ಮುಂಬೈ ಬದುಕು

ಮುಂಬೈ ಬದುಕು

ಮೂವತ್ತು ವರುಷಗಳ ಮುಂಚೆ ಒಮ್ಮೆ ಮಹಾನಗರ ಮುಂಬೈಗೆ ಹೋಗಿದ್ದೆ - ಬ್ಯಾಂಕಿನ ಬ್ರಾಂಚುಗಳಲ್ಲೇ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ. ದಿನದಿನವೂ ಮುಂಬೈಯಲ್ಲಿ ಪ್ರಯಾಣಿಸುವಾಗ ಅಲ್ಲಿನ ಬದುಕನ್ನು ಗಮನಿಸುತ್ತಿದ್ದೆ. ಆಗ ನಾನು ಕಂಡ ಮುಂಬೈಯ ಬದುಕಿನ ಕೆಲವು ನೋಟಗಳ ಝಳಕ್ ಈ ಬರಹದಲ್ಲಿದೆ.

ಹನುಮಾನ್ ಗಲ್ಲಿ
ಬಿಸಿಲು ಚುರುಕಾಗುತ್ತಿದ್ದಂತೆ ಒಂದು ದಿನ ಕಲ್ಬಾದೇವಿ ಬ್ರಾಂಚನ್ನು ಹುಡುಕಿಕೊಂಡು ಹೊರಟೆ. ಆ ಬ್ರಾಂಚ್ ಹೊಸ ವಿಳಾಸಕ್ಕೆ - ಹನುಮಾನ್ ಗಲ್ಲಿಗೆ - ಸ್ಥಳಾಂತರಗೊಂಡಿತ್ತು. "ಹನುಮಾನ್ ಗಲ್ಲಿ ಎಲ್ಲಿ?” ಎಂದು ಕೇಳುತ್ತಾ ಸಾಗಿದೆ. ಕೊನೆಗೊಬ್ಬರು ದಾರಿ ತೋರಿಸಿ, ಹೀಗೆಂದರು: “ಮುಂದಕ್ಕೆ ಹೋಗಿ, ಎಡಕ್ಕೆ ತಿರುಗಿ ನಡೆಯಿರಿ. ಆಗ ಸಿಗುವ ನಾಲ್ಕನೆಯ ಗಲ್ಲಿಯೇ ಹನುಮಾನ್ ಗಲ್ಲಿ.” ಅಲ್ಲಿಗೆ ಹೋಗಿ, ಹನುಮಾನ್ ಗಲ್ಲಿ ಸಿಕ್ಕಿದ ಸಮಾಧಾನದಲ್ಲಿ ಇನ್ನೊಬ್ಬರನ್ನು ವಿಚಾರಿಸಿದೆ. ಅವರು “ನಯಾ ಹನುಮಾನ್ ಗಲ್ಲಿ ಯಾ ಪುರಾನಾ ಹನುಮಾನ್ ಗಲ್ಲಿ?” (ಹೊಸ ಹನುಮಾನ್ ಗಲ್ಲಿಯೋ ಅಥವಾ ಹಳೆ ಹನುಮಾನ್ ಗಲ್ಲಿಯೋ?) ಎಂದು ನನ್ನನ್ನೇ ಕೇಳಿದಾಗ ನಾನು ಸುಸ್ತು. ಮುಂಬೈಯಲ್ಲಿ ಗಲ್ಲಿಯ ಹೆಸರು ಗೊತ್ತಿದ್ದರೆ ಸಾಲದು, ಅದು ಹೊಸತೋ ಹಳೆಯದೋ ಅಂತಲೂ ಗೊತ್ತಿರಬೇಕು!

