ಭಾರತೀಯ ದಾರಿದ್ರ್ಯ ಮೀಮಾಂಸೆ (ಓಷೋ ರಜನೀಶ್ ಚಿಂತನೆಗಳು)

ಭಾರತೀಯ ದಾರಿದ್ರ್ಯ ಮೀಮಾಂಸೆ (ಓಷೋ ರಜನೀಶ್ ಚಿಂತನೆಗಳು)

          ಒಮ್ಮೆ ಪೋಪ್ ಅಮೆರಿಕಾಗೆ ಹೊರಟಿದ್ದಾಗ ಅವರ ಸ್ನೇಹಿತರು “ಅಮೆರಿಕಾದ ಪತ್ರಕರ್ತರೊಂದಿಗೆ ತುಂಬ ಹುಷಾರಾಗಿ ಮಾತನಾಡಿ, ಅವರು ಕೇಳುವ ಪ್ರಶ್ನೆಗಳಿಗೆ ’ಹೌದು’, ’ಅಲ್ಲ’ ಎಂಬಂತಹ ಉತ್ತರಗಳನ್ನೇನಾದರೂ ನೀಡಿದರೆ ಅದಕ್ಕೆ ಬೇಕಾದ ಅರ್ಥಗಳನ್ನು ಹಚ್ಚಿ ಪ್ರಕಟಿಸುತ್ತಾರೆ. ಆದಷ್ಟೂ ಅವರಿಂದ ದೂರವಿದ್ದರೆ ಒಳ್ಳೆಯದು” ಎಂದು ಸಲಹೆ ನೀಡಿದರಂತೆ. ಪೋಪರು ವಿಮಾನದಿಂದ ಇಳಿಯುತ್ತಿದ್ದಂತೆಯೇ ಪತ್ರಕರ್ತರು “ತಾವು ನ್ಯೂಯಾರ್ಕಿನಲ್ಲಿ ಪ್ರಾರಂಭವಾಗಿರುವ ನ್ಯೂಡ್ ಕ್ಲಬ್ (ನಗ್ನ ಕ್ಲಬ್) ಗಳಿಗೆ ಭೇಟಿ ನೀಡಲು ಇಷ್ಟಪಡುವಿರಾ?” ಎಂದು ಕೇಳಿದರಂತೆ. ಆಗ ಪೋಪ್ ತುಂಬ ಯೋಚಿಸಿ “ಏನು, ನ್ಯೂಯಾರ್ಕಿನಲ್ಲಿ ಬತ್ತಲಿಗರ ಕ್ಲಬ್‌ಗಳೂ ಉಂಟೇ?” ಎಂದು ಏನೂ ಗೊತ್ತಿಲ್ಲದವರಂತೆ ಆಶ್ಚರ್ಯಚಕಿತರಾಗಿ ತಾವೇ ಮರುಪ್ರಶ್ನೆ ಮಾಡಿ ಅವರನ್ನು ಕಳುಹಿಸಿದರಂತೆ. ಆದರೆ ಮಾರನೆಯ ದಿನ ಪತ್ರಿಕೆಗಳಲ್ಲಿ ಆಘಾತಕಾರಿ ಸುದ್ದಿಯೊಂದು ಪ್ರಕಟವಾಗಿತ್ತು. ಎಲ್ಲ ಪತ್ರಿಕೆಗಳ ಮುಖಪುಟಗಳಲ್ಲೂ “ಪೂಜ್ಯ ಪೋಪರು ವಿಮಾನದಿಂದ ಇಳಿಯುತ್ತಲೇ ’ಇಲ್ಲಿ ಬತ್ತಲಿಗರ ಕ್ಲಬ್‌ಗಳಿವೆಯೇ?’ ಎಂದು ಪತ್ರಕರ್ತರನ್ನು ವಿಚಾರಿಸಿದರು” ಎಂದು ಪ್ರಕಟವಾಗಿತ್ತು. ನನ್ನ ವಿಷಯದಲ್ಲೂ ಸದಾ ಹೀಗೆಯೇ ಆಗುತ್ತಿದೆ. ನನ್ನ ಅಭಿಪ್ರಾಯಗಳನ್ನು ಎಲ್ಲ ಪತ್ರಿಕೆಗಳೂ ತಿರುಚಿ ಪ್ರಕಟಿಸುತ್ತಿವೆ, ಅಪಾರ್ಥಗಳನ್ನು ಕಲ್ಪಿಸುತ್ತಿವೆ. ಹಾಗೆಂದು ನಾನೇನೂ ವಿಷಾದ ಪಡುವವನಲ್ಲ. ಅದರಿಂದ ನನಗಂತೂ ಅನುಕೂಲವೇ ಆಗಿದೆ. ನನ್ನ ಉಪನ್ಯಾಸಗಳಿಗೆ ಈಗ ಹತ್ತು ಸಾವಿರ ಜನರ ಬದಲಿಗೆ ಇಪ್ಪತ್ತು ಸಾವಿರ ಜನ ಬರುತ್ತಿದ್ದಾರೆ. ನನ್ನ ಮಾತುಗಳನ್ನು ಸರಿಯಾಗಿ ಗ್ರಹಿಸಬಲ್ಲವರು ಒಂದು ಮಾತಿಗೆ ಹೀಗೆಲ್ಲ ಅರ್ಥಗಳನ್ನು ಕಲ್ಪಿಸಬಹುದೇ ಎಂದು ಆಶ್ಚರ್ಯ ಪಡುತ್ತಿದ್ದಾರೆ.

ನನ್ನ ವಿಷಯದಲ್ಲಿ ಎಂತೆಂತಹ ಅಪಪ್ರಚಾರಗಳು ನಡೆಯುತ್ತಿವೆ ಎಂಬ ಸುದ್ದಿ ತಿಳಿದು ನನಗೆ ನಿಜಕ್ಕೂ ಆಘಾತವಾಗಿದೆ. “ಇದನ್ನು ಪ್ರಜಾಪ್ರಭುತ್ವ ಎನ್ನುವುದೇ? ಆರ್ಥಿಕ ಸಮಾನತೆಯನ್ನು ತರಲಾರದ ಪ್ರಜಾಪ್ರಭುತ್ವ ಬರೀ ತೋರಿಕೆಯ ಪ್ರಜಾಪ್ರಭುತ್ವ, ಬರಿ ಮಾತಿನ ಪ್ರಜಾಪ್ರಭುತ್ವ ಕೆಲವು ಸಲ ಆರ್ಥಿಕ ಸಮಾನತೆಗೆ ಬಾಧಕವೂ ಆಗಬಹುದು. ಇದಕ್ಕಿಂತ ಒಂದು ಐವತ್ತು ವರ್ಷ ಇಲ್ಲಿ ಸರ್ವಾಧಿಕಾರ ನಡೆದರೆ ಎಷ್ಟೋ ವಾಸಿ” ಎಂದು ನಾನು ಹೇಳಿದರೆ “ಇವನು ಸರ್ವಾಧಿಕಾರವನ್ನು ಅನುಮೋದಿಸುತ್ತಾನೆ” ಎಂದು ಬರೆದರು, ಇವರ ಮೂರ್ಖತನಕ್ಕೆ ಏನೆನ್ನಲಿ? ರಾಜ್‌ಕೋಟ್‌ನಲ್ಲೂ ಹೀಗೆಯೇ ಆಯಿತು. ಅಲ್ಲೊಬ್ಬ ಪತ್ರಕರ್ತ ಕೇಳಿದ “ನೀವು ಗಾಂಧಿಯ ಬಗ್ಗೆ ಹೀಗೆಲ್ಲ ಮಾತಾಡುತ್ತೀರಲ್ಲ, ಯಾರಾದರೂ ನಿಮ್ಮ ಮೇಲೆ ಗುಂಡಿನ ದಾಳಿ ಮಾಡಿದರೆ,..!”, ಎಂದು ಕೇಳಿದ. ಆಗ ನಾನು “ಅದಿನ್ನೂ ಒಳ್ಳೆಯದೇ ಬಿಡಿ, ಆಗ ನನಗೂ ಗಾಂಧಿಗೂ ಸಮಾನವಾದ ಪೈಪೋಟಿ ಏರ್ಪಡುತ್ತದೆ” ಎಂದಿದ್ದೆ. ಆದರೆ ಆತ ಅದೇನು ಅರ್ಥ ಮಾಡಿಕೊಂಡನೋ “ನಾನು ಗಾಂಧಿಯೊಡನೆ ಪೈಪೋಟಿಗೆ ನಿಂತಿದ್ದೇನೆ” ಎಂದು ಬರೆದಿದ್ದ. ನಮ್ಮ ಪತ್ರಕರ್ತರು ಹಾಸ್ಯಪ್ರಜ್ಞೆಯನ್ನೂ ಕಳೆದುಕೊಂಡು ಸಂವೇದನಾ ಶೂನ್ಯರಾಗಿದ್ದಾರೆ. ಅವರು ಬರೆಯುವ ಮಾತುಗಳನ್ನು ನಂಬಿ ಗಂಭೀರವಾದ ಚರ್ಚೆ, ಚಿಂತನೆಗಳಿಗೆ ಇಳಿಯುವುದು ಇನ್ನೂ ಅಸಂಗತ.

