ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ

ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ

ಬರಹ

(ವೇಶ್ಯಾವಾಟಿಕೆ ಎಷ್ಟರಮಟ್ಟಿಗೆ ಸಾಮಾಜಿಕವಾಗಿ ಒಪ್ಪಲರ್ಹ, ಎಂಬುದನ್ನು ಮತ್ತೊಂದು ಲೇಖನದಲ್ಲಿ ಚರ್ಚಿಸಿದರಾಯಿತು. ಈ ಲೇಖನ, ಕೇವಲ acceptable prostitution ಬಗ್ಗೆ ಮಾತನಾಡುತ್ತದೆ.)

ಅನುಭವವನ್ನು ಕಾದಂಬರಿಯಲ್ಲಿ ತುಂಬಲು ಶಿವರಾಮ ಕಾರಂತರು ಮಾಡಿದ ಮತ್ತೊಂದು ಪ್ರಯತ್ನವೇ “ಮೈ ಮನಗಳ ಸುಳಿಯಲ್ಲಿ”. ಎಂದಿನಂತೆ ಕಾರಂತರು, ಕಥೆಯನ್ನು ಹೇಳುತ್ತ ಹೋಗುತ್ತಾರೆ. ಅವರ narrationನಲ್ಲಿ ಓದುಗನನ್ನು ಸೆಳೆದೆ ಹಿಡಿಯಬೇಕೆಂಬ ಹಂಬಲವಿಲ್ಲ. ಕಾದಂಬರಿಯನ್ನು ಅರ್ಧಕ್ಕೆ ನಿಲ್ಲಿಸಿ ಎದ್ದರೆ, ಎನೋ ಕಳೆದುಕೊಂಡೆ ಎನ್ನುವಂತಹ ಚಡಪಡಿಕೆ ಮೂಡಿಸುವದಿಲ್ಲ. ಆದರೆ, ಕಥೆಯನ್ನು ಹೇಳಿದಂತೆಲ್ಲ, ಕೇಳುವ ತಾಳ್ಮೆಯನ್ನು ಸೃಷ್ಟಿಸುತ್ತಾರೆ. ಇದು ಪಕ್ಷಪಾತ ರಹಿತ ಸಾಹಿತ್ಯಕ್ಕಿರಬೇಕಾದ ಮಹತ್ವದ ಲಕ್ಷಣ (ಇದು ಭೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವದಿಲ್ಲ. ಹೀಗಾಗಿ, ಅವರನ್ನು ನಿಷ್ಪಕ್ಷಪಾತ ಸಾಹಿತಿ ಎಂದು ನಾನು ಹೇಳಲಾರೆ.)

ಕಾರಂತರ ಎಲ್ಲ ಕಾದಂಬರಿಗಳನ್ನು ಗಮನಿಸಿದಾಗ, ಅವರು ಎಲ್ಲ ಪಾತ್ರಗಳನ್ನೂ ಅದರ ಸಾಮಾನ್ಯ ಪರಿಧಿಯಲ್ಲಿಯೇ ನಿಲ್ಲಿಸಿ ಅದಕ್ಕೆ ತೂಕ ತುಂಬುತ್ತಾರೆ. ಪಾತ್ರ ಬಣ್ಣ ಹಚ್ಚಿದಕ್ಷಣ ತನ್ನ ಎಲ್ಲ ಸಾಮಾನ್ಯ ಗುಣಗಳನ್ನು ಕಳೆದುಕೊಂಡು ಒಂದು ಹಂತ ಎತ್ತರಕ್ಕೆ ಹೋಗಲಾರದು.ಹಾಗೆ ಹೋಗಬಾರದು ಕೂಡ (ಹಾಗೇನಾದರೂ ಆದರೆ, ಪಾತ್ರಗಳು ತಮ್ಮ ನೈಜತೆಯನ್ನು ಕಳೆದುಕೊಂಡು, ಢೋಂಗಿಯಾಗಿಬಿಡುತ್ತವೆ. ಓದುಗನಿಗೆ ಒಂದು fairy tailನ ಅನುಭವ ಕೊಡುತ್ತವೆ. ಅಲ್ಲದೇ, ಅಲ್ಲಿ ಬರುವ “values and ethics” impractical ಆಗಿರುವ ಸಾಧ್ಯತೆ ಹೆಚ್ಚು).

