ಮಿಜೆನಿಯವರ ಸಣ್ಣ ಕಥೆಗಳು
ಅಲ್ಬೇನಿಯಾ ದೇಶದ ಖ್ಯಾತ ಸಾಹಿತಿ ಮಿಲ್ಲೊಶ್ ಜೆರ್ಜ್ ನಿಕೊಲ್ಲಾ ಇವರ ಕಾವ್ಯನಾಮವೇ ಮಿಜೆನಿ. ಇವರು ಬರೆದದ್ದು ಅಲ್ಬೇನಿಯಾ ಭಾಷೆಯಲ್ಲಿ. ಇವರು ಬರೆದ ಪುಟ್ಟ ಕಥೆಗಳ ಸಂಗ್ರಹವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂ ನಂಜುಂಡ ಸ್ವಾಮಿ ಇವರು. ಅಲ್ಬೇನಿಯಾ ಭಾಷೆಯನ್ನು ಅಲ್ಬೇನಿಯಾ ದೇಶದೊಂದಿಗೆ ಅದರ ನೆರೆಯ ದೇಶಗಳಾದ ಕೊಸೊವೊ, ಗ್ರೀಸ್ ಮತ್ತು ಮೆಸೆಡೊನಿಯಾದಲ್ಲಿ ವ್ಯಾಪಕವಾಗಿ ಬಳಸುತ್ತಾರೆ. ಈ ಭಾಷೆಯು ಇಂಡೋ ಯುರೋಪಿಯನ್ ಭಾಷಾ ಪಂಗಡಕ್ಕೆ ಸೇರಿದೆ. ಅಲ್ಬೇನಿಯಾ ಭಾಷೆಯಲ್ಲಿ ಮೊದಲ ಪುಸ್ತಕವು ೧೫೫೫ರಲ್ಲಿ ಬರೆಯಲಾಯಿತು ಎಂದು ದಾಖಲೆಗಳು ಹೇಳುತ್ತವೆ.
ಮಿಜೆನಿಯವರ ಜೀವಿತಾವಧಿಯಲ್ಲಿ ಅವರ ಯಾವುದೇ ಪುಸ್ತಕಗಳು ಪ್ರಕಟವಾಗದೇ ಹೋದರೂ, ಅವರು ಬರೆದ ಬರಹಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಪ್ರಿಯಗೊಂಡವು. ಈ ರೀತಿಯಾಗಿ ಅವರ ಕವನ-ಕಥೆಗಳು ಮಹಾನ್ ಯಶಸ್ಸು ಸಾಧಿಸಿದವು. ಮಿಜೆನಿಯವರು ನವ್ಯ ಅಲ್ಬೇನಿಯಾದ ಸಾಹಿತ್ಯಕ್ಕೆ ಮಾರ್ಗ ಹಾಕಿಕೊಟ್ಟರು. ಆದರೆ ಅವರ ಸಾಹಿತ್ಯವನ್ನು ಸರಕಾರ ಚಿಗುರಿದ್ದಾಗಲೇ ಚಿವುಟಿ ಹಾಕಿತ್ತು. ಅವರ ಬರಹಗಳನ್ನು ದಮನಿಸಲು ಕಮ್ಯೂನಿಷ್ಟ್ ಸರಕಾರ ತಯಾರಾಗಿತ್ತು. ಆದರೆ ಮಿಜೆನಿಯವರು ತಮ್ಮ ೨೬ನೇ ವಯಸ್ಸಿನಲ್ಲೇ (೧೯೧೧-೧೯೩೮) ನಿಧನಹೊಂದಿದರು. ಬಹುಷಃ ಅವರು ಅಲ್ಪಾಯುಷಿಯಾಗದೇ ಇದ್ದಿದ್ದರೆ ಅಂದಿನ ಸರಕಾರ ಅವರನ್ನು ಕಾರಾಗೃಹದಲ್ಲಿರಿಸಿ ಜೀವನಪರ್ಯಂತ ಜೈಲು ಊಟ ಮಾಡುವಂತೆ ಮಾಡುತ್ತಿತ್ತು.
ಅಲ್ಬೇನಿಯಾ ಮತ್ತು ಅಮೇರಿಕಾದ ವಿದ್ವಾಂಸರಾದ ಅರಿಶಿ ಫಿಫಾ ಅವರು ಮಿಜೆನಿಯವರನ್ನು ಕಟುವಾಗಿ ವಿಮರ್ಶಿಸುತ್ತಾ “ಹುಟ್ಟಿದ್ದು ಅಲ್ಬೇನಿಯಾದ ಸ್ಲಾವ್ ಮೂಲದ ಕುಟುಂಬದಲ್ಲಿ. ಓದಿ-ಬುದ್ಧಿ ಪಡೆದದ್ದು ಸ್ಲಾವ್ ಸಂಸ್ಕೃತಿಯಲ್ಲಿ. ಆತ ಅಲ್ಬೇನಿಯಾ ಮತ್ತು ಅಲ್ಬೇನಿಯನ್ ಸಾಹಿತ್ಯಕ್ಕೆ ಸಂಪರ್ಕ ಪಡೆದದ್ದು ದೊಡ್ಡವನಾದ ಮೇಲೆ. ಆತ ಮನೆಯಲ್ಲಿ ಮಾತಾಡುತ್ತಿದ್ದ ಭಾಷೆ ಸರ್ಬೊ-ಕ್ರೊಯೇಷಿಯನ್ ಮತ್ತು ಸೆಮಿನರಿಯಲ್ಲಿ ಆತ ಕಲಿತದ್ದು ರಷ್ಯನ್ ಭಾಷೆ. ಆತನಿಗೆ ಅಲ್ಬೇನಿಯನ್ ಭಾಷೆ ಚೆನ್ನಾಗಿ ಗೊತ್ತಿರಲಿಲ್ಲ. ಆತನ ಬರವಣಿಗೆಗಳಲ್ಲಿ ತಪ್ಪುಗಳ ಹೊಳೆಯೇ ಹರಿದಿದೆ. ಪ್ರಾಥಮಿಕ ಹಂತದ ತಪ್ಪುಗಳೂ ಇವೆ. ಆತನ ಅಕ್ಷರಗಳು ನಿಜವಾದ ಅಲ್ಬೇನಿಯನ್ ಗಿಂತ ಬಹಳ ದೂರ" ಎಂದಿದ್ದಾರೆ. ಆದರೆ ಈ ತರಹದ ಯಾವುದೇ ಟೀಕೆಗಳಿಗೆ ಮಿಜೆನಿ ಸೊಪ್ಪು ಹಾಕದೇ ಬರೆದರು. ಜನಪ್ರಿಯತೆಯನ್ನು ಗಳಿಸಿದರು.