ಗಾಂಧಿಯಂಥವರು ವಿಮರ್ಶೆಗೂ ಯೋಗ್ಯರಲ್ಲ ಎಂದೋ ಅಥವ ಅವರನ್ನು ವಿಮರ್ಶೆಗೆ ಒಳಪಡಿಸಿದರೆ ಗಾಂಧೀವಾದಕ್ಕೇ ಗಂಡಾಂತರವೆಂದೋ ಯೋಚಿಸಿದಾಗ ಮಾತ್ರ ಹೀಗೆ ಆಗುತ್ತದೆ. ಅಥವ ಹಾಗೆ ನನ್ನನ್ನು ಟೀಕಿಸುವವರಿಗೆ ಗಾಂಧಿಯ ಕೆಲವು ತಪ್ಪುಗಳೇನಾದರೂ ಬಯಲಾದರೆ ಏನು ಗತಿ ಎಂಬ ಭಯವಿರಬಹುದು. ಲೋಕದಲ್ಲಿ ತಪ್ಪುಗಳನ್ನು ಮಾಡದ ವ್ಯಕ್ತಿ ಇನ್ನೂ ಹುಟ್ಟಿಲ್ಲ ಎಂದು ಎಲ್ಲ ಅನುಯಾಯಿಗಳೂ ತಿಳಿದಿರತಕ್ಕದ್ದು. ಹಾಗೆಯೇ ದೊಡ್ಡ ವ್ಯಕ್ತಿಗಳು ದೊಡ್ಡ ತಪ್ಪುಗಳನ್ನೇ ಮಾಡಿರುತ್ತಾರೆ ಎಂಬುದನ್ನೂ ತಿಳಿದಿರತಕ್ಕದ್ದು. ಗಾಂಧಿಯಂಥವರನ್ನು ಕುರಿತು ಆಲೋಚಿಸಿದಾಗ ನಮ್ಮೊಳಗಿನ ವೈಚಾರಿಕತೆಗೆ ಹೊಸ ಜನ್ಮ ಸಿಗುತ್ತದೆ. ಪೂಜೆ, ಸ್ತುತಿ, ಆರಾಧನೆಗಳಾದರೂ ನಮ್ಮ ಎಲ್ಲ ವೈಚಾರಿಕ ಜಾಗೃತಿಯನ್ನು ಮಣ್ಣುಗೂಡಿಸುತ್ತದೆ. ಒಂದು ತಲೆಮಾರು ತನ್ನ ಕಾಲದಲ್ಲಿ ಹುಟ್ಟಿದ ಯಾವುದೇ ಮಹಾತ್ಮನನ್ನು ಕುರಿತು ಆಮೂಲಾಗ್ರವಾಗಿ ಆಲೋಚನೆ ಮಾಡದೇ ಹೋದರೆ ಆ ಮಹಾತ್ಮನ ಜೀವನ ಸಾಧನೆಗಳು ಆ ತಲೆಮಾರಿನ ಪಾಲಿಗೆ ದಕ್ಕದೇ ಹೋಗುವ ಅಪಾಯವಿದೆ. ಒಬ್ಬ ವ್ಯಕ್ತಿಯಿಂದ ನಮಗಿನ್ನು ಪ್ರಯೋಜನವಿಲ್ಲ ಎಂದು ತಿಳಿದಾಗ ಮಾತ್ರ ಪೂಜೆಯ ಹಂಬಲ ದುಂದುಗವು ತಲೆದೋರುತ್ತದೆ. ಪೂಜೆ ಮಾಡುವುದರಿಂದ ಆ ಮಹಾತ್ಮರುಗಳಿಗೆ ನಮ್ಮಿಂದ ದೊಡ್ಡ ಉಪಕಾರ ಸಲ್ಲುತ್ತಿದೆ ಎಂದು ನಾವು ಭಾವಿಸುವುದು ಇನ್ನೂ ದೊಡ್ಡ ದುರಂತ.

ಭಾರತೀಯ ಹೆಣ್ಣುಮಕ್ಕಳನ್ನು ತಮ್ಮ ಮನೆಯ ಹೊಸ್ತಿಲಿನಿಂದ ಹೊರಬಂದು ಪುರುಷರಿಗೆ ಸರಿಸಮನಾಗಿ ನಿಲ್ಲುವಂತೆ ಮಾಡಿದ್ದು ಗಾಂಧಿಯ ಮತ್ತೊಂದು ಸಾಧನೆ. ಗಾಂಧೀ ತಮ್ಮ ಮೊಮ್ಮಕ್ಕಳ ವಯಸ್ಸಿನ ಹೆಣ್ಣುಮಕ್ಕಳ ಹೆಗಲ ಮೇಲೆ ಕೈಯಿರಿಸಿ ತೆಗೆಯಿಸಿಕೊಂಡ ಫೋಟೋ ಎಲ್ಲೆಡೆ ಪ್ರಚಾರದಲ್ಲಿದೆ. ಪ್ರತಿಯೊಬ್ಬರೂ ಅವರವರ ಬುದ್ಧಿಮಟ್ಟಕ್ಕೆ ಅನುಗುಣವಾಗಿಯೇ ಯೋಚಿಸುವುದು. ಅದನ್ನು ಮೀರಿ ಯೋಚಿಸುವ ಶಕ್ತಿ ಅವರಿಗಿಲ್ಲದ ಕಾರಣ ಅಂಥವರನ್ನು ಟೀಕಿಸಿ ಲಾಭವಿಲ್ಲ. ಗಾಂಧಿ ತಮ್ಮ ಕೊನೆಯ ದಿನಗಳಲ್ಲಿ ತಮ್ಮಲ್ಲಿ ಇನ್ನೂ ಕಾಮವಾಸನೆ ಉಳಿದಿದೆಯೇ ಎಂದು ಪರೀಕ್ಷಿಸಲು ೨೦ ವರ್ಷದ ಒಬ್ಬ ತರುಣಿಯನ್ನು ಹಾಸಿಗೆಯಲ್ಲಿ ತಮ್ಮ ಮಗ್ಗುಲಲ್ಲಿ ಮಲಗಿಸಿಕೊಂಡು ನಿದ್ರಿಸುತ್ತಿದ್ದರಂತೆ. ಆ ಯುವತಿಯ ಧೈರ್ಯವನ್ನು ಮೆಚ್ಚಬೇಕು!  ಈ ಪತ್ರಿಕೆಯವರು ನನ್ನ ಬಗ್ಗೆ ಕಾಮವನ್ನು ಬೋಧಿಸುವ ಗುರು ಎಂದೆಲ್ಲ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾನು ಕೂಡ ಈತನಕ ಅಂಥ ಕೆಟ್ಟ ಧೈರ್ಯವನ್ನು ಮಾಡಿದವನಲ್ಲ. ಹಾಗೆಯೇ ಗಾಂಧಿಯ ಈ ತರಹದ ಪ್ರಯೋಗಗಳನ್ನೂ ಮೆಚ್ಚತಕ್ಕದ್ದು. ಅದಕ್ಕೇ ನಾನು ಗಾಂಧಿಯನ್ನು ಒಬ್ಬ ಧಾರ್ಮಿಕ ವ್ಯಕ್ತಿ ಎಂದು ಭಾವಿಸುವುದು. ನಮ್ಮ ಕಣ್ಣಿಗೆ ಕಂಡದ್ದೇ ಬದುಕಲ್ಲ. ನಾವು ನಿಂತ ನೆಲೆಯೇ ಅಸ್ತಿತ್ವವಲ್ಲ ಎಂದು ಮೊದಲು ಮನಗಾಣಬೇಕು. ನಾವು ಕೇವಲ ಮಣ್ಣಿನ ಹಣತೆಗಳು; ಬದುಕಿನ ದೀಪವಾದರೂ ಈ ಹಣತೆಗಿಂತ ಎತ್ತರದ ನೆಲೆಯಲ್ಲಿ ಬೆಳಗುತ್ತದೆ. ಯಾರ ದೃಷ್ಟಿಗೆ ದೀಪದ ಜ್ವಾಲೆ ಕಾಣಿಸದೋ ಅವರು ಮಣ್ಣಿನ ಹಣತೆಯನ್ನೇ ಕಾಣುತ್ತಾರೆ. ಮೇಲೆ ಉಲ್ಲೇಖಿಸಿದ ಗಾಂಧಿಯ ಪ್ರಯೋಗ ಹಲವು ಟೀಕೆಗಳನ್ನು ಎದುರಿಸಿದವು. ಪಕ್ಕಾ ಗಾಂಧೀವಾದಿಗಳು ಸಹ ಈ ವಿಷಯದಲ್ಲಿ ಗಾಂಧಿಯನ್ನು ವಿರೋಧಿಸಿದರು. ಇಂದಿಗೂ ಗಾಂಧೀ ಪ್ರಯೋಗಗಳಲ್ಲಿ ಇದೊಂದು ಕಪ್ಪು ಚುಕ್ಕೆ ಎಂದು ಇವರು ಭಾವಿಸುತ್ತಾರೆ. ಕೆಲವರು ರಾತ್ರಿಯ ಹೊತ್ತು ಗಾಂಧಿ ಮಲಗುವ ಕೋಣೆಯ ಆಸುಪಾಸಿನಲ್ಲಿ ಪತ್ತೆದಾರಿ ಕೆಲಸಗಳಲ್ಲಿ ನಿರತರಾಗಿದ್ದುದೂ ಉಂಟು. ಮತ್ತೆ ಕೆಲವರು ಗಾಂಧಿಯ ಚಾರಿತ್ರ್ಯಕ್ಕೆ ಇನ್ನೆಲ್ಲಿ ಕಳಂಕ ತಗುಲುತ್ತದೋ ಎಂದು ಹೆದರಿ ಈ ಪ್ರಯೋಗದ ಕುರಿತು ವ್ಯಾಪಕ ಚರ್ಚೆ, ಮಾತುಕತೆ ನಡೆಯದಂತೆ ಹತ್ತಿಕ್ಕಿದರು. ಆದರೆ ನನ್ನ ದೃಷ್ಟಿಯಲ್ಲಿ ಇದುವೇ ಗಾಂಧಿಯ ಪ್ರಯೋಗಗಳಲ್ಲಿ ಅತ್ಯಂತ ಸಾರ್ಥಕವಾದುದು. ಏಕೆಂದರೆ ಆ ವರೆಗಿನ ಅವರ ನಿಗ್ರಹವಾದೀ ಸಾಧನೆಗಳಿಗಿಂತ ಇದು ತುಂಬ ವಿಭಿನ್ನವಾದುದು. ಅಧ್ಯಾತ್ಮದಲ್ಲಿ ಇದನ್ನು ತಾಂತ್ರಿಕ ಪ್ರಯೋಗ ಎಂದು ಕರೆಯುವುದುಂಟು. ಗಾಂಧೀ ತಮ್ಮ ನಿಗ್ರಹವಾದೀ ಸಾಧನೆಗಳಿಂದ ಸಾಧಿಸಲಾಗದುದನ್ನು ಈ ಪ್ರಯೋಗದಿಂದ ಸಾಧಿಸಿದರು.

