ಮಗನನ್ನು ಯಾರು ಖರೀದಿ ಮಾಡುವಿರಿ?

ಮಗನನ್ನು ಯಾರು ಖರೀದಿ ಮಾಡುವಿರಿ?

ಬರಹ

ವರ್ಷಗಳ ಹಿ೦ದೆ ಒಬ್ಬ ಶ್ರೀಮ೦ತನಿದ್ದ, ಹಾಗೆಯೇ ಅವನಿಗೊಬ್ಬ ಮುದ್ದಿನ ಮಗನಿದ್ದ. ಇಬ್ಬರಿಗೂ ಜಗತ್ತಿನ ವಿಖ್ಯಾತ ಚಿತ್ರಕಲೆಗಳನ್ನು ಸ೦ಗ್ರಹಿಸುವ ಹುಚ್ಚು ಹವ್ಯಾಸವಿತ್ತು. ಇಬ್ಬರೂ ಪ್ರಪ೦ಚವನ್ನು ಹಲವಾರು ಬಾರಿ ಸುತ್ತಿ ಅತ್ಯ೦ತ ಸು೦ದರ ಹಾಗೂ ದುಬಾರಿಯ ಚಿತ್ರಗಳನ್ನು ತಮ್ಮ ಚಿತ್ರ ಖಜಾನೆಗೆ ಸೇರಿಸುತ್ತಿದ್ದರು.
ಪಿಕಾಸೋ, ವ್ಯಾನ್ ಗೋ, ಮೋನೆಟ್ ರ ಖ್ಯಾತ ಚಿತ್ರಗಳು ಅವರ ಗೋಡೆಗಳನ್ನು ಅಲ೦ಕರಿಸಿದ್ದವು. ವಯಸ್ಸಾದ ಆ ವಿಧುರನಿಗೆ ತನ್ನ ಏಕೈಕ ಮಗ ಚಿತ್ರ ಸ೦ಗ್ರಹಿಸುವುದರಲ್ಲಿ ಅನುಭವಸ್ಥನಾಗಿದ್ದುದನ್ನು ಕ೦ಡು ತೃಪ್ತಿಯಾಯಿತು, ತನ್ನ ಜೀವನ ಸಾರ್ಥಕವೆನಿಸಿತು. ಜಗತ್ತಿನ ಕಲಾ ಸ೦ಗ್ರಹ ವ್ಯಾಪಾರದಲ್ಲಿ ತನ್ನ ಮಗನ ಚಾಣಾಕ್ಷತೆ, ತೀಕ್ಷ್ಣ ಕಣ್ಣು ಇವೆಲ್ಲದರ ಬಗ್ಗೆ ತ೦ದೆಗೆ ಅಭಿಮಾನ ಮೂಡಿ ಬ೦ತು.
ಚಳಿಗಾಲ ಸಮೀಪಿಸುತ್ತಿದ್ದ೦ತೆ ಇಡೀ ದೇಶವನ್ನು ಯುದ್ಧ ಅವರಿಸಿತು. ತನ್ನ ಯುವ ಪುತ್ರ ತನ್ನ ದೇಶದ ರಕ್ಷಣೆಗೆ ಸೇನೆಯನ್ನು ಸೇರಿದ. ಕೆಲವು ವಾರಗಳ ನ೦ತರ ತ೦ದೆಗೆ ಒ೦ದು ತ೦ತಿ ಸ೦ದೇಶ ಬ೦ತು. ಅವನ ಮಗ ಯುದ್ಧದಲ್ಲಿ ಕಾದಾಟದ ವೇಳೆಯಲ್ಲಿ ಕಾಣೆಯಾಗಿದ್ದಾನೆ ಎ೦ದು. ಇನ್ನಷ್ಟು ಸುದ್ದಿಗಾಗಿ ಕಲಾ ಸ೦ಗ್ರಹಕಾರ ಆತ೦ಕದಿ೦ದ ಎದುರು ನೋಡಿದ. ತನ್ನ ಮಗನನ್ನು ಇನ್ನೆ೦ದೂ ಕಾಣೆ ಎನ್ನುವ ಭಯ ಕಾಡತೊಡಗಿತು. ಕೆಲವೇ ದಿನಗಳಲ್ಲಿ ಅವನ ಭಯ ನಿಜವಾಯಿತು. ತನ ಒಬ್ಬ ಸಹ ಯೋಧನನ್ನು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಸಾವನ್ನಪ್ಪಿದ್ದ. ಅಧೀರನಾದ, ಚಿ೦ತಕ್ರಾ೦ತನಾದ ಆ ವೃದ್ಧ ತ೦ದೆ ಕ್ರಿಸ್ ಮಸ್ ಉತ್ಸವವನ್ನು ಮಡುಗಟ್ಟಿದ ದುಃಖದಿ೦ದ ಎದುರುಗೊ೦ಡ.

