ಮಲೇರಿಯಾ: ಇತಿಹಾಸದ ಪುಟಗಳಲ್ಲಿ ಸಾಗಿ ಬಂದ ಹಾದಿ...
ಈ ಹಿಂದೆ ಪ್ರಕಟಿಸಿದ್ದ 'ಪ್ಲೇಗ್’ ರೋಗದ ಇತಿಹಾಸವನ್ನು ಓದಿದ ಬಹುತೇಕರು ಒಂದು ಕಾಲದಲ್ಲಿ ಮಾನವ ಜನಾಂಗವನ್ನು ಬಹುವಾಗಿ ಕಾಡಿದ ಮಲೇರಿಯಾ, ಸ್ಪಾನಿಷ್ ಫ್ಲೂ ಬಗ್ಗೆ ಮಾಹಿತಿ ನೀಡಬೇಕು ಎನ್ನುವ ಆಶಯವನ್ನು ವ್ಯಕ್ತ ಪಡಿಸಿದ್ದಾರೆ. ಈ ಕಾರಣದಿಂದ ಮಲೇರಿಯಾ ರೋಗದ ಇತಿಹಾಸವನ್ನು ತಿಳಿಸುವ ಪುಟ್ಟ ಪ್ರಯತ್ನವನ್ನು ಮಾಡುತ್ತಿರುವೆ.
ನಿಮಗೆಲ್ಲಾ ತಿಳಿದೇ ಇರುವಂತೆ ಮಲೇರಿಯಾ ರೋಗ ಬರಲು ಪ್ರಮುಖ ಕಾರಣ ಸೊಳ್ಳೆಯ ಕಡಿತ. ಆದರೆ ಸೊಳ್ಳೆ ಕಡಿದವರಿಗೆಲ್ಲಾ ಮಲೇರಿಯಾ ಬರುವುದಿಲ್ಲ. ಏಕೆಂದರೆ ಒಂದು ವಿಧದ ಸೊಳ್ಳೆಯಲ್ಲಿ ಮಾತ್ರ ಮಲೇರಿಯಾ ಹರಡುವ ರೋಗಾಣುಗಳು ಬೆಳೆಯುತ್ತವೆ. ಇಲ್ಲಿ ಸೊಳ್ಳೆ ಕೇವಲ ವಾಹಕ ಮಾತ್ರ. ಅಂದರೆ ಪೋಸ್ಟ್ ಮ್ಯಾನ್ ತರಹ. ಪ್ರತೀ ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಈ ಮಲೇರಿಯಾ ಈಗ ಅಷ್ಟಾಗಿ ಹೆದರಿಕೆ ಹುಟ್ಟಿಸುತ್ತಿಲ್ಲ. ಬದಲು ಅದರ ಸೋದರ ಸಂಬಂಧಿಗಳಾದ ಡೆಂಗ್ಯೂ, ಚಿಕುನ್ ಗುನ್ಯಾ ಇತ್ಯಾದಿಗಳು ಹೆದರಿಕೆ ಹುಟ್ಟಿಸುತ್ತಿವೆ.
ಪ್ಲೇಗ್ ರೋಗದ ಹರಡುವಿಕೆ ಹೇಗೆ ಹಲವಾರು ದೇಶಗಳಲ್ಲಿ ಪರಿವರ್ತನೆಯನ್ನು ತಂದಿತೋ ಅದೇ ರೀತಿ ಮಲೇರಿಯಾ ಸಹ ಮಾಡಿತು. ಶಕ್ತಿ ಸಾಮರ್ಥ್ಯದಿಂದ ಬಗ್ಗದ ಎಷ್ಟೋ ಸಾಮ್ರಾಜ್ಯಗಳು ಈ ರೋಗದ ಕಾರಣದಿಂದ ನಿರ್ನಾಮವಾಗಿ ಹೋದವು. ವರ್ಣಭೇಧ ನೀತಿ ಅಂದರೆ ಕಪ್ಪು-ಬಿಳಿ ಬಣ್ಣದ ಜನರ ನಡುವಿನ ಸಂಘರ್ಷ ಇನ್ನಷ್ಟು ಹೆಚ್ಚಾಗಲು ಈ ರೋಗ ಕಾರಣವಾಯಿತು. ಪ್ರಾಚೀನ ರೋಮ್ ನಲ್ಲಿದ್ದ ಜವುಗು ಪ್ರದೇಶಗಳು ಸೊಳ್ಳೆಗಳ ಸಂತಾನಾಭಿವೃದ್ಧಿಗೆ ಅನುಕೂಲವಾಗಿದ್ದವು. ಈ ಕಾರಣದಿಂದ ಇಂತಹ ಪ್ರದೇಶಗಳಿಗೆ ಶತ್ರುಗಳ ಆಕ್ರಮಣ ಕಡಿಮೆಯಾಗಿತ್ತು. ಏಕೆಂದರೆ ಆಕ್ರಮಣ ಮಾಡಿದವರಿಗೆ ಮಲೇರಿಯಾ ರೋಗ ಕಟ್ಟಿಟ್ಟ ಬುತ್ತಿಯಾಗಿತ್ತು. ಆ ಸಮಯ ಈ ರೋಗಕ್ಕೆ ನಿರ್ದಿಷ್ಟವಾದ ಔಷಧಿಯೂ ಇರಲಿಲ್ಲ. ಈ ಕಾರಣದಿಂದಾಗಿ ರೋಮ್ ಸಾಮ್ರಾಜ್ಯ ಬಹುಬೇಗನೇ ಬೆಳೆಯಿತು.