ನಮ್ಮ ಸೋಗಲಾಡಿತನದಿಂದ ಗಾಂಧೀ ನಾಶವಾಗುತ್ತಿರುವುದನ್ನು ನಾನು ನೋಡಲಾರೆ. ಆದ್ದರಿಂದ ಗಾಂಧಿಯನ್ನು ಎಲ್ಲ ರೀತಿಯ ವಿಮರ್ಶೆಗೆ ಒಳಪಡಿಸುತ್ತ ಉಪನ್ಯಾಸಗಳನ್ನು ನೀಡುತ್ತಿದ್ದೇನೆ. “ಗಾಂಧಿ ಈಗಾಗಲೇ ಸತ್ತಿದ್ದಾರೆ ಈಗ ಅವರನ್ನೇಕೆ ವಿಮರ್ಶಿಸುತ್ತ ಕೂರಬೇಕು” ಎಂದು ಕೆಲವು ಗಾಂಧೀವಾದಿಗಳ ಚೀಟಿಗಳು ಬಂದಿವೆ. ಗಾಂಧೀ ಅಷ್ಟು ಸುಲಭವಾಗಿ ಸಾಯುವವರಲ್ಲ. ಅಂದು ಗೋಡ್ಸೇ ಮಾಡಿದ ತಪ್ಪನ್ನೇ ಇಂದು ಈ ಗಾಂಧೀವಾದಿಗಳೂ ಮಾಡುತ್ತಿದ್ದಾರೆ ಎನಿಸುತ್ತದೆ. ಗೋಡ್ಸೇ ಗುಂಡೇಟಿಗೆ ಗಾಂಧೀ ಸತ್ತು ಹೋದರು ಎಂದು ಗಾಂಧೀವಾದಿಗಳು ಭಾವಿಸಿರುವುದು ಮೂರ್ಖತನ. ಒಬ್ಬ ಸಾಮಾನ್ಯ ವ್ಯಕ್ತಿ ಸತ್ತರೆ ಅವನ ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನು ಆಡತಕ್ಕದ್ದು, ಅದು ಲೋಕಾರೂಢಿ. ಆದರೆ ಗಾಂಧಿಯಂತಹವರ ವಿಷಯದಲ್ಲೂ ಹೀಗೆಯೇ ಯೋಚಿಸಿದರೆ ಅವರಿಗೇ ಅಪಚಾರ ಎಸಗಿದಂತಾಗುತ್ತದೆ. ನನ್ನ ಪಾಲಿಗೆ ಗಾಂಧೀ ಸತ್ತಿಲ್ಲ. ಸತ್ತ ವ್ಯಕ್ತಿಯೊಡನೆ ವರ್ತಿಸುವಂತೆ ನಾನು ಅವರೊಡನೆ ವರ್ತಿಸಲಾರೆ. ಗಾಂಧೀಜಿಯನ್ನು ಸಮಾಧಿ ಮಾಡುವ ಸಲಹೆಗಳನ್ನು ಇನ್ನಾದರೂ ಕೈಬಿಡಬೇಕೆಂದು ಗಾಂಧೀವಾದಿಗಳನ್ನು ಕೇಳಿಕೊಳ್ಳುತ್ತೇನೆ. ನಾನು ಗಾಂಧೀ ವಿರೋಧಿಯಲ್ಲ, ಗಾಂಧೀವಾದದ ವಿರೋಧಿ. ತಮ್ಮ ಶೋಧನೆಗಳು ಸಿದ್ಧಾಂತಗಳಾಗುವುದನ್ನು ಗಾಂಧೀ ಸಹಿಸುತ್ತಿರಲಿಲ್ಲ. ಅವು ಮುಂದೆ ’ಗಾಂಧೀವಾದ’ ಎಂಬ ಹೆಸರನ್ನು ಪಡೆಯುತ್ತದೆ ಎಂದು ತಿಳಿದಿದ್ದರೆ ಗಾಂಧೀ ನಿಜಕ್ಕೂ ಆತಂಕ ಪಡುತ್ತಿದ್ದರು. ಆದರೆ ಈಗ ಅವೆಲ್ಲ ಒಂದೊಂದಾಗಿ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ನನ್ನ ಮಿತ್ರರೊಬ್ಬರು ಹಿಂದಿಯಲ್ಲಿ ’ಗಾಂಧೀ ಪುರಾಣ’ವನ್ನೂ ಪ್ರಕಟಿಸಿದ್ದಾರೆ.  ಗಾಂಧೀ ತಮ್ಮ ಪ್ರತಿಯೊಂದು ಮಾತಿನಲ್ಲೂ, ಆಲೋಚನೆಯಲ್ಲೂ, ಕೃತಿಗಳಲ್ಲೂ ತಪ್ಪುಗಳನ್ನು ಬೆದಕುತ್ತಿದ್ದರು. ತಪ್ಪುಗಳು ಕಂಡಾಗ ಪಶ್ಚಾತ್ತಾಪ ಪಡುತ್ತಿದ್ದರು. ಈಗ ಗಾಂಧಿಯ ಹಾದಿಯಲ್ಲಿ ನಡೆಯಲು ಸಂಕಲ್ಪ ಮಾಡಿರುವ ನಾವು ನಮ್ಮ ಒಂದೊಂದು ಹೆಜ್ಜೆಯನ್ನೂ ಪರಿಶೀಲಿಸದೆ, ಪರೀಕ್ಷಿಸದೆ ನಡೆದರೆ ಸ್ವತಃ ಗಾಂಧಿಯೂ ನಮ್ಮ ಧೋರಣೆಯನ್ನು ವಿರೋಧಿಸುತ್ತಾರೆ.

ಗಾಂಧಿ ’ದರಿದ್ರ ನಾರಾಯಣ’ ಎಂಬ ಪದವನ್ನು ಬಳಸಿ ದಾರಿದ್ರ್ಯವನ್ನೂ ದೈವಿಕ ನೆಲೆಗಿರಿಸಿದರು. ನಾರಾಯಣನೊಂದಿಗೆ ಲಕ್ಷ್ಮಿಯನ್ನು ಸೇರಿಸುವುದು ಒಂದು ಅತಿಯಾದರೆ ಇದು ಇನ್ನೊಂದು ಅತಿಯಾಗಿದೆ. ಹಾಗೆ ಕರೆಯುವುದು ಸೌಜನ್ಯ ಎಂದು ಭಾವಿಸುವುದು ತಿಳಿಗೇಡಿತನ. ಸಣ್ಣ ಸಣ್ಣ ಪದಗಳೂ ಮನುಷ್ಯನ ಆಲೋಚನೆಯ ಮೇಲೆ ಆಳವಾದ ಪ್ರಭಾವ ಬೀರಬಲ್ಲುದು. ’ನಾರಾಯಣ’ ಶಬ್ದಕ್ಕೆ ಲಕ್ಷಾಂತರ ವರ್ಷಗಳ ಸಂಸ್ಕಾರವಿದೆ, ಮನುಷ್ಯ ಬುದ್ಧಿಯನ್ನು ನಿಯಂತ್ರಿಸಬಲ್ಲ ಪ್ರಭಾವವಿದೆ. ಅದರೊಂದಿಗೆ ’ದರಿದ್ರ’ವನ್ನು ಸೇರಿಸಿದರೆ ನಮಗೆ ಅರಿವಿಲ್ಲದೆಯೇ ನಮ್ಮ ಬದುಕಿನಲ್ಲಿ ದಾರಿದ್ರ್ಯವೂ ನಾರಾಯಣದೊಂದಿಗೆ ಶಾಶ್ವತತೆಯನ್ನು ಪಡೆದುಬಿಡುತ್ತದೆ. ತಾತ್ವಿಕವಾಗಿಯೂ ಇದು ಸರಿಯಾದ ಪದವಲ್ಲ. ನಾರಾಯಣ ಎಲ್ಲರಲ್ಲೂ, ಎಲ್ಲೆಡೆಯೂ ನೆಲೆಸಿರುವಾಗ ಕೆಲವರನ್ನು ಮಾತ್ರ ನಾರಾಯಣನೆಂದೋ, ಹರಿಯೆಂದೋ, ಹರಿಜನರೆಂದೋ ಕರೆಯುವುದು ಸೂಕ್ತವಲ್ಲ. ಇಷ್ಟು ಕಾಲ ಬ್ರಾಹ್ಮಣರು ದೇವರ ಮಕ್ಕಳಾಗಿದ್ದರು. ಈಗ ಹರಿಜನರ ಸರದಿ. ಈ ಆಟ ಇನ್ನೂ ಎಷ್ಟು ದಿನ ನಡೆಯಬೇಕು?