ಕಾರಂಜಿಯಿಂದಾಗಿ ಬದುಕಿದ ಮಹಿಳೆ
ಕೆಂಪ್ಸ್ ಕಾರ್ನರಿನಲ್ಲಿ ಒಂದು ದಿನ ಏರುಹಗಲು ೧೦ ಗಂಟೆಗೆ ವಾಹನ ಸಂಚಾರವೆಲ್ಲ ಸ್ಥಗಿತವಾಯಿತು. ರಸ್ತೆ ಬದಿಯ ಐದು ಮಾಳಿಗೆಗಳ ಮಹಮ್ಮದ್ ಭಾಯ್ ಕಟ್ಟಡದ ಟೆರೇಸಿನಲ್ಲಿ ನಿಂತಿದ್ದ ಮಹಿಳೆಯೊಬ್ಬಳು ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆ ಒಡ್ಡಿದ್ದಳು. ಪೊಲೀಸರು ಮತ್ತು ಅಗ್ನಿಶಾಮಕ ದಳದವರಿಂದ ಅವಳನ್ನು ರಕ್ಷಿಸುವ ಪ್ರಯತ್ನ. ಆ ಮಹಿಳೆ ಕೆಳಕ್ಕೆ ಹಾರಿದರೆ ಏಟಾಗದಂತೆ ಕಾಪಾಡಲಿಕ್ಕಾಗಿ ಸುರಕ್ಷಾ ಹಾಳೆಗಳನ್ನು ಕಟ್ಟಡದ ಬುಡದಲ್ಲಿ ಬಿಡಿಸಿ ಹಿಡಿದುಕೊಂಡರು. ಇದರಿಂದ ಕಂಗಾಲಾದ ಮಹಿಳೆ ಟೆರೇಸಿನಲ್ಲಿ ಅತ್ತಿತ್ತ ಓಡಾಡ ತೊಡಗಿದಂತೆ ಅಗ್ನಿಶಾಮಕ ದಳದವರು ಅವಳ ಹತ್ತಿರಕ್ಕೆ ಸರಿಯತೊಡಗಿದರು. ಪೊಲೀಸ್ ಅಧಿಕಾರಿಯೊಬ್ಬ ಅವಳಿಗೆ ಕುಡಿಯಲು ಒಂದು ಗ್ಲಾಸಿನಲ್ಲಿ ನೀರು ಮುಂಚಾಚುತ್ತಾ ಅವಳತ್ತ ಮುನ್ನಡೆದರು. ಆಕೆ ಅದನ್ನು ಖಂಡತುಂಡವಾಗಿ ನಿರಾಕರಿಸುತ್ತ ಟೆರೇಸಿನ ಅಂಚಿನತ್ತ ಸಾಗಿದಳು.

ಅಷ್ಟರಲ್ಲಿ ಅಗ್ನಿಶಾಮಕ ದಳದವರಿಗೆ ಒಂದು ಉಪಾಯ ಹೊಳೆಯಿತು. ಕೆಂಪ್ಸ್ ಕಾರ್ನರ್ ಫ್ಲೈ-ಓವರ್ ಪಕ್ಕದಲ್ಲಿ ನೀರಿನ ಪೈಪನ್ನು ಮೇಲಕ್ಕೇರಿಸಿದರು. ನೀರಿನ ಟ್ಯಾಂಕರೊಂದನ್ನು ಮೇಲ್-ಸೇತುವೆಗೊಯ್ದರು. ಚುರುಕಿನಿಂದ ಏಣಿಯೇರಿದ ಅಗ್ನಿಶಾಮಕ ಸಿಬ್ಬಂದಿಯೊಬ್ಬ ಆ ಪೈಪ್ ಮೂಲಕ ನೀರಿನ ಕಾರಂಜಿಯನ್ನು ಕ್ಷಣಾರ್ಧದಲ್ಲಿ ಮಹಿಳೆಯ ಮೇಲೆ ಚಿಮ್ಮಿಸಿದ. ಅದರ ರಭಸದ ಏಟಿಗೆ ದಿಗ್ಮೂಢಳಾದ ಆಕೆ ಕೆಳಗುರುಳಿ ಸುರಕ್ಷಾ ಹಾಳೆಗೆ ಬಿದ್ದಳು. ತಕ್ಷಣವೇ ಪೊಲೀಸರು ಧಾವಿಸಿ ಬಂದು ಮಹಿಳೆಯನ್ನು ಬಂಧಿಸಿದರು. ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಜಾಣತನ ತೋರಿದ ಪೊಲೀಸರಿಗೂ ಅಗ್ನಿಶಾಮಕ ದಳದವರಿಗೂ ನೆರೆದಿದ್ದ ಜನರಿಂದ ಮೆಚ್ಚುಗೆ.  

ದಿಢೀರ್ ಮಾರ್ಕೆಟ್
ಅದೊಂದು ದಿನ ಮಲಾಡ್ ರೈಲುನಿಲ್ದಾಣದ ಪಕ್ಕದ ರಸ್ತೆಗೆ ಬಂದಾಗ ನನಗೆ ಅಚ್ಚರಿ. ಯಾಕೆಂದರೆ ಫುಟ್-ಪಾತಿನಲ್ಲಿ ಸಲೀಸಾಗಿ ನಡೆಯಬಹುದಾಗಿತ್ತು. ಅಲ್ಲಿ ರಸ್ತೆಯ ಎರಡೂ ಪಕ್ಕಗಳಲ್ಲಿ ಪಾದಚಾರಿಗಳು ನಡೆಯಲಿಕ್ಕೂ ಆಗದಂತೆ ತಮ್ಮ ವಸ್ತುಗಳನ್ನು ಹರಡಿ ಮಾರಾಟ ಮಾಡುವ ಫುಟ್-ಪಾತ ವ್ಯಾಪಾರಿಗಳು ಒಬ್ಬರೂ ಕಾಣಿಸಲಿಲ್ಲ. “ಇದೇನು ಇವತ್ತು ಹೀಗಿದೆ?” ಎಂದು ಒಬ್ಬರನ್ನು ಕೇಳಿದಾಗ, ದೂರದಲ್ಲಿ ನಿಂತಿದ್ದ ಪೊಲೀಸ್ ವ್ಯಾನನ್ನು ತೋರಿಸಿದರು. ಪೊಲೀಸ್ ವ್ಯಾನ್ ಬಂದಾಗ ಪರವಾನಗಿಯಿಲ್ಲದ ಫುಟ್-ಪಾತ್ ವ್ಯಾಪಾರಿಗಳು ಹಠಾತ್ತನೆ ಜಾಗ ಖಾಲಿ ಮಾಡಿದ್ದರು. ನಾನು ನಡೆಯುತ್ತಾ ಆ ರಸ್ತೆಯ ಕೊನೆಗೆ ಬಂದಾಗ ಪೊಲೀಸ್ ವ್ಯಾನ್ ಅಲ್ಲಿಂದ ಹೊರಟು ಹೋಯಿತು.

