ಮುಗ್ಧ ಮನಸ್ಸು.

ಮುಗ್ಧ ಮನಸ್ಸು.

 ಇದು ಒಂದು ಹಳ್ಳಿ ಹುಡುಗಿಯ ಮುಗ್ಧ ಮನಸ್ಸಿನ ಅರಣ್ಯ ರೋಧನದ ಕಥೆ. ಹಳ್ಳಿಯ ಜನ-ಜೀವನಕ್ಕೆ ಹಿಡಿದ ಕನ್ನಡಿ. ಇಂದಿಗೂ ಇಂಥಹ ಘಟನೆಗಳು ಹಳ್ಳಿಗಳಲ್ಲಿ ಸರ್ವೇ ಸಾಮಾನ್ಯ. ಬಹುಶ: ನಗರಗಳಲ್ಲಿ,ಪಟ್ಟಣಗಳಲ್ಲಿ ವಾಸಿಸುವ ಜನರಿಗೆ ಸ್ವಲ್ಪ ಅಚ್ಚರಿಯೆನಿಸಬಹುದು ಇನ್ನು ಈ ರೀತಿ ಇದೇನಾ ಎಂದು.

 
ಭಾರತಿ ಮುದ್ದು ಮುಖದ ಮುಗ್ಧತೆಯೇ ತುಂಬಿಕೊಂಡಿರುವ,ಮೃದು ಮನಸ್ಸಿನ ಮಿತಭಾಷಿ ಹುಡುಗಿ.ಆಗ ತಾನೇ ಪ್ರಾಥಮಿಕ ಶಿಕ್ಷಣ ಮುಗಿಸಿ ಮಾಧ್ಯಮಿಕ ಶಿಕ್ಷಣಕ್ಕೆ ಕಾಲಿಟ್ಟ ಹಳ್ಳಿಯ ಬಡ ಕುಟುಂಬದ ಬಾಲೆ. ಚಿಕ್ಕ ವಯಸ್ಸು,ಮದುವೆ, ಸಂಸಾರ ಎಂದರೆ ಏನು ಎಂದು ಅರಿಯದ,ಮಕ್ಕಳೊಡನೆ ಬೆರೆಯುವ ಮನಸ್ಸದು.ಅಂಥಹ ಮನಸ್ಸಿನಲ್ಲಿ ಮನೆ,ಮಕ್ಕಳು, ಸಂಸಾರ ಎಂಬಿತ್ಯಾದಿ ಭಾವನೆಗಳಿಗೆ ಜಾಗ ಕಲ್ಪಿಸಿದವರು ಅವಳ ತಂದೆ ತಾಯಿ.ಹೈಸ್ಕೂಲ್ ಮೆಟ್ಟಿಲು ಏರಿದ್ದೆ ತಡ,ಅದೇ ಊರಿನ ಹುಡುಗನ ಜೊತೆ ಭಾರತಿ ಮದುವೆ ನಿಶ್ಚಯ ಮಾಡಿದರು.ಹುಡುಗ ಅನಕ್ಷರಸ್ತ,ಶಾಲೆಯ ಮೆಟ್ಟಿಲನ್ನೂ ಹತ್ತಿರಲಿಲ್ಲ. ಅದೂ ಅಲ್ಲದೆ ಅವನ ಇಡೀ ಕುಟುಂಬವೇ ತೋಟದಲ್ಲಿ ವಾಸವಾಗಿತ್ತು.ಊರು ಬಿಟ್ಟು ಬಹಳ ದೂರ. ಹಾಗಗಿಯೋ ಏನೋ ಅವನು ಜನರ ಸಂಪರ್ಕಕ್ಕೆ ಬರುತ್ತಿರಲಿಲ್ಲ. ಮುಗ್ಧನೋ,ಅಥವಾ ಅವನ ಸ್ವಭಾವವೇ ಹಾಗೆಯೋ ಯಾರಿಗೂ ತಿಳಿದಿರಲಿಲ್ಲ.
 
