ಬ್ರಾಂಚ್‌‌ಫ್ರೀ ಬ್ಯಾಂಕ್ ಖಾತೆ!

ಬ್ರಾಂಚ್‌‌ಫ್ರೀ ಬ್ಯಾಂಕ್ ಖಾತೆ!

ಬರಹ


    ಹಿಂದೆಲ್ಲಾ ಬ್ಯಾಂಕಿನ ನಮ್ಮ ಖಾತೆಯನ್ನು ಬಳಸಲು ಬ್ಯಾಂಕಿಗೆ ಹೋಗುವುದು ಅನಿವಾರ್ಯವಾಗಿತ್ತು.ಹಣ ತೆಗೆಯಲು,ಸಂದಾಯ ಮಾಡಲು,ಚೆಕ್ ಪುಸ್ತಿಕೆ ತರಲು,ಚೆಕ್ ಖಾತೆಗೆ ಜಮಾ ವಟಾಯಿಸಲು,ಡಿಡಿ ಖರೀದಿಸಲು,ಪಾಸ್ ಪುಸ್ತಕ ಬರೆಸಲು,ಸೇವೆಯ ಬಗ್ಗೆ ದೂರು ನೀಡಲು ಹೀಗೆ ಪ್ರತಿಯೊಂದಕ್ಕೂ ಬ್ಯಾಂಕ್ ಮೆಟ್ಟಲು ಏರಬೇಕಿತ್ತು. ಏಟಿಎಂ ಯಂತ್ರಗಳು ಬಂದ ಮೇಲೆ ಬ್ಯಾಂಕಿಗೆ ಹೋಗುವುದೇ ಅಪರೂಪವಾಗಿದೆ.ಗ್ರಾಹಕ ಬ್ಯಾಂಕಿಗೆ ಬರುವುದು ಕಡಿಮೆಯಾದರೆ ಬ್ಯಾಂಕಿನವರಿಗೆ ಸಂತಸವೇ.ಬ್ಯಾಂಕ್ ಶಾಖೆಯಲ್ಲಿ ಕಡಿಮೆ ಜನಸಂದಣಿಯಿದ್ದರೆ,ಕಡಿಮೆ ಉದ್ಯೋಗಿಗಳ ಮೂಲಕ ಬ್ಯಾಂಕ್ ನಿಭಾಯಿಸಲು ಬರುತ್ತದೆ.ನಿರ್ವಹಣಾ ಖರ್ಚು ಕಡಿಮೆಯಾದರೆ,ಲಾಭ ಹೆಚ್ಚುತ್ತದೆ.ಹಾಗೆಂದು ಗ್ರಾಹಕರ ಸಂಖ್ಯೆ ಏರಲು ಬ್ಯಾಂಕುಗಳು ಪ್ರಯತ್ನಿಸಲೇ ಬೇಕಲ್ಲವೇ?ಶಾಖೆರಹಿತ ಬ್ಯಾಂಕಿಂಗ್ ಖಾತೆ ಭಾರತದ ಜನಪ್ರಿಯ ಖಾಸಗಿ ಬ್ಯಾಂಕ್ ಐಸಿಐಸಿಐಯ ವಿನೂತನ ಸೇವೆ.ಈ ಬ್ಯಾಂಕ್ ಖಾತೆಯನ್ನು ಸಂಪೂರ್ಣವಾಗಿ ಅಂತರ್ಜಾಲ ಮೂಲಕವೇ ನಿರ್ವಹಿಸಬೇಕು.ಈ ಖಾತೆಗೆ ಹಣವನ್ನು ನಿಮ್ಮ ಇತರ ಬ್ಯಾಂಕ್ ಖಾತೆಗಳಿಂದ ವರ್ಗಾಯಿಸಿಕೊಳ್ಳುವ ಮೂಲಕ ಪಾವತಿಸಬೇಕು.ಕನಿಷ್ಠ ಹಣವನ್ನು ಖಾತೆಯಲ್ಲಿ ಇರಿಸಿಕೊಳ್ಳುವ ಅನಿವಾರ್ಯತೆ ಈ ಖಾತೆಗಿಲ್ಲ.ಖಾತೆಯಿಂದ ಹಣವನ್ನು ಇತರ ಖಾತೆಗಳಿಗೆ,ಬಿಲ್ ಪಾವತಿಗೆ,ಮೊಬೈಲ್ ಟಾಕ್ ಟೈಮ್ ಖರೀದಿಗೆ ಅಂತರ್ಜಾಲ ಮೂಲಕವೇ ಬಳಸಿಕೊಳ್ಳಬಹುದು.