ನಾಲ್ಕು ತಲೆಮಾರಿನ ಈ ಕಾದಂಬರಿಯಲ್ಲಿ, ಕಥೆಯು ಒಂದು ಸಾಮಾನ್ಯ ವಾರಾಂಗನೆಯ ಕುಟುಂಬದ ಸುತ್ತ ಸುತ್ತುತ್ತದೆ. ಕಥೆ ವೈಭವಯುತ ವೇಶ್ಯಾವೃತ್ತಿಯಿಂದ (ಅಥವಾ ಇದನ್ನು ಆಸಕ್ತಿ ಎನ್ನಬಹುದೇ?) ಆರಂಭವಾಗಿ ಒಂದು ಮೌಲಿಕ-ದೃಢ ನಿರ್ಧಾರದಲ್ಲಿ ಕೊನೆಗೊಳ್ಳುತ್ತದೆ. ಮಂಜಿ (ಮಂಜುಳೆ) ಕಾದಂಬರಿಯ ಬಹುತೇಕ ಭಾಗವನ್ನು ಆವರಿಸಿದ ಪಾತ್ರ. ಮಂಜುಳೆ, ತನ್ನ ಅಮ್ಮನಂತೆ ಆಗುವ ಹಂಬಲದಲ್ಲಿ, ತನ್ನ ವೃತ್ತಿಯನ್ನೂ ಬಿಡಲಾರದೆ, ಇತ್ತ ಗರತಿಯಾಗಬೇಕೆಂಬ ಆಸೆಯನ್ನೂ ಬಿಡಲಾರದೆ ತೊಳಲಾಡಿದರೆ, ಶಾರಿ(ಮಂಜಿಯ ಮಗಳು) ಹಾಗೂ ಚಂದ್ರಿ(ಶಾರಿಯ ಮಗಳು) ಭಿನ್ನವಾದ ತಮ್ಮದೇ ಹಾದಿಗಳನ್ನು ಹಿಡಿಯುತ್ತಾರೆ.

ಕಲಾತ್ಮಕ ವೃತ್ತಿಯೊಂದು ಯಾವ ರೀತಿಯಲ್ಲಿ ಉದರನಿಮಿತ್ತ ಕೆಲಸವಾಗಿ, ಕೀಳುಮಟ್ಟಕ್ಕೆ ಇಳಿಯುತ್ತದೆ ಎನ್ನುವದನ್ನು ನಾವು ಇಲ್ಲಿ ಕಾಣಬಹುದು. (ಮತ್ತೊಮ್ಮೆ : ವೇಶ್ಯಾವಾಟಿಕೆ ಕೇವಲ ದೇಹ ಮಾರಿಕೊಳ್ಳುವ ಉದ್ಯೋಗವಾಗಿರದೆ, ಕಲಾಪ್ರದರ್ಶನ ವೃತ್ತಿಯಾಗಿತ್ತು ಎನ್ನುವುದನ್ನು ನಾವು ಮರೆಯಬಾರದು.).ಮೊದಮೊದಲು, ಎಲ್ಲರಿಂದಲೂ ಗೌರವಿಸಲ್ಪಡುತ್ತಿದ್ದ ವಾರಾಂಗನಾ ಕುಟುಂಬ, ತನ್ನ ಎಲ್ಲ ಕಲಾ ಪರಿಧಿಯನ್ನು, ಮೌಲ್ಯಗಳನ್ನು ಕಳೆದುಕೊಂಡಂತೆ ಅಧೋಗತಿಯ ದಾರಿಯನ್ನು ಹಿಡಿಯುತ್ತದೆ. ಕೊನೆಗೆ, ಅದೇ ವೃತ್ತಿಯ ಬಗ್ಗೆ ಅವರಲ್ಲಿ ಜಿಗುಪ್ಸೆ ಹುಟ್ಟುವಂತಾಗುತ್ತದೆ (ಹೇಗೆ ಎನ್ನುವುದಕ್ಕೆ ಕಾದಂಬರಿ ಓದಿ . ). ವೃತ್ತಿ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತದೆ.

