ಯಮ - ಅಸ್ತೇಯ

ಯಮ - ಅಸ್ತೇಯ

ಇಂದು ಯಮದಲ್ಲಿ ಮೂರನೇ ಸೋಪಾನ ಅಸ್ತೇಯದ ಬಗ್ಗೆ ತಿಳಿದುಕೊಳ್ಳೋಣ. ಯೋಗ ಮನಸ್ಸನ್ನು ಅತಿ ಎತ್ತರಕ್ಕೆ ಏರಿಸಿ, ವಿಸ್ತರಿಸಿ ಕೊನೆಗೆ ಅನಂತತೆಯಲ್ಲಿ ಬೆರೆಸುತ್ತದೆ. ಆದ್ದರಿಂದ ಈ ಯೋಗ ಅಪರೂಪದ ಕೊಡುಗೆ. ಇದರಲ್ಲಿ ಇಂತಿಂಥವರಿಗೆ ಅಂತ ಇಲ್ಲ. ಇಲ್ಲಿ ಜಾತಿ, ಧರ್ಮ, ಮತ ಯಾವುದೂ ಇಲ್ಲ. ಯಾರಲ್ಲಿ ಶಾಂತಿ ಅನುಭವಿಸ ಬೇಕೆಂಬ ಇಚ್ಛೆ ಇದೆ, ಮನಸ್ಸನ್ನು ವಿಸ್ತರಿಸಬೇಕೆಂಬ ಬಯಕೆ ಇದೆ, ಅಂತಹವರಿಗೆ ಈ ಯೋಗ. ಇದನ್ನು ಬಯಸದೆ ಇರುವವರು ಯಾರು? ಬಡವ, ಶ್ರೀಮಂತ, ಸ್ತ್ರೀ, ಪುರುಷ ಅಂತ ಯಾವುದೇ ತಾರತಮ್ಯ ಇಲ್ಲ. ಈ ಮನಸ್ಸನ್ನು ಹೇಗೆ ಬಳಸಬೇಕೆಂದರೆ, ಬದುಕು ಸುವಾಸನೆಯಿಂದ ತುಂಬಬೇಕು. ಹಾಗೆ ಬಳಸಬೇಕು. ಬಯಕೆ ನಮ್ಮಲ್ಲಿದೆ. ಅದಕೊಂದು ವಿಧಾನ ಯೋಗದಲ್ಲಿದೆ. ಇದಕ್ಕೆ ಪರಿಮಿತಿ ಇಲ್ಲ. ಮನಸ್ಸಿನಿಂದಲೇ ಎಲ್ಲಾ ಮಾಡುವುದು. ದೇಹಕ್ಕಿಂತ ಸಾವಿರ ಪಾಲು ಮಹತ್ವದ್ದು ಮನಸ್ಸು.

ಸ್ತೇಯ ಎಂದರೆ ತೆಗೆದುಕೊಳ್ಳುವುದು. ಯಾವುದು ತನ್ನದಲ್ಲ ಅದನ್ನು ತೆಗೆದುಕೊಳ್ಳುವುದು. ಕೇಳದೆ, ಹೇಳದೆ ತೆಗೆದುಕೊಳ್ಳುವುದು. ಯಾವುದು ನಮ್ಮದಲ್ಲವೋ, ಯಾವುದಕ್ಕೆ ಪರಿಶ್ರಮ ಪಟ್ಟಿಲ್ಲವೋ, ಅಂತಹ ವಸ್ತುವನ್ನು ಮಾಲೀಕರ ಸಮ್ಮತಿ, ಒಪ್ಪಿಗೆ ಇಲ್ಲದೆ, ಅವರಿಗೆ ಸಂತೋಷವಾಗದೆ, ನಾವು ತೆಗೆದುಕೊಂಡರೆ ಅದಕ್ಕೆ ಸ್ತೇಯ ಎಂದು ಕರೆದರು. ಇದನ್ನು ಕಳ್ಳತನ ಎನ್ನುವರು. ಜಗತ್ತು ಅದ್ಭುತ. ಇಲ್ಲಿ ವೈವಿಧ್ಯತೆ ಇದೆ. ನಮ್ಮ ಬದುಕಿಗೆ ಏನೇನು ಬೇಕು, ಅದೆಲ್ಲ ಇದೆ. ಇದಿಲ್ಲದೆ ಬದುಕಲು ಆಗುವುದಿಲ್ಲ. ಹಾಗಾಗಿ ಅವುಗಳನ್ನು ನಾವು ಅನುಭವಿಸಬೇಕು. ಇದನ್ನು ಹೇಗೆ ಅನುಭವಿಸಬೇಕು ಎಂದರೆ ಪರಿಶ್ರಮ ಪಟ್ಟು ಅನುಭವಿಸಬೇಕು. ಆ ಬಳಿಕ ಕೃತಜ್ಞತೆ ಸಲ್ಲಿಕೆ ಅನುಭವಿಸಬೇಕು. ಗಾಳಿ ಎಲ್ಲಾ ಕಡೆ ಇದೆ. ಇದಕ್ಕೆ ಪರಿಶ್ರಮ ಬೇಕಿಲ್ಲ. ಆದರೆ ನಿಸರ್ಗಕ್ಕೆ ಕೃತಜ್ಞತೆ ಸಲ್ಲಿಸಿ ಬಳಸಬೇಕು. ಕೃತಜ್ಞತಾ ಭಾವದಿಂದ, ಪರಿಶ್ರಮದಿಂದ ಸ್ವೀಕಾರ ಮಾಡಿದರೆ ಅದಕ್ಕೆ ಅಸ್ತೇಯ ಎನ್ನುವರು. ನಿಸರ್ಗ ನೀರು ಕೊಟ್ಟಿದೆ. ಅದನ್ನು ಹಾಳು ಮಾಡದೆ ನಿಸರ್ಗ ನೆನೆಸುತ್ತಾ ನೀರನ್ನು ಅನುಭವಿಸಬೇಕು. ಇದು ನಮ್ಮನ್ನು ಪೋಷಣೆ, ರಕ್ಷಣೆ ಮಾಡಿದೆ. 