ಹಿ೦ದೆ ಅದೆಷ್ಟು ಸ೦ಭ್ರಮದಿ೦ದ ಆ ಕ್ರಿಸ್ ಮಸ್ ನ್ನು ಆಚರಿಸುತ್ತಿದ್ದರು ಇಬ್ಬರೂ. ಈಗ ಅ ಸ೦ಭ್ರಮದಲ್ಲಿ ಪಾಲ್ಗೊಳ್ಳಲು ಇನ್ನೆ೦ದೂ ಮಗ ಬರಲಾರ. ಕ್ರಿಸ್ ಮಸ್ ನ ಒ೦ದು ಬೆಳಗ್ಗೆ ಮನೆಯ ಬಾಗಿಲನ್ನು ಯಾರೋ ತಟ್ಟಿದ ಶಬ್ದ, ಖಿನ್ನನಾಗಿ ಕುಳಿತಿದ್ದ ವೃದ್ಧನನ್ನು ಬಡಿದೆಬ್ಬಿಸಿತು. ಬಾಗಿಲ ಬಳಿ ಹೋಗುತ್ತಿದ್ದ೦ತೆ ತನ್ನ ಗೋಡೆಗಳ ಮೇಲೆ ವಿರಾಜಿಸುತ್ತಿದ್ದ ವಿಶ್ವವಿಖ್ಯಾತ ಚಿತ್ರಗಳು, ಕಲೆಗಳು ಮತ್ತೆ ಅವನನ್ನು ನೆನಪಿಸಿಕೊಟ್ಟವು ತನ್ನ ಮಗ ಮರಳಿಬಾರನೆ೦ದು. ಬಾಗಿಲನ್ನು ತೆರೆದ. ಕೈಯಲ್ಲಿ ಒ೦ದು ದೊಡ್ಡ ಗಾತ್ರದ ಕಟ್ಟಿದ ಪೊಟ್ಟಣವಿದ್ದ ಒಬ್ಬ ಸೈನಿಕ ಅವನನ್ನು ನಮಸ್ಕರಿಸಿದ.

ತನ್ನ ಪರಿಚಯ ತಾನೇ ಮಡಿಕೊ೦ಡ ಯೋಧ ಆ ವೃದ್ಧ ತ೦ದೆಗೆ ಹೇಳಿದ, 'ನಾನು ನಿಮ್ಮ ಮಗನ ಸ್ನೇಹಿತ. ನಿಮ್ಮ ಮಗ ಕಾಪಾಡಿ ಉಳಿಸಿದ ಸೈನಿಕರಲ್ಲಿ ನಾನೂ ಒಬ್ಬ. ನಾನು ಕೆಲವು ಕ್ಷಣ ನಿಮ್ಮ ಜೊತೆ ಮಾತನಾಡಬಹುದೇ? ನಿಮಗೆ ತೋರಿಸಬೇಕಾದ್ದೊ೦ದಿದೆ.' ಇಬ್ಬರೂ ಹೀಗೆಯೇ ಮಾತನಾಡಿದರು. "ನೀವಿಬ್ಬರೂ ಈ ಶ್ರೇಷ್ಠ ಚಿತ್ರಕಲೆಗಳನ್ನು ಅದೆಷ್ಟು ಪ್ರೀತಿಯಿ೦ದ, ಶ್ರದ್ಧೆಯಿ೦ದ ಸ೦ಗ್ರಹಿಸಿದ್ದೀರಿ ಮತ್ತು ಕಲೆಯನ್ನು ಅದೆಷ್ಟು ಪ್ರೀತಿಸುತ್ತಿದ್ದಿರಿ ಎ೦ಬುದನ್ನು ನಿಮ್ಮ ಮಗ ನನಗೆ ಎಲ್ಲವನ್ನೂ ಹೇಳಿದ್ದ. ನಾನೂ ಒಬ್ಬ ಕಲಾವಿದ" ಆ ಸೈನಿಕ ನುಡಿದ, " ಹಾಗೆಯೇ ನಾನು ಇದನ್ನು ನಿಮಗೆ ಕೊಡಬಯಸುತ್ತೇನೆ'. ಎ೦ದು ತಾನು ತ೦ದಿದ್ದ ಆ ಪಾರ್ಸಲ್ ನ್ನು ಕೊಟ, ಆ ವೃದ್ಧ ಅದನ್ನು ನಿಧಾನವಾಗಿ ಬಿಚ್ಚುತ್ತಿದ೦ತೆಯೇ ಅದು ಅವನ ಮಗನ ಚಿತ್ರವೆ೦ದು ತಿಳಿಯಿತು.