ಪ್ರಕೃತಿಯ ಸಹಜ ಕಾರಣಗಳಿಂದಾಗಿ ಕಪ್ಪು ಜನರಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿತ್ತು. ಈ ಕಾರಣದಿಂದಾಗಿ ಆಫ್ರಿಕಾದ ಮೂಲ ನಿವಾಸಿಗಳಲ್ಲಿ ಮಲೇರಿಯಾದ ರೋಗಾಣುವಿನ ಪ್ರಭಾವ ಬಹಳ ದುರ್ಬಲವಾಗಿರುತ್ತಿತ್ತು. ಇದರಿಂದಾಗಿ ಯುರೋಪಿನ ವರ್ತಕರು ಕಪ್ಪು ವರ್ಣೀಯರನ್ನು ತಮ್ಮ ಗುಲಾಮರನ್ನಾಗಿಸಿಕೊಂಡರು. ಸೊಳ್ಳೆಗಳು ತುಂಬಿಕೊಂಡಿರುತ್ತಿದ್ದ ತಮ್ಮ ಕಬ್ಬು ಹಾಗೂ ತಂಬಾಕು ಬೆಳೆಯ ತೋಟಗಳಲ್ಲಿ ಈ ಗುಲಾಮರನ್ನು ಕೆಲಸಕ್ಕೆ ಹಚ್ಚಿದರು. ಯುರೋಪಿಯನ್ನರಿಗೆ ಹೋಲಿಸಿದರೆ ಆಫ್ರಿಕಾದ ಮೂಲ ನಿವಾಸಿಗಳು ಮಲೇರಿಯಾ ರೋಗಕ್ಕೆ ಕಡಿಮೆ ತುತ್ತಾಗುತ್ತಿದ್ದರು. ಈ ಗುಲಾಮಗುರಿ ಪದ್ಧತಿಯಿಂದಾಗಿ ಆಳುವವ ಮತ್ತು ಆಳು ಎನ್ನುವ ಬಹುದೊಡ್ದ ಕಂದಕವು ಮಾನವರ ನಡುವೆ ನಿರ್ಮಾಣವಾಯಿತು. ಇದಕ್ಕೆ ದೊಡ್ದ ಕಾರಣ ಕಪ್ಪು-ಬಿಳಿ ಎಂಬ ವರ್ಣ.
