ಮುಕ್ತ ಮಾರುಕಟ್ಟೆ ಎಂಬ ಮಹಾ ಮೋಸ!

ಮುಕ್ತ ಮಾರುಕಟ್ಟೆ ಎಂಬ ಮಹಾ ಮೋಸ!

ಬರಹ

ಮುಕ್ತ ಮಾರುಕಟ್ಟೆ ಎಂಬ ಮಹಾ ಮೋಸ!
ವಿಶ್ವ ಆರ್ಥಿಕತೆಯ ಬಲೂನು ಒಡೆದಿದೆ. ಕಳೆದ ಕೆಲವು ವರ್ಷಗಳಿಂದ ಒಂದೇ ಸಮನೆ ಊದುತ್ತಿದ್ದ ಈ ಬಲೂನಿನ ಅಂದ ಚೆಂದ, ಆಕಾಶ ಮಾರ್ಗದಲ್ಲಿನ ಅದರ ಹಾರಾಟದ ಬೆಡಗು - ಬಿನ್ನಾಣಗಳನ್ನು ಕಂಡು ಕೇಕೆ ಹಾಕಿ ಚಪ್ಪಾಳೆ ತಟ್ಟಿ ಆನಂದಿಸುತ್ತಿದ್ದ ಹೊಸ ವಿಶ್ವ ಆರ್ಥಿಕತೆಯ ಮಕ್ಕಳು ಒಮ್ಮೆಗೇ ಬೆಪ್ಪು ಹಿಡಿದಂತೆ ನೆಲ ಕಚ್ಚಿ ಕೂತು ಬಿಟ್ಟಿವೆ. ಇಪ್ಪತ್ತು ದಿನಗಳ ಹಿಂದೆ ನ್ಯೂಯಾರ್ಕನ ವಾಲ್ಸ್ಟ್ರೀಟ್ನಲ್ಲಿನ ಲೆಹ್ಮನ್ ಬ್ರದರ್ಸ್ ಬ್ಯಾಂಕ್ ದಿವಾಳಿಯಾದಾಗ ಹಿಡಿದ ಈ ಬೆಪ್ಪಿನಿಂದ ಅವರಿನ್ನೂ ಹೊರಬರಲಾಗಿಲ್ಲ! ಏಕೆಂದರೆ ಇದರ ಸರಣಿ ಪರಿಣಾಮವಾಗಿ ಅಮೆರಿಕಾದ ಹೆಚ್ಚು ಕಡಿಮೆ ಎಲ್ಲ ವಾಣಿಜ್ಯ ಬ್ಯಾಂಕುಗಳೂ ಕುಸಿದು ಬಿದ್ದಿವೆ. ಅಷ್ಟೇ ಅಲ್ಲ, ರಷ್ಯಾವೂ ಸೇರಿದಂತೆ ಯೂರೋಪಿನ ಎಲ್ಲ ಬ್ಯಾಂಕುಗಳ ನಗದು ಕೋಣೆಗಳ ಗೋಡೆಗಳೂ ಬಿರುಕು ಬಿಡತೊಡಗಿವೆ... ಈ ದೇಶಗಳ, ವಿಶೇಷವಾಗಿ ಅಮೆರಿಕಾದ 'ಉದ್ಯಮಿ'ಗಳ ಕೈಯಲ್ಲಿ ನಿಜವಾದ ಹಣ (ಅಂದರೆ ನಗದು) ಇಲ್ಲದೆ, ಜಾಗತಿಕ ಮಾರುಕಟ್ಟೆ ಹಾಳು ಬೀಳತೊಡಗಿದೆ... ಈ ವರ್ಷ ಅಮೆರಿಕಾದ ಅಭಿವೃದ್ಧಿ ದರ ಸೊನ್ನೆಯಾಗಿರುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯೂ ಸೇರಿದಂತೆ ಜಾಗತಿಕ ಹಣಕಾಸು ಸಂಸ್ಥೆಗಳು ಮುನ್ಸೂಚನೆ ನೀಡಿ ಆತಂಕ ಹುಟ್ಟಿಸಿವೆ. ಸೋವಿಯತ್ ಒಕ್ಕೂಟದ ಪತನಾನಂತರ ಮತ್ತು ಅದರ ಪರಿಣಾಮವಾಗಿ ಪ್ರತಿಪಾದಿಸಲ್ಪಟ್ಟ ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯ ಗುಳ್ಳೆ ಇಪ್ಪತ್ತೈದು ವರ್ಷಗಳ ನಂತರ ಒಡೆದು ಹೋಗಿದೆ! ಕಾರ್ಪೋರೇಟ್ ಬಂಡವಾಳಶಾಹಿಯ ಅನಿವಾರ್ಯತೆ ಮತ್ತು ಹಿರಿಮೆಯನ್ನು ಹಾಡಿ ಹೊಗಳುತ್ತಿದ್ದವರೆಲ್ಲರ ಬಾಯಿಗಳು ಸದ್ಯಕ್ಕೆ ಬಂದ್ ಆಗಿಬಿಟ್ಟಿವೆ...