ದಯೆ, ದಾನಗಳು ಶೋಷಕ  ವರ್ಗದ ಸಾವಿರಾರು ವರ್ಷಗಳ ಸಂಶೋಧನೆಯ ಫಲವಾಗಿದೆ. ದಯೆ ಧರ್ಮಗಳ ಹೆಸರಿನಲ್ಲಿ ಅವರು ಶೋಷಿತರನ್ನು ದಾರಿತಪ್ಪಿಸುತ್ತಿರುತ್ತಾರೆ. ಒಬ್ಬ ವ್ಯಕ್ತಿಗೆ ದಾನ ಮಾಡುವುದು, ಮನುಷ್ಯಜಾತಿಗೇ ಅವಮಾನ ಮಾಡಿದಂತೆ. ದಾನ ಧರ್ಮಗಳ ಮೇಲೆ ನಿಂತ ಸಮಾಜವು ಕ್ರಮೇಣ ಒಂದು ರೋಗಗ್ರಸ್ಥ ಸಮಾಜವಾಗುತ್ತದೆ. ನಮ್ಮ ದಯೆಗೆ ಪಾತ್ರನಾದವನು ಆಳದಲ್ಲಿ ನಮ್ಮ ಶತ್ರುವಾಗಿ ಪರಿಣಮಿಸಿರುತ್ತಾನೆ. ಅವನು ಇಂದಲ್ಲ ನಾಳೆ ತನ್ನ ಪ್ರತೀಕಾರವನ್ನು ತೀರಿಸಿಕೊಳ್ಳದೇ ಬಿಡುವುದಿಲ್ಲ. ಏಕೆಂದರೆ ದೈನ್ಯತೆ ಎಂಥವನಿಗೂ ನೋವನ್ನು ಉಂಟು ಮಾಡುತ್ತದೆ. ಮೇಲ್ನೋಟಕ್ಕೆ  ಅವನು ನಗುನಗುತ್ತ “ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ” ಎಂದು ಹರಸಿದರೂ ಒಳಗೆ ತನ್ನ ಈ ಸ್ಥಿತಿಗೆ ಕಾರಣರಾರು ಎಂಬುದನ್ನು ಅವನು ಚೆನ್ನಾಗಿ ಬಲ್ಲ. ದಯೆ ಇಬ್ಬರು ವ್ಯಕ್ತಿಗಳ ಸ್ನೇಹ-ಪ್ರೀತಿಗಳನ್ನು ಖಂಡಿತ ಬೆಸೆಯದು. “ನಾನು ಅವನಿಗೆ ಎಷ್ಟು ಒಳ್ಳೆಯದನ್ನು ಮಾಡಿದರೂ ಕೊನೆಗೆ ಅವನು ನನಗೆ ಹೀಗೆ ಮಾಡಿಬಿಟ್ಟ” ಎಂದು ಜನ ಮಾತಾಡಿಕೊಳ್ಳುವುದನ್ನು ನೀವು ಕೇಳಿರಬಹುದು. ನಾವು ತೋರಿಸಿದ ದಯೆಯ ಫಲವನ್ನು ನಾವು ಅನುಭವಿಸಿಯೇ ತೀರಬೇಕು.

ದಾರಿದ್ರ್ಯವನ್ನೂ ತತ್ವೀಕರಿಸಿದ್ದು ಭಾರತೀಯ ಪರಂಪರೆಯ ಬಹುದೊಡ್ಡ ಅಚಾತುರ್ಯಗಳಲ್ಲಿ ಒಂದು. ಇದನ್ನು ’ಭಾರತೀಯರ ದಾರಿದ್ರ್ಯ ಮೀಮಾಂಸೆ’ ಎಂದು ಕರೆದರೂ ಅಡ್ಡಿಯಿಲ್ಲ. ಬಡತನದಲ್ಲಿ ಬದುಕುವುದೂ ಒಂದು ಘನತೆಯ ಸಂಗತಿ ಎಂಬ ನಂಬಿಕೆಯನ್ನು ರಕ್ತಗತ ಮಾಡಿಕೊಂಡು ನಾವು ಬಹುದೊಡ್ಡ ಬೆಲೆ ತೆರಬೇಕಾಯಿತು. ಗಾಂಧಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ದಾರಿದ್ರ್ಯ ಮೀಮಾಂಸೆಯನ್ನೇ ಎತ್ತಿ ಹಿಡಿದರು. ಬಡತನವನ್ನು ಮನುಷ್ಯಜಾತಿಗೆ ತಗುಲಿರುವ ರೋಗದಂತೆ ಒಂದು ಗಂಡಾಂತರದಂತೆ ಭಾವಿಸದೇ ’ದರಿದ್ರ ನಾರಾಯಣ’ ಎಂಬ ಪದವನ್ನು ಹುಟ್ಟು ಹಾಕಿದ್ದಲ್ಲದೆ ದಾರಿದ್ರ್ಯವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಹಾದಿಗಳನ್ನು ತೋರಿಸಿಕೊಟ್ಟರು. ಇದು ನಿಜಕ್ಕೂ ಅಪಾಯಕಾರಿಯಾದುದು, ಆತ್ಮಹತ್ಯಾತ್ಮಕವಾದುದು. ದಾರಿದ್ರ್ಯವನ್ನು ಹೀಗೆಲ್ಲ ಭಾವಿಸುತ್ತ ಕುಳಿತರೆ ಸಾಮಾಜಿಕ ನ್ಯಾಯವನ್ನು ಉಂಟುಮಾಡಬಲ್ಲ ಸಂಪತ್ತನ್ನು ಎಲ್ಲಿಂದ ತರುವುದು? ಬಂಡವಾಳವನ್ನು ಹೇಗೆ ಉಂಟು ಮಾಡುವುದು? ನಮ್ಮ ಕಣ್ಣೆದುರಿಗೆ ಹುಟ್ಟಿ ಬೆಳೆದ ದೇಶಗಳು ನಮಗಿಂತ ಸಾವಿರ ಪಾಲು ಬೆಳೆದಿದ್ದರೂ ನಮ್ಮ ಸ್ಥಿತಿ ಇನ್ನೂ ಹೀಗಿದೆಯಲ್ಲ! ಸಂಪತ್ತು ಆಕಾಶದಿಂದ ಉದುರದು, ಭೂಮಿಯನ್ನು ಶೋಷಿಸಿ ಪಡೆಯಲಾಗದು. ಅದು ಬುದ್ಧಿಶಕ್ತಿಯಿಂದ ಬೆಳೆಯುತ್ತದೆ. ಇಂತಹ ಬುದ್ಧಿಯಲ್ಲಿ ಬಡತನವನ್ನು ಪೂಜಿಸುವ ಗುಣವನ್ನು ಸೇರಿಸಿದರೆ ಏನು ಗತಿ? ಬುದ್ಧ ಮಹಾವೀರರು, ಎಲ್ಲ ತೀರ್ಥಂಕರರೂ ರಾಜ್ಯ ಕೋಶಗಳನ್ನು ತ್ಯಜಿಸಿ ಭಿಕ್ಷಾಟನೆ ಮಾಡಿದರು ನಿಜ. ಆದರೆ ಅವರ ಬಡತನದ ಸ್ಥಿತಿಗೂ, ಒಂದು ಹೊತ್ತಿಗೂ ಅನ್ನವಿಲ್ಲದೆ ಮಲಗುವ ಇಂದಿನ ಬಡವನ ಸ್ಥಿತಿಗೂ ಅರ್ಥಾರ್ಥ ಸಂಬಂಧವಿಲ್ಲ. ಹಾಗೆ ಸಂಬಂಧವನ್ನು ಕಲ್ಪಿಸಲೂ ಕೂಡದು. ಆ ರಾಜಕುಮಾರರು ಬಡತನದಲ್ಲಿ ಒಂದು ಬಗೆಯ ಬಿಡುಗಡೆಯನ್ನು ಅನುಭವಿಸಿದರು. ಷೋಕಿಗಾಗಿ ಭಿಕ್ಷಾಟನೆ ಮಾಡಿದರು. ಆದರೆ ಇಂದಿನ ಬಡವರ ಸ್ಥಿತಿ ಹಾಗಲ್ಲ. ಆದರೆ ಇದು ನಮಗೆ ಅರ್ಥವಾಗಲಿಲ್ಲ. ಬುದ್ಧ ಮಹಾವೀರರನ್ನು ನಾವು ತಪ್ಪಾಗಿ ಅರ್ಥೈಸಿಕೊಂಡೆವು. ಎಂದಿದ್ದರೂ ಸಂಪತ್ತನ್ನು ಬಿಡಲೇ ಬೇಕಲ್ಲವೇ? ಬುದ್ಧ ಮಹಾವೀರರೂ ಬಿಟ್ಟರಲ್ಲ, ಹಾಗಾಗಿ ಸಂಪಾದನೆಯನ್ನೇ ಮಾಡದಿದ್ದರಾಯಿತು ಎಂದು ತರ್ಕಿಸಿದೆವು.

