ರವಿಕೆ ಕಣ

ರವಿಕೆ ಕಣ

ಬರಹ

ಯಾವುದಾದರೂ ಬಟ್ಟೆ ಅಂಗಡಿಗೆ ಹೋಗಿ "ನನಗೊಂದು ಹಳದಿ ಬಣ್ಣದ ರವಿಕೆ ಕಣ ಕೊಡಿ", ಅಂದರೆ ಅವರು ಹ್ಯಾಪು ಮೋರೆ ಹಾಕಿಕೊಂಡು ಮೇಲೆ ಕೆಳಗೆ ನೋಡಬಹುದು. ಅದೇ "ನನಗೊಂದು ಎಲ್ಲೋ ಕಲರಿನ ಬ್ಲೌಸ್ ಪೀಸ್ ಕೊಡಿ" ಎಂದಿದ್ದಾದರೆ, ಕೊಂಚವೂ ವಿಳಂಬಿಸದೆ ಹಳದಿ ಬಣ್ಣದ ಹಲವು ವಿಧದ ಬ್ಲೌಸ್ ಪೀಸ್ಗಳನ್ನು ನಿಮ್ಮೆದುರು ರಾಶಿ ಹಾಕಬಹುದು. ನೀವು ಅವರಂತೆ ಸಂಪ್ರದಾಯವಾದಿಗಳಾಗಿಲ್ಲದಿದ್ದಲ್ಲಿ ನಿಮಗೂ ಈ ’ರವಿಕೆ ಕಣದ’ ಹೆಸರು ಹೊಸದಾಗಿ ಕಾಣಿಸಬಹುದು. "ಸಂಪ್ರದಾಯವಾದಿಗಳಿಗೂ ಈ ರವಿಕೆ ಕಣಕ್ಕೂ ಎತ್ತಣದ ಸಂಬಂಧವಯ್ಯಾ?" ಎಂದು ನೀವು ಕೇಳಿದರೆ, ಮನೆ, ಮದುವೆ ಇನ್ನಿತರ ಶುಭ ಸಮಾರಂಭಗಳಲ್ಲಿ ಬರುವ ಮುತೈದೆಯರಿಗೆ ಈ ರವಿಕೆ ಕಣವನ್ನು ಎಲೆ ಆಡಿಕೆಯೊಂದಿಗೆ ಕೊಡುವುದು ಸಂಪ್ರದಾಯ. ಇಲ್ಲಿ ರವಿಕೆ ಕಣದ ಪ್ರಸ್ತಾಪ ಬರುವುದರಿಂದ, ಈ ಸಂಪ್ರದಾಯ ತಿಳಿದಿಲ್ಲದ ನಿಮ್ಮನ್ನು ಸಂಪ್ರದಾಯವಾದಿಗಳೆಂದು ಕರೆಯುವ ಪಾಪ ನಾನು ಮಾಡುವುದಿಲ್ಲ.

ಈಗ ನಾನು ಹೇಳ ಹೊರಟಿರುವುದು ಇದೇ ರೀತಿಯ ಸಂಪ್ರದಾಯದಿಂದ ನಮ್ಮ ಮನೆ ಪ್ರವೇಶಿಸಿದ ರವಿಕೆ ಕಣದ ಒಂದು ಗೋಳಿನ ಕತೆ.