ಈ ಎಲ್ಲ ಅನಾಹುತಕ್ಕೆ, ಅರ್ಥಶಾಸ್ತ್ರಜ್ಞರು ಜನ ಸಾಮಾನ್ಯರಿಗೆ ಅರ್ಥವಾಗದ toxic assets (ಅನುಮಾನಾಸ್ಪದ ಆಸ್ತಿಗಳು), sub prime market (ಅಭದ್ರ ಸಾಲಗಾರರ ವಲಯ), derivatives (ಅಗ್ಗದ ಹಣ ಸೃಷ್ಟಿ ಮಾಡುವ ಆಥರ್ಿಕ ಆಡಳಿತ ತಂತ್ರಗಳು), virtual money (ಲೆಕ್ಕ ಪುಸ್ತಕಗಳಲ್ಲಿನ-ಮಿಥ್ಯಾ-ಹಣ) ಇತ್ಯಾದಿ ಪಾರಿಭಾಷಿಕ ಪದಗಳ ಮೂಲಕ ವಿವರಣೆ ಕೊಡುವ ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಆರ್ಥಿಕತೆಯನ್ನು ಹೀಗೆ ಜನ ಸಾಮಾನ್ಯರ ಅರಿವಿಗೆ ಸಿಕ್ಕದ ಹಾಗೆ ಜಟಿಲ, ಕುಟಿಲ ಮತ್ತು ಅಮೂರ್ತಗೊಳಿಸಿ ಬೆಳೆಸಿದ್ದರಿಂದಲೇ ಈ ದುರಂತ ಸಂಭವಿಸಿದೆ ಎಂದು ಯಾರಾದರೂ ಇಂದು ಹೇಳಿದರೆ ಅದನ್ನು ತಪ್ಪೆನ್ನಲಾಗದ ಪರಿಸ್ಥಿತಿ ಉಂಟಾಗಿದೆ. ಅರ್ಥಶಾಸ್ತ್ರದ ವಿಶ್ವಾಸಾರ್ಹತೆಯೇ ಅನುಮಾನಾಸ್ಪದವಾಗತೊಡಗಿದೆ! ಹಾಗಾಗಿಯೇ ಇಂದು ಗಾಂಧಿ ಕಾಲದ ಎಷ್ಟೋ ವರ್ಷಗಳ ನಂತರ ಈ ಅಮೂರ್ತ ಅರ್ಥಶಾಸ್ತ್ರದ ಬದಲಿಗೆ ವಾಸ್ತವ ಮತ್ತು ಸರಳ ಅರ್ಥಶಾಸ್ತ್ರದ ಅಗತ್ಯದ ಮಾತುಗಳು ಕೇಳತೊಡಗಿವೆ.

ಅದೇನೇ ಇರಲಿ, ಇದೆಲ್ಲ ಆದದ್ದಾದರೂ ಹೇಗೆ? ಮತ್ತು ಏಕೆ? ಅಮೆರಿಕಾದಲ್ಲಿ ಮನೆ ಕೊಳ್ಳುವವರಿಗೆ ಬ್ಯಾಂಕುಗಳು ಅವರ ನಿಜವಾದ 'ಯೋಗ್ಯತೆ'ಯ ಅರಿವಿಲ್ಲದೆ ಸಾಲ ಕೊಟ್ಟಿದ್ದೇ ಈ ಮಹಾ ಕುಸಿತಕ್ಕೆ ಕಾರಣವೆಂದು ನಂಬಲಾಗಿದೆ. ಆದರೆ ಇದು ನಂಬುವಂತಹ ಮಾತೇ? ಇದೊಂದು ನೆಪವಷ್ಟೆ. ಮನೆ ಸಾಲ ಪಡೆದವರು ಅವನ್ನು ತೀರಿಸಲಿಕ್ಕಾಗದಾಗ, ಅವುಗಳಿಗಾಗಿ ಸಾಲಗಾರರಿಂದ ಅಡ ಇರಿಸಿಕೊಳ್ಳಲಾಗಿದ್ದ ಆಸ್ತಿಗಳನ್ನು ಬ್ಯಾಂಕುಗಳು ಮಾರಲು ಹೋದಾಗ ಬೆಳಕಿಗೆ ಬಂದ ಸತ್ಯವೇ ಈ ಮಹಾಕುಸಿತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ವಾಸ್ತವವಾಗಿ ಆ ಆಸ್ತಿಗಳೆಲ್ಲವನ್ನು ಉತ್ಪ್ರೇಕ್ಷಿತ ದರಗಳಲ್ಲಿ ಮೌಲ್ಯಮಾಪನ ಮಾಡಲಾಗಿದ್ದು, ಇವೆಲ್ಲವೂ ಒಂದೇ ಏಟಿಗೆ ಮಾರುಕಟ್ಟೆಗೆ ಬಂದ ಪರಿಣಾಮವಾಗಿ ಅವುಗಳ ವಾಸ್ತವ ಮೌಲ್ಯವೂ ಕುಸಿದು ಬ್ಯಾಂಕುಗಳು ದಿವಾಳಿ ಏಳಬೇಕಾಯಿತೆಂದು ಈಗ ವಿವರಣೆ ನೀಡಲಾಗುತ್ತಿದೆ.