ಡಿಡಿಯನ್ನು ನೀವು ಹೇಳಿದ ವಿಳಾಸಕ್ಕೆ ಕಳುಹಿಸುವ ಸೌಲಭ್ಯವನ್ನು ಬ್ಯಾಂಕ್ ಒದಗಿಸಿದೆ.ಖಾತೆ ವಿವರಗಳು ಅಂತರ್ಜಾಲ ಮೂಲಕವೇ ನಿಮಗೆ ಲಭ್ಯ.ನಿಮ್ಮ ಖಾತೆಯಲ್ಲಿ ಲಭ್ಯವಿರುವ ಹಣವು ನಿಗದಿತ ಠೇವಣಿಯಾಗಿ ತನ್ನಷ್ಟಕ್ಕೇ ಬದಲಾಗುತ್ತದೆ.ಬೇಕೆಂದಾಗ ಇದರಿಂದ ಹಣವನ್ನು ತೆಗೆದರೆ,ದಂಡವನ್ನೇನೂ ವಿಧಿಸುವುದಿಲ್ಲ.ಸಾಲಕ್ಕೂ ಬ್ಯಾಂಕಿಗೆ ಹೋಗಬೇಕಿಲ್ಲ.ಮೊದಲೇ ಅನುಮೋದಿತವಾದ ಸಾಲದ ಮೊತ್ತದೊಳಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ತಕ್ಷಣ,ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.ನಿಮ್ಮಲ್ಲಿ ಹಣವಿದ್ದಾಗ ಸಂಪೂರ್ಣ ಸಾಲವನ್ನು ಮರುಪಾವತಿಸಲು ಯಾವ ತಡೆಯೂ ಇಲ್ಲ.
    ಈ ಖಾತೆಯಲ್ಲಿ ನೀವು ಮಿಥ್ಯಾ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನೂ ಪಡೆಯಬಹುದು.ಕ್ರೆಡಿಟ್ ಕಾರ್ಡ್ ನಂಬರ್ ಮೂಲಕ ಪಾವತಿಸಿದರೆ,ಅದರ ದುರ್ಬಳಕೆ ಆಗಬಹುದು ಎಂಬ ಭಯ ನಿಮಗಿದ್ದರೆ, ಈ ಸೇವೆ ನಿಮಗೆ ಹೇಳಿ ಮಾಡಿಸಿದ ಹಾಗಿದೆ.ಮಿಥ್ಯಾ ಕ್ರೆಡಿಟ್ ಕಾರ್ಡ್ ಪಡೆದು ಕೊಂಡು,ಇದಕ್ಕೆ ಅಗತ್ಯ ಪ್ರಮಾಣದ ಮೊತ್ತವನ್ನು ಸೇರಿಸಿದರೆ,ನಿಮ್ಮ ಅಂತರ್ಜಾಲ ಖರೀದಿಗೆ,ಇದರ ಮೂಲಕ ಪಾವತಿಸಬಹುದು.ಮುಂದಿನ ಸಲ ಬೇರೆ ಮಿಥ್ಯಾ ಕ್ರೆಡಿಟ್ ಕಾರ್ಡ್ ಪಡೆದುಕೊಂಡರೆ,ನಿಮಗೆ ಹೊಸ ನಂಬರಿನ ಕ್ರೆಡಿಟ್ ಕಾರ್ಡ್ ಸಿಗುವುದರಿಂದ ಹಳೆಯದರ ದುರ್ಬಳಕೆಯ ಭಯವಿಲ್ಲ!ನಿಮ್ಮ ದೂರುಗಳನ್ನು ಆನ್‌ಲೈನ್ ಪಟ್ಟಾಂಗ ಮೂಲಕವೇ ಬಗೆ ಹರಿಸಿಕೊಳ್ಳಬಹುದು.

