ರಾಜಕೀಯ ಡೊಂಬರಾಟ , ಬಡಪಾಯಿಗಳ ತಿಕ್ಕಾಟ
ಶತಮಾನಗಳು ಕಳೆದು ಹೋಗುತ್ತಿದೆ. ನಿರಂತರ ರಾಜನೀತಿಗಳ ನಿರಂಕುಶ ಪ್ರಭುತ್ವ,ರಾಜಕೀಯ ವ್ಯವಸ್ಥೆಗಳು ಸಮಾಜದ, ಸಂಸ್ಕ್ರಿತಿಯ ಅಭ್ಯುದಯಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಸಹಕಾರ ನೀಡಿ, ಈ ದೇಶವನ್ನೂ, ಈ ಸಮಾಜವನ್ನೂ ಅದರೊಂದಿಗೆ ಅಂತರಾಷ್ಟ್ರೀಯ ಬೆಳವಣಿಗೆಯ ಸಂಕೇತಬಿಂದುವಾಗಿ ಮಾರ್ಗದರ್ಶಕನ ರೀತಿಯಲ್ಲಿ ವ್ಯವಹರಿಸುತ್ತಾ ಬಂದಿರುವುದು ತುಂಬಾ ಆಶಾದಾಯಕ ಪ್ರಗತಿಯಾಗಿದೆ. ಪ್ರಪಂಚದ ನಾನಾ ಭಾಗಗಳಲ್ಲಿ ಸೌರ್ವಭೌಮತ್ವವನ್ನೂ,ಸರ್ವಾಧಿಕಾರವನ್ನೂ ಚಲಾಯಿಸಿದ ಅಧಿಕಾರವರ್ಗ, ಅದರೊಂದಿಗೆ ರಾಜಕೀಯ ಸಮಾಜದ ವಿವಿಧ ರಂಗಗಳಲ್ಲಿ ಕಾರ್ಯವೈಖರಿಯೊಂದಿಗೆ ಪ್ರಪಂಚದ ಜನರ ಅಭ್ಯುದಯಕ್ಕೆ ಸಹಕಾರ ನೀಡಿದ ಅದೆಷ್ಟೋ ಜನರು, ಅದೆಷ್ಟೋ ಸಾಮಾಜಿಕ ಕಾಳಜಿ ಉಳ್ಳ ಬಡ ಜನರ, ಮಧ್ಯಮ ವರ್ಗದವರ ಬಾಳಿನ ಬೆಳಕಿಗಾಗಿ ಒಂದು ಸುಸೂತ್ರವಾದ ಮಾರ್ಗವನ್ನು ತೋರಿದ ಅದೆಷ್ಟೋ ಕಣ್ಣುಗಳು ಒಮ್ಮೆಮ್ಮೆ ರಾಜಕೀಯ ವಿದ್ಯಮಾನಗಳ ಲಜ್ಜೆಗೇಡಿತನದ ಬದಲಾವಣೆಯನ್ನು ಕಂಡೊಡನೆ ಎಂತಾದೀತು?
