ಬೆಂಗಳೂರಿಗೆ ಹೊಸ ರೂಪ

ಬೆಂಗಳೂರಿಗೆ ಹೊಸ ರೂಪ

ಬೆಂಗಳೂರು ಐಟಿಬಿಟಿ ನಗರವಾಗಿ ಜಾಗತಿಕವಾಗಿ ಗಮನ ಸೆಳೆದಿರುವುದು ಗೊತ್ತಿರುವಂಥದ್ದೇ. ಇದರೊಟ್ಟಿಗೆ, ಇದೊಂದು ಪ್ರಮುಖ ಉದ್ಯೋಗದಾತ ನಗರವೂ ಹೌದು. ವಿವಿಧ ಬಗೆಯ ಕೈಗಾರಿಕೆಗಳು ಹಾಗೂ ಖಾಸಗಿ ಕಂಪೆನಿಗಳೂ ಇಲ್ಲಿ ನೆಲೆಗೊಂಡಿರುವುದರಿಂದ ವೈವಿಧ್ಯಮಯ ಉದ್ಯೋಗ ಅವಕಾಶಗಳನ್ನು ಒದಗಿಸಿರುವುದು ಜನಾಕರ್ಷಣೆಯನ್ನು ಹೆಚ್ಚಿಸಿದೆ. ರಾಜ್ಯದ ಒಳಗಿನ ಹಾಗೂ ದೇಶ ವಿದೇಶಗಳಿಂದ ಜನರು ಪ್ರತಿನಿತ್ಯ ಇಲ್ಲಿಗೆ ಆಗಮಿಸುತ್ತಾರೆ. ಆದ್ದರಿಂದ ದಟ್ಟಣೆ ಹೆಚ್ಚುತ್ತಲೇ ಇರುತ್ತದೆ. ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ದೊಡ್ದ ಮಟ್ಟದ ಆದಾಯವನ್ನೂ ಬೆಂಗಳೂರು ಕೊಡಮಾಡುತ್ತದೆ. ಹಾಗೆ ನೋಡಿದರೆ, ಬೆಂಗಳೂರು ಮಾತ್ರವಲ್ಲ ಭಾರತದೆಲ್ಲೆಡೆ ನಗರವಲಸೆ ಪ್ರಮಾಣ ಹೆಚ್ಚುತ್ತಲೇ ಇದ್ದು, ಆಡಳಿತ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನಗರದ ಸಮಗ್ರ ಬೆಳವಣಿಗೆ ನಿಟ್ಟಿನಲ್ಲಿ ಆಯ್ದ ವಲಯಗಳ ಪ್ರಮುಖರ ಜತೆ ಸಮಾಲೋಚನೆ ನಡೆಸಿರುವುದು ಗಮನಾರ್ಹ. ಉಪನಗರ ರೈಲು, ಮೆಟ್ರೋ ಸಂಪರ್ಕ, ಕಸ ಹಾಗೂ ಕೊಳಚೆ ನೀರು  ನಿರ್ವಹಣೆ, ಶಿಕ್ಷಣ, ರಸ್ತೆ ಅಭಿವೃದ್ಧಿ ಇತ್ಯಾದಿ ಸಂಗತಿಗಳ ಬಗ್ಗೆ ಈ ಸಭೆಯಲ್ಲಿ ವಿವಿಧ ಪ್ರಮುಖರು ಸಲಹೆಗಳನ್ನು ನೀಡಿದ್ದು, ಇವನ್ನೆಲ್ಲ ಕ್ರೋಢೀಕರಿಸಿ ಯೋಜನೆ ರೂಪಿಸುವ ದಿಕ್ಕಿನಲ್ಲಿ ಕ್ರಮತೆಗೆದುಕೊಳ್ಳಲಾಗುವುದೆಂದು ಉಪಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಹಾಗೇ, ಆರು ತಿಂಗಳಲ್ಲಿ ಈ ಕುರಿತು ನೀಲನಕ್ಷೆ ಸಿದ್ದಪಡಿಸುವುದೆಂದೂ ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಹೊಸ ಸರ್ಕಾರ ಬಂದಾಗ ಈ ರೀತಿಯ ಸಮಾಲೋಚನೆಗಳನ್ನು ನಡೆಸಲಾಗುತ್ತದೆ. ಬೆಂಗಳೂರಿನ ಯೋಜಿತ ಬೆಳವಣಿಗೆ ನಿಟ್ಟಿನಲ್ಲಿ ಇಂತಹ ಚಿಂತನ-ಮಂಥನ ಸ್ವಾಗತಾರ್ಹ ಕೂಡ. ಆದರೆ ಈ ಅಭಿಪ್ರಾಯ - ಸಲಹೆಗಳಲ್ಲಿ ಎಷ್ಟು