ಬಿಡುಗಡೆಯ ಹಾಡುಗಳು (ಭಾಗ ೧೭) - ಅನಾಮಿಕ ಕವಿಗಳು
ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಬಹಳಷ್ಟು ಅನಾಮಿಕ, ಅಜ್ಞಾತ ಕವಿಗಳ ಕವನಗಳು ಇವೆ. ಈ ವಾರ ಅಂತಹ ಎರಡು ಕವಿಗಳ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೇವೆ.
ಏಕೆ ಧರಿಸುವೆ ಸಾಕು ಬಿಡು ಪರದೇಶಿ ಜನರಾ ವಸ್ತ್ರವಾ
(‘ಮೇರಾ ಮೌಲಾ ಬುಲಾ’ ಎಂಬಂತೆ)
ಮಾತೆ ಭಾರತಿಯ ಸ್ವತಂತ್ರ ಮಂತ್ರ ವಂದೇಮಾತರಂ ।
ಘಾತುಕೀ ವಿದೇಶಿ ಜನರಿಗೆ ದಾಸರಾಗಿರೆ ಸತತಂ ॥
ಏಕೆ ಧರಿಸುವೆ ಸಾಕು ಬಿಡು ಪರದೇಶಿ ಜನರಾ ವಸ್ತ್ರವಾ ।
ಹಾಕು ಬೆಂಕಿಲಿ ಉರಿಲಿ ಧಗಧಗ ಧರಿಸು ಖಾದಿ ಪವಿತ್ರವಾ ॥
ಮಾತಾ ದೇಶಹಿತಾ ಘನಸೇವನವು ।
ಸಖನೆ ತಕಲಿ ತಿರುವೊ ಪಡೆಯೊ ನೀ ಸುಖವಾ
ಭಗಿನಿ ಚರಕವಿದು ಪರಮಪಾವನವು ॥
ಹೂಡಿ ಕೊಡಿ ಸ್ವತಂತ್ರ ಸ್ವರಾಜ್ಯವನು
ಬಿಡದೆ ದೇಶದ ಸೇವೆ ನಡೆಯಿಸಿ ಪಡೆಯು
ಒಡೆಯ ಶೇಷಾದ್ರೀಶ ಪೊರೆವನು ಕಡೆಗೂ ॥
(ಅತ್ಯಂತ ಜನಪ್ರಿಯವಾದ ಈ ಹಾಡಿನ ಮುದ್ರಿತ ಪಾಠ ದೊರೆತಿಲ್ಲ. ಭಾಗಭಾಗವಾಗಿ ಸಂಗ್ರಹಕ್ಕೆ ಕೆ.ರಮೇಶ್ ಕಾಮತ್, ಮಲ್ಪೆ, ಪಿ. ದಾಮೋದರಯ್ಯ, ಬಿ. ಸುಬ್ರಾಯ ಮಲ್ಯ ಇವರು ನೆರವಾಗಿದ್ದಾರೆ.)
***
ಹೊಡೆದೋಡಿಸು
(‘ಯಡಕರಿ ತಯಾರ ವಾವಾ’ ಎಂಬಂತೆ)
ಹೊಡೆದೋಡಿಸಿಬಿಡಿರೀಗ ।ಈಗ ।
ತಡಮಾಡದೆ ಸೆರೆಮಾರಿಯ ಬೇಗ ।
ಲಕ್ಷಾವಧಿ ಬಡವರ ಸಂಸಾರವ ।
ಭಕ್ಷಿಸಿದೀ ರಾಕ್ಷನನ್ನೀಗ ॥
ತಾಮಸ ಮಾದಕ ಮಾರಿಯ ಬಿಡದೆ ।
ನೇಮದಿ ಜನರೆಲ್ಲರು ಬಂದೀಗ ॥
ದಾರಿದ್ರ್ಯವ ದಾವಾನಲ ಸಾಕು ।
ಸ್ವರಾಜ್ಯವ ಸಂಪಾದಿಸಲೀಗ ॥
ಹೆಂಡದ ಮಾರಿಯ ಗಾಂಜಾ ಪಿಶಾಚಿಯ ।
ಬಾಂಡಿಯ ಭೂತವನೋಡಿಸಿರೀಗ ॥
ಕೋಲು ಕಠಾರಿಗಳಿಂದಲಿ ಥಳಿಸಿ ।
ಕಾಲಿನಿಂದಲೊದ್ದೋಡಿಸಿರೀಗ ॥
ವಂಶದ ಮೂಲಕ ದೋಷದ ಭಾಂಡಗೆ ।
ಮೋಸಗೊಂಡುದಕೆ ಹೇಸುತಲೀಗ ॥
(‘ಮಧ್ಯ ನಿಷೇಧ ಪದ್ಯಾವಲಿ’ ಸಿರಸಿ, ೧೯೩೯)