ಆದರೆ ನಿಜ ಸಂಗತಿಯೆಂದರೆ, ಮನೆ ಸಾಲ ನೀಡಿಕೆಯ ಈ ಬ್ಯಾಂಕುಗಳು, ಮನೆ ಮಾರುಕಟ್ಟೆಯನ್ನು ಅವಾಸ್ತವ ಮಟ್ಟದಲ್ಲಿ ಮಂಡಿಸಿ ಅಪಾರ ಸಾಲದ ಅವಕಾಶಗಳನ್ನು ಕೃತಕವಾಗಿ ಸೃಷ್ಟಿಸಿದ ಅಡಮಾನ ಸಂಸ್ಥೆಗಳನ್ನು ನಂಬಿದ್ದೇ ಈ ಮಹಾ ದುರಂತಕ್ಕೆ ಕಾರಣವಾಗಿದೆ. ಅತಿ ಲಾಭದ ದುರಾಶೆಯಿಂದ ಈ ಬ್ಯಾಂಕುಗಳು ಮಿತಿ ಮೀರಿದ ಬಡ್ಡಿ ದರಗಳಲ್ಲಿ ಇತರ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆದು, ಅದಕ್ಕೂ ಮೀರಿದ ಬಡ್ಡಿ ದರಗಳಲ್ಲಿ ಸಾಲ ವಿತರಿಸಿ ಮಣ್ಣು ಮುಕ್ಕಿವೆ ಹಾಗೂ ತಮಗೆ ಸಾಲ ಕೊಟ್ಟ ಬ್ಯಾಂಕುಗಳಿಗೂ ಮಣ್ಣು ಮುಕ್ಕಿಸಿವೆ. ಅಷ್ಟೇ ಅಲ್ಲ, ಈ ಬ್ಯಾಂಕುಗಳಲ್ಲಿ ಹಣ ತೊಡಗಿಸಿದ್ದ ಅಥವಾ ವ್ಯವಹಾರ ಮಾಡುತ್ತಿದ್ದ ಭಾರತವೂ ಸೇರಿದಂತೆ ಅನೇಕ ದೇಶಗಳ ಬ್ಯಾಂಕುಗಳೂ ಈಗ ತೊಂದರೆಗೆ ಸಿಕ್ಕಿವೆ. ಈ ಮಹಾ ಕುಸಿತದಿಂದ ಅಮೆರಿಕಾವೊಂರಲ್ಲೇ ಕೊಚ್ಚಿ ಹೋಗಿರುವ ಹಣ ಮೂರು ಶತಕೋಟಿಯಷ್ಟು ದಶ ಲಕ್ಷ (ಟ್ರಿಲ್ಲಿಯನ್) ಡಾಲರ್ಗಳಂತೆ! ನಿಮ್ಮ ಕಲ್ಪನೆಗೆ ಸಿಗುವಂತಿದೆಯೇ?

ಇದೆಲ್ಲದರ ಜಾಗತಿಕ ಪರಿಣಾಮವೆಂದರೆ, ಹಣ ಕಳೆದುಕೊಂಡಿರುವ ಯೂರೋಪಿನ ಮತ್ತು ಅಮೆರಿಕಾದ ಉದ್ಯಮಿಗಳು ಮತ್ತು ಹಣಕಾಸು ಸಂಸ್ಥೆಗಳು ಈಗ ದಾರಿಗಾಣದೆ ತಮ್ಮ ಹಣಕಾಸಿನ ಅಗತ್ಯಗಳಿಗಾಗಿ ಇತರ ದೇಶಗಳ ಷೇರುಪೇಟೆಯಲ್ಲಿ ತಾವು ಹೂಡಿದ್ದ ಹಣವನ್ನು ವಾಪಸ್ ಪಡೆಯಲಾರಂಭಿಸಿರುವುದು. ಇದರಿಂದಾಗಿ ಕಳೆದ ಹದಿನೈದು ದಿನಗಳಲ್ಲಿ ನಮ್ಮ ಷೇರು ಪೇಟೆಯಲ್ಲಿ ರಕ್ತದ ಕೋಡಿ ಹರಿದಿದೆ. ನಮ್ಮ ರಿಸರ್ವ್ ಬ್ಯಾಂಕು ಕೆಲವು ಆಡಳಿತಾತ್ಮಕ ಕ್ರಮಗಳ ಮೂಲಕ ಪೇಟೆಗೆ ಹೆಚ್ಚು ಹಣವನ್ನು ನಗದಿನ ರೂಪದಲ್ಲಿ ಬಿಡುಗಡೆ ಮಾಡಿತಾದರೂ, ಷೇರುಪೇಟೆ ಅರ್ಧದಷ್ಟು ಕುಸಿದಿದೆ. ಭಾರತದ ಸಣ್ಣ ಮತ್ತು ದೊಡ್ಡ ಹೂಡಿಕೆದಾರರಿಬ್ಬರೂ, ಏನಾಗುತ್ತಿದೆ ಎಂದು ಯೋಚಿಸುವ ಮುನ್ನವೇ ಅವರ ಬಹಳಷ್ಟು ಹಣ ಕೊಚ್ಚಿ ಹೋಗಿದೆ. ಒಮ್ಮೆಗೇ ಕೋಟ್ಯಾಂತರ ರೂಪಾಯಿಗಳನ್ನು ಕಳೆದುಕೊಂಡ ದೊಡ್ಡ ಹೂಡಿಕೆದಾರರು ಆತ್ಮಹತ್ಯೆಯ ದಾರಿ ಹಿಡಿದಿದ್ದರೆ, ಮಧ್ಯಮ ಮತ್ತು ಕೆಳ ಮಧ್ಯಮ ವರ್ಗಗಳ ಸಣ್ಣ ಹೂಡಿಕೆದಾರರರು ತಮ್ಮೆಲ್ಲ 'ಉಳಿತಾಯ'ದ ಬಹಳಷ್ಟನ್ನು ಈ 'ಸಟ್ಟಾ ವ್ಯಾಪಾರ'ದಲ್ಲಿ ಕಳೆದುಕೊಂಡು ದಿಗ್ಭ್ರಾಂತರಾಗಿದ್ದಾರೆ.

