ಮುಂಬೈ ಬದುಕು
ಮೂವತ್ತು ವರುಷಗಳ ಮುಂಚೆ ಒಮ್ಮೆ ಮಹಾನಗರ ಮುಂಬೈಗೆ ಹೋಗಿದ್ದೆ - ಬ್ಯಾಂಕಿನ ಬ್ರಾಂಚುಗಳಲ್ಲೇ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ. ದಿನದಿನವೂ ಮುಂಬೈಯಲ್ಲಿ ಪ್ರಯಾಣಿಸುವಾಗ ಅಲ್ಲಿನ ಬದುಕನ್ನು ಗಮನಿಸುತ್ತಿದ್ದೆ. ಆಗ ನಾನು ಕಂಡ ಮುಂಬೈಯ ಬದುಕಿನ ಕೆಲವು ನೋಟಗಳ ಝಳಕ್ ಈ ಬರಹದಲ್ಲಿದೆ.
ಹನುಮಾನ್ ಗಲ್ಲಿ
ಬಿಸಿಲು ಚುರುಕಾಗುತ್ತಿದ್ದಂತೆ ಒಂದು ದಿನ ಕಲ್ಬಾದೇವಿ ಬ್ರಾಂಚನ್ನು ಹುಡುಕಿಕೊಂಡು ಹೊರಟೆ. ಆ ಬ್ರಾಂಚ್ ಹೊಸ ವಿಳಾಸಕ್ಕೆ - ಹನುಮಾನ್ ಗಲ್ಲಿಗೆ - ಸ್ಥಳಾಂತರಗೊಂಡಿತ್ತು. "ಹನುಮಾನ್ ಗಲ್ಲಿ ಎಲ್ಲಿ?” ಎಂದು ಕೇಳುತ್ತಾ ಸಾಗಿದೆ. ಕೊನೆಗೊಬ್ಬರು ದಾರಿ ತೋರಿಸಿ, ಹೀಗೆಂದರು: “ಮುಂದಕ್ಕೆ ಹೋಗಿ, ಎಡಕ್ಕೆ ತಿರುಗಿ ನಡೆಯಿರಿ. ಆಗ ಸಿಗುವ ನಾಲ್ಕನೆಯ ಗಲ್ಲಿಯೇ ಹನುಮಾನ್ ಗಲ್ಲಿ.” ಅಲ್ಲಿಗೆ ಹೋಗಿ, ಹನುಮಾನ್ ಗಲ್ಲಿ ಸಿಕ್ಕಿದ ಸಮಾಧಾನದಲ್ಲಿ ಇನ್ನೊಬ್ಬರನ್ನು ವಿಚಾರಿಸಿದೆ. ಅವರು “ನಯಾ ಹನುಮಾನ್ ಗಲ್ಲಿ ಯಾ ಪುರಾನಾ ಹನುಮಾನ್ ಗಲ್ಲಿ?” (ಹೊಸ ಹನುಮಾನ್ ಗಲ್ಲಿಯೋ ಅಥವಾ ಹಳೆ ಹನುಮಾನ್ ಗಲ್ಲಿಯೋ?) ಎಂದು ನನ್ನನ್ನೇ ಕೇಳಿದಾಗ ನಾನು ಸುಸ್ತು. ಮುಂಬೈಯಲ್ಲಿ ಗಲ್ಲಿಯ ಹೆಸರು ಗೊತ್ತಿದ್ದರೆ ಸಾಲದು, ಅದು ಹೊಸತೋ ಹಳೆಯದೋ ಅಂತಲೂ ಗೊತ್ತಿರಬೇಕು!