ಕಾರ್ಯಸಾಧು? ಎಷ್ಟನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಮತ್ತು ಅದರಿಂದ ಯಾವ ರೀತಿಯ ಪರಿಣಾಮವಾಗುತ್ತದೆ? ಎಂಬುದು ಮುಖ್ಯವಾಗುತ್ತದೆ. ಯಾವುದೇ ನಗರದಲ್ಲಿ ವಿಪರೀತ ಬೆಳವಣಿಗೆಯಾದಲ್ಲಿ ಸಂಚಾರ ವ್ಯವಸ್ಥೆ, ಮೂಲ ಸೌಕರ್ಯ ಇತ್ಯಾದಿ ಮೇಲೆ ಅಪಾರ ಒತ್ತಡ ಉಂಟಾಗಿ, ಸಮರ್ಪಕವಾಗಿ ಸೇವೆ ಒದಗಿಸುವುದು ಆಡಳಿತ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸುತ್ತದೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಕಸ ಸಮಸ್ಯೆ ಜಾಗತಿಕ ಸುದ್ದಿಯಾದದ್ದು ಇದಕ್ಕೊಂದು ನಿದರ್ಶನವಷ್ಟೆ. ಜೋರು ಮಳೆ ಬಂದಾಗ ಕೆಲ ಪ್ರದೇಶಗಳು ಜಲಾವ್ರತವಾಗುವುದು ಸಹ ಬೆಂಗಳೂರಿನಲ್ಲಿ ಮಾಮೂಲು ಎಂಬಂತಾಗಿದೆ. ನಗರದ ವ್ಯಾಪ್ತಿ ಹೆಚ್ಚಳದಿಂದ ಸಮಸ್ಯೆ ಮತ್ತಷ್ಟು ಕಗ್ಗಂಟಾಗಿದೆ. ಹಾಗೇ, ವಾಹನ ಹೆಚ್ಚಳ, ಹಸಿರು ಪ್ರದೇಶ ಕುಗ್ಗುವಿಕೆಯಿಂದಾಗಿ ಮಾಲಿನ್ಯ ಸಹ ಹೆಚ್ಚಿದೆ. ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಹಾಘೂ ಇತರ ಕೆಲ ವಲಯಗಳು ಬೆಂಗಳೂರನ್ನೇ ಕೇಂದ್ರಸ್ಥಾನವನ್ನಾಗಿಸಿಕೊಂಡು ಕಾರ್ಯಾಚರಿಸಲು ಬಯಸುತ್ತವೆ. ಅವುಗಳ ಸುತ್ತ ಸಹಜವಾಗಿಯೇ ಇನ್ನಷ್ಟು ವಾಣಿಜ್ಯ ಚಟುವಟಿಕೆಗಳು ಹೆಚ್ಚಿ ದಟ್ಟನೆಯಾಗುತ್ತದೆ. ಹೀಗಾಗಿ ಬೆಂಗಳೂರಿನಾಚೆಗೆ, ಎರಡು ಮತ್ತು ಮೂರನೇ ಹಂತದ ನಗರಗಳಿಗೂ ಕೈಗಾರಿಕೆಗಳನ್ನು ವಿಸ್ತರಿಸಿದಲ್ಲಿ, ಅಷ್ಟರ ಮಟ್ಟಿಗೆ ಇಲ್ಲಿ ದಟ್ಟನೆ ತಪ್ಪಿಸಬಹುದು ಮತ್ತು ಇತರ ಪ್ರದೇಶಗಳ ಅಭಿವೃದ್ಧಿಗೂ ನೆರವಾಗುತ್ತದೆ ಎಂಬುದು ಬಹಳ ದಿನಗಳಿಂದ ಇರುವ ಚಿಂತನೆ-ಚರ್ಚೆ. ಕಾಲಾನುಕಾಲಕ್ಕೆ ಬಂದ ಸರ್ಕಾರಗಳು ಈ ದಿಸೆಯಲ್ಲಿ ಒಂದಷ್ಟು  ಕ್ರಮಕ್ಕೆ ಮುಂದಾಗಿಲ್ಲವೆಂದಲ್ಲ. ಆದರೆ ಪರಿಣಾಮ ನಿರೀಕ್ಷಿಸಿದಷ್ಟು ಆಗಿಲ್ಲ. ನೂತನ ಸರಕಾರ ಈ ವಿಷಯವನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದುನೋಡಬೇಕು.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೯-೦೬-೨೦೨೩ 

ಚಿತ್ರ ಕೃಪೆ: ಅಂತರ್ಜಾಲ ತಾಣ