ಮುಸ್ಲಿಮರ ತಲ್ಲಣಗಳು

ಮುಸ್ಲಿಮರ ತಲ್ಲಣಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಕೆ. ಷರೀಫಾ
ಪ್ರಕಾಶಕರು
ಬೀಟೆಲ್ ಬುಕ್ ಶಾಪ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೦೦, ಮುದ್ರಣ: ೨೦೨೩

ಕೆ. ಷರೀಫಾ ಅವರು ಬರೆದ ‘ಮುಸ್ಲಿಮರ ತಲ್ಲಣಗಳು' ಎನ್ನುವ ಕೃತಿ ಸ್ವಾತಂತ್ರೋತ್ತರ ಭಾರತದ ಮುಸ್ಲಿಮರ ಸ್ಥಿತಿ-ಗತಿಯನ್ನು ವಿವರವಾಗಿ ಮಂಡಿಸುತ್ತದೆ. ಕಳೆದ ಎಪ್ಪತೈದು ವರ್ಷಗಳಲ್ಲಿ ದೇಶದಲ್ಲಿ ತೀವ್ರತರ ಬದಲಾವಣೆಗಳಾಗಿವೆ. ದುರ್ಬಲ ವರ್ಗ, ಪರಿಶಿಷ್ಟ  ಜಾತಿ, ಬುಡಕಟ್ಟು, ಧಾರ್ಮಿಕ ಅಲ್ಪಸಂಖ್ಯಾತರು ಬೌದ್ಧಿಕ ಸಂಪನ್ಮೂಲಗಳ ಮೇಲೆ ತಮ್ಮ ಹಿಡಿತ ಸಾಧಿಸುತ್ತಿದ್ದಾರೆಯೆ? ಧಾರ್ಮಿಕ ಅಲ್ಪಸಂಖ್ಯಾತರಿಗೆ ನ್ಯಾಯ ದೊರಕುತ್ತಿದೆಯೆ? ಅದರಲ್ಲೂ ಮುಸ್ಲಿಮರ ಸಮಸ್ಯೆಗಳೇನು? ಅವರ ತಲ್ಲಣಗಳೇನು? ಅವರ ಆತಂಕಗಳೇನು? ಅವರಿಗೆ ಸಾಮಾಜಿಕ ನ್ಯಾಯ ದೊರೆಯುತ್ತಿದೆಯೆ? ಸಾಚಾರ ವರದಿ ಏನನ್ನು ಹೇಳುತ್ತದೆ? ಅಲ್ಪಸಂಖ್ಯಾತರ ವರ್ತಮಾನದ ತಲ್ಲಣಗಳೇನು? ಎಂಬ ಪ್ರಶ್ನೆಗಳಿಗೆ ಈ ಕೃತಿ ಮುಖಾಮುಖಿಯಾಗುತ್ತದೆ. ಲೇಖಕಿಯವರ ಮನದಾಳದ ಮಾತುಗಳ ಕೆಲವು ಸಾಲುಗಳು ಇಲ್ಲಿವೆ...