ಭಾರತದ ಬಹುಪಾಲು ತತ್ವಜ್ಞಾನಿಗಳು, ಅನುಭಾವಿಗಳು ರಾಜಮನೆತನದವರು, ಆಗರ್ಭ ಶ್ರೀಮಂತರು. ಇಲ್ಲಿ ಆಧ್ಯಾತ್ಮವು ಶ್ರೀಮಂತಿಕೆಯ ನೆಲೆಯಿಂದ ಹುಟ್ಟಿದುದರಿಂದಲೇ ನಾವು ’ದಾರಿದ್ರ್ಯ ಮೀಮಾಂಸೆ’ಯನ್ನು ಕಟ್ಟಿಕೊಳ್ಳಲು ಕಾರಣವಾಯಿತು. ಒಂದು ಜನಾಂಗ ನಿಜಕ್ಕೂ ಧಾರ್ಮಿಕವಾಗಬೇಕೆಂದರೆ ಅದು ಮೊದಲು ಸಂಪತ್ತಿಗೆ ಮಹತ್ವ ನೀಡಬೇಕು. ಹೊಟ್ಟೆಗಿಲ್ಲದ ಜನಾಂಗ ಧಾರ್ಮಿಕತೆಯ ಕುರಿತು ಚಿಂತಿಸುವುದು ನಿಜಕ್ಕೂ ಅಸಂಗತ. ಅನ್ನದೇವರ ಹುಡುಕಾಟ ಮೊದಲು, ಅನುಭಾವದ ಹುಡುಕಾಟ ಆಮೇಲೆ. ಅನುಭಾವ ಮನುಷ್ಯನ ಕಟ್ಟಕಡೆಯ ಹುಡುಕಾಟವಾಗಿದೆ. ಎರಡು ಸಾವಿರ ವರ್ಷಗಳ ಹಿಂದೆ ನಾವು ನಿಸ್ಸಂಶಯವಾಗಿ ಅಧ್ಯಾತ್ಮದ ಶಿಖರದಲ್ಲಿದ್ದೆವು, ಧಾರ್ಮಿಕರಾಗಿದ್ದೆವು. ಆದರೆ ಅಂದಿನಿಂದ ಇಂದಿನ ತನಕ ಒಂದೇ ಸಮನೆ ಬಡತನದ ಕಂದಕಕ್ಕೆ ಉರುಳುತ್ತಲೇ ಬಂದಿದ್ದೇವೆ. ಈಗಲೂ ನಮ್ಮದು ಆಧ್ಯಾತ್ಮಿಕ ದೇಶ ಎಂದು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ವಿಧಿಯಿಲ್ಲದೆ ಚರಕವನ್ನು ಬಳಸುವವರನ್ನು ನಾನು ಟೀಕಿಸುವುದಿಲ್ಲ. ಆದರೆ ಚರಕ ನಮ್ಮ ಪ್ರಗತಿಯ ಸಂಕೇತವಾಗಬಾರದೆಂದು ಹೇಳುತ್ತಿದ್ದೇನೆ. ಒಬ್ಬ ವ್ಯಕ್ತಿ ತನ್ನ ಬಟ್ಟೆ ತಾನೇ ನೇಯ್ಗೆ ಮಾಡಿಕೊಳ್ಳುವುದು, ತನ್ನ ಚಪ್ಪಲಿ ತಾನೇ ಹೊಲಿದುಕೊಳ್ಳುವುದು, ತನ್ನ ಸಾಬೂನನ್ನು ತಾನೇ ತಯಾರಿಸಿಕೊಳ್ಳುವುದು ಸ್ವಾವಲಂಬನವೇ? ಪ್ರತಿಯೊಬ್ಬನೂ ದಿನಪೂರ್ತಿ ಇಂಥವನ್ನೇ ಮಾಡುತ್ತ ಕುಳಿತಿದ್ದರೆ ಅಂಥವನು ನಿಸ್ಸಂಶಯವಾಗಿ ಪಶುತ್ವದ ಮಟ್ಟಕ್ಕೆ ಇಳಿಯುತ್ತಾನೆ.

ಅಧಿಕ ಜನಸಂಖ್ಯೆ ಬಡತನವನ್ನು ಇನ್ನೂ ಹೆಚ್ಚಿಸುತ್ತದೆ. ಆದರೆ ಗಾಂಧಿ ಸಂತಾನ ನಿರೋಧ ಸಾಧನಗಳನ್ನು ವಿರೋಧಿಸಿ ಬ್ರಹ್ಮಚರ್ಯ ವ್ರತವನ್ನು ಪಾಲಿಸತಕ್ಕದ್ದು ಎನ್ನುತ್ತಾರೆ. ಎಷ್ಟು ಜನ ಪಾಲಿಸಬಲ್ಲರು? ಎಲ್ಲರೂ ಪಾಲಿಸಲು ಇನ್ನೂ ಎಷ್ಟು ಶತಮಾನಗಳ ಕಾಲ ನಾವು ಕಾಯುತ್ತ ಕೂರಬೇಕು? ಗಾಂಧಿಯ ಈ ಸಲಹೆ ತುಂಬ ಅವೈಜ್ಞಾನಿಕವಾದುದು. ಒಬ್ಬ ಒಳ್ಳೆಯ ವ್ಯಕ್ತಿ ಹೇಳುವ ಮಾತುಗಳೆಲ್ಲ ಸರಿಯಾಗಿಯೇ ಇರುತ್ತದೆ ಎಂದೇಕೆ ನಾವು ಭಾವಿಸಬೇಕು? ಒಬ್ಬ ಕೆಟ್ಟ ವ್ಯಕ್ತಿಯ ಮಾತುಗಳೂ ಕೆಲವು ಸಲ ಸರಿಯಾಗಿರಬಹುದು. ಹಾಗೆ ನೋಡಿದರೆ ಸಮಾಜವನ್ನು ಅತ್ಯಂತ ಸರಿಯಾಗಿ ವಿಶ್ಲೇಷಣೆ ಮಾಡುತ್ತಿದ್ದ ಕಾರ್ಲ್ ಮಾರ್ಕ್ಸ್ ಇಪ್ಪತ್ತ ನಾಲ್ಕು ಗಂಟೆ ಸಿಗರೇಟು ಸೇದುತ್ತಿದ್ದ, ಕುಡಿಯುತ್ತಿದ್ದ, ಮನೆ ಕೆಲಸದವಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಇಂಥ ಯಾವುದನ್ನೂ ಮಾಡದಿದ್ದ ಗಾಂಧೀ ಮನುಷ್ಯ ಜೀವನವನ್ನು ತುಂಬ ಅವೈಜ್ಞಾನಿಕವಾಗಿ ಅರ್ಥೈಸುತ್ತಿದ್ದರು.