ಕಾರಂಜಿಯಿಂದಾಗಿ ಬದುಕಿದ ಮಹಿಳೆ
ಕೆಂಪ್ಸ್ ಕಾರ್ನರಿನಲ್ಲಿ ಒಂದು ದಿನ ಏರುಹಗಲು ೧೦ ಗಂಟೆಗೆ ವಾಹನ ಸಂಚಾರವೆಲ್ಲ ಸ್ಥಗಿತವಾಯಿತು. ರಸ್ತೆ ಬದಿಯ ಐದು ಮಾಳಿಗೆಗಳ ಮಹಮ್ಮದ್ ಭಾಯ್ ಕಟ್ಟಡದ ಟೆರೇಸಿನಲ್ಲಿ ನಿಂತಿದ್ದ ಮಹಿಳೆಯೊಬ್ಬಳು ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆ ಒಡ್ಡಿದ್ದಳು. ಪೊಲೀಸರು ಮತ್ತು ಅಗ್ನಿಶಾಮಕ ದಳದವರಿಂದ ಅವಳನ್ನು ರಕ್ಷಿಸುವ ಪ್ರಯತ್ನ. ಆ ಮಹಿಳೆ ಕೆಳಕ್ಕೆ ಹಾರಿದರೆ ಏಟಾಗದಂತೆ ಕಾಪಾಡಲಿಕ್ಕಾಗಿ ಸುರಕ್ಷಾ ಹಾಳೆಗಳನ್ನು ಕಟ್ಟಡದ ಬುಡದಲ್ಲಿ ಬಿಡಿಸಿ ಹಿಡಿದುಕೊಂಡರು. ಇದರಿಂದ ಕಂಗಾಲಾದ ಮಹಿಳೆ ಟೆರೇಸಿನಲ್ಲಿ ಅತ್ತಿತ್ತ ಓಡಾಡ ತೊಡಗಿದಂತೆ ಅಗ್ನಿಶಾಮಕ ದಳದವರು ಅವಳ ಹತ್ತಿರಕ್ಕೆ ಸರಿಯತೊಡಗಿದರು. ಪೊಲೀಸ್ ಅಧಿಕಾರಿಯೊಬ್ಬ ಅವಳಿಗೆ ಕುಡಿಯಲು ಒಂದು ಗ್ಲಾಸಿನಲ್ಲಿ ನೀರು ಮುಂಚಾಚುತ್ತಾ ಅವಳತ್ತ ಮುನ್ನಡೆದರು. ಆಕೆ ಅದನ್ನು ಖಂಡತುಂಡವಾಗಿ ನಿರಾಕರಿಸುತ್ತ ಟೆರೇಸಿನ ಅಂಚಿನತ್ತ ಸಾಗಿದಳು.
ಅಷ್ಟರಲ್ಲಿ ಅಗ್ನಿಶಾಮಕ ದಳದವರಿಗೆ ಒಂದು ಉಪಾಯ ಹೊಳೆಯಿತು. ಕೆಂಪ್ಸ್ ಕಾರ್ನರ್ ಫ್ಲೈ-ಓವರ್ ಪಕ್ಕದಲ್ಲಿ ನೀರಿನ ಪೈಪನ್ನು ಮೇಲಕ್ಕೇರಿಸಿದರು. ನೀರಿನ ಟ್ಯಾಂಕರೊಂದನ್ನು ಮೇಲ್-ಸೇತುವೆಗೊಯ್ದರು. ಚುರುಕಿನಿಂದ ಏಣಿಯೇರಿದ ಅಗ್ನಿಶಾಮಕ ಸಿಬ್ಬಂದಿಯೊಬ್ಬ ಆ ಪೈಪ್ ಮೂಲಕ ನೀರಿನ ಕಾರಂಜಿಯನ್ನು ಕ್ಷಣಾರ್ಧದಲ್ಲಿ ಮಹಿಳೆಯ ಮೇಲೆ ಚಿಮ್ಮಿಸಿದ. ಅದರ ರಭಸದ ಏಟಿಗೆ ದಿಗ್ಮೂಢಳಾದ ಆಕೆ ಕೆಳಗುರುಳಿ ಸುರಕ್ಷಾ ಹಾಳೆಗೆ ಬಿದ್ದಳು. ತಕ್ಷಣವೇ ಪೊಲೀಸರು ಧಾವಿಸಿ ಬಂದು ಮಹಿಳೆಯನ್ನು ಬಂಧಿಸಿದರು. ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಜಾಣತನ ತೋರಿದ ಪೊಲೀಸರಿಗೂ ಅಗ್ನಿಶಾಮಕ ದಳದವರಿಗೂ ನೆರೆದಿದ್ದ ಜನರಿಂದ ಮೆಚ್ಚುಗೆ.
