ಮನೆ ಖರೀದಿ ಬದುಕನ್ನೇ ಮಾರಾಟ ಮಾಡಿದಂತೆ…!

ಮನೆ ಖರೀದಿ ಬದುಕನ್ನೇ ಮಾರಾಟ ಮಾಡಿದಂತೆ…!

"20 ವರ್ಷಗಳ ಅವಧಿಯ ಕಂತುಗಳಲ್ಲಿ ಒಂದು ಮನೆಯನ್ನು ನೀವು ಖರೀದಿಸಿದರೆ 20 ವರ್ಷಗಳ ನಂತರ ಆ ಸಾಲವನ್ನು ತೀರಿಸಿದ ಮೇಲೆ ಆ ಮನೆ ನಿಮ್ಮ ಸ್ವಂತದ್ದಾಗುತ್ತದೆ. ನಿಮ್ಮ ದೃಷ್ಟಿಯಲ್ಲಿ ಆ ಮನೆಯನ್ನು ನೀವು ಖರೀದಿಸಿದ್ದೀರಿ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ವಾಸ್ತವದಲ್ಲಿ ಆ ಮನೆ ನಿಮ್ಮನ್ನು ಖರೀದಿಸಿರುತ್ತದೆ "- ಆಸ್ಟ್ರೇಲಿಯಾದ ಉದ್ಯಮಿಯೊಬ್ಬರ ಅನುಭವದ ನುಡಿಗಳು.

ಭಾರತದ ಮಧ್ಯಮ ವರ್ಗದ ಜನರ ಬದುಕಿಗೆ ಇದು ಅತ್ಯಂತ ಹತ್ತಿರವಾಗಿದೆ. ಕೆಲವು ದಶಕಗಳ ಹಿಂದೆ ಸಾಮಾನ್ಯವಾಗಿ ಬಹುತೇಕ ಸರ್ಕಾರಿ ಉದ್ಯೋಗಿಗಳು ಮತ್ತು ಕೆಲವು ಖಾಸಗಿ ಕಂಪನಿಗಳ ಉದ್ಯೋಗಿಗಳು ಹಾಗು ಕೆಲವು ಯಶಸ್ವಿ ಉದ್ಯಮಿಗಳು ಸುಮಾರು 50-60 ರ‌ ವಯಸ್ಸಿನ ಆಸುಪಾಸಿನಲ್ಲಿ ಅಂದರೆ ನಿವೃತ್ತಿಯ ಸಮೀಪದಲ್ಲಿ ಒಂದು ಸ್ವಂತ ಮನೆ ಮತ್ತು ಮಕ್ಕಳ ಮದುವೆ ಮಾಡುತ್ತಿದ್ದರು. ಅಲ್ಲಿಯವರೆಗೂ ಸಾಧ್ಯವಾದಷ್ಟು ತಮ್ಮ ಸಂಪಾದನೆಯ ಹಣ ಉಳಿತಾಯ ಮಾಡಿರುವುದನ್ನು ಖರ್ಚು ಮಾಡುತ್ತಿದ್ದರು. ಸಾಲ ಎಂಬುದು ಶೂಲ ಎನ್ನುವ ಅಭಿಪ್ರಾಯವಿತ್ತು.