ಹೌದು, ನಮ್ಮನ್ನಗಲಿದ ಅದೆಷ್ಟೋ ಮಂದಿ ರಾಜಕೀಯ ನೇತಾರರು ನಮ್ಮ ಮನಸ್ಸಿನಲ್ಲಿ ಪುಳಕವನ್ನು ಉಂಟುಮಾಡುವಂತಹ ಜನರು, ಆತ್ಮಸ್ಥೈರ್ಯವನ್ನು ಸ್ಥಾಪಿಸಲು ಸಹಕಾರ ನೀಡುವಂತಹ ಜನರು ಹಲವಾರು ಬಾರಿ ನಮ್ಮೆದುರು ಪ್ರತ್ಯಕ್ಷರಾದಂತೆ ತೋರುತ್ತಾರೆ. ಕಾರಣ ನಮಗೆ ಅವರೊಂದಿಗಿರುವ ಗೌರವ,ಅಭಿಮಾನ. ನಮ್ಮ ಸಮಾಜದ ಪ್ರತಿಯೊಂದು ಏಳಿಗೆಗೆ ಶ್ರಮಿಸಿದವರು, ಅವರ ಏಳಿಗೆಯನ್ನು ಬಯಸಿದವರು, ಸುಸಂಸ್ಕ್ರತ ಸಮಾಜದ ನಿರ್ಮಾಣಕ್ಕಾಗಿ ಕನಸು ಕಂಡವರು, ಇನ್ನೂ ನಮ್ಮಲ್ಲಿ ಮರೆಯಾಗಿಯೇ ಉಳಿದಿದ್ದಾರೆ.ಆದರೆ ಅಂತಹ ದೇಶಪ್ರೇಮಿಗಳಿಗೆ, ರಾಜಕೀಯ ನಾಯಕರಿಗೆ ಅವಮಾನ ಮಾಡುವ ರೀತಿಯಲ್ಲಿ ಎಂಬಂತೆ ಇಂದು ಕೇವಲ ಅಧಿಕಾರ,ಐಶ್ವರ್ಯದ ನೆಪಕ್ಕಾಗಿ ಅಧಿಕಾರ ಲೂಟಿಮಾಡಿಕೊಂಡು ಕೇವಲ ರಾಜಕೀಯ ಸಮಾರಂಭಗಳಲ್ಲಿ ವಟಗುಡುವ, ಬೊಬ್ಬಿಡುವ ರಾಜಕೀಯ ನಾಯಕರಿಗೆ ಸಲ್ಲುವ ಗೌರವ ಯಾವ ರೀತಿಯಲ್ಲಿದ್ದಿರಬೇಕು?
ಪ್ರಸ್ತುತ ರಾಜಕೀಯ ವಿದ್ಯಮಾನಗಳು ನಮಗೆ ನೀಡಿರುವ ಸ್ಪಷ್ಟಚಿತ್ರಣ ಅದೇ. ಜನರ ಮತಗಳಿಸಿ ಜನರ ಸೇವೆ ಮಾಡಬೇಕಾದ ಅಧಿಕಾರಿಗಳು ಇದು ನಮ್ಮ ಸ್ವಂತದ್ದು ಎಂಬಂತೆ ಅಧಿಕಾರ ದುರುಪಯೋಗ ಮಾಡಿಕೊಂಡು, ಲಜ್ಜೆ ಇಲ್ಲದೇ ಸರ್ಕಾರದ ಬೊಕಸವನ್ನೂ, ಭೂಕಬಳಿಕೆ ಮುಂತಾದ ಅನೇಕ ಹೀನವಾದ ಕಾರ್ಯಗಳಲ್ಲಿ ತೊಡಗಿಕೊಂಡರೆ ಯಾವ ಪ್ರಜೆ ಅಂತಹವರನ್ನು ದೂಷಿಸದೇ ಇರಲಾರನು? ಇಂತಹಾ ಪ್ರಸಂಗಗಳು ಈಗ ಭಾರತದಲ್ಲೆಡೆ ದಿನನಿತ್ಯ ಮಾಮೂಲಾಗಿಬಿಟ್ಟಿದೆ.
ಕೇವಲ ಶ್ರೀಮಂತವರ್ಗ,ಐಶ್ವರ್ಯಯುತ ಜನರ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಬಗ್ಗೆ ಕಾಳಜಿ ಇಲ್ಲದ ಜನಪ್ರತಿನಿಧಿಗಳು , ರಾಜ್ಯದ ಬೊಕಸವನ್ನೂ, ಐಶ್ವರ್ಯವನ್ನೂ ಅವರೊಂದಿಗೆ ಭೂ ಕಬಳಿಕೆಯನ್ನೂ ,ಲಂಚಗುಳಿತನವನ್ನೂ ಮೈಗೂಡಿಸಿಕೊಂಡು ಅವಮಾನಕರ ರೀತಿಯಲ್ಲಿ ವರ್ತಿಸಿದರೆ ಇಂತಹ ಲಂಪಟ ಜನಪ್ರತಿನಿಧಿಗಳ ನಡುವೆ ಇರುವ ಈ ರಾಜ್ಯದ ಹಿತದ್ರಷ್ಟಿ, ಸಹಭಾಳ್ವೆಯನ್ನೂ ಇಷ್ಟಪಡುವ ನಿರ್ದೋಷಿ ಜನ ಸಾಮಾನ್ಯರ ಪಾಡು ಎಂತಾದೀತು?