ಮೊರಾರ್ಜಿ ದೇಸಾಯಿಯಂತಹ ಗಾಂಧೀವಾದಿಗಳು “ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಾದ ನೀವು ಇಂಥವನ್ನೆಲ್ಲ ಏಕೆ ತಲೆಗೆ ಹಚ್ಚಿಕೊಳ್ಳುತ್ತೀರಿ? ಗಾಂಧಿಗೂ ನಿಮಗೂ ಏನು ಸಂಬಂಧ?” ಎಂದು ಕೇಳುತ್ತಿದ್ದಾರೆ. ಗಾಂಧಿಯನ್ನು ಯಾವ ಅರ್ಥಶಾಸ್ತ್ರಜ್ಞನೂ, ಯಾವ ರಾಜಕಾರಿಣಿಯೂ ಅರ್ಥ ಮಾಡಿಕೊಳ್ಳಲಾರ ಎಂದು ನಾನು ಶ್ರೀ ಮುರಾರ್ಜಿ ದೇಸಾಯಿಗೆ ಹೇಳಲು ಬಯಸುತ್ತೇನೆ. ಏಕೆಂದರೆ ಗಾಂಧಿ ಒಳ್ಳೆಯ ರಾಜಕಾರಿಣಿಯೂ ಅಲ್ಲ, ಒಳ್ಳೆಯ ಅರ್ಥಶಾಸ್ತ್ರಜ್ಞರೂ ಅಲ್ಲ. ಆಂತರ್ಯದಲ್ಲಿ ಅವರು ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರು. ಅಧ್ಯಾತ್ಮವನ್ನು ಸಾಮಾಜಿಕ ಜೀವನದೊಡನೆ ಬೆಸೆಯಲು ನಿರಂತರವಾಗಿ ಪ್ರಯೋಗಗಳನ್ನು ನಡೆಸುತ್ತಿದ್ದರು. ಗುಜರಾತ್‌ನ ಅಪ್ಪಟ ಗಾಂಧೀವಾದಿ ಶ್ರೀ ಇಂದೂಲಾಲ್ ಯಾಜ್ಞಿಕ್ ನನ್ನನ್ನು ಗುಜರಾತಿನಿಂದ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಗಾಂಧಿಯ ವಿಚಾರಗಳನ್ನು ವಿಮರ್ಶೆ ಮಾಡಿದ ಮಾತ್ರಕ್ಕೆ ಈ ಬಹಿಷ್ಕಾರವೇ? ಈ ಮಾತುಗಳನ್ನು ಕೇಳಿದರೆ ಗಾಂಧಿಯ ಆತ್ಮ ಕೂಡ ಮರುಕ ಪಡದೇ ಇರದು. ಇವರಿಗೆಲ್ಲ ಗಾಂಧಿಯ ಅಹಿಂಸೆ, ನೈತಿಕತೆಗಳು ಇಷ್ಟೆಯೇ ತಿಳಿದಿರುವುದು? ದೆಹಲಿಯಲ್ಲಿ ನಾನು ಗಾಂಧಿಯ ಬಗ್ಗೆ ಒಂದು ಉಪನ್ಯಾಸ ನೀಡಿದಾಗ ಒಬ್ಬ ಗಾಂಧೀವಾದಿ “ನಿಮ್ಮನ್ನು ಈ ಕೂಡಲೇ ಜೈಲಿಗೆ ಹಾಕಿಸುತ್ತೇನೆ” ಎಂದು ಒಂದು ಪತ್ರವನ್ನು ಬರೆದಿದ್ದ. ಆ ಕಾಲಕ್ಕೆ ಗಾಂಧಿ ಸಹವಾಸ ಮಾಡಿದವರೆಲ್ಲ ಜೈಲುವಾಸ ಅನುಭವಿಸಬೇಕಾಗಿತ್ತು; ಸದ್ಯ ಗಾಂಧಿಯ ಕಾಲದಲ್ಲಿ ಹುಟ್ಟಿರಲಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದ ನನಗೆ ಅಂದು ನಿಜಕ್ಕೂ ಆಘಾತವಾಯಿತು. ಗಾಂಧೀ ಸಹವಾಸ ಮಾಡುವುದಿರಲಿ ಗಾಂಧೀ ಬಗ್ಗೆ ಉಪನ್ಯಾಸ ನೀಡಿದರೂ ಜೈಲುವಾಸವೇ! ಒಂದು ವೇಳೆ ಗಾಂಧಿ ಇಂದು ಬದುಕಿದ್ದರೆ ಈ ಗಾಂಧೀವಾದಿಗಳು ಖಂಡಿತವಾಗಿ ಅವರನ್ನೂ ಜೈಲಿಗೆ ತಳ್ಳುತ್ತಿದ್ದರು. ಏಕೆಂದರೆ ಗಾಂಧೀ ಅಂತರಂಗದಲ್ಲಿ ಮಹಾ ಬಂಡಾಯಗಾರನೂ ಹೌದು. “ಗಾಂಧಿಯವರ ವಿಚಾರಗಳು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿತಲ್ಲ!” ಎಂದು ಒಬ್ಬರು ಕೇಳಿದ್ದಾರೆ. ನಿಸ್ಸಂಶಯವಾಗಿ ದೇಶದ ಇತಿಹಾಸದಲ್ಲಿ ಗಾಂಧಿಯಷ್ಟು ದೇಶಸೇವೆಗೆ ತೊಡಗಿದ ಇನ್ನೊಬ್ಬನನ್ನು ಕಾಣಲಾಗುವುದಿಲ್ಲ. ಆದರೆ ಇದರರ್ಥ ನಾವು ಗಾಂಧಿಯ ವಿಷಯದಲ್ಲಿ ಕುರುಡರಾಗಬೇಕು ಎಂದಲ್ಲವಲ್ಲ! ಹಾಗೆ ಕುರುಡರಾಗುವುದನ್ನು ಸ್ವತಃ ಗಾಂಧಿಯೂ ಇಷ್ಟ ಪಡುವುದಿಲ್ಲ. ಗಾಂಧಿಯ ಬಹುಪಾಲು ವಿಚಾರಗಳು ಕಣ್ಣೆದುರಿನ ಪ್ರಶ್ನೆಗಳನ್ನು ಪರಿಶೀಲಿಸುತ್ತ ಹುಟ್ಟಿದವು. ಅವನ್ನೆಲ್ಲ ಸನಾತನ ಸತ್ಯಗಳು ಎಂದೇನೂ ಭಾವಿಸಬೇಕಿಲ್ಲ. “ಆತನಿನ್ನೂ ಚಿಕ್ಕವನು ಅದಕ್ಕೇ ಗಾಂಧಿಯ ಬಗ್ಗೆ ಬಾಯಿಗೆ ಬಂದಂತೆ ಹರಟುತ್ತಿದ್ದಾನೆ” ಎಂದು ಕಾಕಾ ಕಾಲೇಲ್ಕರ್ ಹೇಳಿದರಂತೆ. ಆಲೋಚನೆಗೂ ವಯಸ್ಸಿಗೂ ಏನು ಸಂಬಂಧ? ಇನ್ನು ಕೆಲವರು “ಗುಜರಾತ್ ಸರ್ಕಾರದಿಂದ ನಾರ್ಗೋಲ್‌ನಲ್ಲಿ ನಿಮ್ಮ ಆಶ್ರಮಕ್ಕೆ ೬೦೦ ಎಕರೆ ಭೂಮಿ ಮಂಜೂರಾಗಲಿದೆ. ಅಲ್ಲಿನವರೆಗಾದರೂ ಸುಮ್ಮನಿರಿ” ಎಂದು ಸಲಹೆ ನೀಡಿದರು. ಆದರೆ ನನ್ನ ಅಭಿಪ್ರಾಯಗಳನ್ನು ಭೂಮಿಗೆ ಮಾರಿಕೊಳ್ಳಲಾರೆ. ಭಗವಂತ ನನಗೆ ಅಂತಹ ಚಾಣಾಕ್ಷ ಬುದ್ಧಿಯನ್ನು ಕೊಡದಿರಲಿ.

ನಿನ್ನೆಯಷ್ಟೇ ತಲುಪಿದ ಸುದ್ದಿ: ನನ್ನ ಗಾಂಧಿ ಕುರಿತ ಉಪನ್ಯಾಸಗಳ ಬಗ್ಗೆ ಸ್ವಾಮಿ ಆನಂದ್‌ರ ಅಭಿಪ್ರಾಯವನ್ನು ಕೇಳಿದಾಗ ಅವರು ಪ್ರತಿಕ್ರಿಯಿಸಲಾರೆ ಎಂದು ಹೇಳಿದರಂತೆ. ತದನಂತರ “ಒಂದು ಕಾಗೆ ಮಸೀದಿಯ ಮೇಲೆ ಕುಳಿತುಕೊಂಡು ’ತಾನೇ ಮುಲ್ಲ’ ಎಂದು ಅರಚಿಕೊಂಡರೆ ಏನೆಂದು ಪ್ರತಿಕ್ರಿಯಿಸುವುದು?” ಎಂದು ವ್ಯಂಗ್ಯವಾಗಿ ಹೇಳಿದರಂತೆ. ಸ್ವಾಮಿ ಆನಂದ್ ನನಗೆ ತುಂಬ ಪರಿಚಿತರು. ಆದರೆ ಅವರಿಗೆ ಯಾವಾಗಿನಿಂದ ಕಾಗೆಗಳ ಪರಿಚಯವಾಯಿತೋ ನನಗೆ ತಿಳಿದಿಲ್ಲ. ಮಸೀದಿಯ ಮೇಲೆ ಕುಳಿತ ಕಾಗೆಗಳ ಮನಸ್ಸಿನಲ್ಲಿ ಏನು ನಡೆಯುತ್ತದೆ ಎಂದು ಅವರು ಹೇಗೆ ಬಲ್ಲರೋ ಗೊತ್ತಾಗುತ್ತಿಲ್ಲ. ಅವರೂ ತಮ್ಮ ಹಿಂದಿನ ಜನ್ಮದಲ್ಲಿ ಸ್ವತಃ ಕಾಗೆಯಾಗದೆ, ಕಾಗೆಯಾಗಿ ಮಸೀದಿಯ ಮೇಲೆ ಕುಳಿತು ಹಾಗೆ ಅರಚಿಕೊಳ್ಳದೇ ಅವರ ಮನಸ್ಸಿನಲ್ಲಿ ಇಂತಹ ಆಲೋಚನೆ ಬರಲು ಸಾಧ್ಯವಿರುತ್ತಿರಲಿಲ್ಲ. ಕಾಗೆಗಳನ್ನು ಬಿಟ್ಟರೆ ಲೋಕದಲ್ಲಿ ಯಾರು ತಾನೇ ಮುಲ್ಲಾ ಆಗಲು ಆಸೆ ಪಡುತ್ತಾರೆ? ಯಾವ ಮುಲ್ಲಾನ ಬುದ್ಧಿ ತಾನೇ ಕಾಗೆಗಳ ಬುದ್ಧಿಗಿಂತ ಮಿಗಿಲಿನದಾಗಿದೆ? ಒಬ್ಬ ವ್ಯಕ್ತಿ ಯಾವಾಗ ಮುಲ್ಲಾ ಆಗಲು ಸಾಧ್ಯ ಎಂದು ಸ್ವಾಮಿ ಆನಂದ್‌ಗೆ ತಿಳಿದಿದೆಯೇ? ಯಾವುದೋ ಪಂಥವನ್ನೋ, ಸಂಪ್ರದಾಯವನ್ನೋ, ವಾದವನ್ನೋ, ಗುರುವನ್ನೋ ನಂಬಿದವನು ಮಾತ್ರ ಮುಲ್ಲಾ ಆಗುತ್ತಾನೆ. ನನಗಾದರೂ ಪಂಥವಿಲ್ಲ, ಸಂಪ್ರದಾಯವಿಲ್ಲ, ವಾದವಿಲ್ಲ, ಗುರುವಿಲ್ಲ. ನಾನಂತೂ ಮುಲ್ಲಾ ಆಗಲು ದಾರಿಗಳೇ ಕಾಣಿಸುತ್ತಿಲ್ಲ. ಆದರೆ ಸ್ವಾಮಿ ಆನಂದ್ ಒಬ್ಬ ಮುಲ್ಲ, ಒಬ್ಬ ಕಟ್ಟಾ ಮುಲ್ಲಾ ಎಂದು ಈಗಾಗಲೇ ಸಾಬೀತಾಗಿದೆ.