ಅಂದು ಸಂಕ್ರಾಂತಿಯ ರಜಾ ದಿನ, ಮಧ್ಯಾಹ್ನದ ಊಟದಲ್ಲಿ ಸಿಹಿ ಹುಗ್ಗಿ ಸ್ವಲ್ಪ ಜಾಸ್ತಿಯೇ ಉದರ ಪ್ರವೇಶಿಸಿದ್ದರಿಂದ, ಚಾಪೆಯನ್ನೆಳೆದುಕೊಂಡು ದಿನಪತ್ರಿಕೆ ಹಿಡಿದ ಕೆಲವೇ ಕ್ಷಣಗಳಲ್ಲಿ ಯೋಗ ನಿದ್ರೆ ಪ್ರಾಪ್ತವಾಗಿತ್ತು. ಅಂದರೆ ತೀರಾ ನಿದ್ರೆಯೂ ಅಲ್ಲದ, ಎಚ್ಚರವೂ ಅಲ್ಲದ, ಒಂದು ರೀತಿಯ ಸಮತೋಲನದ ಸ್ಥಿತಿ. ಹೊರಗಡೆ ಹಾಡಿಯಲ್ಲಿನ ಹಕ್ಕಿಗಳ ಚಿಲಿಪಿಲಿ ಬಿಟ್ಟರೆ ಉಳಿದಂತೆ ಮೌನ, ಎಷ್ಟು ಹೊತ್ತು ಈ ಸ್ಥಿತಿಯಲ್ಲಿದ್ದೆನೋ; ನನ್ನ ನಿದ್ರೆಗೆ ಭಂಗ ಬರುವಂತೆ ಕೋಣೆಯ ಮೂಲೆಯಲ್ಲಿ ಕಿಚಿ, ಕಿಚಿ ಸದ್ದಿನೊಂದಿಗೆ ಕರುಳು ಹಿಂಡುವಂತಹ ಆಕ್ರಂದನ. ನಿದ್ರಾ ಭಂಗದಿಂದ ಕೋಪಗೊಂಡು ಕಣ್ಣು ತೆರೆದು, ಸದ್ದು ಬರುತ್ತಿದ್ದ ಕಡೆ ಹೆಜ್ಜೆ ಇಟ್ಟೆ. ಒಂದು ಕರೀ ಬಣ್ಣದ ಇಲಿ ನನ್ನ ಕಾಲು ಬುಡದಿಂದಲೇ ಓಡಿ ಹೋಗಿ ನನ್ನ ಗಾಬರಿ ಹೆಚ್ಚಿಸಿತ್ತು ಮತ್ತು ಮೂಲೆಯಲ್ಲಿ ಒಂದು ರವಿಕೆ ಕಣ ಅನಾಥವಾಗಿ ಬಿದ್ದುಕೊಂಡು ರೋಧಿಸುತ್ತಿತ್ತು. ಅಳುತ್ತಿರುವ ಮಗುವನ್ನು ಸಂತೈಸಲು ಹೊರಟ ತಾಯಿಯ ಮುಖದಲ್ಲಿ ಸೂಸುವ ವಾತ್ಸಲ್ಯ ಭಾವದಿಂದ, ರವಿಕೆ ಕಣವನ್ನು ಕೈಗೆತ್ತಿಕೊಂಡು ನೋಡಿದರೆ, ಅದರಲ್ಲಿ ಚಿತ್ರ ವಿಚಿತ್ರ ಛೇದಗಳು! ನಿದ್ರೆಯಿಂದೆಚ್ಚೆತ್ತ ನನ್ನ ಭೀಷಣ ದೃಷ್ಟಿಯ ತಾಪಮಾನಕ್ಕೆ ಹೆದರಿಯಲ್ಲವಾದರೂ, ನನ್ನ ಕಾಲಿನ ಸದ್ದಿಗೆ ಹೆದರಿ ಓಡಿ ಹೋದ ಇಲಿಗೂ, ಅಸಾಹಾಯಕವಾಗಿ ಬಿದ್ದು ಗೋಳಿಡುತ್ತಿರುವ ಈ ರವಿಕೆ ಕಣಕ್ಕೂ ಸಂಬಂಧ ಕಲ್ಪಿಸಿ, ನನ್ನ ನಿದ್ರಾ ಭಂಗಕ್ಕೆ ಕಾರಣವನ್ನು ಕಂಡು ಹಿಡಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಆದರೂ ಆ ರವಿಕೆ ಕಣದ ಬಾಯಿಂದ ಅದರ ಕಷ್ಟವನ್ನು ತಿಳಿದು, ಸಂತೈಸುವ ನೆಪದಿಂದ ಅದರೊಂದಿಗೆ ಮಾತಿಗಿಳಿದೆ.

"ಯಾಕೆ ಕರುಳು ಹಿಂಡುವಂತೆ ಈ ರೀತಿ ಕೂಗಿಕೊಳ್ಳುತ್ತಿರುವೆ, ನಿನ್ನ ಸಂಕಟವೇನೆಂದು ಹೇಳಬಾರದೇ? ಸಂಕಟ ಇನ್ನೊಬ್ಬರ ಬಳಿ ತೋಡಿಕೊಳ್ಳುವುದರಿಂದ ಮನಸ್ಸಿನ ದುಗುಡ ಕಡಿಮೆಯಾಗುತ್ತದೆ."