ಈ ಕೃತಿಯಲ್ಲಿ ಮಿಜೆನಿಯವರ ೧೬ ಪುಟ್ಟ ಕಥೆಗಳಿವೆ. ಮಿಜೆನಿಯವರ ಕಥೆಗಳಲ್ಲಿ ನೋವು ಹೂರಣವಾಗಿದೆ ಮತ್ತು ಸಮಾಜದ ಮುಖವಾಡದ ಹರಣವಾಗಿದೆ. ಈ ಕಥೆಗಳಲ್ಲಿ ಪಾತ್ರಗಳಿಗೆ ಕೆಲವೊಮ್ಮೆ ಮುಖವೇ ಇರುವುದಿಲ್ಲ. ಹಲವು ಬಾರಿ ಹೆಸರೇ ಇರುವುದಿಲ್ಲ. ಆದರೆ ನೋವಿನಿಂದ ತುಂಬಿದ ಹೃದಯವಂತ ಪಾತ್ರ ಇಲ್ಲದ್ದಿಲ್ಲ. ಇಲ್ಲಿ ಕಥೆಗಳಲ್ಲಿನ ಪಾತ್ರಗಳೊಂದಿಗೆ ಕಥೆಗಾರನೂ ದುಃಖವನ್ನೂ-ನೋವನ್ನೂ ಅನುಭವಿಸಿದ್ದು ಎದ್ದು ಕಾಣುತ್ತದೆ. ಅವರ ಕಥೆಗಳಲ್ಲಿ ಬಾಯಿ ಮುಚ್ಚಿಕೊಂಡು ವಾಸ್ತವದ ನೋವನ್ನುಣ್ಣುವ ಪಾತ್ರಗಳು ಕಾಣುತ್ತವೆ. ಆ ಪಾತ್ರಗಳು ತಮ್ಮ ಬಂಡಾಯವನ್ನೂ ಸಹ ಸಹನೆಯಲ್ಲಿ ಮತ್ತು ದವಡೆ ಬಿಗಿಹಿಡಿದು ನಿಂತುಕೊಂಡು, ಇಲ್ಲವೇ ಕಣ್ಣೀರ ಸುರಿಸಿ, ತೋರಿಸುತ್ತವೆ. ಆ ಯಾವ ಪಾತ್ರಗಳೂ ಬಂಡಾಯದ ಕಹಳೆ ಊದಿ ರಕ್ರ ಕ್ರಾಂತಿಯನ್ನುಂಟು ಮಾಡುವುದಿಲ್ಲ; ಇಲ್ಲವೇ ತಮಗೆ ಅನ್ಯಾಯವಾಯಿತೆಂದು ಡಂಗುರ ಸಾರಿಕೊಂಡು ಕೂಗುತ್ತಾ ತಿರುಗುವುದಿಲ್ಲ. ಹೆಚ್ಚೆಂದರೆ ತಮಗುಂಟಾದ ಅನ್ಯಾಯವನ್ನು ಕಂಡು ಹಲ್ಲುಗಿಂಜಿಕೊಂಡು ಹುಚ್ಚು ನಗೆ ನಕ್ಕು ಸುಮ್ಮನಾಗಿ ಬಿಡುತ್ತವೆ. ಕೇವಲ ಇಪ್ಪತ್ತಾರು ವರ್ಷ ಬದುಕಿ ಕಥೆ-ಕವನಗಳ ಮೂಲಕ ಜಗತ್ತಿಗೆ ತಾವು ಕಂಡ ನರಕದ ದರ್ಶನ ಮಾಡಿಸಿದ ಲೇಖಕರಿಂದ ನಾವು ಹೆಚ್ಚಿನದನ್ನು ಬಯಸಿದರೆ ಬರಗಾಲದಲ್ಲಿ ಬೇಯುತ್ತಿರುವವನ ಬಳಿ ಬಿರಿಯಾನಿ ಕೇಳಿದಂತಾಗುತ್ತದೆ.
ಮಿಜೆನಿಯವರ ‘ಕಥಾಲೋಕ' ಎನ್ನುವ ಅಧ್ಯಾಯದಲ್ಲಿ ೧೬ ಕಥೆಗಳ ಪುಟ್ಟ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ೭೩ ಪುಟಗಳ ಈ ಪುಟ್ಟ ಕಥಾ ಸಂಕಲನವನ್ನು ಒಂದೇ ಗುಟುಕಿನಲ್ಲಿ ಓದಿ ಮುಗಿಸಬಹುದಾಗಿದೆ.