ಮಂತ್ರಪಠಣದಿಂದ ವಿಶ್ವಚೇತನದತ್ತ ಸಾಧನೆಯ ಹಾದಿ
ಮಂತ್ರ ಎಂದರೇನು? “ಮನ್" ಎಂದರೆ "ಚಿಂತನೆ ಮಾಡುವುದು"; “ತ್ರ" ಎಂದರೆ "ಬಿಡುಗಡೆ". ಆದ್ದರಿಂದ ಮಂತ್ರ ಎಂದರೆ "ಬಿಡುಗಡೆ ಮಾಡುವ ಚಿಂತನೆ" ಎಂದರ್ಥ. ಸಾವಿರಾರು ವರುಷಗಳ ಮುಂಚೆ ಮಹಾನ್ ಋಷಿಗಳು ಮಂತ್ರಗಳನ್ನು ಸರಳರೂಪದಲ್ಲಿ ಶಾಶ್ವತವಾಗಿ ಉಳಿಯುವಂತೆ ರೂಪಿಸಿದ್ದಾರೆ. ಮಂತ್ರಪಠಣವು ಭೂತಗನ್ನಡಿಯಂತೆ ಕೆಲಸ ಮಾಡುತ್ತದೆ. ಅಂದರೆ, ವಿಶ್ವಚೇತನವನ್ನು ಕೇಂದ್ರೀಕರಿಸಿ, ಸಾಧಕನ ಒಳಗಿಳಿಸಿ, ಸಾಧಕನ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುತ್ತದೆ.
ಗಮನಿಸಿ: ಪ್ರತಿಯೊಂದು ಮಂತ್ರವನ್ನು ಕಳೆದ ಸಾವಿರಾರು ವರುಷಗಳಲ್ಲಿ ಲಕ್ಷಗಟ್ಟಲೆ ಸಾಧಕರು ಕೋಟಿಗಟ್ಟಲೆ ಸಲ ಪಠಣ ಮಾಡಿದ್ದಾರೆ. ಇದರಿಂದಾಗಿ ಮಂತ್ರಗಳಲ್ಲಿ ಅಪಾರ ಶಕ್ತಿ ಸಂಚಯವಾಗಿದೆ.
ಇಂತಹ ಯಾವುದೇ ಮಂತ್ರವನ್ನು ಸಾಧಕನು ಪಠಿಸುತ್ತಾ ಸಾಗಿದಂತೆ, ಒಂದು ಹಂತದಲ್ಲಿ ಆ ಮಂತ್ರವು ಸ್ವಯಂ-ಶಕ್ತಿಕೇಂದ್ರವಾಗಿ ಕೆಲಸ ಮಾಡಲು ಶುರು ಮಾಡುತ್ತದೆ (ತಾನೇ ತಾನಾಗಿ ಪರಿಭ್ರಮಿಸುತ್ತಾ ಉಜ್ವಲವಾಗಿ ಉರಿಯುತ್ತಾ ಎಲ್ಲ ಗ್ರಹಗಳನ್ನು ನಿಯಂತ್ರಿಸುವ ಸೂರ್ಯನಂತೆ.) ಇದಕ್ಕೆ ಕಾರಣ ಮಂತ್ರದ ಮೂಲಸತ್ವ ಅಥವಾ "ಬೀಜ". ಆ ಹಂತದಲ್ಲಿ ಮಂತ್ರವು ಆರಾಧಿಸುವ ದೇವರು ಮತ್ತು ಸಾಧಕನ ನಡುವೆ ಒಂದು ಸಂಪರ್ಕಸೇತು ನಿರ್ಮಾಣವಾಗುತ್ತದೆ. ಆಗ, ಮಂತ್ರದ ಪುರುಷ ಶಕ್ತಿ ಮತ್ತು ದೇವಿಶಕ್ತಿ ಮಂತ್ರದ ಅವ್ಯಕ್ತಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಆ ಕ್ಷಣದಲ್ಲಿ ಸಾಧಕನಲ್ಲಿ ಅತ್ಯುನ್ನತ ಮಟ್ಟದ ಅಧ್ಯಾತ್ಮಿಕ ಜಾಗೃತಿಯಾಗುತ್ತದೆ; ಸಾಧಕನಿಗೆ ದೈವಸಾಕ್ಷಾತ್ಕಾರವಾಗುತ್ತದೆ ಹಾಗೂ ಮಂತ್ರದ ಗುರಿ ಸಾಧಿಸಲ್ಪಡುತ್ತದೆ. ಇದುವೇ "ಯೋಗ".
