ಮಾನವೀಯ ಗುಣ

ಮಾನವೀಯ ಗುಣ

ನನಗೆ ಯಥಾರ್ಥವಾಗಿ ಯಾವಾಗಲೂ ಕಾಡುವ ಪ್ರಶ್ನೆ ಇದು. ಬಹುಶಃ ನನ್ನಂತೆ ಹೆಚ್ಚು ಮಾತನಾಡ ಬಯಸುವ ಗುಣವುಳ್ಳವರೆಲ್ಲರಿಗೂ ಈ ಪ್ರಶ್ನೆ ಕಾಡಿಯೇ ಕಾಡುತ್ತದೇನೋ, ಗೊತ್ತಿಲ್ಲ.

ನಾನು ಹೇಳ‌ ಬಯಸಿದ ವಿಷಯವೇನೆಂದರೆ ಕೆಲವರನ್ನು -  ಅಂದರೆ ನನಗೆ ತೀರಾ ಪರಿಚಯಸ್ಥರನ್ನು -  ನಾನೇ ಕರೆದು ಮಾತನಾಡಿಸಬೇಕೇ ಹೊರತು ಅವರಾಗಿ  ಎಂದೂ‌ ಕೂಡಾ ನನ್ನ ಹತ್ತಿರ‌ ಬಂದು ಮಾತನಾಡುವುದೂ ಇಲ್ಲ, ಮುಖದಲ್ಲೊಂದು ಮುಗುಳ್ನಗುವನ್ನೂ‌ ತೋರುವುದಿಲ್ಲ! ಇಂತಹವರು ಕೆಲವರು ಮಾತ್ರ ಅಂತ ಪುನಃ ಹೇಳಬೇಕಾಗಿಲ್ಲ! ಇಂತಹ ಸಣ್ಣತನ ಹೊತ್ತವರಲ್ಲಿ ನನ್ನ ಹತ್ತಿರದ ಸಂಬಂಧಿಕರೂ ಇಲ್ಲದಿಲ್ಲ!‌ ಅಂತವರು ನನಗಿಂತ ಹಿರಿಯರಿದ್ದರೆ ಕೆಲವೊಮ್ಮೆ ನಾನೇ ಮೊದಲಾಗಿ ಮಾತನಾಡಿಸುವ ಔದಾರ್ಯ ತೋರುತ್ತೇನೆ! 

ನಾನು ಇತ್ತೀಚೆಗಿನವರೆಗೂ ಇಂತವರಿಗೆಲ್ಲಾ ನನ್ನನ್ನು ಕರೆದು ಮಾತನಾಡಿಸುವುದಕ್ಕೆ, ನನ್ನನ್ನು ಕಂಡಾಗ ಮುಗುಳ್ಗುವುದಕ್ಕೆ ಅವರೊಳಗಿನ ಇಗೊ (ego) ತುಂಬಾ ಕಾಡುತ್ತಿದ್ದಿರಬಹುದು ಅಂತಂದುಕೊಂಡಿದ್ದೆ. ಆದರೆ ಮೊನ್ನೆ ಒಂದು ಮದುವೆ ಸಮಾರಂಭದಲ್ಲಿ ಅಂತವರೊಬ್ಬರ ಮಗನೂ ಕಾಣ ಸಿಕ್ಕಿದ, ಮಗಳೂ ಕಾಣ ಸಿಕ್ಕಿದಳು. ಅವರಿಬ್ಬರೂ ನನ್ನ ಅರ್ಧ ವಯಸ್ಸಿನವರು. ಆ ಇಬ್ಬರೂ ಥೇಟ್ ಅಪ್ಪನ ಹಾಗೇ ಮಾರಾಯ್ರೆ. ಅವರ ಹತ್ತಿರ‌ ಹೋಗಿ‌ ನಾನು ಕುಳಿತುಕೊಂಡರೂ ಮುಖ ಮುಖ ನೋಡ್ತಾರೆ ಹೊರತು ಮುಖದಲ್ಲಿ ನಗುವಿಲ್ಲ! ಕೊನೆಗೆ  ನನಗೇ ಮುಜುಗರವಾಗಿ ತುಟಿಯ ತುದಿಯಲ್ಲಿ‌ ನಗುವನ್ನು‌ ತಂದುಕೊಂಡು "ಮನೆಯಲ್ಲೆಲ್ಲಾ‌ ಸೌಖ್ಯವಾ?" ಅಂತ ಪ್ರಶ್ನಿಸಿ ಮಾತು ಆರಂಭಿಸಿದೆ! ಆಗ ಭೂಮಿಯಿಂದ ತಾವೇ ನನಗಿಂತ ಒಂದು ಅಡಿ ಮೇಲಿದ್ದೇವೆ ಎಂಬ‌ ಮುಖಭಾವದೊಂದಿಗೆ "ಹಾಂ...ಎಲ್ಲಾ ಸೌಖ್ಯ!" ಆಮೇಲೇ ಮತ್ತೆ ಮೌನ....ಮಾತೇ ಇಲ್ಲ.....ನಾನು ಬೇಕೆಂದೇ ಅವರನ್ನೇ ನೋಡ‌ತೊಡಗಿದೆ.  ತುಂಬಾ‌ ಹೊತ್ತಿನ‌ ನಂತರ‌ ಅಂಗಿಯನ್ನು ಸರಿಮಾಡಿಕೊಂಡು ಬೆನ್ನು ನೆಟ್ಟಗಾಗಿಸಿ ಕುಳಿತು "ನೀವೆಲ್ಲಾ ಹುಷಾರಿದ್ದೀರಾ ಅಂಕಲ್?!" ಎಂಬ ಪ್ರಶ್ನೆ ಮುತ್ತು‌ ಉದುರಿದಂತೆ ಉದುರಿ ಬಿದ್ದವು! ನಾನೀಗ ಮುಗುಳ್ನಕ್ಕು ಉತ್ತರಿಸುವ ಕಾಲ..... ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ ಸಂಸ್ಕೃತಿಯ ಶಿಕಾರಿ ನಿರಂತರ ಅಲ್ಲವೇ?!

-ಮೌನಮುಖಿ (ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ - ಉಡುಪಿ) 

ಚಿತ್ರ ಕೃಪೆ: ಇಂಟರ್ನೆಟ್ ತಾಣ