ಹೌದು, ಇದು ಸಟ್ಟಾ ವ್ಯಾಪಾರವೇ. ನಮ್ಮ ಷೇರುಪೇಟೆ ಮಾತ್ರವಲ್ಲ, ಇಡೀ ವಿಶ್ವ ಆ‌ರ್ಥಿಕತೆಯೇ ಸಟ್ಟಾ ವ್ಯಾಪಾರವಾಗಿ ಹೋಗಿದೆ. ಆರ್ಥಶಾಸ್ತ್ರದ ಮೂಲ ಕಲ್ಪನೆಗಳೆನಿಸಿದ ದುಡಿಮೆ, ಉತ್ಪಾದನೆ ಮತ್ತು ಬಳಕೆಯ ನಡುವಣ ಸಮೀಕರಣವೇ ಅಸ್ತವ್ಯಸ್ತಗೊಡು, ಅವು ಮಧ್ಯವರ್ತಿಗಳ ಸಟ್ಟಾ ವ್ಯಾಪಾರ ಲೋಕದಲ್ಲಿ ಅಪ್ರಸ್ತುತವಾಗಿ ಹೋಗಿವೆ. ಅರ್ಥಶಾಸ್ತ್ರವೆಂದರೆ ಬರೀ ಲಾಭಕೋರತನದ ಶಾಸ್ತ್ರವಾಗಿ ಪರಿವರ್ತಿತವಾಗಿ, ಆ ಲಾಭಕೋರತನವನ್ನು ಹೆಚ್ಚಿಸುವುದಷ್ಟೇ ಅಲ್ಲ, ಅದಕ್ಕೊಂದು ಅರ್ಥಶಾಸ್ತ್ರೀಯ ಮಾನ್ಯತೆ ನೀಡುವ ಕೈಗಾರಿಕೆಯೇ 'ಸೇವೆ' (Services)ಗಳ ಹೆಸರಿನಲ್ಲಿ ವಿಜೃಂಭಿಸುತ್ತಾ ಇಂದು ವಿಶ್ವ ಆರ್ಥಿಕತೆಯ ಮಹಾ ಕುಸಿತಕ್ಕೆ ಕಾರಣವಾಗಿದೆ. ಇದು ಈಗ ಅಮೆರಿಕಾದ ಗೃಹ ಸಾಲ 'ಸೇವಾ' ವ್ಯವಸ್ಥೆಯ ವೈಫಲ್ಯದಿಂದ ಎದ್ದು ಕಾಣುವಂತಾಗಿದೆ. ಅಮೆರಿಕಾದ ಅರ್ಥಶಾಸ್ತ್ರಜ್ಞರ ಪ್ರಕಾರ ಈ ವೈಫಲ್ಯಕ್ಕೆ ಕಾರಣ, ಈ ಸೇವಾ ಸಂಸ್ಥೆಗಳು ಲಾಭವೊಂದನ್ನೇ ಮುಖ್ಯ ಗುರಿ ಮಾಡಿಕೊಂಡು ಆರ್ಥಿಕತೆಯೊಂದರ ಮೂಲ ಸತ್ಯಗಳ ಅರಿವೇ ಇಲ್ಲವಾಗುವಷ್ಟರ ಮಟ್ಟಿಗೆ, ತಮ್ಮದೇ ಸಾಂಸ್ಥಿಕ ಸ್ವಾಯತ್ತತೆಯನ್ನೂ, ಪ್ರತ್ಯೇಕತೆಯನ್ನೂ ಸ್ಥಾಪಿಸಿಕೊಳ್ಳಲು ಅವಕಾಶ ಉಂಟಾದದ್ದು.

ಇದುವರೆಗೆ ಇದನ್ನು ಮಾರುಕಟ್ಟೆಯ 'ಮುಕ್ತತೆ'ಯೆಂದು ಗೌರವಯುತವಾಗಿ ಕರೆಯಲಾಗುತ್ತಿತ್ತು. ಈ ಮುಕ್ತ ವಾತಾವರಣವೇ ಈ ಸೇವಾ ಮಧ್ಯವರ್ತಿಗಳು ಹಿತಾಸಕ್ತ ಗುಂಪುಗಳು (cartels) ಮತ್ತು hedge funds(ಕಳ್ಳ ಹಣ)ಗಳ ಮೂಲಕ ಮಾರುಕಟ್ಟೆಯಲ್ಲಿ ಕೃತಕ ಏರಿಳಿತಗಳನ್ನು ಸೃಷ್ಟಿಸುತ್ತಾ ಲಾಭಗಳ ಗುಡ್ಡೆಗಳನ್ನೇ ಬಾಚಿಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟಿತ್ತು. ಇದು ಇಂದು ಗೃಹ ಸಾಲ ವ್ಯವಸ್ಥೆಯ ದಿವಾಳಿಯ ರೂಪದಲ್ಲಿ ತನ್ನ ಅತಿಯನ್ನು ಮುಟ್ಟಿ, ವಿಶ್ವ ಆರ್ಥಿಕತೆಯ ಮಹಾ ಕುಸಿತಕ್ಕೆ ಕಾರಣವಾಗಿದೆ. ಇದರಲ್ಲಡಗಿದ ಅನೈತಿಕ ವ್ಯಾಪಾರ ಪ್ರವೃತ್ತಿಗಳನ್ನು ಗುರುತಿಸಲು ನಿರಾಕರಿಸಿರುವ ಬಂಡವಾಳವಾದಿಗಳು, ಇದನ್ನೀಗ ಬಂಡವಾಳವಾದದ ಹೊಸ ಬಿಕ್ಕಟ್ಟು ಎಂಬ ಗೌರವಯುತ ಹೆಸರಿನಲ್ಲಿ ಕರೆಯಲಾರಂಭಿಸಿದ್ದಾರೆ! ಆದರೆ ಇಲ್ಲಿನ ಸಮಾಧಾನದ ಸಂಗತಿಯೆಂದರೆ, ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಬಂಡವಾಳದಾರರರು ಆತ್ಮಶೋಧನೆ ಮಾಡಿಕೊಳ್ಳಬೇಕಾಗಿದೆಯೆಂದೂ ಇವರು ಕರೆಕೊಡಲಾರಂಭಿಸಿದ್ದಾರೆ. ಇತ್ತೀಚಿನ ಇಬ್ಬರು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರರಾದ ಜೋಸೆಫ್ ಸ್ಟಿಗ್ಲಿಟ್ಜ್ ಮತ್ತು ಪಾಲ್ ಕ್ರುಗ್ಮನ್ ಅವರು ಒಂದು ಹೆಜ್ಜೆ ಮಂದೆ ಹೋಗಿ, ಬಂಡವಾಳವಾದಿ ಅರ್ಥಶಾಸ್ತ್ರಜ್ಞರು ಎಡಪಂಥೀಯ ರಾಜಕಾರಣದಿಂದ ಕೆಲವು ಪಾಠಗಳನ್ನಾದರೂ ಕಲಿಯುವ ಕಾಲವೀಗ ಬಂದಿದೆ ಎನ್ನ ತೊಡಗಿದ್ದಾರೆ. ಸಮಾಜವಾದವೆಂದರೆ ಸಮಾಜ ವಿರೋಧಿ ತತ್ವವೆಂಬಂತೆ ಹೌಹಾರುತ್ತಿದ್ದ ಅಮೆರಿಕಾದ ಅಭಿಪ್ರಾಯ ಮುಖಂಡರು, ಈಗ ಕ್ರುಗ್ಮನ್ ಅವರನ್ನು 'ಸಮಾಜವಾದಿ ಅರ್ಥಶಾಸ್ತ್ರಜ್ಞ' ಎಂದು ಪಶ್ಚಾತ್ತಾಪದ ದನಿಯಲ್ಲಿ ಕರೆಯತೊಡಗಿದ್ದಾರೆ!

