ಬೆಳ್ಳಿ ತಿಮ್ಮ 108 ಹೇಳಿದ
ಕನ್ನಡದ ಹೆಸರುವಾಸಿ ಸಾಹಿತಿ ಬೀchi ಅವರ 26ನೆಯ ಪುಸ್ತಕ ಇದು. ಹಾಸ್ಯ ಸಾಹಿತಿ ಹಾಗೂ ವಿಡಂಬನಾ ಸಾಹಿತಿ ಎಂದೇ ಅವರು ಜನಪ್ರಿಯರು.
ಇದು ಅವರ 108 ಪುಟ್ಟ ಬಿಡಿ ಬರಹಗಳ ಸಂಕಲನ. ಎಂಟರಿಂದ ಹದಿನೈದು ಸಾಲುಗಳ ಹಲವು ಬರಹಗಳು ಇದರಲ್ಲಿವೆ. ಅದಲ್ಲದೆ, ಪ್ರತಿಯೊಂದು ಬರಹದ ಪುಟದ ಕೆಳಭಾಗದಲ್ಲಿ ಸಣ್ಣ ಅಕ್ಷರಗಳಲ್ಲಿ ಚಿಂತನೆಗೆ ಹಚ್ಚುವ ಇನ್ನೊಂದು ಚುಟುಕು ಬರಹವೂ ಇದೆ.
ಇವು ಓದಿ ಮರೆಯಬಹುದಾದ ಬರಹಗಳಲ್ಲ ಎಂಬುದೇ ಇವುಗಳ ವಿಶೇಷತೆ. ಓದಿದಾಗ ಕಚಗುಳಿ ಇಡುವ ಈ ಬರಹಗಳು ಅನಂತರ ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಮೂರ್ತಿಯವರ ವ್ಯಂಗ್ಯಚಿತ್ರಗಳು ಮತ್ತು ಎಸ್.ಆರ್. ಸ್ವಾಮಿಯವರ ರೇಖಾಚಿತ್ರಗಳು ಚೇತೋಹಾರಿಯಾಗಿವೆ.
ಪುಸ್ತಕದ ಆರಂಭದಲ್ಲಿ ತಾನು ಹಾಸ್ಯ ಸಾಹಿತಿಯಾಗಿ ಬೆಳೆದು ಬಂದ ಬಗೆಯನ್ನು “ತಿರುಗಿ ನೋಡಿದಾಗ” ಎಂದು ದಾಖಲಿಸಿದ್ದಾರೆ ಬೀchiಯವರು. “ನನ್ನ ಬರವಣಿಗೆಯ ಆರಂಭವೆಲ್ಲಿ?” ಎಂದು ತಿರುಗಿ ನೋಡಿದಾಗ ಅದನ್ನು ಗುರುತಿಸುವುದು ಕಷ್ಟ ಎನ್ನುತ್ತಾರೆ. ತಾನು ಬರೆದಿಟ್ಟುದನ್ನು ಶಂ.ಬಾ. ಜೋಶಿಯವರಿಗೆ ತೋರಿಸಿದಾಗ ಬೆನ್ನು ಚಪ್ಪರಿಸಿ, “ನಿನಗೂ ಮೂಗು ಇದೆ, ಉಸಿರಾಡು” ಎಂದು ಅವರು ಮೊದಲು ಹೇಳಿದವರೆಂದು ನೆನಪು ಮಾಡಿಕೊಂಡಿದ್ದಾರೆ.
ಬೀchiಯವರ ಹಲವು ಪುಸ್ತಕಗಳ ಪ್ರಧಾನ ಪಾತ್ರ ತಿಂಮ. ಆ ಪಾತ್ರಕ್ಕೆ ಪ್ರೇರಣೆ ಇಂಗ್ಲಿಷಿನ ಓಡ್ ಹೌಸ್ ಕವಿಯ ಒಂದು ಪಾತ್ರವೆಂದು ದಾಖಲಿಸಿದ್ದಾರೆ. ಆ ಪಾತ್ರವನ್ನು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪೋತನ್ ಜೋಸೆಫ್ ಬರೆಯುತ್ತಿದ್ದ “ಓವರ್ ಎ ಕಪ್ ಆಫ್ ಟೀ” ಲಘು ಹರಟೆಯ ದಾಟಿಯಲ್ಲಿ ರೂಪಿಸಿದಾಗ ಮೂಡಿ ಬಂದುದೇ “ತಿಂಮ” ಎಂದು ತಿಳಿಸುತ್ತಾರೆ. ಇವು ಒಮ್ಮೆಲೇ ಕೂತು ಓದಿ ಮುಗಿಸಬೇಕಾದ ಬರಹಗಳಲ್ಲ; ನಿಧಾನವಾಗಿ ಓದಿ ಚಪ್ಪರಿಸಬೇಕಾದ ಬರಹಗಳು ಎಂದು ಅವರು ಎಚ್ಚರಿಸುತ್ತಾರೆ.
ಈ ಪುಸ್ತಕದ ಬರಹಗಳ ಎರಡು ಸ್ಯಾಂಪಲ್ ಇಲ್ಲಿವೆ:
“ಇವನಾರು?”
(ಒಂದು ಕಲಾಕೃತಿಗಳ ಪ್ರದರ್ಶನದಲ್ಲಿ ಪತಿ-ಪತ್ನಿಯರ ಮಾತುಕತೆ)
“ಇವನಾರು ಕಣೆ, ಹಾಳಾದವನು! ಇಂತಹ ಮುಖದವನ ಚಿತ್ರವನ್ನು ಅದೇಕೆ ಬರೆದಿದ್ದಾರೆ?”
“ಚಿತ್ರವಲ್ಲ ಕಣ್ರಿ ಅದೂ ಕನ್ನಡಿ.”
* * * *
“ಉತ್ತಮ ದೃಶ್ಯ”
ಅದೇ ತಾನೇ ಸಿನಿಮಾ ನೋಡಿ ಮನೆಗೆ ಬಂದ ತಿಂಮನನ್ನು ತಂದೆ ಕೇಳಿದರು:
“ಯಾವುದೋ ಸಿನಿಮಾ?”
“ಹೆಸರು ನೆನಪಿಲ್ಲ.”
“ಕಥೆ ಏನಯ್ಯ?”
“ತಿಳಿಯಲಿಲ್ಲ”
“ಹೋಗಲಿ ಬಿಡು, ಯಾವ ದೃಶ್ಯ ನಿನಗೆ ಬಹು ಚೆನ್ನಾಗಿತ್ತು ಹೇಳು, ಇಂತಹದೇ ಸಿನೆಮಾ ಎಂದು ಹೇಳುತ್ತೇನೆ.”
ತಿಂಮ ಕೂಡಲೇ ಹೇಳಿದ: “ಇಂಟರ್ ವಲ್”