ಯಾರದು ಮುಂದಿನ ಪಾಳಿ?

ಯಾರದು ಮುಂದಿನ ಪಾಳಿ?

 

ಡಾಟ್ ಕಾಮ್ ಗಳು ಮುಗ್ಗರಿಸಿ, ಇಡೀ ಜಗವನ್ನೆ ಅಲ್ಲೋಲಕಲ್ಲೋಲ ಮಾಡಿದ ಆ ದಿನಗಳ ನೆನಪಿದೆಯೆ? ರಾತ್ರೋರಾತ್ರಿ ಹುಟ್ಟಿಕೊಂಡ ಕಂಪನಿಗಳು ರಾತ್ರೋರಾತ್ರಿ ಹೇಳಹೆಸರಿಲ್ಲದೆ ಮಾಯವಾಗಿಬಿಟ್ಟವು; ಆ ಕರುಣಾರಹಿತ ತಂತ್ರಜ್ಞಾನ ರಕ್ತಮಜ್ಜನದಲ್ಲಿ ಜಳ್ಳುಗಳೆಲ್ಲ ದಿಕ್ಕುಪಾಲಾಗಿ, ಎಳ್ಳುಗಳೂ ಹೇಗೊ ಏಗುತ್ತ, ಏಳುತ್ತ ಬೀಳುತ್ತಾ ಬದುಕುಳಿಯಲು ಹವಣಿಸುತ್ತಿದ್ದ ದೃಶ್ಯ ಸಾಕಷ್ಟು ಕಾಲ, ಕಾಫಿ ಮೆಷೀನುಗಳ ಪಕ್ಕದ ಬಿಡುವಿನ ಹೊತ್ತಿನಲ್ಲಿ ಚರ್ಚಿತವಾಗುತ್ತಿದ್ದ ವಿಷಯ. ಕೊನೆಗೆಲ್ಲವು ಸೃಷ್ಟಿ ಸ್ಥಿತಿ ಲಯಗಳ ಹಂತ ದಾಟಿ ನೆಲೆ ನಿಂತಾವೆಂಬ ಆಶಾಭಾವನೆಗೆ ಎಡೆಯೂ ಇಲ್ಲದಂತೆ ಎಲ್ಲಾ 'ಮಹಾಪ್ರಳಯ'ದಲ್ಲಿ ಕೊಚ್ಚಿಹೋದುವು. ಆ ತಿರೋದಾನದಲ್ಲಿ ನಿಜಕ್ಕೂ ಉಳಿವ 'ಅನುಗ್ರಹ' ಪಡೆದು ಮರುಸೃಷ್ಟಿಯ ಅವತಾರವೆತ್ತಿದ್ದು ಕೇವಲ ಕೆಲವು ಘಟಾನುಗಟಿಗಳಷ್ಟೆ. ಸರಿ ಎಲ್ಲಾ ಮುಗಿಯಿತು ಐಟಿ ಜಗವೆ ಹೀಗೆ ಎಂದು ಮುಂದೆ ಸಾಗಲಿಕ್ಕೆ ಹವಣಿಸುತ್ತಿರುವಾಗ - ಈಗ ಹೊಸ ಟೆಕ್ನಾಲಜಿ ಕಂಪನಿಗಳ ಸರದಿಯೇನೊ ಎಂದು ಕಾಣುತ್ತಿದೆ. ಈತ್ತೀಚಿನ ನೋಕೀಯ, ಬ್ಲಾಕ್ ಬೆರಿ ಅವಘಡಗಳ ನಂತರ ಬಹುತೇಕ ಟೆಕ್ಕಿಗಳ ಮನದಲ್ಲಿ ಕಾಡುವ ಪ್ರಶ್ನೆ - 'ಯಾರದು ಮುಂದಿನ ಪಾಳಿ ?' ಆ ಭಾವಕ್ಕಿತ್ತ ಲಘು ಲಹರಿಯ ಶಬ್ದರೂಪ - ಈ ಕವನ.

ಯಾರದು ಮುಂದಿನ ಪಾಳಿ?
___________________________

ಮುಕುಟವಿಲ್ಲದ ರಾಜ ನೋಕಿಯ
ರಾಜಾಧಿರಾಜನಾಗಿದ್ದ ಮಹನೀಯ
ಎಲ್ಲರ ಕೈಯೆಲ್ಲೆಡೆಯಲು ಅವನೆ
ಏನಾಗ್ಹೋಯಿತೊ ಗತಿ ಶಿವನೆ ?

ಕೈ ಪೋನು ಕೈಯಿಂದ ಜಾರಿ
ಚತುರ ಪೋನ್ಗಳ ಹೊಟ್ಟೆಯಾಳಕ್ಕೆ ಸೇರಿ
ನೀನಾಗದಿದ್ದರೆ ದಿನಾ ಚತುರಮತಿ
ನೋಡೆಂತಾ ದುರ್ಗತಿ ಅಧೋಗತಿ ||

ಮೈಕ್ರೋಸಾಪ್ಟಿನ ಮಹಾ ಜೀಯಾ
ಕಬಳಿಸಿದರು ಅಸಹನೀಯ
ತಾಳಿಕೊಳ್ಳದೆ ಬೇರಿದೆಯೆ ದಾರಿ
ಬಿದ್ದರೆ ಮಾರುಕಟ್ಟೆ , ನೋಡೆಲ್ಲರ ಸವಾರಿ ||

ಬಿಡು ಮುಗಿಯಿತು ಕಥೆ, ಸರಿ ಕುಳಿತೆ
ಇ ಮೆಯಿಲುಗಳ ಪೋನಲೆ ತೆರೆಯುತೆ
ಧುತ್ತನೆ ಸುದ್ದಿ ಅವತಾರ ವಿಸರ್ಜನೆ ಬಾರಿ
ಮೊನ್ನೆಯವಳಿ ರಾಜಕುಮಾರಿ ಬ್ಲಾಕ್ ಬೆರಿ ||

ಕುಸಿದ ಶೇರಿನ ಭಾರಕೆ ಕುಸಿದಳೆ 
ಇಪ್ಪತ್ತು ಪಟ್ಟಿಳಿದರೆ ಎಲ್ಲಿದೆಯೊ ನೆಲೆ
ಮಾಡಿದ ಹೊಸ ಪೋನು ಬರಿ ಸ್ಟಾಕಲಿ
ಕೇಳುವರಿಲ್ಲ ಇನ್ಯಾರಿಗೆ ಮಾರಲಿ ?

ಹೊಸ ನಮೂನೆ ತಂತ್ರಾಂಶದ ವ್ಯವಸ್ಥೆ 
ಮಾಡಿಟ್ಟರೂ ಬೇಡಿಕೆಗೇನೀ ಅವಸ್ಥೆ
ಸ್ಪರ್ಧೆಯಲಿ ಹಿಂದೆ ಬಿದ್ದರೀ ಬಾಳು
ಸಂತೆ ತಿಂದು ಮುಕ್ಕಿಬಿಡುವ ಹುರಿಗಾಳು ||

ಹೀಗಾದರೆ ತಾಂತ್ರಿಕತೆ, ಕಂಪನಿಗಳ ಹರಿಕಥೆ
ಚಿಂದಿಯುಟ್ಟ ರಾಜಕುಮಾರರಾಗುವ ಕ್ಷಮತೆ
ರಾತ್ರೋರಾತ್ರಿ ಸರ್ವೇಶ , ಮರುದಿನವೆ ಅವಶೇಷ
ಯಾರದು ಮುಂದಿನ ಪಾಳಿ, ಹೇಳಿಬಿಡೊ ಜಗದೀಶ ||