“ಭಾರತ ದೇಶದ ಸ್ವಾತಂತ್ರವು, ಯಾರೊಬ್ಬರ ಪ್ರಯತ್ನದಿಂದ ಬಂದುದಲ್ಲ. ದೇಶದ ಹಲವಾರು ಜನರ ತ್ಯಾಗ, ಬಲಿದಾನದಿಂದ ಭಾರತ ಸ್ವತಂತ್ರಗೊಂಡಿತು. ದೇಶವೆಂದರೆ ಅದೊಂದು ಭೂಮಿಯ ತುಂಡು ಮಾತ್ರವಲ್ಲ. ಬದಲಾಗಿ ಅದರಲ್ಲಿ ಜನರಿದ್ದಾರೆ. ಹಲವಾರು ಜನರ ಬದುಕಿದೆ. ದೇಶವೆಂದರೆ ಕೇವಲ ಮಣ್ಣಲ್ಲ. ಸ್ವಾತಂತ್ರ್ಯದ ಪವಿತ್ರ ಹೋರಾಟವು ಈ ದೇಶದ ಬಹುದೊಡ್ಡ ಹೋರಾಟವಾಗಿತ್ತು. ಅಂದು ಭಾರತೀಯರು ಕೇವಲ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಡಿದ್ದು ಮಾತ್ರವಲ್ಲ. ಬದಲಾಗಿ-ದೇಶೀಯ ಜಮೀನ್ದಾರಿ ಪದ್ಧತಿಯಿಂದ ಮತ್ತು ವಿದೇಶಿಯ ಸಾಮ್ರಾಜ್ಯಶಾಹಿಯಿಂದ ಮತ್ತು ರಾಜರುಗಳ ಹಿಡಿತದಿಂದ ರಾಜಕೀಯ ಸ್ವಾತಂತ್ರ್ಯ ಪಡೆಯುವುದೇ ಈ ಚಳುವಳಿಯ ಮುಖ್ಯ ಉದ್ದೇಶವಾಗಿತ್ತು. ಹಲವಾರು ಹೋರಾಟಗಾರರು ಈ ಸ್ವಾತಂತ್ರ್ಯ ಚಳುವಳಿಗೆ ತಮ್ಮ ತನು, ಮನ, ಧನ ಎಲ್ಲವನ್ನೂ ರಾಷ್ಟ್ರಕ್ಕಾಗಿ ನೀಡಿದರು. ಅಷ್ಟೇ ಅಲ್ಲದೆ ತಮ್ಮ ಜೀವವನ್ನೂ ರಾಷ್ಟ್ರಕ್ಕಾಗಿ ನೀಡಿ ಸ್ವಾತಂತ್ರ್ಯ ಪಡೆದರು. ಹೀಗೆ ಹೋರಾಡಿ ಪವಿತ್ರವಾದ ಸ್ವಾತಂತ್ರ್ಯವನ್ನು ಅವರು ಗಳಿಸಿಕೊಂಡರು.

ಮುಸ್ಲಿಮರ ಸಮುದಾಯದವನಾದ ಮಹಮ್ಮದ್ ಬಿನ್ ಖಾಸಿಂ ಎಂಬಾತನು ಕ್ರಿ.ಶ.೭೧೨ರಲ್ಲಿ ಭಾರತಕ್ಕೆ ಪ್ರವೇಶಿಸಿದ ಮೊದಲ ಅರಬ್ ದೇಶದವನು. ಅವನು ಸಿಂಧೂ ನದಿಯ ಪೂರ್ವ ಭಾಗದ ಪ್ರದೇಶಕ್ಕೆ ದಾಳಿ ಮಾಡಿ ಸಿಂಥ್ ಪ್ರಾಂತ್ಯವನ್ನು ವಶಪಡಿಸಿಕೊಂಡನು. ತುರ್ಕ, ಸಿಂದ್, ಮುಲ್ತಾನ್ ಪ್ರಾಂತ್ಯಗಳ ಜೊತೆಗೆ ಗಂಗಾನದಿಯ ತೀರದವರೆಗೂ ಅಧಿಕಾರವನ್ನು ೮ ಮತ್ತು ೯ನೇ ಶತಮಾನದಲ್ಲಿ ವಿಸ್ತರಿಸಿದನು. ೧೨೦೬ರಲ್ಲಿ ಟರ್ಕಿಯ ಅಧಿಕಾರಿಯಾಗಿದ್ದ ಕುತ್ಬುದ್ದೀನ್ ಐಬಕ್‌ನು ದೆಹಲಿಯ ಸುಲ್ತಾನನಾದನು. ನಂತರ ಸುಮಾರು ಎಂಟುನೂರು ವರ್ಷಗಳ ಕಾಲ ಮುಸ್ಲಿಮರು ಭಾರತವನ್ನು ಆಳಿದರು. ನಮ್ಮ ದೇಶದಲ್ಲಿ ಹಲವಾರು ರಾಜರು, ರಾಣಿಯರು, ಚಕ್ರವರ್ತಿಗಳು, ಸಾಮ್ರಾಟರು, ನವಾಬರು, ಬಾದಶಾಹರುಗಳು ರಾಜ್ಯಭಾರ ಮಾಡಿದ್ದಾರೆ. ಈ ದೇಶವನ್ನು ಪ್ರವಾಸರು ೧೫೦ ವರ್ಷ ಆಳಿದರು. ಬ್ರಿಟೀಷರು ಶಸ್ತ್ರಾಸ್ತ್ರಗಳ ಮೂಲಕ ಭಾರತಕ್ಕೆ ಬಂದು ಭೇಟಿಯರನ್ನು ಗುಲಾಮರನ್ನಾಗಿ ಮಾಡಿಕೊಂಡಿರುವುದರ ವಿರುದ್ಧ ಭಾರತವ ಜನರ ಆಕ್ರೋಶವಿತ್ತು. ಬ್ರಿಟೀಷರು ನಮ್ಮ ಸ್ವಾತಂತ್ರವನ್ನು ಕಿತ್ತುಕೊಂಡಿರುವುದರ ವಿರುದ್ಧ ಹೋರಾಡುವುದು ನ್ಯಾಯ ಎಂಬುದು ಒಂದು ಸಿದ್ಧಾಂತವಾದರೆ, ಭಾರತದ ಬಹುಜನರ ಸ್ವಾತಂತ್ರವನ್ನು ಕಿತ್ತುಕೊಂಡಿರುವ ಭಾರತದ ಹಿಂದೂ ಸವರ್ಣಿಯರ ವಿರುದ್ಧವೂ ಬಹುಜನರು ಹೋರಾಡಬೇಕಾಗುತ್ತದೆ. ಇದರಿಂದ ನಮ್ಮ ದೇಶದಲ್ಲೇ ವೈರತ್ವ ಹುಟ್ಟುವುದಿಲ್ಲವೆ? ಎಂಬುದೂ ಒಂದು ವಾದವಾಗಿತ್ತು. ಈ ಬಗೆಯ ಚಿಂತನೆಗಳು, ವಿವಿಧ ವಿಚಾರ ಧಾರೆಗಳು ದೇಶದಲ್ಲಿ ಬೆಳವಣಿಗೆ ಕಂಡವು. ಭಾರತಕ್ಕೆ ಮುಸ್ಲಿಮರು ವಲಸೆ ಬಂದಿದ್ದರೂ ಅವರು ಇಲ್ಲಿಯ ಸಂಪತ್ತನ್ನು ತಮ್ಮ ದೇಶಕ್ಕೆ ಹೊತ್ತೊಯ್ಯದೆ ಇಲ್ಲಿಯೇ ಇದ್ದು ಈ ಮಣ್ಣಿನಲ್ಲಿಯೇ ಮಣ್ಣಾದರು. ಅವರು ಭಾರತದಲ್ಲಿಯೇ ಇದ್ದು, ಮಹಲುಗಳು, ಕೋಟೆ, ಕೊತ್ತಲಗಳು, ನಗರಗಳು ಕಟ್ಟಿದ್ದರ ಬಗ್ಗೆ ಇತಿಹಾಸವಿದೆ.