ಪೆಟ್ರೋಲ್ ಬೆಲೆಯೇರಿಕೆ:ದೂರಶಿಕ್ಷಣಕೆ ಹೆಚ್ಚಿದ ಬೇಡಿಕೆ
    ವಿದೇಶಗಳಲ್ಲಿ ವಿಶ್ವವಿದ್ಯಾಲಯಗಳು ತಮ್ಮ ಆಯ್ದ ಕೋರ್ಸುಗಳನ್ನು ಆನ್‌ಲೈನ್ ಮೂಲಕ ಕಲಿಯುವ ಅವಕಾಶವನ್ನು ನೀಡುವ ಸಂಪ್ರದಾಯ ಬೆಳೆಸಿಕೊಂಡಿವೆ.ಇತ್ತೀಚಿನವರೆಗೂ ಅವುಗಳು ಅಷ್ಟೇನೂ ಜನಪ್ರಿಯವಾಗಿರಲಿಲ್ಲ.ಈಗ ಪೆಟ್ರೋಲ್ ಬೆಲೆ ಜನಸಾಮಾನ್ಯರು ಬೆಚ್ಚಿಬೀಳುವಷ್ಟು ಹೆಚ್ಚಾದ ನಂತರ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿದೆ. ಹಲವಾರು ಕಾಲೇಜುಗಳಲ್ಲಿ ಕಾಲೇಜಿಗೆ ಬರದೆ,ಆನ್‌ಲೈನ್ ಮೂಲಕ ಪಾಠ ಕಲಿಯುವ ಅವಕಾಶ ನೀಡುವ ಕೋರ್ಸುಗಳಿಗೆ ಪ್ರವೇಶ ಬಯಸಿದವರ ಸಂಖ್ಯೆಯಲ್ಲಿ ದುಪ್ಪಟ್ಟು ಏರಿಕೆಯಾಗಿದೆ.ಮಸಾಚ್ಯುಸೆಟ್ಸ್ ವಿಶ್ವವಿದ್ಯಾಲಯ,ವಿಲ್ಲನೊವಾ,ಬ್ರಿಸ್ಟಲ್ ಸಮುದಾಯ ಕಾಲೇಜು ಮುಂತಾದೆಡೆ, ಆನ್‌ಲೈನ್ ಕೋರ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿದ್ದು,ಇವುಗಳಲ್ಲಿ ಪ್ರವೇಶ ಪಡೆದವರ ಸಂಖ್ಯೆಯಲ್ಲಿ ತೀವ್ರ್‍ಅ ಏರಿಕೆಯಾಗಿದೆ.ಒಂದು ಕೋರ್ಸಿನ ಎಲ್ಲಾ ವಿಷಯಗಳನ್ನೂ ಆನ್‌ಲೈನಿನಲ್ಲಿ ಕಲಿಯಲು ಸಾಧ್ಯವಾಗದಿರ ಬಹುದು. ಕೆಲವು ಪ್ರಾಯೋಗಿಕ ತರಗತಿಗಳನ್ನು ಕಾಲೇಜಿಗೆ ಬಂದೇ ನಡೆಸಬೇಕಾಗುತ್ತದೆ.ಹಾಗಿದ್ದರೆ,ಮೊದಲು ವಾರದಲ್ಲಿ ನಾಲು ಸಲ ಕಾಲೇಜಿಗೆ ಬರುತ್ತಿದ್ದವರು,ಈಗ ಎರಡೇ ಸಲ ಕಾಲೇಜಿಗೆ ಬಂದು ಉಳಿದ ಎರಡು ದಿನ ಮನೆಯಿಂದಲೇ ಅಂತರ್ಜಾಲ ಮೂಲಕ ಪಾಠ-ಪ್ರವಚನ ಪಡೆಯುವ ವಿದ್ಯಮಾನ ಕಂಡು ಬರುತ್ತಿದೆ.ಬ್ರೆವರ್ಡ್ ಸಮುದಾಯ ಕಾಲೇಜಿನಲ್ಲಿ ಈ ವರ್ಷ ಇಂತಹ ಆನ್‌ಲೈನ್ ಕೋರ್ಸುಗಳಿಗೆ ಪ್ರವೇಶ ಪಡೆದವರ ಸಂಖ್ಯೆ  ಎರಡು ಸಾವಿರದ ಏಳುನೂರಕ್ಕಿಂತ ಹೆಚ್ಚು.