ಭೌಗೋಳಿಕ ಸೂಚ್ಯಂಕದಿಂದ ಲಾಭವಿದೆಯೇ?
ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತ ವರ್ಷ ಮಂಡಿಸಿದ ಬಜೆಟ್ ನಲ್ಲಿ ಕಂಡು ಬಂದ ಪ್ರಮುಖ ವಿಷಯಗಳಲ್ಲಿ ಭೌಗೋಳಿಕ ಸೂಚ್ಯಂಕದ ಅಡಿಯಲ್ಲಿ ಬರುವ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕೆ ಯೂನಿಟಿ ಮಾಲ್ ಸ್ಥಾಪಿಸಲು ರಾಜ್ಯ ಸರಕಾರಕ್ಕೆ ಉತ್ತೇಜನ ನೀಡಲಾಗುವುದು ಎಂಬುದು ಒಂದು. ಆದರೆ ಬಹಳಷ್ಟು ಮಂದಿಗೆ ಈ ಭೌಗೋಳಿಕ ಸೂಚ್ಯಂಕ ಎಂದರೆ ಏನು? ಎಂದೇ ಸರಿಯಾಗಿ ತಿಳಿದಿಲ್ಲ. ಇದರಿಂದ ಸಾಮಾನ್ಯ ನಾಗರಿಕರಿಗೆ ಆಗುವ ಪ್ರಯೋಜನವಾದರೂ ಏನು?
ಭೌಗೋಳಿಕ ಸೂಚ್ಯಂಕ ಅಥವಾ ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ (Geographical Indication Tag) ಅನ್ನು ಸರಳವಾಗಿ ಜಿ.ಐ.ಟ್ಯಾಗ್ ಎನ್ನುತ್ತಾರೆ. ಅಂದರೆ ಇದು ಭೌಗೋಳಿಕ ಸೂಚ್ಯಂಕದ ಒಂದು ಟ್ಯಾಗ್. ಯಾವುದೇ ಒಂದು ಉತ್ಪನ್ನ ಬೆಳೆದ ಅಥವಾ ತಯಾರಿಸಿದ ಭೌಗೋಳಿಕ ವಿಶೇಷತೆಯನ್ನು ಮಾನ್ಯ ಮಾಡಲು ಜಿಐ ಟ್ಯಾಗ್ ನೀಡಲಾಗುತ್ತದೆ. ಇದರಿಂದ ಆ ಉತ್ಪನ್ನದ ಮೂಲ ಯಾವ ಪ್ರದೇಶದ್ದು ಎಂಬುದನ್ನು ಸುಲಭವಾಗಿ ಕಂಡುಕೊಳ್ಳಬಹುದಾಗಿದೆ. ವಿಶ್ವ ವ್ಯಾಪಾರ ಸಂಸ್ಥೆ (WTO) ಅಂತರಾಷ್ಟ್ರೀಯ ಬೌದ್ಧಿಕ ಹಕ್ಕುಗಳನ್ನು ಕಾಪಾಡಲು ಇಂತಹ ಒಂದು ವ್ಯವಸ್ಥೆಯನ್ನು ಜಾರಿಗೆ ತಂದಿದೆ. ೧೯೯೯ರಲ್ಲಿ ಸರಕುಗಳ ನೋಂದಣಿ ಮತ್ತು ರಕ್ಷಣೆಗೆ ಭೌಗೋಳಿಕ ಸೂಚನೆಗಳ ಕಾಯ್ದೆ ರೂಪಿಸಿತು. ನಮ್ಮ ದೇಶದಲ್ಲಿ ಈ ಕಾಯ್ದೆ ಸೆಪ್ಟೆಂಬರ್ ೨೦೦೩ರಲ್ಲಿ ಜಾರಿಗೆ ಬಂತು. ಕೃಷಿ, ಆಹಾರ, ಕರಕುಶಲ, ಮದ್ಯ ಉತ್ಪನ್ನ ಮತ್ತು ಔದ್ಯಮಿಕ ಉತ್ಪನ್ನಗಳಿಗೆ ಜಿ ಐ ಟ್ಯಾಗ್ ನೀಡಲಾಗುತ್ತದೆ. ಇದರಿಂದ ಆ ಉತ್ಪನ್ನದ ಪೇಟೆಂಟ್ ಮತ್ತು ಹಕ್ಕನ್ನು ರಕ್ಷಿಸಲು ಸುಲಭವಾಗುತ್ತದೆ. ನಮ್ಮ ದೇಶದಲ್ಲಿ ಮೊದಲು ಜಿ ಐ ಟ್ಯಾಗ್ ಪಡೆದ ಉತ್ಪನ್ನವೆಂದರೆ ಡಾರ್ಜಿಲಿಂಗ್ ಟೀ.