ಚೀನಾ ದೇಶದ ಗಾದೆ ಮಾತು "ಯಾವುದರಿಂದ ನೀರನ್ನು ಕುಡಿದೆವೋ ಅದನ್ನು ನೆನೆಸಿದರೆ ಸುಶಿಕ್ಷಿತ, ನೆನಸದೇ ಹೋದರೆ ಅಶಿಕ್ಷಿತ." ನಾವು ಬದುಕಬೇಕಾದರೆ ಜಗತ್ತೆಲ್ಲ ಸಹಾಯ ಮಾಡುತ್ತದೆ. ನಿಸರ್ಗ, ಜನ, ಪಕ್ಷಿ , ಪ್ರಾಣಿ ಮತ್ತು ಗಿಡಗಳು ಸಹಾಯ ಮಾಡುತ್ತವೆ. ಅದಕ್ಕೆಲ್ಲ ಕೃತಜ್ಞತೆ ಸಲ್ಲಿಸಿದರೆ ಅಸ್ತೇಯ ಎನ್ನುವರು. ಯಾರಾದರೂ, ಏನನ್ನಾದರೂ ನೀಡಿದರೆ, ಅದನ್ನು ಅನುಭವಿಸುವಾಗ, ಅವರಿಗೆ ಒಳ್ಳೆಯದಾಗಲಿ ಎಂದು ನೆನಪಿಸಿಕೊಳ್ಳಬೇಕು. ಅವರಿಂದ ಸಹಾಯವಾಯಿತು ಅಂತ ಹೇಳಬೇಕು ಮತ್ತು ನೆನಪಿಸಿಕೊಳ್ಳಬೇಕು. ಇದು ಬಹಳ ಮುಖ್ಯ ಎಂದ ಪಾತಂಜಲ ಮಹರ್ಷಿ. ಇದು ಇಂದು ಬಹಳ ಅಗತ್ಯ ಇದೆ. ಕೆಲವೊಂದನ್ನು ಬಲ್ಲವರಿಂದ ಕಲಿಯುತ್ತೇವೆ. ಕೆಲವೊಂದು ಕೇಳುತ್ತ, ಕೆಲವನ್ನು ಮಾಡುವವರಿಂದ ನೋಡಿ, ಕೆಲವೊಂದು ವಿಚಾರ ಮಾಡಿ, ಕೆಲವೊಂದನ್ನು ನಾವೇ ಮಾಡಿ ಕಲಿಯುತ್ತೇವೆ. ಹೀಗೆ ಬೇರೆಯವರಿಂದ ಪಡೆಯುವುದು, ನಮ್ಮಲ್ಲಿರುವುದನ್ನು ಅವರಿಗೆ ಸದ್ಭಾವದಿಂದ ನೀಡಿದರೆ, ಅಸ್ತೇಯ. 

ನಾವು ಬದುಕಿರುವವರೆಗೆ ಇಲ್ಲಿರುವುದನ್ನೇ ಬಳಸಿ ಅನುಭವಿಸುತ್ತೇವೆ. ನಮಗೆ ಕಲಿಸಿದವರನ್ನು ಮರೆತರೆ ಸ್ತೇಯ. ಗುರುಗಳು, ತಂದೆ, ತಾಯಿ, ಬಂಧು ಬಳಗ ಮತ್ತು ಸಮಾಜ ಕಲಿಯಲು ಸಹಾಯ ಮಾಡಿದೆ. ಆದ್ದರಿಂದ ಇವರ ಬಗ್ಗೆ, ಜಗತ್ತಿನ ಬಗ್ಗೆ , ನಿಸರ್ಗದ ಬಗ್ಗೆ, ಸದ್ಭಾವನೆ ಇರಬೇಕಾಗುತ್ತದೆ. ಎಲ್ಲರೊಡನೆ ನಾವು ಬದುಕಬೇಕಾದರೆ, ನಾವು ಎಲ್ಲರೊಡನೆ ಅನುಭವಿಸಬೇಕಾದರೆ, ಎಲ್ಲರೂ ಕೊಡುಗೆ ನೀಡಿದ್ದಾರೆ. ಆದ್ದರಿಂದ ಸದ್ಭಾವನೆ ಬಹಳ ಮುಖ್ಯ, ಅಲ್ಲವೇ?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