ಬುಗುರಿಯಾಟ

ಬುಗುರಿಯಾಟ

ಬರಹ

ತೋಳ್ಬಲವು ಚಾವಟಿಯಲಿ ಹರಿದಾಡಿ
ತಿರುತಿರುಗುವ ನರ್ತನಕೆ
ನೂಕಿದೆ ಬುಗುರಿಯನು

ಭವದ ದುಃಖದ ವರ್ತುಲಗಳ ದಾಟಿ
ನೆಮ್ಮದಿಯ ಬಿಂದುವನರೆಸಿದಂತಿದೆ
ಎಂದೋ ತಪ್ಪಿದ್ದ ನಿಯಂತ್ರಣ ಮರುಕಳಿಸಿದಂತಿದೆ

ಗಿರಗಿರನೆ ತಿರುಗುತ ಪಡೆದಿದೆ ಆವೇಗ
ಯಾರ ಹಂಗೂ ಬೇಡವಾಗಿ
ಮರೆತಂತಿದೆ ಮೈಮನ

ನಿಲುವು ಸ್ವತಂತ್ರ, ಸ್ಥಿತಿ ನಿರ್ಭಾರ
ಬೇಕಿಲ್ಲ ಇನ್ನಾವ ಆಧಾರ
ಜಗಕೆಲ್ಲ ತಾನೇ ಕೇಂದ್ರ

ತಗ್ಗುತಿರಲು ವೇಗ ಮೂಡಿದೆ ತಲ್ಲಣಗಳ ಕಂಪನ
ಗುರುತ್ವದ ಸೆಳೆತಕೆ ತಲೆದೂಗುತ
ಓಲಾಡಿದೆ ತನುವೆಲ್ಲ

ಭ್ರಮಣೆಯ ಭ್ರಮೆ ಕಳೆದು
ಭಾರವಾಗಿದೆ ತಲೆಯೆಲ್ಲ
ಸೋತು ನೆಲಕ್ಕುರುಳಿದೆ ಬುಗುರಿ

ಉಳಿದಿದೆ ಹಂಬಲ ತೀರದೆ
ಚಾವಟಿಯ ಸಂಗವ ಕಟ್ಟಲು
ಮತ್ತದೇ ಉನ್ಮತ್ತ ಆವರ್ತನೆಗೆ ಜಾರಲು