ಮಗುವಿನ ಪ್ರಶ್ನೆ...

ಮಗುವಿನ ಪ್ರಶ್ನೆ...

ಅಂದು ವಾರದ ಕೊನೆಯ ದಿನ ಶನಿವಾರ ಆದ್ದರಿಂದ ಅದು ಚಟುವಟಿಕೆಯ ದಿನವಾಗಿತ್ತು. ಆದರೆ ತುಂಬಾ ಮಕ್ಕಳ ಗೈರು ಹಾಜರಿನ ಕಾರಣ ಇಂದು ಚಟುವಟಿಕೆ ಬೇಡ ಸ್ಮಾರ್ಟ್ ಬೋರ್ಡ್ ನ್ನು ತೋರಿಸಿ ಮಕ್ಕಳಿಗೆ ಸಂತೋಷಪಡಿಸುತ್ತೇನೆ ಎಂದು ನನ್ನ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದೆ. ಅದರಲ್ಲಿ ನೈತಿಕ ಕಥೆಯೊಂದನ್ನು ತೋರಿಸಲು ಎಲ್ಲವನ್ನು ಸಜ್ಜುಗೊಳಿಸಿ ಪುಣ್ಯಕೋಟಿಯ ಕಥೆಯನ್ನು ಎಲ್ಲರಿಗೂ ತೋರಿಸಿದೆ.

ಮಕ್ಕಳಾದರೂ ಒಂದೊಂದು ಮಗುವಿನ ಯೋಚನಾ ಶೈಲಿ ಬೇರೆ ಬೇರೆ. ಅದನ್ನು ನೋಡಿದ ನಂತರ ಕೆಲವು ಮಕ್ಕಳು ಅದರಲ್ಲಿನ ಗೋವುಗಳನ್ನು ಮತ್ತು ಮರಿಗಳನ್ನು ನೋಡಿ ಖುಷಿಪಟ್ಟರು. ಇನ್ನು ಕೆಲವು ಮಕ್ಕಳು, ಕಾರ್ಟೂನ್ ಪ್ರಾಣಿಗಳ ಚಂದವನ್ನು ವರ್ಣಿಸಿದರು. ಇನ್ನು ಕೆಲವರು ಅಮ್ಮನನ್ನು ನೆನಪಿಸಿಕೊಂಡು ಅತ್ತರು. ಆದರೆ ಮೂಲೆಯಲ್ಲಿ ಏನೂ ಮಾತನಾಡದೆ, ಯಾವುದೇ ಭಾವನೆಯನ್ನು ತನ್ನ ಮುಖದಲ್ಲಿ ತೋರಿಸದೆ ಕೂತಿದ್ದ ಮಗುವಿನ ಬಳಿ ನಾನು ಹೋಗಿ ಕೇಳಿದೆ, "ಏಕೆ ಪುಟ್ಟ ನಿನಗೆ ಕಥೆ ಇಷ್ಟವಾಗಲಿಲ್ಲವೇ..?" ಎಂದು. ಅವನು ಅದಕ್ಕೆ ಉತ್ತರಿಸಲಿಲ್ಲ, "ಅಮ್ಮನ ನೆನಪಾಯಿತೇ?" ಎಂದೆ. ಆದರೂ ಉತ್ತರ ಇಲ್ಲ. ನಿನಗೆ ಹಾಡುಗಳು ಬೇಕಿತ್ತಾ? ಎಂದು ಮತ್ತೆ ಸ್ಮಾರ್ಟ್ ಬೋರ್ಡ್ ಆನ್ ಮಾಡಲು ಹೋದಾಗ ಅವನು ಹೇಳಿದ.. "ಮಿಸ್ ಅದನ್ನು ಪುನಃ ಆನ್ ಮಾಡಬೇಡಿ ಎಂದು ಹೇಳಿದ. ಏಕೆ ಎಂದು ಕೇಳಿದಾಗ ಅವನ ಪ್ರಶ್ನೆ ಹೀಗಿತ್ತು. "ಸ್ಮಾರ್ಟ್ ಬೋರ್ಡ್ ಗೆ ವಿದ್ಯುತ್ ಬೇಕಲ್ಲವೇ?" ನಾನು ಹೇಳಿದೆ ಹೌದು. "ಅದು ಫೋನ್ ಥರ ನೇ ಅಲ್ವಾ?" ನಾನು ಹೇಳಿದೆ ಹೌದು.. ಇದನ್ನು ತುಂಬಾ ಹೊತ್ತು ನೋಡಿದರೆ ಕಣ್ಣು ನೋವು ಬರುತ್ತದೆ ಅಲ್ಲವೇ? ನಾನು ಹೇಳಿದೆ ಹೌದು. ಹಾಗಾದರೆ ಬೇರೆ ಸಮಯದಲ್ಲಿ ಫೋನ್ ಇಂದ ದೂರ ಇರಿ, ಹೆಚ್ಚು ಫೋನ್ ನೋಡಬೇಡಿ, ನೋಡಿದರೆ ನಿಮ್ಮ ಕಣ್ಣು ಹಾಳಾಗುತ್ತದೆ, ತಲೆ ನೋವು ಬರುತ್ತದೆ ಎಂದೆಲ್ಲ ಹೇಳುವ ನೀವು ತಿಂಗಳಿಗೆ 4 ಬಾರಿ ಒಂದು ಕ್ಲಾಸ್ ಇದನ್ನೇ ನಮಗೆ ತೋರಿಸಿದರೆ ನಮ್ಮ ಕಣ್ಣು ಹಾಳಾಗುವುದಿಲ್ಲವೇ? ಎಂದು ಕೇಳಿದ... ಅವನ ಆ ಪ್ರಶ್ನೆ ಕೇಳಿ ನಾನು ಮೂಕಿಯಾದೆ..! ನನ್ನ ಯಾವ ಸಮರ್ಥನೆಗೂ ಅವನಿಗೆ ಸಮಾಧಾನವಿರಲಿಲ್ಲ.. ಕೊನೆವರೆಗೂ ಅವನ ವಾದ ತಪ್ಪು ನನ್ನದೇ ಎಂಬುವುದೇ ಆಗಿತ್ತು.. ಆಗಲಿ ಪುಟ್ಟ, ನೀನು ಎಷ್ಟು ಬುದ್ದಿವಂತ, ಇಷ್ಟೆಲ್ಲ ಯೋಚನೆ ಮಾಡುತ್ತೀಯಾ, ನಿನ್ನಷ್ಟು ನಾನು ಯೋಚನೆ ಮಾಡದೆ ಹೋದೆ ಪುಟ್ಟ ನೀನು ಗುಡ್ ಬಾಯ್ ಎಂದು ಏನೇನೋ ಬೆಣ್ಣೆ ಹಚ್ಚಿ ಅವನನ್ನು ಸಮಾಧಾನಪಡಿಸಿದೆ. ಆದರೂ ಮನೆಗೆ ಬಂದ ಮೇಲೆ ಅವನು ಕೇಳಿದ ಆ ಪ್ರಶ್ನೆಯೇ ಕಿವಿಯಲ್ಲಿ ಗುನುಗುತ್ತಿತ್ತು. ತರಗತಿಯಲ್ಲಿ ಅವನು ಕೇಳಿದ ಪ್ರಶ್ನೆ ಆ ಕ್ಷಣಕ್ಕೆ ತಲೆಹರಟೆ ಎನಿಸಿದರೂ ಅದು ಕಟುಸತ್ಯ...!