ಮನುಷ್ಯರ ಮೇಲೆ ಭಾವನೆಗಳ ಪ್ರಭಾವ ಅಪಾರ. ಅನಿಯಂತ್ರಿತ ಭಾವನೆಗಳಿಂದಾಗಿ ಮಾನವ ಜನಾಂಗಕ್ಕೆ ಹಾನಿ ಮಾಡಿದ ಹಲವರ ಬಗ್ಗೆ ನಾವು ತಿಳಿದಿದ್ದೇವೆ. ಚರಿತ್ರೆಯಲ್ಲಿ ಅಂತಹ ನೂರಾರು ಪ್ರಕರಣಗಳಿವೆ.
ಈ ಹಿನ್ನೆಲೆಯಲ್ಲಿ ನಾವು ಮಂತ್ರಗಳ ಮಹತ್ವ ತಿಳಿಯಬೇಕಾಗಿದೆ. ಒಬ್ಬ ವ್ಯಕ್ತಿಯು ದಿನದಿನವೂ ಒಂದು ಮಂತ್ರವನ್ನು ಪಠಣ ಮಾಡುತ್ತಿದ್ದರೆ ಅದು ಆ ವ್ಯಕ್ತಿಯನ್ನು ಶುದ್ಧೀಕರಿಸುತ್ತದೆ. ಆ ವ್ಯಕ್ತಿಯಲ್ಲಿ ತುಂಬಿರುವ ಆಸೆ, ಮೋಹ, ಸ್ವಾರ್ಥ, ಕೋಪ, ದ್ವೇಷ, ಕಾಮ ಇತ್ಯಾದಿ ಭಾವನೆಗಳನ್ನು ದೂರ ಮಾಡಿ, ಆ ವ್ಯಕ್ತಿಯ ಚಿಂತನೆಗಳನ್ನು ಪರಮಾತ್ಮನೆಡೆಗೆ ತಿರುಗಿಸುತ್ತದೆ. ಅಂತಿಮವಾಗಿ, ಆ ವ್ಯಕ್ತಿಗೆ ದೇವರ ಸಾಕ್ಷಾತ್ಕಾರವಾಗುತ್ತದೆ. ಇದುವೇ ಮಂತ್ರಪಠಣದಿಂದಾಗುವ ಮಹಾ ಪ್ರಯೋಜನ.
ಮಂತ್ರದ ಅರ್ಥವನ್ನು ತಿಳಿದು, ಅದನ್ನು ಪಠಿಸುವಾಗ ಅದರ ಅರ್ಥವನ್ನು ಧ್ಯಾನಿಸುವುದು ಬಹಳ ಪರಿಣಾಮಕಾರಿ ವಿಧಾನ. ಇದರಿಂದ ಬೇಗನೇ ದೈವಸಾಕ್ಷಾತ್ಕಾರವಾಗಲು ಸಹಾಯ.
ಭಕ್ತಿ, ಶ್ರದ್ಧೆ, ನಂಬಿಕೆ ಇಂತಹ ಭಾವನೆಗಳು ಮಂತ್ರಪಠಣದಿಂದ ಶುದ್ಧವಾದಾಗ ಅವು ದೈವಸಾಕ್ಷಾತ್ಕಾರದ ಸಾಧನವಾಗುತ್ತವೆ. ನಿಮ್ಮ ನಕಾರಾತ್ಮಕ ಭಾವನೆಗಳು ಸಕಾರಾತ್ಮಕವಾಗಿ ಬದಲಾಗಿ, ಪ್ರೀತಿ ಮತ್ತು ಆನಂದದ ವ್ಯಾಖ್ಯಾನ ಹೊಸದಾಗುತ್ತದೆ. ಹಿಂದಿನ ಚಿಂತನಾಕ್ರಮ ಪರಿವರ್ತನೆಯಾಗಿ, ನಿಮ್ಮ ಅಹಂ ಸಾಧನೆಯ ಪಥಕ್ಕೆ ಅಡ್ಡಿಯಾಗುತ್ತಿರುವುದು ಅರಿವಾಗುತ್ತದೆ. ಅದನ್ನು ನಿವಾರಿಸಿಕೊಂಡಂತೆ ವಿನಯ ತುಂಬಿದ ಸಮತೋಲನದ ಮನಸ್ಸು ಉನ್ನತ ಜಾಗೃತಾವಸ್ಥೆಗೆ ದಾರಿ ತೋರುತ್ತದೆ.