ಆದರೆ, ಮುಕ್ತ ಮಾರುಕಟ್ಟೆಯ ಮುಕ್ತ ಬೆಂಬಲಿಗರಾದ ನಮ್ಮ ಪ್ರಧಾನ ಮಂತ್ರಿ ಮತ್ತು ಹಣಕಾಸಿನ ಮಂತ್ರಿಯ ಮುಖಗಳನ್ನು ನೋಡಿ. ಅವರು ದೇಶದ ಜನತೆಗೆ ಆತಂಕ ಪಡುವ ಅಗತ್ಯವಿಲ್ಲ, ನಮ್ಮ ದೇಶದ ಆರ್ಥಿಕತೆಯ ಮೂಲ ನೆಲಗಟ್ಟು ಸುಭದ್ರವಾಗಿದೆ ಎಂದು ಆಶ್ವಾಸನೆ ಕೊಡುವುದರಲ್ಲೇ ಸುಸ್ತಾಗಿ ಹೋಗಿದ್ದಾರೆ. ಯಾವುದು ತಮ್ಮ ಹೊಸ ಆರ್ಥಿಕ ನೀತಿಯ ಯಶಸ್ಸಿನ ಸಂಕೇತವೆಂದು ಇವರು ಹೇಳುತ್ತಿದ್ದರೋ, ಆ ಷೇರು ಪೇಟೆಯ ಸಮೃದ್ಧಿ ಜನರ ಕಣ್ಮುಂದೆಯೇ ನಾಶವಾಗತೊಡಗಿರುವುದು ಅವರ ಧೃತಿಗೆಡಿಸಿದಂತಿದೆ. ಹೊಸ ಜಾಗತಿಕ ಆರ್ಥಿಕತೆಯ ವಿಜೃಂಭಣೆಯ ಸಂಕೇತವಾಗಿ ಜನರ ಕಣ್ಣಿಗೆ ಕಾಣುತ್ತಿದ್ದ ಐ.ಸಿ.ಐ.ಸಿ.ಐ. ಎಂಬ ಜಾಗತಿಕ ಮಟ್ಟದ ಬ್ಯಾಂಕ್ ದಿವಾಳಿ ಎದ್ದಿದೆ ಎಂಬ ಸುದ್ದಿ ಹರಡಿ ಠೇವಣಿದಾರರು ಒಮ್ಮೆಗೇ ಬ್ಯಾಂಕ್ ಮುಂದೆ ಠೇವಣಿ ವಾಪಸ್ ಪಡೆಯಲು ಸಾಲು ನಿಲ್ಲುವಷ್ಟು ಜನ ಆತಂಕಿತರಾಗಿದ್ದಾರೆ. ಹೀಗಾಗಿ ಹಣಕಾಸಿನ ಮಂತ್ರಿ ಚಿದಂಬರಂ ಅವರು ರಾಷ್ಟ್ರದ ಎಲ್ಲ ಬ್ಯಾಂಕುಗಳ ಠೇವಣಿಗಳೂ ಸುಭದ್ರವಾಗಿವೆ ಎಂಬ ಭರವಸೆಯನ್ನು ಜನರಿಗೆ ಪದೇ ಪದೇ ನೀಡುವ ಪರಿಸ್ಥಿತಿ ಉಂಟಾಗಿದೆ.

