ಲವಲ್ಲಾ!. ಎಷ್ಟೇ ಒಲವಿರುವ ಅಪ್ಪ ಅಮ್ಮ ನಮ್ಮೊಂದಿಗೆ ಇದ್ದರೂ ಕೆಲವು 'ಖಾಸಗಿ' ಮಾತುಗಳು ಗೆಳೆಯರಲ್ಲಿಯೇ ಹೇಳಬೇಕಾಗಿರುತ್ತವೆ. ಅದಕ್ಕಾಗಿಯೇ ನಮ್ಮನ್ನು ಅರ್ಥೈಸುವ ಅಪ್ಪ ಅಮ್ಮ ನಮ್ಮ ನೆಚ್ಚಿನ ಗೆಳೆಯರಂತೆ ಇರಬೇಕೆಂಬುದು ಬಹುತೇಕ ಮಕ್ಕಳೂ ಆಗ್ರಹಿಸುತ್ತಾರೆ. ಈ ಸ್ನೇಹವಲಯದಲ್ಲಿ ಒಂದಾಗುವ ಗೆಳೆತನದ ಅನುಬಂಧವು ನಮ್ಮ ಮನದಾಳದಲ್ಲಿ ಎಂದಿಗೂ ಹಸಿರಾಗಿಯೇ ಇರುವುದಕ್ಕೆ ಕಾರಣಗಳೂ ಹಲವು. ನಮ್ಮ ಜೀವನದ ಪ್ರತಿಯೊಂದು ಹಂತದಲ್ಲಿಯೂ ನೆರಳಾದ ಆ ಗೆಳೆಯರು.. ನಮ್ಮ ನಗುವಿನ ಜೊತೆಗೆ ನಕ್ಕು, ದುಃಖ ಬಂದಾಗ ಸಂತೈಸಿ ಧೈರ್ಯ ತುಂಬಿದವರು. ಎಡವಿದಾಗ ಕೈ ಹಿಡಿದೆಬ್ಬಿಸಿದ ಮುನ್ನಡೆಯುವಂತೆ ಮಾಡಿದ ಇವರು, ನಮ್ಮ ತಪ್ಪುಗಳನ್ನು ಖಂಡಿಸಿ, ಒಪ್ಪುಗಳನ್ನು ಪ್ರಶಂಸಿಸಿದವರು.. ಹೀಗೆ ಹಲವಾರು ರೂಪದಲ್ಲಿ ನಮ್ಮ ಸಾಥ್ ನೀಡುವ ಸ್ನೇಹಿತರು ಕೆಲವು ಸಂದರ್ಭಗಳಲ್ಲಂತೂ ನಮ್ಮ ಪಾಲಿನ ದೇವರೇ ಆಗಿ ಬಿಡುತ್ತಾರೆ.

'ಫ್ರೆಂಡ್‌ಶಿಪ್ ಈಸ್ ಬ್ಲೆಸ್ಸಿಂಗ್' ಅನ್ನೋದು ಉಕ್ತಿ. ಇಲ್ಲಿ ಪರಸ್ಪರ ಗೌರವ, ನಂಬಿಕೆ, ಪ್ರೀತಿ ಎಲ್ಲವೂ ಸೇರಿಕೊಂಡು ಸುದೃಢವಾದ ಗೆಳೆತನದ ಸಂಬಂಧವು ಚಿಗುರೊಡೆದು ಕಾಲ ಕಳೆದಂತೆ ಬಲಿತು ಹೆಮ್ಮರವಾಗುತ್ತದೆ. ಅದೇ ವೇಳೆ ತನ್ನೊಂದಿಗಿರುವ ಗೆಳೆಯರ ಸಂಖ್ಯೆಯನ್ನು ಇತರರ ಮುಂದೆ ಪ್ರದರ್ಶಿಸಿ ಬೀಗುವುದಕ್ಕಿಂತ ಜೀವನದಲ್ಲಿ ನಿಜವಾದ, ಆಪತ್ತಿನಲ್ಲಿಯೂ ನಮ್ಮೊಂದಿಗೆ ಇದ್ದು ನಿಸ್ವಾರ್ಥ ಸ್ನೇಹ ಬಯಸುವ ಓರ್ವ ಆಪ್ತ ಸ್ನೇಹಿತ ನಮಗಿದ್ದರೆ ನಾವೇ ಭಾಗ್ಯಶಾಲಿಗಳು ಅಂದುಕೊಳ್ಳಬೇಕು.