ಕ್ರಮೇಣ ನಿಮ್ಮ ಚಿಂತೆ, ಕೋಪ, ಭಯ ಅಥವಾ ಏಕಾಂಗಿತನ ದೂರವಾಗಿ ಆತ್ಮಸಾಕ್ಷಾತ್ಕಾರಕ್ಕೆ ದಾರಿ ಕಾಣಿಸುತ್ತದೆ. ಅಂತಹ ಕ್ಷಣಗಳಲ್ಲಿ, ಪ್ರಾಮಾಣಿಕ ಪ್ರಾರ್ಥನೆಯ ಮೂಲಕ ದೇವರಿಗೆ ಶರಣಾಗಿ, ಮಂತ್ರಪಠಣವನ್ನು ಮುಂದುವರಿಸಬೇಕು. ಮನಸ್ಸಿನ ಹಿನ್ನೆಲೆಯಲ್ಲಿ ಮಂತ್ರಪಠಣ ಮಾಡುತ್ತಿದ್ದರೆ, ನೀವು ಮಾಡುವ ಪ್ರತಿಯೊಂದು ಕೆಲಸವೂ ಸುಲಭ ಹಾಗೂ ಆನಂದದಾಯಕವಾಗುತ್ತದೆ. ಅಂತಿಮವಾಗಿ, ನಿಮ್ಮೊಳಗೆ ಒಂದು ಚೈತನ್ಯ ಪ್ರವಹಿಸುತ್ತಿರುವುದು ನಿಮ್ಮ ಅರಿವಿಗೆ ಬರುತ್ತದೆ.
ಮಂತ್ರಪಠಣ ಮಾಡುವಾಗ, ಒಂದೇ ರೀತಿಯಲ್ಲಿ ಪಠಣ ಮಾಡುವ ಬದಲಾಗಿ ವಿಭಿನ್ನ ರೀತಿಗಳಲ್ಲಿ ಪಠಿಸುವುದು ಒಳ್ಳೆಯದು: ಉದಾಹರಣೆಗೆ, ಸ್ವಲ್ಪ ಸಮಯ ವೇಗವಾಗಿ, ಇನ್ನು ಸ್ವಲ್ಪ ಸಮಯ ನಿಧಾನವಾಗಿ ಪಠಿಸುವುದು; ಗಟ್ಟಿಯಾಗಿ ಮತ್ತು ಮೆಲುದನಿಯಲ್ಲಿ ಪಠಿಸುವುದು.
ಮಂತ್ರಪಠಣವು ವಿಶ್ವಚೇತನದಿಂದ ಚೇತನವನ್ನು ನಿಮ್ಮೊಳಗೆ ಸೆಳೆಯುವ ಮತ್ತು ನಿಮ್ಮೊಳಗನ್ನು ಜಾಗೃತಗೊಳಿಸುವ ಕಾರಣ ನಿಮ್ಮಲ್ಲಿ ಬದಲಾವಣೆಗಳು ಕಾಣಿಸುತ್ತವೆ. ನಿದರ್ಶನಕ್ಕಾಗಿ, ನಿಮಗೆ ಇನ್ನಷ್ಟು ಚೆನ್ನಾಗಿ ಕಾಣಲು ಮತ್ತು ಕೇಳಲು ಸಾಧ್ಯವಾಗುತ್ತದೆ ಹಾಗೂ ನಿಮ್ಮ ಧ್ವನಿ ಇನ್ನಷ್ಟು ಸ್ಪಷ್ಟವಾಗುತ್ತದೆ. ಈ ಸುಧಾರಣೆಗಳನ್ನು ಆನಂದಿಸುತ್ತಾ, ಭಗವಂತನಿಗೆ ಶರಣಾಗಿ.
ಮಂತ್ರಿಪಠಣದಿಂದ ನಿಮ್ಮಲ್ಲಾಗುವ ಅಧ್ಯಾತ್ಮಿಕ ಬದಲಾವಣೆಗಳನ್ನು ದಿನಚರಿಯಲ್ಲಿ ಬರೆದಿಡುವುದು ಒಳ್ಳೆಯ ಅಭ್ಯಾಸ. ಅದರಲ್ಲಿ ನಿಮ್ಮ ಕನಸುಗಳನ್ನೂ ದಾಖಲಿಸಿ. ಯಾಕೆಂದರೆ, ಕನಸುಗಳಲ್ಲಿ ಕಾಣಿಸುವ ಇಮೇಜುಗಳು ನಿಮ್ಮ ಅಧ್ಯಾತ್ಮಿಕ ಬದಲಾವಣೆಗಳ ಸೂಚಕ.