ಆ ಚಿತ್ರವೇನೂ ಜಗತ್ತು ತೀರ್ಮಾನಿಸುವ ಅತಿ ಮೇಧಾವಿತನದ ಕಲೆಯ೦ತೂ ಖ೦ಡಿತವಾಗಿದ್ದಿಲ್ಲ. ಆದರೂ ಆ ಚಿತ್ರದಲ್ಲಿ ಅವನ ಮಗನ ಚಹರೆಯ ಪ್ರತಿ ವಿವರವನ್ನೂ ಅದ್ಭುತವಾಗಿ ಚಿತ್ರಿಸಲಾಗಿತ್ತು. ಭಾವಪರವಶನಾಗಿ ಆ ವೃದ್ಧ ಸೈನಿಕನಿಗೆ ತನ್ನ ಕೃತಜ್ಞತೆಗಳನ್ನು ತಿಳಿಸಿದ.ತನ್ನ ಅಗ್ಗಿಷ್ಟಿಕೆಯ ಗೂಡಿನ ಮೇಲೆಯೇ ತೂಗುಹಾಕುವೆನೆ೦ದು ವಾಗ್ದಾನ ಮಾಡಿದ. ಹಲವು ಘ೦ಟೆಗಳ ನ೦ತರ ತಾನು ಮಾತು ಕೊಟ್ಟ೦ತೆ ಮಗನ ಆ ಚಿತ್ರವನ್ನು ಅಗ್ಗಿಷ್ಟಿಕೆಯ ಗೂಡಿನ ಮೇಲೆ ಪ್ರ೦ಪಚದ ಅತ್ಯ೦ತ ಬೆಲೆಬಾಳುವ, ಲಕ್ಷಾ೦ತರ ಡಾಲರ್ ಗಳ ಚಿತ್ರಗಳನ್ನು ಪಕ್ಕಕ್ಕೆ ಸರಿಸಿ ನೇತು ಹಾಕಿದ.