ಕಾರಂತರಿಗೆ ವೇಶ್ಯಾವಾಟಿಕೆ ಒಂದು ಕುಕರ್ಮ ಎನ್ನಿಸುವದಿಲ್ಲ, ಬದಲಾಗಿ ಅದು ethics ಇಟ್ಟುಕೊಂಡಂತಹ ವೃತ್ತಿ ಎಂದೇ ತೋರುವಂತಿದೆ. ಅದು ಸರಿಯೂ ಸಹ (ಸ್ವಲ್ಪ ಮಟ್ಟಿಗೆ). ಸಮಾಜದ ಎಲ್ಲ ವರ್ಗಗಳು ತಮಗೆ ಬೇಕಾದಂತೆ, ಇತರರಿಗೆ ಉಪಟಳ ಕೊಡದೆ ಬದುಕುವುದೇ ಒಂದು ಮಾದರಿ ಸಮಾಜದ ಉದ್ದೇಶ. ‘ಯಾರು ಯಾವ ವೃತ್ತಿ ಮಾಡುತ್ತಾರೆ’ ಎನ್ನುವದರ ಮೇಲೆ ಅವರಿಗೆ ಲಭಿಸುವ ಗೌರವ ನಿರ್ಧರಿತವಾದರೆ, ಅವರು ಸಾಮಾಜಿಕ ಜೀವನದಲ್ಲಿ ನೀಡುವ ಕೊಡುಗೆಯ ಬೆಲೆ ಏನು? ಅವರ ಮೌಲ್ಯಪೂರ್ಣ ಬದುಕಿಗೆ ಎಣೆ ಬೇಡವೆ? ಇವು ನಿಜವಾಗಲೂ ಯೋಚನೆಗೆ ಕರೆದೊಯ್ಯುವ ವಿಚಾರಗಳು.

ಕಾದಂಬರಿಯ ಆರಂಭದಲ್ಲಿಯೇ ಶಾರಿಯ ಪಾತ್ರದ ಪರಿಚಯವಾಗುತ್ತದೆ (ಮಂಜುಳೆಯ ಪಾತ್ರವು ಅದಕ್ಕಿಂತ ಮುಂಚೆಯೇ ಬಂದರೂ, ಆನಂತರ ಬರುವ ಶಾರಿ, ಮಂಜುಳೆಯನ್ನು ತಾತ್ಕಾಲಿಕವಾಗಿ ಮರೆಮಾಡುತ್ತಳೆ). ಶಾರಿ ಮಂಜುಳೆಯ ಮಗಳು. ಅವಳ ಚಂಚಲ ಮನಸ್ಸು, ಹಾಗೇ ದುರಾಸೆ (?) ಅವಳ ಬದುಕನ್ನು ನರಕವಾಗಿಸುತ್ತವೆ. ಬದುಕು ಸಾಗಿಸಲು ಅವಳು ಕೊನೆಗೆ ತನ್ನ ಮನಸ್ಸಿನ ವಿರುದ್ಧವಾಗಿ “ಏನೇನೋ” ಮಾಡಬೇಕಾಗುತ್ತದೆ. ಇಲ್ಲಿ - ”ಹಾಗಾದರೆ ಅವಳ ತಾಯಿ ಮಂಜುಳೆ, ಹಾಗೆ ಮಂಜುಳೆಯ ಅಮ್ಮ ಈ ರೀತಿಯಲ್ಲೇ ಬದುಕಿದ್ದರೇ?” ಎಂಬ ಸಹಜ ಸಂಶಯಯವೂ ಕುತೂಹಲಗಳೂ ಮೂಡುತ್ತವೆ. ಆರಂಭದಲ್ಲಿ ಮಂಜುಳೆಯಬಗ್ಗೆ ನೀಡಿದ ಒಳ್ಳೆಯ ಪರಿಚಯ, ನಮ್ಮ ಕುತೂಹಲವನ್ನು ಇನ್ನೂ ಹೆಚ್ಚಿಸುತ್ತದೆ.