ತಕ್ಷಣವೇ ಆ ರಸ್ತೆಯಲ್ಲಿ ವಿದ್ಯುತ್ ವೇಗದಲ್ಲಿ ಚಟುವಟಿಕೆ ಶುರು. ರಸ್ತೆಬದಿಯ ಕಟ್ಟಡಗಳ ಸಂದಿಗಳಲ್ಲಿ ಕಾದು ಕೂತಿದ್ದ ಫುಟ್-ಪಾತ್ ವ್ಯಾಪಾರಿಗಳು ದಡದಡನೆ ರಸ್ತೆಗಿಳಿದರು. ಹಲವರು ಮಡಚಿಟ್ಟ ಮೇಜುಗಳನ್ನು ಬಿಡಿಸಿದರು. ಕೆಲವರು ಮರದ ಪೆಟ್ಟಿಗೆಗಳ ಮೇಲೆ ಹಲಗೆ ತುಂಡುಗಳನ್ನು ಜೋಡಿಸಿದರು. ಉಳಿದವರು ರಸ್ತೆಯಲ್ಲೇ ಗೋಣಿ, ಬೆಡ್-ಷೀಟ್ ಅಥವಾ ಪ್ಲಾಸ್ಟಿಕ್ ಹಾಳೆಗಳನ್ನು ಹಾಸಿದರು. ಹೀಗೆ ತಯಾರಾದ ತಮ್ಮತಮ್ಮ ದಿಢೀರ್ ಅಂಗಡಿಗಳಲ್ಲಿ ಸರಸರನೆ ಮಾರಾಟದ ವಸ್ತುಗಳನ್ನು ಬಿಡಿಸಿಟ್ಟರು - ಉಡುಪುಗಳು, ಚೀಲಗಳು, ಬ್ಯಾಗುಗಳು, ಚಪ್ಪಲಿಗಳು, ಪ್ಲಾಸ್ಟಿಕ್ ಪರಿಕರಗಳು, ಮಕ್ಕಳ ಆಟಿಕೆಗಳು, ಸ್ಟೀಲ್ ಸಾಮಾನುಗಳು, ಇಲೆಕ್ಟ್ರಾನಿಕ್ ಸಾಧಗಳು ಇತ್ಯಾದಿ. ಮರುಕ್ಷಣದಲ್ಲೇ ಫುಟ್-ಪಾತ್ ವ್ಯಾಪಾರಿಗಳ ಅಬ್ಬರದ ಕೂಗಿನ ಹೊರತು ಅಲ್ಲಿ ಬೇರೇನೂ ಸದ್ದು ಕೇಳಿಸದಾಯಿತು. ಪಾದಚಾರಿಗಳು ಅಲ್ಲಲ್ಲಿ ನಿಂತು ಬಿರುಸಿನ ಖರೀದಿಗೆ ಶುರುವಿಟ್ಟರು. ಪೊಲೀಸ್ ವ್ಯಾನ್ ಅತ್ತ ಹೋದೊಡನೆ ಇತ್ತ್ ದಿಢೀರ್ ಮಾರ್ಕೆಟ್ ಪ್ರತ್ಯಕ್ಷ! ಇದು ಮುಂಬೈ ಮ್ಯಾಜಿಕ್.

ಮುಂಬೈಯಲ್ಲಿ ಪಾರಿವಾಳದ ಬದುಕು
ಮುಂಬೈಯ ಬಹುಮಹಡಿ ಕಟ್ಟಡಗಳ ಸಂದಿಗೊಂದಿಗಳಲ್ಲಿ ಹಿಂಡುಹಿಂಡು ಪಾರಿವಾಳಗಳ ಬೀಡು. ಅದೊಂದು ದಿನ ಮುಸ್ಸಂಜೆ ಜನರಲ್ ಪೋಸ್ಟ್ ಆಫೀಸ್ (ಜಿ.ಪಿ.ಓ.) ಹತ್ತಿರದ ಗುಡಿಯ ಪಕ್ಕದಲ್ಲಿ ನಡೆಯುತ್ತಿದ್ದೆ. ಅಲ್ಲಿ ಹಾದಿಹೋಕರು ಎಸೆದ ಮುಷ್ಟಿಮುಷ್ಟಿ ಕಾಳುಗಳನ್ನು ಹೆಕ್ಕಿ ತಿನ್ನುತ್ತಾ ಸರಕ್ಕನೆ ಮೇಲೇರುವ ನೂರಾರು ಪಾರಿವಾಳಗಳು. ಅವು ಮತ್ತೆ ನಿಧಾನವಾಗಿ ಕೆಳಗಿಳಿಯುವ ನೋಟವೇ ಮೋಹಕ. ಅದನ್ನೇ ಗಮನಿಸುತ್ತಾ ಚರ್ಚ್ ಗೇಟಿನ ಪಕ್ಕದ ರಸ್ತೆಯಲ್ಲಿ ಸಾಗಿದೆ. ಕತ್ತಲಾಗುತ್ತಿದ್ದಂತೆ ಪಾರಿವಾಳಗಳು ಮರಳಿ ತಮ್ಮ ಗೂಡು ಸೇರುತ್ತಿದ್ದವು.