ನಮ್ಮ ರಾಜ್ಯದ ಸುಮಾರು ೪೨ ಉತ್ಪನ್ನಗಳು ಜಿಐ ಟ್ಯಾಗ್ ಹೊಂದಿವೆ. ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಅಗ್ರ ಸ್ಥಾನ. ದೇಶದಾದ್ಯಂತ ಸುಮಾರು ೪೦೦ಕ್ಕೂ ಅಧಿಕ ಉತ್ಪನ್ನಗಳಿಗೆ ಜಿ ಐ ಟ್ಯಾಗ್ ನೀಡಲಾಗಿದೆ. ನಮ್ಮ ನೆರೆಯ ಆಂಧ್ರ ಪ್ರದೇಶ ೩೫, ತಮಿಳುನಾಡು ಮತ್ತು ಕೇರಳದ ೩೦ಕ್ಕೂ ಅಧಿಕ ಉತ್ಪನ್ನಗಳಿಗೆ ಜಿ ಐ ಟ್ಯಾಗ್ ನೀಡಲಾಗಿದೆ. ದಕ್ಷಿಣದ ರಾಜ್ಯಗಳನ್ನು ಹೊರತು ಪಡಿಸಿದರೆ ಗುಜರಾತ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ ರಾಜ್ಯಗಳು ಜಿ ಐ ಟ್ಯಾಗ್ ಹೊಂದಿರುವ ಅಗ್ರ ರಾಜ್ಯಗಳಾಗಿವೆ. ನಮ್ಮ ರಾಜ್ಯದ ಮೈಸೂರು ಜಿಲ್ಲೆ ಅತ್ಯಧಿಕ ಜಿ ಐ ಟ್ಯಾಗ್ ಪಡೆದ ಜಿಲ್ಲೆಯಾಗಿದೆ. ಮೈಸೂರು ಸಿಲ್ಕ್ಸ್, ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಮೈಸೂರು ಸ್ಯಾಂಡಲ್ ಸಾಬೂನು, ಗಂಜೀಫಾ ಕಾರ್ಡ್, ಮೈಸೂರು ಅಗರಬತ್ತಿ, ಮೈಸೂರು ಗಂಧದ ಎಣ್ಣೆ, ಇನ್ಲೆ ಕಲೆ ಹಾಗೂ ಮೈಸೂರು ಸಾಂಪ್ರದಾಯಿಕ ಕಲೆಗಳು ಜಿ ಐ ಟ್ಯಾಗ್ ಪಡೆದುಕೊಂಡಿವೆ. ಈ ಉತ್ಪನ್ನಗಳಲ್ಲಿ ಕೆಲವು ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡಿದ್ದರೂ ಇನ್ನೂ ಕೆಲವು ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಯಾಗಿಲ್ಲ. ಕೆಲವು ಉತ್ಪಾದನೆಗಳ ಸಂಖ್ಯೆ ಕಡಿಮೆಯಾಗಿರುವುದೂ ಸಮಸ್ಯೆಯಾಗಿದೆ. ಆದರೆ ಈ ಬಾರಿಯ ಬಜೆಟ್ ನಲ್ಲಿ ಘೋಷಿಸಿರುವ ‘ಒಂದು ಜಿಲ್ಲೆ ಒಂದು ಉತ್ಪನ್ನ' ಯೋಜನೆಯಿಂದ ಹಲವಾರು ಉತ್ಪನ್ನಗಳಿಗೆ ಬೆಲೆ ಬರುವ ಸಾಧ್ಯತೆ ಇದೆ.