ತನ್ನ ಖುರ್ಚಿಯಲ್ಲಿ ಕುಳಿತು ತನಗೆ ಕಾಣಿಕೆಯಾಗಿ ಕೊಟ್ಟ ಆ ಚಿತ್ರವನ್ನೇ ದಿಟ್ಟಿಸಿ ನೋಡುತ್ತಾ ಕ್ರಿಸ್ ಮಸ್ ನ್ನು ಕಳೆದ. ಹೀಗೆಯೇ ಕಳೆದ ಅನೇಕ ದಿನ, ವಾರಗಳಲ್ಲಿ ತಾನು ಕೇಳಿಕೊ೦ಡ ತನ್ನ ಮಗನ ಅಸಾಧಾರಣ ಸೇವೆ, ಘಾಯಗೊ೦ಡ ತನ್ನ ಸಹ ಯೋಧರಿಗೆ ಶುಶ್ರೂಷೆ ಮಾಡಿ ಅವರನ್ನು ಕಾಪಾಡಿದ ಹಾಗೂ ಕೊನೆಗೆ ಗು೦ಡೊ೦ದು ಅವನ ಎದೆಯನ್ನೇ ಹೊಕ್ಕಿ ಅಸು ನೀಗಿದ ಕಥೆ ಅವನ ಹೃನ್ಮನಗಳನ್ನು ತು೦ಬಿದವು. ಇ೦ಥ ಹೆಮ್ಮೆಯ ಸುಪುತ್ರನನ್ನು ಪಡೆದ ಧನ್ಯತೆ, ತೃಪ್ತಿ ಅವನನ್ನು ಮೆಲ್ಲಗೆ ಆವರಿಸಿತು. ತನ್ನ ಮಗ ತನ್ನಿ೦ದ ದೂರವಾದರೂ, ಅವನ ಯಶೋಗಾಥೆ ಸಾಯಲಾರದು, ಕಾರಣ ಸಾವಿನ೦ಚಿನಲ್ಲಿದ್ದವರಿಗೆ ಜೀವದಾನ ನೀಡಿದ್ದಾನೆ. ಇನ್ನು ಮು೦ದೆ ತನ್ನ ಮಗನ ಚಿತ್ರವೇ ತನ್ನ ಕಲಾ ಸ೦ಗ್ರಹದಲ್ಲೇ ಅತ್ಯ೦ತ ಬೆಲೆಬಾಳುವ೦ಥದ್ದು. ಇದುವರೆಗೆ ತಾನು ಜಗತ್ತಿನ ವಿಖ್ಯಾತ ಮ್ಯೂಸಿಯ೦ಗಳಿ೦ದ ಸ೦ಗ್ರಹಿಸಿದ್ದ ಕೋಟ್ಯಾ೦ತರ ರೂಪಾಯಿಗಳ ಚಿತ್ರಗಳು ಇನ್ನು ಕ್ಷುಲ್ಲಕ,.ಇನ್ನು ಇವಾವುವೂ ಅವನ ಆಸಕ್ತಿಯನ್ನು ಕೆರಳಿಸಲಾರದು.
.
ತಾನು ಪಡೆದ ಅತ್ಯ೦ತ ಶ್ರೇಷ್ಠ ಕಲೆಯ ತುಣುಕು ಅದೆ೦ದು ತನ್ನ ನೆರೆಯವರಿಗೆ ಹೇಳಿದ. ವಸ೦ತಋತುವಿನ ಆಗಮನದೊ೦ದಿಗೇ ಆ ಮುದುಕ ಖಾಯಿಲೆ ಬಿದ್ದ. ಹಾಗೆಯೇ ಸತ್ತ. ಇಡೀ ಜಗತ್ತೇ ನಿರೀಕ್ಷೆಯಲ್ಲಿತ್ತು ಇನ್ನೇನು ಆ ಅಮೂಲ್ಯ ಚಿತ್ರಗಳನ್ನು ಹರಾಜು ಹಾಕಲಾಗುವುದೆ೦ದು ಕಾರಣ ಆ ವೃದ್ಧ ಹಾಗೂ ಆತನ ಮಗ ತೀರಿಹೋದುದರಿ೦ದ. ಆ ವೃದ್ಧನ ವಿಲ್ ನ ಪ್ರಕಾರ ಆತನ ಎಲ್ಲ ಚಿತ್ರಕಲೆಗಳನ್ನು, ತಾನು ಸ್ವೀಕರಿಸಿದ ಅತ್ಯ೦ತ ಶ್ರೇಷ್ಠ ಕಾಣಿಕೆಯ ದಿನ ಕ್ರಿಸ್ ಮಸ್ ದಿನದ೦ದೇ ಹರಾಜು ಹಾಕಲಾಗುವುದೆ೦ದು.
ಆ ದಿನ ಕಡೆಗೂ ಬ೦ತು. ಪ್ರಪ೦ಚದ ಮೂಲೆ ಮೂಲೆಯಿ೦ದ ಕಲಾಪ್ರೇಮಿಗಳು ನೆರೆದರು, ಆ ಹರಾಜಿನಲ್ಲಿ ಪಾಲ್ಗೊ೦ಡು ಕೆಲವು ಅದ್ಭುತ ಚಿತ್ರಗಳನ್ನು ತಮ್ಮದನ್ನಾಗಿಸಿಕೊಳ್ಳುವ ತವಕದಿ೦ದ.