ಮಂಜುಳೆಯ ಅಮ್ಮ ವೇಶ್ಯೆಯಾಗಿದ್ದರೂ, ಗರತಿಯಂತೆ ಜೀವಿಸಿದವಳು. ತನ್ನನ್ನು ಇಟ್ಟುಕೊಂಡವನು ಕೈ ಹಿಡಿದವನಲ್ಲದಿದ್ದರೂ, ಅವನ ಕಾಲಡಿಯಲ್ಲಿ ನಿಂತು ಸೇವೆ ಮಾಡಿದವಳು. ಆವಳ ಪಾತ್ರದ ಪರಿಚಯವಾಗುತ್ತ ಹೋದಂತೆ, ಅವಳು ನಮ್ಮ ಮನೆಯಲ್ಲಿಯೇ ಇದ್ದ ಯಾವುದೋ ಒಂದು ಹೆಣ್ಣು ಎಂಬ ಭಾವನೆ ಮೂಡುವುದು. ಅವಳ ವೃತ್ತಿಯು ಅವಳಿಗೆ ಕೇವಲ ಜೀವನೋಪಯಕ್ಕೆ ದಾರಿಯಾಗದೆ, ಜೀವನವಾಗುತ್ತದೆ. ಅವಳು ಅದರಲ್ಲಿ ಪೂರ್ಣ ಮನದಿಂದ ಮುಳುಗಿಹೋಗುತ್ತಾಳೆ. ಅಲ್ಲಲ್ಲಿ, ಅವಳು ತನ್ನ ಅಸ್ಥಿತ್ವವನ್ನು ಕಳೆದುಕೊಂಡು ದಾಸಿಯಾಗಿದ್ದಳೋ ಎಂಬ ಸಂಶಯ ಬರದೆ ಇರದು. ಆದರೆ, Involvement ಕೆಲವೊಂದು ಬಾರಿ ದಾಸ್ಯದಂತೆ ಕಂಡುಬರುವುದೂ ಸಹಜ. ಎಲ್ಲರೂ ತಮ್ಮ ನಿಜಜೀವನದಲ್ಲಿ, ಒಂದಲ್ಲ ಒಂದು ವಿಷಯಕ್ಕೆ ತುಂಬಾ ಅಂಟಿಕೊಂಡು, ದಾಸರಾಗಿರುತ್ತಾರೆ (ಅಥವಾ ದಾಸರಂತೆ ಕಂಡುಬರುತ್ತಾರೆ). ಹಾಗೇ, ಮಂಜುಳೆಯ ಅಮ್ಮ ಸಹ.

ನಂತರ ಬರುವ ಮಂಜುಳೆ, ತನ್ನ ವೃತ್ತಿಯ ಬಗ್ಗೆ ಅತಿಯಾದ ಪ್ರೀತಿಯುಳ್ಳವಳೇನಲ್ಲ. ಹಾಗೆಂದಮಾತ್ರಕ್ಕೆ, ಅವಳಿಗೆ, ತಾನು ಮಾಡುತ್ತಿರುವುದರ ಬಗ್ಗೆ ಅಸಹ್ಯವೂ ಇಲ್ಲ. ಈ ಪರಿವರ್ತನೆಗೆ ಕಾರಣಗಳೇನು ಎಂದು ಹುಡುಕುವ ಕೆಲಸ ಓದುಗನದಾಗುತ್ತದೆ. ಸಮಾಜವೇ? ಬದಲಾದ ವೃತ್ತಿಯ ಅವಶ್ಯಕತೆಗಳೇ? ಬದಲಾದ ಜೀವನಾವಶ್ಯಕತೆಗೆಳೇ? ಹೊಸದರೆಡೆಗಿನ ಆಕರ್ಷಣೆಯೆ? ಅಥವಾ, ಎಲ್ಲರಂತೆ ತಾನೂ ಬದುಕಬೇಕೆಂಬ ಹಂಬಲವೊ? ಸಂಗೀತದೆಡೆಗೆ ಅವಳಿಗಿರುವ ಆಕರ್ಷಣೆ, ಅವಳಿಗೆ ಅನೇಕ ರಸಿಕರ ಪರಿಚಯ ಮಾಡಿಕೊಡುತ್ತದೆ. ದೈಹಿಕ ಹಂಬಲ, ಅವಳಿಗೆ ಅನೇಕಬಾರಿ ಮೋಸ ಕೂಡ ಮಾಡುತ್ತದೆ (ದೈಹಿಕ ಹಂಬಲ ಮನುಷ್ಯನಲ್ಲಿರುವ ಅತಿ ಸಾಮಾನ್ಯ ಗುಣ, ಹಾಗಿದ್ದಮೇಲೆ ಇದನ್ನು ಮೋಸ ಎನ್ನಬಹುದೆ? ಎಂಬ ಸಂಶಯ ನನಗಿನ್ನೂ ಇದೆ.). ಹಾಗೆ, ಅನೇಕ ದೈವೀ (?) ಮನುಷ್ಯರ ಪರಿಚಯವೂ ಆಗುತ್ತದೆ.

ಕಥೆಯ ಇನ್ನೊಂದು ಪ್ರಮುಖ ಪಾತ್ರ ಬೆಳ್ಳೂರು ಸುಬ್ರಾಯರು ಕೊನೆಗಾಲದವರೆಗೂ ಮಂಜುಳೆಯ ಕೈ ಬಿಡದೆ ನಡೆಸಿಕೊಂಡವರು. ಮಂಜುಳೆಗೆ ತನ್ನ ಇತರೆ ಗಿರಾಕಿಗಳ ಇತೆರೆ ಸಂಬಂಧಗಳಲ್ಲಿ ಇರುವ ಮತ್ಸರ, ಅವರಿಗೆ ಮಂಜಿಯ ಇತರೆ ಗಿರಾಕಿಗಳಲ್ಲಿ ಇಲ್ಲ. ನಿಸ್ವಾರ್ಥ ಪ್ರೇಮದ ಅನುಭವವನ್ನು ಇಲ್ಲಿ ನಾವು ಅನುಭವಿಸಬಹುದು. ನಾವು ವೃತ್ತಿ ಹಾಗೂ ಪ್ರವೃತ್ತಿಗಳ ಮಧ್ಯೆ ಇರುವ ಅಂತರವನ್ನು ಅರ್ಥಮಾಡಿಕೊಳ್ಳುವದರಲ್ಲಿ ವಿಫಲರಾಗುತ್ತಿದ್ದೆವೇನೋ ಎಂಬ ಸಂಶಯವೂ ಇಲ್ಲಿ ಪ್ರಬಲವಾಗಿ ಮೂಡುತ್ತದೆ. ಹಾಗೇ ಮಂಜುಳೆಯೂ ಸಹ ಎಲ್ಲರಂತೆ ಒಬ್ಬ ಸಾಮಾನ್ಯ ಮಹಿಳೆ ಎಂಬ ಅರಿವೂ ಸಹ. (ಇದು ತುಂಬಾ ಅವಶ್ಯಕ ಅರಿವು.). ಸ್ಥಳ, ಪರಿಸ್ಥಿತಿ, ಆಚಾರಗಳೇ ಮನುಷ್ಯನ ಚರಿತ್ರೆಯನ್ನು ಸೃಷ್ಟಿಸುತ್ತವೆ ಎಂಬುದು ಒಂದು ಭ್ರಮೆಯಿಂದ ಹೊರಬರಲು ಕಾರಂತರು ಯಾವಾಗಲೂ ಪ್ರಯತ್ನಿಸುತ್ತಿದ್ದದ್ದ್ಅನ್ನೂ ನಾವು ಇಲ್ಲಿ ಗುರುತಿಸಬಹುದು.

ಸುಬ್ರಾಯ ಗೃಹಸ್ಠ. ಹಾಗಾಗಿ ಅವರಿಗೆ ಹೆಂಡತಿ-ಮಕ್ಕಳಿರುವದು ಸಹಜ. ಇದನ್ನು ತಿಳಿದೂ, ಮಂಜುಳೆ ಅವರ ಸಂಗ ಮಾಡುತ್ತಳೆ. ಆದರೆ ಸುಬ್ರಾಯರ ಪತ್ನಿ ಲಕ್ಷ್ಮಮ್ಮ, ಇದನ್ನು ನೋಡುವ ರೀತಿ ಮಾತ್ರ ತುಂಬಾ ನವೀನ, ಅದ್ವಿತೀಯ. ಅವಳ ತಾಳ್ಮೆ, ನಿರ್ಮತ್ಸರ ಮನೋಭಾವ ಹಾಗೂ ಸಂವಹನೆಗಳು, ಇತರರ ಪಾಲಿಗೆ(ಮಂಜುಳೆಯ ಪಾಲಿಗೆ) ನಿಜವಾಗಲೂ ವರದಾನಗಳೇ. ಒಂದು ಸಮರ್ಥ ಮಾದರಿ ನಿರ್ಮಾಣಗೊಳ್ಳಬೇಕಾದರೆ (sustainable model develop ಆಗಬೇಕಾದರೆ), ಇಂಥ ಪಾತ್ರಗಳು ತುಂಬ ಅವಶ್ಯಕ. ನಮ್ಮ ನಿಜ ಜೀವನದಲ್ಲೂ ಸಹ, ಎಲ್ಲ ವಿಷಯಗಳಲ್ಲಿ ಇಂಥ ಜನರು ತುಂಬಾ ಮಹತ್ವದ ಪಾತ್ರ ವಹಿಸುತ್ತಾರೆ. (ಇಲ್ಲಿ ನಾನು ತುಂಬಾ general ಆಗಿ ಮಾತನಾಡುತ್ತಿದ್ದೇನೆ. ವೇಶ್ಯಾ-ಸಂಗವನ್ನು ಅಥವಾ ಪರಸ್ತ್ರೀ ಸಂಗವನ್ನು ನಾನೇನು support ಮಾಡುತ್ತೇನೆ ಎಂದಲ್ಲ. ಆದರೆ, ಇಲ್ಲಿ ಅಸೂಯೆ ರಹಿತ ಜನರ ಅವಶ್ಯಕತೆಯ ಬಗ್ಗೆ ಹೇಳಬಯಸುತ್ತಿದ್ದೇನೆ.)