ಅಂತೂ ಒಟ್ಟಿನಲ್ಲಿ, "ನಾವು ಉನ್ನತ ಸ್ಥಾನದಲ್ಲಿರುವಾಗ ಸ್ನೇಹಿತರಿಗೆ ನಾವು ಯಾರೆಂದು ತಿಳಿಯುತ್ತದೆ. ನಾವು ಕೆಳಕ್ಕೆ ಜಾರುವಾಗ ಸ್ನೇಹಿತರು ಯಾರೆಂದು ನಮಗೇ ತಿಳಿಯುತ್ತದೆ" ಎಂಬ ಫಾರ್ವರ್ಡ್ ಮೆಸೇಜ್ ಇನ್‌ಬಾಕ್ಸ್‌ ಅನ್ನು ತೂರಿಕೊಂಡಾಗ ನೈಜ ಜೀವನದಲ್ಲಿ ಇದು ಅಪ್ಪಟ ಸತ್ಯ ಎಂದೆನಿಸಿತ್ತು. ಪ್ರಸಕ್ತ, ಹಲವಾರು ಗೆಳೆಯರೊಂದಿಗೆ ಹರಟುತ್ತಾ, ಮಜಾ ಮಾಡಿ ಸಮಯ ಕಳೆಯುವುದೇ ಗೆಳೆತನದ ಪ್ರೀತಿಯನ್ನು ಪ್ರಕಟಿಸುವ ರೀತಿ ಎಂಬುದಾಗಿ ಬಹುತೇಕ ಮಂದಿ ತಪ್ಪಾಗಿ ತಿಳಿದುಕೊಂಡಿದ್ದಾರೆ. ಪಿಜ್ಜಾ ಹಟ್‌ನಲ್ಲಿ ಹರಟೆ ಹೊಡೆಯುತ್ತಾ, ಸಿನಿಮಾ ಹಾಲ್‌ನಲ್ಲಿ ಸಿಳ್ಳೆ ಹಾಕಿ, ಹೆಗಲಿಗೆ ಕೈ ಹಾಕಿ ನಡೆಯುವುದೇ ಗೆಳೆತನ ಎಂಬುದನ್ನು ಬಹುತೇಕ ಮಾಧ್ಯಮಗಳು ಬಿಂಬಿಸುತ್ತಿರುವುದು ಇವುಗಳಿಗೆ ಪ್ರೇರಣೆಯೆಂದೇ ಹೇಳಬಹುದು. ಆದರೆ ಗೆಳೆಯರ ನಡುವಣವಿರುವ ಆ ನಿಷ್ಕಲ್ಮಶ, ನಿಸ್ವಾರ್ಥ ಸ್ನೇಹವು ಕಡಲಾಳದಲ್ಲಿನ ಚಿಪ್ಪಲ್ಲಡಗಿದ ಮುತ್ತಿನಂತೆ, ಕೆಲವೊಮ್ಮೆ ಗಾಳಿಯಲ್ಲಿ ಪಸರಿಸಿದ ಸಂಪಿಗೆಯ ಕಂಪಿನಂತೆ ಸದ್ದಿಲ್ಲದೆ ಅನುಭವಕ್ಕೆ ಬರುವಾಗ ಮಾತ್ರ 'ಗೆಳೆತನ'ದ ಸ್ನೇಹಕ್ಕೆ ನಿಜವಾದ ಅರ್ಥ ದೊರೆಯುವುದು.