ಇನ್ನು ಈ ಹೊಸ ಆರ್ಥಿಕತೆಯ ಹರಿಕಾರರಾದ ಮನಮೋಹನಸಿಂಗರು ಈಗ ಇದ್ದಕ್ಕಿದ್ದಂತೆ ರಾಗ ಬದಲಿಸಿ, ಅಭಿವೃದ್ಧಿಗೊಂಡ ದೇಶಗಳ ಮತ್ತು ಐ.ಎಂ.ಎಫ್.ನಂತಹ ಜಾಗತಿಕ ಹಣಕಾಸು ಸಂಸ್ಥೆಗಳ ತಪ್ಪು ನೀತಿಗಳ ವಿರುದ್ಧ ಹರಿಹಾಯತೊಡಗಿದ್ದಾರೆ. ಈವರೆಗೆ ಆರ್ಥಿಕ ಸುಧಾರಣೆಗಳ (ಅಂದರೆ ಸರ್ಕಾರದ ನಿಯಂತ್ರಣ ಮತ್ತು ಮೇಲ್ವಿಚಾರಣಾ ಕ್ರಮಗಳ ಸಡಿಲಿಕೆ) ಮತ್ತು ಅಂತಾರಾಷ್ಟ್ರೀಯ ಬಂಡವಾಳ ಮಾರುಕಟ್ಟೆಯಲ್ಲಿ ರೂಪಾಯಿಯ ಸಂಪೂರ್ಣ ಮೌಲ್ಯಪರಿವರ್ತನೆಯ ಕಡೆಗಿನ ಕ್ರಮಗಳ ವೇಗ ಎಡಪಂಥೀಯರ ಅಡೆ ತಡೆ ರಾಜಕಾರಣದಿಂದ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಡಿಸಿ ಮಧ್ಯಮ ವರ್ಗಗಳ ಸಹಾನುಭೂತಿ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದ ಅವರೀಗ, ಪಶ್ಚಿಮದ ದೇಶಗಳ ಸರ್ಕಾರಗಳು ತಮ್ಮ ಆರ್ಥಿಕತೆಗಳನ್ನು ಸಕಾಲಿಕ ಹಸ್ತಕ್ಷೇಪಗಳ ಮೂಲಕ ಸಮರ್ಪಕವಾಗಿ ಮೇಲ್ವಿಚಾರಣೆಗೆ ಒಳಪಡಿಸದಿದ್ದುದೇ ಇಂದಿನ ದುರಂತಕ್ಕೆ ಕಾರಣವೆಂದು ವಿಶ್ಲೇಷಿಸತೊಡಗಿದ್ದಾರೆ! ಅಷ್ಟೇ ಅಲ್ಲ, ಅಭಿವೃದ್ಧಿಶೀಲ ರಾಷ್ಟ್ರಗಳು ವಿಶ್ವ ಆರ್ಥಿಕತೆಯೊಡನೆ ಅತಿಯಾಗಿ ಜೋಡಣೆಗೊಳ್ಳಲು ಯತ್ನಿಸಬಾರದೆಂದು ಎಚ್ಚರಿಸಿದ್ದಾರೆ... ಎಂತಹ ಜ್ಞಾನೋದಯ! ಹೀಗಾಗಿಯೇ ಏನೋ, ಇವರ ಗೆಳೆಯ, ಮಾರ್ಗದರ್ಶಿ ಹಾಗೂ ತತ್ವಜ್ಞಾನಿ ಮೊಂಟೇಕ್ ಸಿಂಗ್ ಅಹ್ಲೂವಾಲಿಯಾರ ಮುಖವೇ ಎಲ್ಲೂ ಕಾಣದಾಗಿದೆ!

ಹೀಗೆ ತಲೆಕೆಳಗಾಗುತ್ತಿರುವ ವಿಶ್ವ ಆರ್ಥಿಕತೆಯ ಪರಿಣಾಮಗಳು ಭಾರತದ ಆರ್ಥಿಕತೆ ಮೆಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಭಾರತದ ಅರ್ಥಶಾಸ್ತ್ರಜ್ಞರೂ ಸೇರಿದಂತೆ ಜಾಗತಿಕ ಅರ್ಥಶಾಸ್ತ್ರಜ್ಞರೂ ಹೇಳುತ್ತಿದ್ದಾರೆ. ಆದರೆ ಹೆಚ್ಚಿನ ಪರಿಣಾಮವೆಂದರೇನು ಎಂಬುದನ್ನು ಅವರು ನಿರ್ದಿಷ್ಟವಾಗಿ ವಿವರಿಸುತ್ತಿಲ್ಲ. ಮನಮೋಹನಸಿಂಗ್ ಮತ್ತು ಅವರ ಪರಿವಾರದವರ ಕೈಲಾದ ಎಲ್ಲ ಪ್ರಯತ್ನಗಳ ಹೊರತಾಗಿಯೂ ಅದೃಷ್ಟವಶಾತ್, ಗಾಂಧಿಯುಗದ ಪಳೆಯುಳಿಕೆಯಂತಿರುವ ನಮ್ಮ ವೈವಿಧ್ಯಯಮಯ ಮತ್ತು ಬಹುತ್ವದ ರಾಜಕಾರಣದಿಂದಾಗಿ ಭಾರತ ವಿಶ್ವ ಆರ್ಥಿಕತೆಯೊಂದಿಗೆ ತನ್ನನ್ನು ಸಂಪೂರ್ಣ ಬೆಸೆದುಕೊಂಡಿಲ್ಲ. ಚೀನಾದ ಬಹಳಷ್ಟು ಬ್ಯಾಂಕುಗಳಂತೆ ನಮ್ಮ ಬ್ಯಾಂಕುಗಳು ಜಾಗತಿಕ ವಾಣಿಜ್ಯ ಬ್ಯಾಂಕುಗಳೊಂದಿಗೆ ಅಷ್ಟಾಗಿ ವ್ಯಾಹಹಾರಿಕ ಸಂಬಂಧಗಳನ್ನು ಹೊಂದಿಲ್ಲ. ಹಾಗೇ, ಚೀನಾದಂತೆ ನಮ್ಮದು ಪ್ರಧಾನವಾಗಿ ರಫ್ತು ಆಧಾರಿತ ಆರ್ಥಿಕತೆಯಲ್ಲ. ಹಾಗಾಗಿ, ಸದ್ಯದ ವಿಶ್ವ ಆರ್ಥಿಕ ಕುಸಿತದಿಂದಾಗಿ ಚೀನಾದ ಮೇಲೆ ಆದಷ್ಟು ದುಷ್ಪರಿಣಾಮ ನಮ್ಮ ಮೇಲೆ ಆಗದು ಎಂದು ಹೇಳಲಾಗುತ್ತಿದೆ. ಅಭಿವೃದ್ಧೀಶೀಲ ದೇಶವೊಂದು ಆರ್ಥಿಕತೆಯನ್ನು ಹೇಗೆ ಬೆಳಸಬೇಕು ಎಂಬುದನ್ನು ಚೀನಾವನ್ನು ನೋಡಿ ಕಲಿಯರಿ ಎಂದು ಹೇಳುತ್ತಿದ್ದವರು ಸಹಜವಾಗಿಯೇ ಸದ್ಯಕ್ಕೆ ಬಾಯಿ ಮುಚ್ಚಿಕೊಂಡಿದ್ದಾರೆ.

