ಮರೆಯಲಾಗದ ನೋವು .....
ಕಳೆದ ವರ್ಷ ಈ ದಿನ(11 feb) . .ಶುಕ್ರವಾರ. ನನ್ನ ತಂದೆ ಯವರ ದಫನ ಮಾಡಿದ ದಿನ. ತಂದೆಯವರ ಖಬರಿಗೆ ಸಲಾಂ ಹೇಳಿ ಹಿಂತಿರುಗಿದಾಗ ಮನಸ್ಸು ಬಿಕ್ಕಿ ಅಳುತ್ತಿತ್ತು. ನಾನು ನನ್ನ ತಂದೆ ಯವರ ಜೊತೆ ಇನ್ನೂ ಮಾತಾಡುವುದು ಇತ್ತು ಎಂದು ಅನಿಸುತಿತ್ತು. ನನ್ನ ತಾಯಿಯ ಜೊತೆ ಪ್ರತೀ ದಿನ ಮಾತಾಡುತ್ತಿದ್ದ ನಾನು ತಂದೆಯ ಜೊತೆ ವಾರದಲ್ಲಿ ಒಂದೋ ಎರಡೋ ಬಾರಿ ಮಾತಾಡುತ್ತಿದ್ದೆ. ಅವರ ಮೇಲೆ ಇದ್ದ ಗೌರವವೋ ಭಕ್ತಿಯೋ ತಿಳಿಯದು ಅವರಿಗೆ ಫೋನ್ ಮಾಡಿದಾಗ ಮಾತೇ ಬರುತ್ತಿರಲಿಲ್ಲ. ಆದರೂ ಕೊನೆಯ ದಿನಗಳಲ್ಲಿ ಅವರು ನನ್ನಲ್ಲಿ ಬಹಳ ಆತ್ಮೀಯ ವಾಗಿ ಮಾತನಾಡುತ್ತಿದ್ದರು. ಮಾತು ಮಾತಿಗೆ ನಗೆ ಚಟಾಕಿ ಹಚುವ ರೀತಿ ಅವರದು. ಆದರೆ ನನ್ನಲ್ಲಿ ಆರೀತಿ ಮಾತನಾಡುವುದು ಬಹಳಕಮ್ಮಿ ಅಥವಾ ಇಲ್ಲವೇ ಇಲ್ಲ, ಆದರೆ ಕೊನೆಯ ದಿನಗಳಲ್ಲಿ ನನ್ನಲ್ಲೂ ಆ ರೀತಿ ಮಾತಿನಲ್ಲಿ ತೊಡಗುತ್ತಿದ್ದರು. ನಾನು ಕೂಡ ಅವರನ್ನು ಸ್ನೇಹಿತನಂತೆ ಕಾಣ ತೊಡಗಿದೆ. ಅವರನ್ನು ಭಯ ಭಕ್ತಿ ಯಲ್ಲಿ ನೋಡಿ ಮಾತನಾಡಿದವನು. ಸಣ್ಣ ಸಣ್ಣ ತಮಾಷೆ ಗಳನ್ನೂ ಮಾಡ ತೊಡಗಿದ್ದೆ. ನನಗಿಷ್ಟ ವಾಗುತಿತ್ತು. ಅವರಿಗೂ ಇಷ್ಟ ವಾಗುತಿತ್ತು ಎಂದು ನಂಬಿದ್ದೇನೆ.