ಆದರೆ ಜಾಗತೀಕರಣದ ನಂತರ ಬ್ಯಾಂಕಿಂಗ್ ಕ್ಷೇತ್ರದ ಹಣಕಾಸು ಸಂಸ್ಥೆಗಳು ಲಾಭದ ಸ್ಪರ್ಧೆಗೆ ಬಿದ್ದು ಅಭಿವೃದ್ಧಿಯ ಹೆಸರಿನಲ್ಲಿ ಸರಳ ರೀತಿಯ ಆದರೆ ಸಂಕೀರ್ಣ ಲಾಭಕೋರ ಸಾಲ ಸೌಲಭ್ಯಗಳನ್ನು ಕೆಳ ಹಂತಕ್ಕೆ ತಲುಪಿಸುವ ಯೋಜನೆಗಳನ್ನು ರೂಪಿಸಿದರು. ಅದರ ಪರಿಣಾಮವಾಗಿ ಸುಮಾರು ‌30 ವರ್ಷ ಆಸುಪಾಸಿನ ವಯೋಮಾನದ ಯುವಕರು ಸಹ ಸ್ವಂತ ಮನೆಯ ಕನಸು ಕಾಣಲು ಪ್ರೇರೇಪಣೆಯಾಯಿತು. ಅದಕ್ಕೆ ಪೂರಕವಾಗಿ ಮತ್ತಷ್ಟು ಕಾರಣಗಳು ಮತ್ತು ಅನಿವಾರ್ಯತೆಯನ್ನು ಕೃತಕವಾಗಿ ಸೃಷ್ಟಿಸಲಾಯಿತು. 20-30 ವರ್ಷಗಳ ಸುಲಭ ಸಾಲ ಕಂತುಗಳು (ಇಎಂಐ) ಯೋಜನೆಯನ್ನು ಮನೆ ಬಾಗಿಲಿಗೆ ಆಕರ್ಷಕವಾಗಿ ತಲುಪಿಸಲಾಯಿತು.

ಮೇಲ್ನೋಟಕ್ಕೆ ಅತ್ಯಂತ ಪ್ರಗತಿಪರ ಮತ್ತು ಅನುಕೂಲಕರ ಎನಿಸಿದರು ದೀರ್ಘ ಅವಧಿಯ ಬಡ್ಡಿ ಪರೋಕ್ಷವಾಗಿ ನಮ್ಮ ಸಂಪಾದನೆಯ ಬಹಳಷ್ಟು ಹಣವನ್ನು ನಮಗರಿವಿಲ್ಲದೆ ನುಂಗುತ್ತದೆ. ಹಣಕಾಸು ಸಂಸ್ಥೆಗಳು ಕೋಟಿ ಕೋಟಿಗಳ ಲೆಕ್ಕದಲ್ಲಿ ಲಾಭ‌ ಗಳಿಸುತ್ತವೆ.

ಆದರೆ ಇಲ್ಲಿ ಅಡಗಿರುವ ಮತ್ತೊಂದು ಭಯಾನಕ ಸತ್ಯವೆಂದರೆ ಅದರಲ್ಲೂ ಮಧ್ಯಮ ವರ್ಗದವರ ಪಾಲಿನ ದುರಂತವೆಂದರೆ ಒಂದು ಸ್ವಂತ ಮನೆಗಾಗಿ 30 ರಿಂದ 60 ರ ವರೆಗಿನ ಬದುಕಿನ ಅತ್ಯಮೂಲ್ಯ ಸಮಯ ಮತ್ತು ಸಂಪಾದನೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ತಾವು ಕೆಲಸ ಮಾಡುವ ಸ್ಥಳದಲ್ಲಿ ಅನಿವಾರ್ಯವಾಗಿ ಗುಲಾಮಿತನವನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಭ್ರಷ್ಟರಾಗಬೇಕಾಗುತ್ತದೆ, ಅನ್ಯಾಯವೇನಾದರು ನಡೆದರೆ ಅದನ್ನು ಸೇಹಿಸಬೇಕಾಗುತ್ತದೆ. 

ಸ್ವಲ್ಪ ಪ್ರತಿರೋಧ ತೋರಿದರೂ ಉದ್ಯೋಗಕ್ಕೆ ಕುತ್ತಾಗಿ ಕಂತು ಕಟ್ಟುವುದು ಕಷ್ಟವಾಗಿ ಬದುಕು ಬೀದಿಗೆ ಬರುತ್ತದೆ ಎಂಬ ಅನಿವಾರ್ಯ ಭಯ ಸೃಷ್ಟಿಯಾಗುತ್ತದೆ. ಹೆಂಡತಿ ಮಕ್ಕಳ ಭವಿಷ್ಯ ನೆನಪಾಗಿ ಜೀತದಾಳುವಿನ ಮನೋಭಾವಕ್ಕೆ ಶರಣಾಗಬೇಕಾಗುತ್ತದೆ. ಇದನ್ನೇ ಅತ್ಯಂತ ಸೂಕ್ಷ್ಮವಾಗಿ ಮತ್ತು ಸ್ಪಷ್ಟವಾಗಿ ಆಸ್ಟ್ರೇಲಿಯಾದ ಉದ್ಯಮಿ ಮನೆ ನಿಮ್ಮನ್ನು ಖರೀದಿಸಿರುತ್ತದೆ ಎಂದು ಹೇಳಿರುವುದು.