ಕಳೆದ ಬಾರಿ ಇದು ಎರಡುಸಾವಿರದ ನೂರರಷ್ಟಿತ್ತು.ಕೊಲೆರಡೋ ವಿವಿಯಲ್ಲಿ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಆನ್‌ಲೈನ್ ಕೋರ್ಸಿಗೆ ಪ್ರವೇಶ ಪಡೆಯಲು ವೈಟಿಂಗ್ ಲಿಸ್ಟ್‍ನಲಿದ್ದಾರಂತೆ!ಕಾಲೇಜುಗಳು ವಿಧಿಸುವ ಶೈಕ್ಷಣಿಕ ಶುಲ್ಕದಷ್ಟೇ ಪ್ರಯಾಣಕ್ಕೂ ಖರ್ಚು ಬರುವುದು,ಈ ರೀತಿಯ ನೂಕುನುಗ್ಗಲಿಗೆ ಕಾರಣ.ಪ್ರಯಾಣಕ್ಕೆ ಕಾರನ್ನೇ ಅವಲಂಬಿಸುವ ಅಮೆರಿಕಾದ ಜೀವನಶೈಲಿ,ಐವತ್ತರಿಂದ ನೂರು ಕಿಲೋಮೀಟರು ಪ್ರಯಾ ಮಾಡುವ ಅನಿವಾರ್ಯತೆ ದುಬಾರಿ ಪ್ರಯಾಣ ಖರ್ಚಿಗೆ ಕಾರಣ ಎನ್ನುವುದು ಸ್ಪಷ್ಟ.
     ಕಾಲೇಜುಗಳೂ ಇಂತಹ ಬದಲಾವಣೆಗೆ ಸಜ್ಜಾಗುತ್ತಿವೆ.ಹೆಚ್ಚು ಹೆಚ್ಚು ಕೋರ್ಸುಗಳನ್ನು ದೂರಶಿಕ್ಷಣದ ಮೂಲಕ ಒದಗಿಸಲು ಅವು ಪ್ರಯತ್ನಿಸುತ್ತಿವೆ.ತಮ್ಮ ಶಿಕ್ಷಕರಿಗೆ ಓನ್‌ಲೈನ್ ಕೋರ್ಸುಗಳನ್ನು ಅಂತರ್ಜಾಲದಲ್ಲಿ ಒದಗಿಸಲು ಅವು ತರಬೇತಿ ನೀಡುತ್ತಿವೆ.ಹೆಚ್ಚಿನ ಕಾಲೇಜುಗಳಲ್ಲಿ ಲಭ್ಯ ವಿಷಯಗಳ ಪೈಕಿ ಕಾಲು ಭಾಗ ಮಾತ್ರ ಆನ್‌ಲೈನ್ ಕಲಿಕೆಗೆ ಅವಕಾಶ ಸಿಗುತ್ತವೆ.ಕಾಲೇಜಿಗೆ ಬಂದು ಕಲಿಯುವುದು ವಿಶೇಷ ಅನುಭವ ನೀಡುತ್ತದೆಯಾದರೂ,ಸಮಯದ ಉಳಿತಾಯ,ಕೆಲಸ ಮಾಡುತ್ತ ಕಲಿಕೆ ಅವಕಾಶ,ತಮ್ಮ ಅರ್ಹತೆ ಹೆಚ್ಚಿಸಿಕೊಳ್ಳಲು ಕಲಿಯುವವರಿಗೆ ಅವರಿಷ್ಟ ಬಂದಾಗ ಕಲಿಯಲು ಅವಕಾಶ ಲಭ್ಯತೆ ಅಂತರ್ಜಾಲ ಕಲಿಕೆಯ ಜನಪ್ರಿಯತೆಗೆ ಇತರ ಕಾರಣಗಳು.ನಿಧಾನ ಗತಿಯ ಅಂತರ್ಜಾಲ ಸೇವೆ ಈ ರೀತಿಯ ಕಲಿಕೆಗೆ ತೊಡಕಾಗದೆ ಇಲ್ಲ.ಹಳ್ಳಿಗಳಲ್ಲಿ ಅಂತರ್ಜಾಲ ಸೇವೆ ಸಮರ್ಪಕವಾಗಿಲ್ಲದೇ ಇರುವುದು,ಇದ್ದರೂ ನಿಧಾನ ಗತಿಯ ಸೇವೆ ಸಮಸ್ಯೆ ಒಡ್ಡುತ್ತದೆ.