ಆಗ, ಹಾರುತ್ತಿದ್ದ ಪಾರಿವಾಳವೊಂದು ಆಯ ತಪ್ಪಿ ಅಚಾನಕ್ ರಸ್ತೆಯ ನಡುವಿಗೆ ಬಿತ್ತು. ರಸ್ತೆಯಲ್ಲಿ ಧಾವಿಸಿ ಬರುತ್ತಿದ್ದ ಸಾಲುಸಾಲು ವಾಹನಗಳು. ಆ ಪಾರಿವಾಳ ಕಾರೊಂದಕ್ಕೆ ಇನ್ನೇನು ಢಿಕ್ಕಿ ಹೊಡೆಯಿತು ಅನ್ನುವಾಗ, ಗಕ್ಕನೆ ಎಡಕ್ಕೆ ಸರಿದು ಬಚಾವಾಯಿತು. ಅದೀಗ ಹೇಗಾದರೂ ಮಾಡಿ ಮೇಲೆ ಹಾರಿ ಜೀವ ಉಳಿಸಿಕೊಳ್ಳಲು ಚಡಪಡಿಸುತ್ತಿತ್ತು. ಆದರೆ, ನುಗ್ಗಿ ಬರುತ್ತಿದ್ದ ವಾಹನಗಳ ಸಾಲುಗಳ ಮಧ್ಯೆ ರೆಕ್ಕೆ ಬಿಡಿಸಲಿಕ್ಕೂ ಎಡೆಯಿಲ್ಲದೆ ಅದು ಕಂಗೆಟ್ಟು ನಿಂತಿತ್ತು. ಜೀವಭಯದಿಂದ ತತ್ತರಿಸುತ್ತಿತ್ತು. ಅದೇ ಕ್ಷಣದಲ್ಲಿ ಧಾವಿಸಿ ಬಂದ ಕೆಂಪು ಕಾರಿನ ಹೆಡ್-ಲೈಟಿನ ಬೆಳಕು ಬಡಪಾಯಿ ಪಾರಿವಾಳದ ಕಣ್ಣು ಕುಕ್ಕಿದಾಗ ಚಕ್ರದಡಿಯಲ್ಲಿ ಸಿಲುಕಿ ಅದರ ಬದುಕೇ ಮುಗಿದಿತ್ತು. ಅದರ ದೇಹದಿಂದ ಕಿತ್ತುಬಂದ ಬಿಳಿಬಿಳಿ ಗರಿಗಳೆಲ್ಲಾ ಒಂದು ಕ್ಷಣ ಗಾಳಿಯಲ್ಲಿ ಮೇಲಕ್ಕೇರಿ ನಿಧಾನವಾಗಿ ಕೆಳಗಿಳಿದವು. ರಸ್ತೆಯ ಕರಿ ಡಾಮರಿನಲ್ಲಿ ಪಾರಿವಾಳ ಅಪ್ಪಚ್ಚಿಯಾದಲ್ಲಿ ಕೆಂಪುಕೆಂಪಾಗಿತ್ತು. ಮುಂಬೈಯ ಆಕಾಶವೂ ರಂಗುರಂಗಾಗಿತ್ತು.

ಫೋಟೋ ೧: ಮುಂಬೈಯಲ್ಲಿ ಅರಬಿ ಸಮುದ್ರದ ಪಕ್ಕದ ಪ್ರಸಿದ್ಧ ರಸ್ತೆ ಮೆರೀನ್ ಡ್ರೈವ್
ಫೋಟೋ ೨: ಮೆರೀನ್ ಡ್ರೈವ್‌ನ ಗಗನಚುಂಬಿ ಕಟ್ಟಡಗಳು

Comments

Submitted by Ashwin Rao K P Tue, 11/30/2021 - 07:54

ಮುಂಬೈ ಬದುಕು

ಲೇಖಕರು ಮುಂಬೈ ಬದುಕನ್ನು ಸೊಗಸಾಗಿ ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಮುಂಬೈನ ಲೋಕಲ್ ರೈಲು, ವಡಾ ಪಾವ್ ಅಂಗಡಿಗಳು ಎಲ್ಲವೂ ಕಾಡುತ್ತಲೇ ಇರುತ್ತವೆ. ಲೇಖಕರು ತಾವು ಅನುಭವಿಸಿದ ಹೊಸ ಸಂಗತಿಗಳನ್ನು ಸೊಗಸಾಗಿ ನಿರೂಪಿಸಿದ್ದಾರೆ. ಇನ್ನಷ್ಟು ಮುಂಬೈ ಬದುಕಿನ ಅನುಭವ ಅವರಿಂದ ಮೂಡಿಬರಲಿ ಎಂದು ಆಶಿಸುವೆ.