ಗಾಂಧೀ ಬಗ್ಗೆ ಮಾತನಾಡಿದರೆ ಎಲ್ಲರಿಂದ ಹೀಗೆ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ ಎಂದು ನನಗೆ ತಿಳಿಯದೇ ಏನಿಲ್ಲ. ಆದರೆ ಸಮಾಜಕ್ಕೆ ಒಳ್ಳೆಯದಾಗಬೇಕೆಂದರೆ ನನ್ನಂತಹ ಕೆಲವರಾದರೂ ಸಮಾಜದಿಂದ ಉಗಿಸಿಕೊಳ್ಳುವ ಧೈರ್ಯ ಮಾಡಬೇಕು. ಸಮಾಜದಿಂದ ಹೊಗಳಿಸಿಕೊಳ್ಳುವುದು ಕಷ್ಟವೇನಲ್ಲ. ಒಂದು ಸಮಾರಂಭದಲ್ಲಿ ಶ್ರೀ ದೇಬರ್ ಭಾಯಿ “ನಿಮಗಿನ್ನೂ ಗಾಂಧೀ ಪೂರ್ತಿಯಾಗಿ ಅರ್ಥವಾಗಿಲ್ಲ, ಅದಕ್ಕೇ ಹೀಗೆಲ್ಲ ಮಾತನಾಡುತ್ತಿರುವುದು” ಎಂದು ನನಗೆ ಹೇಳಿದರು. “ಹೊಗಳುವವರಿಗೆ ಪೂರ್ತಿಯಾಗಿ ಅರ್ಥವೇನೂ ಆಗಬೇಕಾಗಿಲ್ಲ, ಆದರೆ ಟೀಕಿಸಲು ಪೂರ್ತಿ ತಿಳುವಳಿಕೆ ಇರಬೇಕಾಗುತ್ತದೆ. ಹೊಗಳುವುದು ಸುಲಭ, ಒಂದು ನಾಯಿಯೂ ಬಾಲ ಅಲ್ಲಾಡಿಸಿ ಆ ಕೆಲಸ ಮಾಡಬಲ್ಲದು. ಆದರೆ ಟೀಕೆ ಮಾಡಲು ಬುದ್ಧಿ, ತಿಳುವಳಿಕೆ, ಧೈರ್ಯ, ಎಲ್ಲ ಬೇಕಾಗುತ್ತದೆ” ಎಂದಿದ್ದೆ. ಗಾಂಧಿಯೊಡನೆ ನನ್ನದೇನು ತಗಾದೆ ಇದ್ದೀತು? ಅವರ ವಿರುದ್ಧ ಮಾತನಾಡಿದರೆ ನನಗೇನು ಲಾಭವಿದೆ? ನನ್ನ ಮಾತುಗಳನ್ನು ಯಾವ ಪತ್ರಿಕೆಯೂ ಪ್ರಕಟಿಸುವುದಿಲ್ಲ, ಬದಲಿಗೆ ಈ ಅಹಿಂಸಾವಾದಿಗಳು ನನ್ನ ಮೇಲೆ ಕಲ್ಲು ತೂರಾಟ ನಡೆಸಬಹುದು. ಆದರೆ ಈತನಕ ಎಲ್ಲ ವಿಚಾರಗಳೂ ವಿಕಾಸವಾಗಿರುವುದೇ ವಿದ್ರೋಹದಿಂದ, ಪ್ರಶ್ನಿಸುವುದರಿಂದ, ಕುರುಡು ವಿಶ್ವಾಸ ತೋರುವ ಅನುಯಾಯಿಗಳಿಂದ ಈತನಕ ಯಾವ ಪ್ರಯೋಜನವೂ ಆಗಿಲ್ಲ.

ಇಂದು ನಮ್ಮ ಸಮಾಜ ಕೊಳೆತು ನಾರುತ್ತಿದ್ದರೆ ಅದಕ್ಕೆ ಇಲ್ಲಿನ ಸ್ವಾರ್ಥಿಗಳು, ಲೋಭಿಗಳು ಕಾರಣರಲ್ಲ. ಧರ್ಮ ಅಧ್ಯಾತ್ಮಗಳು ದಿನನಿತ್ಯದ ಬದುಕಿಗೆ ಸಂಬಂಧಿಸಿದ್ದಲ್ಲ ಎಂದು ಬೋಧಿಸುತ್ತಿದ್ದ ಹಿಂದಿನ ಎಲ್ಲ ಅನುಭಾವಿಗಳೂ ಇದಕ್ಕೆ ನೇರಹೊಣೆಯಾಗಿದ್ದಾರೆ. ಭಾರತದ ಧಾರ್ಮಿಕ ಚರಿತ್ರೆಯ ಒಂದು ಮೂಲಭೂತ ಲಕ್ಷಣವಾದ ಜಗತ್ತು ಮಾಯೆ, ಮಿಥ್ಯೆ ಎಂಬ ಕಲ್ಪನೆಯನ್ನು ಗಾಂಧೀ ಭಗ್ನಗೊಳಿಸಿದರು. ಗಾಂಧಿಯ ನಂತರ ಜನಿಸುವ ಯಾವುದೇ ಚಿಂತಕ ಅಥವ ತತ್ವಜ್ಞಾನಿಯು ಸಮಾಜ, ರಾಜಕಾರಣ, ಅರ್ಥಶಾಸ್ತ್ರಗಳನ್ನು ಪರಿಗಣಿಸದೇ, ಬದುಕಿನ ಪ್ರತಿಯೊಂದು ಮಗ್ಗುಲನ್ನೂ ಗಂಭೀರವಾಗಿ ಶೋಧಿಸದೇ ವಿಚಾರ ಮಾಡಲು ಹೊರಟರೆ ಹಾಸ್ಯಾಸ್ಪದನೆನಿಸಿಕೊಳ್ಳುತ್ತಾನೆ.

ಆದರೆ ಗಾಂಧೀ ಆಂತರ್ಯದಲ್ಲಿ ಶುದ್ಧ ಧಾರ್ಮಿಕ ವ್ಯಕ್ತಿಯಾಗಿದ್ದರು. ಅವರು ಅಂಥ ಒಳ್ಳೆಯ ರಾಜಕಾರಣಿಯಲ್ಲ. ರಾಜಕಾರಣವನ್ನು ಆಪದ್ಧರ್ಮದಂತೆ, ಒಂದು ತಾತ್ಕಾಲಿಕ ಚಟುವಟಿಕೆಯಂತೆ ಪಾಲಿಸುತ್ತಿದ್ದರು ಅಷ್ಟೇ. ಆದರೆ ಗಾಂಧಿಯೊಡನೆ ವ್ಯವಹರಿಸಲೇ ಬೇಕಾಗಿದ್ದ ಅವರ ಅನುಯಾಯಿಗಳಿಗೆ ನೈತಿಕತೆ ಒಂದು ಆಪದ್ಧರ್ಮವಾಯಿತು, ತಾತ್ಕಾಲಿಕ ಮುಖವಾಡವಾಯಿತು. ಆಂತರ್ಯದಲ್ಲಿ ಅವರು ಶುದ್ಧ ರಾಜಕಾರಿಣಿಗಳಾಗಿದ್ದರು. ಸ್ವಾತಂತ್ರ್ಯ ಬರುತ್ತಿದ್ದಂತೆಯೇ ಆಪದ್ಧರ್ಮದ ಮುಖವಾಡಗಳು ಕಳಚಿಕೊಂಡವು. ಗಾಂಧೀ ಆಧ್ಯಾತ್ಮದತ್ತ ಹೊರಳಿದರು ಹಾಗು ಅನುಯಾಯಿಗಳು ಶುದ್ಧ ರಾಜಕಾರಣದಲ್ಲಿ ತೊಡಗಿಕೊಂಡರು. ತನಗೂ ತನ್ನ ಅನುಯಾಯಿಗಳಿಗೂ ನಡುವೆ ಇಷ್ಟು ದೊಡ್ಡ ಕಂದಕವಿದೆ ಎಂದು ಗಾಂಧಿಗೆ ತಿಳಿದದ್ದು ಸ್ವಾತಂತ್ರ್ಯ ಬಂದ ಮೇಲೆಯೇ. ಗಾಂಧೀ ಕಾಂಗ್ರೇಸ್ಸನ್ನು ಲೋಕ ಸೇವಕ ದಳದಲ್ಲಿ ವಿಲೀನಗೊಳಿಸಬೇಕೆಂದು ಆಶಿಸಿದ್ದೂ ಈ ಭ್ರಮನಿರಸನದಿಂದಲೇ. ನೂರಿಪ್ಪತ್ತು ವರ್ಷಗಳ ಕಾಲ ಬದುಕಲು ಇಚ್ಛಿಸಿದ್ದ ಗಾಂಧಿಯ ಉತ್ಸಾಹ ಆಮೇಲೆ ಬಹುಕಾಲ ಉಳಿಯಲಿಲ್ಲ. ಗಾಂಧೀವಾದಿಗಳ ಈ ಪಾತಕದೆದುರು ಗೋಡ್ಸೇಯ ಪಾತಕ ತುಂಬ ಕ್ಷುಲ್ಲಕವಾದುದು. ವಿಧಿಯ ಸಂಕಲ್ಪವಿಲ್ಲದೆ ಗೋಡ್ಸೆಗೆ ಹತ್ಯೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗು ಇದಕ್ಕಿಂತ ಒಳ್ಳೆಯ ಸಾವು ಗಾಂಧಿಗೆ ಸಿಗುತ್ತಲೂ ಇರಲಿಲ್ಲ. ಆದರೆ ಗಾಂಧೀವಾದಿಗಳು ಗಾಂಧಿಯನ್ನು ನಿರಾಶೆಯ, ಭ್ರಮನಿರಸನದ ಕೂಪಕ್ಕೆ ತಳ್ಳಿ ಕೊಂದದ್ದು ನನಗೆ ನಿಜಕ್ಕೂ ಆತಂಕ ಹುಟ್ಟಿಸಿದೆ. ಈಗ ಇಂಥವರು “ಗಾಂಧಿಯ ಬಗ್ಗೆ ಚರ್ಚೆ ಬೇಡ, ಬೇಕಾದರೆ ಹಾಡಿ ಹೊಗಳಿ, ಕೊಂಡಾಡಿ” ಎಂದು ನನಗೆ ಸಲಹ ನೀಡುತ್ತಿರುವರಲ್ಲ! ಗೋಡ್ಸೇ ಗಾಂಧೀವಾದಿಗಳು ಬಯಸಿದ್ದನ್ನೇ ಮಾಡಿದ ಹಾಗು ಗಾಂಧೀವಾದಿಗಳೂ ಗೋಡ್ಸೇ ಒಮ್ಮೆ ಮಾಡಿದ್ದನ್ನೇ ಇಂದಿನವರೆಗೂ ಮಾಡುತ್ತ ಬಂದಿದ್ದಾರೆ. ಗಾಂಧೀವಾದವೇ ಗಾಂಧಿಯ ನಿಜವಾದ ಶತ್ರು. ನಾನು ಗಾಂಧಿಯನ್ನು ’ವಾದ’ದಿಂದ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿದ್ದೇನೆ.