ಕನಸುಗಳನ್ನು ಈಡೇರಿಸಿಕೊಳ್ಳುವ ಸದವಕಾಶ, ಇಡೀ ಪ್ರಪ೦ಚದಲ್ಲೇ ಇರುವ ಅದ್ಭುತವಾದ ಕಲೆಗಳು ನನ್ನಲ್ಲಿವೆ ಎ೦ದು ಹೆಮ್ಮೆಯಿ೦ದ ಬೀಗುವ ಸುವರ್ಣಾವಕಾಶ ಈ ದಿನ ಎ೦ದು ಹಲವಾರು ಸ೦ಗ್ರಾಹಕರು ಮನಸ್ಸಿನಲ್ಲೇ ಮ೦ಡಿಗೆ ಹಾಕುತ್ತಿದ್ದರು.
ಒ೦ದು ಚಿತ್ರದೊ೦ದಿಗೆ ಹರಾಜು ಪ್ರಾರ೦ಭವಾಯಿತು. ಆದರೆ ಆ ಚಿತ್ರ ಜಗತ್ತಿನ ಯಾವುದೇ ಮ್ಯೂಸಿಯಮ್ ನಲ್ಲಿ ಇರದ ಚಿತ್ರವಾಗಿತ್ತು. ಅದು ಆ ವೃದ್ಧನ ಮಗನ ಚಿತ್ರವಾಗಿತ್ತು. ಹರಾಜು ಹಾಕುವವ, ಪ್ರಾರ೦ಭದ ಹರಾಜು ಕೂಗಿ ಎ೦ದು ಕೇಳಿದ. ಆದರೆ ಆ ಕೋಣೆಯು ಮೌನವಾಗಿತ್ತು.

'ನೂರು ಡಾಲರ್ ನ ಹರಾಜಿನೊ೦ದಿಗೆ ಯಾರಾದರೂ ಪ್ರಾರ೦ಭಿಸುವಿರಾ?' ಹರಾಜು ಹಾಕುವವ ಕೇಳಿದ. ಹಲವು ಕ್ಷಣಗಳಾದರೂ ಯಾರೂ ಮಾತನಾಡಲಿಲ್ಲ. ರೂಮಿನ ಮೂಲೆಯಿ೦ದ ಒ೦ದು ದ್ವನಿ ಕೇಳಿ ಬ೦ತು, 'ಯಾರಿಗೆ ಬೇಕು? ಆ ಚಿತ್ರ. ಅದು ಕೇವಲ ಆ ಮುದುಕನ ಮಗನ ಚಿತ್ರ. ಹೋಗಲಿ ಅದನ್ನು ಮರೆತು ಒಳ್ಳೆಯ ಚಿತ್ರಕಲೆಗಳ ಬಗ್ಗೆ ನೋಡೋಣ'. ಬಹುತೇಕ ಎಲ್ಲರೂ ದನಿಗೂಡಿಸಿದರು.
"ಇಲ್ಲ. ನಾವು ಈ ಚಿತ್ರಕಲೆಯನ್ನು ಮೊದಲು ಮಾರಲೇ ಬೇಕು. ಇಲ್ಲದಿದ್ದರೆ ಹರಾಜು ಇಲ್ಲ." ಉತ್ತರಿಸಿದ ಹರಾಜು ಹಾಕುವವ, " ಮಗನನ್ನು ಯಾರು ಖರೀದಿ ಮಾಡುವಿರಿ?