ಭಾರತಿ ಅಕ್ಷರಸ್ತೆ,ಮೇಲಾಗಿ ಸಣ್ಣ ವಯಸ್ಸು. ಅವಳಿಗೆ ಮದುವೆ ಇಸ್ಟವಿತ್ತೋ ಇಲ್ಲವೋ.ಅವಳ ಆಸೆ-ಆಕಾಂಕ್ಷೆ ಗಳೇನು,ಮುಂದಿನ ಗುರಿ ಏನು ಎಂದು ಅವಳ ಮನೆಯವರು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ.ಇದು ಅಪ್ಪ ಅಮ್ಮಂದಿರ ನಿರ್ಲಕ್ಷ್ಯವೋ ಅಥವಾ ಹಳ್ಳಿ ಬದುಕಿನ ಕಟ್ಟುಪಾಡುಗಳೋ ಅಥವಾ ವರದಕ್ಷಿಣೆಯೋ ತರ್ಕಕ್ಕೆ ನಿಲುಕದು.
ಮನೆಯವರ ಆಣತಿಯಂತೆ ಮದುವೆಯಾದಳು ಭಾರತಿ, ಹೈಸ್ಕೂಲು ಓದು ಸಹ ಮುಗಿದಿರಲಿಲ್ಲ.ಇಷ್ಟವಿರಲಿ  ಬಿಡಲಿ, ತಂದೆ ತಾಯಿಯ ಕನ್ಯಾ ಹೊರೆಯನ್ನು ಕೆಳಗಿಳಿಸಿದಳು. ಸಂತೋಷದಿಂದಲೇ ಗಂಡನ ಮನೆಯೂ ಸೇರಿದಳು. ಆದರೆ ಆ ಸಂತೋಷದ ಹಿಂದೆ ಅತೀ ಘೋರವಾದ ದುಃಖ ಕಾದಿದೆಯೆಂದು ಯಾರೂ ಊಹಿಸಿರಲಿಲ್ಲ.
ಮದುವೆಯಾದ ಹೊಸತರಲ್ಲಿ ಭಾರತಿ ಖುಷಿಯಿಂದಲೇ ಇರುತ್ತಿದ್ದಳು.ಇವಳನ್ನು ನೋಡಿದ ಮನೆಯವರಿಗೆ ಏನೋ ಒಂದು ಸಮಾಧಾನ,ನೀರಾಳಭಾವ.ತಮ್ಮ ಮೇಲಿನ ದೊಡ್ಡ ಭಾರ ಇಳಿದ ಹಾಗೆ. ಮಗಳ ಸಂತೋಷ ಕಂಡು ಹಿಗ್ಗುತ್ತಿದ್ದರು, ಅದು ಶಾಶ್ವತವೇನೂ ಅನ್ನೋ ಹಾಗೆ.! ಹೀಗೆಯೇ ಕೆಲವು ದಿನಗಳು ಕಳೆದವು.
 
ಮಧ್ಯಾನದ ಸಮಯ,ಬಿರುಗಾಳಿಯಂತೆ ಧುತ್ತೆಂದು ಬಂತು ಒಂದು ಘೋರವಾದ ಸುದ್ದಿ, "ಭಾರತಿ ತೋಟದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.?" ಅನೀರಿಕ್ಷಿತ,ಆಘಾತ.
ಅರಗಿಸಿಕೊಳ್ಳಲಾಗದ ಕಹಿ,ಕಟೋರ ಸತ್ಯ.ಯಾರು ಅವಳ ಬದುಕು ಸುಂದರವಾಗಿದೆ ಎಂದು ತಿಳಿದಿದ್ದರೋ ಆ ಬದುಕಿಗೆ ತಿಲಾಂಜಲಿ ಇಟ್ಟುಮರಳಿ ಬಾರದ, ಅನತಿ ದೂರದ ಊರಿಗೆ ಪಯಣ ಬೆಳೆಸಿದ್ದಳು.ಹೆತ್ತವರಿಗಾಗಲಿ, ಗಂಡನಿಗಾಗಲಿ ತನ್ನ ಸಾವಿನ ಸುಳಿವನ್ನೂ ಸಹ ನೀಡದೆ,ಒಂದು ಮಾತೂ ಹೇಳದೆ,ಮೃತ್ಯುವಿಗೆ ಶರಣಾಗಿದ್ದಳು.ಯ್ಯಾಕೆ ಹೀಗಾಯಿತು, ಆತ್ಮಹತ್ಯೆ ಏಕೆ ಮಾಡಿಕೊಂಡಳು, ಗಂಡನ ಮನೆಯವರ ಕಿರುಕುಳವೇ,ಹತಾಶೆಯೇ,ಹುಚ್ಚನಂತಿರುವ ಗಂಡನೇ,ಅಥವಾ ಎಲ್ಲಕ್ಕೂ ಮಿಗಿಲಾಗಿ ಅವಳ ಮಗುವಿನಂತಹ ಮುಗ್ಧ ಮನಸ್ಸಾ? ಬರೀ ಪ್ರಶ್ನೆಗಳು, ಉತ್ತರ ಇರದ, ಸಿಗದ, ನೂರಾರು ಸಾವಿರಾರು ಪ್ರಶ್ನೆಗಳು.
 

Comments