ಮಂಜುಳೆಯ ದತ್ತು ಮಗಳು ಶಾರಿಕೆ. ವೃತ್ತಿಯನ್ನು ಅರ್ಥಮಾಡಿಕೊಳ್ಳಲಾಗದೆ, ಏನೇನೋ ಪ್ರಯತ್ನಿಸುವ ಈಕೆ, ಅನೇಕರ ಮೋಹಜಾಲದಲ್ಲಿ ಬಿದ್ದು ಹಾಳಾಗುತ್ತಾಳೆ. ಪ್ರೌಢಿಮೆಯ ಕೊರತೆಯಿಂದಲೋ, ಅತಿಶಯ ಚಂಚಲತೆಯಿಂದಲೋ, ಅಥವಾ ಅವಸರದಿಂದಲೋ, ತನ್ನ ಜೀವನದ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತಾಳೆ. ಕೊನೆಗೆ, ಹೊಟ್ಟೆಪಾಡಿಗಾಗಿ ಮತ್ತೆ ತನ್ನ ಮೂಲ ವೃತ್ತಿಗೆ ಮರಳುತ್ತಾಳೆ. ಇದು ಚಂಚಲತೆಯ ಪರಮಾವಧಿ ಹಾಗೂ ಅಧೋಗತಿಯ ಆರಂಭ. ಇದು ಶಾರಿಯ ಮಗಳು ಚಂದ್ರಿಯ ಮೇಲೆ ಬೀರುವ ಪ್ರಭಾವ ಅಗಾಧ. ಕೊನೆಗೆ ಚಂದ್ರಿ, ಈ ವೃತ್ತಿಯನ್ನು ತೊರೆಯುವ ನಿರ್ಧಾರಕ್ಕೆ ಬರುವದರೊಂದಿಗೆ, ಕಾದಂಬರಿ ಕೊನೆ ಮುಟ್ಟುತ್ತದೆ.

ಅನೇಕ ಸಣ್ಣ ಪಾತ್ರಗಳು ಕಥೆಯಲ್ಲಿ ದೊಡ್ಡ ಪ್ರಭಾವವನ್ನುಳಿಸಿ ಹೋಗುತ್ತವೆ. ಆಲಸಿ ಕಾಳಿಂಗ, ಪ್ರೇಮದ ಪರಮಗುರುಗಳಂತೆ ಬರುವ ಪಮ್ಮ-ದುಗ್ಗಿಯರು, ಅಸ್ಪ್ರಶ್ಯತೆ, ಕಾಮಗಳ ಲೇಪ-ಲೋಪಗಳಿಲ್ಲದ ಅಡಿಗಳು. ಮಹಮಾತೆಯಂತೆ ಕಂಡುಬರುವ ಅಡಿಗಳ ಹೆಂಡತಿ, ಗೋಮುಖ ವ್ಯಾಘ್ರದಂತಹ ಪೈ ಹಾಗು ಮುರಗೋಡರಂತಹ ಪಾತ್ರಗಳು ಕಥೆಯ ಹರಿವಿಗೆ ನೆರವಾಗುವದಲ್ಲದೆ, ಅದರ ಪ್ರಭಾವವನ್ನೂ ದ್ವಿಗುಣಗೊಳಿಸುತ್ತವೆ. ಹಾಗೇ, ಕಥೆಯನ್ನು ನೈಜತೆಯ ಹತ್ತಿರಕ್ಕೆ ಕರೆದೊಯ್ಯುತ್ತವೆ. (ಅಡಿಗಳ ಬಗ್ಗೆ ಮಾತನಾಡುವುದು ತುಂಬ ಇದೆ. ಇದನ್ನೇ ಒಂದು ಲೇಖನ ರೂಪಕ್ಕೆ ತಂದರಾಯ್ತು).

