ಮುಂಜಾನೆ ಹೋಳಿ

ಮುಂಜಾನೆ ಹೋಳಿ

ಕವನ

ಮುಂಜಾನೆ ಹೋಳಿ ಅಂಬರ ತುಂಬಿತು


ಬಣ್ಣದ ಮೆರುಗು ಸೊಬಗ ತದಿಂತು


ಮೂಡಣ ರವಿಯು ನಡುವಲಿ ನಕ್ಕಾಗ


ಚಿಲಿಪಿಲಿ ಪಕ್ಕಿ ಬಾನಿಗೆ ನೆಗೆದಾವು (ಪಲ್ಲವಿ)


 


ಅಂಗಳದಲಿ ರಂಗೋಲಿ ರಂಗು


ಗುಡ್ದದ ಗುಡಿಯಲಿ ಘಂಟೆಯ ಸದ್ದು


ಭಕ್ತಿಯ ಆರತಿ ಭಾಗ್ಯದ ತುಳಸಿಗೆ


ಲೋಕದ ಲಾಲನೆ ಉದಯದ ಉಗಮಕೆ


 


ತರುಲತೆಗಳ ಹೊಕ್ಕ ಕಿರಣವು


ಕಿಟಕಿಯ ತೂರಿ ಒಳಗಡಿ ಇಟ್ಟಿತು


ಪಸರಿತು ಗಾಳಿಗೆ ಹೂಗಳ ಕಂಪು


ಮನೆಯೊಳಗೆಲ್ಲಾ ಆನಂದ ತಂತು


 


ಹಳ್ಳಿಯ ಹೆಣ್ಣು ಸೇಬು ಹಣ್ಣು


ಬಿಂದಿಗೆ ಹಿಡಿದು ನೀರಿಗೆ ಹೊರಟಳು


ಗೆಜ್ಜೆಯ ಝಲ್ ಝಲ್ ನಾದವು ಕೇಳಲು


ಬೀದೀಲಿ ಹೈದರು ಕಣ್ ಕಣ್ ಬಿಟ್ಟರು


 


ರೈತಯೋಗಿಯ ಶ್ರಮೆಯನು ಉಂಡು


ದಣಿಯದೆ ದುಡಿಯುವ ಯುವಕರ ದಂಡು


ಶಾಲೆಗೆ ತೆರಳುವ ಮಕ್ಕಳ ಹಿಂಡು


ಹಿಗ್ಗುವ ಹಿರಿಯರು ಭವಿಷ್ಯವ ಕಂಡು

Comments