ಅಶ್ವಿನ್

Submitted by venkatesh Fri, 03/04/2022 - 08:58

ನಮ್ಮ ತಾಯಿ ಹೇಳುತ್ತಿದ್ದಂತೆ, ಒಳ್ಳೆಯ ಕೆಲಸಕ್ಕೆ ಈರ್ಷೆಯಾತಕ್ಕೆ  ?
 
ಈಗಾಗಲೇ ಸುಂದರವಾಗಿ ಬರೆದಿರುವ  ಮುಂಬಯಿ ಬದುಕಿನ  ಲೇಖನಕ್ಕೆ ಒಂದು ಗರಿ ಸೇರಿಸುವ ಧರ್ಯಮಾಡಿ ಬರೆದಿದ್ದೇನೆ.  ನಾನು ಬೊಂಬಾಯಿ ನಗರಕ್ಕೆ ಪಾದಾರ್ಪಣೆ ಮಾಡಿದ್ದು  ೧೯೬೪-೬೫ ರಲ್ಲಿ. ಬೆಂಗಳೂರಿನಲ್ಲಿ  ಟೆಕ್ಸ್ ಟೈಲ್ ವಿಭಾಗದಲ್ಲಿ ವಿದ್ಯಾರ್ಜನೆ ಮಾಡಿದ  ನನ್ನಂತಹ ವಿದ್ಯಾರ್ಥಿಗಳಿಗೆ  ನೌಕರಿ ಸಿಗಲು, ಮೂರು  ಪರ್ಯಾಯಗಳು ಇದ್ದವು. 'ಬೊಂಬಾಯಿಗೆ ಹೋಗುವುದು'. 'ಕೊಯಮತ್ತೂರಿಗೆ ಹೋಗುವುದು' ಇಲ್ಲವೇ 'ಅಹ್ಮದಾಬಾದಿಗೆ ಹೋಗುವುದು'. ಮಿಲ್ ಸೂಪರ್ ವೈಸರ್ ನಿಂದ ಆರಂಭವಾಗಿ ಹಂತ ಹಂತವಾಗಿ ಎಂ. ಡಿ ಆದವರು ಬಹಳ ಮಂದಿ ಇದ್ದರು. ನಾನೂ ಅದೇ ಕನಸು ಹೊತ್ತು ಈ ಮುಂಬಯಿ ಮಹಾ ನಗರಕ್ಕೆ ಬಂದೆ. ಆಗ ಸುಮಾರು ೭೦+ ಮಿಲ್ ಗಳಿದ್ದವು. ಕೆಲವರು ಮಜಾಕಿಗೆ ಹೇಳುವಂತೆ, 'ಒಬ್ಬ ಮ್ಯಾನೇಜರ್ ಜತೆ ಜಗಳಮಾಡಿದರೆ ಏನಾಯಿತು' ? 'ಪಕ್ಕದ ಮಿಲ್ ಕಾಂಪಂಡ್ ಹಾರಿಹೋದರಾಯಿತು. ಕೆಲಸ ಸಿಕ್ಕೇ ಸಿಗುತ್ತೆ' ಅಂತ. ಆ ಮಾತು ಅಕ್ಷರಶಃ ನಿಜವಾಗಿತ್ತು. ಲಕ್ಡಾವಾಲರ ಜತೆ ಮನಸ್ತಾಪ ಆಗುತ್ತಿದ್ದಂತೆಯೇ ದೇಸಾಯ್ ಮಾಸ್ಟರ್ ನಮ್ಮನ್ನು ಕರೆದು ಕೆಲಸ ಕೊಡುತ್ತಿದ್ದರು. ಆಗ  ಟೆಕ್ನಿಕಲ್ ಸ್ಟಾಫ್ ಕೊರತೆ ಇತ್ತು. ಆಗ ಯಾರೂ ಟೆಕ್ಸ್ ಟೈಲ್ಸ್ ನಲ್ಲಿ ಪದವೀಧರರಲ್ಲ. ಡಿಪ್ಲೋಮ ಹೋಲ್ಡರ್ ಗಳೇ  ! ಹಾ ನಮ್ಮ ಸರ್. ಎಂ. ವಿ ಯವರೂ ಪುಣೆಯಲ್ಲಿ ಓದಿದ ಸಿವಿಲ್ ಇಂಜಿನಿಯರ್, ಡಿಪ್ಲೋಮ ಹೋಲ್ಡರ್ ರರೇ  !
 