"ಸಂಕಟ ಹೇಳಿಕೊಳ್ಳಲು ನನ್ನವರು ಅಂತ ಯಾರೂ ಇಲ್ಲ, ಸುಮ್ಮನೆ ಸಿಕ್ಕ ಸಿಕ್ಕವರ ಬಳಿಯೆಲ್ಲಾ ಹೇಳಿ ಕನಿಕರದ ವಸ್ತುವಾಗಲು ನನಗೆ ಮನಸ್ಸೂ ಇಲ್ಲ."

"ನನ್ನನ್ನು ಸಿಕ್ಕ ಸಿಕ್ಕವರು ಅಂತ ಯಾಕೆ ತಿಳಿದುಕೊಳ್ಳುತ್ತೀಯ? ನಾನು ಈ ಮನೆಯವನೇ, ನಿನ್ನ ಸಂಕಟ ಏನಿದೆಯೋ ಹೇಳು ನನ್ನ ಕೈಲಾದ ಸಹಾಯ ನಾನು ಮಾಡುತ್ತೇನೆ. ಒಂದು ವೇಳೆ ಏನೂ ಮಾಡುವ ಹಾಗಿಲ್ಲದಿದ್ದಲ್ಲಿ, ನಿನ್ನ ಈ ಮನಸ್ಥಿತಿಗೆ ಕಾರಣ ತಿಳಿಸು, ಇದರಿಂದ ನಿನ್ನ ಮನಸ್ಸಿಗೆ ಸಮಾಧಾನವಾದರೂ ಆಗಬಹುದು."

ರವಿಕೆ ಕಣ ಅನುಮಾನದಿಂದ "ಮನೆಯ ಹೆಂಗಸರೇ ನನ್ನನ್ನು ತುಚ್ಛ ಭಾವದಿಂದ ನೋಡುತ್ತಿರಬೇಕಾದರೆ, ನಿನ್ನಂತಹ ಪುರುಷನಲ್ಲಿ ನನ್ನ ದುಗುಡ ತೋಡಿಕೊಳ್ಳಬಹುದೇ, ಅಲ್ಲದೇ ನೀನು ನನ್ನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಠಿಣ."

ನಾನು ಭರವಸೆಯ ದನಿಯಲ್ಲಿ "ಕಷ್ಟ, ಕಷ್ಟವೇ, ಅದನ್ನು ಗಂಡು ಕಷ್ಟ, ಹೆಣ್ಣು ಕಷ್ಟ ಅಂತ ಭೇದ ಮಾಡುವುದು ಸರಿಯಲ್ಲ. ನಿನ್ನ ಮನಸ್ಥಿತಿ ಪುರುಷನಾದ ನಾನು ತಿಳಿದುಕೊಳ್ಳುವುದು ಕಠಿಣವಾದರೂ, ಸಮಾಧಾನ ಚಿತ್ತದಿಂದ ನಿನ್ನ ಮಾತನ್ನು ಕೇಳುವೆ."

"ನನ್ನ ಮಾತು ಕೇಳುವವರೂ ಒಬ್ಬರಿದ್ದಾರೆಂದು ತಿಳಿದು ಸಂತೋಷವಾಯಿತು. ಇದರಿಂದ ನನಗೆ ಲಾಭವಾದೀತೆಂದು ನನಗನಿಸದಿದ್ದರೂ, ಕೇಳುವ ಕುತೂಹಲ ತೋರಿಸಿದ್ದರಿಂದ ನಿನ್ನಲ್ಲಿ ಹೇಳಿಕೊಳ್ಳುತ್ತಿದ್ದೇನೆ."

"ಹೇಳು, ಕೇಳುತ್ತಾ ಇದ್ದೇನೆ."

"ನಾನು ಹುಟ್ಟಿದ್ದು ಚೆನೈನ ಒಂದು ಪಾಲಿಸ್ಟರ್ ಕಾರ್ಖಾನೆಯಲ್ಲಿ. ಪೆಟ್ರೋಲಿಯಂನ ಕಚ್ಛಾವಸ್ತುವನ್ನು, ಹಲವು ಬಗೆಯ ಯಂತ್ರಗಳ ಸಹಾಯದಿಂದ ಬಟ್ಟೆ ಮಾಡಿ, ರಂಗನ್ನು ಬಳಿದು, ಸುಂದರವಾಗಿ ಪ್ಯಾಕ್ ಮಾಡಿ, ಕೆಲವು ವ್ಯಾಪಾರಿಗಳ ಮೂಲಕ ಈ ನಿಮ್ಮ ಊರು ತಲುಪಿದೆ."