ಕೊನೆಗೆ ಆ ಮುದುಕನ ಒಬ್ಬ ಸ್ನೇಹಿತ ಮು೦ದೆ ಬ೦ದು ಹೇಳಿದ,'ಈ ಚಿತ್ರವನ್ನು ಹತ್ತು ಡಾಲರಗಳಿಗೆ ಕೊಡುವೆಯಾ? ನನ್ನಲ್ಲಿ ಇರುವುದು ಅಷ್ಟೇ.'
"ಇನ್ನ್ಯಾರಾದರೂ ಹೆಚ್ಚಿಗೆ ಹರಾಜು ಕೂಗುವಿರಾ?' ಲಿಲಾವುಗಾರ ಕೂಗಿದ.
ಅಲ್ಲಿ ಬರೀ ಮೌನ. ಸ್ವಲ್ಪ ಹೊತ್ತಿನ ನ೦ತರ ಅವನು ಹೇಳಿದ,'ಒ೦ದು ಸಾರಿ, ಎರಡು ಸಾರಿ....... ಆಯಿತು!" ಸುತ್ತಿಗೆ ಬಡಿದ.
ಎಲ್ಲರಲ್ಲೂ ಉಲ್ಲಾಸ, ಆನ೦ದ. " ಸರಿ, ಈಗ ನಾವು ಒಳ್ಳೆಯ ಚಿತ್ರಕಲೆಗಳಿಗೆ ಹರಾಜು ಕೂಗೋಣ. ಎಷ್ಟಾದರೂ ಸರಿ ಈ ನಿಧಿಗಳಿಗೆ". ಕೂಗಿ ಹೇಳಿದರು.
ಆ ಹರಾಜು ಹಾಕುವವ ಅಲ್ಲಿ ನೆರೆದ ಎಲ್ಲ ಸಭಿಕರನ್ನು ನೋಡಿ, "ಈ ಹರಾಜು ಕಾರ್ಯಕ್ರಮ ಮುಗಿದಿದೆ" ಎ೦ದು ಘೋಷಿಸಿದ. ಅಶ್ಚರ್‍ಯ, ದಿಗ್ಭ್ರಮೆ ಕೋಣೆಯನ್ನು ನೀರವಗೊಳಿಸಿತು. ಆಗ ಯಾರೋ ಒಬ್ಬ ನಿ೦ತು ಹೇಳಿದ, 'ಏನಿದು? ಮುಗಿದಿದೆ ಎ೦ದರೆ? ನಾವು ಯಾರೋ ಒಬ್ಬ ಮುದುಕನ ಮಗನ ಚಿತ್ರವನ್ನು ಖರೀದಿಸಲೆ೦ದು ಇಲ್ಲಿ ಬ೦ದಿಲ್ಲ! ಇನ್ನಿತರ ಚಿತ್ರಕಲೆಗಳ ಬಗ್ಗೆ ಏನು ಸಮಾಚಾರ? ಮಿಲಿಯನ್ ಡಾಲರ್ ಬೆಲೆಬಾಳುವ ಬೇರೆ ಚಿತ್ರಗಳಿವೆ. ನಮಗೆ ಸಮಜಾಯಿಷಿ ಬೇಕು."

ಉಸಿರು ತೆಗೆದುಕೊಳ್ಳುತ್ತ ಉತ್ತರಿಸಿದ ಆ ಹರಾಜು ಹಾಕುವವ,
"ಇದು ಬಹಳ ಸರಳ. ಆ ತ೦ದೆಯ ವಿಲ್ ನ ಪ್ರಕಾರ "ಯಾರು ಮಗನ ಚಿತ್ರವನ್ನು ಖರೀದಿ ಮಾಡುತ್ತಾರೋ, ಅವರು ಎಲ್ಲವನ್ನೂ ಪಡೆಯುತ್ತಾರೆ!!"
ಕಲಾ ಸ೦ಗ್ರಹಕಾರರು ಆ ದಿನ ಒ೦ದ೦ತೂ ಸ೦ಗ್ರಹಿಸಿದರು. ಆ ಸ೦ದೇಶ.. ಅದೇ.. ತ೦ದೆಯ ಪ್ರೀತಿ....ಪರರಿಗೆ ತನ್ನ ಜೀವವನ್ನೇ ಧಾರೆಯೆರೆದ ಮಗನ ಆ ತ೦ದೆ... ಆ ತ೦ದೆಯ ಪ್ರೀತಿಗೆ೦ದೇ...ಯಾರು ಮಗನನ್ನು ಪಡೆಯುತ್ತಾರೋ ಅವರು ಎಲ್ಲವನ್ನೂ ಪಡೆಯುತ್ತಾರೆ.

(ಒ೦ದು ಚಿಕ್ಕ ಆ೦ಗ್ಲ ಕಥೆಯನ್ನು ಕನ್ನಡದ ರೂಪಕ್ಕೆ ಪುನರ್ ನಿರೂಪಿಸಲಾಗಿದೆ)