ಇಂದಿನ ಜೀವನ ಶೈಲಿಯಲ್ಲಿ, ಅದರಿಂದ ಹಾನಿ ಇದೆ ಎಂದು ತಿಳಿದಿದ್ದರೂ ಅನಿವಾರ್ಯವಾಗಿ ಕೆಲವು ವಸ್ತುಗಳಿಗೆ ನಾವು ಹೊಂದಿಕೊಳ್ಳುವುದು ನಮಗೆ ಅನಿವಾರ್ಯವಾಗಿದೆ. ಆದರೆ ತರಗತಿಗೆ ಹೋದಾಗಲೆಲ್ಲ ಅವನ ಆ ಪ್ರಶ್ನೆ ನನ್ನಲ್ಲಿ ಅಪರಾಧಿ ಭಾವನೆ ಮೂಡಿಸುತಿತ್ತು... ನಂತರದ ದಿನಗಳಲ್ಲಿ ನಾವು ಸ್ಮಾರ್ಟ್ ಬೋರ್ಡ್ ನ ಚಟುವಟಿಕೆ ಬಿಟ್ಟು ಬೇರೆ ಥರದ ಚಟುವಟಿಕೆಗಳನ್ನು ತಯಾರಿ ಮಾಡಿಕೊಂಡು ಶಾಲೆಗೆ ಹೋಗುತ್ತಿದ್ದೆ...!

-ರಮ್ಯಾ ಆರ್ ಭಟ್, ಕುಂದಾಪುರ

ಚಿತ್ರ ಕೃಪೆ: ಇಂಟರ್ನೆಟ್ ತಾಣ