ಬೋಳಿಸುವ ಯೋಜನೆ

ಬೋಳಿಸುವ ಯೋಜನೆ

ಬರಹ

ತಲೆ ಬರಹ ತುಸು ಒರಟೆನಿಸಬಹುದು. ಆದರೆ ನಿಜ ಘಟನೆಯಿದು. ಮಂಗಳೂರಿಂದ ಹಾಸನಕ್ಕೆ ಹೋಗುವ ಬಸ್ಸುಗಳು ಸಾಮಾನ್ಯವಾಗಿ ತಿಂಡಿ ಕಾಫಿಗಾಗಿ ನೆಲ್ಯಾಡಿ ಎಂಬ ಪುಟ್ಟ ಗ್ರಾಮದಲ್ಲಿ ನಿಲುಗಡೆ ನೀಡುವುದುಂಟು. ಎಂದಿನಂತೆ ನಾನು ಹಾಸನಕ್ಕೆ ಹೋಗುವಾಗ ನಮ್ಮ ಬಸ್ಸು ನೆಲ್ಯಾಡಿಯ ಯಾವುದೋ ಒಂದು ಹೋಟೆಲ್ ಮುಂದೆ ನಿಂತಿತು. ಗಡಿಬಿಡಿಯಲ್ಲಿ ಇಳಿದು ಹೋಟೆಲ್ ನಲ್ಲಿ ಊಟ ಬೇಡ ಎಂದು ಚಪಾತಿಗಾಗಿ ಆರ್ಡರ್ ಮಾಡಿದೆ. ಹೋಟೆಲ್ ನವರ ಉಪಚಾರ ಬಸ್ಸಿನ ಡ್ರೈವರ್ ಕಂಡಕ್ಟರ್ ಗಳಿಗೆ. ನಮ್ಮ ಕಡೆ ನೋಡುವವರೂ ದಿಕ್ಕಿಲ್ಲ. ಎರಡನೆ ಬಾರಿ ಕೇಳಿದಾಗ ಎರಡು ಎಮ್ಮೆ ಚರ್ಮದಂಥ ಚಪಾತಿ ತಂದು ಕೊಟ್ಟ. ಆ ಚಪಾತಿಗಳನ್ನು ಅಗಿದರೆ ವ್ಯಾಯಾಮ ಮಾಡಿದಷ್ಟು ಕಷ್ಟವಾಗುತ್ತಿತ್ತು. ಏನೋ ಗೊತ್ತಿಲ್ಲದ ಊರು ಅಂತ ತಿನ್ನುವ ಶಾಸ್ತ್ರ ಮುಗಿಸಿ ನೋಡುವಾಗ ಬಿಲ್ಲು ನೀಡಲು ವೈಟರ್ ಮಾಯ. ಒಂದು ಕಡೆ ಸೆಖೆ, ಒಂದು ಕಡೆ ಆ ಒಣ ಚಪಾತಿ ಎಲ್ಲ ಸೇರಿ ಸದ್ಯ ಹೊರಗೆ ಹೋದರೆ ಸಾಕು ಅನಿಸಿತು. ನಾನೇ ಬಿಲ್ಲು ಪಾವತಿಸಿ ಹೋಗೋಣ ಅಂತ ಹೊರಟೆ. ಅವಾಗ ವೈಟರ್ ಪ್ರತ್ಯಕ್ಷನಾಗಿ ನೀವು ತಿಂದ ತಿಂಡಿ ಏನು ಎಂದು ಕೇಳುವ ಬದಲಿಗೆ ನೀವು ಆ ಬಸ್ಸಿನವರೋ? ಇಲ್ಲ ಈ ಬಸ್ಸಿನವರೋ ಎಂದು ಕೇಳಿದ. ನನಗೆ ಆಶ್ಚರ್ಯ ಬಸ್ಸಿಗೂ ಬಿಲ್ಲಿಗೂ ಸಂಬಂಧ ಏನು ಅಂತ. ಮತ್ತೆ ನಮ್ಮ ಬಸ್ಸಿನ ಪಕ್ಕದಲ್ಲಿದ್ದ ಇನ್ನೊಂದು ಬಸ್ಸು ನೋಡ್ತೇನೆ ಅದು ಮಂಗಳೂರು-ತಿರುಪತಿ ಬಸ್ಸು. ನಾನು ಮಂಗಳೂರು-ಹಾಸನ ಬಸ್ಸಿನವನೆಂದ ಮೇಲೆ ೨೦ ರೂಪಾಯಿ ಕಿತ್ತುಕೊಂಡ. ನನಗೆ ಕುತೂಹಲ ಅಲ್ಲಿಗೆ ನಿಲ್ಲಲಿಲ್ಲ. ಸುಮ್ಮನೆ ತಿರುಪತಿ ಬಸ್ಸಿನವ ಹಣ ಕೊಡಲು ಬರುವಾಗ ಗಮನಿಸುತ್ತಿದ್ದೆ. ಅವನು ನನ್ನ ಪಕ್ಕದಲ್ಲಿಯೇ ಕುಳಿತು ಎರಡು ಒಣ ಚಪಾತಿ ತಿಂದಿದ್ದ. ವೈಟರ್ ಅವನಿಂದ ವಸೂಲು ಮಾಡಿದ ಹಣ ೨೮ ರೂಪಾಯಿ. ಆತನು ತಿರುಪತಿ ತಲುಪುವ ಮೊದಲೇ ೮ ರೂಪಾಯಿಗೆ ನಾಮ.