ನನ್ನ ಗಾಂಧೀ ವಿಮರ್ಶೆ ಇನ್ನೆಲ್ಲಿ ಗಾಂಧೀವಾದದ ವಿಮರ್ಶೆಯತ್ತ ಹೊರಳಿಬಿಡುವುದೋ ಎಂದು ಅವರಿಗೆ ಗಾಬರಿಯಾಗಿರಬೇಕು. ಚಿನ್ನವನ್ನು ಎಷ್ಟೇ ಕಾಯಿಸಿದರೂ ಅದು ಇನ್ನೂ ಉಜ್ವಲವಾಗುವುದಲ್ಲದೇ ಎಲ್ಲಾದರೂ ನಾಶವಾಗುವುದೇ? ಮತ್ತು ಗಾಂಧೀವಾದಿಗಳು ಹೀಗೆ ಬೆಳೆಯಲು ಗಾಂಧಿಯೂ ಸ್ವಲ್ಪಮಟ್ಟಿಗೆ ಕಾರಣ ಎಂಬುದನ್ನೂ ಇಲ್ಲಿಯೇ ಹೇಳಿಬಿಡಬೇಕು. ಗಾಂಧೀ ಪ್ರತಿಸಲವೂ ಧಾರ್ಮಿಕ ವ್ಯಕ್ತಿಯಾಗುವ ಪ್ರಯತ್ನದಲ್ಲಿ ಸೋಲಲು ಅವರು ಜೀವನದುದ್ದಕ್ಕೂ ದಮನವಾದೀ ನೈತಿಕತೆಯನ್ನು ಅನುಸರಿಸಿದ್ದೇ ಕಾರಣ. ಅವರನ್ನು ಪ್ರಭಾವಿಸಿದವರೆಲ್ಲ ರಸ್ಕಿನ್, ಟಾಲ್ಸ್‌ಟಾಯ್, ಥೋರೋ ಇಂಥವರು. ಇವರುಗಳು ಅರಿವಿಗಿಂತ ಪ್ರಯತ್ನಕ್ಕೆ ಮಹತ್ವವನ್ನು ನೀಡಿದವರು. ತಮ್ಮ ಜೀವನದ ಕೊನೆಗಾಲದಲ್ಲಿ ಗಾಂಧಿಗೆ ತಾವು ಅನುಸರಿಸಿದ ನೈತಿಕತೆ ಹುಸಿಯಾದುದು ಎಂದು ಅರಿವಾಯಿತು. ಏನೇ ಆದರೂ ಗಾಂಧಿಯ ಪ್ರಯತ್ನಗಳಲ್ಲಿ ಒಂದು ವಿಶಿಷ್ಟ ಪ್ರಾಮಾಣಿಕತೆ ಇತ್ತು.

ಗಾಂಧಿಗೆ ಹೃದಯಪರಿವರ್ತನೆಯನ್ನು ವಿಪರೀತ ನಂಬಿದ್ದರು. ಏಕೆಂದರೆ ಗಾಂಧಿ ಎಲ್ಲರೂ ತನ್ನಂತೆಯೇ ಎಂದು ತಿಳಿದಿದ್ದರು. ಆದರೆ ಯಾರೂ ಯಾರನ್ನೂ ಹಾಗೆ ಬದಲಿಸಲು ಸಾಧ್ಯವಿಲ್ಲ. ಹಾಗೆ ಬದಲಾಗಬೇಕಾದ ಅವಶ್ಯಕತೆಯೂ ಇಲ್ಲ. ಎಲ್ಲರೂ ಒಂದೇ ವಿಷವರ್ತುಲದಲ್ಲಿ ಸುತ್ತುತ್ತಿರುವ ನಮ್ಮ ಈ ವ್ಯವಸ್ಥೆಯಲ್ಲಿ ಒಬ್ಬನು ಬದಲಾಗಿ ಇನ್ನೊಬ್ಬನನ್ನು ಸುಧಾರಣೆ ಮಾಡಬಹುದು, ಒಬ್ಬನ ಕರುಣೆಯಿಂದ ಇನ್ನೊಬ್ಬನ ಉದ್ಧಾರ ಆಗಬಹುದು ಎಂದು ನನಗನ್ನಿಸುವುದಿಲ್ಲ. ವಿನೋಬಾ ಇದೇ ಹೃದಯಪರಿವರ್ತನೆಯ ತಂತ್ರವನ್ನು ನಂಬಿ ಭೂದಾನ ಚಳವಳಿಯಲ್ಲಿ ತೊಡಗಿದರು. ಭೂದಾನ ಮಾಡುತ್ತಿದ್ದ ಭೂಮಾಲೀಕರು ವಿನೋಬಾ ಅತ್ತ ಹೋಗುತ್ತಿದ್ದಂತೆಯೇ ದಾನ ಮಾಡಿದ ಭೂಮಿಯ ಎರಡರಷ್ಟು ಸಂಪತ್ತನ್ನು ಮತ್ತೆ ಹೇಗೆ ಹಿಂಪಡೆಯುವುದು ಎಂದು ಹೊಂಚು ಹಾಕುತ್ತಿದ್ದರು. ಭೂದಾನದಂತಹ ಸರಳ ಉಪಾಯಗಳಿಂದ ಶೋಷಣೆಯ ವ್ಯವಸ್ಥೆಯನ್ನು ಇಲ್ಲವಾಗಿಸಲು ಬರುವುದೇ? ಭೂದಾನದ ಹೆಸರಿನಲ್ಲಿ ಭೂರಹಿತರ ಆಕ್ರೋಶವನ್ನು ಹಂತ ಹಂತವಾಗಿ ದಮನ ಮಾಡಲಾಯಿತು. ಭೂಮಾಲೀಕರು, ಶ್ರೀಮಂತರು ಹಳ್ಳಿ ಹಳ್ಳಿಯಲ್ಲೂ ವಿನೋಬಾರ ಕಾಲಿಗೆ ಬೀಳುತ್ತಿದ್ದರು. ವಿನೋಬಾ ದೊಡ್ಡ ಗಾಂಧೀವಾದೀ ಎಂಬ ಕಾರಣದಿಂದಲ್ಲ. ತಮ್ಮ ವಿರುದ್ಧ ಭೂರಹಿತರ ಅಂತರಂಗದಲ್ಲಿ ಗುಪ್ತವಾಗಿ ಭುಗಿಲೇಳುತ್ತಿದ್ದ ಅಸಹನೆಯ ಜ್ವಾಲಾಮುಖಿ ವಿನೋಬಾರಿಂದ ಸುಲಭವಾಗಿ ಶಮನವಾಗುತ್ತಿದೆಯಲ್ಲ ಎಂದು ನಮಸ್ಕರಿಸುತ್ತಿದ್ದರು. ದೇಶದಾದ್ಯಂತ ಇಪ್ಪತ್ತು ವರ್ಷಗಳ ಕಾಲ ನಡೆದ ಭೂದಾನ ಚಳವಳಿಯು ಇಲ್ಲಿನ ಶೋಷಣೆಯ ವ್ಯವಸ್ಥೆಗೆ ಯಾವ ಬಾಧೆಯನ್ನೂ ಉಂಟುಮಾಡದೇ ಬಡರೈತರ, ಕೂಲಿ ಕಾರ್ಮಿಕರ ದಂಗೆಯ ಸಾಧ್ಯತೆಗಳನ್ನು ವ್ಯವಸ್ಥಿತವಾಗಿ ನಾಶ ಮಾಡುವಲ್ಲಿ ಮಾತ್ರ ಸಫಲವಾಯಿತು. ಸಾಮಾಜಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರದೆ ಇಂತಹ ಸುಧಾರಣೆಗಳಿಂದ, ಹೃದಯ ಪರಿವರ್ತನೆಗೆ ಕಾಯುವುದರಿಂದ ಏನೂ ಲಾಭವಿಲ್ಲ. ಶೋಷಣೆಯ ವಿಷಚಕ್ರದಲ್ಲಿ ಪ್ರತಿಯೊಬ್ಬರೂ ಸುತ್ತುತ್ತಿರುವ ಈ ವ್ಯವಸ್ಥೆಯಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ಕರುಣೆ ತೋರಿ ಸರ್ವೋದಯವನ್ನು ತರಲಾಗುವುದಿಲ್ಲ. ಈ ವ್ಯವಸ್ಥೆಯ ಚಕ್ರ ಮುರಿಯದೆ ಸರ್ವರ ಹಿತ ಸಾಧ್ಯವಿಲ್ಲ. ದೇಶದ ಸಂಪತ್ತು ಕೆಲವು ಶ್ರೀಮಂತರ ಕೈಲಿರುವಾಗ, ಬಡವನಿಗೆ ಇದು ನನ್ನ ದೇಶ ಎಂಬ ಭಾವನೆ ಹೇಗೆ ಬಂದೀತು. ಒಂದು ಆರ್ಥಿಕ ವ್ಯವಸ್ಥೆಯಲ್ಲಿ ತನಗೆ ಪ್ರವೇಶವೇ ಇಲ್ಲದ ವಾಸ್ತವದಲ್ಲಿ ಬದುಕುವ ಬಡವನಿಗೆ ಹೇಗೆ ತಾನೇ ಈ ವ್ಯವಸ್ಥೆಯ ಬಗ್ಗೆ ಮಮಕಾರ ಹುಟ್ಟಬಲ್ಲುದು?