ಆದರೆ ನಮ್ಮ ಷೇರುಪೇಟೆ ಕುಸಿತದ ಪರಿಣಾಮವಾಗಿ ಡಾಲರ್ ಎದುರು ರೂಪಾಯಿ ಹಿಂದೆಂದೂ ಕುಸಿಯದಷ್ಟು ಪ್ರಮಾಣದಲ್ಲಿ ಕುಸಿದಿರುವುದರಿಂದಾಗಿ, ಈವರೆಗೆ ಎಲ್ಲ ಅಂತಾರಾಷ್ಟ್ರೀಯ ಆರ್ಥಿಕ ಅನಾಹುತಗಳ ಎದುರು ನಮಗೆ ರಕ್ಷಣಾ ಗೋಡೆಯಂತಿದ್ದ ನಮ್ಮ ವಿದೇಶಿ ವಿನಿಮಯ ದಾಖಲೆ ಸಂಗ್ರಹವೀಗ ಇಳಿಗತಿಯಲ್ಲಿ ಸಾಗತೊಡಗಿದ್ದು ಆತಂಕ ಹುಟ್ಟಿಸಿದೆ. ಇದರ ಪರೋಕ್ಷ ಪರಿಣಾಮವಾಗಿ ನಮ್ಮ ಔದ್ಯಮಿಕ ವ್ಯಾಪಾರ ವಹಿವಾಟುಗಳೂ ಇಳಿಗತಿಗೆ ಈಡಾಗಿವೆ. ನಮ್ಮ ಆರ್ಥಿಕತೆಗೆ ಹೊಸ ಚೈತನ್ಯ ನೀಡತೊಡಗಿದ್ದ ರಿಯಲ್ ಎಸ್ಟೇಟ್, ಗಣಿ ಉದ್ಯಮ, ಮಾಹಿತಿ ತಂತ್ರಜ್ಞಾನ, ಹೊರಗುತ್ತಿಗೆ, ಪ್ರವಾಸೋದ್ಯಮ ಇತ್ಯಾದಿ ವಲಯಗಳ ಲಾಭಾಂಶ ತೀವ್ರ ಇಳಿಗತಿಗೆ ಸಿಕ್ಕಿವೆ. ಈಗಾಗಲೇ ಅನೇಕ ಸುಪ್ರಸಿದ್ಧ ಕಂಪನಿಗಳು ತಮ್ಮ ನೌಕರಬಲವನ್ನು ಕುಗ್ಗಿಸುವ ಪ್ರಯತ್ನದಲ್ಲಿವೆ. ಅಮೆರಿಕಾ ಮತ್ತು ಯೂರೋಪಿನಿಂದ ಕೆಲಸ ಕಳೆದುಕೊಂಡ ಭಾರತೀಯರು ವಾಪಸಾಗತೊಡಗಿದ್ದಾರೆ. ಇದರ ದೀರ್ಘ ಪರಿಣಾಮಗಳನ್ನು ಈಗಲೇ ಊಹಿಸಲಾಗವುದಿಲ್ಲ. ಒಂದಂತೂ ನಿಜ, ಈ ಹತ್ತು ವರ್ಷಗಳಲ್ಲಿ ಭಾರತ ಕಂಡ 'ಧಾಂಧೂಂ' ಆರ್ಥಿಕತೆ ತನ್ನ ಅಸಹಜ ಭಾರದಿಂದಲೇ ಕುಸಿಯತೊಡಗಿದೆ. ಏರಿದ್ದ ಆರ್ಥಿಕ ಮತ್ತು ಇಳಿಯತೊಡಗಿದೆ. ಶ್ರೀಮಂತರಿಗೆ ಮತ್ತು ಮಧ್ಯಮ ವರ್ಗದವರಿಗೆ ಅತಿಲಾಭ ತಂದುಕೊಟ್ಟ ಸರಕಿನ ಈ ಆರ್ಥಿಕತೆ, ಬಡವರನ್ನು ಮತ್ತಷ್ಟು ಅನಾಥರನ್ನಾಗಿ ಮಾಡಿ ತನ್ನ ಹೆಜ್ಜೆಗಳನ್ನು ಹಿಂದಿಡುತ್ತಿರುವಂತೆ ತೋರುತ್ತಿದೆ.