ದಿಢೀರ್ ಮಾರ್ಕೆಟ್
ಅದೊಂದು ದಿನ ಮಲಾಡ್ ರೈಲುನಿಲ್ದಾಣದ ಪಕ್ಕದ ರಸ್ತೆಗೆ ಬಂದಾಗ ನನಗೆ ಅಚ್ಚರಿ. ಯಾಕೆಂದರೆ ಫುಟ್-ಪಾತಿನಲ್ಲಿ ಸಲೀಸಾಗಿ ನಡೆಯಬಹುದಾಗಿತ್ತು. ಅಲ್ಲಿ ರಸ್ತೆಯ ಎರಡೂ ಪಕ್ಕಗಳಲ್ಲಿ ಪಾದಚಾರಿಗಳು ನಡೆಯಲಿಕ್ಕೂ ಆಗದಂತೆ ತಮ್ಮ ವಸ್ತುಗಳನ್ನು ಹರಡಿ ಮಾರಾಟ ಮಾಡುವ ಫುಟ್-ಪಾತ ವ್ಯಾಪಾರಿಗಳು ಒಬ್ಬರೂ ಕಾಣಿಸಲಿಲ್ಲ. “ಇದೇನು ಇವತ್ತು ಹೀಗಿದೆ?” ಎಂದು ಒಬ್ಬರನ್ನು ಕೇಳಿದಾಗ, ದೂರದಲ್ಲಿ ನಿಂತಿದ್ದ ಪೊಲೀಸ್ ವ್ಯಾನನ್ನು ತೋರಿಸಿದರು. ಪೊಲೀಸ್ ವ್ಯಾನ್ ಬಂದಾಗ ಪರವಾನಗಿಯಿಲ್ಲದ ಫುಟ್-ಪಾತ್ ವ್ಯಾಪಾರಿಗಳು ಹಠಾತ್ತನೆ ಜಾಗ ಖಾಲಿ ಮಾಡಿದ್ದರು. ನಾನು ನಡೆಯುತ್ತಾ ಆ ರಸ್ತೆಯ ಕೊನೆಗೆ ಬಂದಾಗ ಪೊಲೀಸ್ ವ್ಯಾನ್ ಅಲ್ಲಿಂದ ಹೊರಟು ಹೋಯಿತು.
ತಕ್ಷಣವೇ ಆ ರಸ್ತೆಯಲ್ಲಿ ವಿದ್ಯುತ್ ವೇಗದಲ್ಲಿ ಚಟುವಟಿಕೆ ಶುರು. ರಸ್ತೆಬದಿಯ ಕಟ್ಟಡಗಳ ಸಂದಿಗಳಲ್ಲಿ ಕಾದು ಕೂತಿದ್ದ ಫುಟ್-ಪಾತ್ ವ್ಯಾಪಾರಿಗಳು ದಡದಡನೆ ರಸ್ತೆಗಿಳಿದರು. ಹಲವರು ಮಡಚಿಟ್ಟ ಮೇಜುಗಳನ್ನು ಬಿಡಿಸಿದರು. ಕೆಲವರು ಮರದ ಪೆಟ್ಟಿಗೆಗಳ ಮೇಲೆ ಹಲಗೆ ತುಂಡುಗಳನ್ನು ಜೋಡಿಸಿದರು. ಉಳಿದವರು ರಸ್ತೆಯಲ್ಲೇ ಗೋಣಿ, ಬೆಡ್-ಷೀಟ್ ಅಥವಾ ಪ್ಲಾಸ್ಟಿಕ್ ಹಾಳೆಗಳನ್ನು ಹಾಸಿದರು. ಹೀಗೆ ತಯಾರಾದ ತಮ್ಮತಮ್ಮ ದಿಢೀರ್ ಅಂಗಡಿಗಳಲ್ಲಿ ಸರಸರನೆ ಮಾರಾಟದ ವಸ್ತುಗಳನ್ನು ಬಿಡಿಸಿಟ್ಟರು - ಉಡುಪುಗಳು, ಚೀಲಗಳು, ಬ್ಯಾಗುಗಳು, ಚಪ್ಪಲಿಗಳು, ಪ್ಲಾಸ್ಟಿಕ್ ಪರಿಕರಗಳು, ಮಕ್ಕಳ ಆಟಿಕೆಗಳು, ಸ್ಟೀಲ್ ಸಾಮಾನುಗಳು, ಇಲೆಕ್ಟ್ರಾನಿಕ್ ಸಾಧಗಳು ಇತ್ಯಾದಿ. ಮರುಕ್ಷಣದಲ್ಲೇ ಫುಟ್-ಪಾತ್ ವ್ಯಾಪಾರಿಗಳ ಅಬ್ಬರದ ಕೂಗಿನ ಹೊರತು ಅಲ್ಲಿ ಬೇರೇನೂ ಸದ್ದು ಕೇಳಿಸದಾಯಿತು. ಪಾದಚಾರಿಗಳು ಅಲ್ಲಲ್ಲಿ ನಿಂತು ಬಿರುಸಿನ ಖರೀದಿಗೆ ಶುರುವಿಟ್ಟರು. ಪೊಲೀಸ್ ವ್ಯಾನ್ ಅತ್ತ ಹೋದೊಡನೆ ಇತ್ತ್ ದಿಢೀರ್ ಮಾರ್ಕೆಟ್ ಪ್ರತ್ಯಕ್ಷ! ಇದು ಮುಂಬೈ ಮ್ಯಾಜಿಕ್.
ಮುಂಬೈಯಲ್ಲಿ ಪಾರಿವಾಳದ ಬದುಕು
ಮುಂಬೈಯ ಬಹುಮಹಡಿ ಕಟ್ಟಡಗಳ ಸಂದಿಗೊಂದಿಗಳಲ್ಲಿ ಹಿಂಡುಹಿಂಡು ಪಾರಿವಾಳಗಳ ಬೀಡು. ಅದೊಂದು ದಿನ ಮುಸ್ಸಂಜೆ ಜನರಲ್ ಪೋಸ್ಟ್ ಆಫೀಸ್ (ಜಿ.ಪಿ.ಓ.) ಹತ್ತಿರದ ಗುಡಿಯ ಪಕ್ಕದಲ್ಲಿ ನಡೆಯುತ್ತಿದ್ದೆ. ಅಲ್ಲಿ ಹಾದಿಹೋಕರು ಎಸೆದ ಮುಷ್ಟಿಮುಷ್ಟಿ ಕಾಳುಗಳನ್ನು ಹೆಕ್ಕಿ ತಿನ್ನುತ್ತಾ ಸರಕ್ಕನೆ ಮೇಲೇರುವ ನೂರಾರು ಪಾರಿವಾಳಗಳು. ಅವು ಮತ್ತೆ ನಿಧಾನವಾಗಿ ಕೆಳಗಿಳಿಯುವ ನೋಟವೇ ಮೋಹಕ. ಅದನ್ನೇ ಗಮನಿಸುತ್ತಾ ಚರ್ಚ್ ಗೇಟಿನ ಪಕ್ಕದ ರಸ್ತೆಯಲ್ಲಿ ಸಾಗಿದೆ. ಕತ್ತಲಾಗುತ್ತಿದ್ದಂತೆ ಪಾರಿವಾಳಗಳು ಮರಳಿ ತಮ್ಮ ಗೂಡು ಸೇರುತ್ತಿದ್ದವು.