"ತುಂಬಾ ಕುತೂಹಲಕಾರಿಯಾಗಿದೆ, ಮುಂದುವರೆಸು."

"ಯಾವುದಾದರೂ ಸುಂದರ ತರುಣಿ ನನ್ನನ್ನು ಕೊಂಡು, ಆಕೆಯ ಕುಪ್ಪಸವಾಗಿ ಮಾಡಿಕೊಳ್ಳಬಹುದೆಂದು ಅಂಗಡಿಗೆ ಬಂದು ಹೋಗುವವರನ್ನೆಲ್ಲಾ ಆಸೆಯ ಕಂಗಳಿಂದ ನೋಡುತ್ತಿದ್ದೆ."

"ಹೂಕುಸುಮದೆಳೆಯ ಹಳದಿ ಬಣ್ಣದ ನಿನ್ನ ಆಸೆ ಸಹಜವಾದದ್ದೇ."

"ಅಂಗಡಿಗೆ ಬಂದವರೆಲ್ಲಾ ಸೀರೆಕೊಂಡು ಹೋಗುತ್ತಿದ್ದರಾದರೂ ಒಬ್ಬರೂ ಅದಕ್ಕೆ ಹೊಂದುವ ಕಣವನ್ನು ಕೇಳಿಯೂ ನೋಡಲಿಲ್ಲ."

"ಯಾಕೆ ಈಗ ಹೆಂಗಸರು ಸೀರೆಯೊಂದಿಗೆ ಕುಪ್ಪಸ ತೊಡುವುದಿಲ್ಲವೇ?"

"ಛೇ ಹಾಗೇನಿಲ್ಲ. ಇತ್ತೀಚಿನ ದಿನಗಳಲ್ಲಿ ಸೀರೆಯೊಂದಿಗೇ ಈ ರವಿಕೆ ಕಣ ’ವಿತ್ ಬ್ಲೌಸ್’ ಎಂಬ ಹಣೆಪಟ್ಟಿ ಹಚ್ಚಿಕೊಂಡು ಬರುವುದಾದ್ದರಿಂದ, ಮಹಿಳೆಯರು ಸೀರೆಗೊಪ್ಪುವ ರವಿಕೆ ಕಣ ಹುಡುಕಿಕೊಂಡು ಹೋಗುವ ಪ್ರಮೇಯವಿಲ್ಲ."

"ಹೋ ಹಾಗೆ, ಅಂದರೆ ಸೀರೆ ಮಾಡುವವರೇ ಈ ಸೀರೆಗೆ ಈ ಬಣ್ಣದ ಕುಪ್ಪಸ ಹೊಂದುತ್ತದೆ ಎಂದು ನಿರ್ಧರಿಸಿ, ಸೀರೆಯೊಂದಿಗೆ ಸ್ವಲ್ಪ ಹೆಚ್ಚಿನ ಬಟ್ಟೆ ಇರಿಸಿರುತ್ತಾರಲ್ಲವೇ? ಆದ್ರೆ ಈ ’ವಿತ್ ಬ್ಲೌಸ್’ ಅಧಿಕ ಬೆಲೆಯ ಸೀರೆಗಳೊಂದಿಗೆ ಮಾತ್ರ ಬರುವುದಲ್ಲವೇ? ಸಾಧಾರಣ ಬೆಲೆಯ ಅಥವಾ ಕಡಿಮೆ ಬೆಲೆಯ ಸೀರೆ ತೆಗೆದುಕೊಳ್ಳುವವರು ನಿನ್ನನ್ನು ಕೊಂಡೊಯ್ಯುಬಹುದಿತ್ತಲ್ಲವೇ?"