ಅವತ್ತು ಪಶ್ಚಾತಾಪ ಪಡುತ್ತಿದ್ದೆ ತಂದೆಯವರ ಜೊತೆ ಯಾಕೆ ನೀನು ಹೆಚ್ಹು ಮಾತಾಡಲಿಲ್ಲ ಎಂದು ಕೇಳುತ್ತಿದ್ದೆ ನನ್ನಲ್ಲೇ. ಅವತ್ತು ಆಸ್ಪತ್ರೆಯಲ್ಲಿ ಸಾವಿರಕ್ಕೂ ಹೆಚ್ಹು ಮಂದಿ ಇದ್ದರು, ತಂದೆಯವರು ಹುಷಾರಿಲ್ಲದೆ ಇದ್ದಾರೆಂಬುದನ್ನು ಅರಿತು ಬಂದವರು. ಆಗಲೇ ನನಗೆ ತಿಳಿಯುತ್ತಿತ್ತು ತಂದೆಯವರು ನನ್ನನ್ನು ಬಿಟ್ಟು ಹೋಗಲಿದ್ದಾರೆ ಎಂದು. ಒಂದು ದಿನ ಮೊದಲಷ್ಟೇ ಅವರು ನನ್ನ ಜೊತೆ ಅಲ್ಪ ಅವದಿಯ ಮಾತು ಮಾಡಿದ್ದರು ಅವರು, ಅವಾಗ ಇಳಿ ಶಬ್ದದಲ್ಲಿ ನಾನು ಜೀವನದಲ್ಲಿ ಸೋತಿದ್ದೇನೆ, ಏನನ್ನು ಸಂಪಾದಿಸಿ ಇಟ್ಟಿಲ್ಲ ಎಂದು ನೊಂದರು. ಆದರೆ ಅಂದು ಅಲ್ಲಿ ಸೇರಿದ್ದ ಜನರನ್ನು ನೋಡಿ ತಂದೆಯವರಲ್ಲಿ ಹೇಳಬೇಕು ಅನಿಸುತ್ತಿತ್ತು "ನೀವು ಸಂಪಾದನೆ ಮಾಡಿದ್ದು ನೋಡಿ ಇಷ್ಟು ಜನರ ಪ್ರೀತಿ ಸ್ನೇಹ". ಪ್ರತೀ ಭಾರಿ ಡಾಕ್ಟರ ಔಷಾದ ಚೀಟಿ ನೀಡಿದಾಗ ಅದನ್ನು ತಂದು ಕೊಡಲು ಹಲವು ಕೈಗಳು ಬರುತಿತ್ತು. ನೆನಪೇ ಇಲ್ಲ ಯಾರೆಲ್ಲ ಅದು ಅಂತ. ಹಲವರು ಕರೆ ಮಾಡುತಿದ್ದರು, ನನಗೆ ಗೊತ್ತಿತ್ತು ತಂದೆಯವರ ಕೊನೆಯ ಗಳಿಗೆಗಳು ಅದು ಅಂತ ಆದರೂ ಕರೆ ಮಾಡಿದವರಿಗೆಲ್ಲ ಪರವಾಗಿಲ್ಲ ಚೆನ್ನಾಗಿದ್ದಾರೆ ಅಂತ ಹೇಳಿ, ನಾನು ನನ್ನನ್ನೇ ಸಮಾದಾನ ಮಾಡುತ್ತಿದ್ದೆ. icu ಬಳಿ ಅಷ್ಟು ಜನರನ್ನು ನೋಡಿ ಡಾಕ್ಟರ ನನ್ನನ್ನು ಕರೆದು ನನ್ನ ಇಷ್ಟು ವರ್ಷದ ಅನುಭವದಲ್ಲಿ ಇಷ್ಟೊಂದು ಜನ ಸೇರಿದ್ದು ನೋಡುವುದು ಇದೆ ಮೊದಲು. ದಯವಿಟ್ಟು ಅವರನ್ನು ಆಸ್ಪತ್ರೆಯ ಹೊರಗೆ ಇರಲು ಹೇಳಿ ಅಂತ ಹೇಳಿದರು. ಆವಾಗ ನನಗೆ ನನ್ನ ತಂದೆಯ ಮೇಲೆ ಅಪಾರ ಗೌರವವ ಬಂತು . ಕೆಲವೊಮ್ಮೆ ನಾನು ತಂದೆಯವರನ್ನು ದೂರಿದ್ದಿದೆ ಕುಟುಂಬದವರಿಗೂ ಊರವರಿಗಾಗಿ ಯೋಚನೆ ಮಾಡಿ ನಮ್ಮನ್ನು ಮರೆತಿರಿ ಅಂತ, ಅವರು ನಮಗಾಗಿ ಮಾತ್ರ ಅಂತ ನೋಡಿದ್ದಲ್ಲಿ ಅಷ್ಟೊಂದು ಸೊತ್ತು ಸೇರಿಸಿದಬಹುದಿತ್ತು, ಇಂದು ಇಷ್ಟು ಕಷ್ಟಪಡುವ ಅಗತ್ಯ ಇರಲಿಲ್ಲ ಅಂತ. ಆದರೆ ಆ ದಿನ ತಿಳಿಯಿತು ಅವರು ಸೇರಿಸಿದ್ದ ಸೊತ್ತಿನ ಬಗ್ಗೆ. ಅದು ಬೆಲೆ ತೆರಲಾಗದ್ದು. ಜನರ ಪ್ರೀತಿ ಸ್ನೇಹ.