ಈಗ ಭಾರತದಲ್ಲಿ ನೆಲೆಸಿರುವ ಮುಸಲ್ಮಾನರು ಹೊರಗಿನವರಲ್ಲ. ಅವರು ಘಜನಿ, ಘೋರಿ ಹಾಗೂ ಇತರೆ ಅರಸರಂತೆ ಲೂಟಿಗಾಗಿ ಬಂದವರಲ್ಲ. ಅವರು ಇಲ್ಲಿರುವುದು ಯಾವ ಲೂಟಿಗಾಗಿಯೂ ಅಲ್ಲ. ಬದಲಾಗಿ ಇಲ್ಲಿಯೇ ನೆಲೆಸಿ, ಈ ದೇಶದ ಮಣ್ಣಿನಲ್ಲಿಯೇ ಮಣ್ಣಾಗಿದ್ದಾರೆ. ಲೂಟಿಗಾಗಿ ಬಂದಿದ್ದ ಘಜನಿ, ಘೋರಿಗಳ ಸೈನ್ಯದಲ್ಲಿ ಹಿಂದೂ ಸೈನಿಕರೂ ಇದ್ದರು ಎಂಬುದನ್ನು ನಾವು ಗಮನಿಸಬೇಕು. ಅವನು ಲೂಟಿ ಹೊಡೆದ ಸಂಪತ್ತಿನಲ್ಲಿ ಹಿಂದೂಗಳ ಪಾಲೂ ಇರುತ್ತಿತ್ತು. ಈ ಲೂಟಿಯಲ್ಲಿ ಅವರ ಪಾಲೂ ಇತ್ತು. ಈ ಕೊಳ್ಳೆಯಲ್ಲಿ ಹಿಂದೂ ಸೈನಿಕರು ತಮ್ಮ ಪಾಲಿನ ಸಂಪತ್ತನ್ನೂ ಪಡೆಯುತ್ತಿದ್ದರು. ಕೆಲವು ಹಿಂದೂ ಸೈನಿಕರ ಶೌರ್ಯವನ್ನು ಮೆಚ್ಚಿದ ಘಜನಿ ನೂರಾರು ಹಿಂದೂ ಸೈನಿಕರನ್ನು ಅಪ್ಪಾನಿಸ್ಥಾನಕ್ಕೆ ಕರೆದುಕೊಂಡು ಹೋಗಿದ್ದನು. ೧೯೬೦-೭೦ರ ದಶಕದಲ್ಲಿ ಬಿಜೆಪಿ, ಜನಸಂಘದ ಇಂಗ್ಲಿಷ್ ದಿನಪತ್ರಿಕೆ 'ಮದರ್ ಲ್ಯಾಂಡ್'ನ ಸಂಪಾದಕರಾದ ಕೆ. ಆರ್. ಮಲ್ಕಾನಿ ಹೇಳುವಂತೆ 'ಘೋರಿ ಮಹಮ್ಮದನು ಹಿಂದೂ ಶೈವ ಮತದವನಾಗಿದ್ದು, ಇಸ್ಲಾಂಗೆ ಮತಾಂತರಗೊಂಡನು. ಮತಾಂತರಕ್ಕೂ ಮುಂಚೆ ಅವನು ಟಂಕಿಸಿದ ನಾಣ್ಯಗಳಲ್ಲಿ ಲಕ್ಷ್ಮಿ ದೇವತೆಯ ಚಿತ್ರ, ಗುಜರಾತಿನ ಸೋಮನಾಥ ದೇವಾಲಯದ ಆನೆಯ ಗುರುತನ್ನು ತನ್ನ ಧ್ವಜದ ಲಾಂಛನವಾಗಿಟ್ಟುಕೊಂಡಿದ್ದ' (ಕಮ್ಯುನಲ್ ರೇಸ್ ಇನ್ ಸೆಕ್ಯುಲ‌ರ್ ಇಂಡಿಯಾ, ಡಾ. ರಫೀಕ್ ಜಕಾರಿಯಾ, ಪುಟ ೮೯) ಎಂದು ದಾಖಲಿಸಿದ್ದಾರೆ. ಸಂಪತ್ತಿಗಾಗಿ ಮತ್ತು ತನ್ನ ಸಾಮ್ರಾಜ್ಯದ ವಿಸ್ತರಣೆಗಾಗಿ ಹಿಂದೂ ಅರಸರುಗಳು ಹಿಂದೂ ಅರಸರ ವಿರುದ್ಧ, ಮುಸ್ಲಿಂ ಅರಸರುಗಳು ಮುಸ್ಲಿಂ ಅರಸರ ವಿರುದ್ಧ ಯುದ್ಧ ಮಾಡಿದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.”