ಬಾಳಿಗೊಂದು ಚಿಂತನೆ - 117

ಬೇರೆಯವರ ಶ್ರಮವನ್ನು, ಕಷ್ಟವನ್ನು ಪರಿಹರಿಸುವುದು ಮಹಾತ್ಮರ ಸ್ವಭಾವ. ಅವರು ತಮಗೆಂದು ಏನನ್ನೂ ಉಳಿಸಿಕೊಳ್ಳಲಾರರು. ಹಗಲು ಸೂರ್ಯನ ಶಾಖ ಜೀವಕೋಟಿಗಳಿಗೆ ಬೇಕೇ ಬೇಕು. ಹಾಗೆಯೇ ಅದೇ ಝಳದ ಕಾಯುವಿಕೆಯನ್ನು ಇರುಳ ಚಂದಿರ ಎಷ್ಟೊಂದು ತಂಪಾಗಿಸುತ್ತನಲ್ಲವೇ? ತಮ್ಮ ತಮ್ಮ ಕಾಯಕ ಯಾರು ಬರಲಿ ಹೋಗಲಿ, ಏನೂ ಬೇಕಾದರೂ ಘಟಿಸಲಿ ನಿರಂತರ ಶ್ರದ್ಧೆ ಯಿಂದ ಮಾಡುವುದೇ ಧರ್ಮ. ಮಾನವರಾಗಿ ಬುವಿಗೆ ಬಂದ ನಮಗೆಲ್ಲ ಈ ಪ್ರಕೃತಿ ಕಲಿಸಿದ ಪಾಠವಿದು. ಆಕಾಶ, ಭೂಮಿ, ಮಳೆ, ಗಾಳಿ, ಬಿಸಿಲು, ತಂಪು, ಜಲ, ವಾಯು, ಮಣ್ಣು, ಹಸಿರು ಸಸ್ಯಗಳು, ಋತುಗಳು, ಪ್ರಾಣಿಗಳು ಎಲ್ಲದಕ್ಕೂ ನಾವು ಋಣಿಯಾಗಿರಬೇಕು. ಮಹಾತ್ಮರ ಜೀವನವೆಂಬುವುದು ನಮಗೆಲ್ಲ ಒಂದು ಪಾಠವಿದ್ದಂತೆ. ತಮಗೆಂದು ಕಿಂಚಿತ್ ಯಾವುದನ್ನೂ ಉಳಿಸಿಕೊಳ್ಳಲಾರದ ಮನಸ್ಸು ಅವರದು. ಆದರೆ ನಾವೇನು ಮಾಡುತ್ತಿದ್ದೇವೆ ಎಂದರೆ, ಗಳಿಸಿದ್ದು, ಸಂಪಾದಿಸಿದ್ದು ಎಲ್ಲವೂ ನಮಗೇ ಬೇಕೆಂಬ ವ್ಯಾಮೋಹ ನಾವು ಬಿಟ್ಟರೂ ಅದು ನಮ್ಮನ್ನು ಬಿಟ್ಟು ಹೋಗದು. ಏನಾದರೂ ಕಡು ಕಷ್ಟದಲ್ಲಿದ್ದವರಿಗೆ ಸ್ವಲ್ಪ ಸಹಕರಿಸಿದರೆ ನಮ್ಮ ಸಂಪಾದನೆಗೆ ತೂಕವಿರಬಹುದು, ದೇವ ಮೆಚ್ಚುವ ಕೆಲಸವದು ಅಲ್ಲವೇ? ಮಹಾತ್ಮರು ತಮ್ಮಿಂದ ಆದಷ್ಟೂ ಇತರರಿಗೆ ಒಳ್ಳೆಯದನ್ನೇ ಬಯಸುವರು. ಕೆಟ್ಟಹಾದಿಯಲ್ಲಿ ನಡೆಯುವವರನ್ನು ಸರಿ ದಾರಿಯಲ್ಲಿ ಹೋಗುವಂತೆ ಪ್ರೇರೇಪಿಸುವರು. ತಾವು ಬೆಳೆಯುವುದರ ಜೊತೆ ಇತರರನ್ನೂ ಬೆಳೆಯುವಂತೆ, ಬೆಳಗುವಂತೆ ಮಾಡುವುದು ಜ್ಞಾನಿಗಳ, ಮಹಾತ್ಮರ ಗುಣ. ಭಗವತ್ಪಾದರು ಒಂದೆಡೆ
*ಮೃತ್ಯೋಪ್ಯರ್ಥಂ ನಮೋಕ್ಷ್ಯಾಮಿ ಬದ್ಧ್ವಾನೇಷ್ಯಾಮಿ ಮೂರ್ಧನಿ/*
*ಇತಿ ಚೇತ್ ಸುದೃಢೋ ಲೋಭ: ಪಾತ್ರೇ ದೇಯಮಶಂಕಿತಮ್//*
ಸಂಪಾದಿಸಿದ ಗಳಿಕೆಯನ್ನೆಲ್ಲ ನಾವು ಹೋಗುವಾಗ ಹೊತ್ತುಕೊಂಡು ಹೋಗುವುದಿಲ್ಲ. ಸತ್ತರೂ ಬಿಡಲಾರೆ, ಶಿರದ ಮೇಲಿಟ್ಟು ಒಯ್ಯುವೆ ಎಂಬ ಲೋಭವೇ ಹೆಚ್ಚಿನದಾದರೆ, ಖಂಡಿತಾ ಅದನ್ನು ಇಡಬೇಡ. ದಾನ ಮಾಡು, ನಿನ್ನೊಂದಿಗೆ ಒಳ್ಳೆಯವರಿಗೆ ಸೇರಲಿ ಆ ಐಶ್ವರ್ಯ ಎಂದು ಹೇಳಿದ್ದಾರೆ. ಮಾತ್ರ ಸತ್ಪಾತ್ರರಿಗೆ ನೀಡಬೇಕು, ಕೃತಘ್ನರಿಗೆ ನೀಡದಿರಿ.
‘ದಾನಧರ್ಮ’ ನಮ್ಮೊಂದಿಗೆ ಬರುವಂತಹುದು. ಕೂಡಿಟ್ಟರೆ ಏನೂ ಬೆನ್ನ ಹಿಂದೆ ಬಾರದು. ಭಗವಾನ್ ಶ್ರೀಕೃಷ್ಣನ ಉಪದೇಶವೂ ಇದುವೇ ಆಗಿದೆ. ನಾವು ಸಹ ನೂರಕ್ಕೆ ನೂರು ಸಾಧ್ಯವಾಗದಿದ್ದರೆ ಬೇಡ,ಕಿಂಚಿತ್ ಸಹಕರಿಸೋಣ,ಬದುಕು ಸಾರ್ಥಕ ಪಡಿಸಿಕೊಳ್ಳೋಣ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಅಂತರ್ಜಾಲ ತಾಣ