ಆಗ, ಹಾರುತ್ತಿದ್ದ ಪಾರಿವಾಳವೊಂದು ಆಯ ತಪ್ಪಿ ಅಚಾನಕ್ ರಸ್ತೆಯ ನಡುವಿಗೆ ಬಿತ್ತು. ರಸ್ತೆಯಲ್ಲಿ ಧಾವಿಸಿ ಬರುತ್ತಿದ್ದ ಸಾಲುಸಾಲು ವಾಹನಗಳು. ಆ ಪಾರಿವಾಳ ಕಾರೊಂದಕ್ಕೆ ಇನ್ನೇನು ಢಿಕ್ಕಿ ಹೊಡೆಯಿತು ಅನ್ನುವಾಗ, ಗಕ್ಕನೆ ಎಡಕ್ಕೆ ಸರಿದು ಬಚಾವಾಯಿತು. ಅದೀಗ ಹೇಗಾದರೂ ಮಾಡಿ ಮೇಲೆ ಹಾರಿ ಜೀವ ಉಳಿಸಿಕೊಳ್ಳಲು ಚಡಪಡಿಸುತ್ತಿತ್ತು. ಆದರೆ, ನುಗ್ಗಿ ಬರುತ್ತಿದ್ದ ವಾಹನಗಳ ಸಾಲುಗಳ ಮಧ್ಯೆ ರೆಕ್ಕೆ ಬಿಡಿಸಲಿಕ್ಕೂ ಎಡೆಯಿಲ್ಲದೆ ಅದು ಕಂಗೆಟ್ಟು ನಿಂತಿತ್ತು. ಜೀವಭಯದಿಂದ ತತ್ತರಿಸುತ್ತಿತ್ತು. ಅದೇ ಕ್ಷಣದಲ್ಲಿ ಧಾವಿಸಿ ಬಂದ ಕೆಂಪು ಕಾರಿನ ಹೆಡ್-ಲೈಟಿನ ಬೆಳಕು ಬಡಪಾಯಿ ಪಾರಿವಾಳದ ಕಣ್ಣು ಕುಕ್ಕಿದಾಗ ಚಕ್ರದಡಿಯಲ್ಲಿ ಸಿಲುಕಿ ಅದರ ಬದುಕೇ ಮುಗಿದಿತ್ತು. ಅದರ ದೇಹದಿಂದ ಕಿತ್ತುಬಂದ ಬಿಳಿಬಿಳಿ ಗರಿಗಳೆಲ್ಲಾ ಒಂದು ಕ್ಷಣ ಗಾಳಿಯಲ್ಲಿ ಮೇಲಕ್ಕೇರಿ ನಿಧಾನವಾಗಿ ಕೆಳಗಿಳಿದವು. ರಸ್ತೆಯ ಕರಿ ಡಾಮರಿನಲ್ಲಿ ಪಾರಿವಾಳ ಅಪ್ಪಚ್ಚಿಯಾದಲ್ಲಿ ಕೆಂಪುಕೆಂಪಾಗಿತ್ತು. ಮುಂಬೈಯ ಆಕಾಶವೂ ರಂಗುರಂಗಾಗಿತ್ತು.
ಫೋಟೋ ೧: ಮುಂಬೈಯಲ್ಲಿ ಅರಬಿ ಸಮುದ್ರದ ಪಕ್ಕದ ಪ್ರಸಿದ್ಧ ರಸ್ತೆ ಮೆರೀನ್ ಡ್ರೈವ್
ಫೋಟೋ ೨: ಮೆರೀನ್ ಡ್ರೈವ್ನ ಗಗನಚುಂಬಿ ಕಟ್ಟಡಗಳು
Comments
ಮುಂಬೈ ಬದುಕು ಲೇಖಕರು ಮುಂಬೈ…
ಮುಂಬೈ ಬದುಕು
ಲೇಖಕರು ಮುಂಬೈ ಬದುಕನ್ನು ಸೊಗಸಾಗಿ ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಮುಂಬೈನ ಲೋಕಲ್ ರೈಲು, ವಡಾ ಪಾವ್ ಅಂಗಡಿಗಳು ಎಲ್ಲವೂ ಕಾಡುತ್ತಲೇ ಇರುತ್ತವೆ. ಲೇಖಕರು ತಾವು ಅನುಭವಿಸಿದ ಹೊಸ ಸಂಗತಿಗಳನ್ನು ಸೊಗಸಾಗಿ ನಿರೂಪಿಸಿದ್ದಾರೆ. ಇನ್ನಷ್ಟು ಮುಂಬೈ ಬದುಕಿನ ಅನುಭವ ಅವರಿಂದ ಮೂಡಿಬರಲಿ ಎಂದು ಆಶಿಸುವೆ.
ಅಶ್ವಿನ್