ಹೀಗೆ ಶುರುವಾದ ನನ್ನ ಬೊಂಬಾಯಿನ ಚಿಂಚ್ಫೊಕ್ಲಿ ಯ ಪೊದ್ದಾರ್ ಮಿಲ್ ನ ನೌಕರಿ ಒಂದು ವರ್ಷ ಸಾಗಿತು. ಆಮೇಲೆ ಅದನ್ನು ಬಿಡುವ ಯೋಚನೆ ಮಾಡಬೇಕಾಯಿತು. ಇದಕ್ಕೆ ಕಾರಣ, ನನಗೆ ಬಾಲ್ಯದಿಂದಲೂ ಹತ್ತಿಯ ಸೂಕ್ಷ್ಮ ತಂತುಗಳನ್ನು ಜಮಾಯಿಸಿ ದಾರ ನೂತು, ಅವನ್ನು ತಾನ-ಬಾನ ವೆಂದು ಅಕ್ಕ ಪಕ್ಕದಲ್ಲಿ ಸೇರಿಸಿ ಮಾಡುತ್ತಿದ್ದ ಬಟ್ಟೆಯ ಶಕ್ತಿಯನ್ನು ಕಂಡು ದಿಗ್ಭ್ರಮೆಯಾಗಿತ್ತು. ತಂಗಿನ ನಾರಿನಿಂದ ಹಗ್ಗ ಹೊಸೆಯುವುದನ್ನು ನಮ್ಮ ಊರಿನಲ್ಲಿ ನೋಡಿದ್ದೆ. ಆ ತಂತುಗಳು (ಫೈಬರ್ ಗಳು) ಕನಿಷ್ಠ ೩ ಇಂಚಿನವು. ಆದರೆ ಈ ಅರಳೆ ತಂತುಗಳು ತೀರಾ ಚಿಕ್ಕವು. ಮುಟ್ಟಿದರೆ ಕೈಗೆ ಅಂಟುತ್ತಿದ್ದವು. ಈ ಭ್ರಮೆ ನನ್ನನ್ನು ಬಹಳ ತೀವ್ರವಾಗಿ ಆವರಿಸಿತ್ತು. ಬೊಂಬಾಯಿಗೆ ಹೋದಮೇಲೂ ನನ್ನ ಆತಂಕವನ್ನು ಅರ್ಥಮಾಡಿಕೊಂಡು ಅದಕ್ಕೆ ಉತ್ತರ ಯಾರೂ ಕೊಟ್ಟಿರಲಿಲ್ಲ. ಸರಿ. ಅದರ ಬಗ್ಗೆ ಎಲ್ಲಾದರೂ ಓದಲು  ಸಿಗುತ್ತದೆಯೇ ? ಎಂದು ಹುಡುಕಿದಾಗ  ನನಗೆ ಅರ್ಥವಾಗುವ ರೀತಿ ವಿವರಣೆ ಸಿಗಲಿಲ್ಲ.  ನಾನು ನನ್ನ ಪಾಳಿ (ಶಿಫ್ಟ್ ) ಮುಗಿದಮೇಲೆ ಮಿಲ್ ನ ಲೈಬ್ರರಿಗೆ ಹೋಗಿ ಓದಲು ಕುಳಿತರೇ, ಬರೀ  ಆಕಳಿಗೆ ; ಕಣ್ಣಿನಲ್ಲಿ ನೀರುಬಂದು ಒಮ್ಮೊಮ್ಮೆ ಅಲ್ಲೇ ಉರುಳಿಕೊಂಡು ನಿದ್ದೆಮಾಡಿದ್ದೆ. ಮಿಲ್ ನ ವಾಚ್ ಮ್ಯಾನ್ ಲಾಠಿ ಹಿಡಿದು ಎಬ್ಬಿಸಿದ್ದರ ನೆನಪಿದೆ. 
 
ಹೀಗೆ ಮಾನಸಿಕ ತೊಳಲಾಟದಲ್ಲಿ ಕೆಲಸಮಾಡುತ್ತಿದ್ದ ನನಗೆ 'ಟೈಮ್ಸ್ ಇಂಡಿಯಾ ಪತ್ರಿಕೆ' ಯಲ್ಲಿ ನಮ್ಮ ಲ್ಯಾಬೋರೇಟೋರಿ ಯ ಒಂದು ಜಾಹಿರಾತು ನೋಡಲು ಸಿಕ್ಕಿತು. ರಿಸರ್ಚ್ ಸಹಾಯಕನ ಕೆಲಸಕ್ಕೆ ಅರ್ಜಿ ಹಾಗಿದೆ. ಇಂಟರ್ವ್ಯೂ ನಲ್ಲಿ ಸೆಲೆಕ್ಟ್ ಆದೆ.  ಆದರೆ ನನ್ನ ಹೆಸರನ್ನು 'ವೈಟಿಂಗ್ ಲಿಸ್ಟ್' ನಲ್ಲಿ ಇಟ್ಟಿದ್ದರು. ನನಗಿಂತ ಅನುಭವಿ ಹುಡುಗರು ಲಭ್ಯವಿದ್ದಾಗ, ಅವರು ನನಗೆ ಹೇಗೆ ಕರೆದು ಮಣೆ ಹಾಕಿಯಾರು ?
 