ಜಾಗತೀಕರಣದ ಫಲದಿಂದಾಗಿ ಜಗತ್ತು ವ್ಯವಹಾರ,ವ್ಯಾಪಾರಗಳ ಮಟ್ಟಿಗೆ ಬಹಳ ಮುಂದುವರೆಯುತ್ತಿದೆ. ಆದರೆ ಭ್ರಷ್ಟಾಚಾರಿಗಳಿಗೆ ಕೊಳ್ಳೆಹೊಡೆಯುವವರ ಪ್ರಮಾಣದಿಂದಾಗಿ ಭ್ರಷ್ಟಾಚಾರವು ಮುಂದುವರಿದಿದೆ. ಆದರೆ ಈ ಎಲ್ಲಾ ಸಮಾಜದ ನಡುವೆ ದಿನಂಪ್ರತಿ ವ್ಯವಸಾಯಮಾಡಿ ನಮಗೆ ಆಹಾರಪದಾರ್ಥಗಳ ಪೂರೈಕೆಯಲ್ಲಿ ಬಹಳ ಶ್ರಮವಹಿಸುವ ರೈತಸಮುದಾಯವಿದೆ, ದಿನನಿತ್ಯದ ಹೊಟ್ಟೆಪಾಡಿಗಾಗಿ ಬೆವರಿಳಿಸಿ ಜೀವನ ನಡೆಸುವ ಅದೆಷ್ಟೋ ಸಹಸ್ರಾರು ಜನ,ಕುಟುಂಬ ಸಂತೋಷಾಭಿಮುಖವಾಗಿ ಹೆಜ್ಜೆ ಇಡುವಾಗ ಉಳ್ಳ ಸಮಾಜದ ಜನರು ಈ ರೀತಿಯ ಕೊಳ್ಳೆ ಹೊಡೆಯುವಿಕೆ ,ಭ್ರಷ್ಟಾಚಾರಗಳಲ್ಲಿ ತೊಡಗಿದರೆ ಯಾವ ಪ್ರತಿರೋಧ ವ್ಯಕ್ತವಾದೀತು?
ಅದರ ಫಲವೇ ದಿನನಿತ್ಯ ಕೇಳಿಬರುತ್ತಿರುವ ಪ್ರತಿಭಟನೆಗಳು,ಮುಷ್ಕರಗಳು,ಸಾಮಾಜಿಕ ಹೋರಾಟಗಳು. ಬಹುಷ ನೋಡುಗರಿಗೆ ಒಂದು ಮನೋರಂಜನೆಯ ವೀಕ್ಷಣೆ ಎನಿಸಬಹುದು. ಆದರೆ ಜನಸಮುದಾಯದ ಅರ್ಥಗರ್ಭೀತವಾದ ಧ್ವನಿ ಅಲ್ಲಿ ಮೊಳಗುತ್ತದೆ. ಜನರ ನೋವುಗಳು, ಅವಸ್ಥೆಗಳು, ಜನರ ಬೇಡಿಕೆಗಳು, ಜೀವನ ಶೈಲಿಯ ವ್ಯಥೆ, ಅವರ ಕಷ್ಟ ಕಾರ್ಪಣ್ಯಗಳ ಪೂರ್ಣವಾದ ಚಿತ್ರಣ ಅಲ್ಲಿ ಮೊಳಗುತ್ತದೆ. ರಾಜಕೀಯ ನಾಯಕರಿಗೆ ಐಶ್ವರ್ಯಯುತ ಜನರಿಗೆ ಇದು ಟೈಂಪಾಸ್ ಮನೋರಂಜನೆಯಾದರೆ ಮಾಧ್ಯಮವರ್ಗ,ರೈತ-ಕ್ರಷಿಕ ನಿರ್ಗತಿಕರಿಗೆ ಹಕ್ಕೋತ್ತಾಯದ ಬೇಡಿಕೆಗಳು.