ಕೆಲವರು ಇನ್ನೊಂದು ವಿಚಾರ ಮಂಡಿಸುತ್ತಾರೆ. ಹಣಕಾಸು ಸಂಸ್ಥೆಗಳು ನಿಮ್ಮನ್ನು ಒತ್ತಾಯಿಸುವುದಿಲ್ಲ.‌ ಕೇವಲ ಪ್ರಚಾರ ನೀಡುತ್ತಾರೆ. ಆಯ್ಕೆ ನಿಮ್ಮದು. ನಿಮ್ಮ ವಿವೇಚನೆ ಬಳಸಬಹುದಲ್ಲವೇ ಎಂದು. ಆದರೆ ಭಾರತದ ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆ ಹಾಗು ಮಾನಸಿಕ ಪರಿಸ್ಥಿತಿ ಅಷ್ಟು ಪ್ರಬುದ್ದವಾಗಿಲ್ಲ. ಬಹುಬೇಗ ಆಸೆ ಆಮಿಷ ಭಾವನೆ ಮತ್ತು ಒತ್ತಡಗಳಿಗೆ ಒಳಗಾಗುತ್ತದೆ. ಅದನ್ನು ಅರಿತ ಕಾರ್ಪೊರೇಟ್ ವರ್ಗ ಪರೋಕ್ಷವಾಗಿ ಅದನ್ನು ಸಹಜವಾಗಿ ಅನಿವಾರ್ಯತೆ ಸೃಷ್ಟಿಯಾಗುವಂತೆ ಮಾಡಿ ಅಭಿವೃದ್ಧಿ ಎಂದರೆ ಇದೇ, ನಿಜವಾದ ಯಶಸ್ಸು ಇದರಲ್ಲಿಯೇ ಅಡಗಿದೆ ಎಂದು ಭ್ರಮೆ ಸೃಷ್ಟಿಸುವ ಕಲೆಗಾರಿಕೆ ಅವರಿಗೆ ಕರಗತವಾಗಿದೆ.

ಒಮ್ಮೆ ಕಂತುಗಳು ಬಂಧನದಲ್ಲಿ ಸಿಲುಕಿದ ವ್ಯಕ್ತಿ ಇತರ ಯಾವುದೇ ಸ್ವತಂತ್ರ, ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗುವುದು ಕಷ್ಟವಾಗುತ್ತದೆ.‌ ಸದಾ ಒತ್ತಡ ಆತನನ್ನು ಮಾನಸಿಕ ಮತ್ತು ದೈಹಿಕವಾಗಿ ಕುಸಿಯುವಂತೆ ಮಾಡುತ್ತದೆ. ಅಪರೂಪದ ಕೆಲವು ಪ್ರಕರಣ ಹೊರತುಪಡಿಸಿ.

20-25 ವರ್ಷಗಳ ನಂತರ ಮನೆ ಸ್ವಂತದ್ದಾಗುತ್ತದೆ. ಆದರೆ ಜೀವನ ಬಾಡಿಗೆಯಲ್ಲಿಯೇ ಇರುತ್ತದೆ. ಜೀವನದ ಗುಣಮಟ್ಟ ಕುಸಿದಿರುತ್ತದೆ. ಹಲವು ಶತಮಾನಗಳ ಹಿಂದೆಯೇ ಹೇಳಿದ ಮಾತು,

" ಸಾಲವನು ಕೊಂಬಾಗ 

ಹಾಲೋಗರುಂಡಂತೆ,

ಸಾಲಿಗರು ಕೊಂಡು ಎಳೆವಾಗ

ಕಿಬ್ಬದಿಯ ಕೀಲು ಮುರಿದಂತೆ 

ಸರ್ವಜ್ಞ....."

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