ಒಂದು ಮಂತ್ರದ ಪಠಣದಿಂದ ಫಲ ಸಿಗಬೇಕಾದರೆ ಅದರ ಕೆಲವು ಲಕ್ಷ ಪಠಣ ಅಗತ್ಯ. ಉದಾಹರಣೆಗೆ 12 ಲಕ್ಷ ಸಲ. ಜಪಮಾಲೆಯ 108 ಮಣಿಗಳ ಸಹಾಯದಿಂದ, 2ರಿಂದ 3 ಗಂಟೆ ಅವಧಿಯಲ್ಲಿ ನೀವು ಎಷ್ಟು ಸಲ ಆ ಮಂತ್ರ ಪಠಿಸುತ್ತೀರಿ ಎಂದು ಲೆಕ್ಕ ಮಾಡಿ. ಹಾಗಾದರೆ, ದಿನಕ್ಕೆ ಎರಡು ಸಾವಿರ ಸಲ ಪಠಿಸಿದರೆ, ಆ ಮಂತ್ರವನ್ನು 12 ಲಕ್ಷ ಸಲ ಪಠಣ ಮಾಡಲು ಎಷ್ಟು ತಿಂಗಳು ಅಥವಾ ವರುಷ ಬೇಕಾಗುತ್ತದೆಂದು ಅಂದಾಜಿಸಿ. ಆ ಗುರಿಯತ್ತ ಸಾಗಿದಂತೆ ನಿಮ್ಮ ಮಂತ್ರಪಠಣದ ಫಲ ನಿಮ್ಮ ಅನುಭವಕ್ಕೆ ಬಂದೇ ಬರುತ್ತದೆ. (ಬರಲಿಲ್ಲ ಎಂದಾದರೆ, ನೀವು ಪುನರಾವರ್ತನೆ ಮಾಡಬೇಕು.)
ಪ್ರತಿ ದಿನ ನಿರ್ದಿಷ್ಟ ಸಮಯದಲ್ಲಿ ಮಂತ್ರಪಠಣ ಮಾಡುವುದು ಸೂಕ್ತ. ಉದಾ: ಮುಂಜಾನೆ 4ರಿಂದ 6 ಗಂಟೆ ಅವಧಿಯಲ್ಲಿ. ಇಂತಹ ಮಂತ್ರಪಠಣದ ಫಲ ಹೇಗಿರುತ್ತದೆ? ವಿವಿಧ ವಿಷಯಗಳಲ್ಲಿ ನಿಮ್ಮ ಮೋಹ ಕಳಚಿ, ನಿರ್ಮೋಹ ಬೆಳೆಯುತ್ತದೆ. ನಿಮಗೆ ಭವಿಷ್ಯದ ಅಥವಾ ಭೂತಕಾಲದ ಘಟನೆಗಳು ಕಾಣಿಸಬಹುದು. ನಿಮ್ಮ ದೇವರ ರೂಪ ನಿಮಗೆ ಆಗಾಗ ಕಾಣಿಸಬಹುದು. ನಿಮ್ಮ ಅಂತರಾತ್ಮ ನಿಮಗೆ ಕೆಲವು ಸೂಚನೆಗಳನ್ನು ನೀಡಬಹುದು. ಆನಂದ, ಸಾವಿನ ಭಯದಿಂದ ಬಿಡುಗಡೆ, ವಿಶ್ವಚೇತನದ ಜೊತೆ ಸಂಪರ್ಕ - ಇವೆಲ್ಲ ನಿಮ್ಮ ಅನುಭವಕ್ಕೆ ಬರಬಹುದು. ನಿಮ್ಮ ಅಹಂ ಮಾಯವಾಗಿ ನಿಮ್ಮಲ್ಲಿ ಶರಣಾಗತಿಯ ಭಾವ ತುಂಬಿಕೊಳ್ಳಬಹುದು. ನಿಮ್ಮ “ಚಕ್ರಗಳು" ತೆರೆದುಕೊಂಡಂತೆ, ನಿಮ್ಮ ಅನುಭವಗಳು ಬದಲಾಗುತ್ತವೆ.
ಅಂತಿಮವಾಗಿ, ಲೇಖನದ ಆರಂಭದಲ್ಲಿ ತಿಳಿಸಿದ ಸಿದ್ಧಿ ಸಾಧಕನಿಗೆ ಮಂತ್ರಪಠಣದಿಂದ ಲಭಿಸುತ್ತದೆ. ಅದುವೇ ಮುಂದಿನ ಹಂತದ ಸಾಧನೆಗೆ ಸಿದ್ಧನಾಗಬೇಕಾದ ಕಾಲ.