ಸೌರಶಕ್ತಿಯಿಂದ ವಿದ್ಯುಚ್ಚಕ್ತಿ:ದಕ್ಷತೆ ಹೆಚ್ಚಿಸುವ ಕೃತಕ ಬಣ್ಣ
    ಕೃತಕ ಬಣ್ಣವನ್ನು ಕಿಟಕಿಯ ಗಾಜಿಗೆ ಬಳಿದರೆ,ಆ ಬಣ್ಣವು ಸೌರಶಕ್ತಿಯನ್ನು ಕಿಟಕಿಯ ಬದಿಗಳತ್ತ ಕೇಂದ್ರೀಕರಿಸುತ್ತದೆ.ಕಿಟಕಿಯ ಬದಿಗಳಲ್ಲಿ ಸೌರಫಲಕವನ್ನಿಟ್ಟರೆ,ಅವುಗಳು ಹೆಚ್ಚಿನ ದಕ್ಷತೆಯಿಂದ ಬೆಳಕನ್ನು ವಿದ್ಯುಚ್ಛಕ್ತಿಯಾಗಿಸಲು ಸಮರ್ಥವಾಗುತ್ತವೆ. ಹೀಗೆ ಮಾಡಿದಾಗ ದಕ್ಷತೆ ಶೇಕಡಾ ಐವತ್ತರಷ್ಟು ಹೆಚ್ಚುವುದು ಕಂಡು ಬಂದಿದೆ ಎನ್ನುತ್ತಾರೆ ಖ್ಯಾತ ಎಂಐಟಿಯ ಸಂಶೋಧಕರು.ದೊಡ್ಡ ಕಟ್ಟಡಗಳ ಗಾಜಿನ ಫಲಕಗಳನ್ನು ಬಳಸಿಕೊಂಡು ವಿದ್ಯುಚ್ಛಕ್ತಿ ಪಡೆದುಕೊಳ್ಳಲು ಹೊಸ ವಿಧಾನ ಬಹುಪ್ರಯೋಜನಕಾರಿಯಾಗಬಲ್ಲುದು.
ಅಂತರ್ಜಾಲ ಮೂಲಕ ಪಟ್ಟಾಂಗ:ಗೂಗಲ್ ಲೈವ್ ನೀಡುವ ಹೊಸ ಅನುಭವlively
ಸೆಕೆಂಡ್‌ಲೈಫ್ ಎನ್ನುವ ಕಂಪೆನಿಯನ್ನು ಗೂಗಲ್ ತನ್ನದಾಗಿಸಿಕೊಂಡ ಬಳಿಕ,ಹೊಸ www.lively.com ಅಂತರ್ಜಾಲ ತಾಣದ ಮೂಲಕ ವಿನೂತನ ಚ್ಯಾಟ್ ಸೇವೆಯನ್ನು ಒದಗಿಸುತ್ತಿದೆ.ಈ ಸೇವೆಯನ್ನು ಪಡೆದು ಗೆಳೆಯರ ಜತೆ ಪಟ್ಟಾಂಗ ನಡೆಸುವಾಗ,ನೀವು ನಿಮ್ಮ ಆಯ್ಕೆಯ "ಅವತಾರ"ದಲ್ಲಿ,ನಿಮ್ಮ ಆಯ್ಕೆಯ ದಿರಿಸು ಧರಿಸಿ,ನಿಮಗೆ ಹಿತವೆನಿಸಿದ ಕೋಣೆಯ ಪರಿಸರದಲ್ಲಿ ಕಾಣಿಸಿಕೊಳ್ಳಬಹುದು.ಪಟ್ಟಾಂಗವು ಬರೇ ಪದಗಳ ವಿನಿಮಯವಾಗದೆ,ಲೈವೆಲೀ ಆಗಿರುತ್ತದೆ.ಪ್ರತಿ ಪಟ್ಟಾಂಗದ ಅವಧಿಯೂ ಒಂದು ಕಂಪ್ಯೂಟರ್ ಆಟ ಆಡಿದ ವಿಶಿಷ್ಟ ಅನುಭವ ನೀಡುತ್ತದೆ.ಬಳಕೆಗೆ ಸಣ್ಣ ತಂತ್ರಾಂಶವನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಬೇಕು.

ashokworld

udayavani
(ಇ-ಲೋಕ-83)(14/7/2008)

*ಅಶೋಕ್‌ಕುಮಾರ್ ಎ