ಕಥೆಯ ಬಹುಪಾಲು ಮಂಜಿಯ ಆತ್ಮವೃತ್ತಾಂತದಲ್ಲಿಯೇ ಕಳೆಯುತ್ತದೆ. ಮಂಜುಳೆಯಂತಹ ವೇಶ್ಯೆಯ ಕೈಯಲ್ಲಿ ಆತ್ಮವೃತ್ತಾಂತ ಬರೆಸುವ ಸಾಹಸ ಕಾರಂತರೇ ಮಾಡಬಲ್ಲರು. ಅವರಿಗೆ, “ಅದರ ಉಪಯೋಗವೇನು?” ಎಂದು ಕೇಳುವ ಸ್ವಾರ್ಥವಿಲ್ಲ. ಅಥವಾ, “ಮಂಜಿಯೇನು ಆತ್ಮಕಥೆ ಬರಯುವಷ್ಟು ದೊಡ್ಡವಳೇ?” ಎಂಬ ಅನುಮಾನವಿಲ್ಲ. ಹಾಗೇ, ಅವಳಲ್ಲಿರುವ ಸಾಮರ್ಥ್ಯವನ್ನು ಮುಚ್ಚಿಹಾಕುವ ಧಾರ್ಷ್ಟ್ಯವೂ ಇಲ್ಲ. ಸಮಾನತೆ ಸಾರುವಂತಹ ಇಂಥ ಪ್ರಯತ್ನಗಳು ಕಾದಂಬರಿಯ ಇನ್ನೊಂದು ಮಖವನ್ನು ತೆರೆದಿಡುತ್ತವೆ.

ಹಾಗೆಂದ ಮಾತ್ರಕ್ಕೆ ಕಾದಂಬರಿಯಲ್ಲಿ ಲೋಪಗಳಿಲ್ಲ ಎಂದಲ್ಲ. ಬಹಳಶ್ಟು ಕಡೆ ಕಾದಂಬರಿ ಹಿಡಿತ ಮೀರಿ ಹೋಗುತ್ತಿದೆಯೇನೋ, ಎಲ್ಲಿ ಓದುಗ ಆಸಕ್ತಿ ಕಳೆದುಕೊಳ್ಳುತ್ತಾನೋ ಎಂಬ ಭಯವೂ ಮೂಡುತ್ತದೆ. ಹಾಗೇ ಕೆಲವೆಡೆ ಕಾರಂತರು ಸ್ತ್ರೀ ಸಬಲೀಕರಣದ ವಿರೋಧಿಗಳಂತೆಯೂ ಕಂಡುಬರುತ್ತಾರೆ. ಆಸೆ ಹಾಗೂ ದುರ್ಬಲತೆಗಳನ್ನು ಸಾಮಾನ್ಯ ಸ್ತ್ರೀ ಲಕ್ಷಣಗಳಂತೆ ತೋರಿಸುತ್ತಾರೆ. ಆದರೆ,ಇತರ ವಿಷಯಗಳಿಗೆ ಕೊಟ್ಟಿರುವ ಪ್ರೌಢಿಮೆಯ ಮುಂದೆ ಇವೆಲ್ಲ ತುಂಬಾ ಗೌಣವಾಗಿ ಬಿಡುತ್ತವೆ.