೩-೪ ತಿಂಗಳ ಬಳಿಕ ಅವರೆಲ್ಲ ಕೆಲಸಕ್ಕೆ ರಾಜೀನಾಮೆ ಹಾಕಿ ಬಿಟ್ಟಮೇಲೆ, ನನಗೆ ಕರೆ ಬಂತು. ನಾನೋ ಇಂಟರ್ವ್ಯೂ ಸಮಯದಲ್ಲಿ ಲ್ಯಾಬೋರೇಟೋರಿಯ ಲೈಬ್ರರಿಯನ್ನು ಕಂಡು ಮನಸ್ಸಿನಲ್ಲಿಯೇ ದೇವರನ್ನು ವಂದಿಸಿದ್ದೆ. ಅಬ್ಬಬ್ಬಾ ಅದೆಷ್ಟು ಹಳೆಯ ಪುಸ್ತಕಗಳು, ವಿಶ್ವಕೋಶಗಳು, ಸಂಶೋಧನೆಯ ಪೇಪರ್ಗಳು,  ಹತ್ತಿಯನ್ನು ಕಂಡು ಕೇಳರಿಯದ ಬ್ರಿಟಿಷ್ ವಿಜ್ಞಾನಿಗಳು ಭಾರತದ ಕುಶಲ ಕೆಲಸಗಾರರಿಂದ ಕಲಿತು, ಆ ತಂತ್ರವನ್ನು ತಮ್ಮ ಮೆಷಿನ್ ಗಳಲ್ಲಿ ಅಳವಡಿಸಿ, ಹೆಚ್ಚು ವೇಗವಾಗಿ ದಾರ, ಬಟ್ಟೆ ಉತ್ಪಾದನೆಯನ್ನು ಮಾಡುವಂತಹ ಯಂತ್ರಗಳನ್ನು ಮಾಡಿದ್ದರು. ಅಂತಹ ಯಂತ್ರಗಳನ್ನು ೧೯೨೩ ರಲ್ಲಿ ತಯಾರಿಸಿ, ೧೯೨೫ ರಲ್ಲಿ ಬೊಂಬಾಯಿನ ನಮ್ಮ ಲ್ಯಾಬೋರೇಟೋರಿಯಲ್ಲಿ ಸ್ಥಾಪಿಸಿ, ೧೯೨೯-೩೦ ರಲ್ಲಿ ಸಂಶೋಧನಾ ತಥ್ಯಗಳನ್ನು ಇಂಗ್ಲೆಂಡ್ ನ ಟೆಕ್ಸಟೈಲ್ಸ್ ಇನ್ಸ್ಟಿ ಟ್ಯೂಟ್ ಮ್ಯಾನ್ ಚೆಸ್ಟರ್ ನ ವತಿಯಿಂದ ಪ್ರಕಟಿಸಿದ ವರದಿಯನ್ನು ಓದಿ ದಿಗ್ಭ್ರಮೆಗೊಂಡೆ ! ಅದು ನಮ್ಮವರಿಂದ ಕನಸಿನಲ್ಲಿಯೂ ಮಾಡಲು ಸಾಧ್ಯವಾಗದ ಮಾತು ಅದಾಗಿತ್ತು. ತಕ್ಷಣ ೧೯೬೭ ರಲ್ಲಿ ಸಹಾಯಕ ನಾಗಿ ಸೇರಿ, ಹಂತ ಹಂತವಾಗಿ ಮೇಲೇರಿ, ಸೀನಿಯರ್ ಟೆಕ್ನಿಕಲ್ ಆಫೀಸರ್ ಆಗಿ ೩೭ ವರ್ಷಗಳ ನಂತರ ರಿಟೈರ್ ಆದೆ. ನನಗೆ ಸಾಧ್ಯವಾದ ನನ್ನ ಇತಿ-ಮಿತಿಗಳಲ್ಲಿ ಒಂದು ಪುಸ್ತಕವನ್ನು ಪ್ರಕಟಿಸಿದೆ. ಹಲವಾರು ಸೆಮಿನಾರ್ ಗಳಲ್ಲಿ ಭಾಗವಹಿಸಿದ್ದೇನೆ. ಹತ್ತಿಯ ಉಪಯೋಗದಲ್ಲಿ ಅದರ  ಹಲವಾರು ಮುಖಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ.  ಅಂದರೆ ನನ್ನ ಬಾಲ್ಯದ ಕನಸನ್ನು ವ್ಯರ್ಥವಾಗಿ ಹೋಗಲು ಬಿಡಲಿಲ್ಲ. ನನ್ನ ಮನಸ್ಸಿಗೆ ತೃಪ್ತಿಯಾಗಿದೆ. ಅದು ತಾನೇ ಮುಖ್ಯ ! ಮುಂಬಯಿಯ ಜೀವನದ ಧಾರೆಯಲ್ಲಿ ಇದೊಂದು ಬಿಂದು ಎಂದು ಭಾವಿಸುತ್ತೇನೆ.  'ನಹೀ ಜ್ಞಾನೇನ ಸದೃಶಂ' ಎನ್ನುವ ಮಾತಿದೆಯಲ್ಲವೇ ? ಕೊನೆಗೆ  ಜ್ಞಾನಕ್ಕೆ ಕೊನೆಯೆಲ್ಲಿದೆ ?
 
