ಬಾಳಿಗೊಂದು ಚಿಂತನೆ - 66

ಬಾಳಿಗೊಂದು ಚಿಂತನೆ - 66

ನಾಗರಪಂಚಮಿ ಹಬ್ಬ ಬಂದಿದೆ. ಎಲ್ಲಾ ಹಬ್ಬಗಳಿಗೂ ಅದರದ್ದೇ ಆದ ವೈಶಿಷ್ಠ್ಯತೆಯಿದೆ. ಇಂದು ಹೆಚ್ಚಿನ ಮನೆಗಳಲ್ಲಿರುವ ‘ಬನ’ ಗಳನ್ನು ಸಂಪೂರ್ಣವಾಗಿ ಕಡಿಯಲಾಗಿದೆ. ಅಲಂಕಾರಿಕವಾಗಿ ಕಟ್ಟೆಯನ್ನು ಕಟ್ಟಿ, ಅಲ್ಲಿಯೇ ತಮ್ಮ ನಂಬಿಕೆಯಂತೆ ಹಾಲು, ಸಿಹಿಯಾಳ, ಹಣ್ಣು ಅರ್ಪಿಸುತ್ತಾರೆ. ಅವರವರ ಶೃದ್ಧೆ,ನಂಬಿಕೆ, ಆಚಾರ ವಿಚಾರ ಅವರವರಿಗೆ ಬಿಟ್ಟ ವಿಚಾರ. ಹಿರಿಯರಿಂದ ನಡೆದು ಬಂದ ಪದ್ಧತಿಯೂ ಇರಬಹುದು. ಜೊತೆಗೆ ಆ ನಾಗಬನದ ಸುತ್ತ ದಯವಿಟ್ಟು ಒಂದೊಂದು ಗಿಡನೆಡುವ ಕಾರ್ಯಕ್ರಮ ಮಾಡಿದರೆ ಪರಿಸರಕ್ಕೆ ನಮ್ಮಿಂದಾದ ಕೊಡುಗೆ ನೀಡಿದ ಹಾಗೆ ಆಗುತಿತ್ತು. ಸಹಜವಾಗಿ ಅಲ್ಲೊಂದು ಹುತ್ತವಿದ್ದರೆ ಎಷ್ಟು ಚಂದವಲ್ಲವೇ? ಹಾವುಗಳ ವಾಸ ಹುತ್ತ, ಬಿಲಗಳಲ್ಲಿ. ಹಾವುಗಳು ಹೊರಗೆ ಕಾಣಸಿಗಲು ಇದೂ ಒಂದು ಕಾರಣವಿರಬಹುದು. ಎಲ್ಲಾ ಕಡೆ ಜೆಸಿಬಿ ಯಂತ್ರಗಳ ಉಪಯೋಗ. ಬಿಲ,ಹುತ್ತಗಳ ನಾಶದ ಕಾರಣ ವಾತಾವರಣದಲ್ಲಿ ಹಾವುಗಳು ಹರಿದಾಡಲು ಆರಂಭಿಸಿರಬಹುದು. ಹಾವು, ಹಲ್ಲಿ, ಕಪ್ಪೆ ಸರೀಸೃಪಗಳೆಲ್ಲ ಒಂದಕ್ಕೊಂದು ಪೂರಕ ಪೋಷಕ. ಹಸಿರು ಸಸ್ಯಗಳು, ಪೊದೆಗಿಡಗಳು, ಹುಲ್ಲಿನ ಗಿಡಗಳು ಇವೆಲ್ಲವನ್ನೂ ಮತ್ತೆ ನೆಟ್ಟು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಈ ಸಂದರ್ಭದಲ್ಲಿ ನಾನು ರಚಿಸಿದ ಕವನವೊಂದನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ. ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.

***

ನಾಗದೇವ ಹರಸಿ ಸಲಹು

ಶ್ರಾವಣ ಮಾಸದ ಶುಕ್ಲ ಪಕ್ಷ

ಪಂಚಮಿ ದಿನವದು ಬಂತು ನೋಡಿ

ನಾಗನಿಗೆ ಹಾಲು ಎರೆಯುವ 

ನಾಗರಪಂಚಮಿ ಆಚರಿಸುವ

ಪರೀಕ್ಷಿತ ರಾಜನ ಸಾವಿಗೆ

ಸಿಟ್ಟಿಗೆದ್ದ ಜನಮೇಜಯ ಅರಸ

ಸರ್ಪಯಜ್ಞ ಮಾಡಲು ಮುಂದಾದ 

ಆಸ್ತಿಕ ಮುನಿಯ ಮನವೊಲಿಕೆಗೆ

ಅಸ್ತು ಎಂದು  ಅಪ್ಪಣೆ ಕೊಡಿಸಿದ

ಸರ್ಪ ಸಂತತಿ ಉಳಿಸಿ ಬೆಳೆಸಿದ||

 

ಬುವಿಯ ಮೇಲೆ ಸಕಲ ಜೀವಕು

ಬದುಕುವ ಹಕ್ಕು ಇರಲೇಬೇಕು

ಒಂದಕ್ಕೊಂದು ಪೂರಕ ಪೋಷಕ

ಅದನು ಅರಿತು ನಡೆಯಲೆಬೇಕು

ಬಾಲಕ ಶ್ರೀ ಕೃಷ್ಣ ಯಮುನೆಯ ತಟದಿ

ದುಷ್ಟ ಕಾಳಿಂಗನ ಮರ್ಧಿಸಿ ಗೆಲಿದ

ಪಂಚಮಿ ದಿನದ ಈ ನೆನಪಿಗೆ

ಹಬ್ಬದ ಆಚರಣೆ ಗೌಜಿ ಗಮ್ಮತ್ತು

ಸಹೋದರರ ನಾಶವ ತಡೆದು

ವಾಸುಕಿ ವರವನ್ನು ಅಬಲೆಗೆ ನೀಡಿದ||

 

 ಲಯಾಧಿಕಾರಿ ಪರಮೇಶನ ಪೂಜಿಸಿ

ಶಿವನ ಒಲುಮೆಯನು ಪಡೆಯೋಣ

ಉಂಡೆ ತಂಬಿಟ್ಟು ಚಕ್ಕುಲಿ ಸಿಹಿಯಾಳ

ನೊರೆಹಾಲು ಹಣ್ಣು ನಾಗಪ್ಪಗೆ ನೀಡಿ

ನೈವೇದ್ಯ ಪೂಜೆ ಭಕ್ತಿಯಲಿ ಗೈದು

ಕಂಟಕವ ಪರಿಹರಿಸು ಸರ್ಪರಾಜನೆ 

ಸತ್ಯ ಸತ್ವ ಜೀವನದ ಮೆಟ್ಟಿಲು

ಲೋಕ ಕ್ಷೇಮ ಹರಸಿ ಕಾಪಾಡು

ನಿರ್ಭಯವಾಗಿ ಬದುಕು ನಡೆಸಲು

ನಾಗದೇವನೆ ಹರಸಿ ಸಲಹು||

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್