ಮಲೇರಿಯಾ ರೋಗಕ್ಕೆ ಸರಿಯಾದ ಔಷಧದ ಸಂಶೋಧನೆ ಆಗಿರದೇ ಇದ್ದರೂ ನಾಲ್ಕು ನೂರು ವರ್ಷಗಳ ಹಿಂದೆ ಈ ಮಾರಕ ರೋಗದಿಂದ ರಕ್ಷಣೆ ಪಡೆಯಲು ಬೇಕಾದ ಮದ್ದನ್ನು ಆಂಡೀಸ್ ನ ಸಿಂಕೋನಾ ಎಂಬ ಜಾತಿಯ ಮರದಿಂದ ಪಡೆದುಕೊಳ್ಳುತ್ತಿದ್ದರು. ಈ ಸಿಂಕೋನಾ ಮರದ ತೊಗಟೆಯಲ್ಲಿದ್ದ ಕ್ವಿನೈನ್ ಎಂಬ ವಸ್ತುವನ್ನು ಮಲೇರಿಯಾ ರೋಗಕ್ಕೆ ಔಷಧಿಯಾಗಿ ಬಳಸಲು ಪ್ರಾರಂಭಿಸಿದರು. ಆಂಡೀಸ್ ಗೆ ಮತಪ್ರಚಾರಕ್ಕೆ ತೆರಳಿದ್ದ ಪಾದ್ರಿಗಳು ಅಲ್ಲಿಂದ ಈ ಔಷಧವನ್ನು ಗುಟ್ಟಾಗಿ ಯುರೋಪಿಗೆ ತೆಗೆದುಕೊಂಡು ಬಂದರು. ಆದರೆ ತಾವು ತಂದ ಔಷಧದ ಮೂಲವನ್ನು ಯಾರ ಬಳಿಯೂ ಹೇಳದೇ ಗುಟ್ಟಾಗಿಟ್ಟರು. ಮಲೇರಿಯಾ ಪೀಡಿತರಾದ ಶ್ರೀಮಂತರು, ರಾಜ ಮನೆತನದವರಿಂದ ಅಪಾರ ಹಣ ಮತ್ತು ಬಂಗಾರವನ್ನು ಪಡೆದುಕೊಂಡು ಈ ಔಷಧಿಯನ್ನು ನೀಡುತ್ತಿದ್ದರು. ಹೀಗೆ ಸಂಗ್ರಹಿಸಿದ ಹಣವನ್ನು ಅವರು ತಮ್ಮ ಚರ್ಚ್ ನ ನಿರ್ಮಾಣ ಮತ್ತಿತರ ಕೆಲಸಕ್ಕೆ ಬಳಸಿಕೊಂಡರು. ಪಾದ್ರಿಗಳ ನಿಯಂತ್ರಣದಲ್ಲಿದ್ದ ಈ ಔಷಧಿಯು ಚರ್ಚ್ ಗಳನ್ನು ಶ್ರೀಮಂತಗೊಳಿಸಿದ್ದಷ್ಟೇ ಅಲ್ಲದೇ ಅವುಗಳು ಪರ್ಯಾಯ ಆಡಳಿತ ಕೇಂದ್ರವಾಗಿ ಮಾರ್ಪಾಡಾಗಲು ಸಹಕಾರಿಯಾಯಿತು.
ಹಲವಾರು ಸಮಯ ಇದೇ ರೀತಿಯ ಔಷಧೋಪಚಾರಗಳು ನಡೆದವು. ಆದರೆ ೧೮೮೦ರ ಸಮಯದಲ್ಲಿ ರೊನಾಲ್ಡ್ ರಾಸ್ ಎಂಬವರು ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಇಂಗ್ಲೆಂಡ್ ಇಲ್ಲಿಂದ ವೈದ್ಯ ವೃತ್ತಿಯನ್ನು ಕಲಿತು ಭಾರತಕ್ಕೆ ಬಂದಿಳಿದರು. ರೊನಾಲ್ಡ್ ರಾಸ್ ತಮ್ಮ ವೃತ್ತಿ ಜೀವನವನ್ನು ಆಗಿನ ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದ ಬೆಂಗಳೂರಿನಿಂದ ಪ್ರಾರಂಭಿಸಿದರು. ಇವರು ಮಲೇರಿಯಾ ಹರಡುವಿಕೆಯ ಬಗೆಗಿನ ತಮ್ಮ ಸಂಶೋಧನೆಯನ್ನು ಬಹಳ ತೀವ್ರಗತಿಯಲ್ಲಿ ಮುಂದುವರೆಸಿದರು. ಏಕೆಂದರೆ ಮಲೇರಿಯಾ ಕಾಯಿಲೆ ತಗುಲಿದಾಗ ಸಂಭವಿಸುವ ಸಾವಿನಿಂದ ರೋಸ್ ಬಹಳಷ್ಟು ನೊಂದಿದ್ದರು. ೧೮೮೩ರಲ್ಲಿ ನಿಂತ ನೀರಿನ ಸಂಪರ್ಕಕ್ಕೆ ಸೊಳ್ಳೆಗಳು ಬಾರದೇ ಇದ್ದಲ್ಲಿ ಅವುಗಳ ಸಂಖ್ಯೆಯನ್ನು ನಿಯಂತ್ರಿಸಬಹುದು ಎಂಬ ವಿಷಯ ಅವರಿಗೆ ತಿಳಿಯಿತು. ಏಕೆಂದರೆ ಸೊಳ್ಳೆ ತನ್ನ ಮೊಟ್ಟೆಯನ್ನು ಇಡುತ್ತಿದ್ದದ್ದು ಇದೇ ನಿಂತ ನೀರಿನಲ್ಲಿ. ಕೆಲವೊಂದು ಅನಿವಾರ್ಯ ಕಾರಣಗಳಿಗಾಗಿ ರೋಸ್ ತಮ್ಮ ಪ್ರಯೋಗಗಳ ನಡುವೆಯೇ ಲಂಡನ್ ಗೆ ಮರಳಬೇಕಾಯಿತು. ಆದರೆ ತಮ್ಮ ಮಲೇರಿಯಾ ಬಗೆಗಿನ ಸಂಶೋಧನೆಯನ್ನು ಮುಂದುವರೆಸಲು ಭಾರತವೇ ಸರಿಯಾದ ಜಾಗ ಎಂದು ಮನಗಂಡು ಮತ್ತೆ ಅವರು ೧೮೯೫ರಲ್ಲಿ ಮರಳಿ ಬಂದರು. ಆದರೆ ಈ ಬಾರಿ ಅವರು ಆಯ್ಕೆ ಮಾಡಿದ ಸ್ಥಳ ಸಿಕಂದರಾಬಾದ್. ರೋಸ್ ಸೊಳ್ಳೆಯು ಮಲೇರಿಯಾ ರೋಗಾಣುಗಳನ್ನು ಹೊತ್ತೊಯ್ಯುವ ವಾಹಕಗಳು ಮಾತ್ರ ಎಂದು ತಮ್ಮ ಪ್ರಯೋಗಗಳಿಂದ ಕಂಡುಕೊಂಡರು. ೧೮೯೭ರಲ್ಲಿ ಈ ರೋಗಾಣುಗಳು ಡ್ಯಾಪಲ್ಡ್ ವಿಂಗ್ಸ್ ಎಂಬ ಜಾತಿಯ ಸೊಳ್ಳೆಗಳಲ್ಲಿ ಮಾತ್ರ ಕಂಡು ಬರುತ್ತವೆ ಎಂದು ಕಂಡುಕೊಂಡರು. (ನಂತರದ ದಿನಗಳಲ್ಲಿ ಈ ಸೊಳ್ಳೆಗಳು ಅನಾಫಿಲೀಸ್ ಪ್ರಭೇಧಕ್ಕೆ ಸೇರಿದುವುಗಳೆಂದು ಕಂಡುಹಿಡಿಯಲಾಯಿತು).
ಎರಡನೇ ಮಹಾಯುದ್ಧದ ಸಮಯದಲ್ಲಿ ಸಿಂಕೋನಾ ಮರದ ತೊಗಟೆಯಿಂದ ಕ್ವಿನೈನ್ ನನ್ನು ಬಹಳ ಯಶಸ್ವಿಯಾಗಿ ಬೇರ್ಪಡಿಸಿ ಮಲೇರಿಯಾ ರೋಗಕ್ಕೆ ಔಷಧಿಯಾಗಿ ಬಳಸಲಾಗುತ್ತಿತ್ತು. ಆಗ ಲಭ್ಯವಿದ್ದ ಕ್ವಿನೈನ್ ನ ಬಹುಪಾಲು ಜರ್ಮನಿ ಮತ್ತು ಜಪಾನ್ ದೇಶಗಳಲ್ಲಿತ್ತು. ಮಹಾಯುದ್ಧದ ಸಮಯದಲ್ಲಿ ಅಮೇರಿಕಾದ ಸೈನಿಕರು ಮಲೇರಿಯಾದಿಂದ ಬಳಲುತ್ತಿದ್ದರೆ ಜಪಾನ್ ದೇಶದವರು ಮದ್ದು ನೀಡಲು ಹಿಂದೆ ಮುಂದೆ ನೋಡುತ್ತಿದ್ದರು. ಇದೂ ಅಮೇರಿಕಾಗೆ ಜಪಾನ್ ದೇಶದ ಮೇಲೆ ದ್ವೇಷ ಬೆಳೆಯಲು ಕಾರಣವಾಗಿರಬಹುದು.