"ಸಾಧಾರಣ ಅಥವಾ ಕಡಿಮೆ ಬೆಲೆಯ ಸೀರೆ ಕೊಂಡು ಕೊಳ್ಳುವವರು ಸಾಮಾನ್ಯವಾಗಿ ಬಡವರು. ಸೀರೆಗೆ ೨೦೦, ೨೫೦ ಕೊಟ್ಟು ಒಂದೊಂದು ರವಿಕೆಗೂ, ಹೊಲಿಸುವ ಕೂಲಿ ಸೇರಿ, ೭೦ ರೂಪಾಯಿಗಳಷ್ಟು ಖರ್ಚು ಮಾಡುವ ಬದಲು, ಹೆಚ್ಚಿನ ಸೀರೆಗಳಿಗೆ ಹೊಂದುವಂತಹ ಕಪ್ಪು, ಕಡು ನೀಲಿ, ಬಿಳಿ ಮುಂತಾದ ಬಣ್ಣದ ಕುಪ್ಪಸ ಹೊಲಿಸಿಟ್ಟುಕೊಂಡು ಹೆಚ್ಚಿನ ಸೀರೆಗಳಿಗೆ ಇವನ್ನೇ ತೊಡುತ್ತಾರೆ."

"ಆಯಿತು, ಮತ್ತೆ ಅಂಗಡಿಯಿಂದ ಇಲ್ಲಿಗೆ ಹೇಗೆ ಬಂದೆ?"

"ಜೂನಿನಲ್ಲಿಯೇ ಅಂಗಡಿಯ ಮಳಿಗೆಯಲ್ಲಿ ಬಂದು ಬಿದ್ದಿದ್ದ ನನ್ನನ್ನು, ಜನವರಿಯಾದರೂ ಯಾರೂ ಕೊಂಡೊಯ್ದಿರಲಿಲ್ಲ. ಸುಂದರ ತರುಣಿ ಅಲ್ಲದಿದ್ದರೂ ಸರಿ, ಯಾರೋ ಒಬ್ಬರ ಉಡುಗೆಯಾಗಿ ನನ್ನ ಜೀವನ ಸಾರ್ಥಕಗೊಳಿಸಿಕೊಳ್ಳೋಣ ಎಂದಿದ್ದರೂ, ನನ್ನ ಕೇಳಿದವರೊಬ್ಬರಿಲ್ಲ. ಕೊನೇಗೆ ಫೆಬ್ರವರಿಯಲ್ಲಿ ಮಗಳ ಮದುವೆಗೆಂದು ಬಂದ ಯಜಮಾನರೊಬ್ಬರು ನನ್ನನ್ನು ಕೊಂಡೊಯ್ದರು."

"ಎಂತಹ ಸುಯೋಗ ನಿನ್ನದು, ಅಂತೂ ಮದುಮಗಳ ಉಡುಗೆಯಾಗುವ ಭಾಗ್ಯ ಲಭಿಸಿತು ಅನ್ನು."

"ಅದಕ್ಕೆ ನಾನು ಪುರುಷನಾದ ನಿನ್ನ ಬಳಿ ನನ್ನ ದುಗುಡ ಹೇಳಿಕೊಳ್ಳುವುದಿಲ್ಲ ಎಂದು ಹೇಳಿದ್ದು. ಮಗಳಿಗೆ ಮದುವೆಯ ಸಂದರ್ಭದಲ್ಲಿ ಯಜಮಾನರು ರೇಷ್ಮೆ ಬಟ್ಟೆ ಅಲ್ಲದೇ, ನನ್ನಂತಹ ಪಾಲಿಷ್ಟರ್ ಬಟ್ಟೆ ಕೊಳ್ಳುವರೇ?"

"ಕ್ಷಮಿಸು, ನನಗೆ ಅಷ್ಟೊಂದು ತಿಳಿದಿಲ್ಲ. ಮತ್ತೆ ನಿನ್ನನ್ನು ಅವರು ಕೊಂಡ ಪ್ರಮೇಯ?"

"ಕೇವಲ ನಾನಷ್ಟೇ ಅಲ್ಲ, ನನ್ನಂತೆಯೇ ಹಲವು ತಿಂಗಳಿಂದ ಮಳಿಗೆಯಲ್ಲೇ ಬಿದ್ದಿದ್ದ ಇತರ ಪಾಲಿಷ್ಟರ್ ಕಣಗಳನ್ನೂ ಕೂಡ, ಮದುವೆಗೆ ಬಂದು ಹರಸಲಿರುವ ಮುತೈದೆಯರಿಗೆ ಕಾಣಿಕೆಯಾಗಿ ನೀಡಲು ಕೊಂಡೊಯ್ದರು."