ಆರಂಭದಿಂದ ಕೊನೆಯವರೆಗೆ ಕಾಣುವ ವೇಶ್ಯಾವೃತ್ತಿಯ ಅವನತಿಯನ್ನು ನಾವು ಇಂದು ಇತರ ಗ್ರಾಮೀಣ ವೃತ್ತಿಗಳಲ್ಲಿಯೂ ಕಾಣಬಹುದು. ಕಲಾತ್ಮಕತೆ, ಆತ್ಮತ್ತೃಪ್ತಿ, ಪ್ರಾಮಾಣಿಕತೆಯಂತಹ ಮೌಲ್ಯಗಳು ಕಾಣೆಯಾಗಿ, ಎಲ್ಲ ಉದ್ಯೋಗಗಳು ತಮ್ಮ ಬೆಲೆ ಕಳೆದುಕೊಳ್ಳುತ್ತಿವೆ. (ಉದ್ಯೋಗದಿಂದ ಹಣ ಗಳಿಸಬಾರದು ಎನ್ನುವವನು ನಾನಲ್ಲ. ಆದ್ರೆ, ಹಣ ಗಳಿಸುವ ರೀತಿ ನ್ಯಾಯಯುತವಾಗಿರಬೇಕು. ಇನ್ನೊಬ್ಬರ ದೌರ್ಬಲ್ಯವನ್ನು ಬಳಸಿಕೊಂಡು ಗಳಿಸಿದ ಹಣ ಕಳ್ಳತನದಿಂದ ಗಳಿಸಿದ ಸಂಪತ್ತಿಗಿಂತ ಕೀಳು.). ಮನುಷ್ಯ-ಮನುಷ್ಯರ ಸಂಬಂಧಗಳನ್ನು ಲಾಭಕ್ಕಾಗಿ ವ್ಯಾಪಾರಿ ದೃಷ್ಟಿಯಿಂದ ನೋಡಲಾಗುತ್ತಿದೆ. ಈದಕ್ಕೆ ವೇಶ್ಯಾವೃತ್ತಿಯೂ ಹೊರತಲ್ಲ.

ವೇಶ್ಯಾ ಸಮಾಜ ಇಂದು ತುಂಬ ಕೆಳಮಟ್ಟ ಮುಟ್ಟಿದೆ. ಅವರು ಸಾಮಾಜಿಕವಾಗಿ ಎಲ್ಲರಿಂದಲೂ ದೂರವಾಗಿ, ದುರ್ಭರ ಬದುಕು ನಡೆಸುತ್ತಿದ್ದಾರೆ. ಇತರ ಎಲ್ಲ ವರ್ಗಗಳು ಅವರನ್ನು ತುಚ್ಛವಾಗಿ ಕಾಣುತ್ತಾರೆ. ಪೂರ್ಣವಾಗಿ ತಮ್ಮ ವಿಲಾಸಕ್ಕೆ (?) ಉಪಯೋಗಿಸಿಕೊಳ್ಳುವ ಇದೇ ಸಾಮಾಜ, ಅವರನ್ನು ಹೀಗೆ ಸಾಮಾನ್ಯ ಬದುಕಿನಿಂದ ದೂರಮಾಡುವುದು ಎಷ್ಟು ಸರಿ? ಅಲ್ಲದೇ, ಇದರಲ್ಲಿ ಅವರ ತಪ್ಪೇನು? ನ್ಯಾಯಯುತವಾಗಿ ಬದುಕು ಸಾಗಿಸಲು ಯತ್ನಿಸುತ್ತಿರುವ ಅವರನ್ನು ಗೌರವಿಸಬೇಕಾದದ್ದು ನಮ್ಮ ಕರ್ತವ್ಯವಲ್ಲವೆ? (ಕಾನೂನಿನ ದೃಷ್ಟಿಯಲ್ಲಿ ಯಾವುದು ನ್ಯಾಯ, ಯಾವುದು ಅನ್ಯಾಯ ಎಂಬುವುದು ಬೇರೆ ವಿಷಯ). ಕಾರಂತರ ಈ ಕಾದಂಬರಿ ಈ ನಿಟ್ಟಿನಲ್ಲಿ ಒಂದು ಮಹತ್ವದ ಮೈಲುಗಲ್ಲು. ಸಾಮಾಜಿಕ ನ್ಯಾಯ, ಯಾವಾಗಲೂ ಸ್ಠಿರವಾಗಿರುವುದಿಲ್ಲ. ಕಾಲಕ್ಕೆ ತಕ್ಕಂತೆ ಅವಶ್ಯಕತೆಗಳು, ನ್ಯಾಯ, ಸತ್ಯಗಳು ಬದಲಾಗುತ್ತ ಹೋಗುತ್ತವೆ. ಅದನ್ನು ಗೌರವಿಸಿದರೆ ಎಲ್ಲರ ಬದುಕು ಸುಂದರವಾದೀತು ಎಂಬ ನಿತ್ಯಕಾಲಿಕ ಸತ್ಯವನ್ನು “ಮೈ ಮನಗಳ ಸುಳಿಯಲ್ಲಿ” ಎತ್ತಿ ಹಿಡಿಯುತ್ತದೆ.