ಒಬ್ಬ ತಂದೆ ತನ್ನ ಮಕ್ಕಳಿಗೆ ಸಂಪಾದಿಸಿ ಕೊಡುವ ಅತ್ಯಂತ ಬೆಲೆಬಾಳುವ ಸ್ವತ್ತು ಸಮಾಜದಲ್ಲಿ ತಮ್ಮದೇ ಆದ ಅಸ್ತಿತ್ವ. ಇದು ಕೇವಲ ಒಂದು ಅಲಂಕಾರ ಮಾತಲ್ಲ. ನಾನು ಇಂದು ಅನುಭವಿಸುತ್ತಿರುವ ಸತ್ಯ. ಸಮಾಜದಲ್ಲಿ ನನ್ನನ್ನು ಗುರುತಿಸುವಂತೆ ಮಾಡಿದವರು ನನ್ನ ತಂದೆಯೇ ಅನ್ನುವುದನ್ನು ಈಗ ಅರಿತು ಕೊಳ್ಳುತ್ತಿದೇನೆ. ಕೆಲವು ಹೆಣ್ಣುಮಕ್ಕಳ ಮದುವೆಗೆ ಸಹಾಯ ಕೇಳಿ ನನ್ನ ಬಳಿ ಬಂದವರೆಲ್ಲ ಒಂದು ಮಾತು ಹೇಳುತ್ತಿದ್ದರು "ನಿನ್ನ ತಂದೆ ಇರುತ್ತಿದ್ದರೆ ನನಗೆ ಇಷ್ಟು ಕಷ್ಟ ಇರುತ್ತಿರಲಿಲ್ಲ ನನಗೆ" ಅಂತ. ನನಗೆ ನನ್ನ ತಂದೆಯ ಮೇಲೆ ಅಸೂಯೆ ಆಗುತಿತ್ತು ಅವಾಗಲೆಲ್ಲ. ತನ್ನಿಂದ ಸಹಾಯ ಮಾಡಲಾಗದಿದ್ದರೂ ಸಹಾಯ ಮಾಡಲು ಸಾಮರ್ತ್ಯ ಇರುವವರನ್ನು ತೋರಿಸಿಕೊದುತ್ತಿದ್ದರು ಅವರು.
ಇನ್ನೂ ನನ್ನ ಒಳಗಿರುವ ನೋವು ಒಂದೇ. ನಾನು ತಂದೆಯರಲ್ಲಿ ಮಾತನಾಡಿದ್ದು ಬಹಳ ಕಮ್ಮಿ ಅಂತ. ಮಾತನಾಡಲು ಹೇಳಲು ಹಲವು ವಿಷಯಗಲಿತ್ತು. ಇನ್ನೊಮ್ಮೆ ಹೇಳೋಣ ಅಂತ ಹೇಳದೆ ಇದ್ದದು. ಅವೆಲ್ಲ ಅವಾಗಲೇ ಹೇಳಿ ಮನಸ್ಸಿನ ಭಾರ ಇಳಿಸಬೇಕಿತ್ತು,. ಬೇರೆ ಸಮಯ ಅಂತ ಮುಂದೂಡಿ ಈಗ ಪಶ್ಚಾತಾಪ ಪಡುತ್ತಿದ್ದೇನೆ. ಇನ್ನೂ ಒಮ್ಮೆಯೂ ಹೇಳೋಕೆ ಆಗದು ಅಂತ. ಇದು ನನ್ನ ಮಾತ್ರ ಅಲ್ಲ ಹೀಗೆ ಹತ್ತಿರದವರನ್ನ ಕಳೆದುಕೊಂಡ ಎಲ್ಲರ ಅಳಲು. ನೀವೂ ನಿಮ್ಮ ತಂದೆ-ತಾಯ ಜೊತೆ ಹೇಳಲು ಬಿಟ್ಟ ಮಾತುಗಳನ್ನು ಹೇಳಲು ಸಮಯವನ್ನು ಕಾಯಬೇಡಿ. ನಾಳೆ ಅದು ಮರೆಯಲಾಗದ ನೋವಾಗಿ ಉಳಿಯಬಹುದು.