"ಹಾಗೆ, ಅಂತೂ ಯಾರೋ ಮುತ್ತೈದೆ ಮನೆ ಸೇರೋ ಭಾಗ್ಯ ನಿನಗೆ ಸಿಕ್ಕತು"

"ಒಬ್ಬರ ಮನೆಗೆ ಸೇರಿದ್ದೇನೋ ನಿಜ, ಆದರೆ ಆಕೆ ಕುಪ್ಪಸ ಹೊಲಿಸಿಕೊಳ್ಳುವ ಬದಲು ನನ್ನನ್ನು ಬೀರುವಿನಲ್ಲಿ ಕೆಲ ಕಾಲ ಇರಿಸಿಕೊಂಡು, ಆಕೆಯೆ ಮನೆಗೆ ಅಪೂರ್ವಕ್ಕೆ ಬಂದ ಮಹಿಳೆಯರೊಬ್ಬರಿಗೆ ನನ್ನನ್ನು ಎಲೆ ಅಡಿಕೆ, ಅರಶಿನ ಕುಂಕುಮದೊಂದಿಗೆ ಸೇರಿಸಿ ಕೊಟ್ಟು, ಬೀಳ್ಕೊಟ್ಟರು. "

"ತುಂಬಾ ಒಳ್ಳೆಯವರು ಅವರು, ಕಲಿಯುಗದಲ್ಲಿ ದಾನ ಮಾಡುವವರು ಎಲ್ಲಿ ಸಿಗುತ್ತಾರೆ"

"ದಾನವೂ ಅಲ್ಲ ಧರ್ಮವೂ ಅಲ್ಲ. ಉಚಿತವಾಗಿ ಬಂದ ಬೇಡದ ವಸ್ತುವನ್ನು ಇನ್ನೊಬ್ಬರಿಗೆ ದಾಟಿಸುವುದಷ್ಟೆ. ಆ ಮತ್ತೊಬ್ಬ ಮಹಿಳೆ ಮಾಡಿದ್ದೂ ಅದನ್ನೇ, ನನ್ನನ್ನು ಮಗದೊಬ್ಬರಿಗೆ ದಾಟಿಸಿದ್ದು."

"ಹೋ, ಹಾಗಾದರೆ ನೀನು ತುಂಬಾ ಮನೆ ಸುತ್ತಿ ಬಂದು ಈಗ ನಮ್ಮ ಮನೆಗೆ ಬಂದಿರುವುದೇ? ಒಟ್ಟಿನಲ್ಲಿ ಇದುವರೆಗೆ ನೀನು ಎಷ್ಟು ಮನೆ ಸುತ್ತಿ ಬಂದಿರಬಹುದು?"

"ನನಗೂ ಸರಿಯಾಗಿ ನೆನಪಿಲ್ಲ, ನನ್ನ ಮೈ ಮೇಲಿರುವ ಅರಶಿನ ಕುಂಕುಮದ ಕಲೆಗಳನ್ನು ನೋಡಿ ನೀನೇ ಊಹಿಸು."

"ನಿನ್ನ ಬಣ್ಣ ಅರಶಿನ ಕುಂಕುಮ ಸೇರಿ, ನಾನು ಮೇಲೆ ಹೊಗಳಿದ್ದ ಹೂಕುಸುಮದೆಳೆಯ ಹಳದಿಯಾದದ್ದೋ? ನಾನು ನಿನ್ನ ಬಣ್ಣಾನೇ ಅದು ಅಂತ ತಪ್ಪು ತಿಳಿದುಕೊಂಡಿದ್ದೆ."