ಈ ಬಗ್ಗೆ ಹೆಚ್ಚು ದುಃಖ ಪಡುವ ಅಗತ್ಯವಿಲ್ಲ. ಭೂಮಿ ಬಿಟ್ಟು ಮೇಲೇರಿದ್ದೆಲ್ಲ ಮತ್ತೆ ಭೂಮಿಯ ವಾಸ್ತವಕ್ಕೆ ಇಳಿದು ಬರಲೇಬೇಕು! ಮುಕ್ತ ಮಾರುಕಟ್ಟೆಯ ಹೆಸರಿನಲ್ಲಿ ಎಲ್ಲರ ಅಗತ್ಯಗಳನ್ನು ನಿರ್ಲಕ್ಷಿಸಿ ಕೆಲವರ ಚಪಲಗಳನ್ನು ಪೂರೈಸುವ ಅಡ್ಡದಾರಿ ಹಿಡಿದ ವಿಶ್ವ ಆರ್ಥಿಕತೆ ತನ್ನ ವಾಸ್ತವ ಪ್ರಜ್ಞೆಯನ್ನು ಮರಳಿ ಪಡೆದುಕೊಳ್ಳುವಂತಹ ಆಘಾತವನ್ನು ಈಗ ಅನುಭವಿಸಿರುವುದು ಒಳ್ಳೆಯದಕ್ಕೇ ಎಂದು ನಾವು ಭಾವಿಸಬೇಕು. ಇಂದು ಅಮೆರಿಕಾ ನುಚ್ಚು ನೂರಾಗಿರುವ ತನ್ನ ಆರ್ಥಿಕತೆಯನ್ನು ಪುನಾರಚಿಸಿಕೊಳ್ಳಲು 700 ದಶಲಕ್ಷ ಡಾಲರ್ ಸರ್ಕಾರಿ ಹಣವನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡುವ ಪ್ರಯತ್ನದಲ್ಲಿದೆ. 250 ದಶಲಕ್ಷ ಡಾಲರಗಳನ್ನು ತನ್ನ ಕುಸಿದಿರುವ ಬ್ಯಾಂಕುಗಳ ಪುನಶ್ಚೇತನಕ್ಕಾಗಿ ನೀಡಲು ನಿರ್ಧರಿಸಿದೆ. ಬ್ರಿಟನ್ ಎಲ್ಲರಿಗಿಂತ ಮುಂಚೆಯೇ ತನ್ನ ಬ್ಯಾಂಕುಗಳ ಸುರಕ್ಷತೆಗಾಗಿ ನಗದು ಪೂರೈಕೆಯ ದೊಡ್ಡ ಯೋಜನೆಯನ್ನೇ ಪ್ರಕಟಿಸಿದೆ. ರಷ್ಯಾ ತನ್ನ ದೇಶದ ಬ್ಯಾಂಕುಗಳ ಠೇವಣಿದಾರರಿಗೆ ವಿಮಾ ಸೌಲಭ್ಯ ಒದಗಿಸಲು ಮುಂದೆ ಬಂದಿದೆ. ಐರೋಪ್ಯ ರಾಷ್ಟ್ರಗಳಂತೂ ತಮ್ಮ ದೇಶದ ಬ್ಯಾಂಕುಗಳಿಗೆ ಠೇವಣಿ ಸೆಳೆಯಲು ವೈವಿಧ್ಯಮಯ ಉಡುಗೊರೆಗಳ ಆಕರ್ಷಣೆ ಒಡ್ಡಿವೆ! ಅಂತೂ ಈಗ ಜಗತ್ತಿನಾದ್ಯಂತ ಸರ್ಕಾರಗಳು ಮುಕ್ತ ಮಾರುಕಟ್ಟೆಯ ಅನಾಹುತಗಳಿಗೆ ಎಚ್ಚೆತ್ತುಕೊಂಡು, ದೇಶದ ಆರ್ಥಿಕತೆಯಲ್ಲಿ ಸರ್ಕಾರದ ಹಸ್ತಕ್ಷೇಪ ಮತ್ತು ನಿಯಂತ್ರಣಗಳ ಅಗತ್ಯಗಳನ್ನು ಮನಗಂಡಿವೆ. ಸಮಾಜವಾದದ ಕಾಲ ಮುಗಿಯಿತೆಂದು ಅವಸರದಲ್ಲಿ ಅಂದವರೀಗ ನಾಲಿಗೆ ಕಚ್ಚಿಕೊಳ್ಳತೊಡಗಿದ್ದಾರೆ!

ಮುಕ್ತ ಮಾರುಕಟ್ಟೆ ಎಂದರೆ ಲಾಭಕೋರ ಬಂಡವಾಳವಾದದ ಅನಿಯಂತ್ರಿತ ಮತ್ತು ಅನೈತಿಕ ಬೆಳವಣಿಗೆಯಾಗಿದ್ದು, ಅದು ಬರೀ ಹಣದ ವ್ಯವಹಾರವಾಗಿ ಮಾನವೀಯ ಸಂದರ್ಭದ ಆಯಾಮವನ್ನೇ ಕಳೆದುಕೊಂಡು ಮನುಷ್ಯನನ್ನು ಎಲ್ಲ ರೀತಿಯ ದಿವಾಳಿಯೆಡೆಗೆ ಕೊಂಡೊಯ್ಯುವುದು ಎಂಬುದೀಗ ಸಾಬೀತಾಗಿದೆ. ಹಾಗೇ ಇಂತಹ ಮಾರುಕಟ್ಟೆಯ ತತ್ವ ಚಾಲ್ತಿಗೆ ಬಂದುದೂ, ಸರ್ಕಾರೀ ಹಸ್ತಕ್ಷೇಪದ ವಿಪರೀತ ಪರಿಣಾಮಗಳಿಗೆ ದಾರಿ ಮಾಡಿಕೊಟ್ಟ ಹುಸಿ - ಸಮಾಜವಾದವೊಂದರ ವೈಫಲ್ಯದಿಂದಲೇ ಎಂಬುದನ್ನೂ ನಾವು ಅರಿಯಬೇಕಿದೆ. ಹಾಗಾಗಿ ಇಂದು ಅಗತ್ಯವಾಗಿರುವುದು, ಇವೆರಡೂ ಅನುಭವಗಳಿಂದ ಪಾಠ ಕಲಿತು ರೂಪಿತವಾಗಬೇಕಾದ ಒಂದು ಮಧ್ಯಮ ಮಾರ್ಗ. ಇದು ಬಂಡವಾಳವನ್ನು ಒಂದು ಮಾನವ ಸಂದರ್ಭದಲ್ಲಿ ಉಳಿಸಿ ಬೆಳೆಸಬಲ್ಲ ವಿಕೇಂದ್ರೀಕೃತ ಅರ್ಥ ವ್ಯವಸ್ಥೆಯಾಗಿದ್ದೀತು. ಇದರ ರಾಜಕೀಯ ರೂಪಗಳನ್ನು ನಾವಿನ್ನೂ ಆವಿಷ್ಕರಿಸಿಕೊಳ್ಳಬೇಕಿದೆ. ಅದಕ್ಕೆ, ಭಾರತದ ಮಟ್ಟಿಗೆ ಗಾಂಧಿ ಮತ್ತು ಲೋಹಿಯಾ ವಿಚಾರಗಳು ಸ್ಫೂರ್ತಿಯಾದಾವು ಎಂಬುದು ನನ್ನ ನಂಬಿಕೆ.