ಡಿಡಿಟಿ ಎಂಬ ಕೀಟನಾಶಕವನ್ನು ಕಂಡು ಹಿಡಿದ ಬಳಿಕ ಸೊಳ್ಳೆಗಳ ಸಂಖ್ಯೆಯ ಮೇಲೆ ನಿಯಂತ್ರಣ ಸಾಧ್ಯವಾಯಿತು. ಮಲೇರಿಯಾ ಪ್ರಕರಣಗಳು ಬಹಳ ಕಡಿಮೆಯಾದುವು. ಆದರೆ ಈ ಡಿಡಿಟಿ ಎಂಬ ಕೀಟನಾಶಕದ ವ್ಯಾಪಕ ಬಳಕೆಯು ನಮ್ಮ ಆಹಾರದ ಸರಪಳಿಯನ್ನು ಬಾಧಿಸಲು ಪ್ರಾರಂಭಿಸಿತು. ಹಲವಾರು ಅಡ್ಡಪರಿಣಾಮಗಳು ಗೋಚರವಾಗುತ್ತಿದ್ದಂತೆ ಡಿಡಿಟಿಯನ್ನು ನಿಷೇಧಿಸಲಾಯಿತು. ಈಗ ಮಲೇರಿಯಾ ರೋಗಕ್ಕೆ ಸೂಕ್ತವಾದ ಚುಚ್ಚುಮದ್ದು, ಮಾತ್ರೆಗಳು ಲಭ್ಯವಿರುವುದರಿಂದ ಅದು ಮೊದಲಿನಂತೆ ಭಯಂಕರ ರೋಗವಾಗಿ ಉಳಿದಿಲ್ಲ.
ಕೊನೇ ಮಾಹಿತಿ: ಸೊಳ್ಳೆಗಳಲ್ಲಿ ಹೆಣ್ಣು ಸೊಳ್ಳೆಗಳು ಮಾತ್ರ ಮಾನವನ ರಕ್ತವನ್ನು ಹೀರುತ್ತವೆ ಎಂಬ ಸತ್ಯ ಬಹಳಷ್ಟು ಮಂದಿಗೆ ತಿಳಿದಿಲ್ಲ. ಏಕೆಂದರೆ ರಕ್ತ ಸೊಳ್ಳೆಗಳ ಆಹಾರವಲ್ಲ.. ಅವುಗಳು ಹೂವಿನ ಮಕರಂದವನ್ನು ಸೇವಿಸಿ ಹೊಟ್ಟೆತುಂಬಿಸಿಕೊಳ್ಳುತ್ತವೆ. ಹಾಗಾದರೆ ಮಾನವನಿಗೆ ಚುಚ್ಚಿ ರಕ್ತವನ್ನು ಹೀರುವುದಾದರೂ ಏಕೆ? ಇದಕ್ಕೆ ಕಾರಣ ನಮ್ಮ ರಕ್ತದಲ್ಲಿರುವ ಪ್ರೋಟೀನ್ ಸೊಳ್ಳೆಯ ಮೊಟ್ಟೆಯಲ್ಲಿನ ಭ್ರೂಣದ ಬೆಳವಣಿಗೆಗೆ ಅಗತ್ಯವಾಗಿದೆ. ಈ ಕಾರಣದಿಂದ ಹೆಣ್ಣು ಸೊಳ್ಳೆಗಳು ಮಾತ್ರ ರಕ್ತವನ್ನು ಹೀರುತ್ತವೆ. ಇದಕ್ಕಾಗಿಯೇ ಸೊಳ್ಳೆಗಳಿಂದ ಹರಡುವ ಎಲ್ಲಾ ರೋಗಗಳ ವಾಹಕ ಹೆಣ್ಣು ಆಗಿರುತ್ತವೆ. (ಉದಾ: ಫಿಮೇಲ್ ಅನಾಫಿಲೀಸ್)
(ಆಧಾರ) ಚಿತ್ರದಲ್ಲಿ : ತಮ್ಮ ಪ್ರಯೋಗಾಲಯದಲ್ಲಿ ರೊನಾಲ್ಡ್ ರಾಸ್
ಚಿತ್ರ ಕೃಪೆ: ಅಂತರ್ಜಾಲ ತಾಣ