"ಹೂಂ, ನನ್ನದು ಮೊದಲು ಹಾಲಿನ ಕೆನೆ ಬಣ್ಣ ಇತ್ತು"

"ಮುಂದಿನದ್ದು ನಾನು ಊಹಿಸುವುದಾದರೆ, ಹೀಗೆ ನನ್ನಮ್ಮನಿಗೆ ಬಳುವಳಿಯಾಗಿ ಬಂದ ನೀನು ಆಕೆಯ ಕಣ್ತಪ್ಪಿನಿಂದ ಯಾವುದೋ ಮೂಲೆ ಹಿಡಿದಿರಬೇಕು. ಕೊರೆದು ಹಾಕಲು ಏನೂ ಸಿಗದೇ ಇರುವ ಇಲಿಯೊಂದು ನಿನ್ನ ಹರಿದಾಡುತ್ತಿರಬೇಕಾದರೆ, ನಿನ್ನ ಕೂಗಿಗೆ ನಾನು ಎಚ್ಚೆತ್ತದ್ದಲ್ಲವೇ?"

"ಸರಿಯಾಗಿ ಊಹಿಸಿದಿ"

"ಅಂತೂ ಕುಪ್ಪಸವಾಗಿ ಮೆರೆಯಬೇಕಿದ್ದ ನೀನು, ಈಗ ಹೀಗೆ ಹರಿದು ಮುದ್ದೆಯಾಗಿ ಬಿದ್ದಿದ್ದಿ. ನಿನ್ನ ಅವಸ್ಥೆಗೆ ನಾನು ಮರುಕ ಸೂಚಿಸುವುದಕ್ಕಿಂತ ಹೆಚ್ಚಿನದೇನೂ ಮಾಡಲಾರೆ. ಹರಿದ ನಿನ್ನನ್ನು ಭಿಕ್ಷುಕರಿಗೆ ಕೊಡುವುದೂ ಸಮನಲ್ಲ. ಅಡುಗೆ ಮನೆಯಲ್ಲಿ ಬಿಸಿ ಪಾತ್ರೆ ಹಿಡಿಯಲು ಬಳಸುವ ಕೈ ಅರಿವೆಯಾಗಿಯೂ ಬಳಸಲಾಗದು. ಇನ್ನು ನಿನ್ನ ಜಾತಿ ಪಾಲಿಷ್ಟರ್ ಆದ್ದರಿಂದ ನೆಲ ಒರೆಸಲಿಕ್ಕೂ ಬರುವುದಿಲ್ಲ. ಅಂತೂ ಒಬ್ಬರ ಕೈಯಿಂದೊಬ್ಬರಿಗೆ ಸಾಗಿಯೇ, ಅವರಿಗೊಂದಷ್ಟು ಪುಣ್ಯ ಸಂಪಾದನೆ ಮಾಡಿಕೊಟ್ಟು, ಈ ಅಧೋಗತಿಗಿಳಿದ ನಿನ್ನದು ನಿಜಕ್ಕೂ ಆದರ್ಶ ವ್ಯಕ್ತಿತ್ವ. ನಿನ್ನ ವ್ಯಕ್ತಿತ್ವವನ್ನು ಬರಹದ ಮೂಲಕ ಪ್ರಪಂಚದ ಮೂಲೆ ಮೂಲೆಗೂ ಹರಡುವಂತೆ ಮಾಡುತ್ತೇನೆ."

"ನೀನು ನನ್ನ ಮಾತು ಕೇಳಿದ್ದೇ ನನಗೆ ಸಂತೋಷ. ಅದರಲ್ಲೂ ನನ್ನ ಬಾಳ ಕಥೆಯನ್ನು ಬರಹದ ಮೂಲಕ ಇತರರಿಗೆ ತಲುಪಿಸುವ ಪುಣ್ಯದ ಕೆಲಸ ಮಾಡುತ್ತಿದ್ದೀಯ. ಇದರಿಂದ ನಮ್ಮ ಮುಂದಿನ ಪೀಳಿಗೆಯವರಿಗಾದರೂ ಒಳ್ಳೆಯ ಜೀವನ ಸಿಗಬಹುದು."

"ಅದೆಲ್ಲಾ ಇರಲಿ ಬಿಡು, ನಿನ್ನನ್ನು ಸುಮ್ಮನೆ ಬಿಸಾಡೋಕೆ ಮನಸ್ಸು ಬರುತ್ತಿಲ್ಲ, ನಿನ್ನ ಅನುಮತಿ ಇದ್ದರೆ ನಮ್ಮನೆ ದೇವರ ಫೋಟೋ ಒರೆಸುವುದಕ್ಕೆ ಹಾಕುತ್ತೇನೆ."

"ಧನ್ಯನಾದೆ."