ಜಿ ಐ ಟ್ಯಾಗ್ ನಿಂದ ಲಾಭವೇನು?: ಯಾವುದೇ ಒಂದು ವಸ್ತು ಅಥವಾ ಉತ್ಪನ್ನ ಭೌಗೋಳಿಕ ಸೂಚ್ಯಂಕದ ಟ್ಯಾಗ್ ಪಡೆದುಕೊಂಡರೆ ಅದಕ್ಕೆ ಸುಲಭದಲ್ಲಿ ಪ್ರಚಾರ ದೊರೆತು ಅದರ ಜನಪ್ರಿಯತೆ ಹೆಚ್ಚಾಗುತ್ತದೆ. ಆ ಉತ್ಪನ್ನ ಸಹಜವಾಗಿಯೇ ಒಂದು ಬ್ರ್ಯಾಂಡ್ ಆಗಿ ಪರಿವರ್ತಿತವಾಗುತ್ತದೆ. ಉದಾಹರಣೆಗೆ ನಂಜನಗೂಡಿನ ರಸಬಾಳೆಯಿಂದ ನಂಜನಗೂಡಿಗೇ ಹೆಸರು ಬಂದಿದೆ, ಮಲ್ಲಿಗೆಯಿಂದ ಮೈಸೂರು ಹಾಗೂ ಉಡುಪಿಗೆ ಮಾನ್ಯತೆ ದೊರೆತಿದೆ. ಈ ಬ್ರ್ಯಾಂಡ್ ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳ ಮಾರಾಟಕ್ಕೆ ವೇದಿಕೆಯನ್ನು ಕಲ್ಪಿಸುತ್ತದೆ. ವಿಶೇಷ ಸ್ಥಾನವನ್ನೂ ಪಡೆಯುತ್ತದೆ. ಈ ಕಾರಣದಿಂದ ಈ ಉತ್ಪನ್ನಗಳನ್ನು ತಯಾರಿಸುವ ಅಥವಾ ಬೆಳೆಯುವ ಕುಶಲಕರ್ಮಿಗಳಿಗೆ ಅಥವಾ ಕೃಷಿಕರಿಗೆ ಉತ್ತಮ ಮಾರುಕಟ್ಟೆ, ಆದಾಯ ದೊರೆತು ಅವರ ಜೀವನ ಮಟ್ಟ ಸುಧಾರಿಸುತ್ತದೆ.
ಉದಾಹರಣೆಗೆ ಉಡುಪಿ ಜಿಲ್ಲೆಯ ಮಟ್ಟು ಎಂಬಲ್ಲಿ ಬೆಳೆಯುವ ಗುಳ್ಳ (ಬದನೇಕಾಯಿ) ಒಂದು ಸಮಯದಲ್ಲಿ ಸೀಮಿತ ಪ್ರದೇಶದಲ್ಲಿ ಮಾತ್ರ ಖ್ಯಾತಿಯನ್ನು ಪಡೆದುಕೊಂಡಿತ್ತು. ಅಷ್ಟಮಠಗಳ ಪರ್ಯಾಯದ ಸಮಯದಲ್ಲಿ ಒಂದಿಷ್ಟು ಹೆಸರು ಕೇಳಿಬರುತ್ತಿದ್ದರೂ ಇದನ್ನು ಬೆಳೆದ ಕೃಷಿಕರಿಗೆ ಬಹಳವೇನೂ ಲಾಭ ತಂದುಕೊಡುತ್ತಿರಲಿಲ್ಲ. ಆದರೆ ಈಗ ಮಟ್ಟು ಗುಳ್ಳಕ್ಕೆ ಜಿ ಐ ಟ್ಯಾಗ್ ಲಭಿಸಿದ ಬಳಿಕ ರಾಜ್ಯ ಮಾತ್ರವಲ್ಲ ದೇಶಾದ್ಯಂತ ಮಟ್ಟು ಗುಳ್ಳ ಖ್ಯಾತಿಯನ್ನು ಪಡೆಯಿತು. ಮಟ್ಟುಗುಳ್ಳದ ಚಿತ್ರವನ್ನು ಅಂಚೆ ಇಲಾಖೆಯೂ ತಾನು ಹೊರತಂದ ಕವರ್ ಮೇಲೆ (First Day Cover) ಮುದ್ರಿಸಿತು. ಈಗಂತೂ ಈ ಗುಳ್ಳ ವಿದೇಶಕ್ಕೂ ಹೋಗುತ್ತಿದೆ ಎಂದು ಸುದ್ದಿ ಇದೆ. ಜಿ ಐ ಟ್ಯಾಗ್ ಕಾರಣದಿಂದ ಗುಳ್ಳಕ್ಕೆ ಒಂದು ಮೌಲ್ಯ ಬಂತು. ಗುಳ್ಳದೊಂದಿಗೆ ಮಟ್ಟು ಎಂಬ ಊರಿಗೆ, ಉಡುಪಿ ಜಿಲ್ಲೆಗೆ ಹೆಸರೂ ಬಂತು. ಇದೇ ಜಿ ಐ ಟ್ಯಾಗ್ ಮಹತ್ವ.