ನನ್ನ ಪ್ರಶ್ನೆ ಇಷ್ಟೆ. ನೆಲ್ಯಾಡಿಯಲ್ಲಿ ವ್ಯವಸ್ಥಿತವಾದ ಬಸ್ಸು ನಿಲ್ದಾಣವಿದೆ. ಅಲ್ಲಿ ಒಂದು ಹೋಟೆಲ್ ಕೂಡ ಇದೆ. ಹೀಗಿದಾಗ್ಯೂ ಕೂಡ ಬಸ್ಸಿನವರು ತಮಗೆ ಬೇಕಾದ ಕಡೆ ಸ್ಟಾಪ್ ನೀಡುವ ಉದ್ದೇಶವೇನು? ಊರು ಗೊತ್ತಿಲ್ಲದ ಮಾತ್ರಕ್ಕೆ ಹೋಟೆಲ್ ನವರು ಹೆಚ್ಚಿಗೆ ಹಣ ಪಡೆಯಬಹುದೇ? ಹೀಗೆ ಮಾಡುವುದರಿಂದ ಟೆಂಡರ್ ಪಡೆದು ಬಸ್ಸು ಸ್ಟ್ಯಾಂಡಿನಲ್ಲಿ ಹೋಟೆಲ್ ಮಾಡುವವರ ವ್ಯವಹಾರ ಹಾಳಾಗುವುದಲ್ಲದೇ ಸರಕಾರಕ್ಕೆ ಬರಬಹುದಾದ ಲಾಭವೂ ತಪ್ಪಿ ಹೋಗುವುದು. ಇದು ಇಲ್ಲಿಯ ಕತೆ ಮಾತ್ರವಲ್ಲ. ಹಲವು ಕಡೆಗಳಲ್ಲಿ ಹೀಗೆಯೇ ನಡೆಯುತ್ತಿದೆ. ಅಲ್ಲದೇ ಎಲ್ಲಿ ಬೇಕು ಅಲ್ಲಿ ಬಸ್ಸು ನಿಲ್ಲಿಸುವುದರಿಂದ ಮಹಿಳೆಯರಿಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದೇ ಇರುವುದರಿಂದ ತುಂಬ ಅನನುಕೂಲವಾಗುತ್ತದೆ.

ಒಟ್ಟು ಯಾರದೋ ಅಮಿಷಗಳಿಗಾಗಿ ಎಲ್ಲ ಪ್ರಯಾಣಿಕರು ತೊಂದರೆ ಅನುಭವಿಸುವುದು ನಡೆದೆಯಿದೆ. ಸಂಬಂಧಿಸಿದವರು ಇದರ ಕುರಿತು ಸೂಕ್ತ ಕ್ರಮ ಕೈಗೊಳ್ಳೂವವರಗೆ ಈ ಪರಿಯ ಪರದಾಟ ತಪ್ಪಿದಲ್ಲ...