'ಹತ್ತಿ ಎಂಬ ತಂತುವೂ  (ಫೈಬರ್) ಒಂದು ಕುರಿಯ ತುಪ್ಪಟದಂತಹ ವಸ್ತು. ಅದು ಮರದಮೇಲೆ ಇರುತ್ತದೆ' ಎನ್ನುವ ಜಿಜ್ಞಾಸೆಯಲ್ಲಿ ತೊಳುತ್ತಿದ್ದ ಬ್ರಿಟಿಷ್ ವಿಜ್ಞಾನಿಗಳು, ಭಾರತಕ್ಕೆ ಬಂದು ಹತ್ತಿಯ ಹೃದಯವನ್ನು ಹೊಕ್ಕು, ಅದರಲ್ಲಿ  ನೈಪುಣ್ಯತೆಯನ್ನು ಗಳಿಸಿ
ಭಾರತೀಯರಾದ ನಮಗೆ ಹತ್ತಿಯ ಮೇಲೆ ಸಂಶೋಧನೆ ಮಾಡಲು ಕಲಿಸುತ್ತಿರುವುದನ್ನು ನಾವು ಹೇಗೆ ಅರ್ಥೈಸಬೇಕೋ ತಿಳಿಯದು. ನಮ್ಮ ಲ್ಯಾಬೋರೇಟೋರಿಯ ಪ್ರಪ್ರಥಮ ನಿರ್ದೇಶಕರು, 'ಡಾ. ಆರ್ಥರ್ ಜೇಮ್ಸ್ ಟರ್ನರ್'. ಹಾಗೂ 'ರಾಲ್ಫ್ ರಿಚರ್ಡ್ಸನ್',  ತಮ್ಮ ಭಾರತೀಯ ಸಹ ವಿಜ್ಞಾನಿಗಳನ್ನು ಅತ್ಯಂತ ತೀವ್ರವಾಗಿ ಪ್ರೀತಿಸಿ, ತಮ್ಮ ಕೈಲಾದ ಸಹಾಯ ಮಾಡುತ್ತಿದ್ದ ಮಾನವೀಯತೆಯನ್ನು ಮೆರೆದ ವ್ಯಕ್ತಿಗಳು ಅವರು  ! 
 
ನಮ್ಮ ಭಾರತದ  ಸ್ವಾತಂತ್ರ್ಯ ಸಮರದಲ್ಲಿ ಮಹಾತ್ಮಾ ಗಾಂಧಿಯವರ ಜತೆ ಸೇರಿ, ನಾವೆಲ್ಲ ಬ್ರಿಟಿಷರ  ನೀತಿಯನ್ನು ವಿರೋಧಿಸಿ  ಆಂದೋಳನ  ಮಾಡಿದೆವು.  ಅದೊಂದು ವಿಷಯ.  ಏನೇ ಇರಲಿ, ನಾನು ಪ್ರಸ್ತಾಪಿಸಿದ ಹತ್ತಿ ಗುಣಮಟ್ಟದಲ್ಲಿ ಸುಧಾರಣೆ ಮಾಡುವ  ವಿಷಯದಲ್ಲಿ ಬ್ರಿಟಿಷರ ಕೊಡುಗೆ ಅಪಾರ. 'ಅವರಿಗೆ  ನನ್ನ ಶರಣು', ಎಂದು ಹೇಳಿ ಈ ನನ್ನ ಅನಿಸಿಕೆಗಳಿಗೆ ಮಂಗಳ ಹಾಡುತ್ತೇನೆ. 
 
* ಈ ಒಂದು ವಾಕ್ಯವನ್ನೂ ದಯಮಾಡಿ ಓದಿ  :
 
೯೭ ನೆಯ ವರ್ಷದಲ್ಲಿ ಕಾಲಿಟ್ಟಿರುವ ನಮ್ಮ ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ, ಶತಮಾನೋತ್ಸವದ ಕಡೆಗೆ ದಾಪು ಗಾಲು ಹಾಕುತ್ತಾ ಶರವೇಗದಲ್ಲಿ ಸಾಗುತ್ತಿದೆ.