ನಮ್ಮ ರಾಜ್ಯದಲ್ಲಿ ಮೈಸೂರು ರೇಷ್ಮೆ, ಮೈಸೂರು ಅಗರಬತ್ತಿ, ಮೈಸೂರು ವೀಳ್ಯದೆಲೆ, ಮೈಸೂರು ಚಿತ್ರಕಲೆ, ನಂಜನಗೂಡಿನ ರಸಬಾಳೆ, ಮೈಸೂರು ಗಂಧದ ಎಣ್ಣೆ, ಮೈಸೂರು ಮಲ್ಲಿಗೆ, ಮೈಸೂರು ಗಂಜೀಫಾ ಕಲೆ, ಮೈಸೂರು ಸ್ಯಾಂಡಲ್ ಸಾಬೂನು, ಬೆಂಗಳೂನಿನ ನೀಲಿ ದ್ರಾಕ್ಷಿ (ಬೆಂಗಳೂರು ಬ್ಲೂ ಖ್ಯಾತಿ), ಬೆಂಗಳೂರಿನ ಕೆಂಪು ಈರುಳ್ಳಿ, ಕೊಡಗು ಹಸಿರು ಏಲಕ್ಕಿ, ಕೊಡಗು ಕಿತ್ತಳೆ, ದೇವನಹಳ್ಳಿಯ ಚಕ್ಕೋತ ಹಣ್ಣು, ರಾಮನಗರದ ಚೆನ್ನಪಟ್ಟಣದ ಮರದ ಗೊಂಬೆಗಳು, ಸಂಡೂರಿನ ಬಂಜಾರ ಕಸೂತಿ ಕಲೆ, ಧಾರವಾಡದ ಪೇಡ, ಬ್ಯಾಡಗಿ ಮೆಣಸಿನಕಾಯಿ, ಕಮಲಾಪುರದ ಕೆಂಪು ಬಾಳೆಹಣ್ಣು, ಬಾಗಲಕೋಟೆಯ ಇಳಕಲ್ ಸೀರೆ, ಕಿನ್ನಾಳದ ಆಟಿಕೆಗಳು, ಶಿವಮೊಗ್ಗ ಸಾಗರದ ಅಪ್ಪೆಮಿಡಿ (ಮಾವಿನ ಮಿಡಿ ತಳಿ), ಉಡುಪಿ ಮಲ್ಲಿಗೆ, ಉಡುಪಿಯ ಮಟ್ಟು ಗುಳ್ಳ ಇವುಗಳಿಗೆ ಜಿ ಐ ಟ್ಯಾಗ್ ಲಭಿಸಿದೆ.
ಕೇವಲ ಜಿ ಐ ಟ್ಯಾಗ್ ನೀಡಿ ಸುಮ್ಮನಿದ್ದರೆ ಆ ಉತ್ಪನ್ನಗಳು ಜನಪ್ರಿಯವಾಗುವುದಿಲ್ಲ. ಅದಕ್ಕಾಗಿ ಪ್ರಚಾರ ನೀಡುವ ಕೆಲಸವೂ ಆಗಬೇಕಾಗಿದೆ. ಚೆನ್ನಪಟ್ಟಣ, ಕಿನ್ನಾರದ ಆಟಿಕೆಗಳನ್ನು ಜನಪ್ರಿಯಗೊಳಿಸಲು ಕೈಗೊಂಡ ಕ್ರಮಗಳಂತೆ ಉಳಿದ ಉತ್ಪನ್ನಗಳಿಗೂ ಪ್ರಚಾರ ಮತ್ತು ಮಾರುಕಟ್ಟೆ ಒದಗಿಸಬೇಕು. ಜಿ ಐ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಸೃಷ್ಟಿಸಿ, ಇನ್ನಷ್ಟು ಹೆಚ್ಚಿನ ಪ್ರಚಾರ ನೀಡುವ ಕೆಲಸ ಆಗಬೇಕಾಗಿದೆ. ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಈ ಬಗ್ಗೆ ಬಜೆಟ್ ಮಂಡಿಸುವಾಗ ಇದು ‘ಅಮೃತಕಾಲ'ದ ಬಜೆಟ್ ಎಂದು ಕೇಳಿದರು. ಅಮೃತ ಕಾಲ ಎಂದರೆ ಮಂಗಳಮಯವಾದ ಸಮಯ. ಈ ಸಮಯದಲ್ಲಿ ಮಂಡಿಸಿದ ಈ ಬಜೆಟ್ ನಿಂದ ಜಿ ಐ ಟ್ಯಾಗ್ ಹೊಂದಿದ ಉತ್ಪನ್ನಗಳಿಗೂ ಮಂಗಳ ಕಾಲ ಬರಲಿ. ಉತ್ಪಾದಕರ ಬದುಕು ಹಸನಾಗಲಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