ಮನ ಮುಚ್ಚಿದ ಗಡಿ
ನಿನ್ನೆ ಮೊನ್ನೆ ವರೆಗು ನಮ್ಮ ನಡುವೆ
ಯಾವ ಅಡೆತಡೆಗಳೆದ್ದಿರಲಿಲ್ಲ
ಅವರ ಅಂಗಳದಿಂದ ಚೆಂಡು
ನಮ್ಮ ಅಂಗಳಕ್ಕೆ ಬೀಳುತ್ತಿತ್ತು
ನಮ್ಮನೆ ನಾಯಿ ಅವರನ್ನು
ಕಂಡು ಬೊಗಳಿದ್ದೂ ಇಲ್ಲ...
ಅದಕ್ಕೂ ಚಿರಪರಿಚಿತರೆಂಬ ಭಾವ.!
ಆದರೆ ಅದೇಕೋ ಕಾಣೆ ಇಂದು...
ನೋಡ ನೋಡುತ್ತಿದ್ದಂತೆ
ಮಣ್ಣ ರಾಶಿಯೊಂದು ಎರಡೂ
ಮನೆಯ ನಡುವೆ ದಿಬ್ಬಗಟ್ಟಿತ್ತು..!
ಬಾಯಿ ಮುಚ್ಚಿದ ಮಾಸ್ಕ್ ನಂತೆ
ಏನು ಆಗಿಲ್ಲವೆಂಬಂತೆ ಅವರು ನಡೆದೆ ಬಿಟ್ಟರು..!
ನನಗೇಕೋ ತಳಮಳ ಬಾಯಿ ಮುಚ್ಚಿ
ಉಸಿರು ಗಟ್ಟಿದಂತೆ,
ತಲೆ ಸುತ್ತು ಬಂದು ದಿಬ್ಬ
ಎರಡೆರಡಾಗಿ ಏರಿ ನಿಂತಂತೆ...
ಅಲ್ಲ ಇದೇಕೆ ಹೀಗೆ...
ನಾವೆಂದು ಅಪರಿಚಿತರಂತೆ ಜಗಳವಾಡಿಲ್ಲ
ಕತ್ತಿಗೆ ಕತ್ತಿ ಹಿಡಿದು ಹೊಡೆದಾಡಿಲ್ಲ...
ಬದಲು...
ಹಂಚಿಕೊಂಡ ನಗು
ನೋವು ನಲಿವಿಗೆ
ಲೆಕ್ಕವಿಟ್ಟವರಿಲ್ಲ...
ಮೊನ್ನೆ ಮೊನ್ನೆ ಪರೀಕ್ಷೆ ಪಾಸಾದನೆಂದು
ಕಾಲು ಮುಟ್ಟಿ ಆಶೀರ್ವಾದ ಪಡೆದು ಸಿಹಿ ನೀಡಿದ್ದು...
ಆಹಾ..! ಆ ಕಣ್ಣುಗಳಲ್ಲದೆಷ್ಟು ಭಕ್ತಿ...!
ಮತ್ತೆ...ಇಂದೇಕೆ ಹೀಗೆ...?!
ಹೌದು.., ಜಗ ಹೀಗೆಯೆ
ಪ್ರತಿ ಕ್ಷಣ ಬದಲಾವಣೆ ಬದಲಾವಣೆ...
ಜಗದ ನಿಯಮದಂತೆ...
ನಾವು.. ನೀವು.. ಅವರು...
ಊಹುಂ... ಇಲ್ಲ ...
ಇಲ್ಲಿ ಬದಲಿಲ್ಲ...
ಭಾವಸಂಬಂಧಗಳ ಮೀರಿದ
ಶಕ್ತಿಯ ನಡುವೆ ನಮ್ಮ ಪಯಣ..!
ತುದಿ ಮೊದಲಿಲ್ಲದ ಭರವಸೆಯ
ಹುಡುಕುವ ಪಯಣ...
ಕನಸ ಬೆಂಬತ್ತುತ ಸಾಗುತ್ತಲೇ ಇರುವ ಪಯಣ...
ಗುರಿ ಸೇರುವುದೋ..?
ಅನುಭವಿಸುವುದೋ...?
ಎಲ್ಲವೂ ನಮ್ಮ ಭಾವ ಭುಕ್ತಿ..!
ನಿರೀಕ್ಷೆಗಳು ಅತಿಯಾದಲ್ಲಿ
ನೋವು ದುಮ್ಮಾನಗಳು
ನಿರ್ಲಿಪ್ತತೆಯ ಪರಮೋಚ್ಚ ಯೋಗ...
ಜಗ ಬದಲಾದಂತೆ ಜೀವನ...
ಹಮ್ಮು ಬಿಮ್ಮುಗಳಿಲ್ಲಿ ಬರಿದೆ ನೆವನ.!
-ಜನಾರ್ದನ ದುರ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ
